ನಂದಿಕೂರಿನಲ್ಲಿ ಕಂಡ ಸಂಕಷ್ಟ

Posted on ಮೇ 7, 2011. Filed under: ಅಭಿವೃದ್ಧಿಯ ಮಂತ್ರ | ಟ್ಯಾಗ್ ಗಳು:, , , , , |


ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿಯ ಯುಪಿಸಿಎಲ್ ಕಾರ್ಖಾನೆಯಿಂದ ಪರಿಸರದ ಹಳ್ಳಿಗಳಲ್ಲಿ ಆಗುತ್ತಿರುವ ಸಂಕಷ್ಟಗಳನ್ನು ನಮ್ಮ ಕಾಳಜಿಯಿಂದ ನಾನು, ಪ್ರೊ ಅಮೃತ ಸೋಮೇಶ್ವರ ಹಾಗೂ ಎನ್ ಜಿ  ಮೋಹನ್ ಪ್ರತ್ಯಕ್ಷ ನೋಡಿ ಈ ಕೆಳಗಿನ ಅಬಿಪ್ರಾಯಕ್ಕೆ ಬಂದಿದ್ದೇವೆ.

ಸಂಕಷ್ಟಗಳನ್ನು ಕಣ್ಣಾರೆ ಕಂಡೆವು

ಕಳೆದ ಶನಿವಾರ ಎಪ್ರಿಲ್ ೯ರನ್ದು ನಾವು ಮೂರು ಜನರು ಉಡುಪಿ ಜಿಲ್ಲೆಯಲ್ಲಿ ಇರುವ ಪಡುಬಿದ್ರಿ ಸಮೀಪದ ಎಲ್ಲೂರು -ಕಳಚ್ಚೂರಿನಲ್ಲಿ ಇರುವ ಯುಪಿಸಿಎಲ್ ವಿದ್ಯುತ್ ಕಾರ್ಖಾನೆಯ ಪರಿಣಾಮಗಳನ್ನು ಪ್ರತ್ಯಕ್ಷ ತಿಳಿದುಕೊಳ್ಳಲು ಆ ಪರಿಸರದ ಸುಮಾರು ಇಪ್ಪತ್ತರಷ್ಟು ಮನೆಗಳನ್ನು ಸಂದರ್ಶಿದೆವು. ಕಳಚ್ಚೂರು,,ಪಿಲಾರು,ನಂದಿಕೂರು,ಮುದರಂಗಡಿ ಎರ್ಮಾಳು ಸಾಂತಾರು, ಎಲ್ಲೂರು – ಈ ಪ್ರದೇಶಗಳಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಕೇಳಿದೆವು, ಸಂಕಷ್ಟಗಳನ್ನು ಕಣ್ಣಾರೆ ಕಂಡೆವು. ಬಾವಿಗಳ ನೀರು ಉಪ್ಪುನೀರು ಆಗಿರುವುದು, ಬೆಳೆಗಳು ಒಣಗಿ ಕರಟಿಹೊಗಿರುವುದು, ಗಾಳಿಯಲ್ಲಿ ಹಾರುಬೂದಿಯ ಧೂಳು ಸೇರಿಕೊಂಡು ಉಬ್ಬಸ ಕೆಮ್ಮು ಕಾಯಿಲೆಗಳಿಂದ ಜನರು ನರಳುತ್ತಿರುವುದು -ಇವೆಲ್ಲ ನಾವು ಕಣ್ಣಲ್ಲಿ ನೋಡಿದ ಸತ್ಯಗಳು. ಕಾರ್ಖಾನೆಯ ಸಮೀಪದ ಮನೆಗಳ ಎಲ್ಲ ಸಸ್ಯ ಸಂಪತ್ತು ಸರ್ವನಾಶ ಆಗಿದೆ..ಬಾಳೆ,ಅಡಕೆ, ತೆಂಗಿನ ಗಿಡಗಳು ಕರಟಿದ ದೃಶ್ಯ ಎಲ್ಲ ಕಡೆ ಕಂಡು ಬಂತು. ಹುಣಸೆ ಮರ ಮಾವಿನ ಮರಗಳು ಕೂಡಾ ಎಲೆಗಳನ್ನು ಉದುರಿಸಿ ಬೋಳಾಗಿ ಹೆಣದಂತೆ ಕಾಣುತ್ತಿದ್ದ ನೋಟ ದಾರುಣ. ಬಾಳೆಯ ಎಲೆಯೊಂದನ್ನು ನಾವೇ ಕೊಯ್ದು ಸವರಿದಾಗ ಉಪ್ಪಿನ ಪದರು ದಪ್ಪನಾಗಿ ಇತ್ತು. ನಾವು ನೋಡುತ್ತಿದ್ದಂತೆಯೇ ಕಾರ್ಖಾನೆಯ ಹೊಗೆ ಮತ್ತು ಬೂದಿಯ ಕಣಗಳು ಮತ್ತೆ ವಾಸನೆ ನಮ್ಮ ದೇಹಕ್ಕೆ ಅಂಟಿದ್ದು ,ಮೂಗಿಗೆ ಬಡಿದದ್ದು ಇದಕ್ಕೆ ಬೇರೆ ಸಾಕ್ಷಿ ಬೇಕಾಗಿಲ್ಲ.

ಹಾರುಬೂದಿಯ ಹೊಂಡದ ಬಳಿಗೆ ಬಂದು ಸಮೀಪ ದರ್ಶನ ಮಾಡಿದೆವು. ಈಗ ಮುಚ್ಚಿದ ವಾಹನಗಳಲ್ಲಿ ಹಾರು ಬೂದಿ ತರುತ್ತಿದ್ದರೂ ಪೈಪಿನಿಂದ ಹೊರಗೆ ಹಾಕುವಾಗ ಗಾಳಿಗೆ ಹಾರುತ್ತಿದ್ದುದನ್ನು ನಾವು ನೋಡಿದೆವು. ಅದಕ್ಕೆ ಈಗ ಪೈಪಿನಿಂದ ನೀರು ಬೆರಸಿ ಹಾಕುತ್ತಿದ್ದಾರೆ. ಆದರೆ ತೆರೆದ ದೊಡ್ಡ ಹೊಂಡ ಕೆಸರಿನ ಕೆರೆಯ ರೀತಿ ಇದ್ದು ಅದರ ಕೆಳಭಾಗದಿಂದ ದ್ರವರೂಪದ ಹಾರು ಬೂದಿ ಸುತ್ತಲಿನ ಕೃಷಿ ಭೂಮಿಯ ಮಣ್ಣಿನ ಮೇಲೆ ಹಾನಿ ಮಾಡಿದ್ದನ್ನು ಕಂಡೆವು..ತೆರೆದ ಹಾರು ಬೂದಿ ಹೊಂಡದ ಮೇಲೆ ಗಾಳಿ ಬೀಸಿದಾಗ ಗಾಳಿಯಲ್ಲಿ ರಾಸಾಯನಿಕ ಕಣಗಳು ಹಾರುವ ದೃಶ್ಯವನ್ನು ಕಂಡೆವು.ಇನ್ನೇನು ಮಳೆಗಾಲ ಬರುತ್ತಿದೆ.ಅಲ್ಲಿನ ಜನರ ಬದುಕು ದಾರುಣ ಆಗುತ್ತದೆ.

ಮುದರಂಗಡಿಯಲ್ಲಿ ಎಲ್ಲಿ ಕೇಳಿದರೂ ಗಾಳಿಯಲ್ಲಿ ರಾತ್ರಿ ಬಂದು ಎರಗುವ ಉಪ್ಪು ತೇವದ ವಿವರಣೆ. ಮಲ್ಲಿಗೆ ಕೃಷಿಗೆ ಪ್ರಸಿದ್ಧವಾದ ಈ ಪರಿಸರದಲಿ ಮಲ್ಲಿಗೆ ಕರಟಿಹೋಗಿದೆ, ಜನರ ಉಲ್ಲಾಸ ಉತ್ಸಾಹ ಬತ್ತಿ ಹೋಗಿದೆ. ಅಲರ್ಜಿ,ಉಬ್ಬಸ ಕೆಮ್ಮು ಚರ್ಮ ರೋಗಳು ಮಕ್ಕಳಿಂದ ತೊಡಗಿ ಎಲ್ಲರಿಗೂ ಹರಡುತ್ತಿವೆ. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂದರ್ಶಿಸಿದೆವು. ಹೊಸ ಕಾಯಿಲೆಗಳ ಬಗ್ಗೆ ತಿಳಕೊಂಡೆವು. ಪರಿಸರದ ೧೨೯ ಬಾವಿಗಳಲ್ಲಿ ೧೧೯ರಲ್ಲಿ ಉಪ್ಪು ನೀರು ಬರುತ್ತಿರುವುದರ ಬಗ್ಗೆ ಮಾಹಿತಿ ದೊರೆಯಿತು. ಎಲ್ಲೂರಿನ ಪುರೋಹಿತರ ಮನೆಯ ಅಂಗಳದಲ್ಲಿ ಹೋಮಕುಂಡ ಇತ್ತು. ಆದರೆ ಮನೆಯ ತುಳಸಿ ಸಂಪೂರ್ಣ ಕರಟಿಹೋಗಿ ಹೆಣ ಆಗಿತ್ತು.

ಮತ್ತೆ ಮಳೆಗಾಲ ಬರುತ್ತಿದೆ. ಅಂತರ್ಜಲದಲ್ಲಿ ಉಪ್ಪುನೀರು ಮತ್ತು ಹಾರುಬೂದಿ ಇನ್ನಷ್ಟು ಸೇರುತ್ತಿದೆ. ಜನರು ಮತ್ತು ಜಾನುವಾರುಗಳು ಯಾವ ನೀರನ್ನು ಕುಡಿಯಬೇಕು? ಕರಟಿ ಹೋದ ಮರಗಿಡಗಳು ಬದುಕಿನ ಆಸರೆಯನ್ನೇ ಕಳೆದುಕೊಂಡ ಜನರು ಹೇಗೆ ಬದುಕಬೇಕು?ಕಾಯಿಲೆಗಳ ಉಬ್ಬಸದಲ್ಲಿ ಜನ ಹೇಗೆ ಈ ಪರಿಸರದಲ್ಲಿ ಜೀವಂತವಾಗಿ ಉಳಿಯಬೇಕು?

ಸಮರ್ಥನೆ ಸಮಜಾಯಿಸಿ ಕಾನೂನು ಉಡಾಫೆ ಮಾತುಗಳಿಂದ ಮನುಷ್ಯರ ಸಂಕಷ್ಟಗಳು ನಿವಾರಣೆ ಆಗುವುದಿಲ್ಲ. ಕೂಡಲೇ ಇವಕ್ಕೆಲ್ಲ ಸರಿಯಾದ ಪರಿಹಾರ ಕಂಡುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ..ಇವುಗಳೆಲ್ಲ ನಿವಾರಣೆ ಆಗುವವರೆಗೆ ಕಾರ್ಖಾನೆಯ ಕೆಲಸಗಳನ್ನು ಸ್ಥಗಿತ ಗೊಳಿಸಿಯಾದರೂ ಈ ಸಮಸ್ಯೆಗಳನ್ನು ಕೂಡಲೇ ಬಗೆಹರಿಸಬೇಕೆಂದು ಹಕ್ಕೊತ್ತಾಯ ಮಾಡುತ್ತಿದ್ದೇವೆ..

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

One Response to “ನಂದಿಕೂರಿನಲ್ಲಿ ಕಂಡ ಸಂಕಷ್ಟ”

RSS Feed for ಬಿ ಎ ವಿವೇಕ ರೈ Comments RSS Feed

ಸಾರ್,
ಈ ವಿಚಾರದಲ್ಲಿ ನನ್ನದೂ ಸಹಮತವಿದೆ.
ನಿಮ್ಮಗಳ ಜೊತೆ ನಾನೂ ಸೇರಿಕೊಳ್ಳುತ್ತಿದ್ದೇನೆ.


Where's The Comment Form?

Liked it here?
Why not try sites on the blogroll...

%d bloggers like this: