ಅಗ್ರಾಳ ಲೇಖನ ಮಾಲೆ: ರಸಾಯನ ಕತಾ ಸಂಕಲನ

Posted on ಏಪ್ರಿಲ್ 4, 2010. Filed under: ನನ್ನ ಅಪ್ಪ.., Uncategorized |


‘ಹೊಸ ಚಿಗುರು, ಹಳೆ ಬೇರು’ ಎಂದು ಏಕೆ ಹೇಳುತ್ತಾರೆ ಎಂದು ಒಂದಿಷ್ಟು ಅರ್ಥವಾಗುತ್ತಿದೆ. ನನ್ನ ತಂದೆ ಆ ಕಾಲದ ಪತ್ರಕರ್ತರು, ಗಾಂಧಿವಾದಿ, ಸಂಶೋಧಕ, ಸಹಕಾರ ತತ್ವದಲ್ಲಿ ನಂಬಿಕೆ ಇಟ್ಟವರು. ಅವರ ಆಲೋಚನೆ, ಬರಹಗಳನ್ನೂ ಈ ಬ್ಲಾಗಿನಲ್ಲಿ ಕಾಣಿಸುವ ಮುನ್ನ ಇದನ್ನು ಯಾರು ಓದುತ್ತಾರೆ ಎನ್ನುವ ಹಳಹಳಿಕೆ ನನಗೂ ಇತ್ತು. ಆದರೆ ನನ್ನ ಬ್ಲಾಗ್ ನ ಬರಹಗಳ ಪೈಕಿ ಅತಿ ಹೆಚ್ಚು ಓದನ್ನು ಪಡೆದುಕೊಂಡಿರುವುದು ತಂದೆಯವರ ಬರಹಗಳೇ.

ಒಮ್ಮೊಮ್ಮೆ ನನಗನಿಸುತ್ತದೆ ಜಾಗತೀಕರಣದ ಎಲ್ಲಾ ಅತಿಗಳಿಗೆ ತೆತ್ತುಕೊಂಡಿರುವ ನಮಗೂ, ಹೊಸ ಪೀಳಿಗೆಗೂ ಸರಳತೆ ಒಂದು ಸೂಜಿಗಲ್ಲಾಗಿರಬಹುದೇ ಎಂದು. ತಂದೆಯವರ ಬರಹದಲ್ಲಿ ಕಳಕಳಿ ಇತ್ತು, ಬೋಧನೆ ಇರಲಿಲ್ಲ. ಅವರ ಬರಹ ಎಂದೂ ನೀರಸ ನಿರೂಪಣೆ ಆಗಿರಲಿಲ್ಲ. ಅವರಿಗೆ ಸ್ವಭಾವತಃ ಇದ್ದ ಹಾಸ್ಯ ಪ್ರಜ್ಞೆ ಅವರ ಬರವಣಿಗೆಯನ್ನೂ ಜೀವಂತವಾಗಿಟ್ಟಿತ್ತು. ಅವರ ಬದುಕಿನ ಮೊದಲ ಅನುಭವಗಳ ನಂತರ ಈಗ ರಸಾಯನ ಬರಹಗಳನ್ನೂ ಕೊಡುತ್ತಿದ್ದೇನೆ. ಈ ಬರಹಗಳು ಖಂಡಿತಾ ನಿಮ್ಮನ್ನು ಗೆಲ್ಲುತ್ತವೆ.

– ವಿವೇಕ

-ಅಗ್ರಾಳ ಪುರಂದರ ರೈ

ನೂತನ ಪ್ರಕಾಶನ ಮಾಲೆ – 1

ರಸಾಯನ

ನೂತನ ಪ್ರಕಾಶನ ಸಮಿತಿ, ಧಾರವಾಡ

ರಸಾಯನ ಕತಾ ಸಂಕಲನದಿಂದ (೧೯೫೨)

ಓದಿಗೆ ಮೊದಲು

ಇದು ನನ್ನ ಮೊದಲನೆಯ ಕತಾಸಂಗ್ರಹ. ಗುಣಗ್ರಾಹಿಗಳಾಗಿ ನನ್ನ ಸಾಹಿತ್ಯದ ಮುನ್ನಡೆಗೆ ಸಹಕಾರಿಗಳಾಗಬೇಕಾಗಿ ಬಿನ್ನಹ.

ಇದರಲ್ಲಿರುವ ಕತೆಗಳು ಕೊರವಂಜಿ, ಸಂಗಾತಿ, ನೂತನ ಮತ್ತು ಸರ್ವೋದಯಗಳಲ್ಲಿ ಪ್ರಕಟವಾಗಿವೆ. ಆ ಪತ್ರಿಕೆಗಳ ಸಂಪಾದಕರಿಗೆ ವಂದನೆಗಳು.

ಈ ಕತಾಸಂಗ್ರಹ ಬೆಳಕಿಗೆ ಬರಲು ಸಹಕರಿಸಿದ ಆ ಮಾಲೆಯ ಸಂಪಾದಕ, ಸಂಚಾಲಕರಿಗೆ, ವಿಶೇಷವಾಗಿ ಶ್ರೀ ಹ. ರಾ. ಕಿದಿಯೂರು ಇವರಿಗೆ ನಾನು ಸದಾ ಕೃತಜ್ಞನು.

ನಾನು ಭಾವನಾಜೀವಿ. ನನ್ನ ಮಾನಸಿಕ ಸ್ಥಿತಿಗೆ ಸರಿಯಾದ ಸಮಾಜ, ವಾತಾವರಣ ನನಗೆ ದೇವರು ಕರುಣಿಸುತ್ತಿದ್ದರೆ ನಾನು ಇದಕ್ಕಿಂತ ಹೆಚ್ಚು ನನ್ನ ಸಾಹಿತ್ಯಸೇವೆ ಸಲ್ಲಿಸುತ್ತಿದ್ದೆ ಎಂದು ಧೈರ್ಯವಾಗಿ ಹೇಳಬಲ್ಲೆ. ನಾನು ಜೀವಿಸುತ್ತಿರುವುದು ‘ಆರ್ಥಿಕ ಅಳತೆಗೋಲಿ’ನಿಂದಲೇ ಮಾನವನನ್ನು ಅಳೆಯುವ ಬಂಧುಗಳ ಮಧ್ಯೆ. ನನ್ನ ಮಾನಸಿಕ ವಿಕಾಸಕ್ಕೆ ಇದೇನೇ ತಡೆ. ಇಷ್ಟಾದರೂ ಉಳಿದುದಕ್ಕಾಗಿ ಸಂತೋಷಿಸುತ್ತೇನೆ.

ಈ ಪುಸ್ತಕದ ಓದಿನಿಂದ ಕೊಂಚವಾದರೂ ನಿಮಗೆ ಆನಂದವಾದರೆ ನನ್ನ ಶ್ರಮ ಸಾರ್ಥಕ.

ಕತೆಗಳು ಬೇರೆ ಬೇರೆ ಕಾಲ, ಸನ್ನಿವೇಶಗಳಲ್ಲಿ ಬರೆದವುಗಳಾದ್ದರಿಂದ ಭಿನ್ನ ಮನೋವೃತ್ತಿ ತೋರಿದರೆ ಆಶ್ಚರ್ಯವಿಲ್ಲ. ಮನುಷ್ಯ ಒಂದು ಜಡ ವಸ್ತುವಲ್ಲವಷ್ಟೆ.

ಇದರಲ್ಲಿರುವ ಲೋಪದೋಷಗಳನ್ನು ವಿಮರ್ಶಾತ್ಮಕ ದೃಷ್ಟಿಯಿಂದ ಅಭಿಪ್ರಾಯವಿತ್ತರೆ ನನ್ನ ಸಾಹಿತ್ಯದ ಮುನ್ನಡೆಗೆ ಸಹಕಾರಿಯಾಗುವುದು. ಅಂತವರಿಗೆ ಆಭಾರಿ. ಮುದ್ರಣ ದೋಷಗಳಿದ್ದರೆ ಓದುಗರು ಮನ್ನಿಸುವರೆಂದು ನಂಬಲೇ?

ಕನ್ನಡಾಂಬೆಯ ಮಡಿಲಲ್ಲಿ ಈ ಕಿರುಕಾಣಿಕೆಯನ್ನಿಡುವೆನು. ಇದಕ್ಕಾಗಿ ಸಂಕೋಚಪಡಲೇ? ಸಂತೋಷಿಸಲೇ?

‘ಜೀವನ ಕುಟಿ’   ಇತಿ ಕನ್ನಡಿಗ

ಪುಣಚ, ದ.ಕ.       ಪುರಂದರ ರೈ, ಅಗ್ರಾಳ್

ಯಾವುದು? ಎಲ್ಲಿ?

೧. ಮುಂದೇನು ದಾರಿ ?

೨. ಅವನ ಬಿ ಎ ಡಿಗ್ರಿ

೩. ನಮ್ಮೂರ ಮಾರಿ

೪. ಬಸ್ ಲೇಟ್

೫. ಆ ತೆರದೊಳ್ ನಿನ್ನನಾಹ್ವಾನಿಸೆನು

೬. ಸೋಡ್ತಿ

೭. ದೇವರೆಲ್ಲಿ

೮. ದೊಡ್ಡ ಉಪಕಾರ

೯. ಪತ್ರಿಕೆಗಳಿಂದ

ಲೇಖಕರ ಪರಿಚಯ

ಶ್ರೀ ಅಗ್ರಾಳ ಪುರಂದರ ರೈಗಳು ದಕ್ಷಿಣ ಕನ್ನಡದ ಹಳ್ಳಿ ಜೀವನದಲ್ಲಿ ನುರಿತ ಅರಿತ ಬರಹಗಾರರು. ಬೇರೆ ಬೇರೆ ಪತ್ರಿಕೆಗಳಲ್ಲಿ ಇವರ ನಾನಾ ವಿಧವಾದ ಬರಹಗಳು ಆಗಾಗ ಪ್ರಕಟವಾಗಿವೆ. ಸಣ್ಣಕತೆ, ಲಘುಹಾಸ್ಯ, ಪ್ರಬಂಧ, ವಿಚಾರ, ವಿನೋದ, ವ್ಯಂಗ್ಯ, ಚುಟುಕ, ಕವನಗಳು ಸಾಹಿತ್ಯಾಕಾಶದಲ್ಲಿ ಆಗಾಗ ಮಿನುಗಿವೆ. ಪಿ ಆರ್ ಅಗ್ರಾಳ್, ಎ ಪಿ ಅಗ್ರಾಳ್..  ಮೊದಲಾದ ಹೆಸರಿನಿಂದ ವಾಚಕ ಜನಕ್ಕೆ ಪರಿಚಯವುಳ್ಳವರು. ಜೀವನದ ಪ್ರತಿಯೊಂದು ಘಟನೆಯನ್ನೂ ಬರೆದು, ಬರೆದು, ತಿಕ್ಕಿ – ತಿಕ್ಕಿ, ನೋಡುವ ಕುತೂಹಲವುಳ್ಳವರು. ಅದರ ಅನುಭವವನ್ನು ಜನತೆಗೆ ರಸವತ್ತಾದ ತನ್ನದೇ ಆದ ಶೈಲಿಯಿಂದ ನೀಡುವ ಉತ್ಸಾಹವುಳ್ಳವರು. ಕನ್ನಡ ನಾಡಿನ, ಕನ್ನಡ ನುಡಿಯ ಬಹುಮುಖವಾದ ಏಳಿಗೆಗಾಗಿ ಮರುಕವುಳ್ಳವರು. ತನಗಿಂತ ಕಿರಿಯರೊಡನೆಯೂ, ತನಗಿಂತ ಹಿರಿಯರೊಡನೆಯೂ, ಸೇರಿ ಸಮರಸವಾಗುವ ಸಹೃದಯರು. ಜನಜೀವನದ ನಾನಾ ರಂಗಗಳಲ್ಲಿಯೂ ಕಲೆತು ಅನುಭವವುಳ್ಳವರು. ಹಳ್ಳಿಯ ಜೀವನದ ನಾನು ಮುಖಗಳನ್ನು ಅರಿತವರು. ಸಮಾಜದ ಅಂಧಶ್ರದ್ಧೆಗಳನ್ನು ಕಿತ್ತೊಗೆದು, ನೂತನ ಸುಧಾರಣೆಗಳನ್ನು ಬಿತ್ತಿ ಬೆಳೆಯಿಸುವವರು. ರಾಜಕೀಯ ಜೀವನದಲ್ಲಿ ತುಂಬ ಶ್ರಮ ವಹಿಸಿ ದುಡಿದವರು. ಈಗಾಗಲೇ ರೈತ ಸಂಘಟನೆಗಾಗಿ ದುಡಿದಿದ್ದಾರೆ. ಸಮಾಜದ ಕ್ಷುದ್ರ ಹಾಗೂ ಭೇದ ಭಾವನೆಗಳನ್ನು ಬಲವಾಗಿ ಪ್ರತಿಭಟಿಸುವವರು. ಗ್ರಂಥರೂಪವಾಗಿ ಅವರ ಲೇಖನ ಕಾರ್ಯ ಹೊರಹೊಮ್ಮಿದ್ದು ಇದೇ ಮೊದಲು. ಕನ್ನಡಿಗರ ಸಹಕಾರ, ಆದರಗಳಿಂದ ಇವರ ಲೇಖನಿಯು ಉತ್ತಮವಾದ ಕೃತಿಗಳನ್ನು ನೀಡಬಹುದೆಂದು ನಿಸ್ಸಂಕೋಚವಾಗಿ ಹೇಳಬಹುದು.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: