ಬೆಳ್ಳಿಯ ಗುಲಾಬಿ ತರುವ ಜೋಕುಮಾರ-ನಾನು ನೋಡಿದ ಜರ್ಮನ್ ಒಪೆರಾ

Posted on ಮೇ 18, 2010. Filed under: Uncategorized |


ಕಳೆದ ಶನಿವಾರ ಸಂಜೆ ವ್ಯೂರ್ಜಬರ್ಗಿನ ‘  ಮಾಯಿನ್ ಫ್ರಾಂಕೆನ್ ಥಿಯೇಟರ್’ ನಲ್ಲಿ ನಾನು ನೋಡಿದ ಜರ್ಮನ್ ಒಪೆರ   Der Rosenkavalier.  ಪ್ರಸಿದ್ಧ ಜರ್ಮನ್ ಒಪೆರ ಲೇಖಕ ,ಸಂಗೀತ ಸಂಯೋಜಕ Richard Strauss (1864-1949) ೧೯೧೦ರಲ್ಲಿ ರಚಿಸಿದ ಈ ಕಾಮಿಕ್ ಒಪೆರ ಮೊತ್ತಮೊದಲ ಬಾರಿ ಪ್ರಯೋಗ ಕಂಡದ್ದು ದ್ರೆಸ್ದನ್ ನಲ್ಲಿ ೨೬ ಜನವರಿ ೧೯೧೧ರಲ್ಲಿ. ಸ್ಟ್ರೌಸ್  ಸಾಕಷ್ಟು ಸಂಖ್ಯೆಯಲ್ಲಿ ಒಪೆರ, ಬ್ಯಾಲೆ ಸಂಗೀತ, ಟೋನ್ ಪದ್ಯಗಳು, ಆರ್ಕೆಸ್ತ್ರ ರಚನೆಗಳನ್ನು ರಚಿಸಿದ್ದಾನೆ. ಆತನ ಸಂಗೀತವು ಇಪ್ಪತ್ತನೆಯ ಶತಮಾನದ ಬೆಳವಣಿಗೆಯಲ್ಲಿ ವಿಶೇಷ ಪ್ರಭಾವವನ್ನು ಬೀರಿದೆ. ‘ರೊಸೆನ್ ಕವಲಿಯರ್ ‘ ಒಪೆರದ ವಸ್ತು  ೧೭೪೦ರ ವಿಯೆನ್ನಾದ ರಾಣಿ ಮರಿಯಾ ಥೆರೆಸಳ ಕಾಲದ ಸನ್ನಿವೇಶದ ಹಾಗೆ ಸ್ಟ್ರೌಸ್ ಚಿತ್ರಿಸಿದ್ದಾನೆ. ಆದರೆ ಒಂದನೇ ಮಹಾಯುದ್ಧದ ಕಾಲದ ಯುರೋಪ್ -ಆಸ್ಟ್ರಿಯ,ಜರ್ಮನಿ-ನ್ನು ಪರೋಕ್ಷವಾಗಿ ಇಲ್ಲಿ ಗೇಲಿಮಾಡಲಾಗಿದೆ ಎನ್ನುವ ಅಭಿಪ್ರಾಯವೂ ಇದೆ.

‘ರೊಸೆನ್ ಕವಲಿಯರ್’ ಒಂದು ಪ್ರೇಮಕತೆಯ ವಸ್ತು. ಕತೆಯ ಸುತ್ತ ಮತ್ತು ಒಳಗೆ ಕಾಮಿ ಗಂಡುಸು, ತಲೆಹಿಡುಕರು, ಸೂಳೆಯರು, ಹೊಗಳುಭಟರು, ವಂಚಕರು, ಪೊಳ್ಳು ಪ್ರತಿಷ್ಟೆಯವರು, ಕ್ರಿಮಿನಲ್ ಗಳು -ಹೀಗೆ ಒಂದು ಅಸ್ವಸ್ಥ ಸಮಾಜದ ಅನಾವರಣವಿದೆ. ಹೀಗಾಗಿ ಇದು ಒಂದು ಗಂಡು ಒಂದು ಹೆಣ್ಣಿನ ಪ್ರೇಮದ ಸಿನೆಮ ಕತೆಯಾಗಿರದೆ, ಸಮಕಾಲೀನ ಸಮಾಜದ ವಿಡಂಬನೆಯಾಗಿ ಕಾಣಿಸಿಕೊಳ್ಳುತ್ತದೆ..ಮೂರು ಅಂಕಗಳು ಉಳ್ಳ ಈ ಒಪೆರದಲ್ಲಿ ಮುಖ್ಯ ಪಾತ್ರಗಳು ಐದು. ಶ್ರೀಮಂತ ಫೀಲ್ಡ್ ಮಾರ್ಷಲಿನ ಹೆಂಡತಿ ಮಾರ್ಷಲ್ಲಿನ್. ಅವಳ ತರುಣ ಪ್ರಿಯಕರ – ಒಕ್ತವಿಯನ್ . ಮಾರ್ಷಲಿನ್ನಳ ಸೋದರ ಸಂಬಂಧಿ-ಬರೊನ್ ಓಕ್ಸ್. ಆತನು ಮದುವೆ ಆಗಲು ಬಯಸುವ ತರುಣಿ, ವಿಯೆನ್ನದ ಶ್ರೀಮಂತ ಫಾನಿನಲ್ ನ ಮಗಳು-ಸೋಫಿಯ. ಅವಳ ಶ್ರೀಮಂತ ತಂದೆ- ಫಾನಿನಲ್ .

ಸದಾ ಮನೆಯಿಂದ ದೂರ ಇರುವ ಫೀಲ್ಡ್ ಮಾರ್ಶೆಲ್ ನ ಶ್ರೀಮಂತ ಹೆಂಡತಿ ಮಾರ್ಶೆಲಿನ್ ತರುಣ ಒಕ್ತವಿಯನ್ ನೊಂದಿಗೆ ಪ್ರೇಮಸಲ್ಲಾಪ ಆಡುತ್ತಿರುತ್ತಾಳೆ. ಅವಳ ಸೋದರ ಸಂಬಂಧಿ ಬರೊನ್ ಓಕ್ಸ್ ಉನ್ನತ ಮನೆತನದ ಹೆಸರು ಮಾತ್ರ ಉಳ್ಳ, ಆದರೆ ಶ್ರೀಮಂತಿಕೆ ಕಳೆದುಕೊಂಡ ಲಂಪಟ. ವರದಕ್ಷಿಣೆ ಪಡೆದು ಒಳ್ಳೆಯ ಹೆಣ್ಣು ಮತ್ತು ಹಣ -ಎರಡೂ ಪಡೆಯ ಬಯಸುವ ರಸಿಕ ಶಿಖಾಮಣಿ. ಅವನ ಸಂಗಡಿಗರು ಎಂದರೆ ತಲೆಹಿಡುಕರು ಮತ್ತು ಕ್ರಿಮಿನಲ್ ಗಳು. ಅವನ ಹೆಸರು ‘ಓಕ್ಸ್’ ಅಂದರೆ ‘ಹೋರಿ’ ಎನ್ನುವ ವ್ಯಂಗ್ಯ ಅರ್ಥ ಇಲ್ಲಿ ಅಡಕವಾಗಿದೆ. ಆತನೊಬ್ಬ ಕಾಮುಕ ಹೋರಿ. ಅವನು ಮದುವೆ ಆಗಲು ಬಯಸುವುದು ಶ್ರೀಮಂತ ಫಾನಿನಲ್ ನ ಮಗಳು ಸೋಫಿಯಳನ್ನು. ತನ್ನ ಮನೆತನದ ಹೆಸರನ್ನು ಪ್ರತಿಷ್ಠೆಗಾಗಿ  ಬಳಸಿಕೊಂಡು, ಅವಳ ತಂದೆಯ ಹಣದ ವರದಕ್ಷಿಣೆ ಪಡೆದು, ಲೋಲುಪ ಬದುಕು ಸಾಗಿಸುವುದು ಅವನ ಯೋಜನೆ. ಸೋಫಿಯಾಳ ಬಳಿಗೆ ತನ್ನ ಪರವಾಗಿ ವಿವಾಹದ ಪ್ರಸ್ತಾವವನ್ನು ‘ಬೆಳ್ಳಿಯ ಗುಲಾಬಿ’ ಕೊಟ್ಟು ಸೂಚಿಸಲು ಯಾರನ್ನು ಕಳುಹಿಸುವುದು ಎಂದು ಯೋಚಿಸುವಾಗ, ಮಾರ್ಶಿಲ್ಲಿಯನ್  ತನ್ನ ಪ್ರಿಯಕರ ಒಕ್ತೆವಿಯನ್ ನನ್ನು ಕಳುಹಿಸುತ್ತಾಳೆ. ಬೆಳ್ಳಿಯ ಗುಲಾಬಿ ತಂದುಕೊಟ್ಟ ಜೋಕುಮಾರ ಒಕ್ತವಿಯನ್  ನ್ನು ಸೋಫಿಯ ಪ್ರೇಮಿಸುತ್ತಾಳೆ. ಓಕ್ಸ್ ನ ಹೆಂಡತಿ ಆಗಬೇಕಾಗಿದ್ದ ಸೋಫಿಯ ಒಕ್ತವಿಯನ್  ನ ಪ್ರೇಯಸಿಯಾಗುತ್ತಾಳೆ. ಮಾರ್ಶಿಲ್ಲಿಯನ್ ನ ಪ್ರಿಯಕರ ಒಕ್ತವಿಯನ್  ಸೋಫಿಯಳಲ್ಲಿ ಅನುರಕ್ತ ಆಗುತ್ತಾನೆ. ಮುಂದೆ ಇನ್ನಷ್ಟು ನಾಟಕೀಯ ಘಟನೆಗಳು ನಡೆಯುತ್ತವೆ. ಒಕ್ತವಿಯನ್ ನನ್ನು ಹೆಣ್ಣು ವೇಷ ಹಾಕಿಸಿ,ಸೋಫಿಯಾ ಎಂದು ಓಕ್ಸ್ ನಿಗೆ ತೋರಿಸಿ, ಅವನು ಕಾಮುಕನಾಗಿ ವರ್ತಿಸುವಾಗ, ಅವನ ಸಂಗಡಿಗರು ಹೊಗಳುಭಟರು ಎಲ್ಲರೂ ಮುತ್ತಿಗೆ ಹಾಕಿ ಅವನ ರಹಸ್ಯವನ್ನು ಬಯಲುಮಾಡುತ್ತಾರೆ. ಓಕ್ಸ್ ನ ಟ್ರೇಜಡಿ  ಉಳಿದವರ ಪಾಲಿಗೆ ಕಾಮೆಡಿ ಆಗುತ್ತದೆ. ಮತ್ತೆ ಕಾಮೆಡಿ -ಟ್ರಾಜೆಡಿಗಳು ಮುಖಾಮುಖಿ ಆಗುತ್ತವೆ. ಸೋಫಿಯ ಮತ್ತು ಒಕ್ತವಿಯನ್ ಒಂದಾಗಲು ಅವಕಾಶ ಕಲ್ಪಿಸಿ, ಭಾರವಾದ ಮನಸ್ಸಿನಿಂದ ಮಾರ್ಶೆಲ್ಲಿನ್ ತನ್ನ ಪ್ರಿಯಕರನನ್ನು ಅಗಲುತ್ತಾಳೆ.

ಪ್ರೇಮ, ಕಾಮ, ಲಂಪಟತನ, ಹಣದ ಆಸೆ, ಶ್ರೀಮಂತರ ಮತ್ತು ಅಧಿಕಾರಸ್ಥರ ಸುತ್ತ ಇರುವ ಕ್ರಿಮಿನಲ್ ಗಳು ಮತ್ತು ತಲೆಹಿಡುಕರು,ಇದನ್ನು ಬಯಲು ಮಾಡುವ ತಂತ್ರಗಾರಿಕೆ-ಹೀಗೆ ಈ ಒಪೆರದ ವಸ್ತು ಎಲ್ಲ ಕಾಲಕ್ಕೂ ಸಲ್ಲುವಂತದ್ದು. ಅದಕ್ಕೆ ದೇಶಕಾಲಗಳ ಎಲ್ಲೆಯಿಲ್ಲ. ಹಾಗಾಗಿ ಯಾವುದು ಕಾಮೆಡಿ, ಯಾವುದು ಟ್ರಾಜೆಡಿ ಎಂದು ಬೇರೆ ಮಾಡಲು ಸಾಧ್ಯವಾಗದಂತೆ ಅವು ಒಟ್ಟುಸೇರಿರುತ್ತವೆ.

ಮೊನ್ನೆ ನಾನು ನೋಡಿದ ಒಪೆರ ಪ್ರದರ್ಶನದ ನಿರ್ದೇಶಕ -ಬೆರ್ನ್ಹರ್ದ್ ಸ್ತೆನ್ಗೆಲೆ; ಸಂಗೀತ ನಿರ್ದೇಶಕ -ಜೊ( ಯೊ) ನತಾನ್ ಸೇರ್ಸ್; ರಂಗ ನಿರ್ದೇಶನ -ಬೆರ್ನ್ದ್ ಫ್ರಂಕೆ; ಅಭಿನಯಿಸಿದವರು : ಮಾರ್ಶೆಲ್ಲಿನ್-ಅಂಜ ಐಶ್ ಹೊರ್ನ್; ಬರೊನ್ ಓಕ್ಸ್-ಕ್ಲಾಡಿಯಸ್ ಮುತ್; ಒಕ್ತವಿಯನ್-ಸೊನ್ಯ ಕೊಪ್ಪೆಲ್ ಹುಬೆರ್; ಸೋಫಿಯ-ಸಿಲ್ಕೆ ಎವರ್ಸ್ ;ಫಾನಿನಲ್-ಯೋಕಿಂ ಗೋಲ್ಜ್ .

ಒರ್ಕೆಸ್ತ್ರದಲ್ಲಿ ಒಟ್ಟು ಅರುವತ್ತು ಮಂದಿ ವಾದ್ಯಗಾರರು ಇದ್ದರು. ನಟ ನಟಿಯರು ಸಂಗೀತದ ಧಾಟಿಯಲ್ಲಿ ಹಾಡಿ ಅಭಿನಯಿಸುವ ಒಪೆರದಲ್ಲಿ ಸವಾಲು ಇರುವುದು ಹಾಡುವಿಕೆ ಮತ್ತು ಅಭಿನಯ -ಎರಡರಲ್ಲೂ ಸಮಾನ ಪ್ರತಿಭೆಯನ್ನು ಏಕಕಾಲಕ್ಕೆ ಪ್ರಕಟಿಸುವುದು. ಈ ಒಪೆರದಲ್ಲಿ ಆಸ್ಟ್ರಿಯ-ಬವೇರಿಯಾದ ಜರ್ಮನ್ ಉಪಭಾಷೆಯನ್ನು ಹಾಡುಗಳ ಸಂಗೀತಕ್ಕೆ ಬಳಸಿಕೊಂಡದ್ದು ವಿಶಿಷ್ಥತೆ. ಜನರ ಒರಟುತನಕ್ಕೆ ಹೊಂದುವಂತೆ ಸಂಗೀತದಲ್ಲೂ ರಸ್ಟಿಕ್ ಗುಣವನ್ನು ವಿಶೇಷವಾಗಿ ಬಳಸಲಾಗಿತ್ತು. ಸಂಜೆ ಆರೂವರೆ ಗಂಟೆಗೆ ಆರಂಭವಾದ ಪ್ರದರ್ಶನ, ಎರಡು ವಿರಾಮಗಳನ್ನು ಸೇರಿಸಿಕೊಂಡು, ರಾತ್ರಿ ಹತ್ತೂವರೆಗೆ ಮುಗಿಯಿತು. ಉತ್ಸಾಹಿ ಪ್ರೇಕ್ಷಕ ಮಹಿಳೆ ಒಬ್ಬರು ಮುಖ್ಯ ನಟ ನಟಿಯರಿಗೆ ಹೂವಿನ ಬುಕೆಗಳನ್ನು ಕೊಟ್ಟರು.ಅವು ‘ಬೆಳ್ಳಿಯ ಗುಲಾಬಿ’ಗಳಲ್ಲ. ನಿಜವಾದ ಪ್ರೀತಿಯ ಸಹಜ ಗುಲಾಬಿಗಳು.

ಪ್ರದರ್ಶನ ಮುಗಿಸಿ, ಗೆಸ್ಟ್ ಹೌಸಿಗೆ ಬಂದು, ಇಂಟರ್ನೆಟ್ ನಲ್ಲಿ ಕೆಲವು ಗಂಟೆ ಮುಂಚಿತವಾಗಿಯೇ ಮರುದಿನ ಭಾನುವಾರದ ನಮ್ಮ ಕನ್ನಡ ಪತ್ರಿಕೆಗಳನ್ನು ತೆರೆದುನೋಡಿದರೆ, ‘ಅಕ್ಷಯ ಚಿನ್ನ’ದ್ದೇ ಸುದ್ದಿ. ಬೆಳ್ಳಿಯ ಗುಲಾಬಿಯ ಬದಲು ‘ಚಿನ್ನದ ಗುಲಾಬಿ’ಯನ್ನೇ ಕೊಡುವ ಕಾಲ ಬಂತಲ್ಲಾ ಎಂದು ಯೋಚಿಸುತ್ತಿರುವಾಗಲೇ ‘ರೊಸೆನ್ ಕವಲಿಯರ್’ಒಪೆರದ ‘ಓಕ್ಸ್'(ಹೋರಿ) ಯಂತೆ ‘ ಗೂಳಿ’ ಯೊಂದು ನುಗ್ಗಿದ ದೃಶ್ಯ ಕಂಡೆ; ಆ ಗೂಳಿ, ಚಿನ್ನದ ಗುಲಾಬಿಗಳನ್ನು ಪುಡಿಪುಡಿ ಮಾಡಿದುದನ್ನು ಕಂಡೆ. ಪಕ್ಕದ ಅರ್ಥಶಾಸ್ತ್ರದ ಪುಟದಲ್ಲಿ ಬರೆದಿತ್ತು :’ ಗೂಳಿಯ ಜಿಗಿತ ! ‘

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಬೆಳ್ಳಿಯ ಗುಲಾಬಿ ತರುವ ಜೋಕುಮಾರ-ನಾನು ನೋಡಿದ ಜರ್ಮನ್ ಒಪೆರಾ”

RSS Feed for ಬಿ ಎ ವಿವೇಕ ರೈ Comments RSS Feed

ಖುದ್ದು ಒಪೆರಾಗೆ ಹೋಗಿ ಬಂದ ಅನುಭವ ನೀಡಿತು ಸರ್ 🙂 ಲೇಖನ ಖುಷಿ ಕೊಡ್ತು.

ನಿಮ್ಮ ಆಸಕ್ತಿ ಮತ್ತು ಪ್ರತಿಕ್ರಿಯೆಗಾಗಿ ಥ್ಯಾಂಕ್ಸ್

allina saahitya mattu ranga kaleya ondu anubhava needie.

aa nelada ranga kaleya ondu jhalak torisiddeeri.


Where's The Comment Form?

Liked it here?
Why not try sites on the blogroll...

%d bloggers like this: