ಅಗ್ರಾಳ ಲೇಖನ ಮಾಲೆ: ಬಸ್ ಲೇಟ್

Posted on ಮೇ 7, 2010. Filed under: Uncategorized |


 ಅಗ್ರಾಳ ಪುರಂದರ ರೈ

ರಸಾಯನ ಕತಾ ಸಂಕಲನದಿಂದ (೧೯೫೨)

-ಅಗ್ರಾಳ ಪುರಂದರ ರೈ

ಮಂಗಳೂರಿಗೆ ಬಸ್ಸು ಟಿಕೇಟು ಪಡಕೊಂಡು ಹೊರಡಲನುವಾಗಿದ್ದೆ. ಬಸ್ಸ್ ಬರಲಿಲ್ಲ. ಟಿಕೇಟು ಪಡಕೊಳ್ಳಲು ಬೇಕಾಗಿದ್ದ ಯುಕ್ತಿ, ಸಾಹಸ, ಅರಚಾಟ, ಪೇಚಾಟವನ್ನೆಲ್ಲಾ ನಾನು ವಿವರಿಸುವುದಿಲ್ಲ. ಕಾರಣ ಯುದ್ಧ ಪ್ರಾರಂಭವಾದಂದಿನಿಂದ ನಮ್ಮ ವಾಚಕರಲ್ಲಿ ಬಸ್ಸು ಹತ್ತದೆ ಉಳಿದವರಿರಲಿಕ್ಕಿಲ್ಲ. ಅವರಿಗೆ ಈ ಅನುಭವವಾಗಿಯೇ ತೀರಬೇಕು.

“ಬಸ್ಸ್ ಲೇಟ್’ – ಬಸ್ಸನ್ನು ಕಾಯುತ್ತಾ ಬುಕ್ಕಿಂಗ್ ಆಫೀಸಿನಲ್ಲೇ ಕುಳಿತೆ. ಒಬ್ಬ ಭಿಕ್ಷುವು ದುಡ್ಡು ಬೇಡುತ್ತಾ ಬರುತ್ತಿದ್ದ. ಹರೆಯದವ, ಕೆಲವರು ತಲೆಯಲ್ಲಾಡಿಸಿದರು. ಕೆಲವರು ಕೆಳಗಿನ ತುಟಿ ಮುಂದು ಮಾಡಿದರು. ಕೆಲವರು ಕೈಯಾಡಿಸಿದರು. “ನಿನಗೆ ಯಾವಾಗಲೂ ಕೊಡಬೇಕೆ? ಇದೇನೆ ನಿನ್ನ ಕೆಲಸ” ಎಂದರೊಬ್ಬರು. ಒಬ್ಬರು “ನಿನಗೇನು ದುಡಿಯಲು ಧಾಡಿ?” ಎಂದರು.
ನನ್ನ ಕಡೆಗೆ ಬಂದ. “ದರ್ಮ ಕೊಡಿರಿ” ಎಂದು ಅಂಗ ವಿನ್ಯಾಸ ಮಾಡಿ ಕೈ ಮುಂದು ಮಾಡಿದ.
“ಏನು ಕೊಡಬೇಕು ನಿನಗೆ?”
“ಒಂದು ಮುಕ್ಕಾಲು”
“ಏಕೆ?”
“ಹೊಟ್ಟೆ ತುಂಬಿಸಲಿಕ್ಕೆ”
“ಒಂದು ಮುಕ್ಕಾಲಿನಿಂದ ನಿನ್ನ ಹೊಟ್ಟೆ ತುಂಬುತ್ತದೆಯೇ?”
“ಇಲ್ಲ ಹೀಗೇನೇ!…”
“ನೀನು ನನ್ನ ಜತೆಯಲ್ಲಿ ಮನೆಗೆ ಬಾ. ನಿನಗೆ ಹೊಟ್ಟೆಗೆ ಹಿಟ್ಟು, ಮೈಗೆ ವಸ್ತ್ರವನ್ನು ಕೊಡುತ್ತೇನೆ. ಮನೆಯಲ್ಲಿ ಕೆಲಸವಿದೆ. ಜೀವನೋಪಾಯದಲ್ಲಿ ಕಡೆಯದಾದ ಈ ಭಿಕ್ಷಾವೃತ್ತಿಗೇಕೆ ಮನಸ್ಸು ಮಾಡಿದೆ? ನಿನ್ನ ಗೈಮೆಯಿಂದಲೇ ನಿನ್ನ ಹೊಟ್ಟೆ ತುಂಬಿಸು. ಇದರಲ್ಲಿ ಸಾರ್ಥಕತೆ ಇದೆ. ಹರೆಯದಲ್ಲೇ ಅಭಿಮಾನವನ್ನು ಬಿಟ್ಟು ನಾಚಿಕೆಗೇಡಿಯಂತೆ ಬೇಡಿದರೆ ಮುಪ್ಪಿನ ತನಕವೂ ನಿನ್ನ ಬಾಳಿನಲ್ಲೇನು ಸಾರವಿದೆ? ದುಡಿದು ಪಡೆ. ಬೇಡುತ್ತಾ ಇದ್ದರೆ ಎಷ್ಟು ದಿವಸ ನಿನ್ನ ಹೊಟ್ಟೆ ಹೊರಕೊಳ್ಳಬಹುದು?” ಎಂದೆ.
ಅವನ ಮುಖ ಛಾಯೆ ಬೇರಾಯಿತು. “ಏನು ಸುಮ್ಮನೆ ನಿಂತಿರುವೆ? ಉತ್ತರ ಕೊಡು” ಎಂದೆ.
ನೆರೆದವರೆಲ್ಲರ ಕಡೆಗೂ ದೃಷ್ಟಿ ಹರಿಸಿದ. ಎಲ್ಲರ ದೃಷ್ಟಿಯೂ ನನ್ನ ಕಡೆಗಿತ್ತು. “ಏನು ಮೌನವಾಗಿರುವೆ? ಆಲೋಚಿಸಿ ಉತ್ತರ ಕೊಡುವೆಯಾ? ಇನ್ನೊಮ್ಮೆ ಬರುವಾಗ ಉತ್ತರ ಕೊಡು” ಎಂದೆ. “ಹೂಂ’ ಎಂದು ಹೆಜ್ಜೆ ತೆಗೆದ.
*  *  *  * *
ಬುಕ್ಕಿಂಗ್ ಆಫೀಸಿನ ಬದಿಗೊಂದು ಕೋಣೆ. ಅದರ ಬಾಗಿಲಲ್ಲಿ “”ಅಪ್ಪಣೆ ವಿನಹಾ ಯಾರೂ ಒಳ ಪ್ರವೇಶಿಸಕೂಡದು” ಎಂದು ಬೋರ್ಡ್  ಹಾಕಿದೆ. ಕೂಲಿಯಾಳುಗಳು ಪ್ರಯಾಣಿಕರು ಎಲ್ಲರೂ ಯಾರ ಅಪ್ಪಣೆಯೂ ಇಲ್ಲದೆ ಸರಾಗವಾಗಿ ಒಳಗೆ ಹೋಗುತ್ತಾ ಬರುತ್ತಾ ಇದ್ದಾರೆ. “ಹಾಗಾದರೆ ಈ ಬೋರ್ಡ್ ನ ಅವಶ್ಯಕತೆಯಾದರೂ ಏನು? ಇದೊಂದು ಕ್ರಮವಿರಬಹುದೇ?” ಎಂದು ಪ್ರಶ್ನಿಸಿತು ಮನಸ್ಸು.
*  *  *  *  *
ಇನ್ನೊಂದೆಡೆ ಉದ್ದವಾದ ಬೆಂಚು ಗೋಡೆಗೆ ತಾಗಿಸಿಟ್ಟಿದ್ದಾರೆ. ಅಲ್ಲೇ ಗೋಡೆಯಲ್ಲಿ “”ಸ್ತ್ರೀಯರಿಗೆ ಮಾತ್ರ” ಎಂಬ ಬೋರ್ಡ್ ನೇತಾಡುತ್ತಿತ್ತು. ಬೆಂಚಿನಲ್ಲಿ ತುಂಬಾ ಜನರಿದ್ದಾರೆ. ಹಣೆಯಲ್ಲಿ ಕುಂಕುಮವಿಲ್ಲ. ಮೂಗಿನಲ್ಲಿ ಮೂಗುತಿ ಇಲ್ಲ. “”ಕ್ರೋಪು” ಬಾಚಿದ್ದಾರೆ. ಅಷ್ಟರಲ್ಲಿ ಯುವಕನೊಬ್ಬನು ಬಂದು “”ಸುಂದರಾ! ಯಾವಾಗ ಹೆಂಗಸಾದೆ?” ಎಂದ. ಸುಂದರನ ನೋಟದಲ್ಲಿ ಆಶ್ಚರ್ಯವಿತ್ತು. “ಅಗೋ! ಮೇಲೆ ನೋಡು, ಏನೆಂದು ಬೋರ್ಡ್  ಇದೆ” ಎಂದ ಯುವಕ.
ಸುಂದರ “ಸ್ತ್ರೀಯರಿಗೆ ಮಾತ್ರ” ಎಂಬ ಬೋರ್ಡ್  ಕಂಡ. ಅಫೀಸು ತುಂಬಾ ನಗೆಯಾಡಿತು.
*  *  *  *  *
ಸಾಧಾರಣ ಮೂವತ್ತೈದು ವರ್ಷ ಪ್ರಾಯದವನಿರಬಹುದು. ಎದುರು ಮಾರ್ಗದಲ್ಲಿ ಹಾದು ಹೋಗುತ್ತಿದ್ದ. ಒಬ್ಬನೆಂದ “ಲೆಫ್ಟ್, ರೈಟ್, ಲೆಫ್ಟ್, ರೈಟ್”. ಇನ್ನೊಬ್ಬನೆಂದ “ಪೆಂಡ್ಯುಲಂ”. ಕೆಲವು ತುಂಟ ಕೂಲಿ ಹುಡುಗರು ವಿಸಿಲ್, ಓಹ್ಯೊ, ಕೂಹೂ ಇತ್ಯಾದಿ ತಮಾಷೆ ಮಾಡಿದರು. ಏನಿರಬಹುದೆಂದು ಮಾರ್ಗದ ಬದಿಗೆ ಬಂದೆ. ಕಪ್ಪು ಬಣ್ಣ, ದುಂಡಾದ ದೇಹ, ಕಚ್ಚೆ ಹಾಕಿದ್ದಾನೆ. ಉಣ್ಣೆ ಟೊಪ್ಪಿ ತಲೆಯ ಮೇಲೆ ಕೂತಿದೆ. ಟೊಪ್ಪಿಯ ಹಿಂದುಗಡೆ ಜುಟ್ಟಿದೆ. ಬಲದ ಕಾಲಿನಲ್ಲೊಂದು ಬೆಳ್ಳಿ ಸರಿಗೆ ಇದೆ. ಕಚ್ಚೆ ಮಧ್ಯದಿಂದ ಬೋಲ್ಶೇವಿಕ್ ಬಣ್ಣದ ಲಂಗೋಟಿಯೊಂದು – ನೇತಾಡುತ್ತಾ ಆಚೆ ಈಚೆ ಉಯ್ಯಾಲೆ ತೂಗುತ್ತಾ ಇದೆ. ಆದರೆ ಆ ಮನುಷ್ಯನಿಗೆ ಇವರೆಲ್ಲಾ ತನ್ನನೇ ಕುಚೋದ್ಯ ಮಾಡುತ್ತಾ ಇದ್ದಾರೆಂದು ತಿಳಿಯದೇನೇ ಅವರ  ಪಯಣ ಮುಂದೆ ಸಾಗಿತ್ತು.
*  *  *  *  *
ವೇಷ ಭೂಷಣದಿಂದಲೇ ಪುರೋಹಿತನೆಂದು ತಿಳಿಯುತ್ತಿತ್ತು. ಕೈಯ್ಯಲ್ಲೊಂದು ಪಂಚಾಂಗ. ಮಣ ಮಣ ಗುಣು ಗುಣು ಮಂತ್ರ ಹೇಳಿದ. ಹೀಗೇನೇ ಕೆಲವರ ಹತ್ತಿರ ಅವನ ಮಂತ್ರ ಪಠಣ ಸಾಗಿತ್ತು. ಅವರೆಲ್ಲರೂ ಒಂದೊಂದು ಪಾವಾಣೆ ಕೊಟ್ಟರು. ಹೊರಟು ಹೋದ. ಹತ್ತಿರದವರನ್ನು ವಿಚಾರಿಸುವಾಗ – “”ಇಂದು ಆಷಾಢ ಏಕಾದಶಿ. ಅದನ್ನು ತಿಳಿಸಿ ಪಾವಾಣೆ ಬೇಡಲು ಬಂದಿದ್ದಾರೆ – ಇವರು ನಮ್ಮ ಪುರೋಹಿತರು…”
“ಅಂದರೆ?”
“ಅಂದರೆ ರಾಜಾಪುರ ಕೊಂಕಣಸ್ತ ಪುರೋಹಿತರು” ಎಂದರು.
*  *  *  *  *
“ಏನಪ್ಪಾ ಬಸ್ಸು ಬರಲಿಲ್ಲ” ಎಂದು ಪ್ರಯಾಣಿಕರೊಬ್ಬರು ಚಿಂತಿಸಿದರು.
“ಎಲ್ಲಿ ಮುರಿದು ಬಿತ್ತೋ ಏನೋ” ಎಂದರು ಮತ್ತೊಬ್ಬರು.
“ಗ್ಯಾಸ್ ಬಸ್ಸ್ ಬಹು ನಿಧಾನವಲ್ಲವೇ?” ಎಂದು ಗ್ಯಾಸ್ಸ್ ಬಿಟ್ಟರು ಇನ್ನೊಬ್ಬರು.
“ಡ್ರೈವರುಗಳಿಗೆ ಹೋಟ್ಲು ಕಂಡಲ್ಲಿ ಕಾಫಿ ಕುಡಿಯಬೇಕು. ಬಸ್ಸು ತಡವಾಗದೆ ಮತ್ತೇನಾದೀತು?” ಎಂದು ರಾಗ ಎಳೆದರು ಬೇರೊಬ್ಬ ಹಳಬರು.
“ಎಷ್ಟು ಸಮಯ ನಷ್ಟ” ಎಂದರು ಕೆಲಸವಿಲ್ಲದವರು.
“ಹೌದು” ಎಂದು ದನಿಗೂಡಿಸಿದರು ಉಳಿದವರು.
ಆದರೆ ಬಸ್ಸ್ ಲೇಟಾದ್ದರಿಂದ ನನಗೆ ಇಷ್ಟೆಲ್ಲಾ ಅನುಭವವಾಯಿತು.
ಅಷ್ಟರಲ್ಲಿ ಬಸ್ಸ್ “ಪೋಯಿಂ, ಪೋ, ಪೋ ಪೋಯಿಂ” ಎಂದು ಧೂಳೆಬ್ಬಿಸುತ್ತಾ ಬಂತು.
ಎಲ್ಲರೂ ನೂಕು ನುಗ್ಗಾಟದಲ್ಲಿ ಬಸ್ಸು ಹತ್ತಿದೆವು.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: