ಅಗ್ರಾಳ ಲೇಖನ ಮಾಲೆ:ದೊಡ್ಡ ಉಪಕಾರ

Posted on ಏಪ್ರಿಲ್ 28, 2010. Filed under: ನನ್ನ ಅಪ್ಪ.. |


 ಅಗ್ರಾಳ ಪುರಂದರ ರೈ

ರಸಾಯನ ಕತಾ ಸಂಕಲನದಿಂದ (೧೯೫೨)

-ಅಗ್ರಾಳ ಪುರಂದರ ರೈ

ಚೋಮಕ್ಕ ನಮ್ಮ ಮನೆಯ ಅಜ್ಜಿ. “ತುರಿಸುವ ಕಜ್ಜಿ’ ಮನೆ ಮಕ್ಕಳಿಟ್ಟ ಬಿರುದು. ಏನಾದರೂ ಕಿರಿ ಕಿರಿ ಮಾಡುತ್ತಾ ಇರೋದು ಅವಳ ಸ್ವಭಾವ. ಸ್ವರವೆತ್ತಿ ನಾಲ್ಕು ಮಾತು ಆಡಿದರೆ ಸುಮ್ಮನಾಗುತ್ತಾಳೆ. ತುರಿಸುವ ಕಜ್ಜಿ ಯಾವಾಗಲೂ ತುರಿಸುತ್ತಾ ಇರುತ್ತೆ. ಬಿಸಿ ನೀರು ಬಿದ್ದೊಡನೆ ಕೊಂಚ ಶಾಂತ. ಅದಕ್ಕೋ ಏನೋ ಮಕ್ಕಳ ಬಿರುದು. ನಮ್ಮಿಂದ ದೂರವಾಗುತ್ತಾ ಯಮರಾಯನಿಗೆ ಸಮೀಪಿಸುವಾಗ ಜನರು ಬಹುಮಂದಿ ಆ ಗುಣವನ್ನೇ ಹೊಂದುತ್ತಾರೆ. ಇರಲಿ ಅವಳಲ್ಲಿರುವ ಒಂದು ಗುಣ ಅಂದರೆ ಸನ್ಯಾಸಿಗಳನ್ನು (ಅಲ್ಲ) ಗಡ್ಡ ಬೆಳೆಸಿದವರನ್ನು ಕಾವಿ ವಸ್ತ್ರ ಉಟ್ಟವರನ್ನು, ರುದ್ರಾಕ್ಷಿ ಸರ ತೊಟ್ಟವರನ್ನು “ಜೈ ಶಂಕರ’ ಅನ್ನುವವರನ್ನು ಕಂಡರೆ ಬಹಳ ಪ್ರೀತಿ. ಒಂದು ದಿವಸ ಒಂದು ವಿಚಿತ್ರ ಘಟನೆ ನಡೆಯಿತು. ಮನೆಯಲ್ಲಿ ಎಲ್ಲರೂ ಗೈರುಹಾಜರು. ಸಿನೇಮಾ ಮಂದಿರದಲ್ಲಿ ಹಾಜರಾಗಿದ್ದೇವೆ. ಒಬ್ಬ ಕಲ್ಲುಕುಟ್ಟಿಗ ಮನೆಯಲ್ಲೇನಾದರೂ ಕೆಲಸವಿದೆಯೇ ಎಂದು ವಿಚಾರಿಸಲಿಕ್ಕಾಗಿ ಬಂದ. ಕಲ್ಲುಕುಟಿಗರ ವಸ್ತ್ರ ಬಿಳಿ ಇದ್ದರೂ ಅವರ ಉದ್ಯೋಗದಿಂದಾಗಿ ಕಾವಿ ಬಣ್ಣ ತಾಳುತ್ತೆ. ಆ ಬಣ್ಣದಿಂದಾಗಿ ಅಜ್ಜಿ ಇವನೊಬ್ಬ ಸಾಧು ಸಂನ್ಯಾಸಿಯೆಂದೇ ಯೋಚಿಸಿ ಹಾಲು ಹಣ್ಣು ಕೊಟ್ಟು ಉಪಚರಿಸಿದಳು. ಆತ ಈಕೆಗೆ ಮುದಿ ಭ್ರಾಂತು ಹಿಡಿದಿದೆ ಎಂದು ಮನದಲ್ಲಿ ಯೋಚಿಸಿದರೂ ಸಂತೋಷದಿಂದ ಕೊಟ್ಟವುಗಳನ್ನು ನುಂಗಿಯೇ ಬಿಟ್ಟ. ಆ ಸಮಯಕ್ಕೆ ನಾವೆಲ್ಲರೂ ಬಂದೆವು. ನಡೆದ ಸಂಗತಿಯನ್ನು ಕೇಳಿ ಅಜ್ಜಿಗೆ ಹಿಡಿಸಲಾರದಷ್ಟು ನಾಚಿಗೆಯಾಯ್ತು.

ವಿಷು ಸಂಕ್ರಮಣ ಕಳೆದು ಎರಡನೇ ದಿವಸ ನಾವು ತಿರುಪತಿ ಯಾತ್ರೆ ಬೆಳೆಸಿದ್ದೇವೆ. ಅಜ್ಜಿಯನ್ನು ಕರಕೊಂಡು ಹೋದರೆ ಹಾದಿಯಲ್ಲಿ ಬೊಜ್ಜಕ್ಕೆ ದಾರಿಯಾದರೇನು ಗತಿ ಎಂದು ಬಿಟ್ಟು ಹೋಗಿದ್ದೇವೆ. ನಾವೆಲ್ಲರೂ ಗೋವಿಂದ ಅಂದುಕೊಂಡು ಗಿರಿ ಹತ್ತಿದೆವು. ದೊಡ್ಡಗಿರಿ ವೆಂಕಟಾಚಲಪತಿಯ ಕರುಣೆಯಿಂದ ಆಯಾಸದ ಸ್ಥಾನದಲ್ಲಿ ನಿರಾಯಾಸ ಕುಳಿತಿತ್ತು. ಸುಸಂದರ್ಭವೋ ಎಂಬಂತೆ ಗಿರಿ ಮೇಲೆ ತೆಪೋತ್ಸವ. ವರ್ಷಕ್ಕೊಮ್ಮೆ ಈ ಜಾತ್ರೆ ಜರಗುತ್ತೆ . ಅದರ  ಬೆಡಗು ವರ್ಣಿಸುವುದೆಂದರೆ ನಾಲಿಗೆಗಾಗಲೀ ಲೇಖನಿಗಾಗಲೀ ಮಿಕ್ಕಿದ ಕೆಲಸ. ಆ ಎತ್ತರದ ಗಿರಿಯಿಂದ ಕೆಳಗೆ ಕಾಣುವ ಪ್ರಕೃತಿ, ಪಟ್ಟಣ ಎಷ್ಟು ಸೊಗಸು. ಏನು ಅಂದ ಚಂದ!
ಇತ್ತ ಮನೆಯಲ್ಲಿ ನಡೆದ ವಿಚಾರ. ನಾವು ಮನೆ ಬಿಟ್ಟ ಮರುದಿವಸವೇ ಯಾರೋ ಭಿಕ್ಷುವೊಬ್ಬನು ನೆರೆಕರೆಯವರಲ್ಲಿ ಬಂದವನು, “ನಮ್ಮ ಮನೆಯವರೆಲ್ಲರೂ ತಿರುಪತಿಗೆ ಯಾತ್ರೆಗೆ ಹೋಗಿದ್ದಾರೆ. ಮುದುಕಿಯೊಂದೇ ಬಾಕಿ. ಅದಕ್ಕೆ ಸಾಧು ವೇಷ ಕಂಡರೆ ಬಹಳ ಮೆಚ್ಚು’ ಎಂದೆಲ್ಲಾ ತಿಳಿದುಕೊಂಡು ನಮ್ಮ ಮನೆಗೆ ಸಾಗಿದ. ಭಿಕ್ಷು ಉಟ್ಟಿದ್ದು ಕಾವಿವಸ್ತ್ರ. ಕೊರಳಲ್ಲಿ ರುದ್ರಾಕ್ಷಿ ಸರ. ಗಡ್ಡವಂತೂ ಗುಡ್ಡೆಮುಳಿ ಹುಲ್ಲು ಬೆಳೆದ ಹಾಗೆ ಬೆಳೆದಿತ್ತಂತೆ. ಮನೆಗೆ ಬಂದು ಅಜ್ಜಿಯನ್ನು ಕರೆದು ಗೊತ್ತಿದ್ದ ನಾಲ್ಕಾರು ವಿಷಯಗಳನ್ನು ಭವಿಷ್ಯ ರೂಪವಾಗಿ ಹೇಳಿದ. ನಾವು ವಾಪಾಸು ಬರುವ ದಿವಸ ವಿಚಾರಿಸಿಕೊಂಡು ಮುಂಚಿನ ದಿವಸವೇ ಬೇರೆ ಕಡೆಗೆ ಹೋಗಲಿಕ್ಕಿರುವುದಾಗಿ ತಿಳಿಸಿದ. ಅಷ್ಟರತನಕ ಆಶ್ರಯ ಬೇಡಿದ. ಹೋಗುವುದಕ್ಕೆ ಮೊದಲು “ದೊಡ್ಡ ಉಪಕಾರ’ ಮಾಡುವುದಾಗಿ ಭಾಷೆ ಇತ್ತ. ಜೀವನಕ್ಕೆ ವಿಶೇಷವಾಗಿ ಹಣ್ಣು, ದ್ರಾಕ್ಷೆ, ಹಾಲು, ತುಪ್ಪ ಇತ್ಯಾದಿ ರುಚಿ ಪೌಷ್ಟಿಕ ಆಹಾರಗಳನ್ನೇ ಕೊಡಬೇಕಾಗಿ ಬೇಡಿಕೊಂಡ. ಮನೆ ಸಮೀಪವಿರುವ ಮರದ ಬುಡವನ್ನೇ ತನ್ನ ಆಶ್ರಮವನ್ನಾಗಿ ಮಾಡಿಕೊಂಡ. ನಾವು ಬರುವ ಹತ್ತು ದಿವಸಗಳಲ್ಲಿ ಹೊಟ್ಟೆಗೆ ಸರಿಯಾಗಿ ಅನ್ನವಿಲ್ಲದೆ ನರಳುತ್ತಿದ್ದ ಭಿಕ್ಷುವು ಅಜ್ಜಿಯ ಕಣ್ಣಿಗೆ ಮಣ್ಣೆರಚಿ ಹಾಲು ಹಣ್ಣುಗಳನ್ನು ಸೌಖ್ಯದಿಂದ ತಿಂದು ತೇಗಿದನು. ಹೊರಡುವ ದಿವಸ ಬಂತು. ಭಿಕ್ಷು ಹೊರಡಲನುವಾದ.
ಅಜ್ಜಿ : “”ಮಹಾಶಯರೇ! ಕೊಟ್ಟ ಮಾತು ಸಲಿಸಿರಿ. “ದೊಡ್ಡ ಉಪಕಾರ’ ಮಾಡುವುದಾಗಿ ಹೇಳಿದ್ದೀರಿ. ದಯವಿಟ್ಟು ನನ್ನ ಭಾಗ್ಯವನ್ನು ಬೆಳೆಸಿರಿ. ನೀವು ಈ ಕೊಂಚ ಕಾಲವಾದರೂ ನನ್ನ ಮಣ್ಣಲ್ಲಿ ವಾಸವಾಗಿದ್ದು ನನ್ನ ಉಪಚಾರಗಳನ್ನು ಸ್ವೀಕರಿಸಿದ್ದಕ್ಕಾಗಿ ನಾನು ತುಂಬಾ ಕೃತಜ್ಞಳು. ನಿಮ್ಮಂತಹ ದೊಡ್ಡ ಯೋಗಿಗಳು ನನ್ನ ಕಣ್ಣಿಗೆ ಕಂಡದ್ದೇ ನನ್ನ ಭಾಗ್ಯ. ಮಹಾಯೋಗಿಗಳಾಗಿದ್ದೀರಿ. ಇಷ್ಟು ದಿವಸ ನಿಂತದ್ದೇ ನನ್ನ ಪುಣ್ಯ. ನನಗೆ ಈ ಜನ್ಮದಲ್ಲೂ ಮುಂದಿನ ಜನ್ಮದಲ್ಲೂ ಪ್ರಯೋಜನವಾಗುವಂತಹ ದೊಡ್ಡ ಉಪಕಾರವನ್ನೇ ಮಾಡಿರಿ”. ಎಂದೆಲ್ಲಾ ಮಹೋಕ್ತಿಗಳು ಅಜ್ಜಿ ಬಾಯಿಯಿಂದ ಹೊರಟವು.
ಭಿಕ್ಷುವು : “”ಅಮ್ಮ ಒಳಗಿನಿಂದ ಒಂದು ಸೂಜಿ ತನ್ನಿರಿ. ನನ್ನ ಮಾತು ನಡಿಸುತ್ತೇನೆ. ಪ್ರತಿಯೊಬ್ಬರ ಬಾಯಿಯಿಂದಲೂ “ದೊಡ್ಡ ಉಪಕಾರ’ ಎಂದೇ ಹೇಳಿಸುತ್ತೇನೆ” ಎಂದು ಗಂಭೀರವಾಗಿ ನುಡಿದನು.
ಅಜ್ಜಿ ಸೂಜಿಯನ್ನು ತಂದು ಆತನ ಕೈಗಿತ್ತಳು. ತನ್ನ ಗಂಟುಮೂಟೆಗಳನ್ನೆಲ್ಲಾ ಕಟ್ಟುವ ಕೆಲಸ ಮುಗಿಸಿದ ನಂತರ ಸೂಜಿಯ ತುದಿಯಿಂದ ಅಜ್ಜಿಯ ಕಣ್ಣ ಬದಿಗೆ ಚುಚ್ಚಿ ಓಡಿ ಹೋದನು. ಅಜ್ಜಿಯು ಬಾಯಿ ಬಾಯಿ ಬಡಕೊಂಡು ಕೂಗುವುದನ್ನು ಕೇಳಿ ನೆರೆಕರೆಯವರು ಓಡಿ ಬಂದರು. ಗದ್ದಲ ಕೇಳಿ ಜನ ನೆರೆದರು. ಅಜ್ಜಿಯ ಕಣ್ಣ ಬದಿಯಿಂದ ರಕ್ತ ಧಾರಾಪೂರ್ವಕವಾಗಿ ಹರಿಯುತ್ತಾ ಇತ್ತು. ನಡೆದ ಸಂಗತಿಯೆಲ್ಲಾ ಅಜ್ಜಿ ತಿಳಿಸಿದಳು. ಬಂದವರೆಲ್ಲಾ “ದೊಡ್ಡ ಉಪಕಾರ’ ಸ್ವಲ್ಪ ಆಚೆ ಈಚೆ ಆಗುತ್ತಿದ್ದರೆ ಕಣ್ಣೇ ಹೋಗುತ್ತಿತ್ತು ಪಾಪ! ಸಾಯುವ ಕಾಲದಲ್ಲಿ ಕುರುಡಿಯಾಗಿ ಸಾಯಬೇಕಿತ್ತು. ತನ್ನ ಬಂಧು ಬಳಗದವರನ್ನು ಕಣ್ತುಂಬ ನೋಡಿ ಸಾಯುವ ಭಾಗ್ಯವು ಸಹಾ ಇರುತ್ತಿರಲಿಲ್ಲ. “ದೊಡ್ಡ ಉಪಕಾರ’ ಎಂದು ಎಷ್ಟು ಸಲ ಹೇಳಿದರೂ ಸಾಲದು” ಎಂದರು.
ಎಲ್ಲರ ಬಾಯಲ್ಲೂ ಅದೇ ಮಾತು. ಆದರೆ ಆತ ಪರಾರಿ.
ಮರುದಿವಸ ನಾವು ಬಂದೆವು. ಮೇಲಿನ ಸಂಗತಿಗಳೆಲ್ಲಾ ನೆರೆಕರೆಯವರಿಂದಲೂ ಅಜ್ಜಿಯಿಂದಲೂ ತಿಳಿಯಿತು. ನಾವು ಕೂಡ “ದೊಡ್ಡ ಉಪಕಾರ’ ಎಂದೇ ಹೇಳಬೇಕಾಯ್ತು.
“”ನೀವೇನನ್ನುತ್ತೀರಿ?”
Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: