ವಿಶ್ವವಿದ್ಯಾನಿಲಯಗಳು : ತೊಟ್ಟಿಲಿನಿಂದ ಬಟ್ಟಲಿನವರೆಗೆ

Posted on ಮೇ 6, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpg?w=156&h=243

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 19 ಜೂನ್, 2009

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ

ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಭಾರತದ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ ಆತಂಕಕಾರಿಯಾದ ಬೆಳವಣಿಗೆ. ಇಂತಹ ಹಲ್ಲೆಗಳನ್ನು ಜನಾಂಗೀಯ ದ್ವೇಷದ ಕ್ರೌರ್ಯಗಳೆಂದು ಬಣ್ಣಿಸಲಾಗುತ್ತಿದೆ. ಇದರೊಂದಿಗೆ ಭಾರತದ ವಿದ್ಯಾರ್ಥಿಗಳು ಆಸ್ಟ್ರೇಲಿಯಾದಲ್ಲಿ ಕಲಿಕೆಯೊಂದಿಗೆ ಸಣ್ಣ ಪ್ರಮಾಣದ ಗಳಿಕೆಯನ್ನು ಮಾಡುತ್ತಿರುವುದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರಕದೇ ಇರುವ ಅಸಹನೆ ಕೂಡ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ತಡರಾತ್ರಿಯ ವಿದ್ಯಾರ್ಥಿಗಳ ತಿರುಗಾಟದ ವೇಳೆ, ದೋಚುವ ಕಳ್ಳರ ಕೃತ್ಯಗಳೂ ಇವುಗಳೊಂದಿಗೆ ಸೇರಿಕೊಂಡಿವೆ ಎನ್ನುವ ವರದಿಗಳು ಬಂದಿವೆ. ಕೆನಡಾ ದೇಶದಲ್ಲೂ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಯ ಸುದ್ದಿಗಳು ಹೆಚ್ಚಾಗತೊಡಗಿವೆ.

ಕೌಶಲದ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಇತ್ತೀಚೆಗೆ ಅಧಿಕವಾಗುತ್ತಿದೆ. ಭಾರತಕ್ಕೆ ಹೋಲಿಸಿದರೆ ಸಾಕಷ್ಟು ದುಬಾರಿಯಾದ, ಆದರೆ, ಅಮೇರಿಕಾಕ್ಕಿಂತ ಕಡಿಮೆ ವೆಚ್ಚದ ವಿದೇಶೀ ಶಿಕ್ಷಣ ಪಡೆಯುವ ಅವಕಾಶಕ್ಕೆ ಆಸ್ಟ್ರೇಲಿಯಾ ತೆರೆದುಕೊಂಡ ಕಾರಣ, ಭಾರತೀಯ ವಿದ್ಯಾರ್ಥಿಗಳ ವಲಸೆ ಕಳೆದ ದಶಕಗಳಿಂದೀಚೆಗೆ ಅಧಿಕವಾಗಿದೆ.

ಇಂತಹ ಸಂದರ್ಭದಲ್ಲಿ ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲವೇ ಎನ್ನುವ ಪ್ರಶ್ನೆ ಕೂಡ ಎದುರಾಗುತ್ತದೆ. ಕೇಂದ್ರ ಮತ್ತು ರಾಜ್ಯದ ವಿಶ್ವವಿದ್ಯಾನಿಲಯಗಳು, ಮ್ಯಾನೇಜ್ಮೆಂಟ್ ಸಂಸ್ಥೆಗಳು, ಐಐಟಿಗಳು-ಇವೆಲ್ಲ ದೊಡ್ಡ ಪ್ರಮಾಣದಲ್ಲಿ ಇದ್ದರೂ ಅಂತಹುದೇ ಶಿಕ್ಷಣಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗುವ ಪ್ರವೃತ್ತಿ ನಮ್ಮ ಸಂಸ್ಥೆಗಳ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸುತ್ತದೆ.

ಭಾರತದಲ್ಲಿ ಉನ್ನತ ಶಿಕ್ಷಣವನ್ನು ನಿರ್ವಹಿಸುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಅರ್ಜುನ್ಸಿಂಗ್ ಬದಲಿಗೆ ಕಪಿಲ್ ಸಿಬಲ್ ಬಂದಿದ್ದಾರೆ. ಪಕ್ಷ ಒಂದೇ ಆದರೂ ಆಲೋಚನಾಕ್ರಮ ಬೇರೆಯಾಗಿ, ಹಿಂದಿನ ವರ್ಷಗಳ ಧೋರಣೆಗಳ ಮರುವಿಮರ್ಶೆ ಆರಂಭವಾಗಿದೆ. ‘ರಾಷ್ಟ್ರೀಯ  ಜ್ಞಾನ ಆಯೋಗ’ ಮತ್ತು ‘ಯಶ್ಪಾಲ್ ಸಮಿತಿ’ಯ ಶಿಫಾರಸ್ಸ್ಸುಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳುವ ಲಕ್ಷಣಗಳು ಕಂಡುಬಂದಿವೆ. ಉನ್ನತ ಶಿಕ್ಷಣಕ್ಕಾಗಿ ‘ರಾಷ್ಟ್ರೀಯ ಉನ್ನತ ಶಿಕ್ಷಣ ಮಂಡಳಿ’ಯನ್ನು ರಚಿಸುವ ಪ್ರಸ್ತಾವಕ್ಕೆ ಜೀವ ಬಂದಿದೆ. ಡೀಮ್ಡ್ ವಿಶ್ವವಿದ್ಯಾನಿಲಯಗಳ ಬಗೆಗಿನ ತೀಕ್ಷ್ಣ ಟೀಕೆಯನ್ನು ಗಂಭೀರವಾಗಿ ಪರಿಗಣಿಸಿ, ಅನುಮೋದನೆಗಾಗಿ ಕಾಯುತ್ತಿರುವ ಅರ್ಜಿಗಳನ್ನು ತಡೆಹಿಡಿಯಲಾಗಿದೆ. ಐಐಟಿ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳನ್ನು ‘ಡೀಮ್ಡ್ ವಿಶ್ವವಿದ್ಯಾನಿಲಯ’ ಎಂದು ಮಾನ್ಯತೆ ಕೊಟ್ಟು ಗೌರವಿಸುವ ಕಾಲ ಒಂದಿತ್ತು. ಆದರೆ, ಕ್ರಮೇಣ ಯಾವುದೇ ಖಾಸಗೀ ಸಂಸ್ಥೆ-ಅದು ಕಾಲೇಜಾಗಿರಬಹುದು, ಕೆಲವು ಕಾಲೇಜುಗಳ ಸಮುಚ್ಚಯವಾಗಿರಬಹುದು, ಬಹಳ ಕಾಲದ ಅನುಭವವಿಲ್ಲದೆಯೇ ‘ಡೀಮ್ಡ್ ವಿಶ್ವವಿದ್ಯಾನಿಲಯ’ದ ಮನ್ನಣೆಯನ್ನು ಪಡೆದ ಕಾರಣವಾಗಿ, ಇಂತಹ ಸಂಸ್ಥೆಗಳ ಬಗ್ಗೆ ವಿಮರ್ಶೆಗಳು ಆರಂಭವಾದುವು. ‘ಯು.ಜಿ.ಸಿ.ಯ  3ನೇ ಸೆಕ್ಷನ್ನ ಅಡಿಯಲ್ಲಿ ಸ್ಥಾಪನೆಯಾದ ವಿಶ್ವವಿದ್ಯಾನಿಲಯ’ ಎನ್ನುವ ಹೆಸರನ್ನು ಇಟ್ಟುಕೊಂಡು ‘ಡೀಮ್ಡ್ ಟು ಬಿ’ (Deemed to be) ಎನ್ನುವ ವಿಶೇಷಣವನ್ನು ನಿಧಾನವಾಗಿ ಕಳಚಲಾಯಿತು.           ಇಂತಹ ಅನೇಕ ಸಂಸ್ಥೆಗಳು ತಮ್ಮ ಉದ್ದೇಶವನ್ನು ಮೀರಿ ದೂರಶಿಕ್ಷಣವನ್ನು ಪ್ರಧಾನವಾದ ಕಸುಬನ್ನಾಗಿ ಮಾಡಿಕೊಂಡುವು. ಹೀಗಾಗಿ ಮತ್ತೆ ಎಚ್ಚೆತ್ತುಕೊಂಡ ಯು.ಜಿ.ಸಿ. ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಸಮಸ್ಯೆಯನ್ನು ಎದುರಿಸಲು ಸನ್ನದ್ಧವಾಗತೊಡಗಿದೆ.

‘ವಿಶ್ವವಿದ್ಯಾನಿಲಯ’ (University) ಎನ್ನುವ ನಾಮಧೇಯವನ್ನು ಹೊಂದುವುದು ಒಂದು ಪ್ರತಿಷ್ಠೆ ಮತ್ತು ರಹದಾರಿ ಎಂದು ಕಂಡುಕೊಂಡ ಅನೇಕ ಸಂಸ್ಥೆಗಳು, ವಿಶ್ವವಿದ್ಯಾನಿಲಯವನ್ನು ಹೆಚ್ಚುಹೆಚ್ಚು ಪದವಿ ಉತ್ಪಾದಿಸುವ ಉದ್ಯಮರೂಪದಲ್ಲಿ ಕಂಡುವೇ ಹೊರತು, ಶಿಕ್ಷಣದ ಹೊಸ ಶೋಧಗಳ ಕಡೆಗೆ ಗಮನವನ್ನು ಹೆಚ್ಚಾಗಿ ಹರಿಸಲಿಲ್ಲ. ಕಾಲೇಜು, ಅಕಾಡೆಮಿ, ಸಂಸ್ಥೆ ಮುಂತಾದ ಹೆಸರುಗಳಿಗಿಂತ ‘ವಿಶ್ವವಿದ್ಯಾನಿಲಯ’ ಎನ್ನುವುದು ಹೆಚ್ಚು ಅಂಗೀಕಾರಾರ್ಹತೆಯನ್ನು ಕೊಡುತ್ತದೆ ಎನ್ನುವ ಕುರುಡು ವಿಶ್ವಾಸದ ಭ್ರಮಾಲೋಕದಲ್ಲಿ ಕೆಲವು ಸಂಸ್ಥೆಗಳು ನಾಮರೂಪಾಂತರವನ್ನು ಮಾತ್ರ ಹೊಂದಿದುವೇ ಹೊರತು, ಆತ್ಮರೂಪಾಂತರವನ್ನು ಹೊಂದಲಿಲ್ಲ.

ಕಳೆದ ವಾರ ಜೂನ್ 11ರಂದು, ಅಹಮದಾಬಾದ್ನ ಡಾ.ಬಿ.ಆರ್.ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ದೇಶದ 12 ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಗಳು, ದೂರ ಶಿಕ್ಷಣ ಮಂಡಳಿಯ ನಿರ್ದೇಶಕರು, ನ್ಯಾಕ್ನ ನಿರ್ದೇಶಕರು ಸೇರಿ ದೂರಶಿಕ್ಷಣದಲ್ಲಿ ಆಂತರಿಕ ಗುಣಮಟ್ಟವನ್ನು ಕಾಪಾಡುವ ಕುರಿತು ಚರ್ಚಿಸಿದರು. ಈ ಸಮ್ಮೇಳನದ ಆರಂಭದಲ್ಲಿ ಮಾತನಾಡಿದ ಗುಜರಾತ್ ರಾಜ್ಯದ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯವರು, ಗುಜರಾತ್ನಲ್ಲಿ ಸ್ಥಾಪಿಸಲಿರುವ ‘ಮಕ್ಕಳ ವಿಶ್ವವಿದ್ಯಾನಿಲಯ’ದ ಬಗ್ಗೆ ಪ್ರಸ್ತಾಪಿಸಿದರು. ಇದು ಕುಲಪತಿಗಳಾದ ನಮಗೆಲ್ಲ ಹೊಸ ವಿಷಯವಾಗಿತ್ತು. ನವಜಾತ ಶಿಶುವಿನ ಹಂತದಿಂದ ಕಾಲೇಜು ಹಂತದವರೆಗಿನ ಮಕ್ಕಳು ಮತ್ತು ಅವರ ಶಿಕ್ಷಣದ ಬಗ್ಗೆ ಅಧ್ಯಯನ ನಡೆಸುವುದು-ಈ ‘ಮಕ್ಕಳ ವಿಶ್ವವಿದ್ಯಾನಿಲಯ’ದ ಉದ್ದೇಶ ಎಂದು ಅವರು ತಿಳಿಸಿದರು; ಈ ಕುರಿತು ಸಂಶೋಧನೆಗಳಿಗಾಗಿ ಪ್ರತ್ಯೇಕವಾದ ವಿಭಾಗಗಳನ್ನು ಪ್ರಸ್ತಾವಿತ ‘ಮಕ್ಕಳ ವಿಶ್ವವಿದ್ಯಾನಿಲಯ’ ಹೊಂದಿರುತ್ತದೆ ಎನ್ನುವ ಮಾತನ್ನು ಹೇಳಿದರು. ಇದೊಂದು ವಿಶಿಷ್ಟವಾದ ಕುತೂಹಲಕಾರಿಯಾದ ಪರಿಕಲ್ಪನೆ. ಒಂದು ಅರ್ಥದಲ್ಲಿ ‘ಮಕ್ಕಳ ವಿಶ್ವವಿದ್ಯಾನಿಲಯ’ ಎನ್ನುವುದೇ ಒಂದು ವಿರೋಧಾಭಾಸದ ಪದ. ಸಾಮಾನ್ಯವಾಗಿ ನಮ್ಮಲ್ಲಿ ‘ವಿಶ್ವವಿದ್ಯಾನಿಲಯ’ ಎಂದರೆ, ಪಿ.ಯು.ಸಿ. ಬಳಿಕದ ಪದವಿ, ಸ್ನಾತಕೋತ್ತರ ಪದವಿ ಮತ್ತು ಉನ್ನತ ಸಂಶೋಧನೆ ನಡೆಸುವ ಸಂಸ್ಥೆ ಎಂದು ಅರ್ಥ. ಅದಕ್ಕಿಂತ ಕೆಳಹಂತದ ಶಿಕ್ಷಣವನ್ನು ಸಾರ್ವಜನಿಕ ಶಿಕ್ಷಣ, ಪ್ರಾಥಮಿಕ ಶಿಕ್ಷಣ ಎಂದೆಲ್ಲಾ ಕರೆಯುತ್ತೇವೆ. ಆದರೆ, ನಿಜವಾದ ಅರ್ಥದಲ್ಲಿ ಬಾಲವಾಡಿಯಿಂದ ತೊಡಗಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳನ್ನು ದಾಟಿಕೊಂಡು ಪಿಯುಸಿಯನ್ನು ಮೀರಿ ಕಾಲೇಜುಶಿಕ್ಷಣದ ಹಂತಕ್ಕೆ ಬರಬೇಕಾದರೆ, ಅದೊಂದು ನಿರಂತರ ಪ್ರಕ್ರಿಯೆಯ ಅಂಬೆಗಾಲಿನಿಂದ ದಾಪುಗಾಲಿನ  ಪ್ರಯಾಣವಾಗಿರುತ್ತದೆ. ಹಾಗಾಗಿ, ಆರೋಗ್ಯಕರ ಬಾಲವಾಡಿಯೇ ವಿಶ್ವವಿದ್ಯಾನಿಲಯದ ತೊಟ್ಟಿಲನ್ನು ತೂಗಬೇಕಾಗುತ್ತದೆ.

Rural University : Learning about Education and Development – ಇದು ಕೊಲಂಬಿಯಾ ದೇಶದಲ್ಲಿ 1974ರಿಂದ 1982ರವರೆಗೆ FUNDAEC  ಎನ್ನುವ ಪ್ರತಿಷ್ಠಾನದ ಅನುಭವದ ವರದಿ. ಈ ಸಂಸ್ಥೆಯು ಈ ಅವಧಿಯಲ್ಲಿ ಕೊಲಂಬಿಯಾದ ಅಚಿಟ ನಗರದ ಸಮೀಪದ ಒಂದು ಗ್ರಾಮೀಣ ಪ್ರದೇಶ Norte del Caucaದ ನಿವಾಸಿಗಳ ಕಲಿಕೆಗಾಗಿ ಒಂದು ‘ಗ್ರಾಮೀಣ ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸಿತು. ಈ ಪ್ರದೇಶದ ಗ್ರಾಮೀಣರ ಕಲಿಕೆಗಾಗಿ ಈ ‘ಗ್ರಾಮೀಣ ವಿಶ್ವವಿದ್ಯಾನಿಲಯ’ವು ಅನೇಕ ಕಾರ್ಯಕ್ರಮಗಳನ್ನು ನಿರ್ವಹಿಸಿತು. ಮಾನವ ಸಂಪನ್ಮೂಲದ ಅಭಿವೃದ್ಧಿ, ವಿಜ್ಞಾನದ ಆನ್ವಯಿಕತೆ ಮತ್ತು ಸಾಮುದಾಯಿಕ ಸಂರಚನೆಗಳನ್ನು ಬಲಪಡಿಸುವುದು-ಎನ್ನುವ ಮೂರು ನೆಲೆಗಳಲ್ಲಿ ಇದು ಕೆಲಸ ಮಾಡಿತು. ಈ ‘ಗ್ರಾಮೀಣ ವಿಶ್ವವಿದ್ಯಾನಿಲಯ’ದ ಸಂರಚನೆಯಲ್ಲಿ ಗ್ರಾಮೀಣರ ಒಳಿತಿಗಾಗಿ ಕೆಲಸ ಮಾಡುವ ಎಂಜಿನಿಯರ್, ತಂತ್ರಜ್ಞರು ಮತ್ತು ಪ್ರಾಯೋಜಕರು ತಳಪಾಯದಲ್ಲಿ ಇದ್ದು, ಇದರ ಯಶಸ್ಸಿಗೆ ಕಾರಣರಾದರು.

ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿಯ ಯೋಜನೆಗಳಲ್ಲಿ ಎರಡು ಭಿನ್ನ ನೆಲೆಗಳ ಮುಖಾಮುಖಿ ಸದಾ ಚರ್ಚೆಯ ವಿಷಯವಾಗಿದೆ. ಬಡತನ ಮತ್ತು ಶ್ರೀಮಂತಿಕೆ, ವ್ಯವಸ್ಥೆ ಮತ್ತು ಅವ್ಯವಸ್ಥೆ, ಮುಂದುವರಿಕೆ ಮತ್ತು ಅನಿಶ್ಚಿತತೆ, ಒಟ್ಟಾಗುವಿಕೆ ಮತ್ತು ಒಡೆಯುವಿಕೆ, ಶಾಂತಿ ಮತ್ತು ಅಶಾಂತಿ – ಇವುಗಳು ಜೊತೆಜೊತೆಯಾಗಿ ಇರುವ ವೈರುಧ್ಯದ ವಾಸ್ತವವು ಅಭಿವೃದ್ಧಿಶೀಲ ಸಮಾಜಗಳ ಸಮಸ್ಯೆ.

‘ಗ್ರಾಮೀಣ ವಿಶ್ವವಿದ್ಯಾನಿಲಯ’  ಎನ್ನುವ ಪರಿಭಾಷೆ ವಿಶ್ವವಿದ್ಯಾನಿಲಯಗಳ ಪರಂಪರಾಗತವಾದ ಅರ್ಥವನ್ನು ಮೀರಿ ಕೆಲಸ ಮಾಡುತ್ತದೆ. ಎಲ್ಲ ಹಂತಗಳಲ್ಲಿಯೂ ಶಿಕ್ಷಣವನ್ನು ಕೊಡುವ ಕಾರ್ಯವನ್ನು ಮಾಡುವುದರ ಜೊತೆಗೆಯೇ ಆ ಪ್ರದೇಶದ ಅಭಿವೃದ್ಧಿಯಲ್ಲಿ ಅದು ವಹಿಸುವ ಪಾತ್ರವು ಉಳಿದ ವಿಶ್ವವಿದ್ಯಾನಿಲಯಗಳಿಗಿಂತ ಭಿನ್ನವಾಗಿರುತ್ತದೆ. ಆ ಪ್ರದೇಶದ ಅಭಿವೃದ್ಧಿಗೆ ಬೇಕಾದ ಕಾರ್ಯತಂತ್ರಗಳನ್ನು ಶೋಧಿಸಿ, ಅದಕ್ಕೆ ಪೂರಕವಾದ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ಈಗಓಆಂಇಅ ಪ್ರತಿಷ್ಠಾನವು ಸ್ಥಾಪಿಸಿದ ‘ಗ್ರಾಮೀಣ ವಿಶ್ವವಿದ್ಯಾನಿಲಯ’ವು ಅದರ ಆರಂಭದ ಆರು ವರ್ಷಗಳ ಕಾಲ 15 ಪ್ರಾಧ್ಯಾಪಕರನ್ನು, ಅನ್ವೇಷಕರನ್ನು ಮತ್ತು ಸುಮಾರು 30 ವಿದ್ಯಾರ್ಥಿಗಳನ್ನು ಹೊಂದಿತ್ತು. ಮುಂದೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಿತು. ಅದರ ಪ್ರಾಧ್ಯಾಪಕರು ಮತ್ತು ಪದವೀಧರರು, ಆ ಪ್ರದೇಶದ ಜನರ ಜೊತೆಗೆ ನಿರಂತರ ಸಂಬಂಧವನ್ನು ಕಲ್ಪಿಸಿಕೊಂಡು, ಅಭಿವೃದ್ಧಿಯ ಕುರಿತು ಅವರ ತಿಳುವಳಿಕೆ ಮತ್ತು ಅಪೇಕ್ಷೆಗಳ ಮೂಲಕ ಕಾರ್ಯನಿರ್ವಹಿಸಿದರು. ಹಾಗಾಗಿ, ಅಭಿವೃದ್ಧಿಯನ್ನು ಒಂದು ಉತ್ಪನ್ನವೆಂದು ಕರೆಯುವ ವಸಾಹತುಶಾಹಿ ಚಿಂತನೆಗೆ ಭಿನ್ನವಾಗಿ ಅದೊಂದು ಪ್ರಕ್ರಿಯೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟರು. ಸಾಮೂಹಿಕ ಪಾಲ್ಗೊಳ್ಳುವಿಕೆಯ ಮೂಲಕವೇ ಅನೇಕ ರೀತಿಯ ಅಭಿವೃದ್ಧಿಗಳು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟರು.  ಪ್ರದೇಶದ ಹೊರಗಿನ ಸಂಸ್ಥೆಗಳು ಮತ್ತು ಯೋಜನೆಗಳ ಮೂಲಕ, ಶಿಕ್ಷಣ, ಪೌಷ್ಠಿಕ ಆಹಾರ, ಆರೋಗ್ಯ ಸೇವೆ, ಸಾಲ ವ್ಯವಸ್ಥೆ, ಮೂಲಭೂತ ಸೌಲಭ್ಯ ವಿಸ್ತರಣೆ, ಸಂಶೋಧನೆ-ಇವುಗಳಿಗೆ ನೆಲೆಯನ್ನು ಕೊಟ್ಟ್ರು, ಗ್ರಾಮದ ಮಟ್ಟದಲ್ಲಿ ಅಭಿವೃದ್ಧಿಯನ್ನು ಸಾಧ್ಯವಾಗಿಸಿದರು.

ಈ ‘ಗ್ರಾಮೀಣ ವಿಶ್ವವಿದ್ಯಾನಿಲಯ’ದ ಮುಖ್ಯ ತತ್ತ್ವವೆಂದರೆ, ಜನರು ಎಂದೂ ಸಮಸ್ಯೆಯಲ್ಲ, ಆದರೆ ಅವರಲ್ಲಿ ಬದಲಾವಣೆ ತರುವ ಸಂಪನ್ಮೂಲಗಳದ್ದೇ ಸಮಸ್ಯೆ. ಇಲ್ಲಿನ ಶಿಕ್ಷಣದ ಪಾಠಪಟ್ಟಿಯನ್ನು ಗ್ರಾಮೀಣ ಜನರ ಅವಶ್ಯಕತೆಗಳಿಗನುಗುಣವಾಗಿ ರೂಪಿಸಿ, ಅಗತ್ಯವಿದ್ದಲ್ಲಿ ಹೊಸ ಅಧ್ಯಯನಶಿಸ್ತುಗಳನ್ನು ನಿರ್ಮಿಸಲಾಯಿತು. ಪರಂಪರಾಗತ ವಿಶ್ವವಿದ್ಯಾನಿಲಯಗಳ ಹಾಗೆ ಅಧ್ಯಯನ ವಿಷಯಗಳನ್ನು ಪ್ರತ್ಯಪ್ರತ್ಯೇಕವಾಗಿ ಬೇರ್ಪಡಿಸದೆ ಅದನ್ನು ಸಮಾನ ತಿಳುವಳಿಕೆಯ ರೂಪದಲ್ಲಿ ನೋಡಲಾಯಿತು. ಹೀಗಾಗಿ, ‘ಅಂತರ್ಶಿಸ್ತಿನ ಅಧ್ಯಯನ’ ಎನ್ನುವ ಆಧುನಿಕ ವಿಶ್ವವಿದ್ಯಾನಿಲಯಗಳ ಚಿಂತನಾಕ್ರಮಕ್ಕೂ, ‘ಗ್ರಾಮೀಣ ವಿಶ್ವವಿದ್ಯಾನಿಲಯ’ದ ಸಮಗ್ರಶಿಸ್ತಿನ ಸಮಗ್ರತಿಳುವಳಿಕೆಯ ಅಧ್ಯಯನದ ನೋಟಕ್ಕೂ ಸಂಪೂರ್ಣವಾದ ಭಿನ್ನತೆ ಇದೆ.

‘ಗ್ರಾಮೀಣ ವಿಶ್ವವಿದ್ಯಾನಿಲಯ’ದ  ಚಟುವಟಿಕೆಯಲ್ಲಿ ಉತ್ಪಾದನೆ ಒಂದು ಮುಖ್ಯ ಅಂಶವಾಗಿತ್ತು. ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ನಿರ್ಮಿಸುವುದು, ಅದಕ್ಕೆ ಅವಶ್ಯಕವಿರುವ ತಂತ್ರಜ್ಞಾನದ ಬಳಕೆ, ಆ ಮೂಲಕವೇ ಶಿಕ್ಷಣ ಎನ್ನುವುದು ಬದುಕಿನ ಅವಿನಾಭಾವ ಸಂಬಂಧವುಳ್ಳದ್ದು ಎನ್ನುವುದನ್ನು ಗ್ರಾಮೀಣರಿಗೆ ಮನವರಿಕೆ ಮಾಡಿಕೊಡಲಾಯಿತು. ಕೊಲಂಬಿಯಾದ ಈ ಪ್ರಯೋಗ ಕೆಲವೊಮ್ಮೆ ಸ್ವಯಂಸೇವಾ ಸಂಸ್ಥೆಗಳ ಮಟ್ಟದಲ್ಲಿ ಎಲ್ಲ ದೇಶಗಳಲ್ಲಿಯೂ ನಡೆದಿರುತ್ತದೆ. ಆದರೆ ‘ಗ್ರಾಮೀಣ ವಿಶ್ವವಿದ್ಯಾನಿಲಯ’ ಎನ್ನುವ ಕಲ್ಪನೆಯು ಶಿಕ್ಷಣ ಮತ್ತು ಬದುಕನ್ನು ಬೇರ್ಪಡಿಸದೆ ಅಭಿವೃದ್ಧಿಯನ್ನು ಕಾಣುವ ಹೊಸ ದಾರಿಯಾಗಿ ಮುಖ್ಯವಾಗುತ್ತದೆ.

ನಮ್ಮ ದೇಶದ ಗ್ರಾಮೀಣ ಬದುಕು, ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಪೂರ್ಣ ಉಪಯೋಗವನ್ನು ಪಡೆದುಕೊಂಡು, ತನ್ನನ್ನು ತಾನು ಅರಿತುಕೊಂಡು ಸ್ವಾವಲಂಬಿಯಾಗಿ ಬೆಳೆಯಲು ಸಾಧ್ಯವಾಗುವಂತಹ ಒಂದು ವ್ಯವಸ್ಥೆ ‘ಗ್ರಾಮೀಣ ವಿಶ್ವವಿದ್ಯಾನಿಲಯ’ದಿಂದ ಸಾಧ್ಯವಾಗುವುದಾದರೆ, ಭಾರತ ಸರ್ಕಾರವು ವಿಶ್ವವಿದ್ಯಾನಿಲಯಗಳ ಸ್ಥಾಪನೆಗಾಗಿ ಕ್ಯೂನಲ್ಲಿ ಕಾಯುತ್ತಿರುವ ಅರ್ಜಿಗಳನ್ನು ಬದಿಗಿಟ್ಟು, ತನ್ನ ‘ಆಂ ಆದ್ಮಿ’ ಘೋಷಣೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲಕ ನಿಜ ಮಾಡಬಹುದು. ಖಾಲಿ ಬಟ್ಟಲನ್ನು ಹಿಡಿದುಕೊಂಡು ಭಿಕ್ಷಾಪಾತ್ರೆ ಮಾಡಿಕೊಂಡು ಅಲೆದಾಡುವುದಕ್ಕಿಂತ, ‘ನಮ್ಮ ಬಟ್ಟಲು, ನಮ್ಮ ಅನ್ನ’ ಎನ್ನುವುದು ನಮ್ಮ ಶಿಕ್ಷಣದ ಧ್ರುವತಾರೆಯಾಗುವುದು ಸೂಕ್ತ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ವಿಶ್ವವಿದ್ಯಾನಿಲಯಗಳು : ತೊಟ್ಟಿಲಿನಿಂದ ಬಟ್ಟಲಿನವರೆಗೆ”

RSS Feed for ಬಿ ಎ ವಿವೇಕ ರೈ Comments RSS Feed

ಸರ್,
ನಿಮ್ಮ ಲೇಖನ ತುಂಬಾ ಅರ್ಥಪೂರ್ಣವಾಗಿದೆ. ಪ್ರಸಕ್ತ ನಮ್ಮ ಶೈಕ್ಷಣಿಕ ವಾತಾವರಣ ಎಷ್ಟು ಕೆಟ್ಟಿದೆ ಎನ್ನುವುದನ್ನು ನೋಡಿದರೆ ಇದು ಇನ್ನು ಹೆಚ್ಚು ಕೆಡಲು ಸಾಧ್ಯವಿಲ್ಲವೇನೋ ಎಂದು ಅನಿಸುತ್ತದೆ. ಇದು ‘ಸಿನಿಕತನ’ ಎಂದು ತಳ್ಳಿಹಾಕುವಷ್ಟು ಸರಳವಲ್ಲ! ಒಂದೆ ಮಾತಿನಲ್ಲಿ ಹೇಳುವುದಾದರೆ ಹಿಂದೆ “ವಿದ್ಯಾ ದಾನ” ಎಂಬ ಕಲ್ಪನೆಯಿದ್ದರೆ, ಇಂದು ಅದು “ವಿದ್ಯಾ ಧನ” ಎಂದು ಬದಲಾಗಿದೆ. ನಮಸ್ಕಾರ.

ನಮಸ್ಕಾರ.ಸರಿಯಾದ ಮಾತುಗಳನ್ನೇ ಹೇಳಿದ್ದೀರಿ.ವಿವಿಗಳ ಈಗಿನ ಸ್ಥಿತಿ ನಿರಾಶಾದಾಯಕ ಆಗಿದೆ.


Where's The Comment Form?

Liked it here?
Why not try sites on the blogroll...

%d bloggers like this: