ಅಗ್ರಾಳ ಲೇಖನ ಮಾಲೆ:ಸೋಡ್ತಿ

Posted on ಮೇ 1, 2010. Filed under: Uncategorized |


 ಅಗ್ರಾಳ ಪುರಂದರ ರೈ

ರಸಾಯನ ಕತಾ ಸಂಕಲನದಿಂದ (೧೯೫೨)

-ಅಗ್ರಾಳ ಪುರಂದರ ರೈ

ಸೋಡ್ತಿ ಎಂದೊಡನೆ ಕೆಲವರಿಗೆ ಸ್ವಲ್ಪ ಕಸಿವಿಸಿ. ಯುದ್ಧ ಪ್ರಾರಂಭವಾದಂದಿನಿಂದ ಸೋಡ್ತಿಗೇನು ಕಡಿಮೆ ಇಲ್ಲ. “ಅದೃಷ್ಟ ಪರೀಕ್ಷೆಗಾಗಿ, ದೇಶ ರಕ್ಷಣೆಗಾಗಿ ಸೋಡ್ತಿ ಟಿಕೆಟ್ಟು ಕೊಳ್ಳಿರಿ’ ಎಂದು ನೋಟೀಸು. ಪಟೇಲ, ಶ್ಯಾನುಭೋಗ, ರಿಜಿಸ್ಟರ್ ಆಫೀಸು, ತಾಲೂಕು ಆಫೀಸು ಎಲ್ಲೆಲ್ಲೂ ಸೋಡ್ತಿ ಟಿಕೇಟು ಮಾರಾಟ. ಅದು ಒತ್ತಾಯದಿಂದ. ಕರು ಹಾಕದ ದನ – ಎಮ್ಮೆ, ಉಳಲಿಕ್ಕೆ ಬಾರದ ಎತ್ತು – ಕೋಣ, ಯಾರಿಗೂ ಎಷ್ಟಕ್ಕೂ ಬೇಡವಾದ ಹಾಳಾದ ಗಡಿಯಾರ – ಇವು ಖಾಸಗಿ ಸೋಡ್ತಿ ಮ್ಹಾಲುಗಳು. ಇತ್ತೀಚೆಗೆ ನಮ್ಮಲ್ಲೊಂದು ಸಾರ್ವಜನಿಕ ಹಿತಾರ್ಥವಾಗಿ ಒಂದು ಸೋಡ್ತಿ ನಡೆದಿತ್ತು. ಅದು ಸ್ಮಶಾನ ಪುನರುಜ್ಜೀವನಕ್ಕೆ ಜಪಾನ್ ಟೈಂಪೀಸ್ ನೂರನಾಲ್ಕು ರೂಪಾಯಿಗೆ ಸೋಡ್ತಿ ಹಾಕಿತ್ತು. ಬೆಲೆ ಏನೋ ಆರು ರೂಪಾಯಿ. ಉಳಿಕೆ ಹಣವು ಸ್ಮಶಾನದ ಉದ್ಧಾರಕ್ಕೆ, ಸ್ಮಶಾನ ಅಧಿಕಾರಿಗಳಿಂದ. ಜೂನ್ ತಿಂಗಳಲ್ಲಿ ಅಂದರೆ ಶಾಲಾ ಪ್ರಾರಂಭ ಸಮಯದಲ್ಲಿ, ಎಲ್ಲೆಲ್ಲೂ ಕಾಫಿ ಸೋಡ್ತಿ. ಹಳೆ ತರಗತಿಯ ಹಳೆ ಪುಸ್ತಕ ಮಾರಾಟದಿಂದ ಬಂದ ಹಣ ಈ ಸೋಡ್ತಿಗಾಗಿಯೇ ಮುಗಿಯುತ್ತಿತ್ತು. ಆದರೆ ನಮ್ಮ ಸೋಡ್ತಿ ಹೊಸ ರೀತಿದ್ದು. ಎಲ್ಲರದ್ದೂ ಲಾಭಕ್ಕಾಗಿ ಸೋಡ್ತಿ, ನಾವು ಹಾಗಲ್ಲ. “”ಎಲ್ಲಾ ಬೀಜ ಒಳಗೆ, ಗೇರುಬೀಜ ಹೊರಗೆ” ಎಂಬಂತೆ.

ನನ್ನ ಹೆಂಡತಿ ಗರ್ಭಿಣಿ . ಒಂದು ದಿನ ಜಗುಲಿಯಲ್ಲಿ ಕುಳಿತು ಮಾತಾಡುತ್ತಿದ್ದೆವು. ಹಾಲಕ್ಕಿ ನರಸಣ್ಣ ಬಂದ. “ನಿಮ್ಮ ಹೆಂಡತಿ ಗಂಡು ಮಗು ಹೆರುತ್ತಾರೆ. ಮಗು ಸುಲಕ್ಷಣ, ಒಳ್ಳೇ ಕೀರ್ತಿ, ಸಂಪತ್ತು ಸಂಪಾದಿಸುವ ಲಕ್ಷಣ ಇದೆ” ಎಂದ. ಸಂತೋಷವಾಯ್ತು. ಎರಡಾಣೆ ಪಾವಲಿ ಕೊಟ್ಟೆ. “ಒಂದು ಪಟ್ಟೆ ಶಾಲು ಇನಾಮು ಮಾಡಬೇಕು” ಎಂದು ಹಠ ಹಿಡಿದ. ನಾನು ಖಾದಿಯಲ್ಲದೆ ಬೇರೆ ವಸ್ತ್ರ ಉಡುವದಿಲ್ಲ. ಕಡೆಗೆ ಖಾದಿ ಶಾಲು ಕೊಟ್ಟೆ. ನಮಸ್ಕಾರ ಮಾಡಿ ಹೊರಟು ಹೋದ. ಅಂದಿನಿಂದ ಮನಸ್ಸಿನಲ್ಲಿ ಮಗುವಿನ ನಾಮಕರಣದ ವಿಚಾರವಾಗಿ ಗುಣಾಕಾರ ಹಾಕುತ್ತಿದ್ದೆ. ಕಡೆಗೆ ನನ್ನ ಹೆಸರಿಗೆ ಪ್ರಸಾದ ಎಂದು ಸೇರಿಸಿ “ಪುರಂದರ ಪ್ರಸಾದ” ಎಂದು ನಾಮಕರಣ ಮಾಡುವುದು ಎಂಬ ನಿರ್ಧಾರಕ್ಕೆ  ಬಂದೆ.
ಇಂದು ನಮ್ಮಲ್ಲಿ ಮಗುವಿಗೆ ನಾಮಕರಣ. ಮಗು ಹೆಣ್ಣು. ಭಾವ ಆಫೀಸಿನಿಂದ ರಜಾ ಪಡಕೊಂಡು ಬಂದಿದ್ದ. ಅತ್ತೆ, ಮಾವ ಎಲ್ಲಾ ಬಂದಿದ್ದಾರೆ. ಅಕ್ಕನಂತೂ ಮನೆಯಲ್ಲೇ ಇದ್ದಾಳೆ. ಜೋಯಿಸರು ಬಂದವರು “ರೇವತಿ ನಕ್ಷತ್ರವಾದ್ದರಿಂದ “ರೇವತಿ’ ಎಂದೇ ಇಡೋಣ. ರುದ್ರಾಭಿಷೇಕ ವಗೈರೆ ಮಾಡಿಸುವಾಗ ನಕ್ಷತ್ರ ಹೆಸರು ಮರೆತು ಹೋಗುವುದಕ್ಕೂ ಅನುಕೂಲ” ಎಂದರು. ನನ್ನಕ್ಕ “ನಮ್ಮ ತಾಯಿ ಹೆಸರಿಡೋಣ” ಎಂದಳು. ನನ್ನ ಹೆಂಡ್ತಿ “”ನನ್ನ ಅತ್ತೆ ಹೆಸರಿಟ್ಟರೆ ನನಗೆ ಕರೆಯಲಿಕ್ಕಾಗುವುದಿಲ್ಲ. ಅದು ಬೇಡ” ಎಂದಳು. ಭಾವ “”ಹೊಸ ರೀತಿ ಹೆಸರಿಡಬೇಕು. ಅಮೃತ ಕಲಾ, ಕಲಾರಾಣಿ, ನವಪ್ರತಿಭಾ, ಜೀವನಕಲಾ” ಮುಂತಾಗಿ ಸೂಚಿಸಿದ. ಅತ್ತೆ “”ದೇವರ ಹೆಸರಾಗಬೇಕು. ಲಕ್ಷ್ಮೀ, ಸರಸ್ವತಿ, ಗೌರಿ, ಸೀತಾ ಯಾವುದಾದರೂ ಆಗಬಹುದು” ಎಂದರು. ಮಾವನವರು ಅತ್ತೆ ಮೇಲಣ ಪ್ರೀತಿ ತೋರಿಸುವ ಸಲುವಾಗಿ “”ಮಗುವಿನ ಅಜ್ಜಿ ಹೆಸರಿಡೋಣ” ಅಂದರು. ನನಗೆ ರಾಜಕೀಯಲ್ಲಿ ಮೆಚ್ಚು. ನಾನಂದೆ “”ಸರೋಜಿನಿ, ಕಮಲಾದೇವಿ ಇವರು ರಾಜಕೀಯ ರಂಗದಲ್ಲಿ ಹೆಚ್ಚು ಹೆಸರಾದವರು. ಈ ಪೈಕಿ ಯಾವುದೂ ಆಗಬಹುದು”. ಹೆಂಡತಿಗೆ ಪುಸ್ತಕ ಓದುವುದರಲ್ಲಿ ಸಿನಿಮಾ ನೋಡುವುದಲ್ಲಿ ಪ್ರೀತಿ ಹೆಚ್ಚು. ಅವಳು “” “ಲೀಲಾ’ ಎಂದಾಗಬಹುದು. ಹೆಸರಾಂತವರಲ್ಲಿ ಲೀಲಾ ಎಂಬ ಹೆಸರಿನವರೇ ಲೆಕ್ಕಕ್ಕೆ ಹೆಚ್ಚು. ಸಿನೇಮಾದಲ್ಲಿ “ಲೀಲಾ ಚಿಟ್ನೀಸ್, ಲೀಲಾ ದೇಸಾಯಿ, ಸಾಹಿತ್ಯದಲ್ಲಿ ಲೀಲಾ ಬಾಯಿ ಕಾಮತ್, ಲೀಲಾ ಕಾರಂತ’ ” – ಎಂದು ಉಪನ್ಯಾಸವನ್ನೇ ಪ್ರಾರಂಭಿಸಿಬಿಟ್ಟಳು.
ಇದೊಂದು ದೊಡ್ಡ ಸಮಸ್ಯೆಯಾಯಿತು. ಒಬ್ಬರ ಸೂಚನೆ ಅನುಮೋದಿಸಿದರೆ ಉಳಿದವರಿಗೆ ಬೇಸರ. ಎಲ್ಲರ ಸೂಚನೆಯನ್ನಂತೂ ಸ್ವೀಕರಿಸುವುದು ಸಾಧ್ಯವಲ್ಲದ ಕೆಲಸ.
ಕಡೆಗೆ ನಾವೆಲ್ಲರೂ ಒಮ್ಮತದಿಂದ ಒಂದು ತೀರ್ಮಾನಕ್ಕೆ  ಬಂದೆವು. ಮೇಲೆ ಸೂಚಿಸಿದ ಎಲ್ಲಾ ಹೆಸರುಗಳ ಒಂದೊಂದು ಚೀಟಿ ಬರೆದೆವು. ಬರಹ ಬಾರದ ಮಕ್ಕಳಿಂದ ಚೀಟಿ ತೆಗೆಸುವುದು, ಯಾವ ಚೀಟಿ ಮೊದಲು ಬಂತೋ ಅದೇ ಖಾಯಂ ಹೆಸರು.
ಚೀಟಿ ಬರೆದಾಯ್ತು. ಮಗುವೊಂದು ನೋಡಿ ತೆಗೆದುಕೊಟ್ಟಿತು. ನಾನು ಚೀಟಿ ಓದಿದೆ.
“”ಜೀವನ ಲತಾ”

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: