ಅಗ್ರಾಳ ಲೇಖನ ಮಾಲೆ:ದೇವರೆಲ್ಲಿ?

Posted on April 7, 2010. Filed under: ನನ್ನ ಅಪ್ಪ.. |


 ಅಗ್ರಾಳ ಪುರಂದರ ರೈ

ರಸಾಯನ ಕತಾ ಸಂಕಲನದಿಂದ (೧೯೫೨)

-ಅಗ್ರಾಳ ಪುರಂದರ ರೈ

ವೀರಮ್ಮನ ದೈವ  ಭಕ್ತಿ ಊರೆಲ್ಲ ಪ್ರಸಿದ್ಧ. ವರ್ಷಕ್ಕೆ ಹತ್ತಾರು ದುರ್ಗ ನಮಸ್ಕಾರ, ಸತ್ಯನಾರಾಯಣ ಪೂಜೆ ಮಾಡಿಸುತ್ತಿದ್ದಳು. ಎಲ್ಲಾದರೂ ಗುಡಿಗೋಪುರ ಕಟ್ಟಿಸುವವರಿಗೆ ಶಕ್ತ್ಯಾನುಸಾರ ಧನಸಹಾಯ ಒದಗಿಸುತ್ತಿದ್ದಳು. ದೈವ ಸೇವೆಯೆಂದು ಯಾರು ಯಾವ ಕೆಲಸಕ್ಕೆ ಕೈ ಹಚ್ಚಿದರೂ ಅವಳು ಧನಸಹಾಯ ಒದಗಿಸದೆ ಉಳಿಯುತ್ತಿರಲಿಲ್ಲ.

ಅವಳು ಇತ್ತೀಚೆ  ಕಟ್ಟಿಸಿದ ಲಕ್ಷ್ಮೀನಾರಾಯಣ  ಗುಡಿ, ಅದರ ಬ್ರಹ್ಮಕಲಶ ಮಹೋತ್ಸವ, ದಾನ ಧರ್ಮ, ಬ್ರಾಹ್ಮಣ ಸಂತರ್ಪಣೆ, ಭೂರಿ ಭೋಜನ ಇದನ್ನು ಕಂಡ ಬಳಿಕ ಜನರಿಗೆ ಅವಳ ಮೇಲಿದ್ದ ಭಕ್ತಿ ಗೌರವಾದರಗಳು ಇಮ್ಮಡಿಸಿತು. ಊರಿಗೆ ಹರಿದಾಸರು ಬಂದರೆ, ಹರಿಕಥೆ ಮಾಡಿಸದೆ ಕಾಣಿಕೆ ಒಪ್ಪಿಸದೆ ಬಿಡುತ್ತಿರಲಿಲ್ಲ. ಒಳ್ಳೆಯ ವಾಗ್ಮಿಗಳನ್ನು ಕರೆಸಿ, ದೈವ ಭಕ್ತಿಯ ಕುರಿತು ಭಾಷಣ ಮಾಡಿಸುತ್ತಿದ್ದಳು. ಲಕ್ಷ್ಮೀನಾರಾಯಣ ಗುಡಿಯ ಮುಂಭಾಗದಲ್ಲಿ ವೀರಮ್ಮನ ದೈವಭಕ್ತಿಯನ್ನು ಹೊಗಳಿ ಅಮೃತ ಶಿಲೆಯ ಮೇಲೆ ಬರೆದು ಇಡಲ್ಪಟ್ಟಿತ್ತು; ಈ ಗುಡಿಯ ಪ್ರಸಿದ್ಧಿ ದೂರ ದೂರಕ್ಕೂ ಹಬ್ಬಿತು. ಯಾತ್ರಿಕರು ತಂಡ ತಂಡವಾಗಿ ಬರಲಾರಂಭಿಸಿದರು. ಬಂದವರೆಲ್ಲಾ ಈಕೆಯ ದೈವ ಭಕ್ತಿಯನ್ನು ಹೋದಲ್ಲೆಲ್ಲಾ ಬಾಯಿ ತುಂಬಾ ಹೊಗಳುತ್ತಿದ್ದರು. ವೀರಮ್ಮನೀಗ ವಿಧವೆ. ಇದ್ದೊಬ್ಬ ಮಗಳ ಗಂಡ ತನ್ನ ಜಮೀನಿನ ಮೇಲ್ವಿಚಾರಕನಾಗಿದ್ದಾನೆ.

***

ಟಿ. ಬಿ. ಸೆನಟೋರಿಯಾ  ಮುಂಭಾಗದಲ್ಲಿ ಜನ ತಂಡ ತಂಡವಾಗಿ  ನೆರೆದಿದ್ದಾರೆ. ವೀರಮ್ಮನ ಪತಿಯ ಕಾಯಿಲೆ ಉಲ್ಬಣಾವಸ್ಥೆಯಲ್ಲಿದೆ. ಇನ್ನುಳಿದಿರುವುದು ಒಂದೆರಡು ದಿನಗಳು ಮಾತ್ರ ಎಂದು ಡಾಕ್ಟರರು ಅಭಿಪ್ರಾಯವಿತ್ತಿದ್ದಾರೆ. ಈ ಕಾಯಿಲೆಯು ಬರುವ ಮೊದಲೇ ದೇಹಕ್ಷೀಣ, ಬೆಪ್ಪುತನ ಕಂಡಿತ್ತು. ಮನಶ್ಯಾಸ್ತ್ರಜ್ಞರು ಪರೀಕ್ಷಿಸಿ ಪ್ರೇಮ ಜೀವನದಲ್ಲಿ ತೊಡಕು ಬಂದು ಮನಸ್ಸಿನ ಮೇಲೆ ತುಂಬಾ ಆಘಾತವಾಗಿದೆ. ಅದು ಆಳವಾಗಿ ಬೇರೂರಿರುವುದರಿಂದ ಸುಲಭ ಚಿಕಿತ್ಸೆಗೆ ಅಸಾಧ್ಯವೆಂದೂ, ಬೇಗನೆ ಟಿ.ಬಿ.ಗೆ ಸೇರಬಹುದು ಎಂದು ಅಭಿಪ್ರಾಯವಿತ್ತಿದ್ದರು. ಅಂತೆಯೇ ಈ ಸ್ಥಿತಿಗೀಗ ಮುಟ್ಟಿದೆ.

***

ವೀರಮ್ಮನು ದೊಡ್ಡ  ಜಮೀನುದಾರಳು. ಆಕೆಯು ತನ್ನ ಕಾಮ  ಜೀವನದಲ್ಲಿ ಪತಿಯನ್ನು ಅಲಕ್ಷಿಸಿ ಅನ್ಯರ ಸಹಾಯ ಪಡೆಯುತ್ತಿದ್ದಳು. ಈ ವಿಚಾರ ಪತಿಗೆ ಅಸಹ್ಯವಾಗುತ್ತಿದ್ದರೂ ತನ್ನ ಜಮೀನುದಾರಿಕೆಯ ಬಲದಿಂದ, ತಾನು ಸ್ವತಂತ್ರಳೆಂದು ಬಗೆದು ವರ್ತಿಸುತ್ತಿದ್ದಳು.

ವೀರಮ್ಮನ ಪತಿ  ಈಗ ಟಿ. ಬಿ. ಯಿಂದ ಮೃತಪಟ್ಟಿದ್ದಾನೆ. ತನ್ನ ಜಮೀನುದಾರಿಯ ಉಸ್ತುವಾರಿ  ನೋಡಲು ಮಗಳ ಗಂಡನನ್ನೂ ಮಗಳನ್ನೂ  ಕರೆತರಿಸಿ ಮನೆ ಅಳಿಯನನ್ನಾಗಿ  ಮಾಡಿಕೊಂಡಿದ್ದಾಳೆ. ಕೆಲವು  ಸಮಯದ ಬಳಿಕ ಹಾದಿ ಬಿಟ್ಟ ಅವಳ  ಕಾಮ ಜೀವನವು ಅಳಿಯನ ಕಡೆ ತಿರುಗಿತು. ಮೊದಲೇ ರಾಕ್ಷಸ ವೃತ್ತಿಯಲ್ಲಿದ್ದ ಅಳಿಯನಿಗದು ಬಲು ಮೆಚ್ಚಿತು. ಹೀಗೆ ಬೆಳೆಯಿತು ಅವರ ಗುಪ್ತಕಾಮ ಪಿಪಾಸೆ. ನಿಧಾನವಾಗಿ ವೀರಮ್ಮನ ಮಗಳಿಗೆ ಈ ವಿಚಾರ ತಿಳಿದು ಬಂತು. ಎಷ್ಟು ಆಕ್ಷೇಪಿಸಿದರೂ ಪ್ರಯೋಜನವಾಗಲಿಲ್ಲ. ಕಾಡಿದಳು, ಬೇಡಿದಳು. ಉಪಯೋಗವಿಲ್ಲದಾಯಿತು. ಈ ಹೇಯ ಕೃತ್ಯವನ್ನು ಕಂಡು ಸಹಿಸಲಾರದೆ ಆತ್ಮಹತ್ಯೆಗೆ ಶರಣು ಬಂದಳು.

***

ಅವರು ಈಗ ತೀರಾ ಸ್ವತಂತ್ರರಾಗಿದ್ದಾರೆ. ಲಕ್ಷ್ಮೀನಾರಾಯಣ  ಗುಡಿಯಲ್ಲಿಂದು ಪೂಜೋತ್ಸವ. ನೆರೆದ  ಜನ ಪಿಸಗಿಸನೆ ವೀರಮ್ಮನ ದಾನಶೀಲತೆ, ದೈವಭಕ್ತಿಯನ್ನು ಹೊಗಳುತ್ತಿದ್ದಾರೆ. ಗೋಪುರದ ಕೋಣೆಯೊಂದರಲ್ಲಿ ವೀರಮ್ಮ ವಸ್ತ್ರ ಬದಲಾಯಿಸುತ್ತಿದ್ದಾಳೆ. ಅಳಿಯ ಕೋಣೆ ಹೊಕ್ಕು ವೀರಮ್ಮನ ಕೈ ಹಿಡಿದು ಕಾಮ ತೃಷೆ ಆರಿಸಲು ಕೇಳುತ್ತಿದ್ದಾನೆ. ವೀರಮ್ಮ ದೇವಸ್ಥಾನವಲ್ಲವೇ? ದೇವರು ನೋಡುವುದಿಲ್ಲವೇ? ಎನ್ನುತ್ತಾಳೆ. ಅಳಿಯ ದೇವರು ಎಲ್ಲೆಲಿಯೂ ಇಲ್ಲವೇ? ಎನ್ನುತ್ತಾನೆ.

***

ಈ ಘಟನೆ ನಡೆದು  ವರ್ಷಗಳು ಹಲವು ಸಂದಿವೆ. ಈಗ ವೀರಮ್ಮನೂ ಇಲ್ಲ. ಅಳಿಯನೂ ಇಲ್ಲ. ಈಗಲೂ ಜನ ಆಕೆಯ ದೈವಭಕ್ತಿಯನ್ನು ಕೊಂಡಾಡುತ್ತಾರೆ.

ದೇವರೆಲ್ಲಿ? ದೇವಸ್ಥಾನದಲ್ಲಿಯೇ?

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: