ಮತ್ತೆ ಪಡೆದ ಶಕುಂತಲೆ ಮತ್ತು ತೋಡಿದ ಬಾವಿಗಳು

Posted on ಮಾರ್ಚ್ 29, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpgಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 27 ಫೆಬ್ರವರಿ, 2009.

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ.

‘ಅದೃಶ್ಯವಾದ ತನ್ನ ಹುಡುಗನೊಡನೆ ಶಕುಂತಲೆ ವಾಸಿಸುವಲ್ಲಿ

ದೇವತೆಗಳಿಂದಾಕೆಯನ್ನು ಹೊಚ್ಚ ಹೊಸದಾಗಿ ದುಷ್ಯಂತ ಪಡೆಯುವಲ್ಲಿ

ನಿನಗೆ ವಂದನೆ, ಓ ಪವಿತ್ರ ನಾಡೇ, ಸ್ವರಗಳ ನಾಯಕನೇ

ಹೃದಯದ ಧ್ವನಿಯೇ, ಮೇಲೆತ್ತು ನನ್ನನು

ಸ್ವರ್ಗದ ಮೂಲಕ ನಿನ್ನಲ್ಲಿಗೆ’

ಪ್ರಸಿದ್ಧ ಜರ್ಮನ್ ಕವಿ Johann Gottfried Herder (1744-1803)ನು ಕಾಳಿದಾಸನ ಶಕುಂತಲೆಯ ನಾಡು ಭಾರತಕ್ಕೆ ಗೌರವವನ್ನು ಸಲ್ಲಿಸಿದ ರೀತಿ ಇದು.  ಹರ್ಡರ್ಗೆ ಭಾರತದ ಪರಿಚಯವಾದದ್ದು ಜಾರ್ಜ್ ಫಾರ್ಸ್ಟರ್ನು  (1754-1794) ಅನುವಾದಿಸಿದ ಜರ್ಮನ್ ‘ಶಾಕುಂತಲ’ದ ಮೂಲಕ (1791).  ಈ ಕೃತಿಯ ಮೂಲಕವೇ ಹರ್ಡರ್ ಗಯತೆಯ ಗಮನವನ್ನು ಭಾರತದ ಸಾಹಿತ್ಯದ ಕಡೆಗೆ ಸೆಳೆದದ್ದು. ಫಾರ್ಸ್ಟರ್ನ  ಜರ್ಮನ್ ಶಾಕುಂತಲದ ಮೂಲಕವೇ ಭಾರತೀಯ ಸಾಹಿತ್ಯದ ಕುರಿತು ಜರ್ಮನಿಯಲ್ಲಿ ಆಸಕ್ತಿ ಬೆಳೆದು, ಅಧ್ಯಯನದ ಹೊಸ ಯುಗವೊಂದು ಆರಂಭವಾದದ್ದು. ತನ್ನ ‘Local And General Knowledge’ ಎಂಬ ಲೇಖನದಲ್ಲಿ ಫಾರ್ಸ್ಟ್ಟರ್ ಈ ರೀತಿ ಬರೆಯುತ್ತಾನೆ: ನಮ್ಮ ಒಳಗೆ ಮತ್ತು ಹೊರಗೆ ಕ್ರಿಯಾಶೀಲವಾಗಿರುವ ಶಕ್ತಿಯ ಎಲ್ಲಾ ಅಂಶಗಳ ಸರಿಯಾದ ಪರಿಜ್ಞಾನವನ್ನು ಹೊಂದುವುದಕ್ಕಾಗಿ, ನಾವು ಜಗತ್ತಿನ ಎಲ್ಲಾ ಪ್ರದೇಶಗಳ ಪ್ರತಿಭೆಗಳ ಕಾವ್ಯಗಳಲ್ಲಿ ಹಂಚಿಹೋಗಿರುವ ಎಲ್ಲಾ ಹೂವುಗಳನ್ನೂ ಎಚ್ಚರದಿಂದ ಒಟ್ಟುಮಾಡಬೇಕು.

ಕಳೆದ ವಾರ ಫೆಬ್ರುವರಿ 19,20,21ರಂದು ಮಂಗಳೂರಿನಲ್ಲಿ ಬಾಸೆಲ್ ಮಿಷನಿನ ರೂಪಾಂತರವಾದ  ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನಲ್ಲಿ ‘ರೂಪಾಂತರವನ್ನು ಸಂಭ್ರಮಿಸುವುದು’ ಎನ್ನುವ ಅಂತಾರಾಷ್ಟ್ರೀಯ ಸಮಾಲೋಚನಾ ಸಮ್ಮೇಳನ ನಡೆಯಿತು. ಬಾಸೆಲ್ ಮಿಷನರಿಗಳು ಭಾರತಕ್ಕೆ ಬಂದು 175 ವರ್ಷಗಳು ಸಂದ ನೆನಪಿಗಾಗಿ ಭಾರತದ ಮಿಷನ್ ಕುಟುಂಬದವರೊಂದಿಗೆ ಜರ್ಮನಿ ಮತ್ತು ಬಾಸೆಲ್ನ ಕೆಲವು ಸಮಾನಮನಸ್ಕರು ಒಟ್ಟು ಸೇರಿ ಕಳೆದ 175 ವರ್ಷಗಳಲ್ಲಿ ನಡೆದ ರೂಪಾಂತರಗಳನ್ನು ನೆನಪಿಸಿಕೊಳ್ಳುತ್ತಾ, ಭವಿಷ್ಯದ ರೂಪಾಂತರಗಳನ್ನು ಚರ್ಚಿಸಿದರು. ಸ್ವಿಟ್ರ್ಜಲೆಂಡಿನ ‘ಬಾಸೆಲ್’ ಎಂಬ ಊರಿನಲ್ಲಿ 1815ರಲ್ಲಿ ಆರಂಭವಾದ ಬಾಸೆಲ್ ಮಿಷನರಿ ಸೊಸೈಟಿಯ ಮಿಷನರಿಗಳು ಭಾರತಕ್ಕೆ ಬಂದದ್ದು 1834ರಲ್ಲಿ. ಕೇರಳದ ಮಲಬಾರ್ ಕರಾವಳಿ, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ನೀಲಗಿರಿ ಪ್ರದೇಶಗಳಲ್ಲಿ ಕೆಲಸಮಾಡಿದ ಈ ಮಿಷನರಿಗಳು, ಧಾರ್ಮಿಕ ಬದಲಾವಣೆಗಳಿಗಿಂತ ಹೆಚ್ಚಾಗಿ ಸಾಂಸ್ಕೃತಿಕ ಸಾಧನೆಗಳನ್ನು ಮಾಡುವಲ್ಲಿ ಯಶಸ್ವಿಯಾದರು. ಒಂದು ಅರ್ಥದಲ್ಲಿ ಕ್ರಿಶ್ಚಿಯನ್ಧರ್ಮಕ್ಕೆ ಮತಾಂತರ ಮಾಡುವ ಮಿಷನ್ನ ಕೆಲಸಕ್ಕಿಂತ ಹೆಚ್ಚಾಗಿ ಶಿಕ್ಷಣ, ಸಾಹಿತ್ಯ, ಆರೋಗ್ಯ, ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಜನಮುಖಿಯಾದ ಕೆಲಸಗಳನ್ನು ಮಾಡಿದರು. ಕನ್ನಡ, ಮಲೆಯಾಳಂ ಮತ್ತು ತುಳು ಭಾಷೆಯ ಸಾಹಿತ್ಯದ ಕ್ಷೇತ್ರದಲ್ಲಿ ವಿದ್ವತ್ತಿನ ಬಹುಮುಖಿ ಕೆಲಸಗಳು ಮಿಷನರಿಗಳಿಂದ ಸಾಧ್ಯವಾದುವು. ‘ಪ್ರೊಟೆಸ್ಟೆಂಟ್’ ಎನ್ನುವ ವಿಶೇಷಣವು ಕ್ರೈಸ್ತ ಧರ್ಮದ ಶಾಖೆಯಾಗಿಯೇ ಹೊರತು ಸ್ಥಳೀಯ ಸಂಸ್ಕೃತಿಯ ಪ್ರತಿರೋಧವಾಗಿ ಕೆಲಸ ಮಾಡಲಿಲ್ಲ. ಹೀಗಾಗಿ ಕನ್ನಡದಲ್ಲಿ ಕಿಟೆಲ್, ಮೋಗ್ಲಿಂಗ್, ವೈಗ್ಲೆ, ತುಳುವಿನಲ್ಲಿ ಮ್ಯಾನರ್, ಬ್ರಿಗೆಲ್, ಮಲೆಯಾಳಂನಲ್ಲಿ ಗುಂಡರ್ಟ್ ಸಾಹಿತ್ಯ ಮಿಷನರಿಗಳಾಗಿ ಇಂದಿಗೂ ನಮ್ಮೊಡನಿದ್ದಾರೆ.

ಸ್ವಿಟ್ರ್ಜಲೆಂಡಿನ ‘ರೈನ್’ ನದಿಯ ಎರಡೂ ಬದಿಗಳಲ್ಲಿ ಬೆಳೆದು ನಿಂತಿರುವ ನಗರ ‘ಬಾಸೆಲ್’. ಮುಖ್ಯ ವ್ಯಾಪಾರ ಕೇಂದ್ರವೂ ಆಗಿರುವ ಬಾಸೆಲ್ನಲ್ಲಿ ಇರುವ ‘ಮಿಷನ್ ಹೌಸ್’ನ ಹೆಸರು. ಪ್ರವಾಸಿಗರ ಕೈಪಿಡಿಯಲ್ಲಿ ಇಲ್ಲ. ಕನ್ನಡ, ತುಳು, ಮಲೆಯಾಳಂ ಸಂಶೋಧಕರು ಮಾತ್ರ ಬಾಸೆಲ್ನಲ್ಲಿ ‘ಮಿಷನ್ ಹೌಸ್’ನ್ನು ಹುಡುಕಿಕೊಂಡು ಬರುತ್ತಾರೆ. ‘ಬಾಸೆಲ್ನ ಬೀದಿಗಳಲ್ಲಿ  ಅಲೆಯುವಾಗ ಪಾಸ್ಪೋರ್ಟ್ನ್ನು ಮರೆಯಬೇಡಿರಿ’ ಎನ್ನುವುದು ಒಂದು ಜನಪ್ರಿಯ ನುಡಿಗಟ್ಟು. ಬಾಸೆಲ್ ನಗರವು ಸ್ವಿಟ್ರ್ಜಲೆಂಡ್, ಜರ್ಮನಿ ಮತ್ತು ಫ್ರಾನ್ಸ್ ದೇಶಗಳ ಗಡಿಯಲ್ಲಿದೆ. ಬಾಸೆಲ್ನ ಬೀದಿಗಳಲ್ಲಿ ನಡೆದುಕೊಂಡು ಹೋದರೆ, ನೇರವಾಗಿ ಫ್ರಾನ್ಸ್ ಅಥವಾ ಜರ್ಮನಿಗೆ ಹೋಗಬಹುದು. ಆದರೆ, ‘ಬಾಸೆಲ್ ಮಿಷನ್ ಹೌಸ್’ನ  ಸಂಗ್ರಹಾಲಯದ ಒಳಗಡೆ ಪ್ರವೇಶಿಸಿ ಅಪೂರ್ವ ಗ್ರಂಥಗಳಲ್ಲಿ ಪರಕಾಯ ಪ್ರವೇಶ ಮಾಡಿದರೆ, ನಾವು ಕರ್ನಾಟಕದೊಳಗಡೆ ಸಂಚರಿಸಬಹುದು. 1993 ಮತ್ತು 2003ರಲ್ಲಿ ಬಾಸೆಲ್ನಲ್ಲಿದ್ದ  ಅವಧಿಯಲ್ಲಿ ಕನ್ನಡ ಮತ್ತು ತುಳುವಿನ ಅನುವಾದಗಳು, ಪಠ್ಯಪುಸ್ತಕಗಳು, ಅಪೂರ್ವ ಜನಪದ ಸಂಗ್ರಹಗಳು ಇವನ್ನು ವಿವರವಾಗಿ ನೋಡಲು ನನಗೆ ಸಾಧ್ಯವಾಯಿತು.

‘ಜೆನಿಸಿಸ್’ನ  ಅಧ್ಯಾಯ-26ರಲ್ಲಿ ‘ಬಾವಿಗಳು ಮತ್ತು ಜಗಳಗಳು’ ಎನ್ನುವ ಪ್ರಸ್ತಾವ ಇದೆ. ಬರಗಾಲದ ವೇಳೆಯಲ್ಲಿ ನೀರಿಗಾಗಿ ಜಗಳಗಳಾಗುತ್ತಿದ್ದವು. ತನ್ನ ತಂದೆ ಅಬ್ರಹಾಂ ಕಾಲದಲ್ಲಿ ತೋಡಿ ಪಾಳುಬಿದ್ದ ಬಾವಿಗಳನ್ನು ಅವನ ಮಗ ಐಸಾಕ್ ಮತ್ತೆ ಅಗೆಯುತ್ತಾನೆ. ಇದರಿಂದಾಗಿ, ಬರಗಾಲದ ವೇಳೆ ನೀರಿಗಾಗಿ ಜಗಳಮಾಡುವುದು ತಪ್ಪುತ್ತದೆ. ನಿರಂತರ ಪ್ರಯಾಣ ಮಾಡುತ್ತಿರುವವರು, ತಾವು ಡೇರೆ ಹಾಕಿದ ಕಡೆಗಳಲ್ಲಿ ಬಾವಿ ತೋಡುತ್ತಾ ಬರುತ್ತಾರೆ.  ಹಾಗೆ ತೋಡಿದ ಬಾವಿಗಳು ಮುಂದೆ ಬರುವವರಿಗೆ ನೀರನ್ನು ಒದಗಿಸುತ್ತವೆ. ಬಾಸೆಲ್ನ ಮಿಷನರಿಗಳು ತೋಡಿದ ಅನೇಕ ಬಾವಿಗಳು ಕಾಲಕ್ರಮೇಣ ಮುಚ್ಚಿಹೋಗಿವೆ. ಅವನ್ನು ಮತ್ತೆ ತೋಡುವ ಮತ್ತು ಹೊಸ ರೂಪಗಳಲ್ಲಿ ಕಟ್ಟುವ ಪ್ರಕ್ರಿಯೆಯ ಭಾಗವಾಗಿ ಕಳೆದವಾರ ಮಂಗಳೂರಿನ ಸಮ್ಮೇಳನ ನಡೆಯಿತು.

ಭಾರತಕ್ಕೆ ಬಂದ ಬಾಸೆಲ್ ಮಿಷನರಿಗಳು ಸ್ಥಳೀಯರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿರುವ ಬಗ್ಗೆ ಎಲ್ಲೂ ಮುಚ್ಚುಮರೆ ಮಾಡಿಲ್ಲ. ಇಲ್ಲಿಂದ ಬಾಸೆಲ್ಗೆ ಕಳುಹಿಸಿದ ನಿಗದಿತ ವರದಿಗಳಲ್ಲಿ ಮತಾಂತರದ ಪ್ರಯತ್ನಗಳು, ಅವುಗಳ ಸೋಲು-ಗೆಲುವುಗಳು ವಿವರವಾಗಿ ದೊರೆಯುತ್ತವೆ. ಜರ್ಮನ್ ಭಾಷೆಯಲ್ಲಿ ಇರುವ ಇಂತಹ ವರದಿಗಳ ಸಮಗ್ರ ಸಂಗ್ರಹ ಬಾಸೆಲ್ನಲ್ಲಿ ಇದೆ. ಈಗ ಅವುಗಳನ್ನೆಲ್ಲ ಮಂಗಳೂರಿನ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿಗೆ ತಂದಿಡಲಾಗಿದೆ. ಮಿಷನರಿಗಳು ನಡೆಸಿದ ಸ್ಥಳೀಯರ ಮತಾಂತರದ ಪ್ರಯತ್ನಗಳು ವಿಶಿಷ್ಟವಾಗಿವೆ, ಕೆಲವೊಮ್ಮೆ ಹಾಸ್ಯಾಸ್ಪದವಾಗಿವೆ. ವಿಶೇಷವೆಂದರೆ, ಕರಾವಳಿ ಕರ್ನಾಟಕದಲ್ಲಿ ತೀರ ಕೆಳವರ್ಗದವರು ಈ ಪಂಥಕ್ಕೆ ಹೆಚ್ಚು ಮತಾಂತರಗೊಂಡಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಬಿಲ್ಲವರು, ಬಂಟರು, ಮೊಗವೀರರು, ಸ್ವಲ್ಪ ಪ್ರಮಾಣದಲ್ಲಿ ಬ್ರಾಹ್ಮಣರು, ಸಾರಸ್ವತ ಬ್ರಾಹ್ಮಣರು ಮತಾಂತರಗೊಂಡ ವಿವರಗಳು ದೊರೆಯುತ್ತವೆ. ಬಿಲ್ಲವರನ್ನು ಶ್ರೇಣೀಕೃತ ಸಮಾಜ ಹೊರಗಿಟ್ಟ ಕಾರಣ, ಸಾಮಾಜಿಕ ಸ್ಥಾನಮಾನಗಳಿಗಾಗಿ ಆ ಸಮೂಹದಿಂದ ಹೆಚ್ಚು ಮತಾಂತರಗೊಂಡಿರುವ ವಿಚಾರ ತಿಳಿಯುತ್ತದೆ.

ಈ ರೀತಿ ಮತಾಂತರಗೊಂಡವರಿಗೆ ಆರ್ಥಿಕ ಸ್ವಾವಲಂಬನೆಗಾಗಿ ಗುಡಿಕೈಗಾರಿಕೆಗಳನ್ನು ಮಿಷನರಿಗಳು ಆರಂಭಿಸಿದರು. ನೇಯ್ಗೆ, ಪುಸ್ತಕದ ಬುಕ್ ಬೈಂಡಿಂಗ್, ಮುದ್ರಣ, ವಾಚ್ ತಯಾರಿಸುವುದು, ಹೊಲಿಗೆ-ಈ ರೀತಿಯ ಕಿರುಕೈಗಾರಿಕೆಗಳು ಕರಾವಳಿಯಲ್ಲಿ ಬೆಳೆಯಲು ಮಿಷನರಿಗಳು ಅವಕಾಶ ಕಲ್ಪಿಸಿದರು. ಹೆಂಚಿನ ಕಾರ್ಖಾನೆಗಳು, ಕೈಮಗ್ಗದ ಮಿಲ್ಗಳು-ಅನೇಕ ಕಾರ್ಮಿಕರಿಗೆ ಉದ್ಯೋಗ ಮತ್ತು ಆರ್ಥಿಕ ಭದ್ರತೆ ನೀಡಿದವು.

ಸರ್ವಧರ್ಮ ಸಮಾನತೆಯ ತತ್ತ್ವ(Ecumenicalism)ಗಳನ್ನು ಮಿಷನರಿತತ್ತ್ವದ ರೂಪದಲ್ಲಿ ಪ್ರತಿಪಾದಿಸಲಾಯಿತು. ಹೀಗಾಗಿ ವೀರಶೈವತತ್ತ್ವ ಮತ್ತು ಮಿಷನರಿತತ್ತ್ವಗಳ ನಡುವೆ ಸಮಾನವಾದ ತಾತ್ವಿಕ ನೆಲೆಗಟ್ಟನ್ನು ಕಾಣಬಹುದು. ಬೇರೆಬೇರೆ ಜಾತಿಗಳಿಂದ ಬಂದವರು ಮಿಷನರಿಗಳ ಪ್ರೊಟೆಸ್ಟೆಂಟ್ ಪಂಥವನ್ನು ಸ್ವೀಕರಿಸಿದ ನಂತರ ಸಮಾನರಾಗುತ್ತಾರೆ. ಉಳಿದ ಕ್ರೈಸ್ತ ಧರ್ಮದ ಪಂಥಗಳಲ್ಲಿ ಇರುವ ಹಾಗೆ ಮತಾಂತರಗೊಂಡ ಬಳಿಕ ಜಾತಿಪದ್ಧತಿಯ ಭೇದ ಮಿಷನರಿಗಳಲ್ಲಿ ಕಾಣಿಸುವುದಿಲ್ಲ.

175 ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಇರುವ ಮಿಷನರಿ ಕ್ರೈಸ್ತರ ಸಂಖ್ಯೆ ಕೇವಲ 28,000. ಕಳೆದ ಅನೇಕ ವರ್ಷಗಳಿಂದ ಈ ಸಂಖ್ಯೆ ಬದಲಾಗಿಲ್ಲ. ಮತಪರಿವರ್ತನೆಗಿಂತ ಜೀವನ ಪರಿವರ್ತನೆ ಮುಖ್ಯ ಎಂಬ ಧ್ಯೇಯವನ್ನು ಹೊಂದಿರುವ ಈ ಪಂಥದವರು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಅಪ್ಪಿಕೊಂಡಷ್ಟು ಮತ್ತು ಪ್ರಸರಿಸಿದಷ್ಟು ಪ್ರಮಾಣದಲ್ಲಿ ಸ್ಥಳೀಯರಿಗೇ ಅದನ್ನು ಮಾಡಲು ಸಾಧ್ಯವಾಗಿಲ್ಲ. ಮಂಗಳೂರು ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಆವರಣದಲ್ಲಿ ಮುಂಜಾನೆಯ ಕಾಲ್ನಡಿಗೆ ಸಂಚಾರದಿಂದ ತೊಡಗಿ, ಯಾವುದೇ ಸಂದರ್ಭದಲ್ಲಿ ನೋಡಿದರೂ ವಿದ್ಯಾವಂತರ ದೈನಂದಿನ ಮಾತುಗಳಲ್ಲಿ ಕನ್ನಡ, ತುಳು ಬಿಟ್ಟರೆ ಇಂಗ್ಲಿಷ್ನ ಪ್ರಭಾವ ಕಾಣಿಸುವುದೇ ಇಲ್ಲ. ಆಧುನಿಕ ನಗರ ಮಂಗಳೂರಿನಲ್ಲಿ ‘ಕನ್ನಡದ್ದೇ ದ್ವೀಪ’ ಎನ್ನುವ ಹಾಗೆ ಬಲ್ಮಠದ ಮಿಷನ್ ಆವರಣ ಇದೆ. ಅಲ್ಲಿನ ಚರ್ಚ್ಗಳಲ್ಲಿ ಕನ್ನಡದಲ್ಲೇ ಸಂಪೂರ್ಣವಾಗಿ ಪ್ರಾರ್ಥನೆ, ಉಪನ್ಯಾಸಗಳು ನಡೆಯುತ್ತವೆ.

ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಈಗಿನ ಪ್ರಾಂಶುಪಾಲರಾದ ಡಾ.ಜೆ.ಎಸ್.ಸದಾನಂದ ಅವರು ಆಧುನಿಕ ಚಿಂತನೆಯ ವೈಚಾರಿಕ ಮತ್ತು                  ಪ್ರೀತಿ-ವಾತ್ಸಲ್ಯದ ಬಾಸೆಲ್ತತ್ತ್ವದ ಒಬ್ಬ ನಿಜವಾದ ‘ಮಿಷನರಿ’. ಅವರ ಪ್ರಯತ್ನದಿಂದ ಜರ್ಮನಿ ಮತ್ತು ಬಾಸೆಲ್ನಲ್ಲಿರುವ ಎಲ್ಲ ಕರ್ನಾಟಕ ಸಂಬಂಧಿ ಸಾಮಗ್ರಿಗಳು ಇಲ್ಲಿನ ಸಂಗ್ರಹಾಲಯದಲ್ಲಿ ಬಂದು ಸೇರಿವೆ. ಜೊತೆಗೆ ಜಾತ್ಯತೀತ ನೆಲೆಯಲ್ಲಿ ಆಧುನಿಕ ಚಿಂತನೆಗಳ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಇತಿಹಾಸದ ಅಧ್ಯಯನ ಇಲ್ಲಿ ನಡೆಯುತ್ತಿದೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಮಾನ್ಯತೆಯ ಸಂಶೋಧನಾ ಕೇಂದ್ರ-ಈ ಸಂಸ್ಥೆಯ ಭಾಗವಾಗಿದೆ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದಿಂದ ತೊಡಗಿ ಕಿಟೆಲ್ ನಿಘಂಟಿನಿಂದ ಮುಂದುವರೆದು ಕನ್ನಡ-ತುಳುಗಳ ಸಮಗ್ರ ವಾಙ್ಮಯ ಮತ್ತೆ ಅಧ್ಯಯನಕ್ಕೆ ತೆರೆದುಕೊಂಡಿದೆ.

ಹಳೆಯ ಬಾವಿಗಳನ್ನು ಮತ್ತೆ ತೋಡಿ ಹೊಸ ನೀರನ್ನು ಪಡೆದು ಮತಧರ್ಮಗಳ ಜಗಳಗಳನ್ನು ಕಡಿಮೆ ಮಾಡುವ ದೃಷ್ಟಿಯಿಂದ ಮಿಷನರಿ ಆಗಮನದ 175ನೇ ವರ್ಷದ ಆಚರಣೆ ಹೊಸ ಬೆಳಕಿನೆಡೆಗೆ ದಾರಿ ತೋರಿಸಬಲ್ಲದು. ಸಹಯೋಗ ಮತ್ತು ಸಮಾಗಮಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುವುದನ್ನು ಧರ್ಮದ ಉದಾರವಾದಿ ನೆಲೆಯಿಂದ ನೋಡಲು ಇದು ಸರಿಯಾದ ಅವಕಾಶ ಮತ್ತು ಸಂದರ್ಭ. ಮತೀಯ ಮೂಲಭೂತವಾದ ಮತ್ತು ಜಾಗತೀಕರಣಗಳು ಬರಗಾಲದಲ್ಲಿ ನೀರಿಗಾಗಿ ಜಗಳಗಳನ್ನು ಹೆಚ್ಚಿಸುತ್ತಿರುವಾಗ, ಪ್ರಯಾಸದಿಂದ ಪ್ರಯಾಣಿಸುವ ಯಾತ್ರಿಕರಿಗಾಗಿ ಡೇರೆಗಳನ್ನು ಕಟ್ಟುವುದು, ಕುಡಿಯುವ ನೀರಿಗಾಗಿ ಬಾವಿಗಳನ್ನು ತೋಡುವುದು : ಎಲ್ಲ ಜನರೂ ಒಟ್ಟುಸೇರಿ ಮಾಡಬೇಕಾದ ನಿಜವಾದ ಧರ್ಮ.

ಕನ್ನಡದ ಹಿರಿಯ ಕಲಾವಿದ ಕೆ.ಕೆ.ಹೆಬ್ಬಾರ್ ಅವರ ‘ಸ್ಯಾಕ್ರಿಫೈಸ್’ ಎಂಬ ಹೆಸರಿನ ವರ್ಣಚಿತ್ರವೊಂದು ಬಾಸೆಲ್ ಮಿಷನ್ನಲ್ಲಿದೆ. ಒಬ್ಬ ಕಲಾವಿದನಾಗಿ ತನಗೆ ಪ್ರೇರಣೆಯನ್ನು ಕೊಟ್ಟ Dr.P.E.Burckhardt ಅವರ ನೆನಪಿಗಾಗಿ ಹೆಬ್ಬಾರರು ಇದನ್ನು ಬಾಸೆಲ್ ಮಿಷನ್ಗೆ ಕೊಟ್ಟಿದ್ದಾರೆ. ಏಸುವಿನ ಒಂದು ಕೈಯಲ್ಲಿ ಶಿಲುಬೆಯನ್ನು ಹಿಡಿದಿರುವ ವರ್ಣಚಿತ್ರ ಇದು. ಇಲ್ಲಿ ಏಸುವಿನ ಕೈ ಮಾತ್ರ ಇದೆ, ದೇಹವಿಲ್ಲ. ಇದು ರಕ್ತದ ಪ್ರವಾಹದ ಭಯದಿಂದ ತಲ್ಲಣಗೊಂಡ ಮನುಷ್ಯರು ಶಾಂತಿಗಾಗಿ ಕೈಯನ್ನು ಚಾಚುವ ರೂಪಕ. ಈ ವರ್ಣಚಿತ್ರವನ್ನು ಬಾಸೆಲ್ ಮಿಷನ್ಗೆ ಅರ್ಪಿಸುವಾಗ ಹೆಬ್ಬಾರರು ಹೇಳಿರುವ ಮಾತು : ಇದು ನಿಮ್ಮ ವಿಶ್ವಾಸದ ಕೇಂದ್ರ ಮತ್ತು ಇವು ನನ್ನ ಕೈಗಳು.

ಚಿತ್ರ ಕೃಪೆ : basel mission and mangalorespots . blogspot.com

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: