ಅಗ್ರಾಳ ಲೇಖನ ಮಾಲೆ:ನಮ್ಮೂರ ಮಾರಿ

Posted on ಏಪ್ರಿಲ್ 1, 2010. Filed under: Uncategorized |


ಅಂದು ಮಹಾನವಮಿ. ಗುಡಿ ಮುಂದೆ ನೂರಾರು ಜನರು; ಏಳೆಂಟು ಕೋಣಗಳು, ಹತ್ತು ಹನ್ನೆರಡು ಕುರಿಗಳು, ನಾಲ್ಕಾರು ಆಡುಗಳು, ಮೂವತ್ತು ನಲ್ವತ್ತು ಕೋಳಿಗಳು, ಇಷ್ಟು ಸಾಲದುದಕ್ಕೆ ಮೂರು ಜತೆ ವಾಲಗ. ಒಂದು ಬೇಂಡು, ನಾಲ್ಕು ಬಾಂಕೆ. ಇವುಗಳ ಶಬ್ದವು ಜನರ ಉತ್ಸಾಹವನ್ನು ಎತ್ತಿ ತೋರಿಸುತ್ತಿದ್ದುವು. ಅತ್ತ ಆ ಮೃಗಗಳ ಕೂಗಾಟವು ತಮ್ಮ ಬಾಳಿನ ಗೋಳನ್ನು ಕರೆದು ಕರೆದು ಜನತೆಯಲ್ಲಿ ಕರುಣೆ ಇರಬೇಕು ಎನ್ನುತ್ತಿತ್ತು.

ಪೂಜೆಗೆ ಸಮಯವಾಯ್ತು. ಮೊಕ್ತೇಸರರು ಮುಂದೆ ನಿಲ್ಲಲಿ” ಎಂಬ ಶಬ್ದವು ಗುಡಿಯೊಳಗಿಂದ ಹೊರಬಂತು. ಸ್ವಲ್ಪವೇ ದೂರದ ಒಂದು ಆರಾಮ ಕುರ್ಚಿಯ ಮೇಲೆ ತಲೆಗೊಂದು ಮದ್ರಾಸ್ ಎಲವಸ್ತ್ರ, ಎಡ ಹೆಗಲಲ್ಲಿ ಒಂದು ದೊಡ್ಡ ಬೀಗದ ಕೈ ಗೊಂಚಲಿರುವ ಚಚ್ಚೌಕವಾದ ಎಲವಸ್ತ್ರ, ಬಲದ ಹೆಗಲಲ್ಲಿ ದೊಡ್ಡದೊಂದು ಬೈರಾಸು, ಪಂಚೆಯೊಂದರ ಕಚ್ಚೆ, ಕೈಗೊಂದು ಚಿನ್ನದ ಬಳೆಯಿರುವ ವ್ಯಕ್ತಿಯು ಲೋಕವೇ ಗಾಢ ನಿದ್ರೆಯಲ್ಲಿದೆ ಎನ್ನುವಂತಿತ್ತು. ಆ ಕುರ್ಚಿಯ ಕಡೆಗೆ ಒಬ್ಬ ದಂಡಾಳುವು ದಾರಿ, ದಾರಿ, ದಾರಿ ಬಿಡಿ, ಶೆಟ್ರು ಬರುತ್ತಾರೆ ಎನ್ನುತ್ತ ಸಾಗಿದ. ಸಾಗಿದವನೇ ಆ ವ್ಯಕ್ತಿಯನ್ನು ಕರಕೊಂಡು ಬಂದ. ಪಕ್ಕದಲ್ಲಿದ್ದ ಪರ ಊರ ವ್ಯಕ್ತಿಯು ತನ್ನ ನೆಂಟನಾದ ಆ ಊರಿನ ರಾಮುವನ್ನು ವಿಚಾರಿಸಿದ.

ಯಾರವರು?…

ದೂಮ ಶೆಟ್ರು…

ಅಂದ್ರೆ…???”

ದೂಮ ಶೆಟ್ರಂದ್ರೆ ಈ ಗುಡಿಯ ಮೊಕ್ತೇಸರ. 300 ಮುಡಿ ಅಕ್ಕಿ ಜಮೀನುದಾರ. 2 ಖಂಡಿ ಅಡಿಕೆ, ಭಾರಿ ಕಾರ್ಬಾರು, ಹತ್ತೈವತ್ತು ವಕ್ಲುಗಳು – ಹತ್ತಿಪ್ಪತ್ತು ಪೋಕ್ರಿಗಳು. ನಾಲ್ಕು ಕಟ್ಟಿ ಹಾಕಿದ ಕೋಣಗಳು, ಎರಡು ಹೆಂಡ್ತಿ, ಗಂಡು ಹೆಣ್ಣೆಂತ ಒಂಭತ್ತು ಮಕ್ಕಳು. ಅವೇ ಅವರ ಆಸ್ತಿ ಪಾಸ್ತಿ ಅಂದ.

ಹ್ಞುಂ

ಹೌದಪ್ಪ, ಹೌದು. ಅವರು ಬಾಯಿಬಿಟ್ಟರೆ ಸಾಕು. ಅವರು ಹೇಳಿದ ಹಾಗೆ ಮಾಡುತ್ತಾರಪ್ಪ ಈ ಮಾರಿಯಮ್ಮನವರು. ನಾಳೆ ನಿನ್ನ ತೋಟದ ಅಡಿಕೆ ಸೂರೆ ಆಗಲಿ ಎಂದ್ರೆ ಹಾಗೆ ಆಗ್ತದಪ್ಪ ಎಂದ ಬಳಿಯಲ್ಲಿದ್ದ ಮತ್ತೊಬ್ಬ.

ಅಷ್ಟರಲ್ಲಿ ರಾಮುವು ವ್ಯಂಗ್ಯ ಮುಗುಳುನಗೆ ನಕ್ಕ.

***

ಗುಡಿಯಲ್ಲಿ ಕೋಲಾಹಲ. ಪಾತ್ರಿಯ ದರ್ಶನ. ಎದುರಿಗೊಬ್ಬ ಕೃಶ ದೇಹದ ಹಣ್ಣು ಮುದುಕ ಕಣ್ಣಲ್ಲಿ ನೀರು ಸುರಿಸುತ್ತಾ ಪಾತ್ರಿ ಎದುರು ನಡುಗುತ್ತಾ ಕೈಜೋಡಿಸಿ ನಿಂತಿದ್ದ. ಎದೆಗೆ ಕೈ ಇಡುತ್ತಿದ್ದರೆ ಡಬಡಬ ಎನ್ನುತ್ತಿತ್ತೋ ಏನೋ? ಪಾಪ, ಈತನ ಕಣ್ಣಲ್ಲಿ ನೀರುದುರುವಾಗ ಪಾತ್ರಿಯ ಕಣ್ಣಲ್ಲಿ ಕೆಂಡ. ಆದರೆ ಆ ನೀರಿನಿಂದ ಈ ಕೆಂಡ ತಣಿಯಲಿಲ್ಲ. ನೋಡುಗರ ಕಣ್ಣುಗಳು ಒಮ್ಮೆ ಈತನ ಮುಖ, ಒಮ್ಮೆ ಆತನ ಮುಖ ಹೀಗೆ ತಿರುಗಾಡುತ್ತಿದ್ದುವು.

ಮೊಕ್ತೇಸರರು ತೋರ ಸ್ವರದಿಂದ ಹೇಳು, ಬೇಗನೆ, ರೂಪಾಯಿ ಐವತ್ತು ಡಬ್ಬಿ ಕಾಣಿಕೆ ಮಾಡುತ್ತೇನೆಂದು – ಅದೊಂದು ಮಾತು ಮೊಕ್ತೇಸರರ ಬಾಯಿಯಿಂದ ಹೊರಟಿದ್ದೇ ತಡ. ಎಲ್ಲರೂ ಆ ಮಾತನ್ನೇ ಎತ್ತಿ ಆಡಿದರು. ಒತ್ತಾಯದಿಂದ ಒಪ್ಪಿಸಿದರು. ಪಾಪ, ಇಷ್ಟು ಹಣ ಎಲ್ಲಿಂದ ಕೊಟ್ಟಾನು, ಆದರೂ ನಿರ್ವಾಹವಿಲ್ಲದೆ ಒಪ್ಪಿದ. ಕ್ರಮದಂತೆ ಇತರ ಕಾರ್ಯಕ್ರಮಗಳು ನಡೆದವು. ಜನಸಂದಣಿ ಚದುರಿತು.

ದಾರಿಯಲ್ಲಿ ಪರಊರ ವ್ಯಕ್ತಿ ರಾಮುವನ್ನು ಕುರಿತು ಅವನು ಐವತ್ತು ರೂಪಾಯಿ ಡಬ್ಬಿ ಕಾಣಿಕೆ ಮಾಡುವುದು ಯಾವುದರ ಬಾಬ್ತಿ?

ದಾರಿಯಲ್ಲಿ ಆ ವಿಚಾರ ಬೇಡ. ಮನೆ ಸೇರೋಣ. ಊಟ ತೀರಿಸಿ ಸುಖದಿಂದ ಮಾತಾಡೋಣ. ಬಾ ಎಂದು ಸುಮ್ಮನಾದ.

ಮುಂದೆ ಸಾಗಿದರು. ಮನೆ ತಲುಪಿದರು.

***

ಕುಳಿತಲ್ಲಿಂದಲೇ ಅಂಗಳಕ್ಕಿಣಿಕಿ ನೋಡಿದ ರಾಮು. ಈಗ ನಿನ್ನ ಪ್ರಶ್ನೆಗೆ ಉತ್ತರ, ಅದರ ಮಧ್ಯೆ ಬಾಯಿ ಹಾಕಿ ಮಾತಾಡಬಾರದು ಮತ್ತು ಯಾರಲ್ಲಿಯೂ ಯಾವಾಗಲೂ ಹೇಳಕೂಡದು. ಹೇಳಿದರೆ ನನ್ನ ಜೀವಕ್ಕೆ ಸಂಚಕಾರ. ಇರಲಿ, ಆ ಮುದುಕನ ಪೈರನ್ನು ಮೊಕ್ತೇಸರರ ಎಮ್ಮೆ ಬಂದು ತಿಂದಿತು. ಎಮ್ಮೆಗೆ ಎರಡು ಹೊಡೆದ ಮುದುಕ. ಇದನ್ನು ಮೊಕ್ತೇಸರರ ಆಳು ಅವರಿಗೆ ತಿಳಿಸಿದ. ಅವರು ಸಿಟ್ಟಿನಿಂದ ಮುದುಕನ ಅಂಗಳಕ್ಕೆ ಬಂದು ಅವನನ್ನು ಬೈದು ಭಂಗಿಸಿ ಇದರ ಪ್ರತಿಫಲ ನಮ್ಮೂರ ಮಾರಿಯಮ್ಮನವರಿದ್ದರೆ ನಿನಗೆ ತಿಳಿದೀತು! ಎಂದು ಶಪಿಸುತ್ತಾ ಹೊರಟು ಹೋದರು.

ಅಂದಿನಿಂದ ಇವನ ಗದ್ದೆಯಲ್ಲಿ ರಾತ್ರಿ ಇಡೀ ಜಾನುವಾರು. ಮನೆಗೆ ಕಲ್ಲು ಬೀಳುವುದು. ಅದರ ಪರಿಹಾರಕ್ಕೆ ರೂಪಾಯಿ ಐವತ್ತು ಡಬ್ಬಿ ಕಾಣಿಕೆ. ಮಾರಿಯಮ್ಮನವರು ನಿಮಿತ್ತ ಮಾತ್ರ. ಕೆಲಸವೆಲ್ಲಾ ದೂಮ ಶೆಟ್ರದ್ದು. ವರ್ಷಕ್ಕೆಷ್ಟು ರೂಪಾಯಿ ಮಾಡುತ್ತಾರೆ. ಡಬ್ಬಿ ಹರಕೆ ಎಷ್ಟು ಸಿಗುತ್ತದೆ? ಈ ವಿಷಯ ಎತ್ತುವವರೆಲ್ಲಿ? ಅವರಿಗೆ 2 ಖಂಡಿ ಅಡಿಕೆ ಇರುವುದು. ಅಂಗಳದಲ್ಲಿ ಹತ್ತು ಹನ್ನೆರಡು ಖಂಡಿ ಅಡಿಕೆ! ಇದೆಲ್ಲಾ ನಮ್ಮೂರ ಮಾರಿಯಮ್ಮನವರ ಸತ್ಯ. ಅವರಲ್ಲಿ ಯಾರಾದರೂ ಸ್ವಲ್ಪ ಸಿಟ್ಟಾದ್ರೆ ಸಾಕು. ಗುಡಿ ಹೆಸರಿಟ್ಟು ಶಪಿಸುವರು. ಮರುದಿನ ಇದ್ದ ಸೊತ್ತೆಲ್ಲಾ ಕಾಣೆ. ಅವರ ಎದುರು ಉಸಿರೆತ್ತುವವರಿಲ್ಲ. ನಮ್ಮೂರ ಮಾರಿದೂ…!!! ಅಷ್ಟರಲ್ಲೇ ಅಂಗಳದಿಂದ ಯಾರೋ ಬರುವ ಸದ್ದಾಯಿತು. ರಾಮು ತನ್ನ ಕತೆ ನಿಲ್ಲಿಸಿದ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: