ಲೋಕದೃಷ್ಟಿಯೊಳಗೊಂದು ಸುತ್ತು

Posted on ಮೇ 24, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpg?w=156&h=243

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ

‘ಇರುಳ ಕಣ್ಣು’ ಇಂದ ಆಯ್ದದ್ದು.

ಈ ಲೇಖನ ಪ್ರಕಟವಾದದ್ದು 05 ಜೂನ್, 2009

ನನ್ನ ‘ಇರುಳ ಕಣ್ಣು’ ಕೃತಿಯನ್ನು

ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ.

ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ


‘ಬಹುಶಃ ನಾವು ಮತ್ತೆ ಮೊದಲಿನಿಂದ ಸುರುಮಾಡಬಹುದು’.

‘ಅದು ಬಹಳ ಸುಲಭ’.

‘ಆದರೆ ಅದನ್ನು ಆರಂಭಿಸುವುದು ಕಷ್ಟ’.

‘ಯಾವುದರಿಂದಲಾದರೂ ನೀನು ಅದನ್ನು ಆರಂಭಿಸಬಹುದು’.

‘ಹೌದು, ಆದರೆ ಅದನ್ನು ನೀನೇ ನಿರ್ಧರಿಸಬೇಕು’. ‘ನಿಜ’.

ಇವು ಸಾಮ್ಯೂವೆಲ್ ಬೆಕೆಟಿನ ‘ವೈಟಿಂಗ್ ಘೋರ್ ಗೋಡೊ’ ನಾಟಕದ ಸಾಲುಗಳು.

ಮೇ ತಿಂಗಳು ಕಳೆದು ಜೂನ್ ಆರಂಭವಾಗುವ ಈ ಕಾಲ, ಅನೇಕರ ಪಾಲಿಗೆ ಹೊಸ ವರ್ಷದ ಕಾಲ. ಕಾಲವನ್ನು ಒಂದು ಚಕ್ರ ಎಂದು ಭಾವಿಸುವವರ ಪಾಲಿಗೆ ಅದರ ಹೊಸ ಚಲನೆಯೊಂದು ಈಗ ಆರಂಭವಾಗುತ್ತಿದೆ. ಐದು ವರ್ಷಗಳ ಬಳಿಕ ಲೋಕಸಭೆಗೆ  ಚುನಾವಣೆ ನಡೆದು, ಹೊಸ ಲೋಕಸಭೆ ಕಾರ್ಯಾರಂಭ ಮಾಡಿದೆ. ಹಳೆಯ ಮುಖಗಳೊಂದಿಗೆ ಹೊಸ ಮುಖಗಳು, ಹೊಸ ಧ್ವನಿಗಳು, ಹೊಸ ಚಕ್ರವನ್ನು ಚಲಿಸಲು ಒಟ್ಟು ಸೇರಿವೆ. ಕರ್ನಾಟಕದಲ್ಲಿ ಒಂದು ವರ್ಷವನ್ನು ಪೂರೈಸಿದ ರಾಜ್ಯ ಸರ್ಕಾರ, ಎರಡನೇ ವರ್ಷದ ಚಲನೆಯನ್ನು ಆರಂಭಿಸಿದೆ. ಶಾಲಾ-ಕಾಲೇಜುಗಳು ಮತ್ತೆ ಬಾಗಿಲು ತೆರೆದು ಹಿಂದಿನ ವಿದ್ಯಾರ್ಥಿಗಳಿಗೆ ಮುಂದಿನ ಕೋಣೆಗಳನ್ನು, ಹೊಸಬರಿಗೆ ಹೊಸ ಅವಕಾಶಗಳನ್ನು ಕಲ್ಪಿಸುಕೊಡುತ್ತಿವೆ. ಹೊಸ ಸಂಸ್ಥೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಕಾಲದ ಜೊತೆಗೆ ಸ್ಥಳದ ಬದಲಾವಣೆಯು ಹೊಸ ಸಂಭ್ರಮವನ್ನು ತಂದುಕೊಡುತ್ತಿದೆ.

5147xisbxrL._SL500_AA300_.jpg (300×300)ಹಳ್ಳಿ-ಪಟ್ಟಣಗಳಲ್ಲಿ ಜನ ಆಕಾಶದಲ್ಲಿ ಕಣ್ಣನ್ನಿಟ್ಟು ಚಲಿಸುವ ಮೋಡಗಳಿಗಾಗಿ, ಅವು ಸುರಿಸುವ ಹನಿಗಳಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಕೃಷಿಕರು ಹೊಲ ಉತ್ತು ಮಳೆಗಾಗಿ ಕಾಯುತ್ತಾ ಬಿತ್ತನೆಯ ಕ್ಷಣಗಣನೆಯಲ್ಲಿ ತೊಡಗಿದ್ದಾರೆ. ಕರ್ನಾಟಕಕ್ಕೆ ಮುಂಗಾರು ಪ್ರವೇಶ ಎಂದು ಆಗುತ್ತದೆ ಎನ್ನುವುದು ನಿರಂತರ ಕುತೂಹಲದ, ಕಾಯುವ ಒಂದು ವಿಶಿಷ್ಟ ಪರಿಸ್ಥಿತಿ. ಮುಂಗಾರನ್ನು ಹಂಬಲಿಸುವುದು ಮತ್ತು ಅದರ ಬೆನ್ನಟ್ಟುವುದು ಒಂದು ರೋಮಾಂಚಕ ಅನುಭವ. ಈ ಕುರಿತು ಅನುಭವ ಸಂಕಥನದ ವಿಶಿಷ್ಟವಾದ ಕೃತಿ ‘Chasing the Monsoon : A Modern Pilgrimage Through India’(Alexander Frater) ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ವು ಮಕ್ಕಳಿಗಷ್ಟೇ ಅಲ್ಲದೆ, ಕರಾವಳಿಯ ಎಲ್ಲ ಜನರಿಗೂ ಕಾತರ, ಆತಂಕ, ಸಂಭ್ರಮವನ್ನು ಹಂತಹಂತವಾಗಿ ತಂದುಕೊಡುವ ಸ್ತಬ್ಧಚಿತ್ರದ ಕವನ.

ಮುಂಗಾರಿನ ಆಗಮನಕ್ಕಾಗಿ ಕರಾವಳಿಯ ಹಳ್ಳಿಗಳಲ್ಲಿ ಒಂದು ಕಾಲಕ್ಕೆ ನಡೆಸುತ್ತಿದ್ದ ಸಿದ್ಧತೆಗಳೇ ಒಂದು ಸಣ್ಣ ದೇಶ ಕಟ್ಟುವ ರೂಪದಲ್ಲಿದ್ದವು. ಮನೆಯ ಮುಳಿಹುಲ್ಲಿನ ಮಾಡುಗಳಿಗೆ ಮತ್ತೆ ಹೊಸದಾಗಿ ಮುಳಿಹುಲ್ಲನ್ನು ಹೊದಿಸುವುದು, ಮಳೆಗಾಲದ ಅಡುಗೆಗಾಗಿ ಹಪ್ಪಳ, ಸಂಡಿಗೆ, ಬಾಳಕ, ಉಪ್ಪುನೀರಲ್ಲಿ ಹಾಕಿದ ಹಲಸಿನತೊಳೆ, ಉಪ್ಪಿನಕಾಯಿ-ಇತ್ಯಾದಿ ಅಡುಗೆಯ ವಸ್ತುಗಳ ಶೇಖರಣೆ, ಗೊರಬೆ ಕೆಡೆಂಜಲುಗಳ ನಿರ್ಮಾಣ, ಛಿದ್ರಗೊಂಡ ಹಳೆಯ ಕೊಡೆಯ ಅಸ್ತಿಪಂಜರಗಳನ್ನು ಜೋಡಿಸುವುದು-ಇವೆಲ್ಲ ಮಳೆಯ ರಕ್ಷಣೆಗಾಗಿ ಮಾಡಿಕೊಳ್ಳುವ ಸಿದ್ಧತೆಗಳು. ಕೃಷಿಕರಿಗೆ ಹೊಲವನ್ನು ಉಳುವುದು, ಗೊಬ್ಬರ ಹಾಕುವುದು, ಬಿತ್ತನೆಯ ಬೀಜವನ್ನು ಸರಿಮಾಡುವುದು, ತೋಟಗಳ ಗಿಡಗಳ ಬುಡ ಬಿಡಿಸುವುದು, ಅಡಿಕೆ ಮರಗಳಿಗೆ ಮೈಲುತುತ್ತು ಮದ್ದು ಸಿಂಪಡಿಸುವುದು-ಇಂತಹ ನೂರಾರು ಕೆಲಸಗಳು.

ಕೃಷಿಕರ ಮುಂಗಾರು ಅಧಿವೇಶನ ಎಂದು ಆರಂಭ ಎನ್ನುವುದನ್ನು ನಿರ್ಧಾರ ಮಾಡುವ ಮಳೆರಾಯ, ಹವಾಮಾನ ಇಲಾಖೆಯವರ ಶಾಸನಗಳಿಗೆ ಎಂದೂ ಬದ್ಧನಾಗಿರುವುದಿಲ್ಲ. ಜೂನ್ ಮೊದಲ ವಾರದಲ್ಲಿ ಕೇರಳ, ದಕ್ಷಿಣಕನ್ನಡದ ಬಳಿಕ ಉತ್ತರಕನ್ನಡ- ಗೋವಾದ ಮೂಲಕ ವರುಣನ ವಿಮಾನ ಉತ್ತರಕ್ಕೆ ಚಲಿಸುತ್ತದೆ. ಅವನೂ ಸ್ವತಂತ್ರನಲ್ಲ. ಅವನ ಪಕ್ಷ ಒಟ್ಟಾಗಿದ್ದರೆ, ದಟ್ಟವಾಗಿ, ಕಪ್ಪಾಗಿ, ಮಿಂಚಾಗಿ ಹೊಳೆಯುತ್ತಾ, ಗುಡುಗಾಗಿ ಗರ್ಜಿಸುತ್ತಾ, ಕೆಲವೊಮ್ಮೆ ಸಿಡಿಲೆಂಬ ವಜ್ರಾಯುಧದಲ್ಲಿ ಬಡಿಯುತ್ತಾ, ಆತ ಮೆರೆಯುತ್ತಾನೆ, ಮೆರವಣಿಗೆಯಲ್ಲಿ ಚಲಿಸುತ್ತಾನೆ. ಆದರೆ, ಅವನ ಪಕ್ಷದವರೇ ಚೆಲ್ಲಾಪಿಲ್ಲಿಯಾದರೆ, ಅವರೇ ಎಲ್ಲೆಲ್ಲೂ ಬೆಳ್ಳಗೆ ಹರಡಿಕೊಂಡು ಕೆಲವೊಮ್ಮೆ ಅವನನ್ನು ತೇಲಿಸುತ್ತಾರೆ, ಮತ್ತೆ ಕೆಲವೊಮ್ಮೆ ಮುಳುಗಿಸುತ್ತಾರೆ. ಹೀಗೆ, ಮುಂಗಾರಿನ ವರ್ಷ ಹೊಸ ವರ್ಷದ ಆರಂಭ ಆಗುವುದರಿಂದ ಕಾಲಚಕ್ರದ ವರ್ತುಲದ ಚಲನೆಗೆ ಈ ತಿಂಗಳು ಹೊಸ ಅರ್ಥವನ್ನು ಕೊಡುತ್ತದೆ.

ಉತ್ತರಧ್ರುವದ ಬಳಿ ಇರುವ ದೇಶ ಫಿನ್ಲ್ಯಾಂಡ್ನಲ್ಲಿ, ಪ್ರತೀ ವರ್ಷ ಜೂನ್ ಮೂರನೇ ವಾರದಲ್ಲಿ ಒಂದು ವಿಶಿಷ್ಟ ಉತ್ಸವ ನಡೆಯುತ್ತದೆ. ಅದು ಮಧ್ಯರಾತ್ರಿಯಲ್ಲಿ ಪೂರ್ಣಸೂರ್ಯನನ್ನು ಕಂಡು ಸಂಭ್ರಮಿಸುವ ಉತ್ಸವ. 1991ರಿಂದ 1996ರ  ಅವಧಿಯಲ್ಲಿ ಸುಮಾರು ಆರು ಬಾರಿ ಈ ಉತ್ಸವವನ್ನು ಕಾಣುವ ಅವಕಾಶ ನನಗೆ ದೊರೆತಿತ್ತು. ಇಪ್ಪತ್ನಾಲ್ಕು ಗಂಟೆಗಳ ಹಗಲಿನ ಆ ದಿನ, ಮಧ್ಯರಾತ್ರಿಯ ಸೂರ್ಯನನ್ನು ಕಾಣುವ ಸಂಭ್ರಮದ ಆಚರಣೆ ಫಿನ್ಲ್ಯಾಂಡ್ನ ದೇಶದುದ್ದಕ್ಕೂ ನಡೆಯುತ್ತದೆ. ಹೀಗಾಗಿ ಆ ದೇಶದವರಿಗೆ ಜೂನ್ ತಿಂಗಳೆಂದರೆ ‘ಪೂರ್ಣ ಹಗಲಿನ ತಿಂಗಳು’. ಆ ಬಳಿಕ ಹಗಲಿನ ಅವಧಿ ಕಡಿಮೆಯಾಗುತ್ತಾ ಬಂದು, ಡಿಶೆಂಬರ ತಿಂಗಳ ಕೊನೆಯ ವಾರದಲ್ಲಿ ಸೂರ್ಯ ಕಾಣೆಯಾಗಿ, ಇಪ್ಪತ್ನಾಲ್ಕು ಗಂಟೆಗಳ ಕತ್ತಲಿನ ಜಗತ್ತು ನಿರ್ಮಾಣವಾಗುತ್ತದೆ. ಆ ಅವಧಿಯಲ್ಲಿಯೇ ಆ ದೇಶದ ಜನ ಪೂರ್ಣಹಗಲಿನ ದಿನಗಳಿಗಿಂತ ಹೆಚ್ಚು ಗಂಟೆಗಳ ಕಾಲ ಕೆಲಸ ನಿರ್ವಹಿಸುತ್ತಾರೆ. ಹಾಗಾಗಿ, ಹಗಲು ಮತ್ತು ರಾತ್ರಿ ಎನ್ನುವುದು ನಮ್ಮ ಮನಸ್ಸಿನ ಪರಿಕಲ್ಪನೆಗಳೇ ಹೊರತು, ಅದಕ್ಕಿಂತ ಹೆಚ್ಚಿನ ಅರ್ಥವನ್ನು ಕಲ್ಪಿಸುವ ಅಗತ್ಯವಿಲ್ಲ.

ಸ್ಥಳವನ್ನು ಮತ್ತು ಕಾಲವನ್ನು ವೃತ್ತಾಕಾರವಾಗಿ ಮತ್ತು ಸರಳರೇಖೆಯ ರೂಪದಲ್ಲಿ ಕಲ್ಪಿಸಿಕೊಳ್ಳುವ ಎರಡು ಮುಖ್ಯ ಬಗೆಗಳು ನಮ್ಮಲ್ಲಿವೆ. ಮಗುವನ್ನು ಮಲಗಿಸಿದ ಕೋಣೆಯ ಮಾಡಿನ ರಚನೆಯು ಮಗುವಿನ ಲೋಕದೃಷ್ಟಿಯನ್ನು ರೂಪಿಸುವಲ್ಲಿ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಮಾಡಿನ ರಚನೆಯು ಅರ್ಧವರ್ತುಲಾಕಾರವಿರಬಹುದು, ಕೋನಾಕಾರವಿರಬಹುದು ಅಥವಾ ಸಮತಲ ರೂಪದಲ್ಲಿಯೂ ಇರಬಹುದು. ಮುಳಿಹುಲ್ಲಿನ ಮಾಡಿನ ಅಥವಾ ಹಂಚಿನ ಮಾಡಿನ ಮನೆಗಳಲ್ಲಿ ಅಟ್ಟಕ್ಕೆ ಹಲಗೆಯ ಮುಚ್ಚಿಗೆಯನ್ನು ಹಾಕದಿದ್ದರೆ ತೊಟ್ಟಿಲಲ್ಲಿ ಅಂಗಾತ ಮಲಗಿರುವ ಮಗುವಿನ ದೃಷ್ಟಿಯೂ ಕೋನಾಕಾರದ ಅಥವಾ ಕೆಲವೊಮ್ಮೆ ಅರ್ಧವರ್ತುಲಾಕಾರದ ಭೌತಿಕ ರಚನೆಯ ಕಡೆಗೆ ಕೇಂದ್ರೀಕೃತವಾಗಿರುತ್ತದೆ. ಈಗಿನ ಕಾಂಕ್ರೀಟ್ ಮನೆಗಳಲ್ಲಿ ಸರಳರೇಖೆಯ ಆಕಾರದ ಸಮತಲದ ರಚನೆಗಳ ಮೇಲೆ ಮಗುವಿನ ದೃಷ್ಟಿ ಸದಾ ನೆಟ್ಟಿರುತ್ತದೆ.

ಮಗು ಬೆಳೆಯುತ್ತಾ ಬಂದಂತೆಲ್ಲ ಸ್ಥಳ ಮತ್ತು ಕಾಲಕ್ಕೆ ಹೊಂದಿಕೊಳ್ಳುವ ಕ್ರಮವನ್ನು ಸಂಸ್ಕೃತಿಯೊಂದು ಕಲಿಸುತ್ತದೆ. ಸರಳರೇಖೆ ಮತ್ತು ವರ್ತುಲದ ರೂಪಗಳನ್ನು ಮನಸ್ಸಿನಲ್ಲಿ ನಾಟಿಸಿಕೊಂಡಿರುವ ಮಕ್ಕಳು ಅವುಗಳ ಕಲ್ಪನೆಗಳನ್ನು ತಮ್ಮ ಬದುಕಿನ ಭಿನ್ನ ಸನ್ನಿವೇಶಗಳಲ್ಲಿ ಅನ್ವಯಿಸಲು ತೊಡಗುತ್ತಾರೆ. ಮನೆ, ಮನೆಯ ಸುತ್ತಲಿನ ಆವರಣ; ಗದ್ದೆ, ಗದ್ದೆಯ ಆವರಣವಾದ ಬದು; ತೋಟ, ಅದಕ್ಕಿರುವ ಬೇಲಿ; ಊರು, ಅದಕ್ಕಿರುವ ಗಡಿ; ರಾಜ್ಯ ಮತ್ತು ದೇಶ, ಅವುಗಳಿಗಿರುವ ಮೇರೆಗಳು-ಹೀಗೆ ಸ್ಥಳ ಅಥವಾ ಪ್ರದೇಶಗಳು ನಿರ್ದಿಷ್ಟ ರೇಖೆಗಳ ಮೂಲಕ ಆವರಣಗಳ ಕಲ್ಪನೆಗಳನ್ನು ಕೊಡುತ್ತಾ ಹೋಗುತ್ತವೆ.

ಕಾಲದ ಅಳತೆಯಲ್ಲೂ ಸಂಸ್ಕೃತಿಯಿಂದ ಸಂಸ್ಕೃತಿಗೆ ಲೋಕದೃಷ್ಟಿಯ ಭಿನ್ನತೆಗಳನ್ನು ಗಮನಿಸಬಹುದು. ಪರಂಪರಾಗತ ಸಂಸ್ಕೃತಿಗಳಲ್ಲಿ ಕಾಲವನ್ನು ಒಂದು ಚಕ್ರದಂತೆ ಅಳೆಯುತ್ತಾರೆ. ಆಧುನಿಕರು ಕಾಲವನ್ನು ಒಂದು ಸರಳರೇಖೆಯಂತೆ ಅಳೆಯುತ್ತಾರೆ. ಸಮಯಕ್ಕೆ ಸರಿಯಾಗಿ ಹಾಜರಾಗುವುದು, ವೇಳಾಪಟ್ಟಿಯನ್ನು ಸಿದ್ಧಮಾಡುವುದು-ಇವು ಆಧುನಿಕರು ಕಾಲವನ್ನು ನೋಡುವ ದೃಷ್ಟಿ. ಭವಿಷ್ಯರೂಪೀ ಚಿಂತನೆ ಆಧುನಿಕರ ಮುಖ್ಯ ಲೋಕದೃಷ್ಟಿ. ಗಡಿಯಾರಗಳು, ಕ್ಯಾಲೆಂಡರ್ಗಳು ಇಂತಹ ಭವಿಷ್ಯಸಂಬಂಧಿ ಕಾಲ ನಿರ್ಣಯದ ಸಂಕೇತಗಳು. ಅರ್ಥವ್ಯವಸ್ಥೆಯಲ್ಲಿ ಹಣಹೂಡುವುದು, ಹವಾಮಾನದ ಮುನ್ಸೂಚನೆ, ವಾರ ವರ್ಷ ಭವಿಷ್ಯವನ್ನು ತಿಳಿದುಕೊಳ್ಳುವುದು-ಇವು ಆಧುನಿಕ ಬದುಕಿನ ಮುಖ್ಯ ಕಾಳಜಿಗಳು. ಉಳಿತಾಯ ಹಾಗೂ ಪಂಚವಾರ್ಷಿಕ ಯೋಜನೆಗಳು ಇಂತಹ ಭವಿಷ್ಯಸಂಬಂಧಿ ಚಿಂತನೆಯ ಫಲಗಳು. ‘ಎಲ್ಲ ಗಡಿಯಾರಗಳನ್ನು  ನಾಶಮಾಡಿದರೆ, ಗಡಿಯಾರದಂಗಡಿಗಳನ್ನೆಲ್ಲ ಮುಚ್ಚಿದರೆ ಜನ ತಲ್ಲಣಗೊಳ್ಳಬಹುದು’. ಸರಳರೇಖಾತ್ಮಕ ಕಾಲದ ಮಾಪನದ ಪೂರ್ವದಲ್ಲಿ ನಿಸರ್ಗದ ಋತುಗಳು ತಮ್ಮ ಪುನರಾವರ್ತನೆಯ ಮೂಲಕ ಕಾಲಕ್ಕೆ ಚಕ್ರದ ರೂಪವನ್ನು ತಂದುಕೊಟ್ಟಿದ್ದುವು. ಹೀಗಾಗಿ ಕಾಲ ಪುನರಾವರ್ತನೆ ಆಗುತ್ತದೆ ಎಂಬುದು ಒಂದು ಜನಪ್ರಿಯ ನಾಣ್ನುಡಿಯಾಗಿತ್ತು.

ನಿಸರ್ಗ ಅದು ಸಂಪೂರ್ಣವಾಗಿ ಕಾಲಬದ್ಧವಲ್ಲ. ಮಳೆಗಾಲ ಸಾಮಾನ್ಯವಾಗಿ ಇಂತಹ ಹೊತ್ತಿಗೆ ಬರಬಹುದು ಎಂದು ನಿರೀಕ್ಷೆ ಮಾಡಿದರೂ ಅದು ಇಂತಹ ದಿವಸ ಬರುತ್ತದೆ ಎಂಬ ನಿಯಮವೇನಿಲ್ಲ. ಬರುವುದು ಅದರ ಇಷ್ಟ, ಹೋಗುವುದು ಅದರ ಇಷ್ಟ. ಪ್ರಕೃತಿಯನ್ನು ನಿಯಮಿತಗೊಳಿಸುವ ಮತ್ತು ಅದರ ಮೇಲೆ ಯಾಜಮಾನ್ಯವನ್ನು ಸ್ಥಾಪಿಸುವ ಉದ್ದೇಶ ನಮ್ಮ ಸಾಂಸ್ಕೃತಿಕ ಸಜ್ಜುಗೊಳ್ಳುವಿಕೆಯಲ್ಲಿ ಇರುತ್ತದೆ.

ಮಹಾಯುದ್ಧದ ವೇಳೆಗೆ ಜರ್ಮನ್ ಯುದ್ಧ ವಿಮಾನಗಳ ಚಾಲಕರಿಗೆ ಕೊಟ್ಟಿದ್ದ ಆದೇಶವೆಂದರೆ, ಆಕಾಶದಲ್ಲಿ ಎತ್ತರದಿಂದ ವಿಮಾನದ ಮೂಲಕ ನೋಡಿದಾಗ ಸರಳರೇಖೆಯ ಹಾಗೆ ಎಲ್ಲಿ ಕಾಣಿಸುತ್ತದೆಯೋ ಅಲ್ಲಿಗೆ ಬಾಂಬ್ಗಳನ್ನು ಹಾಕಬೇಕು ಎಂದು. ಮನುಷ್ಯರ ವಸತಿಗಳು ಸರಳರೇಖೆಯ ರೂಪದಲ್ಲಿ ಇರುತ್ತವೆ ಎನ್ನುವ ತಿಳುವಳಿಕೆಯಿಂದಲೇ ಇಂತಹ ಆದೇಶವನ್ನು ಹೊರಡಿಸಲಾಗಿತ್ತು.

ಕಾಲ ಮತ್ತು ಸ್ಥಳದ ಸರಳರೇಖಾತ್ಮಕ ಬಳಕೆಯನ್ನು ಆಧುನಿಕ ಸಂದರ್ಭಗಳಲ್ಲಿ ಎಲ್ಲ ರಂಗಗಳಲ್ಲೂ ಕಾಣಬಹುದು. ಸಾಲಿನಲ್ಲಿ ಶಿಸ್ತುಬದ್ಧವಾಗಿ ನಡೆಯುವುದು, ಉತ್ಪಾದನೆಯ ಸರಳರೇಖಾತ್ಮಕ ಪರಿಕಲ್ಪನೆಗಳು (ಸಂಪನ್ಮೂಲ, ಉತ್ಪಾದನೆ, ಉತ್ಪಾದನೆಗೊಂಡ ವಸ್ತು ಅಥವಾ ನಷ್ಟ). ಒಬ್ಬ ವ್ಯಕ್ತಿ ಮಾನಸಿಕವಾಗಿ ಸರಿಯಿಲ್ಲ ಎನ್ನುವುದನ್ನು ಹೇಳಲು ಕಿವಿಯ ಸುತ್ತ ತೋರುಬೆರಳಿನಿಂದ ವೃತ್ತವೊಂದನ್ನು ಮಾಡುವ ಸಂಜ್ಞೆಯೊಂದನ್ನು ಸಾಮಾನ್ಯವಾಗಿ ಬಳಸುತ್ತಾರೆ. ವೃತ್ತ, ವಕ್ರತೆ ಇವು ಋಣಾತ್ಮಕ ಗುಣವನ್ನು ಸಮಾಜದಲ್ಲಿ ಪಡೆದಿವೆ. ‘ಅವನು  ಬಳಸುಮಾತಿನಲ್ಲಿ ಮಾತಾಡುತ್ತಾನೆ. ನಿನ್ನ ತರ್ಕ ವಕ್ರವಾದುದು. ಅವರ ಮಾತು ಕೇಳಿ ನನ್ನ ತಲೆ ತಿರುಗಿತು. ಅವರ ಭಾಷಣ ಕೇಳಿ ತಲೆ ಸುತ್ತು ಬರುತ್ತಿದೆ.’ ಹೀಗೆ ವರ್ತುಲ, ಸುತ್ತು, ವಕ್ರರೇಖೆಗಳು ದೋಷದ ರೂಪದಲ್ಲಿ ಪ್ರಯೋಗವಾಗುತ್ತವೆ. ವ್ಯಂಗ್ಯಚಿತ್ರಗಳಲ್ಲಿ ತಲೆ ಸುತ್ತುಬರುವುದನ್ನು ತೋರಿಸಲು ತಲೆಯ ಮೇಲ್ಭಾಗದಲ್ಲಿ ವರ್ತುಲ ಆಕಾರದ ಚಿತ್ರವನ್ನು ಬರೆಯುತ್ತಾರೆ.

ಭಿನ್ನ ಸಂಸ್ಕೃತಿಗಳ ಲೋಕದೃಷ್ಟಿಯ ಭಿನ್ನತೆಗಳು ಅನೇಕ ಬಾರಿ ಒಂದೇ ಗುರಿಯನ್ನು ಪರಸ್ಪರ ವಿರುದ್ಧವಾಗಿ ನೋಡುವ ಸಾಧ್ಯತೆಗಳಿರುತ್ತವೆ. ವಿಯೆಟ್ನಾಂ ಯುದ್ಧಕ್ಕೆ ಪರಿಹಾರ ಕಂಡುಕೊಳ್ಳುವ ಪ್ಯಾರಿಸ್ಸಿನ ಶಾಂತಿ ಮಾತುಕತೆಯಲ್ಲಿ ಉತ್ತರ ವಿಯೆಟ್ನಾಮಿಗಳು ಮಾತುಕತೆಗೆ ದುಂಡಗಿನ ಮೇಜನ್ನು ಇಡಲು ಬಯಸಿದರು. ಆದರೆ ಅಮೇರಿಕನ್ನರು ಇದಕ್ಕೆ ಒಪ್ಪದೆ ಚೌಕಾಕಾರದ ಮೇಜನ್ನೇ ಇಡಬೇಕು ಎಂದು ಒತ್ತಾಯಿಸಿದರು. ಅಮೇರಿಕನ್ನರು ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಸಕ್ತರಾಗಿಲ್ಲ ಎನ್ನುವ ಗ್ರಹಿಕೆಯನ್ನು ವಿಯೆಟ್ನಾಮಿಯರೂ, ವಿಯೆಟ್ನಾಮಿಯರು ಪರಿಹಾರದ ಗಂಭೀರವಾದ ಉದ್ದೇಶವನ್ನು ಇಟ್ಟುಕೊಂಡಿಲ್ಲ ಎಂಬ ಪೂರ್ವಗ್ರಹವನ್ನು ಅಮೇರಿಕನ್ನರೂ ಈ ಮೇಜುಗಳ ಆಕಾರದ ಆಧಾರದ ಮೇಲೆ ಇಟ್ಟುಕೊಂಡಿದ್ದರು.

ಕವಿ ಕೆ. ಎಸ್. ನರಸಿಂಹಸ್ವಾಮಿ ಅವರ ‘ಮನೆಯಿಂದ ಮನೆಗೆ’ ಕವನ, ಲೌಕಿಕವನ್ನು ದಾರ್ಶನಿಕವಾಗಿಸಿದ ರೂಪಕ :

ಹೊಕ್ಕಮನೆಯೆಲ್ಲ ಹೊಸಮನೆಯೆಂದೆ ಕರೆಯೋಣ

ಹಳೆಯ ಬಾಗಿಲಿಗೆ ಹೊಸ ತೋರಣವ ಕಟ್ಟೋಣ

ಶಾಲೆಮಕ್ಕಳ ಹಾಗೆ ಹೊಸತನವ ಕಲಿಯುತ್ತ

ಇನ್ನೊಂದು ವರುಷ ಕಳೆಯೋಣ

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: