ಯುರೇಕಾ ಯುರೇಕಾ : ದಿನನಿತ್ಯದ ಕಾಮನಬಿಲ್ಲು

Posted on ಏಪ್ರಿಲ್ 13, 2010. Filed under: Uncategorized |


https://bavivekrai.files.wordpress.com/2010/03/irulakannu3.jpg?w=156&h=243

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 22 ಮೇ, 2009.

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ

ಲೋಕಸಭೆಯ ಮಹಾಚುನಾವಣೆ ನಡೆದು ಸೋಲುಗೆಲುವುಗಳ ಕತ್ತಲೆಬೆಳಕಿನ ಲೋಕಗಳು ಅನಾವರಣಗೊಂಡು ಒಂದೆಡೆ ಉತ್ಸಾಹ ಸಂತೋಷಗಳ ಉಬ್ಬರ ಕಾಣಿಸಿಕೊಂಡರೆ, ಇನ್ನೊಂದೆಡೆ ಸೋಲಿನ ಹತಾಶೆಯ ಮಂಕಿನ ಕಾರ್ಮೋಡ ಕವಿದಿದೆ. ಒತ್ತಡ ತಂತ್ರದ ಮೂಲಕ ಆಳುವ ಪಕ್ಷದ ಮೇಲೆ ನಿಯಂತ್ರಣ ಹೊಂದುವ ಬಯಕೆ ಹೊಂದಿದ್ದ ಪಕ್ಷಗಳೆಲ್ಲವೂ ಒಂದೊಂದಾಗಿ ತಾವಾಗಿಯೇ ಯುಪಿಎ ಸರ್ಕಾರಕ್ಕೆ ಬೆಂಬಲ ಕೊಡಲು ಮುನ್ನುಗ್ಗತೊಡಗಿವೆ. ಪರಸ್ಪರ ವಿರೋಧಿಗಳಾದ ಪಕ್ಷಗಳೂ ಒಕ್ಕೂಟದ ಬಲವನ್ನು ಅರ್ಥಮಾಡಿಕೊಂಡಿವೆ. ಒಡೆಯುವುದರಿಂದ, ಚಿಕ್ಕ ಕೋಟೆಗಳನ್ನು ಕಟ್ಟುವುದರಿಂದ ತಾವು ಅನಾಥರಾಗುತ್ತೇವೆ, ಬಂಧಿಗಳಾಗುತ್ತೇವೆ ಎಂದು ಮನವರಿಕೆಯಾಗಿದೆ. ಯುವ ಪೀಳಿಗೆಯವರ ಉತ್ಸಾಹ, ಭರವಸೆ, ಕನಸುಗಳು ಮುಂಚೂಣಿಗೆ ಬರತೊಡಗಿವೆ.

ಒಂದು ಮಹಾಚುನಾವಣೆ ಒಂದು ಜನಪ್ರಿಯ ಆಂದೋಲನ ಇದ್ದ ಹಾಗೆ. ಈ ಆಂದೋಲನದಲ್ಲಿ ಗೆದ್ದು ಬಂದ ಪಕ್ಷಗಳು ಸಾಮೂಹಿಕವಾಗಿ ಹೊಸದೊಂದನ್ನು ಕಟ್ಟುವ ಆಶಾಭಾವನೆಯನ್ನು ಉಂಟು ಮಾಡುತ್ತವೆ. ಸಾಮಾಜಿಕ ಆಂದೋಲನಗಳು ಆದರ್ಶದ ಜೀವನ ವಿಧಾನಗಳನ್ನು ಮತ್ತು ಸಾಮಾಜಿಕ ವ್ಯವಸ್ಥೆಗಳನ್ನು ಹೊಸ ಪರಿಕಲ್ಪನೆಗಳ ರೂಪದಲ್ಲಿ ಕಟ್ಟುವ ಪ್ರಯತ್ನವನ್ನು ಮಾಡುತ್ತವೆ. ಅವು ಜನಗಳನ್ನು ಹಿಡಿದಿಟ್ಟುಕೊಂಡು ಅವರನ್ನು ಅಲುಗಾಡಿಸಿ ಮತ್ತೆ ಅವರನ್ನು ಹೊಸ ದಿಗಂತಗಳ ಜಗತ್ತಿನಲ್ಲಿ ಇರಿಸಲು ಬಯಸುತ್ತವೆ.

rainbow_webಪರಿವರ್ತನೆಯ ಗಡಿಯಾರದ ಮುಳ್ಳೊಂದು ಮೇಲೆ ಕೆಳಗೆ, ಬೆಳಕಿನಲ್ಲಿ ಕತ್ತಲೆಯಲ್ಲಿ, ನ್ಯಾಯ ಅನ್ಯಾಯಗಳ ನಡುವೆ, ಒಳಿತು ಕೆಡುಕುಗಳ ಸುತ್ತ ತೊನೆದಾಡುತ್ತ ಕೊನೆಗೂ ಒಂದು ಕಡೆ ತನ್ನ ಸ್ಥಾನವನ್ನು ನಿರ್ದೇಶಿಸುತ್ತದೆ. ಇಂತಹ ಸಾಮಾಜಿಕ ಆಂದೋಲನದ ಜಗತ್ತಿನಲ್ಲಿ ಜನರೇ ಪ್ರಧಾನರು. ಅಲ್ಲಿ ಹಂಚಿಕೊಳ್ಳಬೇಕಾದ ಕೆಲಸಗಳಿರುತ್ತವೆ, ಹಂಚಿಕೊಳ್ಳಬೇಕಾದ ಬದುಕು ಇರುತ್ತದೆ. ಅಲ್ಲಿ ಯಾರೊಬ್ಬರೂ ಅನಗತ್ಯವಾಗುವುದಿಲ್ಲ. ಪ್ರತಿಯೊಬ್ಬರಿಗೂ ಒಂದು ಜವಾಬ್ದಾರಿ ಇರುತ್ತದೆ. ನಿರುದ್ಯೋಗ ಎನ್ನುವ ಹೆಸರೇ ಇರುವುದಿಲ್ಲ. ಸಾಮಾಜಿಕ ಆಂದೋಲನಗಳು ಸ್ವಾತಂತ್ರ್ಯ ಮತ್ತು ಜವಾಬ್ದಾರಿಯನ್ನು ಒಟ್ಟಿಗೆ ಒಳಗೊಂಡಿರುತ್ತವೆ. ಕಾಮನಬಿಲ್ಲುಗಳಂತೆ ಅವು ಪ್ರತಿದಿನದ ಬೆಳಕಿನಲ್ಲಿ ಚಾಚಿಕೊಂಡಿರುತ್ತವೆ.

ಸಾಮಾಜಿಕ ಆಂದೋಲನಗಳನ್ನು ಹೊಸಬದುಕಿನ ವ್ಯವಸ್ಥೆಯನ್ನು ಸ್ಥಾಪಿಸುವ ಸಾಮುದಾಯಿಕ ಪ್ರಯತ್ನವೆಂದು ಕರೆಯಬಹುದು. ಅವು ನಮ್ಮ ಯೋಚಿಸುವ ವಿಧಾನವನ್ನು ಬದಲಾಯಿಸುತ್ತವೆ. ಹೀಗಾಗಿ ಇವನ್ನು ದಿನನಿತ್ಯದ ಕಾಮನಬಿಲ್ಲುಗಳೆಂದು ಕರೆಯಲಾಗಿದೆ. ಸಮಾಜವಿಜ್ಞಾನಿ Johan Asplund ಆಕಸ್ಮಿಕ ಒಡನಾಟದ ಮತ್ತು ಆ ಮೂಲಕ ಹೊಸ ಚಿಂತನೆಯ ಪರಿಕಲ್ಪನೆಯನ್ನು ವಿವರಿಸುತ್ತಾನೆ. ಆರ್ಕಿಮಿಡೀಸ್ ಕಂಡುಕೊಂಡ ಶೋಧ ಈ ಬಗೆಯದ್ದು. ‘ಯುರೇಕಾ  ಯುರೇಕಾ, ನಾನು ಕಂಡುಕೊಂಡೆ’ ಎನ್ನುವ ಉದ್ಗಾರ ಆಕಸ್ಮಿಕ ಅರಿವಿನ ಒಂದು ಮಾದರಿ. ಹೊಸ ಶೋಧ ಒಂದು ಪರಿವರ್ತನೆಗೆ ಕಾರಣವಾಗುವ ಬಗೆ ಅಪೂರ್ವವಾದುದು. ಧರ್ಮ, ರಾಜಕೀಯ, ಸಮಾಜ ಹೀಗೆ ಯಾವುದೇ ಕ್ಷೇತ್ರದಲ್ಲಾದರೂ ಇಂತಹ ಹೊಸ ಕ್ಷಣದ ಒಡನಾಟವೊಂದು ಪೂರ್ಣ ಪರಿವರ್ತನೆಗೆ ಕಾರಣವಾಗಿ ಹೊಸ ಜಗತ್ತೊಂದನ್ನು ನಿರ್ಮಾಣ ಮಾಡಬಹುದು. ಹೀಗಾಗಿ ಸಾಮಾಜಿಕ ಆಂದೋಲನಗಳಲ್ಲಿ ಹೊಸ ಅನನ್ಯತೆಯ ನಿರ್ಮಾಣಕ್ಕೆ ವಿಶೇಷ ಮಹತ್ವವಿದೆ. ‘ಎಚ್ಚರಗೊಳ್ಳುವುದು’ ಎನ್ನುವುದು  ಸಾಂಸ್ಕೃತಿಕ ಪ್ರಕ್ರಿಯೆಯ ಒಂದು ಮುಖ್ಯ ಪರಿಭಾಷೆ. ನಿದ್ರೆಯಿಂದ ಎಚ್ಚರಗೊಳ್ಳುವ ಹಾಗೆಯೇ ಸ್ಥಗಿತಗೊಂಡ ಅಥವಾ ಚಲನಶೀಲತೆಯನ್ನು ಕಳೆದುಕೊಂಡ ಸ್ಥಿತಿಯಿಂದ ಹೊಸತೊಂದನ್ನು ಕಾಣುವ, ಎಚ್ಚರಗೊಳ್ಳುವ ಒಂದು ಅದ್ಭುತವಾದ ಅನುಭವ ಹೊಸ ಜಗತನ್ನು ಕಾಣುವ ಅಪೂರ್ವವಾದ ಮಾರ್ಗ.

ಆರ್ಕಿಮಿಡೀಸನಿಗೆ ನೀರಿನ ತೊಟ್ಟಿಯಲ್ಲಿ ಉಂಟಾದ ಜ್ಞಾನೋದಯ ಅದು ಕೇವಲ ಒಂದು ಕ್ಷಣದ ಎಚ್ಚರದ ಸ್ಫೋಟ ಅಲ್ಲ, ಅದರ ಹಿಂದೆ ಜಡತ್ವದ ಪ್ರತಿರೋಧದ ಅನೇಕ ಚಟುವಟಿಕೆಗಳ ಒಟ್ಟು ಮೊತ್ತವಿತ್ತು, ಹಾಗಾಗಿ ‘ಎಚ್ಚರಗೊಳ್ಳುವುದು’ ಎನ್ನುವುದು ಸಾಂಸ್ಕೃತಿಕ ಅನನ್ಯತೆಯ ಮೊತ್ತಮೊದಲ ಮುಖ್ಯವಾದ ಒಂದು ಅನುಭವ. ಆಕಸ್ಮಿಕವಾಗಿ ಸ್ಪಷ್ಟವಾಗುವುದು ಹಾಗೂ ಅದನ್ನು ಗುರುತಿಸುವುದು – ಇದು ನಿಜವಾದ ಅರ್ಥದಲ್ಲಿ ಹೊಸ ಜಗತ್ತನ್ನು ಕಾಣಲು ಮತ್ತು ನಿರ್ಮಿಸಲು ತೀರಾ ಅಗತ್ಯ.

ಇಟಾಲಿಯನ್ ಸಮಾಜಶಾಸ್ತ್ರಜ್ಞ Francesco Alberoni ಯು ‘Falling in Love and Loving’ (1979) ಎನ್ನುವ ತನ್ನ ಕೃತಿಯಲ್ಲಿ ಒಂದು ವಿಚಿತ್ರವಾದ ಒಳನೋಟದ ಅವಲೋಕನವನ್ನು ಕೊಡುತ್ತಾನೆ. ಆಲ್ಬರೋನಿಯ ಪ್ರಕಾರ ‘ಪ್ರೀತಿಸುವುದು’ ಮತ್ತು ‘ಸಾಮಾಜಿಕ ಆಂದೋಲನ’ ಇವೆರಡೂ ಒಂದೇ ವರ್ಗಕ್ಕೆ ಸೇರಿದವು. ಪ್ರೀತಿಸುವ ಚಟುವಟಿಕೆಯಲ್ಲಿ ಇಬ್ಬರು ಮಾತ್ರ ಇದ್ದರೆ, ಸಾಮಾಜಿಕ ಆಂದೋಲನದಲ್ಲಿ ಒಂದು ಸಮುದಾಯ ಪಾಲ್ಗೊಳ್ಳುತ್ತದೆ. ಆದರೆ ಆಲ್ಬರೋನಿಯ ಪ್ರಕಾರ ಈ ಎರಡೂ ರೀತಿಯ ಸಾಹಚರ್ಯಗಳಲ್ಲಿ ಬಿಡುಗಡೆ ಆಗುವ ಮತ್ತು ಪರಿಣಾಮಕಾರಿಯಾಗುವ ಶಕ್ತಿಯು ಸಮಾನ ರೂಪದ್ದು. ಅವನ ಪ್ರಕಾರ ಪ್ರೀತಿಸುವುದೆಂದರೆ ಸಾಮೂಹಿಕ ಆಂದೋಲನದ ಒಂದು ಸರಳ ರೂಪ. ಸಾಮಾಜಿಕ ಆಂದೋಲನಗಳ ಬಗೆಗಿನ ತನ್ನ ತಿಳುವಳಿಕೆಯನ್ನು ಆಲ್ಬರೋನಿಯು ಪ್ರೀತಿಸುವ ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಬಳಸಿಕೊಳ್ಳುತ್ತಾನೆ. ಎರಡು ಭಿನ್ನ ಮನಸ್ಸುಗಳು, ವ್ಯಕ್ತಿತ್ವಗಳು ಪರಸ್ಪರ ಮೆಚ್ಚಿಕೊಳ್ಳುವ, ಒಲಿಯುವ ಮತ್ತು ಒಂದಾಗುವ ಸನ್ನಿವೇಶವು ಸಾಮೂಹಿಕತೆಯ ಮೂಲಕ ಹೊಸತನ್ನು ಕಾಣುವ ಮತ್ತು ನಿರ್ಮಿಸುವ ಸಾಧ್ಯತೆಯನ್ನು ಉಂಟು ಮಾಡುತ್ತದೆ. ಹಾಗಾಗಿ ‘ಎಚ್ಚರಗೊಳ್ಳುವುದು’ ಎಂದರೆ ಬಿಡುಗಡೆ. ಇಂತಹ ವಿಮೋಚನೆಯ ಅಸಾಧಾರಣ ಅನುಭವವು ಶಕ್ತಿಯನ್ನು ಮತ್ತು ಸಂತೋಷವನ್ನು ಜೊತೆಗೆಯೇ ತಂದುಕೊಡುತ್ತದೆ.

‘Falling in Love and Loving’ ಎಂಬ ಗ್ರಂಥದ ಕೊನೆಯಲ್ಲಿ ಆಲ್ಬರೋನಿ ಹೇಳುವ ಈ ಮಾತುಗಳು ಮುಖ್ಯವಾದವು – ಅನೇಕ ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಸಂಸ್ಥೆಗಳು ಇತಿಹಾಸದುದ್ದಕ್ಕೂ ತಮ್ಮ ವ್ಯಾಪ್ತಿಯ ಒಳಗೆ ಬರುವ ವ್ಯಕ್ತಿಗಳ ಮೇಲೆ ಕಠಿಣವಾದ ನಿಯಂತ್ರಣವನ್ನು ಹೊಂದುವ ಹಕ್ಕು ತಮಗೆ ಇವೆ ಎಂದು ಸಾಧಿಸುತ್ತಾ ಬಂದಿವೆ. ಅವುಗಳ ಪ್ರಕಾರ ವ್ಯಕ್ತಿಗಳು ತಮಗೆ ಸಂಪೂರ್ಣವಾಗಿ ಶರಣಾಗಿರಬೇಕು. ಆಧುನಿಕ ಕಾಲದಲ್ಲೂ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಗಳು ವ್ಯಕ್ತಿಗಳು ಒಂದಾಗುವ ಅವಕಾಶಗಳನ್ನು ತಡೆಯುತ್ತಾ, ವಿರೋಧಿಸುತ್ತಾ ಬರುತ್ತಿವೆ. ಆಫ್ಘಾನಿಸ್ತಾನದ ತಾಲಿಬಾನ್ ಆಡಳಿತದಲ್ಲಿ ಗಂಡು ಹೆಣ್ಣು ಪರಸ್ಪರ ಪ್ರೀತಿಸುವುದನ್ನು ನಿಷೇಧಿಸಲಾಗುತ್ತಿದೆ. ಗಂಡು ಹೆಣ್ಣು ಒಟ್ಟಾಗುವುದು ಎಂದರೆ ಅದೊಂದು ಸಾಮೂಹಿಕ ಶಕ್ತಿಯನ್ನು ಪಡೆಯುವುದು ಎಂದು ಭಾವಿಸುವ ಮತ್ತು ಅದಕ್ಕಾಗಿ ಭಯಪಡುವ ಧಾರ್ಮಿಕ ಸಂಘಟನೆಗಳು ಇಂತಹ ಚಟುವಟಿಕೆಗಳಿಗೆ ನಿರ್ಬಂಧ ಹೇರುತ್ತವೆ. ಹೀಗಾಗಿ ಪ್ರೇಮಿಸುವುದು ಒಂದು ಅಪರಾಧ, ಸಾಮೂಹಿಕವಾಗಿ ಒಟ್ಟಾಗುವುದು ಪ್ರತಿರೋಧ ಎನ್ನುವ ಅಪಕಲ್ಪನೆಯನ್ನು ಪ್ರಭುತ್ವದ ಶಕ್ತಿಗಳು ಸದಾ ಉಳಿಸಿಕೊಂಡು ಬಂದಿವೆ.

ಮಾನಸಿಕ ಬಂಧುತ್ವ ಎನ್ನುವ ಪರಿಕಲ್ಪನೆಯು ಸಾಮಾಜಿಕ ಆಂದೋಲನಗಳಲ್ಲಿ ಮುಖ್ಯವಾದುದು. ಕ್ಲಬ್ಗಳಲ್ಲಿ ಒಟ್ಟಾಗುವುದಕ್ಕೂ ಮಾನಸಿಕ ಬಂಧುತ್ವದ ಮೂಲಕ ಸಾಮೂಹಿಕತೆಯನ್ನು ಪಡೆಯುವುದಕ್ಕೂ ವ್ಯತ್ಯಾಸವಿದೆ. ಸಾಮಾಜಿಕ ಆಂದೋಲನದಲ್ಲಿ ಪಾಲ್ಗೊಳ್ಳುವುದು  ಸಾಮುದಾಯಿಕ ಬಂಧುತ್ವ, ಸ್ನೇಹ ಮತ್ತು ನೆರೆಹೊರೆಯ ಸಂಬಂಧಗಳಷ್ಟೇ ಮುಖ್ಯವಾದುದು.

ಲೋಕಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬರುತ್ತಿರುವ ಯುಪಿಎ ಒಕ್ಕೂಟ ಗೆದ್ದವರನ್ನು ಮಾತ್ರ ತನ್ನ ಸ್ನೇಹಿತರೆಂದು ಭಾವಿಸದೆ, ಸೋತವರನ್ನೂ ಕೂಡ ತನ್ನ ಬಂಧುಗಳೆಂದು ಪರಿಗಣಿಸಿ ಆಡಳಿತವನ್ನು ನಡೆಸಿದರೆ ಮಾತ್ರ ಮಹತ್ವದ ಬದಲಾವಣೆಗಳನ್ನು ತರಬಹುದು, ಆಂದೋಲನಕ್ಕೆ ಹೊಸ ಶಕ್ತಿಯನ್ನು ತುಂಬಬಹುದು. ವಿರೋಧ ಪಕ್ಷ ಮತ್ತು ಮಿತ್ರ ಪಕ್ಷ ಎನ್ನುವ ಪರಿಭಾಷೆ ಒಕ್ಕೂಟ ಆಡಳಿತ ವ್ಯವಸ್ಥೆಯಲ್ಲಿ ನಿರಂತರ ಬದಲಾವಣೆ ಆಗುತ್ತಾ ಬಂದಿದೆ. ಯುವ ಪೀಳಿಗೆ, ಅವಗಣಿತ ಜನಸಮುದಾಯ ಅಪಾರವಾದ ನಿರೀಕ್ಷೆಯಿಂದ ಹೊಸ ದಿಗಂತೆಡೆಗೆ ಕಣ್ಣು ತೆರೆದು ಹೊಸ ಕಾಮನಬಿಲ್ಲನ್ನು ಕಾಣಲು ಬಯಸುವಾಗ ಆ ಬಣ್ಣದ ಕಮಾನುಗಳು ಕಪ್ಪು ಮೋಡಗಳ ಎಡೆಯಿಂದ ಹೊರಚಿಮ್ಮಬೇಕು. ಇಂತಹ ಕಾಮನಬಿಲ್ಲು ಪೂರ್ಣಪ್ರಮಾಣದ ಕಾಮನಬಿಲ್ಲುಗಳಾಗಬೇಕಾದರೆ ಅದು ಎಲ್ಲರನ್ನೂ ಒಳಗೊಂಡು ಆರ್ಕಿಮಿಡೀಸನ ಯುರೇಕಾದಂತೆ ಹೊಸದನ್ನು ಕಾಣುವ ಎಲ್ಲರ ಬದುಕಿನ ಕನಸಿನ ಕಾಮನಬಿಲ್ಲಾಗಬೇಕು. ಪ್ರೀತಿಸುವುದು ಮತ್ತು ಒಟ್ಟಾಗುವುದು ಕೇವಲ ಹೆಣ್ಣು ಗಂಡಿನ ಸಂಬಂಧಕ್ಕಷ್ಟೇ ಸೀಮಿತವಾಗದೆ ಜಾತಿ, ಮತ, ಪಕ್ಷ, ಪ್ರದೇಶ, ಭಾಷೆ, ಜನಾಂಗಗಳ ಭೇದವಿಲ್ಲದೆ ಹೊಸ ‘ರಸಾಯನ’ (Chemistry)ದ ನಳಪಾಕವಾಗಬೇಕು.

ಹಿಂಸೆ ಎಂದಿಗೂ ಗೆಲ್ಲುವುದಿಲ್ಲ ಎನ್ನುವುದನ್ನು ಜಗತ್ತಿಗೆ ಒಂದು ಆದರ್ಶವಾಗಿ ನಮ್ಮ ಭಾರತ ತೋರಿಸಿಕೊಟ್ಟ್ಟಿದೆ. ಅಹಿಂಸೆಯ ಶಾಂತಿಯ ಸಹನೆಯ ಸೌಹಾರ್ದದ ವ್ಯಕ್ತಿತ್ವವೇ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ಉಳಿಸಬಲ್ಲುದು ಎನ್ನುವುದು ನಿಜವಾಗಿದೆ. ಇದೇ ವೇಳೆಗೆ ಸಿಂಹಳದಲ್ಲಿ ಜನಾಂಗೀಯ ಭಯೋತ್ಪಾದನೆಯನ್ನು ಮಿಲಿಟರಿ ಯುದ್ಧದ ಮೂಲಕ ಕೊನೆಗಾಣಿಸಲಾಗಿದೆ. ಈ ಮಿಲಿಟರಿ ವಿಜಯವು ಆ ದೇಶದಲ್ಲಿ ಶಾಂತಿಯನ್ನು ನೆಲಸುವಂತೆ ಮಾಡಲು ಸಾಕಾಗುವುದಿಲ್ಲ. ಸಿಂಹಳದಲ್ಲೇ ಹುಟ್ಟಿ ಬೆಳೆದ ತಮಿಳು ಭಾಷೆಯ ನಾಗರಿಕರನ್ನು ಆ ದೇಶದ ಸಮಾನ ಪ್ರಜೆಗಳೆಂದು ಪರಿಗಣಿಸಿ ಅವರಿಗೆ ಹಕ್ಕುಗಳನ್ನು ಭದ್ರತೆಯನ್ನು ಕೊಡಬೇಕಾದದ್ದು ಅಲ್ಲಿನ ಸರ್ಕಾರದ ಜವಾಬ್ದಾರಿ. ಯುದ್ಧದ ನಿರಾಶ್ರಿತರ ಬಿಡಾರಗಳಿಂದ ಬಿಡಾರಗಳಿಗೆ ಅನಾಥರಂತೆ ಅಲೆದಾಡುತ್ತಿರುವ ತಮಿಳು ನಾಗರಿಕರಿಗೆ ಎಲ್ಲಾ ರೀತಿಯ ರಕ್ಷಣೆ ಪೋಷಣೆ ದೊರೆತಾಗ ಮಾತ್ರ ವಿಜಯದ ಸಮಾರಂಭಗಳಿಗೆ ಅರ್ಥ ಪ್ರಾಪ್ತವಾಗುತ್ತದೆ.

ನಮ್ಮ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಇನ್ನೂ ಮಿಲಿಟರಿ ಆಡಳಿತದ ಛಾಯೆಯಲ್ಲಿಯೇ ನಾಗರಿಕರನ್ನು ಸದಾ ಆತಂಕ ತಲ್ಲಣಗಳಲ್ಲಿ ಬದುಕುವಂತೆ ಮಾಡುತ್ತಿವೆ. ಅನ್ಯ ಧರ್ಮ ಹಾಗೂ ಜನಾಂಗಗಳ ಬಗ್ಗೆ ಸಹನೆ ಸ್ನೇಹದ ವಾತಾವರಣವನ್ನು ಈ ದೇಶಗಳು ನಿರ್ಮಾಣ ಮಾಡದಿದ್ದರೆ ತಾವೇ ಸೃಷ್ಟಿಸಿದ ಭಯೋತ್ಪಾದನೆಯ ಭಸ್ಮಾಸುರರಿಂದ ನಿಧಾನವಾಗಿ ನಾಶವಾಗುತ್ತಾ ಬರುತ್ತವೆ. ಭಾರತದಂತಹ ಹಲವು ಭಾಷೆ ಧರ್ಮ ಜನಾಂಗಗಳ ರಾಷ್ಟ್ರವು ತನ್ನ ಬಹುತ್ವವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಸಾಗುತ್ತಿರುವ ದಾರಿಯು ನೆರೆಯ ಸಾರ್ಕ್ ದೇಶಗಳಿಗೆ ಆದರ್ಶವಾಗಬೇಕು. ಭಾರತ ಖಂಡದ ಸ್ಥಿರತೆ ಮತ್ತು ಅಭಿವೃದ್ಧಿ ಜಾಗತಿಕ ಮಟ್ಟದಲ್ಲಿ ಒಂದು ಹೊಸ ಕಾಮನಬಿಲ್ಲಿನ ಮಾದರಿಯಾಗಬೇಕು. ಒಂದಾಗುವುದು ಕೇವಲ ಅಧಿಕಾರದ ಪಾಲುಗಾರಿಕೆಗಾಗಿ ಮಾತ್ರ ಅಲ್ಲ, ಅದು ಒಂದು ಪ್ರದೇಶದ ಎಲ್ಲಾ ಜನ ಸಮುದಾಯಗಳ ರಕ್ಷಣೆಗಾಗಿ ಮತ್ತು ಅಭಿವೃದ್ಧಿಗಾಗಿ ಎನ್ನುವುದನ್ನು ಸಾರಲು ಮತ್ತೊಮ್ಮೆ ಆರ್ಕಿಮಿಡೀಸನ ‘ಯುರೇಕಾ ಯುರೇಕಾ’ ಉದ್ಗಾರವು ಜಗತ್ತಿನಲ್ಲಿ ಅನುರಣಿಸಬೇಕು. ‘ಜೈ ಹೋ’  ಎನ್ನುವುದು ಒಂದು ಪಕ್ಷದ ವಿಜಯದ ಉದ್ಘೋಷ ಅಷ್ಟೇ ಅಲ್ಲ, ಅದು ಹೊಸ ವಿಶ್ವಕುಟುಂಬದ ‘ಯುರೇಕಾ’.


Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: