ಜರ್ಮನಿಯಲ್ಲಿ ಮಂಗಳೂರು ಕೇಸರಿಬಾತ್

Posted on ಮೇ 12, 2010. Filed under: Uncategorized |


ವ್ಯೂರ್ಜ್ ಬರ್ಗ್ ನಗರದಲ್ಲಿ ಅಂತಾರಾಷ್ಟ್ರೀಯ ವಸಂತೋತ್ಸವ :

ಮಂಗಳೂರು ಕೇಸರಿಭಾತ್ ಸಹಿತ ಭಾರತೀಯ ಊಟ ತಿಂಡಿ

ಮೊನ್ನೆ ಭಾನುವಾರ ನಮ್ಮ ವ್ಯೂರ್ಜ್ಬರ್ಗ್ ನಗರದಲ್ಲಿ ಹಬ್ಬದ ಸಂಭ್ರಮ.ಹಬ್ಬದ ಹೆಸರು : ‘ಸ್ಪ್ರಿಂಗ್ ಇಂಟರ್ ನೇಶನಲ್ ಫೆಸ್ಟಿವಲ್ -ವ್ಯೂರ್ಜ್ ಬರ್ಗ್. ನಗರದ ಮಾಯಿನ್ ನದಿಯ ಪಕ್ಕದ ವಿಶಾಲ ಪಾರ್ಕಿನಲ್ಲಿ ಬಹುದೇಶಗಳ ಬಹುಭಾಷೆಗಳ ಬಹುತಿಂಡಿ ತಿನಿಸುಗಳ ಹಾಡು ಕುಣಿತಗಳ ಉಲ್ಲಾಸದ ಉತ್ಸವ. ನಗರಪಾಲಿಕೆ ಇಂತಹ ಬಹುಸಂಸ್ಕೃತಿ ಸಮಾವೇಶಕ್ಕೆ ಉತ್ತೇಜನ ಕೊಟ್ಟಿತ್ತು. ಅದರೊಂದಿಗೆ ವ್ಯೂರ್ಜ್ ಬರ್ಗಿನ ಅಂತಾರಾಷ್ಟೀಯ ಕಚೇರಿ ಮತ್ತು ಅಂತಾರಾಷ್ಟ್ರೀಯ ಸಂಘ ಕೈ ಜೋಡಿಸಿದ್ದವು.

ವ್ಯೂರ್ಜಬರ್ಗಿನಲ್ಲಿರುವ ಜರ್ಮನರು ತಾವು ಸಂಪರ್ಕ ಇಟ್ಟುಕೊಂಡಿರುವ ,ಪ್ರೀತಿಸುವ ದೇಶಗಳ ಹೆಸರಿನಲ್ಲಿ ಸೌಹಾರ್ದ ಸಂಘಗಳನ್ನು ಕಟ್ಟಿಕೊಂಡಿದ್ದಾರೆ..ಭಾರತ, ಚೀನ, ಆಫ್ರಿಕ, ಘಾನ, ಫಿನ್ ಲೆಂಡ್, ಟರ್ಕಿ, ಟಿಬೆಟ್, ಇಟಲಿ, ಸ್ಪೇನ್-ಪೋರ್ತುಗಲ್, ಸ್ವೀಡನ್, ಫ್ರಾನ್ಸ್, ಅಯರ್ಲೆಂಡ್ , ಅಮೇರಿಕ -ಹೀಗೆ ಸುಮಾರು ಹದಿನೆಂಟು ದೇಶಗಳ ಸೌಹಾರ್ದ ಸಂಘಗಳು ಈ ವಸಂತೋತ್ಸವದಲ್ಲಿ ಪಾಲುಗೊಂಡಿದ್ದವು. ಪಾರ್ಕಿನಲ್ಲಿ ಎಲ್ಲಿ ನೋಡಿದರೂ ಒಂದೊಂದು  ದೇಶದ ಬಾವುಟ. ಆ ದೇಶದ ತಿಂಡಿ ತಿನಿಸು. ಕೆಲವು ಕಡೆ ಆ ದೇಶದ ಸಂಸ್ಕೃತಿಯ ಹಾಡು ಕುಣಿತ. ಪಾರ್ಕಿನ ತಗ್ಗು ದಿನ್ನೆಗಳಲ್ಲಿ ಜಾತ್ರೆಯ ಸಂಭ್ರಮ ಇತ್ತು.

ವ್ಯೂರ್ಜಬರ್ಗಿನ ಇಂಡೋ ಜರ್ಮನ್ ಸಂಘದ ಅಧ್ಯಕ್ಷೆ -ವ್ಯೂರ್ಜಬರ್ಗ್ ವಿವಿಯ ಇಂಡಾಲಜಿ ವಿಭಾಗದ ಪ್ರೊ. ಡಾ. ಹೈದ್ರುನ್ ಬ್ರೂಕ್ನರ್. ಅವರದ್ದೇ ವಿಭಾಗದಲ್ಲಿ ಕಚೇರಿ ಸಹಾಯಕರಾಗಿರುವ ಶ್ರೀಮತಿ ಉಲ್ರೀಕಾ ಎಂಗೆಲ್ಸ್ ತುಂಬಾ ಉತ್ಸಾಹದಿಂದ ಭಾರತೀಯ ತಿಂಡಿ ತಿನಿಸುಗಳ ವಿಶೇಷ ಮಳಿಗೆ ತೆರೆದಿದ್ದರು. ಇಡೀ ಉತ್ಸವದಲ್ಲಿ ಊಟ ತಿಂಡಿಗೆ  ಹೆಚ್ಚಿನ ಜನಸಂದಣಿ ಇದ್ದದ್ದು ಭಾರತೀಯ ಪೆವಿಲಿಯನ್ ನಲ್ಲಿ. ಬಂದವರು ಬಹುಪಾಲು ಜರ್ಮನರೆ. ಭಾರತೀಯ ಸಂಘದ ಸದಸ್ಯರಾದ  ಸ್ಥಳೀಯ ಜರ್ಮನ್ ಸ್ನೇಹಿತರು ಹೆಚ್ಚಿನವರು ತಮ್ಮ ಮನೆಗಳಲ್ಲಿ ಭಾರತೀಯ ಅಡುಗೆಗಳನ್ನು ಮಾಡಿ ತಂದಿದ್ದರು. ಇದರೊಂದಿಗೆ ಇಲ್ಲಿನ ವಿವಿಯಲ್ಲಿ ಸಂಶೋಧನೆ ಮಾಡುತ್ತಿರುವ ಅನೇಕ ಭಾರತೀಯ ವಿದ್ಯಾರ್ಥಿಗಳು  ಕೆಲವು ತಿಂಡಿತಿನಿಸು ತಂದದ್ದಲ್ಲದೆ ಸ್ವಯಂಸೇವಕರಾಗಿ  ಬಡಿಸುವ ಕೆಲಸ ಮಾಡುತ್ತಿದ್ದರು. ಇಂಡಾಲಜಿ ವಿಭಾಗದ ಹಿರಿಯ ವಿದ್ಯಾರ್ಥಿನಿಯರಾದ  ಸಾರಾ ಮೆರ್ಕ್ಲೆ ಮತ್ತು ಕ್ರಿಸ್ತೀನಾ ಅವರು ಹುಮ್ಮಸ್ಸಿನಿಂದ ಆಹಾರ ವಿಲೇವಾರಿ ಮಾಡುತ್ತಿದ್ದರು. ಅನ್ನ, ಸಾರು, ಬಗೆಬಗೆಯ ತರಕಾರಿ ಪಲ್ಯಗಳು, ಹಪ್ಪಳ, ಉಪ್ಪಿನಕಾಯಿ, ಮೊಸರು ಪಾಯಸ -ಹೀಗೆ ಸುಮಾರು ಇಪ್ಪತ್ತು ಬಗೆ ತಿಂಡಿ ತಿನಿಸುಗಳು ಇದ್ದರೂ ಸಂಜೆ ವೇಳೆಗೆ ಒಂದೂ ಉಳಿದಿರಲಿಲ್ಲ. ಶ್ರೀಮತಿ ಎಂಗೆಲ್ಸ್ ಮತ್ತೆ ಮತ್ತೆ ಅಕ್ಕಿ ಬೇಯಿಸುವ ಸಾರು ಮಾಡುವ ಕಾಯಕದಲ್ಲಿ ನಮ್ಮ ಹೆಂಗುಸರನ್ನು ಸರಿಗಟ್ಟುತ್ತಿದ್ದರು.

ಈ ವಸಂತ ಉತ್ಸವದ ಬಗ್ಗೆ ಪ್ರೊ.ಬ್ರೂಕ್ನರ್ ಕೆಲವು ದಿನಗಳ ಹಿಂದೆ ಪ್ರಸ್ತಾವಿಸಿದಾಗ, ನಾನು ನನ್ನ ಹೆಂಡತಿ ಕೋಕಿಲಳನ್ನು ಕೇಳಿದೆ : ‘ನೀನು ಏನು ಮಾಡುತ್ತಿ ?’ ಇಲ್ಲಿ ಅವಳಿಗೆ ಊರಿನ ತಿಂಡಿಯನ್ನು ಸಾರ್ವಜನಿಕಗೊಳಿಸುವ ಮೊದಲ ಅವಕಾಶ. ‘ಕೇಸರಿಭಾತ್ ‘ (ಮಂಗಳೂರಿನವರು ಕರೆಯುವ ‘ಕ್ಷೀರ’). ಅವಳು ಮಾಡಿದ್ದು ; ನಾನು ಟಿವಿ ಕಾರ್ಯಕ್ರಮಗಳಲ್ಲಿ ನೋಡಿದಂತೆ ರುಚಿ ನೋಡಿ ಶಿಫಾರಸು ಮಾಡಿದ್ದು. ಹೀಗೆ ಈ ಬಾರಿ ಇಲ್ಲಿನ ಅಂತಾರಾಷ್ಟ್ರೀಯ ವಸಂತ ಉತ್ಸವದಲ್ಲಿ ಮಂಗಳೂರು  ಕೇಸರಿಭಾತ್ ಕೂಡಾ ಸೇರಿಕೊಂಡಿತು. ಅದು ಪೂರ್ತಿ ಖರ್ಚಾಗಿ ಜರ್ಮನರ ನಾಲಗೆಗೆ ರುಚಿಕಟ್ಟಾಯಿತು ಎನ್ನುವ ಸುದ್ದಿಯೂ ನಮಗೆ ರುಚಿಕರವಾದದ್ದೇ.

ವ್ಯೂರ್ಜಬರ್ಗ್ ವಿವಿಯಲ್ಲಿ ಸಂಶೋಧನೆ ಮಾಡಲು ಭಾರತದಿಂದ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು  ಬರುತ್ತಾರೆ. ಜೀವವಿಜ್ಞಾನ ವಿಭಾಗ ಜಗತ್ತಿನಲ್ಲೇ ತುಂಬಾ ಹೆಸರುವಾಸಿ. ಭಾರತೀಯ ವಿದ್ಯಾರ್ಥಿಗಳ  ದೊಡ್ಡ ಸಂಖ್ಯೆ  ಈ ವಿಭಾಗದಲ್ಲಿದೆ. ಆಮೇಲೆ ಭೌತವಿಜ್ಞಾನ, ರಸಾಯನ ವಿಜ್ಞಾನ, ಕಂಪ್ಯೂಟರ್ , ವೈದ್ಯಕೀಯ, ಮನೋವಿಜ್ಞಾನ, ಗಣಿತ -ಹೀಗೆ ಸಂಶೋಧನಾ ವಿದ್ಯಾರ್ಥಿಗಳು , ಸಂಶೋಧಕ ಅಧ್ಯಾಪಕರು ಭಾರತದಿಂದ ಬರುತ್ತಾರೆ. ಮೊನ್ನೆ ನಾವು ಭೇಟಿ ಆದ ಅನೇಕ ವಿದ್ಯಾರ್ಥಿಗಳು ತಮಿಳುನಾಡು ,ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ಗುಜರಾತ್ ಮತ್ತು ಅನೇಕ ಉತ್ತರಭಾರತದ ರಾಜ್ಯಗಳಿಂದ ಬಂದದವರು. ಒಬ್ಬಳು ಹುಡುಗಿ ಬೆಂಗಳೂರಿನಲ್ಲಿ ಓದಿದವಳು, ಕನ್ನಡ ಮಾತಾಡುವವಳು ಸಿಕ್ಕಿದಳು..ತುಂಬಾ ಪ್ರೀತಿಯಿಂದ ಮಾತಾಡಿದರು, ನಮ್ಮೊಡನೆ ಫೋಟೋ ತೆಗೆಸಿಕೊಂಡರು. ಅಷ್ಟೇ ಉತ್ಸಾಹದಿಂದ ಇಂಡಾಲಜಿ ವಿಭಾಗದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು  -ಜರ್ಮನರು -ತಮ್ಮ ಕುಟುಂಬ ಸಮೇತ ಮನೆಯ ಹಬ್ಬದಂತೆ ಪಾಲುಗೊಂಡರು, ಭಾರತೀಯ ಅಡಿಗೆಯ  ಸವಿಯನ್ನು ಚಪ್ಪರಿಸಿದರು. ಅದೊಂದು ನಿಜವಾದ ಭಾರತ-ಜರ್ಮನಿಯ ಸವಿರುಚಿಯ ಪಾಕದ ಸಂಬಂಧ ಆಗಿತ್ತು’. Wuerzburg and Indian Interactions ‘, a group in Facebook -ಇವರು ತುಂಬಾ ಆಸಕ್ತಿಯಿಂದ ಈ ಕಾರ್ಯಕ್ರಮದ ಬಗ್ಗೆ ವ್ಯೂರ್ಜಬರ್ಗಿನಲ್ಲಿ ಇರುವ ಭಾರತೀಯರಿಗೆ ಮತ್ತು ಭಾರತದ ಬಗ್ಗೆ ಸ್ನೇಹ ವಿಶ್ವಾಸ ಉಳ್ಳ ಎಲ್ಲರಿಗೆ ಸರಿಯಾದ ಮಾಹಿತಿ ಮತ್ತು ಪ್ರಚಾರ ಕೊಟ್ಟಿದ್ದರು.

ಈ ಅಂತಾರಾಷ್ಟ್ರೀಯ ವಸಂತೋತ್ಸವದ ಉದ್ಘಾಟನೆ ಮಾಡಿದ್ದು ವೂರ್ಜಬರ್ಗ್ ನಗರದ ಮೇಯರ್ ಗೆಯಾರ್ಗ್  ರೊಸೆನ್ ತಾಲ್. ನಡುವಯಸ್ಸಿನ ಈ ತರುಣ ಸ್ಕಾಟ್ಟಿಶ್ ವರ್ಣರಂಜಿತ ಮೆರವಣಿಗೆಯಲ್ಲಿ ಬಂದರು. ಬಂದವರೇ ಮೇಯರ್ ಗವನ್ ಕಳಚಿ, ಈ ಉತ್ಸವದ ಬಗ್ಗೆ ಉತ್ಸಾಹದ ಕೆಲವು ಮಾತುಗಳನ್ನು ಆಡಿದರು. ಸೋಸಿಯಲಿಸ್ಟ್ ಡೆಮೊಕ್ರೆಟಿಕ್ ಪಕ್ಷದ ಮೇಯರ್ , ತಮ್ಮ ನಗರ ಬಹು ದೇಶಗಳ ಸಂಸ್ಕೃತಿಗಳ ಮಿಲನದ ಮೂಲಕವೇ ಹೇಗೆ ಎಲ್ಲರ ನಗರ ಆಗಬೇಕು ಎಂದು ಚೆನ್ನಾಗಿ ಹೇಳಿದರು. ನಾನು ನನ್ನ ಕೆಮರಾ ಹಿಡಿದು ಉತ್ಸವದ ಫೋಟೋ ತೆಗೆಯುತ್ತಿದ್ದವನು ಓಡಿಕೊಂಡು ಬಂದು ಮೆರವಣಿಗೆಯ, ಮತ್ತೆ ಮೇಯರ್ ಭಾಷಣದ ಫೋಟೋ ತೆಗೆದೆ. ನಾವು ನೋಡುತ್ತಿದ್ದಂತೆಯೇ ಮೇಯರ್ ಚುಟುಕು ಭಾಷಣ ಮುಗಿಸಿ, ಯಾವ ಶಿಷ್ಟಾಚಾರದ ಅಹಂ ಇಲ್ಲದೆ, ಸಾಮಾನ್ಯರಂತೆ ವೇದಿಕೆಯಿಂದ ಕೆಳಕ್ಕೆ ಜಿಗಿದು, ನೆರೆದಿದ್ದ ಜನರೊಡನೆ ಮಾತಾಡಲು ತೊಡಗಿದರು. ಅದನ್ನೂ ಸೆರೆ ಹಿಡಿದದ್ದು ನನಗೆ ಖುಷಿಯ ಕ್ಷಣ.

ಕ್ರಿಸ್ತ ಪೂರ್ವ ೧೦೦೦ದಲ್ಲೆ ಕೋಟೆಯ ರೂಪದಲಿ ಕಾಣಿಸಿಕೊಂಡಿದ್ದ ಈಗಿನ ವೂರ್ಜಬರ್ಗ್, ೧೯೪೫ರಲ್ಲಿ ಎರಡನೇ ಮಹಾಯುದ್ಧದಲ್ಲಿ ಮಾರ್ಚ್ ೧೬ರನ್ದು  ಬ್ರಿಟಿಶ್ ಯುದ್ಧ ವಿಮಾನಗಳು ಹದಿನೇಳು ನಿಮಿಷಗಳ ಕಾಲ ಸುರಿಸಿದ ೨೨೫  ಬಾಂಬ್ ಧಾಳಿಯಿಂದ ಶೇಕಡಾ ತೊಂಬತ್ತು ಭಾಗ ನಾಶವಾದದ್ದು, ಮತ್ತೆ ಇಪ್ಪತ್ತು  ವರ್ಷಗಳಲ್ಲಿ ಮತ್ತೆ ಪುನರ್ ನಿರ್ಮಾಣ ಹೊಂದಿದ್ದು.ಈರೀತಿ ಮತ್ತೆ ಪರಂಪರೆಯ ವ್ಯೂರ್ಜಬರ್ಗ್ ನಗರವನ್ನು ಅದೇ ಮಾದರಿಯಲ್ಲಿ ಕಟ್ಟಿದವರು ನಗರದ ಹೆಂಗುಸರು .

ಒಮ್ಮೆಗೆ ಎಲ್ಲ ಎಲೆಗಳನ್ನೂ ಕಳಚಿಕೊಂಡು ಬೋಳು ಬೋಳಾಗಿ, ಮತ್ತೆ ಹಿಮಪಾತದಿಂದ ಮೈನಸ್ ಮೂವತ್ತರವರೆಗೂ ಮರಗಟ್ಟಿದಂತೆ ಕಂಡರೂ, ಮತ್ತೆ ಮತ್ತೆ ಚಿಗುರುವ, ಫೀನಿಕ್ಸ್ ಹಕ್ಕಿಯಂತಹ ಶಕ್ತಿ, ವಸಂತಕಾಲಕ್ಕೆ ಇದೆ ಮತ್ತು ವ್ಯೂರ್ಜಬರ್ಗ್ ನಗರಕ್ಕೆ ಇದೆ. ಹಾಗಾಗಿಯೇ ವ್ಯೂರ್ಜಬರ್ಗ್ ವಸಂತೋತ್ಸವ ಅನನ್ಯ ಮತ್ತು ನಿಜವಾಗಿ ಅಂತಾರಾಷ್ಟ್ರೀಯ ಬಂಧುತ್ವದ  ಬೆಳ್ಳಿ ಬೆಟ್ಟ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

7 Responses to “ಜರ್ಮನಿಯಲ್ಲಿ ಮಂಗಳೂರು ಕೇಸರಿಬಾತ್”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ಬೇರೆ ನೆಲದಲ್ಲಿ ನಮ್ಮ ತಿಂಡಿ ತಿನಸುಗಳು ಅದೆಷ್ಟು ಆಪ್ಯಾಯಮಾನ! ಬಹುಷಃ ಸಂಸ್ಕೃತಿಯನ್ನು ಊಟ, ತಿಂಡಿ ಪ್ರಭಾವಿಸಿದಷ್ಟು ಬೇರಾವುದೂ ಮಾಡಿಲ್ಲವೇನೋ! ವ್ಯೂಜ್ ಬರ್ಗ್ ಗೆ ಬಂದಷ್ಟೇ ಖುಷಿ ಆಯಿತು!

ಲಕ್ಷೀನಾರಾಯಣ ಭಟ್ಟರಿಗೆ ನಮಸ್ಕಾರ.ನೀವು ಹೇಳುವುದು ಸರಿ.ಎಲ್ಲ ಬೌದ್ಧಿಕ ಚಟುವಟಿಕೆಗಳ ಜೊತೆಗೂ ಆಹಾರ ನಮ್ಮ ಬದುಕಿನ ಸಂಸ್ಕೃತಿಯ ಮುಖ್ಯ ಭಾಗವಾಗಿಯೇ ಉಳಿದಿದೆ.

ಭಾರತೀಯ ತಿನಿಸುಗಳು ಜರ್ಮನರಿಗೆ ಇಷ್ಟವಾಯ್ತು ಅನ್ನೋ ಸಂಗತಿಗಿಂತಲೂ ಮೇಯರ್ ಜನಪರತೆ ಖುಷಿ ಕೊಡ್ತು.ಭಾರತದಲ್ಲಿ ಬಹುತೇಕ ರಾಜಕಾರಣಿಗಳು ಅಧಿಕಾರ ಬಂದ ಕೂಡ್ಲೇ ಆಕಾಶದಿಂದ ಧರೆಗೆ ಬಂದವರಂತೆ ಆಡ್ತಾರೆ.ಯಾಕೀಗೆ…..?

ಹೌದು.ನಿಮ್ಮ ಅಭಿಪ್ರಾಯ ಸರಿ.ನಮ್ಮಲ್ಲಿ ಅಧಿಕಾರ ಒಂದು ಅಮಲು ಆಗಿದೆ.ಹಾಗಾಗಿಯೇ ನಮ್ಮ ದೇಶದಲ್ಲಿ ಅಧಿಕಾರದಲ್ಲಿ ಇರುವವರು ಎಲ್ಲ ಅನೈತಿಕ ಕೆಲಸಗಳನ್ನು ನಾಚಿಕೆ ಇಲ್ಲದೆ ಮಾಡುತ್ತಾರೆ.ಜನರು ಅಧಿಕಾರದಲ್ಲಿ ಇರುವವರನ್ನು ಆರಾಧಿಸುವುದನ್ನು ಬಿಡಬೇಕು ಮತ್ತು ಅವರು ತಪ್ಪು ಮಾಡಿದಾಗ ಅದನ್ನು ಸಾಮೂಹಿಕವಾಗಿ ಪ್ರತಿಭಟಿಸಬೇಕು.

ಎಷ್ಟೊಂದು ಸಂಸ್ಕೃತಿಗಳು ಒಟ್ಟುಗೂಡುವ ಇಂಥ ಅಪರೂಪದ ಕ್ಷಣಗಳಲ್ಲಿ ಭಾಗಿಯಾಗುವುದು ಮತ್ತು ಅಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದೇ ( ಅದು ಊಟ ,ಉಡುಗೆ ಯಾವುದೇ ರೀತಿಯಲ್ಲಾಗಿರಬಹುದು) ಒಂದು ಚೆಂದ ಅಲ್ಲವೆ ಸರ್? ಅಸೂಯೆಯಾಗುತ್ತಿದೆ…;-) 🙂

ಜಯಲಕ್ಷ್ಮಿ ಅವರಿಗೆ ನಮಸ್ಕಾರ.ಕರ್ನಾಟಕ ಸದಾ ನಮ್ಮನ್ನು ಇಂತಹ ಬಹು ಸಂಸ್ಕೃತಿಗಳ ನಡುವೆ ಬೆಳೆಸಿದೆ.ಜೋಳದ ರೊಟ್ಟಿ-ಎಣ್ಣೆಗಾಯಿ,ರಾಗಿಮುದ್ದೆ-ಬಸ್ ಸಾರು ,ನೀರು ದೋಸೆ -ಮೀನು ಸಾರು :ಇವೆಲ್ಲ ತಿಂದೇ ಬೆಳೆದ ನಮಗೆ ,ತಿಂಡಿ ತಿನಿಸುಗಳೇ ನಮ್ಮ ಬಹುತ್ವವನ್ನು ಸೌಹಾರ್ದವನ್ನು ರೂಪಿಸಿವೆ.ನಿಮ್ಮಂತೆ ನಾನು ಕಲಾವಿದ ಆಗಲಿಲ್ಲವಲ್ಲಾ ಎನ್ನುವ ಸಾತ್ವಿಕ ಅಸೂಯೆ ಸದಾ ನನ್ನಲ್ಲಿದೆ.

ಪ್ರೀತಿಯ ಪ್ರೊಫೆಸರ್ ವಿವೇಕ ರೈ ಯವರೇ,
ನಿಮ್ಮ ಬ್ಲಾಗಿಗೆ ಇದು ನನ್ನ ಮೊದಲ ಬೇಟಿ. ಸೋಮಶೇಖರ ವರದಿಯ ಕನ್ನಡ ರೂಪದ ಬೆನ್ನು ಹತ್ತಿ ಹೊರಟವಗೆ ಅದು ಹೇಗೋ ತಮ್ಮ ಈ ಬ್ಲಾಗ್ ಖಂಡಿತು. ಅಂತರ್ಜಾಲದ ಹುಡುಕಾಟವೇ ಹಾಗೆ. ಏನನ್ನೋ ಹುಡುಕ ಹೊರಟವರಿಗೆ ಏನೆಲ್ಲಾ ದರ್ಶನವಾಗಿ ಬಿಡುತ್ತದೆ. [ಕೆಲವೊಮ್ಮೆ ಇಂಥ ಹುಡುಕಾಟದ ಫಲಿತಾಂಶ ಮುಜುಗರಕ್ಕೆ ನಡೆಸುವುದೂ ಇದೆ]

ತಮ್ಮ ಬ್ಲಾಗನ್ನು ಕಂಡು ಅತೀವ ಆನಂದವಾಯ್ತು. ವುರ್ಜ್ ಬುರ್ಗಿನಲ್ಲಿ ಜರುಗಿದ ಬಹುಸಂಸ್ಕೃತಿ ಉತ್ಸವವನ್ನು ಕಣ್ಣಿಗೆ ಕಟ್ಟುವಂತೆ ಎಷ್ಟು ಸುಂದರವಾಗಿ ಬಣ್ಣಿಸಿರುವಿರಿ! ನಿಮಗೆ ಅಭಿನಂದನೆಗಳು. ಭಾರತದ ತಿಂಡಿ-ತಿನಿಸಿಗೆ ಜರ್ಮನಿಯಲ್ಲಿ ವಿಶೇಷ ಆಸಕ್ತಿ ಮತ್ತು ಅಭಿರುಚಿ ಇರುವುದು ನಿಮ್ಮ ಲೇಖನ ಓದಿದವರೆಲ್ಲರಿಗೂ ಸುಲಭದಲ್ಲಿ ವೇಧ್ಯವಾಗುವ ಸಂಗತಿ. ನಮ್ಮ ಗ್ಯುಟ್ಟಿಂಗನ್ ನಲ್ಲಿಯೂ ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಾ ಇರುತ್ತವೆ. ಆದರೆ ಅವನ್ನು ನಿಮ್ಮ ರೀತಿ ಮನೋಜ್ಞವಾಗಿ ಹಂಚಿಕೊಳ್ಳುವ ಮನಸ್ಸು ಎಲ್ಲರಿಗೂ ಇರಬೇಕಲ್ಲ! ಮನಸ್ಸಿದ್ದರೂ ಅದಕ್ಕೆ ಹೊಂದಿಕೊಂಡ ಕಲೆ ಮತ್ತು ಚಾತುರ್ಯ ಬೇಡವೇ? ಅವನ್ನು ನಿಮ್ಮಿಂದ ಕಲಿಯಬೇಕಷ್ಟೇ! ಅದರೊಟ್ಟಿಗೆ ಸಂಕ್ಷಿಪ್ತವಾಗಿ ವೂರ್ಜಬುರ್ಗ್ ನ ಚರಿತ್ರೆಯ ಪುಟಗಳನ್ನೂ ಮತ್ತು ಅವುಗಳಲ್ಲಿ ಮಾಸಿಹೋದ ಪಾತ್ರಗಳನ್ನೂ ಸ್ಮರಿಸಿರುವುದು ನಿಜಕ್ಕೂ ಸಮಯೋಚಿತ ಮತ್ತು ಶ್ಲಾಘನೀಯ. ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಯಾವ ಸಂಬಂಧ ಎಂದಂತೆ ತಿಂಡಿ-ತಿನಿಸಿನ ಮೇಳಕ್ಕೂ ಮಹಾಯುದ್ಧಕ್ಕೂ ಎಲ್ಲಿಯ ಸಂಬಂಧ. ಆದರೆ ತಮ್ಮ ಲೇಖನ ಅಂಥ ವಿಲಕ್ಷಣ ಸಂಬಂಧಗಳಲ್ಲಿಯೂ ಒಂದು ಸುಲಕ್ಷಣ ಸಮೀಕರಣ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಅಭಿನಂದನೆ ಹಾಗೂ ಕೃತಜ್ಞತೆಗಳು!

ಬರೆಯುತ್ತಿರಿ!


Where's The Comment Form?

Liked it here?
Why not try sites on the blogroll...

%d bloggers like this: