ಆಟ ಜೂಜಾಟ: ಕೋಳಿ, ಕೋಣ, ಕುದುರೆ ಮತ್ತು ಕ್ರಿಕೆಟ್

Posted on ಏಪ್ರಿಲ್ 23, 2010. Filed under: ಅರ್ಥಶಾಸ್ತ್ರ | ಟ್ಯಾಗ್ ಗಳು:, , , , , , |


‘ನೆತ್ತಮನಾಡಿ ಭಾನುಮತಿ ಸೋಲ್ತೊಡೆ ಸೋಲಮನೀವುದೆಂದು ಕಾಡುತ್ತಿರೆ ….ಮುತ್ತಿನ ಲಂಬಣಮ್  ಪರಿಯೆ ‘-

‘ಪಂಪ ಭಾರತ’ದ ಈ ಪದ್ಯಕ್ಕೆ ಅರ್ಥ ಹೇಳಲು ವಿದ್ವಾಂಸರು ತಿಣುಕಿದ್ದಾರೆ. ನೆತ್ತವನ್ನು ಆಡಿದವರು  ದುರ್ಯೋಧನ ಮತ್ತು ಅವನ ಹೆಂಡತಿ ಭಾನುಮತಿ ಎಂದು ಆದರ್ಶವಾದಿಗಳು, ಕರ್ಣ ಮತ್ತು ಭಾನುಮತಿ ಎಂದು ವಾಸ್ತವತಾವಾದಿಗಳು ವಾದಿಸಿದ್ದಾರೆ. ಆಟದಲ್ಲಿ ‘ ಪಣ’ ಏನು ಆಗಿತ್ತು ಎನ್ನುವುದೂ ರಸಿಕ ವಿಮರ್ಶೆಗೆ (ರಸ ವಿಮರ್ಶೆ ಅಲ್ಲ ) ಗ್ರಾಸವಾಗಿದೆ. ‘ಮುತ್ತಿನ ಹಾರ ‘ ದಲ್ಲಿನ ‘ಮುತ್ತು’ ಚೆಲ್ಲಿಹೋಗಿದೆ.

ಧರ್ಮರಾಯನು ದುರ್ಯೋಧನನೊಡನೆ ಜೂಜಾಟ ಆಡಿದ್ದಾನೆ. ಸೋಲುತ್ತಾ ಸೋಲುತ್ತಾ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ಕೊನೆಗೆ ‘ಪಣ’ ವಾಗಿ ಒಡ್ಡಿದ್ದು ಹೆಂಡತಿ ದ್ರೌಪದಿಯನ್ನು. ಅವಳನ್ನು ಕಳೆದುಕೊಂಡ ಬಳಿಕ ಮತ್ತೆ ವನವಾಸ, ಅಜ್ಞಾತವಾಸ, ಅಂತಿಮವಾಗಿ ಕುರುಕ್ಷೇತ್ರ ಯುದ್ಧ. ಯುದ್ಧದಲ್ಲಿ ಸತ್ತವರು ಅಮಾಯಕ ಯೋಧರು. ವಿಧವೆಯರು ಅವರ ಪತ್ನಿಯರು .

ಚಿತ್ರ: ಡಿ ಜಿ ಮಲ್ಲಿಕಾರ್ಜುನ್

ಆಟ ,ಜೂಜಾಟ ಆದಾಗ ಅಲ್ಲಿ ‘ಪಣ’ ಇರುತ್ತದೆ. ಅದು ಯುದ್ಧಕ್ಕೆ ನಾಂದಿ ಆಗುತ್ತದೆ. ಪಣವನ್ನು ಅಂದರೆ ಬೆಟ್ಟಿಂಗ್ ನ್ನು ಕಾನೂನುಬದ್ಧಗೊಳಿಸಬೇಕೆಂದು ವಿಜಯ ಮಲ್ಯ ಹೇಳುತ್ತಾರೆ. ಐಪಿಎಲ್ ಕ್ರಿಕೆಟ್ ನಲ್ಲಿ ಹಣ ಮತ್ತು ಹೆಣ್ಣುಗಳ ಪಾತ್ರದ ಬಗ್ಗೆ ಸುನಂದಾ ಪುಷ್ಕರ್ ಬರೆಯುತ್ತಾರೆ. ಅಂತೂ ಮಹಾಭಾರತ ಯುದ್ಧವು ಬೌಂಡರಿ ಲೈನಿನ ಹೊರಗೆ ವಿಸ್ತರಿಸಿದೆ. ‘ಖುಷಿ ಕನ್ನೆ’ಯರ ಕುಣಿತ ಸಿಕ್ಸರಿನ ದಿಗಂತ ಮೀರಿದರೆ, ಕುರುಡು ಕಾಂಚಾಣ ಕಾಲಿಗೆ ಬಿದ್ದವರ ತುಳಿಯುತ್ತಿದೆ.

ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವ ಸಂಸ್ಕೃತಿಯಲ್ಲಿ , ಕೃಷಿ ಪ್ರಧಾನ ಸಮಾಜದಲ್ಲಿ ಕೋಳಿ ಮತ್ತು ಕೋಣಗಳು ಬದುಕಿನ ಅವಿಭಾಜ್ಯ ಅಂಗ. ಸಾಕಿದ ಕೋಳಿಗಳು ಮೊಟ್ಟೆಗೆ ,ನೆಂಟರ ಔತಣಕ್ಕೆ ,ದೈವಗಳ ಹರಕೆಗೆ, ಬೆಳಗಾಯಿತು ಎಂದು ಸೈರನ್ ಕೂಗಲು, ಮನೆಯ ಸುತ್ತ ಕೊಕ್ಕಿನಿಂದ ಶುಚಿ ಮಾಡಲು -ಹೀಗೆ ಅನೇಕ ಬಗೆಗಳಲ್ಲಿ ಮನೆಯ ಮಕ್ಕಳಷ್ಟೇ ಆಪ್ತವಾದವು. ಗಂಡು ಕೋಳಿಗಳು – ಹುಂಜಗಳು-ಸಾಕಿ ವಿಶೇಷವಾಗಿ ಬೆಳಸಿ, ಪಂದ್ಯಕ್ಕೆ ಸಿದ್ದವಾಗುತ್ತವೆ. ‘ಕೋಳಿ ಕಟ್ಟ’ ಒಂದು ಸ್ಪರ್ಧೆ.ಹಕ್ಕಿಗಳ ಕಾದಾಟ ಒಂದು ಯುದ್ಧವೂ ಹೌದು.ಯುದ್ಧ ಮಾಡಿಸುವವರು ಮನುಷ್ಯರು , ಕೋಳಿಗಳನ್ನು ಸಾಕಿದವರು. ಹಾಗಾಗಿ ಕೋಳಿಗಳ ಜಯ ಅಪಜಯ -ಅದನ್ನು ಸಾಕಿದವರ ,ಅಥವಾ ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ಅವುಗಳ ‘ಪ್ರಾಯೋಜಕ’ರ ಪ್ರತಿಷ್ಠೆಯ ಪ್ರಶ್ನೆ. ಪಾಪ, ಕೋಳಿಗಳು ಕಾದಾಡುತ್ತವೆ. ಒಂ ದು ಗೆಲ್ಲುತ್ತದೆ -ಬಂಟೆ. ಇನ್ನೊಂದು ಸೋಲುತ್ತದೆ ಅಥವಾ ಸಾಯುತ್ತದೆ -ಒಟ್ಟೆ. ಇಂತಹ ‘ಕೋಳಿ ಕಟ್ಟ’ ಮುಂದೆ ‘ ಕೋಳಿ ಅಂಕ ‘ ಆಯಿತು. ಮುಂದೆ ಗೆಲ್ಲುವ ಕೋಳಿಗಳ ಮೇಲೆ ಬೆಟ್ ಕಟ್ಟಲು ಸುರು ಆಗಿ ‘ಕೋಳಿ ಜೂಜು ‘ ಆಯಿತು. ಜೂಜಿಗೆ ನಿರ್ಬಂಧದ ಕಾನೂನು ಬಂದು, ಪೋಲಿಸ್ ಧಾಳಿ ನಾಟಕ ರಂಗದಲ್ಲಿ ಬಡಪಾಯಿ ಕೋಳಿಗಳು ಪೋಲಿಸ್ ಠಾಣೆ ಸೇರಿ, ಜಮೀನುದಾರರು ಜಾಮೀನುದಾರರಾಗಿ ಕೋಳಿಗಳಿಗೆ ಪೋಲಿಸ್ ಠಾಣೆಯಿಂದ ಬಿಡುಗಡೆ, ಮತ್ತೆ ಕೋಳಿ ಜೂಜಿನಲ್ಲಿ ಬಂಧನ -ಹೀಗೆ ಸಾಗುತ್ತದೆ ಆಟ ಜೂಜಾಟ. ‘ಹೊಸ ಹಣ ‘ ‘ಹೊಸತು ಹೊಸತು ಪಣ’ ಗಳನ್ನುಹುಟ್ಟು ಹಾಕುತ್ತದೆ.ಅದಕ್ಕೆ ದೇಸಿ-ನಾಗರಿಕ ,ರಾಷ್ಟ್ರೀಯ-ಜಾಗತಿಕ, ಪ್ರಾಣಿ- ಮನುಷ್ಯ ಎಂಬ ಭೇದ ಇಲ್ಲ. ಅಡಗಿಸಿಟ್ಟ ಕಪ್ಪು ಹಣ ಬಿಳಿಯಾಗಬೇಕು, ಪಾಪದ ದುಡ್ಡು ಪುಣ್ಯದ ಫಲವನ್ನು ಪಡೆಯಬೇಕು, ನಾಚಿಕೆಯ ಕೆಲಸಗಳಿಗೆ ಸಾರ್ವಜನಿಕ ಮರ್ಯಾದೆ ಪಡೆಯಬೇಕು, ರಹಸ್ಯದ ಖಾಸಗಿ ಬದುಕಿನ ಜಗತ್ತಿಗೆ ಸಾಮೂಹಿಕ ಜನ ಬೆಂಬಲ ದೊರೆಯಬೇಕು, ಜನರು ಆಟ ಎಂದು ಭ್ರಮಿಸುತ್ತಾ ಹೆಚ್ಚು ಹೆಚ್ಚು ಮೈ ಮರೆಯಬೇಕು. ಇದಕ್ಕೆ ‘ಕೋಳಿ ಅಂಕ’ವೂ ಹೊರತಾಗಿ ಉಳಿಯಲಿಲ್ಲ. ಹವಾನಿಯಂತ್ರಿತ ಲಕ್ಸುರಿ ಕಾರುಗಳಲ್ಲಿ ಕುಳಿತುಕೊಂಡು ಒಂದು ಕೋಳಿಗೆ ಲಕ್ಷಗಟ್ಟಲೆ ಬೆಟ್ ಕಟ್ಟುವ ಕಾಲ ಬಂದು ಬಹಳ ಕಾಲ ಸಂದಿದೆ.

ಕೃಷಿಕರು ಭತ್ತದ ಗದ್ದೆಗಳಲ್ಲಿ ಉತ್ತು ಆದ ಬಳಿಕ ಕೋಣ ಎತ್ತುಗಳನ್ನು ಓಡಿಸುತ್ತಿದ್ದ ಆಚರಣೆ ಮತ್ತು ಕ್ರೀಡೆ ‘ಕಂಬಳ’. ಕೆಸರುಗದ್ದೆಯಲ್ಲಿ, ಬಾಕಿಮಾರು ಗದ್ದೆಯಲ್ಲಿ , ಕಂಬಳ ಗದ್ದೆಯಲ್ಲಿ ದಪ್ಪ ದೇಹದ ಸಾಕಿದ ಕೋಣಗಳನ್ನುಓಡಿಸುವುದು ಒಂದು ಮನೋರಂಜನೆ ಆಗಿದ್ದ ಕಾಲ ಒಂದಿತ್ತು. ವಂಡಾರು ಕಂಬಳದಲ್ಲಿ ಈಗಲೂ ಆಚರಣೆಯ ಭಾಗ ಪ್ರಧಾನವಾಗಿದೆ. ಅಲ್ಲಿನ ಕಂಬಳ ಗದ್ದೆಯಲ್ಲಿ ಕೋಣ ಎತ್ತು ಹಸು ಕರು ಎಲ್ಲವನ್ನೂ ಓಡಿಸುತ್ತಾರೆ. ಕಂಬಳದ ಬಗ್ಗೆ ಸಾಕಷ್ಟು ಅಧ್ಯಯನಗಳು ಪ್ರಕಟವಾಗಿವೆ : ಬೋಳ ಚಿತ್ತರಂಜನದಾಸ ಶೆಟ್ಟಿ, ಪುರುಷೋತ್ತಮ ಬಿಳಿಮಲೆ ಇತ್ಯಾದಿ. ಮುಂದೆ ‘ಕಂಬಳ’ ವು ಜೋಡಿ ಕೋಣಗಳ ಓಟದ ಸ್ಪರ್ದೆ ಆಯಿತು. ಜೋಡುಕರೆಗಳು ನಿರ್ಮಾಣವಾದುವು. ಮಂಜೊಟ್ಟಿಗಳಿಗೆ ಹೊಸ ಭೂಮಿಕೆಗಳು ಸಿದ್ಧವಾದುವು. ಸಾಮಾನ್ಯ ಕೃಷಿಕರ ಕೋಣಗಳ ಓಟ ಕಂಬಳವು ಸ್ಪರ್ಧೆಯ ಪ್ರದರ್ಶನ ಆಯಿತು. ಸಾರ್ವಜನಿಕ ಪ್ರೇಕ್ಷಕರ ಕಣ್ಣುಗಳಿಗೆ ಆಕರ್ಷಣೆಯ ಮನೋರಂಜನೆ ಆಯಿತು. ಪ್ರತಿಷ್ಟಿತರ ಗಣ್ಯರ ರಾಜಕಾರಣಿಗಳ ಸಿನೆಮಾ ನಟರ ದಿವ್ಯ ಉಪಸ್ಥಿತಿಯಿಂದ, ಗೌರವ ಪ್ರಾಪ್ತ ಆಯಿತು. ಅದರ ಮುಂದುವರಿದ ಅಧ್ಯಾಯವಾಗಿ ‘ಪಣ’ ಪ್ರವೇಶ ಮಾಡಿತು. ವಿಮಾನಗಳಲ್ಲಿ ಬಂದು, ಲಕ್ಸುರಿ ಕಾರುಗಳಲ್ಲಿ ಕುಳಿತು, ಲಕ್ಷಗಟ್ಟಲೆ ಬೆಟ್ಟಿಂಗ್ ನಡೆಯಲು ಸುರುವಾಯಿತು. ಕಂಬಳದ ಬೆಟ್ಟಿಂಗ್, ಕೋಳಿ ಅಂಕದ ಮಟ್ಟಕ್ಕಿಂತ ತುಂಬಾ ಸೊಫಸ್ಟಿಕೇಟ್ ಆದ್ದರಿಂದ ಪೋಲಿಸ್ -ಕಾನೂನು ಇತ್ಯಾದಿ ಸಮಸ್ಯೆ ಇರುವುದಿಲ್ಲ. ಕೋಣಗಳು ಓಡಿದಷ್ಟೂ ಕೆಸರು ನೀರು ರಾಚಿದಷ್ಟೂ ಹಸುರು ನೋಟುಗಳು ಹಾರಿದವು. ಕೋಣಗಳಿಗೆ ಮಾತ್ರ ಹಸುರು ಹುಲ್ಲೂ ಉಳಿದಿಲ್ಲ!

ಸಾಕಿದ ಕೋಳಿ ಕೋಣಗಳಿಗೆ ಹೋಲಿಸಿದರೆ ‘ಕುದುರೆ’ಗಳದ್ದು ಬೇರೆಯೇ ಜಾತಿ. ಕೋಳಿ ಕೋಣಗಳು ನಮ್ಮ ಹಳ್ಳಿಯ ಬದುಕಿನ ಭಾಗಗಳು. ಹಳ್ಳಿಯ ಕ್ರೀಡೆಗಳ ಭಾಗಿಗಳು. ಕುದುರೆ ಹಾಗಲ್ಲ. ಅದು ಆಮದು ಮಾಲು. ನಗರದವರ ಶೋಕಿಯ ಪ್ರಾಣಿ. ಅದರ ಓಟ ಜೂಜು ಆದದ್ದು ನೇರವಾಗಿ, ಬಹಿರಂಗವಾಗಿ. ಅದಕ್ಕೆ ಸರಕಾರದ ಸಾರ್ವಜನಿಕರ ಒಪ್ಪಿಗೆ ಇದೆ, ಅದರ ಬೆಟ್ಟಿಂಗ್ ಅಧಿಕೃತ ಎನ್ನುವಂತೆ ಆಗಿಬಿಟ್ಟಿದೆ.ಆದರೂ ಕುದುರೆಗಳ ದೃಷ್ಟಿಯಿಂದ ನೋಡಿದರೆ, ಅವೂ ಪಾಪದ ಪ್ರಾಣಿಗಳು. ತಮ್ಮ ಬಾಲಕ್ಕೆ, ಕಾಲುಗಳಿಗೆ ಲಕ್ಷ ಲಕ್ಷ ಬೆಲೆ ಇದೆ ಎಂದು ಅವಕ್ಕೆ ಗೊತ್ತಿಲ್ಲ. ಕುದುರೆ ಜೂಜು ಬಹಿರಂಗದ ಆಟ ಆದ್ದರಿಂದ ಹೆಚ್ಚು ಹೇಳಬೇಕಾಗಿಲ್ಲ.

ಈಗ ಕ್ರಿಕೆಟ್. ಕಳೆದ ಕೆಲವು ದಿನಗಳಿಂದ ನೂರಾರು ಮಾತುಗಳನ್ನು ಆಡಲಾಗಿದೆ. ಆಟ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೋಳಿ ಕೋಣ ಕುದುರೆಗಳ ಜೊತೆಗೆ ಕ್ರಿಕೆಟನ್ನು ಸೇರಿಸಲು ಕೆಲವು ಸಮಸ್ಯೆಗಳಿವೆ, ಕೆಲವು ಅನುಕೂಲಗಳಿವೆ. ಪ್ರಾಣಿಗಳೊಂದಿಗೆ ಮನುಷ್ಯರನ್ನು ಸೇರಿಸುವುದೇ ಎಂದು ಯಾರಾದರೂ ಆಕ್ಷೇಪಿಸಬಹುದು.ಆದರೆ ಮನುಷ್ಯರನ್ನು ಪ್ರಾಣಿಗಳಂತೆ ಹರಾಜಿನಲ್ಲಿ ದುಡ್ಡು ಕೊಟ್ಟು ಕೊಳ್ಳುವ ವ್ಯವಸ್ಥೆಯು ಮಧ್ಯಯುಗೀನ ಕಾಲದ ‘ಗುಲಾಮರ ಮಾರಾಟ’ದ ಚಿತ್ರವನ್ನು ನೆನಪಿಗೆ ತರುತ್ತದೆ. ಕ್ರಿಕೆಟ್ ಒಂದು ಆಟವಾಗಿ ಇದ್ದದ್ದು ಒಂದು’ ಪ್ರದರ್ಶನ ‘ಆಗಿ ಬದಲಾಗುವಾಗ, ಅದಕ್ಕೆ ಬೇಕಾದ ಎಲ್ಲ ಪರಿಕರಗಳು ನಿರ್ಮಾಣವಾಗುತ್ತವೆ. ಕುಣಿತ ಕುಡಿತ ಹಾಡು ಬಣ್ಣ ಬೆಳಕು ಶಬ್ದ ಮತ್ತು ಅದನ್ನು ನಿರ್ವಹಿಸುವ ಜನರು -ಇದು ಹಣದ ಬೌನ್ಸರ್ ಸಿಕ್ಸರ್ ಗಳ ಜೂಜಾಟ. ಎರಡು ತಂಡಗಳು ಯುದ್ಧದ ನಾಟಕವನ್ನು ಚೆನ್ನಾಗಿ ಅಭಿನಯಿಸುತ್ತವೆ. ಪ್ರೇಕ್ಷಕರು ಅದನ್ನು ನಿಜವಾದ ಯುದ್ಧವೆಂದು ಭ್ರಮಿಸುತ್ತಾರೆ. ಆದರೆ ಈ ‘ಕ್ರಿಕೆಟ್ ರಂಗಭೂಮಿ’ಯು ಬ್ರೆಕ್ಟ್ ಹೇಳುವ ‘ಮುಕ್ತ ರಂಗಭೂಮಿ’ಯಂತೆ. ಅದರ ನಿರ್ಮಾಪಕರು ನಿರ್ದೇಶಕರು ನಟರು ಮತ್ತು ಪ್ರೇಕ್ಷಕರು ಎಲ್ಲೆಲ್ಲೋ ಇರುತ್ತಾರೆ. ಅದು ಛಿದ್ರ ಛಿದ್ರವಾದುದು, ಮಹಾಕಾವ್ಯದಂತೆ ಕತೆ ಹಾಡು ಕುಣಿತ ಮಾತು ಎಲ್ಲವನ್ನೂ ಒಳಗೊಂಡದ್ದು. ಅದರ ಮೂಲ ಹುಡುಕಿದಂತೆಲ್ಲ ಅದು ಎಲ್ಲೆಲ್ಲೋ ಸಿಕುಸಿಕ್ಕು ಆಗಿರುತ್ತದೆ. ಕೆಲವರು ಸಿಕ್ಕಿಕೊಳ್ಳುತ್ತಾರೆ, ಬಹಳ ಮಂದಿ ಸೂತ್ರಧಾರರು ಮರೆಯಲ್ಲೇ ಇರುತ್ತಾರೆ.

‘ ಹಣ’ ಶಬ್ದ ಏಕವಚನವೇ ಬಹುವಚನವೇ ಎನ್ನುವುದು ಒಂದು ಪ್ರಶ್ನೆ. ಇವತ್ತು ಅದು ಖಂಡಿತ ಬಹುವಚನ. ಹಣದ ಹೂಡಿಕೆ ‘ಪಣ’ದ ಬಹುರೂಪಗಳಲ್ಲಿ ನಡೆಯುತ್ತಿರುವಾಗ, ಅದು ಬಹುವಚನ. ಹಣದ ಓಡಾಟಕ್ಕೆ ಆಟಗಳನ್ನು ಒತ್ತೆ ಇಡಲು ತೊಡಗಿದಾಗ, ಒತ್ತೆಸೆರೆಯಾದ ದಾಸಿ ದ್ರೌಪದಿಯ ಮಾನ ಕಾಪಾಡಲು ಈಗ ಕೃಷ್ಣ ಬರುವುದಿಲ್ಲ. ಕೋಳಿಗಳ ಕೋ ಕ್ಕೋ, ಕೋಣಗಳ ಗುಟ್ರೂ ಗುಟ್ರೂ, ಕುದುರೆಗಳ ಹೇ ಹೇ  ಯಾರಿಗೂ ಕೇಳಿಸುವುದಿಲ್ಲ. ಕೇಳಿಸುವುದು ‘ಕಪ್ಪು ಕಾಂಚಾಣ’ದ ಅಟ್ಟಹಾಸ, ಅಮಲಿನ ಕೇಕೆ ಮತ್ತು ಮರ್ಯಾದೆಯ ಶ್ರಾದ್ಧದ ಮಂತ್ರ ಪಠಣ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

4 Responses to “ಆಟ ಜೂಜಾಟ: ಕೋಳಿ, ಕೋಣ, ಕುದುರೆ ಮತ್ತು ಕ್ರಿಕೆಟ್”

RSS Feed for ಬಿ ಎ ವಿವೇಕ ರೈ Comments RSS Feed

ಉಪಮೆ-ವಿವರ ದಿವಿನಾಗಿವೆ.
ಜೂಜಾಟವಾಗಿರುವ ಐಪಿಎಲ್ ಕ್ರಿ-ಕೆಟ್ಟಾಟದ ’ತಿಥಿ’ ಮಾಡಿದ್ದೀರಿ!
ನೀವು ಉಣಬಡಿಸಿರುವ ತಿಥಿಯೂಟ ಪೊಗದಸ್ತಾಗಿದೆ.

ಧನ್ಯವಾದ.ನಿಮ್ಮ ಪ್ರತಿಕ್ರಿಯೆ ಇಷ್ಟ ಆಯಿತು.

A wonderful article! Very insightful! Full of “viveka” from Rai.

Thank you for your nice comments.


Where's The Comment Form?

Liked it here?
Why not try sites on the blogroll...

%d bloggers like this: