ಗುಲಾಮತನದ ಆದರ್ಶೀಕೃತ ರೂಪ ‘ಅಧಿಕಾರ’- ಮತ್ತೆ ಮತ್ತೆ

Posted on ಜೂನ್ 4, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpg?w=140&h=243&h=219

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ

‘ಇರುಳ ಕಣ್ಣು’ ಇಂದ ಆಯ್ದದ್ದು.

ಈ ಲೇಖನ ಪ್ರಕಟವಾದದ್ದು 23 ಏಪ್ರಿಲ್, 2009

ನನ್ನ ‘ಇರುಳ ಕಣ್ಣು’ ಕೃತಿಯನ್ನು

ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ.

ಇದು ಮತ್ತೆ ಮತ್ತೆ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ಅರ್ಥಗಳನ್ನು ಕೊಡಬಲ್ಲುದು.


ಲೋಕಸಭಾ ಚುನಾವಣೆಯ ಪ್ರಚಾರದ ಮಾತಿನ ವಿನಿಮಯದಲ್ಲಿ ಗುಲಾಮತನದ ಪ್ರಶ್ನೆ ಎದ್ದಿದೆ, ಅಧಿಕಾರ ಹಿಡಿಯುವವರ ಶಕ್ತಿಯ ಚರ್ಚೆ ನಡೆದಿದೆ. ಯಾರು ದುರ್ಬಲರು ಯಾರು ಪ್ರಬಲರು ಎನ್ನುವ ಜಿಜ್ಞಾಸೆಯ ಮಾತು ಹಿಂದಿನ ಅಧಿಕಾರಸ್ಥರ ಅಧಿಕಾರಾವಧಿಯ ಆಡಳಿತ ನಿರ್ವಹಣೆಯ ಮೇಲೆ ಬೆಳಕು ಚೆಲ್ಲಿದೆ, ಕೆಲವೊಮ್ಮೆ ಕೆಸರನ್ನೂ ಚೆಲ್ಲಿದೆ. ದೇಶದ ಆಡಳಿತದ ಅಧಿಕಾರದ ಅತ್ಯುನ್ನತ ಹುದ್ದೆಯಾದ ‘ಪ್ರಧಾನಿ’ ಪದವಿ ಎನ್ನುವುದು ಕೇವಲ ಒಂದು ಪಟ್ಟ ಮಾತ್ರ ಅಲ್ಲದೆ, ಅದೊಂದು ಮುಳ್ಳಿನ ಆಸನ ಎನ್ನುವುದು ಅದರಲ್ಲಿ ಕುಳಿತು ಎದ್ದವರಿಗೆ ಗೊತ್ತಿರುವ ಅಂತರಂಗದ ಸತ್ಯ. ಇದು ಪ್ರಧಾನಿ ಹುದ್ದೆಗೆ ಮಾತ್ರ ಸಂಬಂಧಿಸಿದ ಸಂಗತಿಯಾಗಿರದೆ, ಮುಖ್ಯಮಂತ್ರಿ ಮತ್ತು ಇತರ ಯಾವುದೇ ಸಾರ್ವಜನಿಕ ಆಡಳಿತದ ಅಧಿಕಾರದ ಹುದ್ದೆಗಳಿಗೂ ಅನ್ವಯವಾಗುವ ಕಟುಸತ್ಯ.

‘ಸ್ವಾಯತ್ತ ಬದುಕು’  ಎಂಬುದು ಒಂದು ಆದರ್ಶದ ಕಲ್ಪನೆ. ಪ್ರಾಚೀನ ಸಮಾಜಗಳ ಬಗ್ಗೆ ಈ ಮಾತನ್ನು ನಾವು ಹೆಚ್ಚಾಗಿ ಬಳಸುವಾಗಲೂ ನಮ್ಮ ಇಂದಿನ ಸ್ಥಿತಿಗೆ ಹೋಲಿಸಿಕೊಂಡು ಈ ಮಾತನ್ನು ಬಳಸುತ್ತೇವೆಯೇ ಹೊರತು, ಈ ಕಾಲದ ಬದುಕಿನ ಸಮರ್ಪಕವಾದ ಪರಿಚಯದ ತಿಳುವಳಿಕೆಯ ಆಧಾರದಿಂದ ಅಲ್ಲ, ಆ ಸಮಾಜಗಳ ದಾಖಲೀಕೃತ ಸಾಮಗ್ರಿಗಳ ಸಮರ್ಥನೆಯಿಂದ ಅಲ್ಲ. ತನ್ನ ಅಸ್ತಿತ್ವಕ್ಕಾಗಿ ನಿಸರ್ಗದೊಡನೆ ಮಾಡಿಕೊಳ್ಳುವ ಹೊಂದಾಣಿಕೆ, ಇತರ ಮನುಷ್ಯರೊಡನೆ ಮಾಡಿಕೊಳ್ಳುವ ಹೊಂದಾಣಿಕೆ-ಇವನ್ನೇ ವ್ಯಕ್ತಿತ್ವದ ಬೆಳವಣಿಗೆ ಎನ್ನುವ ಹೆಸರಿನಲ್ಲಿ ವಿವರಿಸಲಾಗುತ್ತದೆ. ನಮ್ಮ ಚಟುವಟಿಕೆಯ ಭೌಗೋಳಿಕ ವ್ಯಾಪ್ತಿ ಸೀಮಿತವಾಗಿದ್ದಾಗ, ಹೊಂದಾಣಿಕೆಯ ಪ್ರಮಾಣವು ಸೀಮಿತವಾಗಿರುತ್ತದೆಯೇ ಎನ್ನುವ ಪ್ರಶ್ನೆಗೆ ಸರಳ ಉತ್ತರ ಸಾಧ್ಯವಾಗುವುದಿಲ್ಲ.

ನಮ್ಮ ಚಟುವಟಿಕೆಗಳನ್ನು ನಮಗಾಗಿ ನಮ್ಮ ಸ್ವಂತ ಇಚ್ಛೆಯಿಂದ ಮಾಡುವುದು ಅಥವಾ ಬೇರೆಯವರಿಗಾಗಿ ಕೆಲಸ ಮಾಡುವುದು ಎಂದು ವರ್ಗೀಕರಿಸಿಕೊಂಡಾಗ ಸೀಮಿತ ಪರಿಸರದಲ್ಲೂ ಹೊಂದಾಣಿಕೆಯ ಪ್ರಮಾಣದ ಭಿನ್ನತೆಗಳನ್ನು ಗಮನಿಸಬಹುದು. ತಮಗಾಗಿ ಮತ್ತು ಬೇರೆಯವರಿಗಾಗಿ ಎನ್ನುವ ಸರಳ ವರ್ಗೀಕರಣವನ್ನು ಮೀರಿ ಅನೇಕ ಬಾರಿ ನಮ್ಮ ಚಟುವಟಿಕೆಗಳು ಸಂಕೀರ್ಣವಾಗಿರುತ್ತವೆ. ಪರಸ್ಪರ ಅವಲಂಬನೆಯ ಆಧಾರದಲ್ಲಿ ನಮಗಾಗಿ ಕೆಲಸ ಮಾಡುತ್ತಿರುವಾಗಲೇ ನಾವು ಬೇರೆಯವರಿಗಾಗಿಯೂ ಕೆಲಸ ಮಾಡುತ್ತಿರುತ್ತೇವೆ.

‘ಅಧಿಕಾರ’  ಮತ್ತು ‘ಗುಲಾಮತನ’ ಎನ್ನುವ ಪದಗಳನ್ನು ಪರಸ್ಪರ ವಿರುದ್ಧ ಅರ್ಥದ ಪದಗಳೆಂದು ಪರಿಗಣಿಸಲಾಗುತ್ತದೆ. ಪ್ರಾಚೀನ ಸಮಾಜಗಳ ಕುರಿತು ಹೇಳುವಾಗ, ಈ ವರ್ಗೀಕರಣವನ್ನು ಹೆಚ್ಚು ನಿರ್ದಿಷ್ಟವಾಗಿ ಬಳಸಲಾಗುತ್ತದೆ. ರಾಜ-ಪ್ರಜೆ, ಒಡೆಯ-ಆಳು, ಮಾಲೀಕ-ಕಾರ್ಮಿಕ ಇಂತಹ ದ್ವಂದ್ವ ಪದಗಳು ಎರಡು ಪ್ರತ್ಯೇಕಿತ ಧ್ರುವಗಳಂತೆ ಬಳಕೆಯಾಗುತ್ತವೆ. ಆಧುನಿಕ ಸಮಾಜಗಳಿಗೂ ಇದೇ ಅರ್ಥವ್ಯಾಪ್ತಿಯನ್ನು ವಿಸ್ತರಿಸಲಾಗುತ್ತದೆ. ಆದರೆ ಈ ಪ್ರಯೋಗ ಎಷ್ಟು ನಿಜ ಎನ್ನುವುದನ್ನು ಶೋಧಿಸಿದಾಗ ಕಾಣುವ ಒಳನೋಟ ವಿಚಿತ್ರವಾಗಿರುತ್ತದೆ.

ಪ್ರಜಾಪ್ರಭುತ್ವದ ಸರಳ ಅಳವಡಿಕೆಯ ಪರಿಸರದಲ್ಲಿ ‘ಅಧಿಕಾರ’ ಎನ್ನುವುದು ಸಾಮಾನ್ಯವಾಗಿ ‘ಗುಲಾಮತನ’ದ ಆದರ್ಶೀಕೃತ ರೂಪ ಆಗಿರುತ್ತದೆ. ಇಂತಹ ‘ಗುಲಾಮತನ’ವು ಎರಡು ರೂಪಗಳಲ್ಲಿ ಕ್ರಿಯಾಶೀಲವಾಗಿರುತ್ತದೆ. ಅಧಿಕಾರದಲ್ಲಿ ಇರುವುದು ಎಂದರೆ, ಅದು ಒಂದು ಸರಪಣಿಯ ಕೊಂಡಿಯಂತೆ ಇರುವುದು. ಆ ಕೊಂಡಿಗಿಂತ ಮೇಲೆಯೂ ಒಂದು ಕೊಂಡಿ ಇರುತ್ತದೆ, ಕೆಳಗಡೆಯೂ ಒಂದು ಕೊಂಡಿ ಇರುತ್ತದೆ. ಮೇಲಿನವರಿಗೆ ಗುಲಾಮರಾಗಿ ಇರುವುದರ ಮೂಲಕವೇ ಕೆಳಗಿನವರ ಮೇಲೆ ಅಧಿಕಾರ ಹೊಂದಲು ಸಾಧ್ಯ ಎನ್ನುವುದು ಆಧುನಿಕ ಸನ್ನಿವೇಶದಲ್ಲಿ ‘ಅಧಿಕಾರ’ಕ್ಕೆ ಇರುವ ಒಂದು ವಿವರಣೆ. ಇದು ಹೊಂದಾಣಿಕೆಯ ಒಂದು ವಿಧ. ಎರಡನೆಯದು, ಪ್ರಜಾಪ್ರಭುತ್ವದ ಸರಳ ಮಾದರಿಯಲ್ಲಿ, ಅಧಿಕಾರದಲ್ಲಿರುವವರು ತನ್ನ ಪರಿಸರದ ಮತ್ತು ಕೆಳಗಿನ ಜನರೊಡನೆ ಅನೇಕ ಬಗೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಯಾರ ಮೇಲೆ ಅಧಿಕಾರ ಹೊಂದಿರುತ್ತಾರೆಯೋ ಅವರನ್ನೇ ಅನೇಕ ಬಾರಿ ಮೆಚ್ಚಿಸಬೇಕಾದ ಒಪ್ಪಿಸಬೇಕಾದ ಅನಿವಾರ್ಯ ಹೊಂದಾಣಿಕೆಯ ಕೆಲಸಗಳನ್ನು ಮಾಡಬೇಕಾಗುತ್ತದೆ. ಬದುಕು ಸಾರ್ವಜನಿಕವಾಗುತ್ತಾ ಹೋದ ಹಾಗೆಲ್ಲ, ಅಧಿಕಾರ ಮತ್ತು ಗುಲಾಮತನಗಳ ಭಿನ್ನತೆ ಕಾಣದಷ್ಟು ಮರೆಯಾಗಿ, ‘ಸೌಮ್ಯ ಭಯಂಕರ’ ವ್ಯಕ್ತಿತ್ವವೊಂದು ರೂಪುತಾಳುತ್ತದೆ. (‘ಸೌಮ್ಯ ಭಯಂಕರ’ ಎನ್ನುವ ನುಡಿಗಟ್ಟು ಪಂಪ ಕವಿಯ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ಬಳಕೆಯಾಗಿದೆ) ತಾಳ್ಮೆ ಮತ್ತು ಕೋಪ-ಇವೆರಡೂ ಒಂದೇ ವ್ಯಕ್ತಿತ್ವದಲ್ಲಿ ಸಮ್ಮಿಶ್ರಣಗೊಂಡಿರುತ್ತವೆ.

ನಮ್ಮ ದೇಶದಲ್ಲಿ ಸಮ್ಮಿಶ್ರ ಸರ್ಕಾರಗಳ ಯುಗ ಆರಂಭವಾದ ಬಳಿಕ, ಪ್ರಧಾನಿ ಹುದ್ದೆಯ ನಿರ್ವಹಣೆ ಹೆಚ್ಚು ಸಂಕೀರ್ಣವಾಗುತ್ತಾ, ಹೊಂದಾಣಿಕೆಯ ಸ್ವರೂಪವನ್ನು ಪಡೆಯುತ್ತಾ ಬಂದಿತು. 1977ರಲ್ಲಿ ಮೊರಾರ್ಜಿ ದೇಸಾಯಿ  ಅವರು ಜನತಾಪಕ್ಷದ ಅಧಿಕಾರದಲ್ಲಿ ಪ್ರಧಾನಮಂತ್ರಿ ಆದಾಗ, ಕಾಂಗ್ರೆಸಿಗೆ  ಪರ್ಯಾಯವಾಗಿ ಒಂದು ಸಮಷ್ಠಿರೂಪದ ರಾಜಕೀಯ ಪಕ್ಷದ ಆಡಳಿತ ಸಾಧ್ಯ ಎನ್ನುವ ಭಾವನೆ ಉಂಟಾಯಿತು. ಆದರೆ ಜನತಾ ಪಕ್ಷ ಒಡೆದು ಮೊರಾರ್ಜಿಯವರು ಸ್ಥಾನವನ್ನು ಕಳೆದುಕೊಂಡ ಬಳಿಕ ಹುಟ್ಟಿಕೊಂಡ ಬೇರೆ ಬೇರೆ ಪಕ್ಷಗಳು ಅನೇಕ ಬಾರಿ ತಮ್ಮ ಮೂಲ ಗುಣವನ್ನು ಇಟ್ಟುಕೊಂಡು, ಹೆಸರನ್ನು ಬದಲಿಸಿಕೊಂಡು ತಮ್ಮ ಅನನ್ಯತೆಯನ್ನೇ ಮುಖ್ಯವಾಗಿ ಇರಿಸಿಕೊಂಡ ಕಾರಣ, ಮುಂದೆ ಬಂದ ಸಮ್ಮಿಶ್ರ ಸರ್ಕಾರಗಳ ಪ್ರಧಾನಿಗಳಿಗೆ ಪೂರ್ಣಾವಧಿಯ ಅಧಿಕಾರ ದೊರೆಯಲಿಲ್ಲ. ಚರಣ್ ಸಿಂಗ್ , ವಿ.ಪಿ.ಸಿಂಗ್, ಚಂದ್ರಶೇಖರ್, ಹೆಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್-ಹೀಗೆ ನಮ್ಮ ಹಿರಿಯ ನಾಯಕರೆಲ್ಲ ಹೊಂದಾಣಿಕೆಯ ಬಿಕ್ಕಟ್ಟಿನ ರಾಜಕೀಯದಲ್ಲಿ ಪೂರ್ಣಾವಧಿಯ ಪ್ರಧಾನಿಗಳಾಗಿ ಆಡಳಿತ ನಡೆಸಲು ಸಾಧ್ಯವಾಗಲೇ ಇಲ್ಲ.

ಆಗ ಆರಂಭವಾದ ಪ್ರಾದೇಶಿಕ ಪಕ್ಷಗಳ ಮತ್ತು ಪ್ರಾದೇಶಿಕ ನಾಯಕರ ಪ್ರಾಬಲ್ಯದಿಂದಾಗಿ ಕೇಂದ್ರ ಸರ್ಕಾರದಲ್ಲಿ ವಿಭಿನ್ನ ವ್ಯಕ್ತಿಗಳ ಮತ್ತು ವಿಭಿನ್ನ ಸಿದ್ಧಾಂತಗಳ ಪಕ್ಷಗಳ ವೈರುಧ್ಯದ ಒಕ್ಕೂಟದ ಯುಗ ಆರಂಭವಾಯಿತು. ಸಿದ್ದಾಂತಕ್ಕಿಂತ ಹೆಚ್ಚಾಗಿ ವ್ಯಕ್ತಿಕೇಂದ್ರಿತ ರಾಜಕಾರಣದ ಶಕ್ತಿ ಎಷ್ಟು ಪ್ರಬಲವಾಯಿತೆಂದರೆ, ಒಬ್ಬರು ಅಥವಾ ಇಬ್ಬರು ಸಂಸದರುಗಳನ್ನೊಳಗೊಂಡ ಗುಂಪುಗಳು ಕೇಂದ್ರ ಸರ್ಕಾರವನ್ನು ನಿಯಂತ್ರಿಸುವ ಮತ್ತು ಅಲುಗಾಡಿಸುವ ರಾಜಕೀಯವನ್ನು ಮಾಡಿದವು. ನಮ್ಮ ಕಡೆ ಹಳ್ಳಿಗಳಲ್ಲಿ ‘ಎರೆಹುಳುವೂ ಹೆಡೆ ಎತ್ತುತ್ತದೆ’ ಎನ್ನುವ ಗಾದೆಯೊಂದಿದೆ. ಈ ಮಾತು ಕೇವಲ ಕೇಂದ್ರ ಸರ್ಕಾರದ ಆಡಳಿತಕ್ಕೆ ಮಾತ್ರ ಅನ್ವಯಿಸದೆ, ಇಂದು ನಮ್ಮ ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ.

ತಮಿಳುನಾಡಿನ ದ್ರಾವಿಡ ಪಕ್ಷಗಳ ಕರುಣಾನಿಧಿ, ಜಯಲಲಿತಾ, ವೈಕೋ ; ಉತ್ತರಪ್ರದೇಶದ ಮುಲಾಯಂಸಿಂಗ್ ಯಾದವ್, ಮಾಯಾವತಿ ; ಬಿಹಾರದ ಲಾಲೂಪ್ರಸಾದ್ ಯಾದವ್, ರಾಮ್ ವಿಲಾಸ್  ಪಾಸ್ವಾನ್ ; ಶಿವಸೇನೆಯ ಠಾಕ್ರೆಗಳು ; ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಮತ್ತು ಚಂದ್ರಶೇಖರ್ ರಾವ್  ; ಪಂಜಾಬಿನ  ಅಕಾಲಿಗಳು ; ಒರಿಸ್ಸಾದ ಪಟ್ನಾಯಕರು  ಮತ್ತು ಪಶ್ಚಿಮಬಂಗಾಳ ಮತ್ತು ಕೇರಳದಲ್ಲಿ ಭದ್ರನೆಲೆ ಹೊಂದಿರುವ ಕಮ್ಯೂನಿಸ್ಟರು ಮತ್ತು ಕರ್ನಾಟಕದ ಜಾತ್ಯತೀತ ಜನತಾದಳ-ಇನ್ನೂ ಅನೇಕ ರಾಜಕೀಯ ನಾಯಕರು ಮತ್ತು ಪಕ್ಷಗಳು ಹೊಂದುವ ಸಾಂದರ್ಭಿಕ ಧ್ರುವೀಕರಣವು ಯು.ಪಿ.ಎ, ಎನ್.ಡಿ.ಎ, ತೃತೀಯರಂಗ, ಚತುರ್ಥರಂಗ-ಹೀಗೆ ಯಾವುದೇ ಒಕ್ಕೂಟವನ್ನು ಯಾವುದೇ ಸಂದರ್ಭದಲ್ಲಿ ರಚಿಸಲು ಶಕ್ತವಾಗಿರುತ್ತದೆ. ಈ ರೀತಿಯ ಪಕ್ಷಗಳು ಒಕ್ಕೂಟ ಸೇರಲು ನಡೆಸುವ  ಚೌಕಾಶಿ ಮತ್ತು ಪಡೆಯುವ ಲಾಭಗಳು, ಅವು ಹೊಂದಿರುವ ಸಂಸದರ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತವೆ. ತಮಿಳುನಾಡು, ಮಹಾರಾಷ್ಟ್ರ, ಉತ್ತರಪ್ರದೇಶ, ಬಿಹಾರ, ಪಶ್ಚಿಮಬಂಗಾಳದಂತಹ ರಾಜ್ಯಗಳು ಯಾವುದೇ ಒಕ್ಕೂಟ ಅಧಿಕಾರಕ್ಕೆ ಬಂದರೂ ದೇಶದಲ್ಲಿ ಪ್ರಬಲ ಶಕ್ತಿಕೇಂದ್ರಗಳಾಗಿರುವುದಕ್ಕೆ ಅಲ್ಲಿನ ನಾಯಕರ ರಾಜಕೀಯ ವ್ಯಾವಹಾರಿಕತೆಯೇ ಕಾರಣ.

ಇಂತಹ ಸನ್ನಿವೇಶಗಳಲ್ಲಿ ದೇಶವನ್ನು ಆಳುವ ಯಾವುದೇ ಒಕ್ಕೂಟದ ನಾಯಕರಾದ ಪ್ರಧಾನಮಂತ್ರಿಯವರು, ಹೊಂದಾಣಿಕೆಯ ರಾಜಕೀಯವನ್ನು ಎಲ್ಲ ಹಂತಗಳಲ್ಲಿಯೂ ಮಾಡಬೇಕಾದ ಅನಿವಾರ್ಯತೆ ಇದೆ. ಕವಿಹೃದಯದ ಮುತ್ಸದ್ದಿ ಅಟಲ ಬಿಹಾರಿ ವಾಜಪೇಯಿ, ಸಂವೇದನಶೀಲ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ -ಇಬ್ಬರೂ ಎರಡು ಒಕ್ಕೂಟ ಸರ್ಕಾರಗಳ ಪ್ರಧಾನಮಂತ್ರಿಗಳಾಗಿ ಪೂರ್ಣಾವಧಿಯನ್ನು ಪೂರೈಸಿದವರು. ತಮ್ಮ ಪ್ರಧಾನಮಂತ್ರಿ ಅವಧಿಯ ಬಿಕ್ಕಟ್ಟು ಮತ್ತು ಒತ್ತಡಗಳ ಸಂಕಥನಗಳ ನಿಜವಾದ ಆತ್ಮಕಥನವನ್ನು ಇವರಿಬ್ಬರೂ ಬರೆದರೆ, ಅವು ಸಾರ್ವಜನಿಕ ಆಡಳಿತರಂಗಕ್ಕೆ ಒಳ್ಳೆಯ ಮಾರ್ಗದರ್ಶಿ ಆಗಬಲ್ಲವು. ಇಂದಿನ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಎನಿಸಿಕೊಂಡಿರುವ ಪಕ್ಷಗಳು ಕೂಡ ಸಂಪೂರ್ಣವಾಗಿ ಒಂದೇ ಮನಸ್ಸಿನ ಪಕ್ಷಗಳಾಗಿ ಉಳಿದುಕೊಂಡಿಲ್ಲ. ಆ ಪಕ್ಷಗಳ ಒಳಗೆಯೇ ಭಿನ್ನ ತತ್ತ್ವಗಳ ಗುಂಪುಗಳಿವೆ, ಮಹತ್ವಾಕಾಂಕ್ಷೆಯ ನಾಯಕರಿದ್ದಾರೆ, ಪರಸ್ಪರ ವಿರೋಧಿಗಳು ಎನ್ನಿಸುವ ಹಿರಿಯರಿದ್ದಾರೆ. ಹೀಗೆ ಪಕ್ಷದ ಒಳಗಿನ ಆಂತರಿಕ ಭಿನ್ನತೆಯನ್ನು ನಿರ್ವಹಣೆ ಮಾಡುವುದು ಪಕ್ಷದ ನಾಯಕರಿಗೆ ತುಂಬಾ ಒತ್ತಡದ, ಆತಂಕದ ಸವಾಲು. ಒಂದರ್ಥದಲ್ಲಿ ಇಂತಹ ಪಕ್ಷಗಳೇ ಒಂದು ಸಮ್ಮಿಶ್ರಸರ್ಕಾರದಂತಿರುತ್ತವೆ.

ಹೀಗಾಗಿ ಅಧಿಕಾರ ಮತ್ತು ಗುಲಾಮತನ ಅನ್ನುವುದನ್ನು ಪ್ರತ್ಯೇಕಿಸಿ ನೋಡದೆ ಹೊಂದಾಣಿಕೆಯ ರಾಜಕೀಯವನ್ನು ಯಾವ ಹಂತದವರೆಗೆ ಎಳೆದುಕೊಂಡು ಹೋಗಬಹುದು ಎಂಬ ಚಿಂತನೆ ಬಹಳ ಮುಖ್ಯವಾದುದು. ಪಕ್ಷದಲ್ಲಿ, ಸರ್ಕಾರದಲ್ಲಿ, ಆಡಳಿತದಲ್ಲಿ ಬಿಕ್ಕಟ್ಟನ್ನು ನಿರ್ಮಾಣ ಮಾಡುವವರ ಪ್ರಮಾಣ ಹೆಚ್ಚಾಗುತ್ತಾ ಹೋಗುತ್ತಿದೆ. ಆದರೆ, ಮನೆಯ ಒಡೆಯನಂತಿರುವ ಪ್ರಧಾನಿಯಂತಹ ನಾಯಕರಿಗೆ ಬಿಕ್ಕಟ್ಟು ನಿರ್ವಹಣೆಯಲ್ಲಿ ಪಾಲ್ಗೊಳ್ಳುವ ಹಿತೈಷಿಗಳ ಪ್ರಮಾಣ ಕಡಿಮೆಯಾಗುತ್ತಾ ಬರುತ್ತಿದೆ. ಅಧಿಕಾರದಲ್ಲಿರುವವರು ಆಡಳಿತ ನಿರ್ವಹಣೆಯಲ್ಲೇ ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯಯಮಾಡಿದರೆ ಅಭಿವೃದ್ಧಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಸಾರ್ವಜನಿಕ ಆಡಳಿತಕ್ಕೆ ಮತ್ತು ಖಾಸಗಿ ಆಡಳಿತಕ್ಕೆ ಇರುವ ಮುಖ್ಯ ವ್ಯತ್ಯಾಸವೆಂದರೆ, ಸಾರ್ವಜನಿಕ ಆಡಳಿತದಲ್ಲಿ ಎಲ್ಲ ಲೋಪಗಳು ಗೊತ್ತಿದ್ದಾಗಲೂ ಅವನ್ನು ನಿವಾರಿಸಲು ಮತ್ತು ಶಿಕ್ಷಿಸಲು ಸಾಧ್ಯವಾಗದಂತಹ ಸಂರಕ್ಷಣೆಯ ಕಾನೂನುಗಳು, ಅಪರಾಧಗಳನ್ನು ಸಂರಕ್ಷಿಸುವ ಶಕ್ತಿಗಳು ಆಡಳಿತದ ಒಳಗಡೆಯೇ ಇರುತ್ತವೆ. ಖಾಸಗಿ ರಂಗದಲ್ಲಿ ‘ನಿರ್ವಹಣೆಯ ಆಧಾರದಲ್ಲಿ ಅಸ್ತಿತ್ವ’ ಎನ್ನುವ ತತ್ತ್ವವಿರುವುದರಿಂದ, ಉದಾರವಾದಿ ಪ್ರಜಾಪ್ರಭುತ್ವದ ಅತಿಸಹನೆಯ ಅಗತ್ಯ ಅಲ್ಲಿ ಕಂಡುಬರುವುದಿಲ್ಲ.

ಆಧುನಿಕ ಸಮಾಜದಲ್ಲಿ ನಮ್ಮ ಬದುಕು ಹೆಚ್ಚು ಗತಿಶೀಲವಾಗಿದೆ. ಹೊಸ ಜಗತ್ತಿನ ಅಪರಿಚಿತ ಲೋಕಗಳ ಮಾಹಿತಿಗಳು ನಮ್ಮ ಬದುಕಿನ ಭಾಗವಾಗುತ್ತಾ ಬರುತ್ತವೆ. ನೇರವಾಗಿ ಅಥವಾ ಮಾಧ್ಯಮಗಳ ಮೂಲಕ ಇಂತಹ ಸಂಗತಿಗಳು ನಮ್ಮ ಬದುಕಿನಲ್ಲಿ ಅಳವಡುತ್ತಾ ಬಂದ ಹಾಗೆಯೇ ನಮ್ಮ ಬದುಕಿನ ವಿಸ್ತರಣೆಗಾಗಿ, ಹೊಸ ಅನುಭವಗಳಿಗಾಗಿ, ಅವುಗಳಿಂದ ದೊರೆಯುವ ಸಂಭ್ರಮಗಳಿಗಾಗಿ ಹೊಂದಾಣಿಕೆ ಎನ್ನುವುದು ಜೀವನವಿಧಾನದ ಒಂದು ಮುಖ್ಯ ಭಾಗವಾಗುತ್ತದೆ. ಇಂತಹ ಹೊಂದಾಣಿಕೆಯು ಏಕಮುಖಿಯಾಗಿದ್ದಾಗ ಅದು ವ್ಯಕ್ತಿತ್ವಹೀನ ಸ್ಥಿತಿಗೆ ಬಂದು ತಲುಪಬಹುದು, ಗುಲಾಮತನದ ರೂಪವನ್ನು ತಾಳಬಹುದು. ತಾನು ಹೊಂದಾಣಿಕೆ ಮಾಡುತ್ತಿರುವಾಗಲೇ ಪರಿಸರವನ್ನು ಬದಲಾಯಿಸಲು ಶಕ್ತವಾದ ಅಳವಡಿಕೆ ಸಾಧ್ಯವಾದಾಗ, ಇಂತಹ ಹೊಂದಾಣಿಕೆಗಳಿಗೆ ಹೊಸ ಅರ್ಥವೊಂದು ಹುಟ್ಟಿಕೊಳ್ಳಲು ಅವಕಾಶ ಕಲ್ಪಿತವಾಗುತ್ತದೆ. ಇದು ಸಾಧ್ಯವಾಗಬೇಕಾದರೆ, ಆಡಳಿತ ಮತ್ತು ಅಧಿಕಾರದ ಭಾರ ಹೊತ್ತವರಿಗೆ ನಾವು ಹೊರಿಸುವ ಹಾರತುರಾಯಿಗಳಿಗಿಂತ, ಓಲೈಕೆಗಳಿಗಿಂತ, ಅವರ ಹೃದಯದ ರಕ್ತನಾಳಗಳಲ್ಲಿ ಹೊಸಗಂಟುಗಳು ಹುಟ್ಟಿಕೊಳ್ಳದಂತೆ ಮಾಡುವುದು ಮತ್ತು ಗಂಟುಗಂಟಾಗಿ ರಕ್ತಪರಿಚಲನೆಗೆ ಅಡ್ಡಿಯಾದ ನಾಳಗಳನ್ನು ಬಿಡಿಸಿ ಹೊಸರಕ್ತಗಳನ್ನು ಹರಿಸುವುದು ಎಲ್ಲರ ಕರ್ತವ್ಯ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: