ಜರ್ಮನಿಯಲ್ಲಿ ಮೇ ದಿನ :ಎಡ -ಬಲಗಳ ಸಂಘರ್ಷ

Posted on ಮೇ 3, 2010. Filed under: Uncategorized |


ಐಸಲೆಂಡ್  ಜ್ಲಾಲಾಮುಖಿ  ಉಗುಳಿದ ಬೂದಿಮೋಡಗಳು ಕಳುಹಿಸಿದ ಮೇಘ ಸಂದೇಶದಂತೆ ಜರ್ಮನಿಗೆ ಬೇಸಿಗೆ ಸೆಮೆಸ್ಟರಿಗೆ ಸಕಾಲಕ್ಕೆ ಹೋಗಲು ಸಾಧ್ಯವಾಗದೆ ಹತ್ತು ದಿನ ತ್ರಿಶಂಕು ಸ್ವರ್ಗವನ್ನು ಅನುಭವಿಸಿ, ಮತ್ತೆ ಮೇ ದಿನದ ಮುನ್ನಾದಿನ ಫ್ರಾಂಕ್ ಫಾರ್ತ್ ಮೂಲಕ ವೂರ್ಜ್ಬರ್ಗ್ ತಲುಪಿದಾಗ ಎಲ್ಲೆಲ್ಲೂ ಮೇ ದಿನದ ಮಾತು.ಅದರಲ್ಲಿ ವಿಶೇಷ ವೆಂದರೆ ಎಡ-ಬಲಗಳ ಮೆರವಣಿಗೆ ಮತ್ತು ಸಂಘರ್ಷ . ಜರ್ಮನಿಯ ಅನೇಕ ನಗರಗಳಲ್ಲಿ  ಕಳೆದ ಸುಮಾರು ಎರಡು ದಶಕಗಳಿಂದ ಈ ಹೋರಾಟ ಪ್ರತೀವರ್ಷ ಮೇ ದಿನದಂದು ನಡೆಯುತ್ತಾ ಬಂದಿದೆ. ಬರ್ಲಿನ್ , ಹ್ಯಾಂಬರ್ಗ್, ವೂರ್ಜಬರ್ಗ್ , ಶ್ವೇಇನ್ ಫಾರ್ತ್ ಮುಂತಾದೆಡೆ  ಇದು ಅಧಿಕ. ಸರಕಾರಕ್ಕೆ ಪೊಲೀಸರಿಗೆ ದೊಡ್ಡ ತಲೆನೋವು. ಬರ್ಲಿನ್ ಗೋಡೆ ಬಿದ್ದುಹೋದರೂ, ರಾಜಕೀಯ ಮನಸ್ಸುಗಳು ತಮ್ಮ ಗೋಡೆಗಳನ್ನು ಕಾಠಿಣ್ಯವನ್ನು ಕಳಚಿಲ್ಲ . ಹಿಟ್ಲರನ ಭೂತ ಕಣ್ಮರೆಯಾಗಿಲ್ಲ  ಮತ್ತು ಪೂರ್ವಜರ್ಮನಿಯ ಪೂರ್ವ ಜನ್ಮದ ವಾಸನೆ ಹೋಗಿಲ್ಲ.

https://i1.wp.com/ashleycecil.com/paintings/May%20Day%202007.jpg‘  ನವನಾಜಿಗಳು ‘ಎನ್ನುವ ಹೆಸರೇ ಫ್ಯಾಸಿಸಂನ ಹೊಸ ಅವತಾರ. ‘ ಹಳೆಯ ನಾಜಿ’ ಗಳನ್ನು  ಬಹಿಷ್ಕರಿಸಿದಾಗ ನಿಷೇಧಿಸಿದಾಗ ಅದಕ್ಕೆ ಇನ್ನೊಂದು  ಹೆಸರು ಮತ್ತು ಹೊಸ ಸಂಘಟನೆಯ ಆಕಾರ ಕಾಣಿಸಿಕೊಳ್ಳುತ್ತದೆ. ಫ್ಯಾಸಿಸಂ ಮತ್ತು ಮೂಲಭೂತವಾದದ ಲಕ್ಷಣವೇ ಅದು. ಸಂರಚನೆಗಳನ್ನು ಅಂತರಂಗದ ಕಾರ್ಯಸೂಚಿಗಳನ್ನು ಅರ್ಥಮಾಡಿಕೊಳ್ಳಬಲ್ಲವರಿಗೆ ಮಾತ್ರ ಇದು ಅರ್ಥ ಆಗುತ್ತದೆ. ಹೊರ ಆಕಾರ ,ಹೆಸರು ಮಾತ್ರ ನೋಡುವವರಿಗೆ ಅದು ಬೇರೆ ಆಗಿಯೇ ಕಾಣಿಸುತ್ತದೆ.’ದೇವನೊಬ್ಬ , ನಾಮ ಹಲವು’ ಎನ್ನುವ ಸೂತ್ರ ದೇವರಿಗೆ ಮಾತ್ರ ಅಲ್ಲ, ದೇವರಂತೆ ಅಭಿನಯಿಸುವವರಿಗೆ ಎಲ್ಲರಿಗೂ ಅನ್ವಯ ಆಗುತ್ತದೆ. ಹಾಗಾಗಿ ಕಾಲ ,ದೇಶ ಮತ್ತು ಪರಿಸರ ಬೇರೆ ಆಗಿದ್ದರೂ ಸಮಾನ ಸಂರಚನೆಗಳು ಇರಲು ಸಾಧ್ಯ.

ಈ ನವನಾಜಿಗಳು ಜರ್ಮನಿಯಲ್ಲಿ ಮೇ ದಿನದಂದು ಮೆರವಣಿಗೆ ನಡೆಸುವ ಮೂಲಕ ಕಾರ್ಮಿಕರ ಒಲವು ಪಡೆಯುವ ಮತ್ತು ಆ ಮೂಲಕ ಗತಕಾಲದಲ್ಲಿ ಹೂತುಹೋದ ತಮ್ಮ ಅನನ್ಯತೆಯನ್ನು ಪ್ರಕಟಿಸುವ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಸಾಮುದಾಯಿಕ ಮತ್ತು ಶ್ರಮದ ದಿನವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ನವನಾಜಿಗಳ ಪ್ರಯತ್ನಕ್ಕೆ ಜರ್ಮನ್ ಸರಕಾರ ತಡೆ ಒಡ್ಡಿತು , ಮೆರವಣಿಗೆ ನಡೆಸಲು  ಒಪ್ಪಿಗೆ ಕೊಡಲಿಲ್ಲ. ನವನಾಜಿಗಳು ಕೋರ್ಟಿಗೆ ಅಹವಾಲು ಸಲ್ಲಿಸಿದರು.ಮೆರವಣಿಗೆ  ನಡೆಸುವುದು ಪ್ರಜಾಪ್ರಭುತ್ವದಲ್ಲಿ ಎಲ್ಲರ ಹಕ್ಕು ಎಂದು ಹೇಳಿ ಕೋರ್ಟ್ ಅವರಿಗೆ ಮೇ ದಿನದಂದು ಮೆರವಣಿಗೆ ನಡೆಸಲು ಒಪ್ಪಿಗೆ ಕೊಟ್ಟಿತು.ಇದನ್ನು ವಿರೋಧಿಸಿದ ಎಡ ಪಂಥೀಯರು ನವನಾಜಿಗಳ ಮೆರವಣಿಗೆಯನ್ನು ತಡೆಯುವ ನಿರ್ಧಾರ ಮಾಡಿದರು.ಇಲ್ಲಿ ಆರಂಭ ಆಯಿತು ಎಡ-ಬಲಗಳ ಸಂಘರ್ಷ.ಈ ಹೋರಾಟದಲ್ಲಿ ಎಡದವರೊಂದಿಗೆ ,ಬಲಪಂಥೀಯರು ಹೊರತುಪಡಿಸಿ ಎಲ್ಲರೂ ಒಟ್ಟಾದರು.

ಹಾಗೆ ನೋಡಿದರೆ ಜರ್ಮನಿಯ ಕೇಂದ್ರ ಸರಕಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳಲ್ಲಿ -ಎರಡೂ ಕಡೆಗಳಲ್ಲಿ-ನವನಾಜಿಗಳೂ ಇಲ್ಲ, ಪೂರ್ಣ ಎದಪನ್ಥೀಯರೂ  ಇಲ್ಲ. ಆಡಳಿತ ನಡೆಸುವ ಸರಕಾರದಲ್ಲಿ ಇರುವ ಪಕ್ಷಗಳು-ಕ್ರಿಸ್ತಿಯನ್  ಡೆಮೋ ಕ್ರೆಟ್ಸ್ ಮತ್ತು ಲಿಬರಲ್ಸ್ . ವಿರೋಧ ಪಕ್ಷದಲ್ಲಿ ಮುಖ್ಯವಾಗಿ ಇರುವವರು -ಸೋಸಿಯಲಿಸ್ಟ್ ಡೆಮೋ ಕ್ರೆಟ್ಸ್ ಮತ್ತು ಗ್ರೀನ್ಸ್ ( ಹಸುರು ಪಕ್ಷದವರು -ರೈತರು, ಪರಿಸರದವರು ), ಸ್ವಲ್ಪ ಎಡದವರು .ಇದರಲ್ಲಿ ಆಳುವ ಪಕ್ಷ  ಕೇಂದ್ರದಿಂದ ಸ್ವಲ್ಪ ಬಲಕ್ಕೆ ವಾಲಿದರೆ , ವಿರೋಧ ಪಕ್ಷಗಳು ಕೇಂದ್ರದಿಂದ ಸ್ವಲ್ಪ ಎಡಕ್ಕೆ ವಾಲುತ್ತವೆ.ಆದರೆ ಅತಿ ಬಲಪಂಥೀಯ ಅಥವಾ ಪೂರ್ಣ ಎಡಪಂಥೀಯ ಗುಂಪುಗಳು ಈ ಎರಡೂ ಕಡೆ ಸ್ಥಾನ ಪಡೆಯಲು ಸಾಧ್ಯ ಆಗಿಲ್ಲ. ಇದು ಆಧುನಿಕ ಜರ್ಮನಿಯ ಜನರ ಬದಲಾದ ಮನೋಧರ್ಮವನ್ನು ತಿಳಿಸುತ್ತದೆ.ಸಮ್ಮಿಶ್ರ ಚಿಂತನೆಯ ಯುಗ ಜಗತ್ತಿನಾದ್ಯಂತ ಆರಂಭವಾಗಿದೆ.ಭಾರತ ಇದಕ್ಕೆ ಒಳ್ಳೆಯ ನಿದರ್ಶನ.ಇದು ಕೊಡುವ ಸಂದೇಶ ಏನು ಎಂಬ ಗೋಡೆ ಮೇಲಿನ ಬರಹವನ್ನು ಓದಲಾಗದವರು ಅಥವಾ ಓದಿಯೂ ಒಪ್ಪಲು ಸಿದ್ಧವಿಲ್ಲದವರು ಅನ್ಯ ಮಾರ್ಗಗಳಿಂದ ಆದರೂ ತಮ್ಮ ಅಸ್ತಿತ್ವ ತೋರಿಸಲು ಮೆರವಣಿಗೆ ಹೊರಡುತ್ತಾರೆ.ಮೇ ದಿನದ ಮೆರವಣಿಗೆ ನವನಾಜಿಗಳ ಅಂತಹ ಒಂದು ಪ್ರದರ್ಶನ.

ಮೇ ದಿನ ಶನಿವಾರ ವೂರ್ಜಬರ್ಗ್ ನಗರದಲ್ಲಿ ಒಂದು ಸುತ್ತು ಬಂದೆ. ಸರಕಾರೀ ರಜೆ ಆದ್ದರಿಂದ ಯಾವುದೇ ಅಂಗಡಿ ಕಚೇರಿ ಬಾಗಿಲು ತೆರೆದಿಲ್ಲ.ಎಲ್ಲೆಲ್ಲೋ ನೀರವ ಮೌನ , ಬೇಸಗೆಯ ತಣ್ಣನೆಯ ಬಿಸಿಲಿನಲ್ಲಿ ಪ್ರಶಾಂತ ವಾತಾವರಣದಲ್ಲಿ  ನಡೆಯುವ ದುಡಿಮೆ ಮಾಡುವುದೇ ಸೊಗಸು.ವಸಂತಕಾಲ ಬಂದಿದೆ.ಮರಗಿಡಗಳು ಹಸುರು ಚೆಲ್ಲಿ ನಳನಳಿಸುತ್ತಿವೆ.ಚಿಗುರು ಹೂವು ಅರಳುತ್ತಿವೆ. ‘ವಸಂತ ಬಂದ ,ಋತುಗಳ ರಾಜ ‘  ಎನ್ನುವಷ್ಟು ಸಂಭ್ರಮ ಪ್ರಕೃತಿಯಲ್ಲಿ. ಸುಮಾರು ಹತ್ತು ಸಾವಿರದಷ್ಟು ಜನರು ,ಪ್ರಧಾನವಾಗಿ ಎಡಪಂಥೀಯರು ನವನಾಜಿಗಳ ಮೆರವಣಿಗೆಯ ವಿರುದ್ಧ ಪ್ರತಿಭಟಿಸಿದರು.ನವನಾಜಿಗಳ ಪ್ರದರ್ಶನ ಗಮನ ಸೆಳೆಯಲಿಲ್ಲ.ಪೋಲಿಸ್ ಬಂದೋಬಸ್ತು ಜೋರಾಗಿ ಇದ್ದ ಕಾರಣ ಹಿಂಸಾಚಾರ ಸಂಭವಿಸಲಿಲ್ಲ.

ಈದಿನ ಭಾನುವಾರ ಹವಾಮಾನ ತುಂಬಾ ಚೆನ್ನಾಗಿದೆ.೧೫ ರಿಂದ  ೧೮ ಡಿಗ್ರಿ ಉಷ್ಣತೆ.ತಂಪಾದ ಹಿತವಾದ ಮೆದುವಾದ ಗಾಳಿ ಬೀಸುತ್ತಿದೆ.ಭಾನುವಾರದ ಈ ದಿನ ನಗರದ ಮುಖ್ಯ ಕೇಂದ್ರಗಳಲ್ಲಿ ಎಲ್ಲೆಲ್ಲೂ ಮಕ್ಕಳದೇ ಸಾಮ್ರಾಜ್ಯ.ಮಕ್ಕಳ ಆಟಗಳು , ಕುಣಿದಾಟ, ಬಣ್ಣ ಬಣ್ಣಗಳಲ್ಲಿ ಚಿತ್ರ ಬರೆದು ನಕ್ಕು ನಲಿಯುವ ಮಕ್ಕಳು .ನಿನ್ನೆ ದುಡಿಯುವವರ ದಿನ ಆದರೆ ,ಇಲ್ಲಿ ಇಂದು ಪಕ್ಷ ಪಂಥ ಇಲ್ಲದ ,ಭಾವಗಳ ಬೆಸಯುವ ಪುಟಾಣಿ ಮಕ್ಕಳ ದಿನ. ಗುಪ್ತ ಕಾರ್ಯಸೂಚಿ ಇಲ್ಲದ ,ನಾಳೆಯ ಈ ನಾಯಕರು ಸೌಹಾರ್ದದ ಬಣ್ಣದ ಸಂಗೀತದ ಕುಣಿತದ ಹೊಸ ನಾಡೊಂದನು ಕಟ್ಟಲು ಮೆರವಣಿಗೆ ಹೊರಟಿದ್ದಾರೆ -ವೂರ್ಜಬರ್ಗಿನ ನಗರದ ಬೀದಿಗಳಲ್ಲಿ ಮತ್ತು ನಗರವನ್ನು ಸೀಳುವ ಮಾಯಿನ್ ನದಿಯ ದಂಡೆಯ ಇಕ್ಕೆಲಗಳಲ್ಲಿ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಜರ್ಮನಿಯಲ್ಲಿ ಮೇ ದಿನ :ಎಡ -ಬಲಗಳ ಸಂಘರ್ಷ”

RSS Feed for ಬಿ ಎ ವಿವೇಕ ರೈ Comments RSS Feed

ಸರ್,
ಮನುಷ್ಯನ ಮೂಲಭೂತ ಕ್ರೌರ್ಯ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅದು ಪಡೆದುಕೊಳ್ಳುವ ವಿಕಾರಗಳನ್ನು ‘ನವನಾಜಿಗಳ’ ರೂಪದಲ್ಲಿ ನೀವು ಗುರುತಿಸಿದ್ದಿರಿ. ಬರೆಹ ಅತ್ಮಿಯವಾಗಿದೆ.

ಲಕ್ಷ್ಮಿನಾರಾಯಣ ಭಟ್ಟರಿಗೆ ನಮಸ್ಕಾರ -ನಿಮ್ಮ ಆತ್ಮೀಯ ಪ್ರತಿಕ್ರಿಯೆಗಾಗಿ.


Where's The Comment Form?

Liked it here?
Why not try sites on the blogroll...

%d bloggers like this: