ಜರ್ಮನಿಯ ತ್ಯೂಬಿಂಗನ್ ನಲ್ಲಿ ಕನ್ನಡ ಹಸ್ತಪ್ರತಿಗಳು

Posted on ಜೂನ್ 9, 2010. Filed under: ಕನ್ನಡ ಹಸ್ತಪ್ರತಿ, ಜರ್ಮನಿ, ತುಳು ಪಾಡ್ದನ, Kittel, Moegling | ಟ್ಯಾಗ್ ಗಳು:, , , , , |


ಹತ್ತೊಂಬತ್ತನೆಯ ಶತಮಾನದಲ್ಲಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ಸಂಗ್ರಹ ಸಂಪಾದನೆಗಳ ಮೂಲಕ ವಿಶೇಷ ಸಾಧನೆ ನಡೆಸಿದವರು ಜರ್ಮನ್ ಮಿಶನರಿಗಳು.ಇವರಲ್ಲಿ ಗಾಡ್ ಫ್ರೆ ವೈಗ್ಲೆ (೧೮೧೬-೧೮೫೫), ಹರ್ಮನ್ ಮೊಗ್ಲಿಂಗ್ (೧೮೧೧-೧೮೮೧) ಮತ್ತು ಫರ್ಡಿನಾಂಡ್  ಕಿಟ್ಟೆಲ್ (೧೮೩೨-೧೮೫೫) ಪ್ರಮುಖರು. ಬಹುಮಟ್ಟಿಗೆ ಸಮಕಾಲೀನರಾಗಿದ್ದು , ಮಂಗಳೂರನ್ನು ಪ್ರಮುಖ ಕೇಂದ್ರವನ್ನಾಗಿ ಇಟ್ಟುಕೊಂಡು ಕೆಲಸಮಾಡಿದ ಇವರು ತ್ಯೂಬಿಂಗನ್ ನಗರದ ಪರಿಸರಕ್ಕೆ ಸಂಬಂಧಪಟ್ಟವರು.ವೈಗ್ಲೆ ಜನಿಸಿದ್ದು ವುರ್ತೆನ್ ಬರ್ಗ್  ಪ್ರಾಂತದಲ್ಲಿ , ನೆಕ್ಕರ್ ನದಿಯ ಪಕ್ಕದ ಕಣಿವೆಯಲ್ಲಿನ ತ್ಸೆಲ್ ಎಂಬ ಹಳ್ಳಿಯಲ್ಲಿ  ; ಉನ್ನತ ಶಿಕ್ಷಣ ಪಡೆದದ್ದು ತ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ.೧೮೩೪ರಲ್ಲಿ ವೈಗ್ಲೆ ಅಲ್ಲಿಗೆ ಪ್ರವೇಶಿಸಿದಾಗ ಮೊಗ್ಲಿಂಗ್ ಅಲ್ಲಿ ಶಿಕ್ಷಣ ಮುಗಿಸಿದ್ದರು.ಅವರಿಬ್ಬರೂ ಮೊದಲು ಭೇಟಿ ಆದದ್ದು ತ್ಯೂಬಿಂಗನ್ ನಲ್ಲಿ ೧೮೩೪ರಲ್ಲಿ.ತ್ಯೂಬಿಂಗನ್ ಗೆ ಸಮೀಪದ ಮೊರ್ಸಿಂಗನ್ ನಲ್ಲಿ ೧೮೧೧ರಲ್ಲಿ ಜನಿಸಿದ ಮೊಗ್ಲಿಂಗ್ ತ್ಯೂಬಿಂಗನ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ ಬಳಿಕ ,ಬಾಸೆಲ್ ಮಿಶನ್ ಸೇರಿ , ಮಂಗಳೂರಿಗೆ ಬಂದು (೧೮೪೯), ಮಂಗಳೂರು ಮತ್ತು ಮಡಿಕೇರಿಯಲ್ಲಿ ಇದ್ದು (೧೮೫೩-೧೮೬೦) ಕನ್ನಡದ ಕೆಲಸ ಮಾಡಿದರು.೧೮೬೧ರಲ್ಲಿ ಜರ್ಮನಿಗೆ ಹಿಂದಿರುಗಿ ,೧೮೮೧ರಲ್ಲಿ ತ್ಯೂಬಿಂಗನ್ ಸಮೀಪದ ಎಸ್ಲಿಂಗನ್ ನಲ್ಲಿ ನಿಧನರಾದರು.ಕನ್ನಡ ಸಾಹಿತ್ಯದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ಮೊಗ್ಲಿಂಗ್ ಅವರಿಗೆ ತ್ಯೂಬಿಂಗನ್ ವಿವಿಯು ೧೮೫೮ರಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು  ನೀಡಿತು.ಮೊಗ್ಲಿಂಗ್ ಮಾಡಿದ ‘ಬಿಬ್ಲಿಯಾಥೆಕಾ ಕರ್ನಾಟಿಕಾ ‘ ಸಂಪಾದನೆಗಾಗಿ ಈ ಪದವಿಯನ್ನು ಕೊಡಲಾಗಿದೆ ಎಂದು ಆ ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.ಕಿಟ್ಟೆಲ್ ಜನಿಸಿದ್ದು ಜರ್ಮನಿಯ ಉತ್ತರಭಾಗದ ರಾಸ್ತೆರ್ ಹಾಫೆಯಲ್ಲಿ ೧೮೩೨ರಲ್ಲಿ.ಭಾರತಕ್ಕೆ ಬಂದದ್ದು ೧೮೫೩ರಲ್ಲಿ.ಕನ್ನಡ ಭಾಷೆ ಸಾಹಿತ್ಯಗಳಲ್ಲಿ ಕೆಲಸಮಾಡಲು ಕಿಟ್ಟೆಲ್ ರಿಗೆ ಪ್ರೇರಣೆ ಪ್ರೋತ್ಸಾಹ ಕೊಟ್ಟದ್ದು ಮೊಗ್ಲಿಂಗ್.ಕನ್ನಡ-ಇಂಗ್ಲಿಶ್ ನಿಘಂಟುವಿನ ಕೆಲಸವನ್ನು ಮಂಗಳೂರಿನಲ್ಲಿ ಆರಂಭಿಸಿದ ಕಿಟ್ಟೆಲ್ ,೧೮೭೭ ರಲ್ಲಿ ಜರ್ಮನಿಗೆ ಬಂದು , ತ್ಯೂಬಿಂಗನ್ ಬಳಿಯ ಎಸ್ಲಿಂಗನ್ ನಲ್ಲಿ ಆರು ವರ್ಷಗಳ ಕಾಲ ಇದ್ದು, ಆ ನಿಘಂಟುವಿನ ಮೊದಲ ಹಸ್ತಪ್ರತಿಯನ್ನು ಸಿದ್ಧಪಡಿಸಿದರು.೧೮೮೩ರಲ್ಲಿ ಮತ್ತೆ ಭಾರತಕ್ಕೆ ಬಂದು , ಭಾರತೀಯ ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ , ಹಸ್ತಪ್ರತಿಯನ್ನು ಸಮಗ್ರವಾಗಿ ಪರಿಷ್ಕರಿಸಿದರು.ಮೊದಲು ಧಾರವಾಡದಲ್ಲಿ ,ಬಳಿಕ ಮಡಿಕೇರಿಯಲ್ಲಿ ಇದ್ದುಕೊಂಡು ಹಸ್ತಪ್ರತಿ ಅಂತಿಮಗೊಳಿಸಿ, ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಪ್ರೆಸ್ಸಿನಲ್ಲಿ ಮುದ್ರಣಕ್ಕೆ ಕೊಟ್ಟರು.ಕಣ್ಣಿನ ತೊಂದರೆಯ ತೀವ್ರ ಅನಾರೋಗ್ಯಕ್ಕೆ ಒಳಗಾದ ಕಿಟ್ಟೆಲ್ ೧೮೯೨ರಲ್ಲಿ ಜರ್ಮನಿಗೆ ಬಂದು ತ್ಯೂಬಿಂಗನ್ ನಲ್ಲಿ ನೆಲಸಿದರು.ಮಂಗಳೂರಿನಲ್ಲಿ ಕಿಟ್ಟೆಲ್ ನಿಘಂಟು ಪ್ರಕಟವಾದಾಗ (೧೮೯೪) ಕಿಟ್ಟೆಲ್ ಅವರು ತ್ಯೂಬಿಂಗನ್ ನಲ್ಲಿ ಇದ್ದರು.ಕಿಟ್ಟೆಲ್ ನಿಘಂಟುವಿನ ಮಹಾಸಾಧನೆಗಾಗಿ ,ತ್ಯೂಬಿಂಗನ್ ವಿಶ್ವವಿದ್ಯಾಲಯ ೧೯೦೬ರಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿತು.ಕಿಟ್ಟೆಲ್ ಕನ್ನಡ ಭಾಷೆ ಸಾಹಿತ್ಯದಲ್ಲಿ ಮಾಡಿದ ಸಾಧನೆಗಳನ್ನು ಈ ಪ್ರಮಾಣಪತ್ರದಲ್ಲಿ ವಿಶೇಷವಾಗಿ ಉಲ್ಲೇಖಿಸಲಾಗಿದೆ.೧೮೯೨ರಿನ್ದ ಹನ್ನೊಂದು ವರ್ಷಗಳ ಕಾಲ ತ್ಯೂಬಿಂಗನ್ ನಲ್ಲಿ ವಾಸವಾಗಿದ್ದ ಕಿಟ್ಟೆಲ್ ೧೯೦೩ರ ದಶಂಬರ ೧೯ರನ್ದು ಅಲ್ಲೇ ನಿಧನವಾದರು.

ಜರ್ಮನಿಯ ದಕ್ಷಿಣ ಭಾಗದಲ್ಲಿ ಇರುವ ತ್ಯೂಬಿಂಗನ್ ‘ವಿಶ್ವವಿದ್ಯಾಲಯ ನಗರ’ ಎಂದೇ ಪ್ರಸಿದ್ಧವಾದುದು.೧೪೭೭ರಲ್ಲಿ ಸ್ಥಾಪನೆಯಾದ ‘ತ್ಯೂಬಿಂಗನ್ ವಿಶ್ವವಿದ್ಯಾಲಯ’ ಬೌದ್ಧಿಕ ವಿವಿಯೆಂದೆ ಹೆಸರುವಾಸಿ.ಖಗೋಳ ಶಾಸ್ತ್ರಜ್ಞ ಕೆಪ್ಲರ್,ತತ್ವಜ್ಞಾನಿಗಳಾದ ಹೆಗೆಲ್ ,ಶೆಲ್ಲಿಂಗ್,ಕವಿ ಹೊಲ್ದಾರಿನ್ ಮುಂತಾದವರು ಇಲ್ಲಿ ಅಧ್ಯಯನ ನಡೆಸಿದವರು.೧೯೮೯ರ ಮೇ ತಿಂಗಳಿನಲ್ಲಿ ಜರ್ಮನಿಯ ಹೈಡಲ್ ಬರ್ಗ್ ವಿವಿಯ ದಕ್ಷಿಣ ಏಷ್ಯ ಸಂಸ್ಥೆಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ಭಾಗವಹಿಸಲು ಬಂದ ನಾನು ,ಆಗ ಅಲ್ಲಿ ಇದ್ದ ಪ್ರೊ.ಹೈದ್ರೂನ್ ಬ್ರೂಕ್ನರ್ ಜೊತೆಗೆ ಸಮೀಪದ ತ್ಯೂಬಿಂಗನ್ ಗೆ ಭೇಟಿ ಕೊಟ್ಟೆ. ಹದಿನೈದು ಲಕ್ಷಕ್ಕೂ ಹೆಚ್ಚಿನ ಗ್ರಂಥಗಳು ಉಳ್ಳ ಐದುನೂರು ವರ್ಷ ಹಳೆಯ ಅಲ್ಲಿನ ವಿವಿ ಗ್ರಂಥಾಲಯದ ಹಸ್ತಪ್ರತಿ  ವಿಭಾಗದಲ್ಲಿ ಒಂದು ದಿನ ಪೂರ್ತಿ ತಡಕಾಡಿದೆ.ಹದಿನಾಲ್ಕು ಸಾವಿರ ಹಸ್ತಪ್ರತಿ ಇರುವ ಆ ಹಸ್ತಪ್ರತಿ ವಿಭಾಗದಲ್ಲಿ ಕನ್ನಡದ ಹಸ್ತಪ್ರತಿಗಳನ್ನು ಕಂಡು ರೋಮಾಂಚನಗೊಂಡೆ.ಹೀಗೆ ಪರಿಶೀಲಿಸುತ್ತಿದ್ದಾಗ , ಆಕಸ್ಮಿಕವಾಗಿ ‘ದೈವ ಹುಟ್ಟು’ ಎಂಬ ಹೆಸರಿನ ಕನ್ನಡ ಲಿಪಿಯಲ್ಲಿ ಬರೆಯಲಾದ ತುಳು ಪಾಡ್ದನಗಳ ಕಾಗದದ ಹಸ್ತಪ್ರತಿ ಕಣ್ಣಿಗೆ ಬಿತ್ತು.’ ಕಾಂತಣ ಅತಿಕಾರಿ ದೈವ ಹುಟ್ಟು ‘ಎಂಬ ಹೆಸರಿನ ಕಾನ್ತೆರಿ  ಜುಮಾದಿಯ ತುಳು ಪಾಡ್ದನದ ಹಸ್ತಪ್ರತಿ ಅದು ಆಗಿತ್ತು.ಇದು ಈವರೆಗೆ ಎಲ್ಲೂ ದಾಖಲೆ ಆಗಿರಲಿಲ್ಲ. ಅಲ್ಲಿನ ಹಸ್ತಪ್ರತಿ ಸೂಚಿಯಲ್ಲಿ ಸೇರಿರಲಿಲ್ಲ. ಈ ಅಪೂರ್ವ ಹಸ್ತಪ್ರತಿ ಮತ್ತು ಕನ್ನಡದ ಎಲ್ಲ ಹಸ್ತಪ್ರತಿಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವ ಸಂಶೋಧನಾ ಯೋಜನೆಯೊಂದನ್ನು ಸಿದ್ಧಪಡಿಸಿ ,ಯು.ಜಿ.ಸಿ. ಮತ್ತು ಜರ್ಮನಿಯ ಇಂಡೋ ಜರ್ಮನ್ ಸಾಂಸ್ಕೃತಿಕ ಸಂಸ್ಥೆಗೆ ಸಲ್ಲಿಸಿದೆ.ಅದು ಅಂಗೀಕಾರವಾಗಿ ,೧೯೯೩ ರಲ್ಲಿ ಜುಲೈ ಯಿಂದ ಸಪ್ಟಂಬರ್ ವರೆಗೆ ಮೂರು ತಿಂಗಳ ಕಾಲ ,ತ್ಯೂಬಿಂಗನ್ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿ ಸಂಶೋಧಕನಾಗಿ ಕೆಲಸಮಾಡಿದೆ.ಜರ್ಮನ್ ವಿಧ್ಯಾರ್ಥಿಗಳಿಗೆ ಕನ್ನಡ ಕಲಿಸುವ ಕಾಯಕ ಆರಂಭ ಆದದ್ದು ಆಗ.ಮತ್ತೆ ಹದಿನೇಳು ವರ್ಷಗಳ ಬಳಿಕ ಕಳೆದ ತಿಂಗಳು ಮೇ ಯಲ್ಲಿ ವ್ಯೂರ್ಜಬರ್ಗಿನಿಂದ ತ್ಯೂಬಿಂಗನ್ ಗೆ ಪ್ರಯಾಣಿಸಿ ,ನಗರದಲ್ಲಿ ಸಂಚರಿಸಿದಾಗ ಹದಿನೇಳು ವರ್ಷಗಳ ಹಿಂದೆ ,ಮೂರು ತಿಂಗಳ ಕಾಲ ಓಡಾಡಿದ ಬೀದಿಗಳು ,ಕೆಲಸಮಾಡಿದ ಕಟ್ಟಡಗಳು ,ತಿರುವಿಹಾಕಿದ ಕನ್ನಡ ಹಸ್ತಪ್ರತಿಗಳು ಕಣ್ಣ ಮುಂದೆ ಸುಳಿದುವು..

ಶಬ್ದಮಂಜರಿ,ಶಬ್ದಮಣಿದರ್ಪಣ,ಅನುಭವಾಮೃತ,ಜೈಮಿನಿ ಭಾರತ ,ಕುಮಾರವ್ಯಾಸ ಭಾರತ ,ತೊರವೆ ರಾಮಾಯಣ,ಪಂಚತಂತ್ರ,ದಾಸ ಸಾಹಿತ್ಯ ,ಬೇತಾಳ ಪಂಚ ವಿಂಶತಿ ಕತೆಗಳು ,ಕೊಂಕಣಿ ಗಾದೆಗಳು  ಇತ್ಯಾದಿ.ಮತ್ತೆ ಜುಮಾದಿಯ ಕಾರ್ನಿಕ ಮತ್ತು ದೇವು ಪೂಂಜನ ಪ್ರತಾಪ !

‘ಎತ್ತಣ ಮಾಮರ , ಎತ್ತಣ ಕೋಗಿಲೆ !’

ಕನ್ನಡ ಹಸ್ತಪ್ರತಿಗಳ ವಿವರ : ಮುಂದಿನ ಭಾಗದಲ್ಲಿ

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಜರ್ಮನಿಯ ತ್ಯೂಬಿಂಗನ್ ನಲ್ಲಿ ಕನ್ನಡ ಹಸ್ತಪ್ರತಿಗಳು”

RSS Feed for ಬಿ ಎ ವಿವೇಕ ರೈ Comments RSS Feed

ಎತ್ತಣ ಮಾಮರ , ಎತ್ತಣ ಕೋಗಿಲೆ !
ಎತ್ತಣಿಂದೆತ್ತ ಸಂಬಂಧವಯ್ಯಾ !

-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್

ಮುಂದಿನ ಭಾಗಕ್ಕಾಗಿ ಕಾಯುತ್ತಿದ್ದೇನೆ.


Where's The Comment Form?

Liked it here?
Why not try sites on the blogroll...

%d bloggers like this: