ಬ್ರೇಕ್ ಫಾಸ್ಟ್ ಏನು? – ಗಣೇಶಭವನದ ಗಂಜಿ

Posted on ಏಪ್ರಿಲ್ 26, 2010. Filed under: Uncategorized |


ಬೆಳಗ್ಗೆ ಎದ್ದ ಕೂಡಲೇ ಮನೆಯಲ್ಲಿ ನಾನು ಈಗ  ಕೇಳುವ ಮೊದಲ ಪ್ರಶ್ನೆ :  ‘ತಿಂಡಿ ಏನು? ‘ ಅದಕ್ಕೆ ಉತ್ತರ ದಿನವೂ ಬೇರೆ ಬೇರೆ ಆಗಿರಬೇಕು ಎನ್ನುವುದು ನನ್ನ ಆಸೆ. ಇಡ್ಲಿ, ದೋಸೆ -ಅದರ ಬಹುರೂಪಗಳಲ್ಲಿ , ಉಪ್ಪಿಟ್ಟು , ಸೇಮಿಗೆ, ಪುಂಡಿ, ಕೊಟ್ಟಿಗೆ, ರೊಟ್ಟಿ  ಇತ್ಯಾದಿ ಇತ್ಯಾದಿ ಇವು ಒಂದೊಂದು ದಿನ ಬೆಳಗ್ಗಿನ ಹೊತ್ತು ನಮ್ಮ ನಾಲಗೆಯನ್ನು ಆಳಬೇಕೆಂದು ಬಯಸುವ ಕಾಲ ಈಗಿನದು. ಇಂಗ್ಲಿಶ್ ಕಲಿತ ಮೇಲೆ ಗೊತ್ತಾದ ಶಬ್ದ – ‘ಬ್ರೇಕ್ ಫಾಸ್ಟ್’ . ಇಡೀ ರಾತ್ರಿ ಉಪವಾಸ ಇದ್ದು (ನಿದ್ರೆಯಲ್ಲಿ ತಿನ್ನುವ ಅವಕಾಶ ಇಲ್ಲದ ಕಾರಣ ), ಬೆಳಗ್ಗೆ ಉಪವಾಸವನ್ನು ಮುರಿಯುವ  ‘ಆಚರಣೆ’ ಯೇ ಈ  ‘ ಬ್ರೇಕ್ ಫಾಸ್ಟ್’

ಹೋಟೆಲ್ ಗೆ ಬ್ರೇಕ್ ಫಾಸ್ಟ್ ಗೆ ಹೋಗಿ ತಿಂಡಿ ಏನಿದೆ ಎಂದು ಕೇಳಿದರೆ , ‘ ದಶೋತ್ತರ  ನಾಮ ಪಠಣ ‘ ಆಗುತ್ತದೆ. ಕೊನೆಗೆ ಕೇಳಿಸಿದ ಒಂದೋ ಎರಡನ್ನೋ ಆಹ್ವಾನಿಸಿ, ಫಾಸ್ಟಾಗಿ  ಒಂದು ರಾತ್ರಿಯ ಉಪವಾಸವನ್ನು ತಂದ ತಿಂಡಿಗಳನ್ನು ಒಡೆಯುವುದರ ಮೂಲಕ ಮುರಿದು, ‘ಬ್ರೇಕ್ ಫಾಸ್ಟ್ ‘ ಆಚರಣೆ ಮುಗಿಸುತ್ತೇವೆ. ನಾವೇ ದುಡ್ಡು ಕೊಡುವುದಾದರೆ, ಕಡಮೆ ಕಬಳಿಕೆ ; ಬಿಲ್  ಬೇರೆಯವರು ಕೊಡುವುದಾದರೆ, ಕೆಲವೊಮ್ಮೆ ಹೊಟ್ಟೆ ‘ ಬ್ರೇಕ್ ‘ ಆಗುವಷ್ಟು . ವಸತಿಗಾಗಿ ಲಕ್ಸುರಿ ಹೋಟೆಲ್ ವಾಸ. ಆದರೆ , ಅದರಲ್ಲಿ ‘ಕಾಂಪ್ಲಿಮೆಂಟರಿ ಬ್ರೇಕ್ ಫಾಸ್ಟ್’ ಸೇರಿರುತ್ತದೆ. ಹೋಟೆಲ್ ಗಳ ಅಂತಸ್ತುಗಳಿಗೆ ಅನುಸಾರವಾಗಿ  ತಿಂಡಿ ತಿನಿಸುಗಳ ಸೂಪರ್ ಮಾರ್ಕೆಟ್ ನ್ನು ಬೆಳಗ್ಗೆ ತೆರೆದಿರುತ್ತಾರೆ. ಅತಿ ಲಕ್ಸುರಿ ಹೋಟೆಲ್ ಆಗಿದ್ದರಂತೂ ಕಾಂಟಿನೆಂಟಲ್ -ಇಂಟರ್ ಕಾಂಟಿನೆಂಟಲ್  ತಿನಿಸುಗಳ ಬ್ರಹತ್ ಪ್ರದರ್ಶನವೊಂದು ನಮ್ಮನ್ನು ಕಕ್ಕಾಬಿಕ್ಕಿ ಮಾಡುತ್ತದೆ. ಯಾವುದನ್ನು ತೆಗೆದುಕೊಳ್ಳುವುದು, ಯಾವುದನ್ನು ಬಿಡುವುದು ಎಂದು ನಿರ್ಧರಿಸುವುದು ಅಸಾಧ್ಯ ಆಗುತ್ತದೆ. ಎಲ್ಲವನ್ನೂ ಸ್ವಲ್ಪ ಸ್ವಲ್ಪ ತೆಗೆದುಕೊಂಡರೂ  ಹೋಟೆಲ್  ಬಿಟ್ಟು ಹಾಸ್ಪಿಟಲ್  ಸೇರಬೇಕಾಗುತ್ತದೆ. ಬ್ರೆಡ್ ಗಳ ಚೀಸ್ ಗಳ ದಶರೂಪಕದಿಂದ ತೊಡಗಿ  ಜ್ಯೂಸ್ ಕಾಫಿ ಟೀಗಳವರೆಗೆ ಬಂದಾಗ ಶತಕ ಬಾರಿಸುವ ಅವಕಾಶ ಇರುತ್ತದೆ. ಇಂತಹ ಬ್ರೇಕ್ ಫಾಸ್ಟ್ ತೆಗೆದುಕೊಂಡರೆ, ಮತ್ತೆ ಲಂಚ್ ಡಿನ್ನರ್ ಗಳ ಗೊಡವೆಗೆ ಹೋಗಬೇಕಾಗಿಲ್ಲ. ಹೀಗಾಗಿಯೋ ಏನೋ  ಅನೇಕ ದೇಶಗಳಲ್ಲಿ ಈಗ ‘ ಬ್ರಂಚ್ ‘ ( ಬ್ರೇಕ್ ಫಾಸ್ಟ್ + ಲಂಚ್ ) ರೆಸ್ಟೋರೆಂಟ್  ಗಳು ತಲೆ ಎತ್ತಿವೆ. ಮಧ್ಯಾಹ್ನ ಹನ್ನೆರಡು ವರೆಗೆ ಇಲ್ಲಿ ‘ ಬ್ರಂಚ್ ‘ ಸಿಗುತ್ತದೆ. ಮತ್ತೆ ‘ ಲಂಚ್ ‘ ಬೇಕಾಗಿಲ್ಲ.

‘ಫಾಸ್ಟ್ ಫುಡ್ ‘ ಹೆಸರಿನಲ್ಲಿ ಕಳೆದ ದಶಕಗಳಲ್ಲಿ ನಮ್ಮಲ್ಲಿ ಆರಂಭ ಆದ ‘ದರ್ಶಿನಿ’ಗಳು  ಬ್ರೇಕ್ ಫಾಸ್ಟ್ ನ್ನು  ತಡಮಾಡದೆ ತ್ವರಿತವಾಗಿ ಕೊಡಲು ಹುಟ್ಟಿಕೊಂಡವು. ದೊಡ್ಡ ರೆಸ್ಟೋರೆಂಟ್ ಗೆ ಹೋಲಿಸಿದರೆ ಕಡಮೆ ಬೆಲೆಗೆ ಹೊಟ್ಟೆ ತುಂಬಿಸಲು ನೆರವಾದವು.

ಇಷ್ಟೆಲ್ಲಾ ‘ ಬೆಳಗ್ಗಿನ ಹೊಟ್ಟೆಯ ಪುರಾಣ ‘ ಹೇಳಲು ಹೊರಟದ್ದು – ನಲುವತ್ತು ವರ್ಷಗಳ ಹಿಂದಿನ ನನ್ನ ಅನುಭವವೊಂದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವುದಕ್ಕೆ. ಕಾಲ : ೧೯೬೮. ಸ್ಥಳ : ಮಂಗಳೂರು. ನಾನು ಕನ್ನಡ ಎಂ ಎ ವಿದ್ಯಾರ್ಥಿಯಾಗಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದ್ದು ಜುಲೈ ೧೯೬೮ರಲ್ಲಿ.  ಪುತ್ತೂರಿನಲ್ಲಿ ಹೈಸ್ಕೂಲು ಮತ್ತು ಕಾಲೇಜು ಶಿಕ್ಷಣ ಪಡೆದ ನಾನು ಮಂಗಳೂರನ್ನು ಸರಿಯಾಗಿ ನೋಡಿದ್ದು ಆಗಲೆ. ಅಪ್ಪ ನನ್ನನ್ನು ಮಂಗಳೂರಿಗೆ ಕರೆದುಕೊಂಡು ಬಂದು ಅತ್ತಾವರದಲ್ಲಿ ಒಂದು ಬಾಡಿಗೆ ಕೊಠಡಿ ಗೊತ್ತುಮಾಡಿ ಕೊಟ್ಟರು. ಮುಂದಿನದು ಹೊಟ್ಟೆಯ ಪ್ರಶ್ನೆ. ಆಗ ನನ್ನನ್ನು ಅವರು ಕರೆದುಕೊಂಡು ಹೋಗಿ ತೋರಿಸಿದ್ದು ಮಂಗಳೂರಿನ  ‘ಗಣೇಶ ಭವನ ‘ವನ್ನು. ಅದು ಮಂಗಳೂರಿನ ಆಗಿನ ಬಸ್ ಸ್ಟ್ಯಾಂಡ್ ಹಂಪನಕಟ್ಟೆಯ ಬಳಿಯ ಕಾರ್ನಾಡು ಸದಾಶಿವ ರಾವ್ ರಸ್ತೆಯ ಪಕ್ಕ ಇರುವ ಶರವು ಗಣಪತಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಬಲದ ತಿರುವಿನಲ್ಲಿ ಇತ್ತು. ‘ಇತ್ತು’ ಎನ್ನುವ ಭೂತಕಾಲ ರೂಪವನ್ನು ಬಳಸಲು ಕಾರಣ , ಗಣೇಶ ಭವನ ಮರೆಯಾಗಿ ಅನೇಕ ವರ್ಷಗಳೇ ಸಂದಿವೆ. ಈಗ ಆ ಜಾಗದಲ್ಲಿ ಹೊಸ ಕಟ್ಟಡಗಳು ಮಳಿಗೆಗಳು ಎದ್ದುನಿಂತಿವೆ. ಈಗಿನ ಪೀಳಿಗೆಯವರು ‘ ಗಣೇಶ ಭವನ’ದ ಹೆಸರನ್ನೇ ಕೇಳಿರಲಾರರು.

ಚಿತ್ರ: ನಂದೊನ್ಮಾತು ಬ್ಲಾಗ್

ಆ ‘ ಗಣೇಶಭವನ’ ದ ಬೆಳಗ್ಗಿನ ‘ಗಂಜಿ ಊಟ ‘  ಮಂಗಳೂರಿನಲ್ಲಿ ತುಂಬಾ ಜನಪ್ರಿಯ ಆಗಿತ್ತು. ಈಗಲೂ ಮಂಗಳೂರಿನಲ್ಲಿ ಗಂಜಿ ಊಟದ ಹೋಟೆಲ್ ಗಳು ಇವೆ. ಆದರೆ ‘ಗಣೇಶಭವನ’ದ ಗಂಜಿ ಊಟದ ಸೊಗಸೇ ಬೇರೆ. ಅದು ಬ್ರೇಕ್ ಫಾಸ್ಟಿನ ಗಂಜಿ ಊಟ ಅಷ್ಟೇ ಅಲ್ಲ , ಅದೊಂದು ಅಂತಸ್ತು ರಹಿತ  ಮತ್ತು ಈಗಿನ ಆಧುನಿಕ ಪರಿಭಾಷೆಯ ‘ಬ್ರಂಚ್ ‘ ಕೂಡಾ ಆಗಿತ್ತು. ಬೆಳಗ್ಗೆ ಎಂಟು ಗಂಟೆಗೆ ಆರಂಭ. ಮುಂಚೆ ಹೋದವರು ಹೊರಗೆ ಕಾದಿರಬೇಕು..ಅಲ್ಲಿಗೆ ಬರುತ್ತಿದ್ದವರಲ್ಲಿ ಹಿರಿಯರೇ ಜಾಸ್ತಿ. ಕಪ್ಪುಕೋಟಿನ ವಕೀಲರೇ ಹೆಚ್ಚಿನ ಸಂಖ್ಯೆ ಯಲ್ಲಿ ಇರುತ್ತಿದ್ದರು. ಒಳಗೆ ಹಜಾರದಲ್ಲಿ ಎಲ್ಲರೂ ಸಾಲಾಗಿ ನೆಲದಲ್ಲಿ ಕುಳಿತುಕೊಳ್ಳುವುದು. ಒಮ್ಮೆಗೆ ಐವತ್ತಕ್ಕಿಂತ ಹೆಚ್ಚು ಮಂದಿ ಕುಳಿತುಕೊಳ್ಳುತ್ತಿದ್ದ ನೆನಪು. ಬಾಳೆಎಲೆಗೆ ಬಡಿಸುತ್ತಿದ್ದದ್ದು ಗಂಜಿ. ‘ಗಂಜಿ’ ಎಂದಾಗ ಒಂದು ಮಾತು ಹೇಳಬೇಕು. ನಾವು ಹಳ್ಳಿಯಲ್ಲಿ ಚಿಕ್ಕ ಹುಡುಗರಾಗಿದ್ದಾಗ ಮನೆಯಲ್ಲಿ  ಬೆಳಗ್ಗೆ ತಿಂಡಿ ಮಾಡುತ್ತಿರಲಿಲ್ಲ. ಆಗ ಗಂಜಿ ಊಟ. ಕುಚ್ಚಲು ಅಕ್ಕಿಯನ್ನು ಚೆನ್ನಾಗಿ ಬೇಯಿಸಿ ಅದರ ತಿಳಿಯನ್ನು ಬಸಿಯದೆ, ಬಡಿಸುವ ತಿಳಿ ಸಹಿತದ ಅನ್ನವೆ ‘ಗಂಜಿ’. ಅದಕ್ಕೆ ಸಂಗಾತಿ ಯಾಗಿ ಚಟ್ನಿ, ಉಪ್ಪಿನಕಾಯಿ, ಬೆಣ್ಣೆ ಅಥವಾ ತುಪ್ಪ, ಕೆಲವೊಮ್ಮೆ ಒಂದು ಬಗೆಯ ಪಲ್ಯ -ಇವುಗಳಲ್ಲಿ ಒಂದು ಅಥವಾ ಕೆಲವು ಅನುಕೂಲ ನೋಡಿಕೊಂಡು ಇರುತ್ತಿದ್ದುವು. ಅದಕ್ಕೂ  ಹಿಂದೆ ಬೆಳಗ್ಗೆ ಬ್ರೇಕ್ ಫಾಸ್ಟ್ ಸ್ಥಾನದಲ್ಲಿ ‘ತಂಗುಳನ್ನ’ ಇರುತ್ತಿತ್ತು. ‘ತಂಗುಳನ್ನ’ ಒಂದು ಅರ್ಥದಲ್ಲಿ ‘ಪಾಸ್ಟ್ ಫುಡ್.’ (ಫಾಸ್ಟ್ ಫುಡ್ ಅಲ್ಲ.) ಅಂದರೆ, ಹಿಂದಿನ ದಿನದ ಅನ್ನ . ತಂಗುಳನ್ನಕ್ಕೆ ಮೊಸರು ಒಳ್ಳೆಯ ಸಂಗಾತಿ. ತುಳುವಿನಲ್ಲಿ ಅದಕ್ಕೆ ನುಡಿಗಟ್ಟೆ ಇದೆ : ‘ ತಂಗುಳನ್ನಕ್ಕೆ ಮೊಸರು ‘. ೧೯೬೮ರಲ್ಲಿ ಹಳೆಯ ಮೈಸೂರಿನ ಸಹಪಾಠಿಗಳ ಸಂಪರ್ಕ ಬಂದಾಗ ‘ಗಂಜಿ ಊಟ ಮಾಡುತ್ತೇವೆ’ ಎನ್ನುವುದು ಅವರಿಗೆ ತಮಾಷೆಯಾಗಿ ಕಾಣುತ್ತಿತ್ತು. ‘ಗಂಜಿ ಕುಡಿಯುವುದು’ ಎನ್ನುವ ಅವರ ಕಲ್ಪನೆ ‘ರವೆಯ ಗಂಜಿ’ಗೆ ಮತ್ತು ಅದು ಕಾಯಿಲೆಯವರಿಗೆ ಮಾತ್ರ ಎನ್ನುವುದು  ನನಗೆ ಗೊತ್ತಾದದ್ದು ಬಹಳ ತಡವಾಗಿ.’ ಎಳನೀರು ‘ (ನಾವು ಹೇಳುತ್ತಿದ್ದ  ತುಳುವಿನ ‘ಬೊಂಡ’ ಅಥವಾ ಕರಾವಳಿ ಕನ್ನಡದ ‘ಸೀಯಾಳ’) ಕುಡಿದ ಬಳಿಕ ‘ ಗಂಜಿ’ ಬೇಕೋ ಎಂದು ಕೇಳಿದಾಗ , ತೆಂಗಿನಕಾಯಿಯ ಬಾಲ್ಯಾವಸ್ಥೆಯ ತಿರುಳು ಎನ್ನುವ ಅರ್ಥಕ್ಕೆ ಕೂಡಾ ‘ ಗಂಜಿ’ಯ ಬಳಕೆ ತಿಳಿದದ್ದು. ನೀರಿನ ಅಂಶ ಹೆಚ್ಚು ಇರುವ, ಘನ-ದ್ರವ ಗಳ ಸಾಂಗತ್ಯದ ಸಮ್ಮಿಶ್ರ ಸ್ಥಿತಿಯೇ ‘ಗಂಜಿ’ ಎನ್ನುವ ಭಾವಾರ್ಥ ಹೊಳೆದದ್ದು ಆಗಲೆ.

ಮತ್ತೆ ಗಣೇಶ ಭವನಕ್ಕೆ ಬರೋಣ.ಅಲ್ಲಿ ಬೆಳಗ್ಗೆ ಬಡಿಸುತ್ತಿದ್ದ ‘ಗಂಜಿ’ ನಾನು ಬೇರೆಲ್ಲೂ ಕಂಡಿಲ್ಲ ; ನಮ್ಮ ಮನೆಯಲ್ಲಿ ಚಿಕ್ಕಂದಿನಲ್ಲಿ ಬೆಳಗ್ಗೆ ಉಣ್ಣುತ್ತಿದ್ದ ಗಂಜಿ ಊಟಕ್ಕಿಂತ ಇದು ಪೂರ್ತಿ ಬೇರೆ. ಕುಚ್ಚಲು ಅಕ್ಕಿಯ ಅನ್ನವನ್ನು ತುಂಬಾ ಚೆನ್ನಾಗಿ ಬೇಯಿಸಿ ಪಾಯಸದಷ್ಟು ತೆಳು ಮಾಡಿರುತ್ತಿದ್ದರು. ಅದರಲ್ಲಿ ಅನ್ನದ ಅಗುಳು , ಹುಡುಕಿದರೂ ಸಿಗುತ್ತಿರಲಿಲ್ಲ. ಅದು ನಿಜವಾದ ಅರ್ಥದಲ್ಲಿ ಗಂಜಿಯೇ ಆಗಿತ್ತು. ಅಂತಹ ಗಂಜಿಯನ್ನು ಸೌಟಿನಲ್ಲಿ  ಎಲೆಯ  ಮೇಲೆ ಬಡಿಸುತ್ತಿದ್ದರು. ಬಹುತೇಕ ದ್ರವ ರೂಪದಲ್ಲಿದ್ದ ಗಂಜಿಯನ್ನು ಸುರ್ ಸುರ್ ಶಬ್ದ ಮಾಡುತ್ತಾ ಬಲಗೈಯನ್ನು ಮೊಣಗಂಟಿನ ವರೆಗೆ ಚಾಚಿ, ಬಾಚಿ ಬಾಚಿ ಬಾಯಿಯೊಳಗೆ ಸೇರಿಸುವ ದೃಶ್ಯವನ್ನು ಕಾಣುವುದೇ ಸೊಗಸು , ಕಿವಿಯಲ್ಲಿ ಕೇಳುವುದೇ ಆನಂದ. ಈ ಗಂಜಿ ಊಟದ ಜೊತೆಗೆ ನಂಜಲು ಪಲ್ಯ ಪದಾರ್ಥ ಏನೂ ಇಲ್ಲ.ಚಿಟಿಕೆ ಉಪ್ಪು ಮತ್ತು ಕರಂಡೆಉಪ್ಪಿನ ಕಾಯಿಯ ಒಂದೇ ಒಂದು ಕರಂಡೆ. ಗಂಜಿ ಎರಡನೇ ಬಾರಿ ಬಡಿಸುತ್ತಿದ್ದರು. ಆಗ ಇನ್ನೊಮ್ಮೆ ಚಿಟಿಕೆ ಉಪ್ಪು ಹಾಕುತ್ತಿದ್ದರು. ಆದರೆ ಕರಂಡೆ ಕಾಯಿ ಒಂದು ಒಮ್ಮೆ ಮಾತ್ರ. ಎಲೆ ತುಂಬಾ ಎರಡು ಬಾರಿ ಗಂಜಿ ಬಡಿಸಿದಾಗ ಹೊಟ್ಟೆ ತುಂಬುತ್ತಿತ್ತು. ಊಟಕ್ಕೆ ಕುಳಿತಲ್ಲಿಯೇ ನಮ್ಮ ಪಕ್ಕದಲ್ಲಿ ಎಡ ಬದಿಯಲ್ಲಿ, ಗಂಜಿ ಊಟದ ‘ಹಣ’ ಇಡುವ ಪದ್ಧತಿ. ಅದು ‘ನಾಲ್ಕಾಣೆ’ಯ ಒಂದು ಪಾವಲಿ. ನಾವು ಊಟಕ್ಕೆ ಕುಳಿತಾಗ ಕುಳಿತ ಎಡಬದಿಯಲ್ಲಿ ನೆಲದಲ್ಲಿ ‘ನಾಲ್ಕಾಣೆ’ಪಾವಲಿ ಇಟ್ಟಾಗ ಬಡಿಸುವವರು ಅದನ್ನು ಎತ್ತಿಕೊಂಡು ಹೋಗುತ್ತಿದ್ದರು. ಬೇರೆ ಯಾವುದೇ ರೀತಿಯ ಟೋಕನ್ ಆಗಲಿ, ಬಿಲ್ ಆಗಲಿ ಇರಲಿಲ್ಲ. ಗಣೇಶ ಭವನದ ಬೆಳಗ್ಗಿನ ಗಂಜಿಊಟ  ಮಾಡಿ ಕ್ಲಾಸಿಗೆ ಹೋದರೆ, ಮಧ್ಯಾನ್ನ ಊಟದ ನೆನಪಾಗುತ್ತಿರಲಿಲ್ಲ. ಅದು ನಿಜವಾದ ಅರ್ಥದಲ್ಲಿ ‘ಬ್ರೇಕ್ ಫಾಸ್ಟ್’ ಆಗಿತ್ತು.

ಈಗಲೂ ಕಾರ್ನಾಡು ಸದಾಶಿವ ರಾವ್ ರಸ್ತೆಯಿಂದ ಕೆಳಕ್ಕೆ ಇಳಿದು ಶರವು ಗಣಪತಿ ದೇವಸ್ಥಾನ  ಸಿಗುವ ಮೊದಲು ಬಲದ ಬದಿಯ ದೊಡ್ಡ ಕಟ್ಟಡಗಳ ಕಡೆ ಕಣ್ಣು ಹಾಯಿಸಿದರೆ, ಇಲ್ಲಿ ‘ಗಣೇಶ ಭವನ ‘ಇತ್ತೇ ಎಂದು ಆಶ್ಚರ್ಯ ಆಗುತ್ತದೆ. ಒಂದು ಕ್ಷಣ ಕಣ್ಣು ಮುಚ್ಚಿ ನಿಂತರೆ, ಬಾಳೆ ಎಲೆಯಲ್ಲಿ ಉಪ್ಪು ಕಡಲು ಸುತ್ತಲೂ ತುಳುಕಿ ಹರಿದಾಡುವ ಸಂಭ್ರಮ ಕಣ್ಣಿಗೆ ಕಟ್ಟುತ್ತದೆ. ಆ ಕಡಲಿನ ನಡುವೆ ‘ಕರಂಡೆ’ಯ ಒಂದೇ ಒಂದು ದೋಣಿಯೊಂದು ತೇಲುತ್ತಿರುತ್ತದೆ. ಅದು ಬ್ರೇಕ್ ಇಲ್ಲದ , ಬ್ರೇಕ್ ಆಗಲಾರದ ಪಯಣ.

ಇದು ‘ಬ್ರೇಕಿಂಗ್ ನ್ಯೂಸ್’ ಅಲ್ಲ ; ‘ಬ್ರೇಕ್ ಫಾಸ್ಟ್’ ಪುರಾಣ.

Make a Comment

Leave a reply to ಕುಮಾರ ರೈತ ಪ್ರತ್ಯುತ್ತರವನ್ನು ರದ್ದುಮಾಡಿ

10 Responses to “ಬ್ರೇಕ್ ಫಾಸ್ಟ್ ಏನು? – ಗಣೇಶಭವನದ ಗಂಜಿ”

RSS Feed for ಬಿ ಎ ವಿವೇಕ ರೈ Comments RSS Feed

ಅಂದಿನ ಮಂಗಳೂರಿನ ಹಂಪನಕಟ್ಟೆಯ ಪ್ರಸಿದ್ದ ಹೋಟೆಲುಗಳು ವಿಶ್ವ ಭವನ, ಕೃಷ್ಣ ಭವನ, ಮೋಹಿನಿ ವಿಲಾಸ ಮತ್ತು ಗಣೇಶ ಭವನ ಇಂದು ಗತಕಾಲದ ಮಂಗಳೂರಿನ ಇತಿಹಾಸದ ಕುರುಹುಗಳು.

ಗಣೇಶಭವನದ ಗಂಜಿಯನ್ನು ಇಂದಿನ ಜನತೆಗೆ ನೆನಪಿಸಿ ಕೊಟ್ಟದಕ್ಕೆ ವಂದನೆಗಳು .

ರಾಮಚಂದ್ರ ಅವರಿಗೆ ಥ್ಯಾಂಕ್ಸ್.ಮಂಗಳೂರಿನ ಆ ಹೋಟೆಲ್ ಗಳು ಈಗ ಕಣ್ಮರೆ ಆಗಿವೆ.ಆ ಊಟ ತಿಂಡಿ ಕಾಣೆ ಆಗಿವೆ.

ಬಾಯಲ್ಲಿ ನೀರೂರಿಸುವಂತಹ ರುಚಿಯಾದ ಬರಹ:)

ನಿಮ್ಮ ಸತ್ ಅಭಿರುಚಿಯ ನುಡಿಗಾಗಿ ಧನ್ಯವಾದ.

ಮಂಗಳೂರಿನ ಬೆವರು ಬಸಿಯುವ ಹವಾಮಾನಕ್ಕೆ ತಕ್ಕುದ್ದು ಗಂಜಿ ಊಟ.ನಾನು ಬಯಲು ಸೀಮೆಯವನು.ಮಂಗಳೂರಿನ ಕಡೆ ಬಂದಾಗಲೆಲ್ಲ ಗಂಜಿಯೂಟ ಮತ್ತು ಮೀನಿನ ಕಾಂಬಿನೇಷನ್ ಸವಿಯುವುದೆಂದ್ರೆ ಬಲು ಖುಷಿ.ಇದನ್ನ ಬಿಟ್ರೆ ನೀರ್ ದೋಸೆ ಮತ್ತು ಬನ್ನು.ಬಯಲು ಸೀಮೆಯ ಕೆಲವು ಹೋಟೆಲುಗಳಲ್ಲಿಯೂ ನೀರ್ ದೋಸೆ,ಬನ್ನು ಮಾಡ್ತಾರೆ.ಆದ್ರೆ ದಕ್ಷಿಣ ಕನ್ನಡದಲ್ಲಿನ ರುಚಿ ಅದ್ರಲಿರೋದಿಲ್ಲ.

ನಮಸ್ಕಾರ.ನಿಮ್ಮ ರುಚಿ -ಅಭಿರುಚಿ ಚೆನ್ನಾಗಿದೆ.

ಗಣೇಶ ಭವನ ಬಿಟ್ಟು ಗಂಜಿಯೊಂದಿಗೆ ಈ ಎಲ್ಲಾ ಅನುಭವವೂ ಆಗಿದೆ. ಹೀಗೆಲ್ಲಾ ಹೋಟೆಲ್ಗಳು ಅದೂ ಮಂಗಳೂರಿನಲ್ಲಿ ಇದ್ದುವೆಂದು ತಿಳಿದು ಆಶ್ಚರ್ಯವಾಯಿತು. ನಾಲ್ಕಾಣೆಗೆ ಕೆಲವೊಮ್ಮೆ ಕುಡಿಯುವ ನೀರೂ ಸಿಗುವುದಿಲ್ಲ ಈಗ! ಮೇಷ್ಟ್ರು ಪುಣ್ಯ ಮಾಡಿದ್ರಿ.
ರೈತರೆ…ಒಂದು ಮಿಡಿ ಉಪ್ಪಿನ ಕಾಯಿ, ಚಮಚ ತೆಂಗಿನೆಣ್ಣೆ (ಬದಲಿಗೆ: ಇದ್ದರೆ ಹಸುವಿನ ತುಪ್ಪ)ದ ಕಾಂಬಿನೇಷನ್ ಟ್ರೈ ಮಾಡಿ ಇನ್ನು ಮುಂದೆ. ಪಾಪ..ನಿಮ್ಮ ಕಾಟ ತಡೀಲಾರ್ದೆ ಉಪ್ಪು ನೀರಿನೊಳ್ಗೆ ಸೇರ್ಕೊಂಡ್ರೂ ಬದ್ಕೋಕೆ ಬಿಡಲ್ಲ ಅಂತೀರಲ್ರಿ

ಒಳ್ಳೆಯ ಮಾತುಗಳನ್ನು ಹೇಳಿದ್ದಿರಿ.ಧನ್ಯವಾದ.

Dear Sir,
Namaste.

ganji ooTada nenapu baayalli neeroorisitu!

ನಮಸ್ಕಾರ.ಲಕ್ಷ್ಮೀನಾರಾಯಣ ಭಟ್ಟರೇ ,ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ.


Where's The Comment Form?

Liked it here?
Why not try sites on the blogroll...