ನಮ್ಮ ಹೊಟ್ಟೆಯೊಳಗೊಂದು ಔಷಧದ ತೊಟ್ಟಿ

Posted on ಏಪ್ರಿಲ್ 20, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpg?w=156&h=243ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 07 ಆಗಸ್ಟ್, 2009

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ

ಪುಣೆಯಲ್ಲಿ ಹಂದಿಜ್ವರದಿಂದ ನಿಧನವಾದ ಬಾಲಕಿಯೊಬ್ಬಳ ಸಾವಿನ ಸುದ್ದಿ ನಮ್ಮ ದೇಶದಲ್ಲಿ ಭಯದ ಆತಂಕದ ಜ್ವರವನ್ನು ಹಬ್ಬಿಸಿದೆ. ಹಂದಿಜ್ವರಕ್ಕೆ ಪ್ರತಿರೋಧಕವಾಗಿ ಅಮೆರಿಕ, ಮೆಕ್ಸಿಕೋ, ಕೆನಡಾ-ಮುಂತಾದ ದೇಶಗಳಲ್ಲಿ ಬಳಸುವ ತಮಿಫ್ಲೂ (Tamiflu) ಔಷಧವು ಅದರ ಅನಗತ್ಯ ಬಳಕೆಯಿಂದಾಗಿ ಹಂದಿಜ್ವರದ ಸಂದರ್ಭದಲ್ಲಿ ನಿಷ್ಪ್ರಯೋಜಕವಾದ ಉದಾಹರಣೆಗಳು ಮೆಕ್ಸಿಕೋ ಮತ್ತು ಕೆನಡಾದಿಂದ ವರದಿಯಾಗಿವೆ. ಮೊದಲನೇ ಬಾರಿ ಸೀನು ಬಂದಾಗಲೂ ಇಂತಹ ವೈರಾಣು ಪ್ರತಿರೋಧಕ ಔಷಧಗಳ ಸೇವನೆಯಿಂದ ದೇಹದ ಪ್ರತಿರೋಧಕ ಶಕ್ತಿ ದುರ್ಬಲವಾಗಿ ಔಷಧಗಳೇ ನಿಸ್ಸಹಾಯಕವಾಗುವ ಸ್ಥಿತಿ ನಿರ್ಮಾಣವಾಗುತ್ತದೆ.

ಮಳೆಗಾಲದ ಆರಂಭದೊಂದಿಗೆ ನಮ್ಮ ದೇಶದಲ್ಲಿ ವೈರಾಣು ಮೂಲಕ ಹರಡುವ ಮಲೇರಿಯಾ, ಡೆಂಗ್ಯೂ, ಚಿಕೂನ್ಗುನ್ಯ, ಹಂದಿಜ್ವರ-ಹೀಗೆ ಹೊಸಹೊಸ ಖಾಯಿಲೆಗಳು ಜ್ವರದಂತೆ ಏರುತ್ತಾ ಹರಡುತ್ತಾ ಹೋಗುತ್ತವೆ. ನೀರಿನಿಂದ, ಸೊಳ್ಳೆಯಿಂದ, ವೈರಾಣುಗಳ ಮೂಲಕ ನಮ್ಮ ದೇಹದ ಸಮತೋಲನವನ್ನು ಏರುಪೇರು ಮಾಡುವ ಕಾಯಿಲೆಗಳು ದೇಹದ ಶಕ್ತಿಯನ್ನು ಕುಂದಿಸಿ, ಆಜಾನುಬಾಹು ದೇಹವನ್ನು ಕೂಡ ಕಮರಿಹೋಗುವಂತೆ ಮಾಡುತ್ತವೆ. ‘ಚಿಕೂನ್ಗುನ್ಯ’ ಎನ್ನುವ ಶಬ್ದದ  ಅರ್ಥವೇ ‘ಬಾಗುವುದು, ಕುಗ್ಗಿಹೋಗುವುದು, ಕಮರುವುದು’ ಎಂದು.

ದುರ್ಬಲವಾದ ದೇಹವನ್ನು ಮತ್ತೆ ಸರಿಪಡಿಸಲು, ಕಳೆದುಹೋದ ಆರೋಗ್ಯವನ್ನು ಮರುಸಂಪಾದಿಸಲು, ವೈರಾಣುಗಳೊಡನೆ ಯುದ್ಧಮಾಡಿ ಜಯಗಳಿಸಲು ನಾವು ಸೇವಿಸುವ ಔಷಧಗಳ ಲೋಕವೇ ಒಂದು ಮಾಯಾಲೋಕ. ಔಷಧಗಳನ್ನು ಪಡೆಯಲು ನಾವು ಖರ್ಚು ಮಾಡುವ ಹಣ ಎಷ್ಟು ಎನ್ನುವ ಕಲ್ಪನೆಯೇ ನಮಗಿರುವುದಿಲ್ಲ. ಆರ್ಥಿಕವಾಗಿ ದುರ್ಬಲರಾದವರಿಗಂತೂ ದೇಹದ ನಿಶ್ಯಕ್ತಿಗಿಂತ ಆರ್ಥಿಕ ನಿತ್ರಾಣವೇ ಹೆಚ್ಚು ಆತಂಕದ ವಿಷಯ. ಶೀತವಾದಾಗ, ಜ್ವರಬಂದಾಗ ಮಾತ್ರೆಗಳನ್ನು ನುಂಗುವುದರಿಂದ ನಮ್ಮ ಹೊಟ್ಟೆಯೊಂದು ಔಷಧದ ಉಗ್ರಾಣದ ಹಾಗೆ ಕೆಲಸ ಮಾಡುತ್ತದೆ.

‘ಶೀತವಾಗಿ  ಔಷಧ ತೆಗೆದುಕೊಂಡರೆ ಒಂದು ವಾರದಲ್ಲಿ ಗುಣವಾಗುತ್ತದೆ, ಔಷಧ ತೆಗೆದುಕೊಳ್ಳದಿದ್ದರೆ ಏಳು ದಿನದಲ್ಲಿ ಗುಣವಾಗುತ್ತದೆ’ ಎನ್ನುವುದು ಒಂದು ಸತ್ಯವಾದ ಜನಪ್ರಿಯ ಮಾತು. ಜ್ವರ ಎನ್ನುವುದು ನಮ್ಮ ದೇಹದ ವ್ಯತ್ಯಯಗಳನ್ನು ಸೂಚಿಸುವ ಒಂದು ಸೂಚನೆಯೇ ಹೊರತು ಅದೊಂದು ಕಾಯಿಲೆಯಲ್ಲ. ಹಾಗಾಗಿ, ಸಾಮಾನ್ಯ ಜ್ವರಕ್ಕೆ ಆಂಟಿಬಯೋಟಿಕ್ಸ್ಗಳನ್ನು ತೆಗೆದುಕೊಂಡರೆ, ಮುಂದೆ ದೇಹ ತನ್ನ ಪ್ರತಿರೋಧ ಶಕ್ತಿಯನ್ನು ಕಳೆದುಕೊಳ್ಳುತ್ತಾ ಬಂದು, ನಿಜವಾದ ಸಂದರ್ಭದಲ್ಲಿ ಆಂಟಿಬಯೋಟಿಕ್ಸ್ಗಳನ್ನು ಬಳಸಿದರೂ ಅದು ಪರಿಣಾಮಕಾರಿಯಾಗುವುದಿಲ್ಲ. ಬ್ಯಾಕ್ಟೀರಿಯಾದ ಸೋಂಕಿನ ಸುಮಾರು ಶೇ.75ರಷ್ಟು ಸಂದರ್ಭಗಳಲ್ಲಿ ಆಂಟಿಬಯೋಟಿಕ್ಸ್ಗಳ ಅಗತ್ಯವೇ ಇರುವುದಿಲ್ಲ ಎನ್ನುವುದನ್ನು ಪ್ರಾಜ್ಞ ವೈದ್ಯರು ಒಪ್ಪಿಕೊಳ್ಳುತ್ತಾರೆ. ಆದರೂ ಅನಗತ್ಯವಾಗಿ ಆಂಟಿಬಯೋಟಿಕ್ಸ್ಗಳನ್ನು ಹೊಟ್ಟೆಯೊಳಗೆ ತುಂಬಿಸಿಕೊಳ್ಳುವುದರಿಂದ, ನಮ್ಮ ಹೊಟ್ಟೆ ಔಷಧದ ತೊಟ್ಟಿಯಾಗಿ ಉಬ್ಬುತ್ತಾ ಬರುತ್ತದೆ, ಅನಗತ್ಯ ಔಷಧಗಳ ವೆಚ್ಚದಿಂದ ಕಿಸೆ ಖಾಲಿಯಾಗುತ್ತಾ ಹೋಗುತ್ತದೆ.

‘ಆರೋಗ್ಯ ಅರ್ಥಶಾಸ್ತ್ರ’ (Health Economics) ಎನ್ನುವ  ಪರಿಕಲ್ಪನೆ ಆರೋಗ್ಯದ ಕ್ಷೇತ್ರದಲ್ಲಿ ಅನೇಕ ದೇಶಗಳಲ್ಲಿ ಪ್ರಚಾರಕ್ಕೆ ಬಂದಿದೆ. ‘ಆರೋಗ್ಯ  ಅರ್ಥಶಾಸ್ತ್ರ’ ಎನ್ನುವುದು ಪಶ್ಚಿಮದ ವೈದ್ಯಕೀಯ ಶಿಕ್ಷಣದ ಭಾಗವಾಗಿ ಸೇರ್ಪಡೆಯಾಗಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬೇರೆಬೇರೆ ದೃಷ್ಟಿಕೋನದ ಅಧ್ಯಯನ ಗ್ರಂಥಗಳು ಪ್ರಕಟಗೊಂಡಿವೆ. [Ceri J. Phillips ಅವರ ‘Health Economics: as introduction for health professionals'(2005); Charles E. Phelps ಅವರ ‘Health Economics’ (1997);  Peter Zweifel, Friedrich Breyer ಅವರ ‘Health Economics’ (1997); Barbara McPake, McPake/Normand ಅವರ ‘Health Economics: An International Perspective’ (2008)]. ಆದರೆ ನಮ್ಮ ದೇಶದ ವೈದ್ಯಕೀಯ ಶಿಕ್ಷಣದಲ್ಲಿ ಇದು ಒಂದು ಅಧ್ಯಯನ ವಿಷಯವಾಗಿ ಸೇರ್ಪಡೆಗೊಂಡಿಲ್ಲ ಎನ್ನುವುದನ್ನು ನಾನು ಇತ್ತೀಚೆಗೆ ಭೇಟಿಯಾಗಿ ಸಂದರ್ಶಿಸಿದ ಕರ್ನಾಟಕದ ಪ್ರಸಿದ್ಧ ವೈದ್ಯಕೀಯ ಕಾಲೇಜೊಂದರ ಮುಖ್ಯಸ್ಥರಾದ ಜನಪ್ರಿಯ ವೈದ್ಯ ಸ್ನೇಹಿತರಿಂದ ತಿಳಿದುಕೊಂಡೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಸಿದ್ಧ ವೈದ್ಯರ ಜೊತೆಗೆ ಖಾಸಗಿಯಾಗಿ ಮಾತನಾಡಿದಾಗ, ಅನೇಕ ವಿಷಯಗಳು ಬೆಳಕಿಗೆ ಬಂದವು.

‘ಆರೋಗ್ಯ ಅರ್ಥಶಾಸ್ತ್ರ’ (‘Health Economics) ‘ಅರ್ಥಶಾಸ್ತ್ರ’ದ  ಒಂದು ಶಾಖೆಯೂ ಹೌದು, ಆರೋಗ್ಯಶಾಸ್ತ್ರದ ಮುಖ್ಯ ಭಾಗವೂ ಹೌದು. ವ್ಯಾಪಕ ಅರ್ಥದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಕ್ಷೇತ್ರದ ಆರೋಗ್ಯ ಸಂರಕ್ಷಣೆಯ ವ್ಯವಸ್ಥೆಯ ಆರ್ಥಿಕ ಸ್ವರೂಪದ ಬಗ್ಗೆ ಇದು ಗಮನವನ್ನು ಕೊಡುತ್ತದೆ. 1963ರಲ್ಲಿ Kenneth Arrow  ಬರೆದ  ಒಂದು ಲೇಖನವು ಆರೋಗ್ಯ ಅರ್ಥಶಾಸ್ತ್ರವನ್ನು ಒಂದು ಅಧ್ಯಯನ ವಿಷಯವನ್ನಾಗಿ ಚರ್ಚಿಸಲು ಅವಕಾಶ ಕಲ್ಪಿಸಿತು. ಸರ್ಕಾರದ ಮಧ್ಯಪ್ರವೇಶ, ಅನೇಕ ಆಯಾಮಗಳ ಅನಿಶ್ಚಿತತೆಗಳು, ಮಾಹಿತಿಗಳ ಕೊರತೆ-ಮುಂತಾದ ಅಂಶಗಳು ಆರೋಗ್ಯ ಪಾಲನೆಯ ಕ್ಷೇತ್ರದಲ್ಲಿ ಚರ್ಚೆಗೆ ಒಳಗಾಗಿವೆ. ಇಂಗ್ಲೆಂಡಿನಂತಹ ದೇಶದಲ್ಲಿ ಪ್ರಜೆಗಳ ಆರೋಗ್ಯ ಸಂರಕ್ಷಣೆಯ ಭಾರ ಸಂಪೂರ್ಣ ಸರಕಾರದ್ದಾದ್ದರಿಂದ, ಇದಕ್ಕಾಗಿಯೇ ದೊಡ್ಡ ಮೊತ್ತದ ತೆರಿಗೆಯನ್ನು ಎಲ್ಲ ಪ್ರಜೆಗಳು ಕೊಡಬೇಕಾಗುತ್ತದೆ. ಭಾರತದಂತಹ ದೇಶದಲ್ಲಿ ನೇರವಾಗಿ ಸರಕಾರದ ಭಾಗವಾದ ಸಾರ್ವಜನಿಕ ಆರೋಗ್ಯ ಇಲಾಖೆಗಳು ಮತ್ತು ಆಸ್ಪತ್ರೆಗಳು ಇದ್ದರೂ ಅವುಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕಾಯಿಲೆಗೆ ಒಳಗಾದ ಜನರು, ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ವೈದ್ಯರನ್ನು ಹೆಚ್ಚು ಆಶ್ರಯಿಸುತ್ತಿದ್ದಾರೆ. ಇದು ಸಹಜವಾಗಿಯೇ ಆರ್ಥಿಕವಾಗಿ ಅಶಕ್ತರಾದವರಿಗೆ ಹೆಚ್ಚಿನ ಭಾರವನ್ನು, ಸಂಕಷ್ಟವನ್ನು ಉಂಟುಮಾಡಿದೆ.

ರೋಗಿಯೊಬ್ಬರ ಆರ್ಥಿಕತೆಯ ಬಗ್ಗೆ ಯೋಚನೆ ಮಾಡದೆ ವೈದ್ಯರೊಬ್ಬರು ನಿಗದಿಪಡಿಸುವ ಔಷಧಗಳು ಅನೇಕ ಬಾರಿ ಸಾಮಾನ್ಯ ಜನರನ್ನು ಸಾಲಗಳ ಸಂಕಷ್ಟಗಳಲ್ಲಿ ಸಿಲುಕಿಸುತ್ತವೆ. ಎಷ್ಟೋ ದೈಹಿಕ ವೈಪರೀತ್ಯಗಳಿಗೆ ಔಷಧಗಳ ಅಗತ್ಯ ಇಲ್ಲದ ಸಂದರ್ಭಗಳಲ್ಲೂ ಔಷಧಗಳನ್ನು ವೈದ್ಯರು ಕೊಡುತ್ತಾರೆ. ಕೆಲವೊಮ್ಮೆ ಜನರೇ ಔಷಧವನ್ನು ಕೊಡಲೇಬೇಕು ಎಂದು ವೈದ್ಯರನ್ನು ಒತ್ತಾಯಿಸುವ  ಸಂದರ್ಭಗಳೂ ಇರುತ್ತವೆ. ತಮಗೆ ಇಂಜೆಕ್ಷನ್ನ್ನೇ ಕೊಡಬೇಕು ಎಂದು ವೈದ್ಯರನ್ನು ಕಾಡುವವರೂ ಇರುತ್ತಾರೆ.

‘ಆರೋಗ್ಯ ಅರ್ಥಶಾಸ್ತ್ರ’ದ ಇನ್ನೊಂದು  ಮುಖವೆಂದರೆ, ಯಾವುದೋ ಒಂದು ಕಾಯಿಲೆಗೆ ಮಿತಬೆಲೆಯ ಔಷಧವನ್ನು ಕೊಡುವುದರ ಬದಲು ದುಬಾರಿ ಬೆಲೆಯ ಔಷಧವನ್ನು ನಿಗದಿಮಾಡುವುದು. ಇದು ಕೆಲವೊಮ್ಮೆ ಉದ್ದೇಶಪೂರ್ವಕವಾಗಿರಬಹುದು; ಅನೇಕ ಬಾರಿ ಔಷಧಗಳ ಬೆಲೆಗಳ ಅಧ್ಯಯನಶೀಲತೆಯ ಕೊರತೆ ಕಾರಣವಾಗಿರಬಹುದು. ಇನ್ನು ಕೆಲವೊಮ್ಮೆ ವೈದ್ಯರುಗಳಿಗೆ ಕೆಲವು ಬ್ರ್ಯಾಂಡ್ಗಳ ಔಷಧಗಳ ಬಗ್ಗೆ ಇರುವ ಅತಿವಿಶ್ವಾಸ ಕಾರಣವಾಗಿರಬಹುದು.

ಸಾಮಾನ್ಯವಾಗಿ ಪ್ರತಿಯೊಂದು ಔಷಧಕ್ಕೂ ಔಷಧದ ‘ಸಾಮಾನ್ಯ ಹೆಸರು’ (Generic name) ಮತ್ತು ‘ಸ್ವಾಮ್ಯದ ಹೆಸರು’ (Proprietary name) ಎಂದು ಎರಡು ಹೆಸರುಗಳು ಇರುತ್ತವೆ. ಉದಾ.: ಪ್ಯಾರಾಸಿಟಮೋಲ್ ಎನ್ನುವುದು ಸಾಮಾನ್ಯ ಹೆಸರು. ಕಾಲ್ಪೋಲ್, ಮೆಟಾಸಿನ್, ಕ್ರೋಸಿನ್, ಫೆಫಾನಿಲ್-ಇತ್ಯಾದಿ ಸ್ವಾಮ್ಯದ ಹೆಸರುಗಳು. ಪ್ಯಾರಾಸಿಟಮೋಲ್ ಐವತ್ತು ಪೈಸೆಗೆ ದೊರೆತರೆ, ಕಾಲ್ಪೋಲ್, ಮೆಟಾಸಿನ್-ಮುಂತಾದವುಗಳು ಒಂದು ರೂಪಾಯಿಯಿಂದ ಎರಡು ರೂಪಾಯಿಗಳವರೆಗೆ ಬೆಲೆಯುಳ್ಳವಾಗಿರುತ್ತವೆ. ನಾಲ್ಕು ರೂಪಾಯಿಗೆ ದೊರೆಯುವ ಅಮೋಕ್ಸಿಸಿಲ್ಲಿನ್ನಂತಹ ಆಂಟಿಬಯೋಟಿಕ್ಸ್ಗಳನ್ನೇ ಮೋಕ್ಸ್, ವೈಮೋಕ್ಸ್ ಮುಂತಾದ ಸ್ವಾಮ್ಯದ ಹೆಸರುಗಳ ಮೂಲಕ ಹತ್ತು ರೂಪಾಯಿಗೆ ಮಾರಾಟ ಮಾಡುತ್ತಾರೆ. ನೋವು ನಿವಾರಕ ನಿಮಿಸುಲೈಡ್ ಒಂದು ರೂಪಾಯಿಗೆ ದೊರೆತರೆ, ನೈಸ್ಗೆ ಮೂರು ರೂಪಾಯಿ ಪಡೆಯುತ್ತಾರೆ. ರಕ್ತದೊತ್ತಡಕ್ಕೆ ಬಳಸುವ ಆಮ್ಲೋಡಿಪಿನ್ ಐವತ್ತು ಪೈಸೆಗೆ ದೊರೆತರೆ, ‘ಸ್ವಾಮ್ಯದ ಹೆಸರು’ ಉಳ್ಳ ‘ಆಮ್ಲೊ’-ಮುಂತಾದವುಗಳು ಹತ್ತು ರೂಪಾಯಿಗಳವರೆಗೆ ಬೆಲೆಬಾಳುತ್ತವೆ. ಅನೇಕ ಪಶ್ಚಿಮದ ದೇಶಗಳಲ್ಲಿ ಔಷಧದ ಸಾಮಾನ್ಯ ಹೆಸರನ್ನೇ ಬರೆಯಬೇಕು ಎನ್ನುವ ನಿಯಮವಿದೆ. ಆದರೆ ನಮ್ಮ ದೇಶದಲ್ಲಿ ಆ ರೀತಿಯ ನಿರ್ಬಂಧ ಇಲ್ಲ.

ಮಕ್ಕಳ ಕಾಯಿಲೆಗಳಿಗೆ ಬಳಸುವ ಸ್ಟೆರಾಯ್ಡ್ಗಳು ತುಂಬಾ ಅಪಾಯಕಾರಿ ಮತ್ತು ಹೆಚ್ಚಿನ ಅಡ್ಡಪರಿಣಾಮಗಳನ್ನುಂಟುಮಾಡುತ್ತವೆ. ಬಹಳ ಬಾರಿ ಅನಗತ್ಯವಾಗಿ ಪ್ರಯೋಗಿಸುವ ವೈಸೊಲಾನ್, ಬೆಟ್ನಸೋಲ್, ಬೆಟ್ಸೋನ್, ಬೆಟ್ನೆಲಾನ್-ಮುಂತಾದವು ಮಕ್ಕಳ ಆರೋಗ್ಯದ ಮೇಲೆ ದುಷ್ಟರಿಣಾಮವನ್ನು ಬೀರುವುದರ ಜೊತೆಗೆ ಅನಗತ್ಯವಾಗಿ ಹೆತ್ತವರ ಮೇಲೆ ವೆಚ್ಚದ ಭಾರವನ್ನು ಹೊರಿಸುತ್ತವೆ.

ಒಬ್ಬ ವೈದ್ಯರು ಮತ್ತು ಒಬ್ಬ ರೋಗಿಯ ನಡುವೆ ಆರೋಗ್ಯ ಮತ್ತು ಔಷಧಕ್ಕೆ ಸಂಬಂಧಿಸಿದಂತೆ ಇರುವ ತಿಳುವಳಿಕೆಯ ಕಂದರ ನಮ್ಮ ದೇಶದಲ್ಲಿ ಬಹಳ ವಿಸ್ತಾರವಾಗಿದೆ. ಯಾವುದೇ ಕ್ಷೇತ್ರದ ವಿಶೇಷ ಜ್ಞಾನವುಳ್ಳವರಾದರೂ ಆರೋಗ್ಯ ಮತ್ತು ಔಷಧಕ್ಕೆ ಸಂಬಂಧಪಟ್ಟಹಾಗೆ ಬಹುತೇಕ ಮಂದಿ ನೂರಕ್ಕೆ ನೂರರಷ್ಟು ಅವಿದ್ಯಾವಂತರಾಗಿರುತ್ತಾರೆ, ಮುಗ್ಧರಾಗಿರುತ್ತಾರೆ. ಹಾಗಾಗಿ, ಗ್ರಾಮೀಣ ಅನಕ್ಷರಸ್ಥ ಮಹಿಳೆಯೊಬ್ಬಳು ವೈದ್ಯರು ಕೊಟ್ಟ ಔಷಧವನ್ನು ಸೇವಿಸುವಷ್ಟೇ ಮುಗ್ಧವಾಗಿ ಮತ್ತು ಭಕ್ತಿಯಿಂದ ನಗರದ ವಿದ್ಯಾವಂತರೂ ಸೇವಿಸುತ್ತಾರೆ. ಉಳಿದ ಎಲ್ಲ ಕ್ಷೇತ್ರಗಳಿಗಿಂತ ವೈದ್ಯಕೀಯ ಕ್ಷೇತ್ರದಲ್ಲಿ ನಮ್ಮ ವಿದ್ಯಾವಂತರ ‘ವೈದ್ಯಕೀಯ ಅನಕ್ಷರತೆ’ ಅತ್ಯಂತ ಅಧಿಕಪ್ರಮಾಣದಲ್ಲಿದೆ.

ಆರೋಗ್ಯ ವಿಮೆಯ ಕಂಪೆನಿಗಳು ‘ಆರೋಗ್ಯ ಅರ್ಥಶಾಸ್ತ್ರ’ದ ವ್ಯಾಪ್ತಿಯಲ್ಲಿ ಹೆಚ್ಚಿನ ಪಾತ್ರವನ್ನು ವಹಿಸುತ್ತವೆ. ಆರೋಗ್ಯ ವಿಮೆಯ ಕಂಪೆನಿಯೊಂದು ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳನ್ನು ಮರುಭರಿಸುವ ಅವಕಾಶವಿದ್ದಾಗ, ವೈದ್ಯಕೀಯ ವೆಚ್ಚವನ್ನು ಉಬ್ಬರಿಸುವ ಸಂದರ್ಭಗಳೂ ಕೆಲವೊಮ್ಮೆ ಇರುತ್ತವೆ. ಆದರೆ ಇದಕ್ಕೆ ವಿರುದ್ಧವಾದ ಪ್ರತಿಕ್ರಿಯೆಗಳೂ ಆರೋಗ್ಯ ವಿಮೆಯ ಕಂಪೆನಿಗಳಿಂದ ಬಂದಿವೆ. ಔಷಧಗಳನ್ನು ನಿಗದಿಮಾಡುವಾಗ ಅವುಗಳ ‘ಸಾಮಾನ್ಯ ಹೆಸರು’ (Generic names)ಗಳನ್ನೇ ಬರೆಯಬೇಕು ಎನ್ನುವ ಒತ್ತಾಯವನ್ನು ಕೆಲವು ಆರೋಗ್ಯ ವಿಮೆಯ ಕಂಪೆನಿಗಳು ಮಾಡುತ್ತಿವೆ. ಯಾಕೆಂದರೆ, ಕಂಪೆನಿ ಔಷಧಿಗಳ ಹೆಸರಿನಲ್ಲಿ ನಿಗದಿಮಾಡುವ ಔಷಧದ ಮೊತ್ತವು ಹೆಚ್ಚಾದಂತೆಲ್ಲಾ ವಿಮೆಯ ಕಂಪೆನಿಗಳು ಹೆಚ್ಚು ಮೊತ್ತವನ್ನು ಮರುಭರಿಸಬೇಕಾಗಿ ಬಂದು, ಅಂತಹ ಕಂಪನಿಗಳು ಆರ್ಥಿಕ ದಿವಾಳಿತನಕ್ಕೆ ಒಳಗಾಗಿರುವ ಸಂದರ್ಭಗಳೂ ಇವೆ.

ಹೀಗೆ, ಉದ್ಯಮದ ಮಾದರಿಯಲ್ಲಿ ಆರೋಗ್ಯಕ್ಷೇತ್ರ ಬೆಳೆದಂತೆಲ್ಲಾ ಉದ್ಯಮದ ಒಳಿತು-ಕೆಡಕುಗಳು ಆರೋಗ್ಯದ ಕ್ಷೇತ್ರದಲ್ಲಿಯೂ ಪರಿಣಾಮವನ್ನು ಉಂಟುಮಾಡಿವೆ. ಬಹಳ ಮುಖ್ಯವಾದ ದುಷ್ಟರಿಣಾಮ ಮತ್ತು ಅಡ್ಡಪರಿಣಾಮವೆಂದರೆ, ಧಾರಣಶಕ್ತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಔಷಧಗಳ ಸೇವನೆಯಿಂದ ದೇಹವು ನಿಷ್ಟ್ರಯೋಜಕ ರಾಸಾಯನಿಕ ವಸ್ತುಗಳ ಕಸದ ತೊಟ್ಟಿಯಾಗುತ್ತಿರುವುದು ಮತ್ತು ಅದರ ಪರಿಣಾಮವಾಗಿ ಒಳ್ಳೆಯ ಆಹಾರವನ್ನು ಸ್ವೀಕರಿಸಲು ದೇಹ ನಿರಾಕರಿಸುತ್ತಿರುವುದು. ಇನ್ನೊಂದು ಪರಿಣಾಮವೆಂದರೆ, ಬಡತನದ ರೇಖೆಗಿಂತ ಕೆಳಗಿರುವವರ ಸಂಖ್ಯೆ ಅಧಿಕವಾಗಿರುವ ನಮ್ಮ ದೇಶದಲ್ಲಿ, ಆರೋಗ್ಯವನ್ನು ಉಳಿಸಲು ಮತ್ತು ಜೀವವನ್ನು ಉಳಿಸಲು ಮಾಡುವ ವೆಚ್ಚವು ವೈರಾಣು ರೋಗದಂತೆ ಹರಡುತ್ತಾ, ಹೆಚ್ಚುತ್ತಾ ಬಂದು, ಬಡಕುಟುಂಬಗಳನ್ನು ನಿರ್ನಾಮ ಮಾಡುತ್ತಿರುವುದು.

ನಮ್ಮ ಜನಸಾಮಾನ್ಯರು ಹೊಲವನ್ನು ಮಾರಿ, ಒಡವೆ-ವಸ್ತುಗಳನ್ನು ಮಾರಿ ಸಾವಿರಾರು ರೂಪಾಯಿಗಳ ಮೊತ್ತದ ಔಷಧಗಳನ್ನು ಕೊಳ್ಳುವ ದೃಶ್ಯ ಕರುಣಾಜನಕವಾದುದು. ‘ಆರೋಗ್ಯ ಅರ್ಥಶಾಸ್ತ್ರ’ದ ಬಗ್ಗೆ ಸಾರ್ವಜನಿಕರಿಗೆ ಅರಿವನ್ನು ಉಂಟುಮಾಡಿಸುವುದು, ತರಬೇತಿಯನ್ನು ಕೊಡುವುದು ಮತ್ತು ಇಂತಹ ಕಾರ್ಯಕ್ರಮದಲ್ಲಿ ವೈದ್ಯರನ್ನು ಒಳಗೊಳ್ಳುವಂತೆ ಮಾಡುವುದು, ಇದಕ್ಕೆ ಪೂರಕವಾಗಿ ಕಾನೂನುಗಳನ್ನು ತರುವುದು-‘ತುರ್ತು ಚಿಕಿತ್ಸಾ ಘಟಕದಲ್ಲಿ ರೋಗಿಯನ್ನು ಇಡುವಷ್ಟೇ ತುರ್ತಾಗಿ ನಮ್ಮ ದೇಶದಲ್ಲಿ ಆಗಬೇಕಾದ ಕೆಲಸ’.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

3 Responses to “ನಮ್ಮ ಹೊಟ್ಟೆಯೊಳಗೊಂದು ಔಷಧದ ತೊಟ್ಟಿ”

RSS Feed for ಬಿ ಎ ವಿವೇಕ ರೈ Comments RSS Feed

hello sir,
it’s gr8 plessure to me to read ur blog. it brings wonderfull experience with the bunch of various diciplines. thanx for keeping in touch through this blog
-venkatramana gowda

Thank you so much.I appreciate your concern.I will try to have more posts in my blog.


Where's The Comment Form?

Liked it here?
Why not try sites on the blogroll...

%d bloggers like this: