ಯುದ್ಧವೆಂಬ ಬಹುರೂಪಿ ನಾಟಕವು

Posted on ಮಾರ್ಚ್ 31, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpg?w=156&h=243

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 02 ಜನವರಿ, 2009.

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ.

ಕಳೆದ ವಾರ ಕ್ರಿಸ್ಮಸ್ ದಿನದಂದು ಮೈಸೂರಿನ ರಂಗಾಯಣದ ಬಹುರೂಪಿ ನಾಟಕೋತ್ಸವದಲ್ಲಿ ಅಶೀಶ್ ನಂದಿಯವರ ಉಪನ್ಯಾಸ ಆಧಾರಿತ ರಂಗಾಯಣದ ಕಲಾವಿದರು ಪ್ರಯೋಗಿಸಿದ ‘ಶಬ್ದ-ನಿಶಬ್ದಗಳ ನಡುವೆ’ ನಾಟಕವನ್ನು ನೋಡಿದೆ. ಭಾರತ-ಪಾಕಿಸ್ತಾನ ದೇಶ ವಿಭಜನೆಯ ಸಂಕಥನದ ಬಹುರೂಪಗಳನ್ನು ಅನಾವರಣ ಮಾಡಿದ ಈ ನಾಟಕದಲ್ಲಿ ಕೋಮು ದ್ವೇಷ, ಕೊಲೆ, ರಕ್ತಪಾತ, ಹಂತಕರ ಆತ್ಮಕಥನಗಳೆಲ್ಲ ಕತ್ತಲಿನಿಂದ ಬೆಳಕಿಗೆ ಬಂದವು. ಹಿಂಸೆಯನ್ನು ಸಮರ್ಥಿಸುವ ಮತ್ತು ತಮ್ಮ ಆತ್ಮಶೋಧ ಮಾಡಿಕೊಳ್ಳುವ ಎರಡು ಬಗೆಯ ಪಾತ್ರಗಳು ಇತಿಹಾಸದ ಗರ್ಭದಿಂದ ಹೊರಕ್ಕೆ ಬಂದವು.  ಗಾಂಧಿಯನ್ನು ಗೋಡ್ಸೆ ಕೊಲ್ಲುವ ಐದು ದಿನ ಮೊದಲೇ ಗಾಂಧಿಯ ಪ್ರಾರ್ಥನಾ ಸಭೆಯ ಮೇಲೆ ಕೈಬಾಂಬ್ ಎಸೆದಿದ್ದ ಮದನ್ಲಾಲ್ ಪಾಹ್ವಾ, ‘ಗೋಡ್ಸೆ ನನ್ನ ಗುರು, ಗಾಂಧಿ ನನ್ನ ಗುರಿ’ ಎಂದು ಹೇಳುತ್ತಲೇ ಗಾಂಧಿ ಕೊಂಚ ಪಕ್ಷಪಾತಿಯಾಗಿದ್ದ ಎಂದಾಗ, ಪ್ರೇಕ್ಷಕರ ಮೂಲೆಯೊಂದರಿಂದ ಚಪ್ಪಾಳೆಗಳು ಹೊರಬಿದ್ದವು. ಅಹಿಂಸೆಯ ಸ್ಥಾಪನೆಗಾಗಿ ಗುಂಡಿಗೇಟಾದ ಗಾಂಧಿ, ಶಿಲುಬೆಗೇರಿದ ಏಸುಕ್ರಿಸ್ತ ಇವರು ನೆನಪಾಗುತ್ತಲೇ ಕ್ರಿಸ್ಮಸ್ ಹೊಸ ಅರ್ಥ ಪಡೆಯಿತು.

ಮುಂಬೈಯಲ್ಲಿ ಪಾಕ್ ಉಗ್ರರ ದಾಳಿಯ ಬಳಿಕ ಭಾರತ-ಪಾಕಿಸ್ಥ್ತಾನಗಳ ನಡುವೆ ಯುದ್ಧದ ‘ನಡುಕ ಜ್ವರ’ವು, ಗಡಿಗಳನ್ನು ದಾಟಿ ಮತ್ತೆ ಉಲ್ಬಣಿಸಿದೆ. ಗಡಿಗಳಲ್ಲಿ ಸೇನೆಯ ಜಮಾವಣೆ, ಯುಧ್ಧದ ವಾಕ್ಪಾರುಷ್ಯದ ಮಾತುಗಳು ಮೊಳಗುತ್ತಿವೆ. ಯುದ್ಧವೆಂಬ ರಂಗಭೂಮಿಯಲ್ಲಿನ ಸಂಭಾಷಣೆಗಳು ಸವಾಲಿನ-ಪ್ರತಿಸವಾಲಿನ ಮಾದರಿಯಿಂದ ತೊಡಗಿ, ಸೇಡಿನ-ಪ್ರತಿಸೇಡಿನ ವಿನ್ಯಾಸಗಳನ್ನು ತಾಳಿ, ‘ನಡುಕಜ್ವರವನ್ನು’ ಹರಡುವ ಶಕ್ತಿಯನ್ನು ಹೊಂದಿರುತ್ತವೆ. ಯುದ್ಧದಮಾತು ಛಿದ್ರಗೊಂಡ ದೇಶವೊಂದನ್ನು ತಾತ್ಕಾಲಿಕವಾಗಿ ಒಂದುಗೂಡಿಸುವ ಕೆಲಸಮಾಡುತ್ತದೆ. ಪಾಕಿಸ್ಥಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಮತ್ತು ಜನರಲ್ ಖಯಾನಿ ಯುದ್ಧದ ಪೌರುಷದ ಮಾತುಗಳನ್ನು ಆಡುವ ಅವಕಾಶವನ್ನು ಬಳಸಿಕೊಳ್ಳುತ್ತಾ, ಜರ್ಜರಿತವಾದ ಪಾಕಿಸ್ಥಾನಕ್ಕೆ ಮಿಲಿಟರಿ ವೇಷವನ್ನು ತೊಡಿಸುವ ಮೂಲಕ ದೇಶವನ್ನು ಒಂದುಗೂಡಿಸುವ ನಾಟಕವಾಡುತ್ತಿದ್ದಾರೆ.

ನಾಟಕವಾಡುವ ಅನುಭವದಲ್ಲಿ ಅಮೆರಿಕ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಯುದ್ಧ ಮತ್ತು ಶಾಂತಿಯ ನಾಟಕವನ್ನು ಒಟ್ಟಿಗೆ ಆಡುವ ಸಮಸ್ತ ಪರಿಕರಗಳನ್ನು ಹೊಂದಿರುವ ಅಮೆರಿಕವು ಜಗತ್ತಿನ ಹೊಸ ರಣರಂಗಭೂಮಿ ನಿರ್ಮಾಣದ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ. ಭಾರತ ಪಾಕಿಸ್ಥಾನ ಅಫ್ಘಾನಿಸ್ಥ್ತಾನಗಳನ್ನು ಒಟ್ಟಿಗೆ ಸೇರಿಸುವ ಮಿಲಿಟರಿ ಯೋಜನೆಯನ್ನು ಅಮೆರಿಕ ಇಟ್ಟುಕೊಂಡಿದೆ.  ಇದು ಭಯೋತ್ಪಾದನೆಯನ್ನು ಪರೋಕ್ಷವಾಗಿ ಕೊನೆಗೊಳಿಸುವ ಬದಲು, ಅದನ್ನು ಬೇರೊಂದು ಬಗೆಯಲ್ಲಿ ಗಟ್ಟಿಗೊಳಿಸುವ ಹುನ್ನಾರವಾಗಿದೆ. ಕಳೆದ ವಾರ ಗಾಜಾದ ಮೇಲಿನ ಇಸ್ರೇಲ್ ಆಕ್ರಮಣದ ಹಿಂದೆ ಅಮೆರಿಕಾದ ಪೂರ್ಣ ಮಿಲಿಟರಿ ಬೆಂಬಲ ಎದ್ದುಕಾಣಿಸುತ್ತದೆ.  ಮುಗ್ಧ ನಾಗರಿಕರನ್ನು ಬರ್ಬರವಾಗಿ ಹತ್ಯೆ ಮಾಡುವ ಇಂತಹ ಧಾಳಿ ಮಹಾಯುದ್ಧಗಳಿಗಿಂತ ಹೆಚ್ಚು ಅಮಾನುಷವಾದುದು. ಪ್ಯಾಲೆಸ್ತೀನ್ ಪ್ರದೇಶದ ಮೇಲೆ ನಡೆಯುತ್ತಿರುವ ಮಿಲಿಟರಿ ಅತ್ಯಾಚಾರವು ಶಾಂತಿಯನ್ನು ಜಪಿಸುತ್ತಿರುವ ದೇಶಗಳ ನಾಟಕದಲ್ಲಿನ ಶೋಕಗೀತೆಯಂತಿದೆ.

‘ಯುದ್ಧ ಸಾಹಿತ್ಯ’ವನ್ನು ಕುರಿತು ಸಾಕಷ್ಟು ಪ್ರಮಾಣದಲ್ಲಿ ಅಧ್ಯಯನಗಳು ನಡೆದಿವೆ, ಚಚೆರ್ಗಳಾಗಿವೆ, ಗ್ರಂಥಗಳು  ಪ್ರಕಟವಾಗಿವೆ.  ಯುದ್ಧಸಾಹಿತ್ಯದ ಒಂದು ಬಗೆಯೆಂದರೆ, ಯುದ್ಧ ಸಂಭವಿಸುವುದಕ್ಕೆ ಕಾರಣವಾಗುವ ಕಲಹಗಳ ದಾಖಲೀಕರಣ ಮತ್ತು ಯುದ್ಧದ ಸಾಕ್ಷ್ಯ ಚಿತ್ರಗಳು.  ಇನ್ನೊಂದು ಬಗೆಯೆಂದರೆ, ಯುದ್ಧದ ಸಂದರ್ಭದಲ್ಲಿ ಮತ್ತು ಯುದ್ಧದ ಬಳಿಕ ಸೈನಿಕರು ಹೇಳುವ ಸಂಕಥನಗಳು. ಮೂರನೆಯ ಬಗೆಯೆಂದರೆ, ಯುದ್ಧದ ಕಾರಣ ಮತ್ತು ಉದ್ದೇಶಗಳನ್ನು ಕುರಿತ ಪ್ರಶ್ನೆಗಳು. ಯುದ್ಧವು ಮನುಷ್ಯರ ಮೇಲೆ ಅನೇಕ ರೀತಿಯ ಪರಿಣಾಮಗಳನ್ನು ಬೀರುತ್ತದೆ.  ‘ಯುದ್ಧದ ಬಳಿಕ ಏನಾಗುತ್ತದೆ’  ಎನ್ನುವುದನ್ನು ಕುರಿತೇ ಬಹುಬಗೆಯ ಸಾಹಿತ್ಯಗಳು ನಿಮಾರ್ಣವಾಗಿವೆ.

ಹೋಮರ್ ಕವಿಯ ‘ಅಖಿಲಸ್’ ತನ್ನ ಹೆಮ್ಮೆಗಾಗಿ ಮತ್ತು ಪ್ರಶಂಸೆಯ ನಿರೀಕ್ಷೆಗಾಗಿ ಯುದ್ಧ ಮಾಡಿದ. ಪಂಪನ ‘ವಿಕ್ರಮಾರ್ಜುನ ವಿಜಯ’ದಲ್ಲಿ ಬರುವ ಯೋಧರ ವರ್ಣನೆಗಳು ಜೋಳದ ಪಾಳಿಗಾಗಿ ಸ್ವಾಮಿಯ ಋಣವನ್ನು ತೀರಿಸುವುದಕ್ಕಾಗಿ ವೀರ ಮರಣವನ್ನು ಪಡೆಯುವುದಕ್ಕಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಚಿತ್ರಣವನ್ನು ಕೊಡುತ್ತವೆ.  ವೀರಗಲ್ಲು ನಿರ್ಮಾಣ ಇಂತಹುದೇ ಒಂದು ಪ್ರಭುತ್ವದ ಸೃಷ್ಟಿ.  ಪ್ರಭುತ್ವ ರೂಪಿಸಿದ ತಾತ್ವಿಕತೆಗಳನ್ನು ಪ್ರಜೆಗಳು ತಮ್ಮದೇ ಜೀವನಧರ್ಮವೆಂದು ಸ್ವೀಕರಿಸುವಂತೆ ಮಾಡುವ ತಂತ್ರದ ಭಾಗವಾಗಿ ಇಂತಹ ಸಾಹಿತ್ಯ  ಮತ್ತು ಶಾಸನಗಳು ನಿರ್ಮಾಣವಾಗುತ್ತವೆ. ವರ್ಜಿಲ್ನ ‘ಈನಿಯಡ್’ ಟ್ರೋಜನ್ ಯುದ್ಧದ ಬಳಿಕದ ಸನ್ನಿವೇಶದಿಂದ ಆರಂಭವಾಗುತ್ತದೆ ಮತ್ತು ಯುದ್ಧದ ಕಥೆಯನ್ನು ಹೇಳುತ್ತದೆ.

ಯುದ್ಧದ ಬಳಿಕ ಏನಾಗುತ್ತದೆ ಎನ್ನುವ ಕುರಿತು ಬಹುರೂಪಿ ಸಾಹಿತ್ಯ ಜಗತ್ತಿನಾದ್ಯಂತ ದೊರೆಯುತ್ತದೆ.  ಪಂಪನ ‘ವಿಕ್ರಮಾರ್ಜುನ ವಿಜಯ’ದ ಕೊನೆಯಲ್ಲಿ ಮಹಾಭಾರತ ಯುದ್ಧದ ಪರಿಣಾಮದ ಕರುಣಾಜನಕ ಚಿತ್ರವೊಂದನ್ನು ಕವಿ ಕೊಡುತ್ತಾನೆ. ‘ಕೆದರಿದ ತಲೆಕೂದಲು, ಸ್ರವಿಸಿ ಸುರಿಯುತ್ತಿರುವ ಕಣ್ಣೀರು, ಗಂಡನನ್ನು ಮಕ್ಕಳನ್ನು ಕಳೆದುಕೊಂಡ ದುಃಖದಿಂದ ಮೈಮೇಲೆ ಹೊಡೆದುಕೊಂಡಾಗ ಶೋಕದ ಅಚ್ಚಿನಂತೆ ಕಾಣಿಸುತ್ತಿದ್ದ ಬಾಸುಂಡೆಗಳು-ಇವುಗಳ ಸಹಿತ ಅತ್ತು, ಬಳಲಿ ಜೋತಾಡಿಕೊಂಡಿರುವ ದೇಹಗಳು, ಮರುಗುವ ತೀವ್ರತೆಯಿಂದ ಬಸವಳಿದ ಮುಖ, ಭವಿಷ್ಯವನ್ನು ಯೋಚಿಸುವಾಗ ದಿಕ್ಕುಕಾಣದ ನೋಟ-ಹೀಗೆ ನೋಡುವ ಯಾರನ್ನಾದರೂ ಮರುಗಿಸುವಂತೆ ಕರುಣವೇ ಹೆಣ್ಣುಗಳ ಆಕಾರವನ್ನು ತಾಳಿದಂತೆ ಆ ಹೆಣ್ಣುಗಳು ಬಂದರು.’  ಇದು ಕುರುಕ್ಷೇತ್ರ ಯುದ್ಧದ ಶೋಕ ವೈಭವ.

ಕುವೆಂಪು ತಮ್ಮ ‘ಸ್ಮಶಾನ ಕುರುಕ್ಷೇತ್ರ’ ನಾಟಕದಲ್ಲಿ ಯುದ್ಧೋತ್ತರ ಸನ್ನಿವೇಶವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಇದರಲ್ಲಿ ಕೃಷ್ಣನು,

‘ನಾಟಕದ ರಂಗದಲಿ ರಾಜಮಂತ್ರಿಗಳೆಂಬ,

ಸೈನಿಕರು ಸೇನಾನಿ ಪ್ರಜೆಗಳೆಂಬ

ಸಜ್ಜನರ್ ದುರ್ಜನರ್ ಪಾಪಿಗಳೆಂದೆಂಬ

ಭೇದಮಂ ಲೀಲೆಗೋಸುಗವಾಗಿ ನಾನುಲಿವೆನ್’ ಎಂದು ಹೇಳುತ್ತಾ,

‘ನಾಟಕದ ಕಳ್ಳನನ್  ಪಿಡಿದು ಸೆರೆಮನೆಗುಯ್ಯೆ ಏನಾಟಮಾದಪುದು! ‘ ಎನ್ನುತ್ತಾನೆ.

ಯುದ್ಧ ಎನ್ನುವುದು ಶತ್ರುವನ್ನು ನಾಶಮಾಡುವಂತೆ ಭಾಸವಾಗುತ್ತದೆ.  ಆದರೆ, ಅದು ಅಂತಿಮವಾಗಿ ಇನ್ನಷ್ಟು ಶತ್ರುತ್ವವನ್ನು ಸೃಷ್ಟಿ ಮಾಡುತ್ತದೆ. ಅದೊಂದು ಮಾದಕದ್ರವ್ಯದಂತೆ : ತಟ್ಟನೆ ಉನ್ಮಾದವನ್ನು ಹೆಚ್ಚಿಸುತ್ತದೆ, ವಿಜಯದ ರೋಮಾಂಚನವನ್ನು ತರುತ್ತದೆ ; ಆದರೆ, ಅಂತಿಮವಾಗಿ ನೋವಿನ ನಿರಾಸೆಯ ಜಗತ್ತನ್ನು ನಿರ್ಮಿಸುತ್ತದೆ.

ಅಮೆರಿಕವು ಉದಾರವಾದಿ ಪ್ರಜಾಪ್ರಭುತ್ವದ ಸಂಸ್ಥೆಯನ್ನು ಮಿಲಿಟರಿ ಆಕ್ರಮಣ ಮತ್ತು ಪುನರ್ ನಿರ್ಮಾಣದ ಮೂಲಕ ರೂಪಿಸಿ ವಿದೇಶಗಳ ಮೇಲೆ ಪ್ರಭಾವ ಬೀರುತ್ತಿದೆ.  ಅಮೆರಿಕದ ಈ ವಿದೇಶನೀತಿ ಯುದ್ಧದ ಬಳಿಕದ ನಿರ್ಮಾಣದ ಕುರಿತು ಹೊಸ ಚರ್ಚೆಗಳಿಗೆ ಅವಕಾಶ ಕಲ್ಪಿಸಿದೆ. ಇತಿಹಾಸಕಾರರು ರಾಜಕೀಯ ಚಿಂತಕರು ನೀತಿನಿರೂಪಕರು ಈ ಕುರಿತು ಚರ್ಚಿಸಿದ್ದಾರೆ.  ಈಗ ಅರ್ಥಶಾಸ್ತ್ರವು ಇಂತಹ ಉದಾರವಾದಿ ಕೊಡುಗೆಗಳು ಮನುಷ್ಯರ ಚಟುವಟಿಕೆಗಳ ಮೇಲೆ ಬೀರುವ ಪ್ರಭಾವದ ಬಗ್ಗೆ ಕೇಂದ್ರೀಕರಿಸುತ್ತದೆ. ದಾಳಿಗೆ ಒಳಗಾದ ಅಥವಾ ಯುದ್ಧದಲ್ಲಿ ತತ್ತರಿಸಿದ ದೇಶಗಳ ಪ್ರಜೆಗಳು ಇಂತಹ ಉದಾರವಾದಿ ಪ್ರಜಾಪ್ರಭುತ್ವದ ಕೊಡುಗೆಗಳನ್ನು ಪಡೆಯಲು ಕಾತರರಾಗಿರುತ್ತಾರೆ. ಕ್ಯೂಬಾ, ಸೊಮಾಲಿಯಾ, ವಿಯೆಟ್ನಾಮ್, ಅಫ್ಘಾನಿಸ್ಥಾನ ಮುಂತಾದುವುಗಳೆಲ್ಲ ಈ ರೀತಿ ದೊಡ್ಡವರ ಪೋಷಣೆಯಲ್ಲಿ ಸದಾಕಾಲ ಅಂಗಲಾಚುತ್ತಾ ಬದುಕಬೇಕಾದ  ಅನಾಥ ಶಿಶುಗಳು. ಬಲಾತ್ಕಾರದ ಮಿಲಿಟರಿ ಪ್ರವೇಶ ಮತ್ತು ಸ್ಥಾಪನೆಯಿಂದಾಗಿ ಆ ದೇಶಗಳಲ್ಲಿ ಮುಕ್ತ ವ್ಯಾಪಾರ ವಹಿವಾಟು ಸಾಧ್ಯವಾಗುವುದಿಲ್ಲ. ಸಂಘರ್ಷದಿಂದ ಛಿದ್ರವಾಗಿರುವ ದೇಶಗಳನ್ನು ಪುನರ್ನಿರ್ಮಾಣ ಮಾಡುವ ಮಾದರಿಗಳು ಬೇರೆಯೇ ಆಗಬೇಕಾಗುತ್ತದೆ.

ಯುದ್ಧದ ವಿದ್ಯಮಾನವನ್ನು ಕುರಿತ ನಮ್ಮ ತಿಳುವಳಿಕೆ ಇತ್ತೀಚೆಗೆ ಬದಲಾಗುತ್ತಿದೆ.  ಭಯೋತ್ಪಾದನೆ ಎನ್ನುವ ವಿದ್ಯಮಾನವೇ ಸ್ಥಳೀಯ  ಮಟ್ಟದಿಂದ ಜಾಗತಿಕ ಹಂತದವರೆಗೆ ಯುದ್ಧದ ಸ್ವರೂಪವನ್ನು ಬದಲಾಯಿಸಿದೆ.  ಶಸ್ತ್ರಾéಸ್ರಗಳ ನಿರ್ಮಾಣ ಹಾಗೂ ಮಾರಾಟ, ಅದಕ್ಕೆ ಬೇಕಾದ ಬಂಡವಾಳದಂತಹ ಸಂಗತಿಗಳು ಯುದ್ಧದ ಆರ್ಥಿಕ ಆಯಾಮವನ್ನು ನಿರ್ಣಯಿಸುತ್ತವೆ.  ಬಾಂಬುಗಳ ನಿರ್ಮಾಣವು ಪ್ರಾದೇಶಿಕ ಮಟ್ಟದಲ್ಲಿ ಸ್ಫೋಟಿಸಿ ಭಯೋತ್ಪಾದನೆಯನ್ನು ಉಂಟುಮಾಡಿದರೆ, ರಾಷ್ಟ್ರಮಟ್ಟದಲ್ಲಿ ರಹಸ್ಯವಾಗಿದ್ದುಕೊಂಡೇ ಬೆದರಿಕೆಯ ಕಾರ್ಮೋಡವನ್ನು ಹಬ್ಬಿಸುತ್ತದೆ. ಹೀಗಾಗಿ, ಯುದ್ಧದ ಸಂಭವನೀಯತೆಗಿಂತಲೂ ಹೆಚ್ಚಾಗಿ ಯುದ್ಧದ ವಾತಾವರಣ ನಿರ್ಮಾಣ ಆಧುನಿಕಕಾಲದ ಪ್ರಬಲ ಉತ್ಪಾದನಾ ರಂಗವಾಗಿದೆ.  ವಸ್ತುಗಳ ಮತ್ತು ಕಥನಗಳ ನಿರ್ಮಾಣದ ಸಂಕಥನವೇ ನಿಜವಾದ ಯುದ್ಧಕ್ಕಿಂತ ಹೆಚ್ಚು ಸಂಕೀರ್ಣವಾದುದು, ಶಕ್ತಿಶಾಲಿಯಾದುದು ಮತ್ತು ಅಪಾಯಕಾರಿಯಾದುದು.

1993 ಸೆಪ್ಟೆಂಬರ್  11ರಂದು ಜರ್ಮನಿಯ ಬರ್ಲಿನ್ನಲ್ಲಿ ನಾನು ನೋಡಿದ ಜರ್ಮನ್ ನಾಟಕ ಷೇಕ್ಸ್ಪಿಯರ್ನ ‘ಹ್ಯಾಮ್ಲೆಟ್’ನ್ನು ಪ್ರಸಿದ್ಧ ಜರ್ಮನ್ ನಾಟಕಕಾರ ಹೈನರ್ ಮುಲ್ಲರ್ ರೂಪಾಂತರಿಸಿದ್ದು. ಏಳು ಗಂಟೆಯ ದೀರ್ಘಾವಧಿಯ ಈ ಪ್ರದರ್ಶನದಲ್ಲಿ ಷೇಕ್ಸ್ಪಿಯರ್ನ ‘ಹ್ಯಾಮ್ಲೆಟ್’ ಮತ್ತು ಮುಲ್ಲರ್ನ ‘ಹ್ಯಾಮ್ಲೆಟ್ ಮೆಷಿನ್’ ನಾಟಕಗಳನ್ನು ಜೋಡಿಸಿ ಆಧುನಿಕ ಜಗತ್ತನ್ನು ಆವರಿಸಿರುವ ಕ್ರೌರ್ಯ ಮತ್ತು ಭಯದ ತಲ್ಲಣವನ್ನು ಬಿಂಬಿಸಲಾಗಿತ್ತು. ಮುಲ್ಲರ್ನ ದೃಷ್ಟಿಯಲ್ಲಿ ಹ್ಯಾಮ್ಲೆಟ್ನ ಭಾವನೆಗಳು, ನಿಷ್ಕ್ರಿಯತೆ /  ಕ್ರಿಯಾಶೀಲತೆ, ಸೋಲು-ಇವೆಲ್ಲ ಕೇವಲ ಯೂರೋಪಿಗೆ ಸಂಬಂಧಪಟ್ಟವು ಅಷ್ಟೇ ಅಲ್ಲ. ಕೊಲ್ಲಿ ಯುದ್ಧದ ಘಟನೆಗಳು ಹ್ಯಾಮ್ಲೆಟ್ ನಾಟಕದ ಘಟನೆಗಳ ಸಮಾನಾಂತರ ರೂಪಗಳಂತೆ ಕಾಣಿಸಿಕೊಂಡವು.

ಮರುಭೂಮಿಯಲ್ಲಿ ಯಂತ್ರಗಳ ಮೆರವಣಿಗೆಯು ಕಾಲವನ್ನು ತಮ್ಮ ವಶ ಮಾಡಿಕೊಳ್ಳಬಯಸುವ ಜಗತ್ತಿನ ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಯುದ್ಧದ ಶಕ್ತಿ ಪ್ರದರ್ಶನ. ಈ ಮರುಭೂಮಿ ಸಾರ್ವಕಾಲಿಕ ಸಾವಿನ ಮರುಭೂಮಿಯಾಗಿ ಕಾಣಿಸುತ್ತದೆ. ಯುದ್ಧದ ಬೃಹತ್ ಮ್ಯಾಷೀನ್ಗಳ ಜಗತ್ತಿನಲ್ಲಿ ಮನುಷ್ಯರೆಲ್ಲರೂ ಕೇವಲ ಮ್ಯಾಷೀನ್ಗಳು ಮಾತ್ರ.  ನಾವು ನಮ್ಮ ಕಾಲವನ್ನು ಮತ್ತೆ ಪಡೆಯಲು ಶಕ್ತರಾಗದಿದ್ದರೆ, ಮನುಷ್ಯರಿಗೆ ಮತ್ತು ನಿಸರ್ಗಕ್ಕೆ ಹೊಂದುವಂತಹ ಕಾಲವನ್ನು ರೂಪಿಸಲು ಸಾಧ್ಯವಾಗದಿದ್ದರೆ ಅದು ಮಾನವಕುಲದ ನಾಶದ ಮುಂದಿನ ಹೆಜ್ಜೆಯಾಗುತ್ತದೆ ಎನ್ನುವ ಅರ್ಥ ಈ ನಾಟಕದ ಉದ್ದಕ್ಕೂ ಧ್ವನಿತವಾಗುತ್ತದೆ.  ಹ್ಯಾಮ್ಲೆಟ್ನ ತಂದೆ, ಜರ್ಮನಿಯನ್ನು ನಾಶ ಮಾಡಿದ ಹಿಟ್ಲರ್, ಹೋಳು ಮಾಡಿದ ಸ್ಟಾಲಿನ್, ಕೊಲ್ಲಿ ಯುದ್ಧದ ಸದ್ದಾಂ ಹುಸೇನ್ ಮತ್ತು ಬುಷ್-ಇವರೆಲ್ಲರೂ ಕಾಣುವ ಮತ್ತು ಕಾಣದ ಪಾತ್ರಗಳಾಗಿ ನಾಟಕವನ್ನು ತುಂಬಿದರು. ಯಂತ್ರ ನಾಗರಿಕತೆಯ ನಡುವೆ ಸದಾ ಯುದ್ಧಗಳ ಕಾರ್ಮೋಡಗಳ ಅಡಿಯಲ್ಲಿ ಯಂತ್ರಗಳಂತೆ ಬದುಕುತ್ತಿರುವ ಆಧುನಿಕ ಮನುಷ್ಯನ ಸ್ಥಿತಿಯ ಅನಾವರಣ ತುಂಬಾ ಪರಿಣಾಮಕಾರಿಯಾಗಿತ್ತು. ಚಿನ್ನದ ತಲೆ, ಚಿನ್ನದ ಕೈ, ಯುದ್ಧ ವಿಮಾನಗಳು, ಮರುಭೂಮಿ, ಕೊಲೆ, ಭೂತ-ಇವೆಲ್ಲ ಅಲ್ಲಿ ಒಂದುಇನ್ನೊಂದರ ಪ್ರತಿಕ್ರಿಯೆಗಳು ಮತ್ತು ಪರಿಣಾಮಗಳು ಆಗಿ ಕಾಣಿಸಿಕೊಂಡುವು.

‘ಶಾಂತಿಯೊಂದೇ ಮಂತ್ರ’  ಎನ್ನುವ ಮಾತು ಮತ್ತೆ ಭಾರತ-ಪಾಕಿಸ್ಥ್ತಾನಗಳ ನಡುವೆ ಕೇಳಿಬರುತ್ತಿದೆ. ಭಾರತ ಮತ್ತು ಪಾಕಿಸ್ಥ್ತಾನಗಳ ಒಳಗೆಯೂ ಅದು ಎಲ್ಲೆಡೆ ಅನುರಣಿಸಬೇಕು. ಹೊಸ ವರುಷ ಮತ್ತೆ ಬಂದಿದೆ. 2008ರ  ದಿನಚರಿಯ ಕೆಂಪು ಚುಕ್ಕಿಗಳನ್ನು ಅಳಿಸಿ, ಬಿಳಿಯ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಲೇ ಮೂಡಣ ಮನೆಯ ಮುತ್ತಿನ ನೀರನ್ನು ಎರಕ ಹೊಯ್ಯಬೇಕು. 2009ರಲ್ಲಿ ಮತ್ತೆ ಲೋಕಸಭಾ ಚುನಾವಣೆ  ಬರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ಯುದ್ಧದ ಸಿದ್ಧತೆಯ ಮಾತುಗಳು ಕೇಳಿಬರುತ್ತಿವೆ. ಅದನ್ನು ಇನ್ನೊಂದು ಯುದ್ಧವೆಂದು ಭಾವಿಸಬಾರದು, ಯುದ್ಧವಾಗಲು ಬಿಡಬಾರದು. ನಮ್ಮಲ್ಲಿ ಒಳಗಿನ ಯುದ್ಧಗಳು ಹೆಚ್ಚಾದಷ್ಟೂ ಹೊರಗಿನ ಯುದ್ಧಗಳ ಭಯ ಅಧಿಕವಾಗುತ್ತಾ ಹೋಗುತ್ತದೆ. ಅಂತರಂಗದ ಶಾಂತಿಯ ಅರಿವು ಬಹಿರಂಗದ ಬೆಳಕಿನ ಕಾಮನಬಿಲ್ಲು ಆಗಬೇಕು.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಯುದ್ಧವೆಂಬ ಬಹುರೂಪಿ ನಾಟಕವು”

RSS Feed for ಬಿ ಎ ವಿವೇಕ ರೈ Comments RSS Feed

‘ಯುದ್ಧದ ಬಳಿಕ ಏನಾಗುತ್ತದೆ ಎನ್ನುವ ಬಹುರೂಪಿ ಸಾಹಿತ್ಯ ಜಗತ್ತಿನಾದ್ಯಂತ ದೊರೆಯುತ್ತದೆ’ ನಿಮ್ಮ ಇಂದಿನ ಬ್ಲಾಗಿನ ಮುಖ್ಯ ಹೂರಣವಿದು. ಲೇಖನದ ಕೊನೆಯ ಸಂದೇಶ ಚೆನ್ನಾಗಿದೆ.

ನಂದಾವರರಿಗೆ ನಮಸ್ಕಾರ.ನಿಮ್ಮ ಓದು ಮತ್ತು ಪ್ರತಿಕ್ರಿಯೆ ನನ್ನ ಬರಹಕ್ಕೆ ಇನ್ನಷ್ಟು ಶಕ್ತಿ ಕೊಡುತ್ತದೆ,


Where's The Comment Form?

Liked it here?
Why not try sites on the blogroll...

%d bloggers like this: