ತ್ಯೂಬಿಂಗನ್ ಕನ್ನಡ ಹಸ್ತಪ್ರತಿಗಳು :ಶಬ್ದಮಣಿ ಮತ್ತು ಕಾವ್ಯಗನಿ

Posted on ಜೂನ್ 13, 2010. Filed under: ಕನ್ನಡ ಹಸ್ತಪ್ರತಿ | ಟ್ಯಾಗ್ ಗಳು:, , , , , |


ಜರ್ಮನಿಯ ತ್ಯೂಬಿಂಗನ್ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಇರುವ ಕನ್ನಡ ಹಸ್ತಪ್ರತಿಗಳು ಕಾಗದದ ಪ್ರತಿಗಳು.ವೈಗ್ಲೆ, ಮೊಗ್ಲಿಂಗ್ ಮತ್ತು ಕಿಟ್ಟೆಲ್ -ಈ ಮೂವರಿಗೂ ಆಪ್ತರಾಗಿದ್ದ ಗುಂದರ್ತ್ ಅವರ ಪ್ರಯತ್ನದಿಂದ ಇವು ತ್ಯೂಬಿಂಗನ್ ಸೇರಿವೆ. ನಾನು ಈ ಹಸ್ತಪ್ರತಿಗಳನ್ನು ವಿವರವಾಗಿ ಓದಿ ,ಟಿಪ್ಪಣಿ ಮಾಡಿಕೊಂಡು ,ಅವುಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಜರ್ಮನ್ ಸ್ನೇಹಿತರ ಮೂಲಕ ಪಡೆದು , ಜರ್ಮನ್ ಭಾಷೆಯಲ್ಲಿ ಇರುವ ಕಾಗದಪತ್ರಗಳನ್ನು ಅನುವಾದಿಸಿಕೊಂಡಿದ್ದೇನೆ.

ಅಲ್ಲಿನ ಹಸ್ತಪ್ರತಿ ಸಂಗ್ರಹಾಲಯದಲ್ಲಿ  ನಮೂದಿಸಿರುವ ಅಂಕೆಗಳನ್ನೇ ಇಲ್ಲಿಯೂ ಕೊಟ್ಟಿದ್ದೇನೆ.

೮೧೦: ಪಳೆಗನ್ನಡ  ಶಬ್ದಮಂಜರಿ

ಹಳಗನ್ನಡದಲ್ಲಿ ಪ್ರಯೋಗವಾದ ಪೌರಾಣಿಕ ಹೆಸರುಗಳ ಪರ್ಯಾಯ ನಾಮಗಳನ್ನು ಕೊಡಲಾಗಿದೆ.ಶಿವ ,ಪಾರ್ವತಿ,ವಿನಾಯಕ -ಇವರ ಹೆಸರುಗಳು ,ಇತ್ಯಾದಿ.

೮೧೧: ಕೇಶಿರಾಜನ  ‘ ಶಬ್ದಮಣಿದರ್ಪಣ ‘ಕನ್ನಡ ವ್ಯಾಕರಣ ಗ್ರಂಥದ  ‘ಅಪಭ್ರಂಶ ಪ್ರಕರಣ.’

೮೧೨ : ಕೇಶಿರಾಜನ ‘ಶಬ್ದಮಣಿದರ್ಪಣ’ದ  ಸಂಪೂರ್ಣ ಹಸ್ತಪ್ರತಿ. ಇದರಲ್ಲಿ ಎಲ್ಲಾ ಸೂತ್ರಗಳು ಮತ್ತು ವೃತ್ತಿಗಳು ಇವೆ.ಇದು ಕಿಟ್ಟೆಲರ ಹಸ್ತಪ್ರತಿ. ಕಿಟ್ಟೆಲ್ ರು ‘ ಶಬ್ದಮಣಿ ದರ್ಪಣ’ವನ್ನು ಮೊದಲು ಸಂಪಾದನೆ ಮಾಡಿದವರು(೧೮೭೨).

೮೧೩: ‘ಶಬ್ದಮಣಿದರ್ಪಣ’ ದ ‘ ಧಾತು ಪ್ರಕರಣ’ದಲ್ಲಿನ  ಶಬ್ದಗಳ ಅರ್ಥವಿವರಣೆ.

ಅಳ್ಲಾಡು = ನಿರವಶೇಷೇ ; ಅಲ್ಲಾಡು = ಸಂಚಲನೆ ; ಇತ್ಯಾದಿ

೮೧೪ :ಕರ್ನಾಟಕ ಶಬ್ದಮಂಜರಿ.

ಇದು ಜಿ.ಎಚ್ .ವೈಗ್ಲೆ  ಅವರ ಖಾಸಗಿ ಪ್ರತಿ.ಸಪ್ಟೆಂಬರ್ ೧೮೭೧ ಎಂದು ಬರೆಯಲಾಗಿದೆ.ಇದು ಕವಿ  ತೊಂಟದಾರ್ಯನ ‘ ಕರ್ನಾಟಕ ಶಬ್ದಮಂಜರಿ’ (೧೫ನೆ ಷ.) ಯ ಹಸ್ತಪ್ರತಿ.ಇದರ ಪುಟಗಳ ಒಂದು ಬದಿಯಲ್ಲಿ ವಾರ್ಧಕ ಷಟ್ಪದಿಯಲ್ಲಿ ಕನ್ನಡ ಪದ್ಯಗಳಿವೆ.ಅದರ ಪಕ್ಕದಲ್ಲಿ ಈ ಕನ್ನಡ ಪದ್ಯಗಳ ಇಂಗ್ಲಿಶ್ ಅನುವಾದವನ್ನು ಕೊಡಲಾಗಿದೆ.ಹತ್ತನೇ ಪುಟದ ಮಧ್ಯಭಾಗದಿಂದ ಇಂಗ್ಲಿಶ್ ಅನುವಾದ ಇಲ್ಲ.

೮೧೫ :ಶಬ್ದಮಂಜರಿಯ ಅನುಕ್ರಮಣಿಕೆ.

ಆರು ಮೊಗನಯ್ಯ …..ಶಿವ

ಅಮರ್ದು ಪೆ೦ಣಿನಿಯ …..ಶಿವ ; ಇತ್ಯಾದಿ.

೮೧೬: ಅಕ್ಷರಕ್ರಮ ನಿಘಂಟಿನ ಪುಸ್ತಕವು.

ಕನ್ನಡ-ಕನ್ನಡ ನಿಘಂಟಿನ ಮಾದರಿಯಲ್ಲಿದೆ.

ಅಂಕಣವು – ಎರಡು ಸ್ಥಂಭಗಳ  ನಡುವಿನ  ಸ್ಥಳವು.

ಅಂಕವು -ಚಿಹ್ನವು -ಗುರುತು ; ಇತ್ಯಾದಿ.

೮೧೭: ಕರ್ನಾಟಕ ಶಬ್ದಮಂಜರಿ

ಹಸ್ತಪ್ರತಿ ೮೧೪ರ ಮಾದರಿಯದ್ದು, ಪರಿಷ್ಕೃತ  ಹಸ್ತಪ್ರತಿ. ‘ ದೊಂಬಳ ದ  ತೊಂಟಸ್ವಾಮಿ’ ಎಂದು ಪೆನ್ನಿನಲ್ಲಿ ಬರೆಯಲಾಗಿದೆ.

೮೧೮:ಇದೊಂದು ವಿಶಿಷ್ಟವಾದ ಹಸ್ತಪ್ರತಿ. ಇದರ ಆರಂಭದಲ್ಲಿ ಕನ್ನಡ ಭಾಷೆಯನ್ನು ಕಲಿಯಲು ಮಾಡಿದ ಟಿಪ್ಪಣಿಗಳಿವೆ.ಬಳಿಕ ತುಳು ಭಾಷೆಯನ್ನು ಕಲಿಯಲು ಸಿದ್ಧಪಡಿಸಿದ ಟಿಪ್ಪಣಿಗಳಿವೆ.ಈ ಹಸ್ತಪ್ರತಿಯ ಮುಖ್ಯ ಭಾಗ , ತುಳು ಪಾಡ್ದನಗಳಿಗೆ ಸಂಬಂಧಪಟ್ಟುದು. ಇದು ನಾನು ಶೋಧಿಸಿದ ಹಸ್ತಪ್ರತಿ.

ಕನ್ನಡ ಲಿಪಿಯಲ್ಲಿ ಬರೆಯಲಾದ ಈ ಹಸ್ತಪ್ರತಿಯಲ್ಲಿ ನಾಲ್ಕು ತುಳು ಪಾಡ್ದನಗಳಿವೆ. ಕನ್ನಡ ಲಿಪಿಯ ಮಾದರಿಯಿಂದ ಇದು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದ್ದೆಂದು ಭಾವಿಸಬಹುದು. ಈ ಪಾಡ್ದನಗಳು ಮ್ಯಾನರ್ , ಬರ್ನೆಲ್ ಅಥವಾ ಇತರ ಸಂಗ್ರಾಹಕರ ಸಂಗ್ರಹಗಳಲ್ಲಿ ದೊರೆಯುವುದಿಲ್ಲ. ಮೊದಲನೆಯ ಪಾಡ್ದನ – ಕಾಂತಣ ಅತಿಕಾರಿ ದೈವದ ಹುಟ್ಟು , ಕಲ್ಲೆಕಬೆಕೊಂಡಾ ಜನನದಲ್ಲಿ  ಕಾಂತೆರಿ ಜುಮಾದಿ ನೆಲೆವೂರಿದ ಕಥಾನಕ. ಎರಡನೆಯ ಪಾಡ್ದನ – ದೇವು ಪೂಂಜನ ಕಥೆ ; ದೇವು ಪೂಂಜನ ದುರಂತವನ್ನು ಮತ್ತು ಜುಮಾದಿಯ ಪ್ರಭಾವವನ್ನು ಹೇಳುವ ಕಥನ. ಮೂರನೆಯ ಪಾಡ್ದನ -ಕಡೆ ಕಾರ್ಲದಲ್ಲಿ   ಜುಮಾದಿ ನೆಲೆವೂರಿದ ವೃತ್ತಾಂತ . ಜುಮಾದಿಯ ಪವಾಡಗಳನ್ನು ವಿಶಿಷ್ಟ ಘಟನೆಗಳ ಮೂಲಕ ಇಲ್ಲಿ ವಿವರಿಸಲಾಗಿದೆ. ಈ ಮೂರು ಪಾಡ್ದನಗಳು ಒಂದೇ ದೀರ್ಘ ಪಾಡ್ದನದ ಮೂರು ಸಂಧಿಗಳ ಹಾಗೆ ಇವೆ. ನಾಲ್ಕನೆಯ ಪಾಡ್ದನ- ಮಲರಾಯ ಭೂತದ್ದು. ಈ ಭೂತವು ಮಲಾರು ಬೀಡಿನಲ್ಲಿ ನೆಲೆವೂರಿದ ಸಂಗತಿ ಇದೆ.

೮೧೯: ಕೇಶಿರಾಜನ ‘ ಶಬ್ದಮಣಿದರ್ಪಣ’ದ  ಇನ್ನೊಂದು ಹಸ್ತಪ್ರತಿ. ೮೧೧ರ ಹಸ್ತಪ್ರತಿಯಲ್ಲಿ ಇಲ್ಲದ ಅಧ್ಯಾಯಗಳು ಇದರಲ್ಲಿವೆ.

೮೨೦: ಕರ್ನಾಟಕ ಭಾಷಾ ಕುಸುಮಮಂಜರಿ’ .ಕರ್ತೃ : ರಾಮ ಬ್ರಹ್ಮಾನಂದ ಸರಸ್ವತಿ.

೮೨೧: ಕೊಡಗು ಭಾಷಾ . ಕನ್ನಡ ಲಿಪಿಯಲ್ಲಿದೆ.ಕೊಡವ ಭಾಷೆಯನ್ನು ಕನ್ನಡದ ಮೂಲಕ ಕಲಿಯಲು ಮಾಡಿದ ಟಿಪ್ಪಣಿಗಳು ಇವೆ.ಕೊಡವ ಶಬ್ದಗಳಿಗೆ ಕನ್ನಡದಲ್ಲಿ ಅರ್ಥಗಳನ್ನು ಕೊಡಲಾಗಿದೆ.ಕೊನೆಯಲ್ಲಿ ‘ಹಳೆಗನ್ನಡ ಶಬ್ದಾರ್ಥವು ‘ ಎನ್ನುವ ಭಾಗ ಇದೆ.

೮೨೨: ಮಹಾಲಿಂಗ ಕವಿಯ ‘ಅನುಭವಾಮೃತ ‘. ೧೩ ಸಂಧಿಗಳು ,೮೭೨ ಪದ್ಯಗಳು. ಮೊದಲನೆಯ ಪುಟದಲ್ಲಿ ಕನ್ನಡ ಪದ್ಯಗಳಿಗೆ ಇಂಗ್ಲಿಶ್ ಅನುವಾದ ಕೊಡಲಾಗಿದೆ.

೮೨೩ : ‘ ಅನುಭವಾಮೃತ ‘. ೮೨೨ರ ಮಾದರಿಯದ್ದೆ ಹಸ್ತಪ್ರತಿ.ಅಕ್ಷರಗಳ ರೂಪ ಭಿನ್ನವಾಗಿದೆ.

೮೨೪ : Buttler’s analogy of nature .ಕನ್ನಡ ಗದ್ಯ ರೂಪದಲ್ಲಿದೆ.ದೇವರ ಮಹತ್ವವನ್ನು ತಿಳಿಸುವ ನೀತಿಬೋಧೆಯ ಕೃತಿ.

೮೨೫ : ಏಸುಕ್ರಿಸ್ತನ ಮಾರ್ಗಕ್ಕೆ ಸೇರಿದ ವಿವರವು.ಇದು ರೆ.ಎಚ್.. ಆಲ್ ಬ್ರೆಶ್ತ್ ಅವರಿಗೆ ಸೇರಿದ ಹಸ್ತಪ್ರತಿ , ಧಾರವಾಡ ,೧೮೪೯ ಎಂದು ಬರೆಯಲಾಗಿದೆ.ಕ್ರೈಸ್ತ ಮತಕ್ಕೆಮತಾಂತರ ಹೊಂದಿದ ಶಿರಸಿ  ಚನ್ನಬಸಪ್ಪ  ಎಂಬವರು ಆಲ್ ಬ್ರೆಶ್ತ್ ರಿಗೆ ಪತ್ರ ರೂಪದಲ್ಲಿ ವೀರಶೈವ ಧರ್ಮದ ವಿವರಣೆಯನ್ನು ಕೊಟ್ಟ ಹಾಗೆ ವಿವರಣೆ ಇದೆ.

೮೨೬ :ಇದೊಂದು ಸಂಕೀರ್ಣ ಹಸ್ತಪ್ರತಿ. ಇದರಲ್ಲಿ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ ಅನೇಕ ವಿವರಗಳಿವೆ.ಮೌಖಿಕ  ಪರಂಪರೆಯಿಂದ  ಸಂಗ್ರಹಿಸಿದ ವಿಶೇಷ  ಮಾಹಿತಿಗಳಿವೆ : ಶತಮಥ ; ಕೇಶವಾದಿ ಇಪ್ಪತ್ತನಾಲ್ಕು  ದೇವತೆಗಳ ವಿವರ ; ಅಳಿಯ ಸಂತಾನದ  ಹದಿನೆಂಟು ಬಲಿಗಳ ವಿವರ ; ಪುರಂದರದಾಸರ  ಉತ್ಪತ್ತಿ ; ಕನಕದಾಸರ  ಉತ್ಪತ್ತಿ ; ವೈಕುಂಟದಾಸರ ಉತ್ಪತ್ತಿ ; ಮಧ್ವದಾಸರ ಉತ್ಪತ್ತಿ ; ವಾದಿರಾಜ ಸ್ವಾಮಿಗಳ ಉತ್ಪತ್ತಿ ; ಕುಬೇರದಾಸರ ಉತ್ಪತ್ತಿ ; ವಾದಿರಾಜಸ್ವಾಮಿಗಳ  ಶಿಷ್ಯ  ಕೃಷ್ಣಾಚಾರಿಯು ಮಾಡಿದ ಭೂಗೋಳ ; ಹುಬ್ಬಾಶೀಕನ  ಕಥೆ ; ಹರಮೆಖಿಲ  ಮಂತ್ರವಾದ ಗ್ರಂಥ ; ಬೇತಾಳ ಪಂಚವಿಂಶತಿ ಕಥೆಗಳು ; ಲಕ್ಷಣ ಅವಲಕ್ಷಣಗಳೂ  ಮೂಲಿಕಾ ಪ್ರಯಿಗಗಳೂ ; ರಾಮಾನುಜ  ಮತದ ಆಕಾಚಾರಿ ಸ್ವಾಮಿ ತಾತಾಚಾರಿ ಸ್ವಾಮಿಗಳ ಉತ್ಪತ್ತಿ ; ಕದ್ರೆ ಜೋಗಿ ಮಟೋತ್ಪತ್ತಿ  ; ಶಂಕರಾಚಾರ್ಯರ ಉತ್ಪತ್ತಿ ; ವಿದ್ಯಾಶಂಕರನ ಕಥೆ ; ಮಧ್ವಾಚಾರ್ಯರ ಉತ್ಪತ್ತಿ.

೮೨೭ : ಬೇತಾಳ ಪಂಚವಿಂಶತಿ  ಕಥೆಗಳು .  ಜರ್ಮನ್ ಪ್ರೆಸ್ , ಮಂಗಳೂರು.

೮೨೮ : ಸಾಮತಿಗಳು , ಕ್ರೈಸ್ತ  ಧರ್ಮದ ಹಾಡುಗಳ ಕನ್ನಡ ಅನುವಾದ – ಮೊಗ್ಲಿಂಗ್ ಅವರ ರಚನೆ.

೮೨೯ : ದೈವ ಪರೀಕ್ಷೆಯೂ  , ದೇವರ ಹತ್ತು ಆಜ್ನೆಗಳೂ . ಬೇತಾಳ ಪಂಚವಿಂಶತಿ ಕಥೆಗಳು.

ಈ ಹಸ್ತಪ್ರತಿಯ ಕಾಲ ೧೮೩೯ ಎಂದು ಬರೆಯಲಾಗಿದೆ.

೮೩೦ : ಜೈಮಿನಿ ಭಾರತ . ಲಕ್ಷ್ಮೀಶನ ‘ ಜೈಮಿನಿ ಭಾರತ’  ಕಾವ್ಯದ ಸಂಪೂರ್ಣ ಹಸ್ತಪ್ರತಿ. ಇದರಲ್ಲಿ ೩೪ ಸಂಧಿಗಳಿವೆ . ೪ನೆ ಆಗಸ್ಟ್ ೧೮೫೪ರಲ್ಲಿ ಹಸ್ತಪ್ರತಿಯ ಬರವಣಿಗೆ ಸಮಾಪ್ತವಾಯಿತು  ಎಂದು ಇದೆ.ಹಸ್ತಪ್ರತಿಯ ಕೊನೆಯಲ್ಲಿ ಸಂದಿ ಮತ್ತು ಪದ್ಯಗಳ ಪಟ್ಟಿ ಇದೆ.ಮೊಗ್ಲಿಂಗ್ ಅವರು ತಮ್ಮ ‘ಬಿಬ್ಲಿಯಾಥಿಕಾ  ಕರ್ನಾಟಿಕಾ ‘ ದಲ್ಲಿ ‘ ಜೈಮಿನಿ ಭಾರತ’ವನ್ನು ಸಂಪಾದಿಸಿಕೊಟ್ಟಿದ್ದಾರೆ.

೮೩೧ : ಜೈಮಿನಿ ಭಾರತದ ಟೀಕು.  ‘ ಜೈಮಿನಿ ಭಾರತ’  ಕಾವ್ಯದ ಪದ್ಯಗಳ ಶಬ್ದಗಳಿಗೆ ಅರ್ಥಗಳನ್ನು ಇಲ್ಲಿ ಕೊಡಲಾಗಿದೆ.

೮೩೨ : ‘ಜೈಮಿನಿ ಭಾರತ’ ಕಾವ್ಯದ ಮೊದಲ ಮೂರು ಸಂಧಿಗಳ ಪದ್ಯಗಳನ್ನು ರೋಮನ್ ಲಿಪಿಯಲ್ಲಿ ಲಿಪ್ಯಂತರ ಮಾಡಿ ಬರೆಯಲಾಗಿದೆ. ಬಳಿಕ , ದೇವರ ಆಜ್ಞೆಗಳನ್ನು ತಿಳಿಸುವ ಭೋದನೆಗಳು ಎನ್ನುವ ಭಾಗ ಇದೆ.  ಆಮೇಲೆ , ‘ ಅನುಭವಾಮೃತ ‘ ಕಾವ್ಯದ ಪದ್ಯಗಳನ್ನು ಜರ್ಮನ್ ಅನುವಾದದೊಂದಿಗೆ ಒಂದೇ ಪುಟದಲ್ಲಿ ಒಟ್ಟಿಗೆ ಕೊಡಲಾಗಿದೆ. ಹಸ್ತಪ್ರತಿಯ ಸುಮಾರು ಅರ್ಧಭಾಗದ ವರೆಗೆ ಈರೀತಿಯ ಜರ್ಮನ್ ಅನುವಾದ ದೊರೆಯುತ್ತದೆ.

೮೩೩ : ‘ ತೊರವೆಯ ರಾಮಾಯಣ ‘ ದ ಹಸ್ತಪ್ರತಿ.

೮೩೪ : ಕನ್ನಡ ಪಂಚತಂತ್ರ . ದುರ್ಗಸಿಂಹನ ‘ ಪಂಚತಂತ್ರ’ದ ಐದು ಅಧ್ಯಾಯಗಳನ್ನು ಐದು ಪುಸ್ತಕಗಳಲ್ಲಿ ಬರೆಯಲಾಗಿದೆ.

೮೩೫ ರಿಂದ ೮೪೨ರ ವರೆಗೆ : ‘ಕುಮಾರವ್ಯಾಸ  ಭಾರತ’ ದ ಎಲ್ಲಾ ಪರ್ವಗಳು ಇವೆ. ಒಟ್ಟು ಎಂಟು ಹಸ್ತಪ್ರತಿಗಳಲ್ಲಿ ದೊರೆಯುತ್ತದೆ.

ಮೊಗ್ಲಿಂಗರ ‘ಬಿಬ್ಲಿಯಾಥಿಕಾ  ಕರ್ನಾಟಿಕಾ’ ದ ಮೂರನೇ ಸಂಪುಟದಲ್ಲಿ  ‘ ಕುಮಾರವ್ಯಾಸ ಭಾರತ’ ದ ಸಭಾಪರ್ವ ಇದೆ.

ಇಷ್ಟು ಅಧಿಕೃತ ಕನ್ನಡದಲ್ಲಿರುವ  ಹಸ್ತಪ್ರತಿಗಳಲ್ಲದೆ , ಮಲೆಯಾಳಂ ಹಸ್ತಪ್ರತಿಗಳ ಜೊತೆಗೆ ಮಿಶ್ರವಾಗಿ ಹೋಗಿದ್ದ ಕೆಲವು ಕನ್ನಡ ಹಸ್ತಪ್ರತಿಗಳ ಹಾಳೆಗಳನ್ನು ಶೋಧಿಸಲು ನನಗೆ ಸಾಧ್ಯವಾಯಿತು. ೮೦೭ ಸಂಖ್ಯೆಯ ಪ್ರತಿಯಲ್ಲಿ ,ಕನ್ನಡ ಲಿಪಿಯಲ್ಲಿ ಬರೆಯಲಾದ  ‘ ಕೊಂಕಣಿ ಗಾದೆಗಳು ‘ ಸಂಗ್ರಹ  ದೊರೆಯಿತು.  ಇದರಲ್ಲಿ ೧೨೦ ಕೊಂಕಣಿ ಗಾದೆಗಳಿವೆ.  ಈ ಹಸ್ತಪ್ರತಿಯನ್ನು ಬರೆದವರ ಹೆಸರನ್ನು ಎಂ. ಶಿವರಾವ್  ಎಂದು ದಾಖಲಿಸಲಾಗಿದೆ.

೮೦೯ ಸಂಖ್ಯೆಯ ಹಸ್ತಪ್ರತಿಯಲ್ಲಿ , ಭೂಮಿ ದಾಖಲೆಗಳಿಗೆ ಸಂಬಂಧಿಸಿದ ಕೆಲವು ಕಾಗದಪತ್ರಗಳಿವೆ.  ಒಂದು ದಾಖಲೆ ೧೮೪೩ರದ್ದು.  ಒಂದು ಕಾಗದದಲ್ಲಿ  ತುಳು ಭಾಷೆಯ ಕ್ರಿಯಾಪದಗಳ ಪಟ್ಟಿ ಮತ್ತು ಕೆಲವು ಟಿಪ್ಪಣಿಗಳಿವೆ. ಒಂದುಕಡೆ ‘ ಪುತ್ತೂರು’ ಎಂಬ ಸ್ಥಳನಾಮದ  ಉಲ್ಲೇಖ ಇದೆ.

ಹಸ್ತಪ್ರತಿಗಳೆಂದರೆ  ಕೈಬರೆಹದಲ್ಲಿ ಇರುವ ದಾಖಲೆಗಳು. ಇಂತಹ ದಾಖಲೆಗಳ ಹಿಂದೆ , ಬರೆದ ಕೈಗಳ ಶ್ರಮ , ಬರೆಯಲು ಮನಸ್ಸು ಮಾಡಿದ ವ್ಯಕ್ತಿಗಳ ಆಸಕ್ತಿ ಮತ್ತು ಪ್ರೀತಿ , ಅವನ್ನು ಅಕ್ಕರೆಯಿಂದ ಕಾಪಾಡಿಕೊಂಡು ಬಂದ ರಕ್ಷಕರ ಮಾತೃತ್ವ  ಮನೋಧರ್ಮ ಅಡಕವಾಗಿವೆ. ತ್ಯೂಬಿಂಗನ್ ನಲ್ಲಿ ಹರಿಯುವ ನೆಕ್ಕರ್ ನದಿಯಂತೆ ,ಎರಡು ಸಂಸ್ಕೃತಿಗಳ ಸಂಗಮ ಮತ್ತು ನಿರಂತರ ಹರಿಯುವಿಕೆಗೆ ಕರ್ನಾಟಕದ ಈ ಹಸ್ತಪ್ರತಿಗಳು ಶಾಶ್ವತ ಸಾಕ್ಷಿಗಳಾಗಿವೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

3 Responses to “ತ್ಯೂಬಿಂಗನ್ ಕನ್ನಡ ಹಸ್ತಪ್ರತಿಗಳು :ಶಬ್ದಮಣಿ ಮತ್ತು ಕಾವ್ಯಗನಿ”

RSS Feed for ಬಿ ಎ ವಿವೇಕ ರೈ Comments RSS Feed

ಕನ್ನಡ ಭಾಷೆಯ ಪ್ರೇಮಿಗಳ ಉಪಯುಕ್ತ ಮಾಹಿತಿ .

-ಪ.ರಾಮಚಂದ್ರ
ರಾಸ್ ಲಫ್ಫಾನ್, ಕತಾರ್

Dear Sir,
We knew there is something there, but what it is, was not clear. Thank you for your reporting. Is there a possibility of digitalizing these Kannada/Kannada related scripts? I am more interested in translations both into English and German from Kannada. I request you to, if there is no plans to digitalize these manuscripts, please, take initiative in this direction.

Regards,
Tharakeshwar

ತುಂಬಾ ಉಪಯುಕ್ತವಾದ ಮಾಹಿತಿಪೂರ್ಣ ಲೇಖನ.
ಕನ್ನಡ ಭಾಷಾ ವಿಧ್ಯಾರ್ಥಿಗಳಿಗೆ/ಪ್ರೇಮಿಗಳು ಓದಲೇಬೇಕಾದದ್ದು.


Where's The Comment Form?

Liked it here?
Why not try sites on the blogroll...

%d bloggers like this: