ಅಗ್ರಾಳ ಲೇಖನ ಮಾಲೆ: ಆ ತೆರದೊಳ್ ನಿನ್ನನಾಹ್ವಾನಿಸೆನು

Posted on ಏಪ್ರಿಲ್ 5, 2010. Filed under: ನನ್ನ ಅಪ್ಪ.. | ಟ್ಯಾಗ್ ಗಳು: |


 ಅಗ್ರಾಳ ಪುರಂದರ ರೈ

ರಸಾಯನ ಕತಾ ಸಂಕಲನದಿಂದ (೧೯೫೨)

-ಅಗ್ರಾಳ ಪುರಂದರ ರೈ

ಮಂಗಳೂರಿನ ಬೀದಿಯೊಂದರ ಚಿಕ್ಕ ಹೋಟೇಲಿನಲ್ಲಿ ಉಂಡು ಅಲ್ಲೇ ಮಲಗಿದ್ದೆ. ಅವರು ಕೊಟ್ಟ ಹರಕು ಚಾಪೆ, ಎಣ್ಣೆ ಜಿಡ್ಡು ಹಿಡಿದ ಗೋಣಿ ತಲೆದಿಂಬು – ಇದಿಷ್ಟು ನನ್ನ ಆ ದಿನದ ಬೆಡ್ಡಿಂಗ್ ಆಗಿತ್ತು. ಸಾಲದುದಕ್ಕೆ ನನ್ನ ಮೈಮೇಲಿದ್ದ ಶಾಲು ಸಹಾಯಕವಾಗಿತ್ತು.

ನುಸಿಗಳ ಇಂಜೆಕ್ಷನ್, ತಗಣೆಗಳ ಕಾಟ ಇವನ್ನು ಸಹಿಸಲಸಾಧ್ಯವಾಗಿತ್ತು. ತಗಣೆ ಕಾಟ ತಪ್ಪಿಸಲು ಚಾಪೆ, ತಲೆದಿಂಬನ್ನು ದೂರಕ್ಕೆ ಎಸೆದು ಬರಿ ನೆಲದಲ್ಲಿ ಮಲಗಿದೆ. ಆ ನುಸಿ ಕಾಟ ತಪ್ಪಿಸಲು ಶಾಲನ್ನು ಉದ್ದಕ್ಕೆ ಹೊದೆದುಕೊಂಡೆ. ಮೊದಲೇ ಸೆಕೆ. ವಸ್ತ್ರ ಹೊದೆದ ಮೇಲೆ ಸಹಿಸಲು ಸಾಧ್ಯವಿದೆಯೇ? ಅಂತೂ ನಿದ್ದೆ ಬರುವುದಕ್ಕಿಂತಲೂ ಬೆಳಗಾಗುವವರೆಗೆ ಜೀವದಿಂದ ಉಳಿಯುವುದೆ ಕಷ್ಟ ಅನ್ನಿಸಿತು. ಅಲ್ಲಿಂದ ಬೀದಿಗಿಳಿದೆ. ಬೀದಿಯಲ್ಲಿ ಜನ ಸಂಚಾರವಿಲ್ಲ. ನಾನು ಬೀದಿಯಲ್ಲಿ ತಿರುಗಿದರೆ ಕಳ್ಳನೆಂದು ಪೋಲಿಸರು ಎಣಿಸಿದರೆ? ಎಂಬ ಭಯವಾಯ್ತು. ಅಲ್ಲಿಂದ ಸೀದಾ ಮೈದಾನಕ್ಕೆ ಬಂದೆ. ಸಾರ್ವಜನಿಕ ರೇಡಿಯೋದ ಬಳಿ ಹಲವು ಕಲ್ಲು ಬೆಂಚುಗಳಿದ್ದವು. ನನ್ನಲ್ಲಿದ್ದ ಪರ್ಸು, ಪೆನ್ನು, ಕನ್ನಡಕ, ವಾಚು ಇವೆಲ್ಲವನ್ನು ಟವೆಲಿನಲ್ಲಿ ಒಂದು ಗಂಟು ಮಾಡಿದೆ. ಸುತ್ತುಮುತ್ತು ನೋಡಿದೆ. ನಾಲ್ಕಾರು ಆಡುಗಳಲ್ಲದೆ ಬೇರಾರೂ ಇರಲಿಲ್ಲ. ಅಲ್ಲೇ ಹೊಯಿಗೆಯಲ್ಲಿ ಒಂದು ಹೊಂಡ ತೆಗೆದು ಹೂತಿಟ್ಟೆ. ಕಲ್ಲು ಮಂಚದ ಮೇಲೆ ಮಲಗಿ ನಿದ್ರಿಸತೊಡಗಿದೆ.

ಸ್ವಲ್ಪ ಹೊತ್ತಿನಲ್ಲಿ ಒಬ್ಬ ಬಂದ. ಯಾರದು? ಎಂದ. ನಿದ್ದೆ ಬಂದವನಂತೆ ನಟಿಸಿದೆ. ಮೆಲ್ಲನೆ ಕಿಸೆಗೆ ಕೈ ಇಕ್ಕಿದ. ಏನೂ ದೊರಕಲಿಲ್ಲ. ಸೊಂಟದಲ್ಲಿ ಏನಾದರೂ ಇದೆಯೇ? ಎಂದು ಪರೀಕ್ಷಿಸಿದ. ಏನೂ ಸಿಗಲಿಲ್ಲ. ದೀರ್ಘ ನಿಟ್ಟುಸಿರು ಹೊರಬಂತು. ಮತ್ತೆ ಅಲ್ಲಿಂದ ಮುಂದುವರಿದ. ಸ್ವಲ್ಪ ಹೊತ್ತಾದ ಬಳಿಕ ಕಣ್ಣಿಗೆ ನಿದ್ದೆ ಹತ್ತಿತು. ಏನೋ ಸ್ವಪ್ನ ಬಂದ ಹಾಗಿತ್ತು. ಚೆಲುವಾದ ಮೂರ್ತಿ, ಬಂಗಾರದಂಥ ಮೈಬಣ್ಣ, ನಗು ಮುಖದಲ್ಲಿ, ಅಂತರಾಳದಲ್ಲಿ ಅತೃಪ್ತಿ.

ಆ ಮೂರ್ಲ್ ನನ್ನನ್ನು ಕುರಿತು ಹೀಗೆಂದಿತು – ಏ ಹುಚ್ಚಾ! ನನ್ನನ್ನು ಆಹ್ವಾನಿಸು, ಪೂಜಿಸು. ನನ್ನ ಸೇವೆ ಮಾಡಿದರೆ ಅದೋ ಅಲ್ಲಿ ಮಾಳಿಗೆಗಳು. ಅದರಲ್ಲಿ ಕೋಣೆಗಳು. ಮೆತ್ತಗಾದ ಹಾಸಿಗೆ. ಸೆಕೆಗೆ ವಿದ್ಯುತ್ ಪಂಕಗಳು. ಇನ್ನೇನು ಬೇಕೋ – ಅದೆಲ್ಲವೂ ನಿನ್ನ ಕಾಲಬುಡಕ್ಕೆ ಬರುವುದು. ಅದನ್ನು ಬಿಟ್ಟು ಈ ಕಲ್ಲು ಮಂಚದಲ್ಲಿ ಮಲಗಿದಿಯಾ? ನನ್ನ ಸೇವಕರು ಎಷ್ಟು ಸುಖಿಗಳೆಂಬುದನ್ನು ಅರಿತಿರುವೆಯಾ? ಈಗ ಈ ಪ್ರಪಂಚದಲ್ಲಿ ಎಲ್ಲರೂ ನನ್ನ ಆಶೀರ್ವಾದವನ್ನೇ ಪಡೆಯುತ್ತಾರೆ. ಅವಳನ್ನು ನಂಬಿದರೆ ಇದೇ ಗತಿ!!

ಎಚ್ಚೆತ್ತ ಆತ್ಮ ನೀನು ಯಾರು? ನನ್ನಲ್ಲಿ ಯಾರೂ ಕನಿಕರ ತೋರದಿರುವಾಗ ನೀನಿಷ್ಟು ಮರುಕ ಪಟ್ಟೆಯಲ್ಲಾ? ನನ್ನ ಹಿತವನ್ನು ಬಗೆದು ಉಪದೇಶಿಸಿದೆಯಲ್ಲಾ. ಅವಳನ್ನು ನಂಬಬೇಡ ಎಂದೆಯಲ್ಲಾ! ಅವಳು ಎಂದರೆ ಯಾರು? ದಯವಿಟ್ಟು ವಿಶದವಾಗಿ ಹೇಳು

ಆ ಮೂರ್ತಿ ಅವಳು ಎಂದರೆ ನೀನು ಪೂಜಿಸುತ್ತಿರುವ ಸತ್ಯದೇವಿ – ಈಗ ಯೋಗ್ಯತೆಯಲ್ಲಿ ಸತ್ತ ದೇವಿ. ನಾನು ಲಕ್ಷ್ಮಿ. ಪ್ರಪಂಚವೆಲ್ಲವೂ ನನ್ನಿಂದೇ ನಡೆಯುವುದು. ಕಮ್ಯುನಿಸ್ಟರ ದೃಷ್ಟಿಯಲ್ಲಿ ನಾನು ಧನಪಿಶಾಚಿಯಂತೆ. ನಿನ್ನ ದುರ್ದೆಸೆ ಹೋಗಬೇಕಾದರೆ ನನ್ನ ಆಶ್ರಯ ಗತಿ! ನಿನ್ನ ಉದ್ಧಾರಕ್ಕಾಗಿ ನನ್ನನ್ನು ಆಹ್ವಾನಿಸು

ನಾನು : ಹೇಗೆ ಆಹ್ವಾನಿಸಲಿ? ನೂರಾರು ಜನರ ಹೊಟ್ಟೆ ತಣಿಯುವ ಆಹಾರ ಸಾಮಗ್ರಿಗಳನ್ನು ಅಡಗಿಸಿಟ್ಟು ಹೆಚ್ಚು ಬೆಲೆಗೆ ಮಾರುವುದೇ?

-ಅದು ಸುಲಭವಲ್ಲವೇ?

ನಾನು : ಭಂಡವಾಳಿಗರಂತೆ ಬಂಧುಗಳಿಗೆ, ಸ್ನೇಹಿತರಿಗೆ ದ್ರೋಹ ಬಗೆದು ನನ್ನ ಬೊಕ್ಕಸಕ್ಕೆ ತುಂಬಿಸಲೇ?

-ಯಾಕಾಗಬಾರದು?

ನಾನು : ಅವರಿವರ ಜುಟ್ಟು ಗಂಟಿಕ್ಕಿ ಮಧ್ಯದಲ್ಲಿ ನಾನು ಸೇರಿಕೊಂಡು ಲಾಭ ಗಳಿಸಲೇ? ಇತರರ ಅಜ್ಞಾನವನ್ನು ನನ್ನ ಲಾಭಕ್ಕಾಗಿ ಉಪಯೋಗಿಸಲೇ?

-ಅದು ಸುಲಭದ ಹಾದಿ

ನಾನು : ಗೆಳೆಯರಿಂದ ಎರವಾಗಿ ತಂದ ನಗ ನಾಣ್ಯಗಳನ್ನು ವಾಪಾಸು ಕೊಡದೆ ಮೋಸಗೊಳಿಸಲೇ?

-ಏನಡ್ಡಿ?

ನಾನು : ಬಂಧುಗಳ ಹಕ್ಕನ್ನು ಅಪಹರಿಸಿ ದ್ರೋಹ ಬಗೆದು ನನ್ನ ಬೊಕ್ಕಸ ಬೆಳೆಸಲೇ?

-ಪ್ರಪಂಚದಲ್ಲಿ ಹಾಗೆ ನಡೆಯುತ್ತಿಲ್ಲವೇ?

ನಾನು : ಹೆಂಡತಿ ಕಡೆಯಿಂದ ವರದಕ್ಷಿಣೆ ಪಡೆದು – ಅವಳ ನಗನಾಣ್ಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಅವಳನ್ನು ಇನ್ಶೂರಿಗೆ ಸೇರಿಸಿ – ಆಕೆಯನ್ನು ಸಂಹರಿಸಿ ನಾನು ಹಣ ಸಂಪಾದಿಸಲೇ?

-ಜಾಗರೂಕತೆ ಬೇಕು

ನಾನು : ಜೂಜು ಜುಗಾರಿಯಿಂದ ನಿನ್ನನ್ನು ಆಹ್ವಾನಿಸಲೇ?

-ಅದರಲ್ಲಿ ನನ್ನ ಸವತಿ ದರಿದ್ರ ಲಕ್ಷ್ಮಿಯೂ ಪಾಲುಗಾರಳು ಜೋಕೆ

ನಾನು : ದೇವಿ ನಿನಗಿದೋ ನಮಸ್ಕಾರ. ಆ ತೆರದೊಳ್ ನಿನ್ನನಾಹ್ವಾನಿಸೆನು – ನನ್ನ ದೇಹ, ಬುದ್ಧಿಯ ದಣಿಸಿ, ತಕ್ಕ ಪ್ರತಿಫಲವ ಪಡೆದು ನನ್ನ ಆರಾಧ್ಯೆಯಹ ಸತ್ಯದೇವಿಯ ಪೂಜಿಪೆನು – ಜತೆಗೆ ಎನ್ನ ಹೃದಯ ಮಂದಿರದಲ್ಲಿ ಇಂಪಾದ ಗಾನವನ್ನು ನುಡಿಯುತಿಹ ಆ ಸರಸ್ವತಿ ದೇವಿ ಕಲಾದೇವಿಯರ ಪೂಜಿಪೆನು – ಎನ್ನ ಮೇಲೆ ನಿನಗೆ ಕರುಣೆ ಇದ್ದರೆ ನಾನು ಕೈಗೊಂಬ ಕಾರ್ಯದಲ್ಲಿ ನೆರವು ನೀಡಿ ನನ್ನ ನೀ ಹರಸು. ಅದಕ್ಕಾಗಿ ಕಾಲ್ವಿಡಿವೆ. ಅದಕ್ಕಾಗಿ ಪೂಜಿಪೆನು – ದಯದೋರು ದೇವಿ!

-ಪಕ್ಕನೆ ಎಚ್ಚತ್ತು – ಕನಸೋ? ಮಾಯೆಯೋ? ತಿಳಿಯಲಿಲ್ಲ. ನಕ್ಷತ್ರ ಮಸಕಾಗಿತ್ತು. ಕಡಲು ಭೋರ್ಗರೆಯುತ್ತಿತ್ತು. ಇಂಚರ ಇಂಪಾಗಿತ್ತು. ಮುಂಬೆಳಗು ಹರಿದಿತ್ತು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: