ಪ್ರೀತಿಯ ಶಿಷ್ಯರ ಆತ್ಮೀಯ ಗುರು :ಎಸ.ವಿ.ಪರಮೇಶ್ವರ ಭಟ್ಟ

Posted on March 26, 2010. Filed under: ನನ್ನ ಗುರುಗಳು | Tags: , , , , , |


ಇಂದು ಮಂಗಳೂರಿನಲ್ಲಿ ಎಸ್ ವಿ ಪಿ ಪ್ರಶಸ್ತಿಯನ್ನು ಕನ್ನಡದ ಪ್ರಸಿದ್ಧ ವಿಮರ್ಶಕರಾದ ಟಿಪಿ ಅಶೋಕ ಅವರಿಗೆ ಪ್ರದಾನ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಎಸ್ ವಿ ಪಿ ಯವರ ಪ್ರೀತಿಯ ಶಿಷ್ಯನಾಗಿ ನನ್ನ ಆತ್ಮೀಯ ಅನುಭವಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

೧೯೬೮ರ ಜುಲೈ :ಹನಿ ಕಡಿಯದೆ ಸುರಿಯುತ್ತಿದ್ದ ಧಾರಾಕಾರ ಮಳೆಗೆ, ಬಂಟ್ವಾಳದ ನೆರೆಗೆ ಅಂಜದೆ , ಮೈಸೂರಿನಿಂದ ಘಟ್ಟ ಇಳಿದು ಬಂದ ಎಸ. ವಿ. ಪರಮೇಶ್ವರ ಭಟ್ಟರು ಕೇವಲ ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾಗಿ ,ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಮುಖ್ಯಸ್ಥರಾಗಿ ೧೯೭೪ ಮಾರ್ಚ್ ನಲ್ಲಿ  ನಿವೃತ್ತ ರಾಗಲಿಲ್ಲ.  ಸುಮಾರು ಆರು ವರ್ಷಗಳ ಕಾಲ ಅವರು ಮಂಗಳೂರನ್ನು ಸಾಹಿತ್ಯ ಸಂಸ್ಕೃತಿಗಳ ಕೇಂದ್ರವಾಗಿ ಮಾಡಿಕೊಂಡು , ಕರಾವಳಿಯ ಉದ್ದಕ್ಕೂ ದಿಗ್ವಿಜಯ ಸಾಧಿಸಿದರು. ಅಲ್ಲಿ ಯುದ್ಧವಿಲ್ಲ , ಸಾವು ನೋವುಗಳಿಲ್ಲ .ಅದೊಂದು ಬುದ್ಧನ ಶಾಂತಿ ಯಾತ್ರೆಯಂತೆ. ಅಲ್ಲಿನ ಮಂತ್ರ ಕನ್ನಡ , ಮಾತು  ಸಾಹಿತ್ಯ , ಬದುಕು ಸಂಸ್ಕೃತಿ.

ಎಸ.ವಿ.ಪಿ. ೧೯೬೮ರ ಜುಲೈ ಯಲ್ಲಿ ಮಂಗಳೂರು ಸ್ನಾತಕೋತ್ತರ ಕೇಂದ್ರಕ್ಕೆ ಕನ್ನಡ ಪ್ರೊಫೆಸ್ಸರ್ ಆಗಿ ಬಂದಾಗ ,ಅಲ್ಲಿ ಕಚೇರಿ ಇರಲಿಲ್ಲ ;ಸಿಬ್ಬಂದಿ ಇರಲಿಲ್ಲ ;ಗ್ರಂಥಾಲಯ ಇರಲಿಲ್ಲ .ತಾವೊಬ್ಬರೇ ಕಚೇರಿಯಾಗಿ  ಸಿಬ್ಬಂದಿಯಾಗಿ ನಡೆದಾಡುವ ಗ್ರಂಥಾಲಯವಾಗಿ  ಕನ್ನಡ ವಿಭಾಗವನ್ನು , ಸ್ನಾತಕೋತ್ತರ ಕೇಂದ್ರವನ್ನು ತಮ್ಮ ಮಾಂತ್ರಿಕ ಶಕ್ತಿಯಿಂದ ನಿರ್ಮಾಣ ಮಾಡಿದರು. ವಿಜ್ಞಾನದ ಪದವೀಧರನಾಗಿದ್ದ ನಾನು , ಆಗಿನ ದಕ್ಷಿಣ ಕನ್ನಡ ಜಿಲ್ಲೆಯ  ಏಕೈಕ ಕನ್ನಡ ದಿನಪತ್ರಿಕೆ ‘ನವಭಾರತ ‘ ದಲ್ಲಿ ಕನ್ನಡ ಎಂ.ಎ.ಗೆ ಅರ್ಜಿ ಸಲ್ಲಿಸುವ ಅವಕಾಶದ ಬಗ್ಗೆ ಓದಿ ತಿಳಿದು ಅರ್ಜಿ ಸಲ್ಲಿಸಿದೆ. ಒಂದು ದಿನ ಅಂಚೆ ಕಾರ್ಡಿನಲ್ಲಿ ಎಸ್ವಿಪಿಯವರದೇ ಹಸ್ತಾಕ್ಷರದಲ್ಲಿ ಎಂ.ಎ. ಪ್ರವೇಶಕ್ಕೆ ಆಯ್ಕೆಯಾದ ಸೂಚನೆ ಬಂದಾಗ ನನಗೆ ದಿಗಿಲು ಮತ್ತು ಬೆರಗು.ಮಂಗಳೂರಿಗೆ ಸಾಕಷ್ಟು ಹೊಸಬನಾದ ನಾನು ದಾರಿ ಹುಡುಕುತ್ತಾ ಸೈಂಟ್ ಅಲೋಶಿಯಸ್ ಕಾಲೇಜಿನ ತಳ ಅಂತಸ್ತಿನ ಒಂದು ಕೊಠಡಿಯ ಒಳಹೊಕ್ಕು ಎಸ್ವಿಪಿಯವರನ್ನು ವಿಚಾರಿಸಿದೆ.ಆಗ ಬೆಳ್ಳಿ ಕೂದಲ , ಕುಳ್ಳ ದೇಹದ ನಗುಮುಖದವರೊಬ್ಬರು  , ‘ಬನ್ನಿ , ಬನ್ನಿ ‘ ಎಂದು ಒಳ ಕರೆದು ತಮ್ಮೆದುರಿನ ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿದರು. ನನಗೆ ಮತ್ತಷ್ಟು ಗಾಬರಿ. ಅಳುಕುತ್ತಾ ಮೈ ಆಲಸಿಯಾದಂತೆ ಕುಳಿತುಕೊಂಡೆ.  ಅಕ್ಕರೆಯಿಂದ ವಿಚಾರಿಸಿಕೊಂಡು , ಕನ್ನಡದ ಬಗ್ಗೆ ಪ್ರೀತಿ ಮೊಳೆಯುವಂತಹ ಮಾತುಗಳನ್ನು ಆಡಿ, ಬೆನ್ನು ತಟ್ಟುವ ಸಂಭ್ರಮವನ್ನು ಕಂಡ ನನಗೆ ಹೊಸತೊಂದು ಲೋಕದ ಅನುಭವವಾಯಿತು.

ಮುಂದೆ ೧೯೬೮ರಿನ್ದ ೧೯೭೦ರ ವರೆಗೆ ಎರಡು ವರ್ಷಗಳ ಕಾಲ ಎಂ.ಎ.ತರಗತಿಯಲ್ಲಿ ಅವರ ವಿದ್ಯಾರ್ಥಿಯಾಗಿ , ಹದಿನಾರು ಮಂದಿ ಶಿಷ್ಯರಲ್ಲಿ ಒಬ್ಬನಾಗಿ ನಾನು ಕಂಡ  ಕೇಳಿದ ಅನುಭವಿಸಿದ ವಿಷಯಗಳು ಸಂಗತಿಗಳು ನೂರಾರು.ಅವರ ಪಾಠ ಅದೊಂದು ರಸಲೋಕದ ಯಾತ್ರೆಯಂತೆ. ಹದಿನಾರು ಮಂದಿಯ ತರಗತಿಯಾಗಲಿ , ಸಾವಿರ ಮಂದಿಯ ಸಭೆಯಾಗಲಿ , ಆ ಮಾತಿನ ರೀತಿ , ರೂಪಕಗಳ ಸರಮಾಲೆ , ತಮ್ಮ ಗುರು ಪರಂಪರೆಯ ಸಂಬಂಧದ ಅನುಭವಗಳನ್ನು ಬಿಚ್ಚುತ್ತಿದ್ದ ವೈಖರಿ , ವಿಷಯದ ಮಂಡನೆಯೊಂದಿಗೆ ಜೋಡಣೆಗೊಳ್ಳುತ್ತಿದ್ದ ನೂರಾರು ಅನುಭವದ ತುಣುಕುಗಳು – ಹೀಗೆ ಒಂದು ಗಂಟೆ ಮುಗಿಯುವುದರೊಳಗೆ ಒಂದು ರಸ ವಿಶ್ವಕೋಶದ  ಒಳಗಡೆ ತಿರುಗಾಟದ ಸುಖ ದೊರೆಯುತ್ತಿತ್ತು.ಪಂಪನ ಆದಿಪುರಾಣ ದಂತಹ ಕಾವ್ಯವಾಗಲಿ ,ಭಾರತೀಯ ಕಾವ್ಯಮೀಮಾಂಸೆ ಯಂತಹ ಶಾಸ್ತ್ರವಾಗಲಿ , ಅಕ್ಕಮಹಾದೇವಿಯ ವಚನಗಳಾಗಲಿ ,ಇಂಗ್ಲಿಶ್ ಲಲಿತ ಪ್ರಬಂಧಗಳ ಅನುವಾದವಾಗಲಿ – ಎಸ್ವಿಪಿ ಅವರ ಪಾಠ ಅವರ ಅನುಭವ ಲೋಕದ ಮೂಲಕವೇ ನಮಗೆ ಭಾವಗಮ್ಯ ಆಗುತ್ತಿತ್ತು.

ತರಗತಿಯ ಒಳಗಿನ ಪಾಠ ಪ್ರವಚನಗಳ ಸೊಗಸು ಒಂದು ಕಡೆಯಾದರೆ , ಕನ್ನಡವನ್ನು ಪ್ರೀತಿಸಲು ಎಸ್ವಿಪಿ ನಮಗೆ ತೋರಿಸಿಕೊಟ್ಟ ರಹದಾರಿಗಳು ನೂರಾರು. ಕನ್ನಡ ಕವಿಗಳ ಸಾಹಿತಿಗಳ ವಿದ್ವಾಂಸರ  ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದುದು ಅಂತಹ ಒಂದು ಅಪೂರ್ವ ಅವಕಾಶ. ಬೇಂದ್ರೆ ,ಕಾರಂತ ,ಮಾಸ್ತಿ ,ರಾಜರತ್ನಂ, ಅಡಿಗ ,ಅನಂತಮೂರ್ತಿ ,ನಿಸ್ಸಾರ್ ,ದೇಜಗೌ , ಹಾಮಾನಾ, ಹಂಪನಾ -ಹೀಗೆ ಹಿರಿಯ ಕಿರಿಯ ಎಲ್ಲ ಸಾಹಿತಿಗಳನ್ನು ಸೆಳೆದು ತಂದು ನಮ್ಮ ಕನ್ನಡ ವಿಭಾಗದಲ್ಲಿ ಉಪನ್ಯಾಸ ಕೊಡಿಸುತ್ತಿದ್ದರು.ಉಳಿದ ವಿಭಾಗಗಳ ವಿದ್ಯಾರ್ಥಿಗಳು ನಮ್ಮ ಕನ್ನಡ ವಿಭಾಗದ ಬಗ್ಗೆ ಆಗ ಮಾಡುತ್ತಿದ್ದ ತಮಾಷೆಯೆಂದರೆ – ಮಂಗಳೂರು ಹಂಪನಕಟ್ಟೆಯ ಬಸ್ ನಿಲ್ದಾಣದಲ್ಲಿ ಇಳಿಯುವ ಯಾವುದೇ ಸಾಹಿತಿಯನ್ನು ನಾವು ಅಪಹರಿಸಿ ಎಳೆದುತಂದು ನಮ್ಮ ವಿಭಾಗದಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿದ್ದೆವು ಎಂದು.ನನಗೆ ನೆನಪಿರುವ ಹಾಗೆ ೧೯೬೮ರಿನ್ದ ೧೯೭೪ರ ಅವಧಿಯಲ್ಲಿ ಕುವೆಂಪು ಒಬ್ಬರನ್ನು ಬಿಟ್ಟರೆ ನಮ್ಮ ಕನ್ನಡ ವಿಭಾಗಕ್ಕೆ ಬಾರದ ಮಾತನಾಡದ ಆ ಕಾಲದ ಮುಖ್ಯ ಸಾಹಿತಿ ಯಾರೂ ಇಲ್ಲ.

ಪ್ರೊಫೆಸರ್ ಎಸ್ವಿಪಿ ಅವರ ಕನ್ನಡ ಪ್ರೀತಿಯ ಇನ್ನೊಂದು ಗೀಳೆಂದರೆ ,ಪುಸ್ತಕ ಪ್ರಕಟಣೆ. ಬಹಳ ಬಾರಿ ಸಾಲ ಮಾಡಿ ,ಮನೆ ತುಂಬಾ ರಾಶಿ ರಾಶಿಯಾಗಿ ಪೇರಿಸಿಟ್ಟ ಪುಸ್ತಕಗಳ ನಡುವೆ ಅವರು ಸಿಕ್ಕಿಹಾಕಿಕೊಂಡಿದ್ದಾರೋ ಎನ್ನುವಷ್ಟು ಸಂಖ್ಯೆಯಲ್ಲಿ ಕನ್ನಡ ಗ್ರಂಥಗಳನ್ನು ಅವರು ಪ್ರಕಟಿಸಿದರು. ಸಹೋದ್ಯೋಗಿಗಳ , ಶಿಷ್ಯರ , ತಮ್ಮ ಸಂಪರ್ಕಕ್ಕೆ ಬಂದ ಅಭಿಮಾನಿಗಳ ಪುಸ್ತಕಗಳನ್ನು ಪ್ರಕಟಿಸಲು ಉತ್ತೇಜನ ಕೊಟ್ಟರು. ಅದಕ್ಕಾಗಿ  ಅಕ್ಷರಶಃ  ತಮ್ಮ ತನು-ಮನ-ಧನಗಳನ್ನು ವಿನಿಯೋಗಿಸಿದರು. ಹಾಗಾಗಿ ಗ್ರಂಥ ಪ್ರಕಟಣೆ ಮತ್ತು ಗ್ರಂಥ ಬಿಡುಗಡೆ ಅವರ ಕಾಲದಲ್ಲಿ ನಿತ್ಯೋತ್ಸವ ಆಯಿತು. ನಾವು ಎಂ.ಎ. ವಿದ್ಯಾರ್ಥಿಗಳು ಬರೆದ ಕವನಗಳ ಸಂಕಲನ ‘ಮಂಗಳ ಗಂಗೆ ‘ ಯನ್ನು ನಮ್ಮ ಈ ಪ್ರೀತಿಯ ಗುರುಗಳಿಗೆ ಅರ್ಪಿಸಿದೆವು.ನನ್ನ ಮೊದಲ ಕವನ ‘ಸತ್ಯವತಿ ‘ ಪ್ರಕಟ  ಆದದ್ದು ೧೯೭೦ರಲ್ಲಿ ಈ ಸಂಕಲನದಲ್ಲಿ.

೧೯೭೦ರಲ್ಲಿ ನಾನು ಕನ್ನಡ ಎಂ.ಎ. ಮುಗಿಸಿ, ಕಲಿತ ಕನ್ನಡ ವಿಭಾಗದಲ್ಲೇ  ಉಪನ್ಯಾಸಕನಾಗಿ ಸೇರುವಲ್ಲಿ ಗುರುಗಳ ಆಶೀರ್ವಾದ ಮುಖ್ಯವಾಗಿತ್ತು.ಕೆಲವು ತಿಂಗಳ ಹಿಂದಿನ ಶಿಷ್ಯನನ್ನು ಸಹೋದ್ಯೋಗಿಯೆಂದು ಪ್ರೀತಿಯಿಂದ ಬರಮಾಡಿಕೊಂಡು ಅಧ್ಯಾಪನದ ದೀಕ್ಷೆಯನ್ನು ಕೊಟ್ಟ ಪ್ರೊಫೆಸರ್ , ಸಾಹಿತ್ಯದ ಓದಿನಿಂದ ತೊಡಗಿ ಕನ್ನಡದ ಕೆಲಸಗಳನ್ನು ಮೈತುಂಬಾ ಹಚ್ಚಿಕೊಂಡು ,ಒತ್ತಡಗಳ ನಡುವೆಯೇ ಸುಖವನ್ನು ಕಾಣುವ ದಾರಿಯನ್ನು ನಮಗೆ ತೋರಿಸಿಕೊಟ್ಟರು. ಆಗ ಕನ್ನಡ ವಿಭಾಗದಲ್ಲಿ ಇದ್ದ ನಾವು ನಾಲ್ವರು ಅಧ್ಯಾಪಕರೇ ನಮ್ಮ ಹೆಸರಿನ ಮೊದಲ ಅಕ್ಷರಗಳನ್ನು ಜೋಡಿಸಿ, ‘ ಪಲಚಂವಿ ‘ ಪ್ರಕಾಶನವನ್ನು ( ಪರಮೇಶ್ವರ ಭಟ್ಟ , ಲಕ್ಕಪ್ಪ ಗೌಡ ,ಚಂದ್ರಶೇಖರ ಐತಾಳ , ವಿವೇಕ ರೈ ) ಆರಂಭಿಸಿ ,ಪುಸ್ತಕಗಳನ್ನು ಪ್ರಕಟಿಸಿದೆವು. ಕನ್ನಡ ಪುಸ್ತಕಗಳ ಬಗ್ಗೆ ಮಂಗಳೂರು ಪರಿಸರದಲ್ಲಿ ಆಸಕ್ತಿ ತೀರಾ ಕಡಮೆ ಇದ್ದ ಆ ದಿನಗಳಲ್ಲಿ ‘ ಮನೆ ಮನೆಗೆ ಸರಸ್ವತಿ ‘ಎಂಬ ಪುಸ್ತಕ ಮಾರಾಟ ಅಭಿಯಾನವನ್ನು ಆರಂಭಿಸಿದೆವು. ಎಸ್ವಿಪಿ ಅವರು ಸಹೋದ್ಯೋಗಿಗಳ ಮತ್ತು ವಿದ್ಯಾರ್ಥಿಗಳ ಜೊತೆಗೆ ಹೆಗಲಿಗೆ ಚೀಲ ಹಾಕಿಕೊಂಡು ಪುಸ್ತಕಗಳನ್ನು ತುಂಬಿಕೊಂಡು ಬಿಸಿಲಿನಲ್ಲಿ ನಡೆದಾಡುತ್ತಾ ಎಲ್ಲರಲ್ಲೂ ತಮ್ಮ ನಗೆ ಮಾತುಗಳಿಂದ ಉತ್ಸಾಹವನ್ನು ತುಂಬುತ್ತಾ ,ಮನೆಯಿಂದ ಮನೆಗೆ , ಅಂಗಡಿಯಿಂದ ಅಂಗಡಿಗೆ ಅಲೆಯುತ್ತಾ ಕನ್ನಡ ಪುಸ್ತಕ ಮಾರಾಟ ಮಾಡುವ ಕಾಯಕವನ್ನು ಕೈಕೊಂಡರು.

ಯಕ್ಷಗಾನದ ಮಾತುಗಾರಿಕೆ ಮತ್ತು ಪ್ರದರ್ಶನದಿಂದ ವಿಶೇಷ ಪ್ರಭಾವಿತರಾಗಿದ್ದ ಪ್ರೊಫೆಸರ್ , ಅನೇಕ ತಾಳಮದ್ದಲೆಗಳನ್ನು ಏರ್ಪಡಿಸಿದರು. ಆಗ ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ವಸ್ತು ಪ್ರದರ್ಶನದ ಟೆಂಟಿನ ಒಳಗಡೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಏರ್ಪಡಿಸಿದರು. ವಿದ್ಯಾರ್ಥಿಗಳಾಗಿದ್ದ ನಾವು , ವಸ್ತು ಪ್ರದರ್ಶನದೊಳಗಡೆ ಕನ್ನಡ ಪುಸ್ತಕಗಳ ಸ್ಟಾಲ್ ತೆರೆದು ಪುಸ್ತಕ ಮಾರಾಟ ಮಾಡಿದ್ದು ,ರಾತ್ರಿಯಿಡೀ ಯಕ್ಷಗಾನ ಬಯಲಾಟ ಏರ್ಪಾಡು ಮಾಡಿದ್ದು – ಇವೆಲ್ಲ ರೋಮಾಂಚಕ ಅನುಭವಗಳು.ತರಗತಿಯಲ್ಲಿ ಕಾವ್ಯವನ್ನು ತುಸು ಲಂಬಿಸಿ ವ್ಯಾಖ್ಯಾನ ಮಾಡುವುದಕ್ಕೆ ಎಸ್ವಿಪಿ ಹೇಳುತ್ತಿದ್ದ ಪರಿಭಾಷೆ ಎಂದರೆ ‘ ತಾಳಮದ್ದಲೆ ಮಾಡುವುದು’.

ಮಂಗಳೂರಿನ ಸ್ನಾತಕೋತ್ತರ ಕೇಂದ್ರ (೧೯೮೦ರ ಬಳಿಕ ಮಂಗಳೂರು ವಿವಿ ) ಕ್ಕೆ ‘ ಮಂಗಳಗಂಗೋತ್ರಿ ‘ ಎಂದು ನಾಮಕರಣ ಮಾಡಿದವರು ಪ್ರೊಫೆಸರ್ ಎಸ್ವಿಪಿ.ಒಂದು ದಿನ ಪ್ರೊಫೆಸರ್ ಜೊತೆಗೆ ನಾನು ಮತ್ತು ನನ್ನ ಸಹಪಾಟಿ ಗೆಳೆಯ   ಎನ್.ಕೆ.ಚನ್ನಕೇಶವ ನಡೆದುಕೊಂಡು ಬರುತ್ತಿದ್ದಾಗ ಆ ಕೇಂದ್ರಕ್ಕೆ ಹೆಸರು ಇಡುವ ಮಾತು ಬಂತು.ಮೈಸೂರಿನ ‘ಮಾನಸಗಂಗೋತ್ರಿ’ ಎಂಬ ಹೆಸರಿನ ಪ್ರೇರಣೆಯಿಂದ ‘ ಮಂಗಳಗಂಗೋತ್ರಿ’ ಹೆಸರನ್ನು ಆ ದಿನ ಸೂಚಿಸಿದವರು ಎಸ್ವಿಪಿ.ಮುಂದೆ ಅದು ಮೈಸೂರು ವಿವಿಯಿಂದ ಅಧಿಕೃತ ಅಂಗೀಕಾರ ಮುದ್ರೆ ಪಡೆಯಿತು.

ಗುರುಗಳೊಂದಿಗೆ ಅನೇಕ ಬಾರಿ ಅವರ ಭಾಷಣದ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ.ಎಸ ವಿ ಪಿ ಅವರು , ಕರೆದಲ್ಲಿಗೆಲ್ಲ, ಎಷ್ಟೇ ಕಷ್ಟವಾದರೂ ,ಸರಿಯಾದ ವಾಹನವಿರಲಿ ಇಲ್ಲದಿರಲಿ ಹೋಗಿ, ಎಲ್ಲಾ ಆಯಾಸಗಳನ್ನು ಮರೆತು ,ಸ್ಪೂರ್ತಿದಾಯಕ ಭಾಷಣ ಮಾಡುತ್ತಿದ್ದರು. ಹೋದ ಊರಿನ ಹೆಸರಿನ ಮೆಚ್ಚುಗೆಯ ವಿವರಣೆಯಿಂದ , ತಮ್ಮ ಸಮ್ಮೋಹಿನಿ ವಿದ್ಯೆ ಯಿಂದ ಜನರನ್ನು ಸೆಳೆಯುತ್ತಿದ್ದ ಅವರ ಕಡಲ ಮೊರೆತದ ಭಾಷಣದ ವೈಖರಿಯನ್ನು ಅನೇಕ ಬಾರಿ ಅವರ ಜೊತೆಗೆ ಕೇಳಿದ ಕಂಡ ನೆನಪುಗಳು  ಒಂದು ಕನಸಿನ ಜಗತ್ತನ್ನು ಕಟ್ಟಿಕೊಡುತ್ತವೆ.

ನಾವೆಲ್ಲಾ ಕಂಡಿರದ ಕೇಳಿರದ ಊರುಗಳಿಗೆ ಅವರು ಹೋದವರು , ಕಂಡವರು ಮತ್ತು ಜನರ ಹೃದಯಗಳನ್ನು ಗೆದ್ದವರು. ಇಂದಿಗೂ ಆ ಕಾಲದ ಜನರು  ಎಸ್ವಿಪಿ ಮಾತುಗಳ

ಧ್ವನಿ ಅನುರಣನವನ್ನು ತಮ್ಮ ಮನೋಭೂಮಿಕೆಯಲ್ಲಿ ಕೇಳಬಲ್ಲವರಾಗಿದ್ದಾರೆ .ಪರಂಪರೆಯ ಬಗ್ಗೆ ಅಪಾರವಾದ ಗೌರವ ,ಹಿರಿಯರ ಬಗ್ಗೆ ಗುರುಗಳ ಬಗ್ಗೆ ಅವರ ಒಳ್ಳೆಯ ಗುಣಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದ ಎಸ್ವಿಪಿ ಒಬ್ಬ ಅಜಾತ ಶತ್ರು. ಹಸಿದ ಹೊಟ್ಟೆಯಲ್ಲೇ ಪಾಠ ಮಾಡಬಲ್ಲ , ಶ್ರೀಮತಿಯವರ ಕಾಯಿಲೆಯ ವೇಳೆಗೂ ಸರಸ ಭಾಷಣ ಮಾಡಬಲ್ಲ , ಮಗನ ಅಪಘಾತದ ಸುದ್ದಿ ಬಂದಾಗಲೂ ನಡೆಯುತ್ತಿದ್ದ ಸಭೆಯಲ್ಲಿ ಜನ ನಕ್ಕು ನಲಿಯುವಂತೆ ಮಾತಾಡಿ ,ಮತ್ತೆ ಮೈಸೂರಿಗೆ ಮಗನನ್ನು ನೋಡಲು ತೆರಳಿದ , ನೂರು ನೋವುಗಳ ನಡುವೆಯೂ ಸಾವಿರ ಬಗೆಯ  ನಗೆ ಚೆಲ್ಲಿದ ಪ್ರೊಫೆಸರ್ ಅವರ ವಿದ್ವತ್ತು ಸಾಧನೆಗಳು , ಅವರ ಸಜ್ಜನಿಕೆಯ ಸರಸತೆಯ ಅತಿ ಉದಾರತೆಯ ಗುಣಗಳ ನಡುವೆ ಬಹಳ ಮಂದಿಗೆ ಕಾಣದೆ ಹೋದದ್ದು ಕನ್ನಡ ಸಾಹಿತ್ಯ ಚರಿತ್ರೆಯ  ಒಂದು ವ್ಯಂಗ್ಯ.

ತಾನು ನಗುವುದರೊಂದಿಗೆ ಇತರರನ್ನೂ ನಗಿಸುವ ಪ್ರೊಫೆಸರ್ ಅವರಿಗೆ ಇದ್ದ ಮುಖ್ಯ ಕಾಳಜಿ ಎಂದರೆ ನಿರ್ಮಲ ಪರಿಸರ , ಶುದ್ಧ ನಡವಳಿಕೆ , ಪ್ರೀತಿಯ ಆವರಣ. ಇಂತಹ ಪರಿಸರಕ್ಕೆ ಒಮ್ಮೆ ಹೊಕ್ಕವರು ಮತ್ತೆ ಆ ಸುಖವನ್ನು ಎಂದಿಗೂ ಮರೆಯಲಾರರು.ಅಧಿಕಾರ , ಪ್ರಶಸ್ತಿ , ಬಹುಮಾನ ಇವುಗಳ ಆಸೆ ಎಳ್ಳಷ್ಟೂ ಎಸ್ವಿಪಿ ಅವರಿಗೆ ಇರಲಿಲ್ಲ .ಆದರೆ ಯಾವುದೇ ಪ್ರಶಸ್ತಿ ಬಂದಾಗಲೂ – ತಮಗಾಗಲೀ ಇತರರಿಗಾಗಲೀ – ಅವರು ಹೆಮ್ಮೆ ಪಡುತ್ತಿದ್ದರು. ತಮ್ಮೊಡನೆ ಇರುವವರನ್ನೆಲ್ಲ ಸಂತೋಷ ಪಡುವಂತೆ ಮಾಡುತ್ತಿದ್ದರು.ಹಾಗೆ ನೋಡಿದರೆ ಅವರಿಗೆ ದೊರೆತಿರುವ ಪ್ರಶಸ್ತಿಗಳು ಬಹಳವೇನೂ ಇಲ್ಲ.ಸಣ್ಣ ಸಣ್ಣ ಊರುಗಳಲ್ಲಿ ತಮಗೆ ಮಾಡಿದ ಸನ್ಮಾನಗಳನ್ನು ಅವರು ಸಂಭ್ರಮದಿಂದ ಹೇಳಿಕೊಳ್ಳುತ್ತಿದ್ದರು. ಜನರ ಪ್ರೀತಿಯನ್ನು ಬಹಳ ದೊಡ್ಡ ಗೌರವ ಎಂದು ಭಾವಿಸುತ್ತಿದ್ದರು.ಈ ಅರ್ಥದಲ್ಲೂ ಎಸ್ವಿಪಿ ಕನ್ನಡದ ಅಪೂರ್ವ ಸಾಹಿತಿ.

ಮಂಗಳೂರಿನ ಕಡಲು , ಪ್ರೊಫೆಸರ್ ಪರಮೇಶ್ವರ ಭಟ್ಟರ ಭಾವಕೋಶದ ಬಹಳ ಪ್ರೀತಿಯ ಭಾಗ. ಅದು ಅವರ ಬದುಕಿನ ರೂಪಕ. ಅವರ  ‘ಉಪ್ಪು ಕಡಲು ‘ ವಚನ ಸಂಕಲನದಲ್ಲಿ ತಾವು ಕಂಡ ತಾವು ಉಂಡ ಉಪ್ಪನ್ನು ಉಪ್ಪಿನ ಋಣದ ಕಲ್ಪನೆಯನ್ನು ಬಗೆ ಬಗೆಯಾಗಿ ಹೇಳಿಕೊಂಡಿದ್ದಾರೆ. ಕಡಲು ಮತ್ತು ಒಡಲು- ಈ ಕುರಿತು ಎಸ್ವಿಪಿ ಬರೆದ ಈ ವಚನ , ಒಡಲನ್ನು ನೀಗಿಕೊಂಡು ಬಹಳ ಕಾಲದ ಬಳಿಕ ಈಗಲೂ ಅವರ ಸಮಗ್ರ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟಿ ಕೊಡುವ  ಮತ್ತು ಮನಕ್ಕೆ ಮುಟ್ಟಿಸುವ ಮುತ್ತಿನಂತಹ ಮಾತು :

ನಿನ್ನ ಕಡಲು ಉಪ್ಪಾದರೂ ಅದರೊಳಗೆ

ನಿನ್ನದೆಂಬ ಮುತ್ತುಂಟು  ರತ್ನವುಂಟು

ನನ್ನ ಈ ಒಡಲು ಮುಪ್ಪಾದರೂ

ಇದರೊಳಗೆ ನೀನೆಂಬ ಮುತ್ತುಂಟು ರತ್ನವುಂಟು

ಇದು ಕಾರಣ ಆ ಕಡಲೂ ಭವ್ಯ   ಈ ಒಡಲೂ  ಭವ್ಯ    ಸದಾಶಿವ ಗುರು

******************************************************************************************************

***ಈ ಬ್ಲಾಗ್ ನಲ್ಲಿ ಇರುವ ಇನ್ನೊಂದು ಟಿಪ್ಪಣಿ ರೂಪದ ಬರಹ ನೋಡಿರಿ:’ ವೇಣಿ ಸಂಹಾರ ,ಊರುಭಂಗ ,ಕುಮಾರ ಸಂಭವ ‘***

Make a Comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

11 Responses to “ಪ್ರೀತಿಯ ಶಿಷ್ಯರ ಆತ್ಮೀಯ ಗುರು :ಎಸ.ವಿ.ಪರಮೇಶ್ವರ ಭಟ್ಟ”

RSS Feed for ಬಿ ಎ ವಿವೇಕ ರೈ Comments RSS Feed

ಪ್ರಿಯ ಪ್ರೊ. ರೈ ಅವರಿಗೆ: ಧನ್ಯವಾದಗಳು. ಇಂದು ಬೆಳಿಗ್ಗೆ ಎದ್ದು ಮಾಡಿದ ಮೊದಲ ಕೆಲಸವೆಂದರೆ ನಿಮ್ಮ-ನನ್ನ ಗುರುಗಳ ಬಗ್ಗೆ ನೀವು ಪ್ರೀತಿಯಿಂದ, ಮೆಚ್ಚುಗೆಯಿಂದ, ಆತ್ಮೀಯವಾಗಿ ಬರೆದ ಲೇಖನವನ್ನು ಓದಿದ್ದು. ನಿಜವಾಗಿಯೂ ಎ ಸ್ ಪಿ “ಉಪ್ಪಿನ ಕಡಲೊಳಗಿನ ರತ್ನ” ವಾಗಿದ್ದರು. ಅವರ ಆಶೀರ್ವಾದ ನಮ್ಮ-ನಿಮ್ಮೆಲ್ಲರ ಮೇಲಿರಲಿ. ಇಂದು ಅವರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮ ಯಶಸ್ವಿಯಾಗಲಿ.
ವಂದನೆಗಳೊಂದಿಗೆ,
ರಾಮಚಂದ್ರನ್

ಪ್ರಿಯ ಪ್ರೊ.ರಾಮಚಂದ್ರನ್ ಅವರಿಗೆ ನಮಸ್ಕಾರ.ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ. ಈದಿನ ಕಾರ್ಯಕ್ರಮ ಚೆನ್ನಾಗಿ ನಡೆಯಿತು.ನಾನು ನನ್ನ ಮಾತಿನಲ್ಲಿ ನಿಮ್ಮ ಇಮೈಲ್ ಮತ್ತು ಇವತ್ತು ಬೆಳಗ್ಗೆ ನಿಮ್ಮ ಈ ಪ್ರತಿಕ್ರಿಯೆಯನ್ನು ಪ್ರಸ್ತಾವಿಸಿದೆ.ಫೋಟೋ ಗಳು ಅವಧಿಯಲ್ಲಿ ಇವೆ.
ವಿವೇಕ ರೈ

Respected Prof. Rai,
Namaste.
Your article on Prof. SVP has come out very well. I enjoyed reading it. [I don’t know how to use Kannada font in the blog. Please excuse me for responding in English.]
I know for sure that it is the affection and scholarship of such stalwart teachers like SVP which shaped the lives of many students. To learn under the tutelage of a great teacher is indeed a rewarding experience.
With warm regards,
Laxminarayana Bhat P

ಲಕ್ಷ್ಮಿನಾರಾಯಣ ಭಟ್ಟರಿಗೆ ನಮಸ್ಕಾರ.
ನಿಮ್ಮ ವಿಶ್ವಾಸದ ಮಾತುಗಳು ತುಂಬಾ ಸಂತೋಷ ಕೊಟ್ಟಿವೆ,
.ಒಳ್ಳೆಯ ಗುರುಗಳೇ ನಮ್ಮ ಬದುಕನ್ನು ರೂಪಿಸಿದವರು.

ಸಾರ್, ತುಂಬಾ ಅರ್ಥಪೂರ್ಣ ಬರಹ….ಗುರು-ಶಿಷ್ಯ-ಸಹದ್ಯೋಗಿ ಸಂಬಂಧಗಳ ಎಳೆಯನ್ನು ಬಿಡಿಸಿಟ್ಟ ಪರಿ ಸೊಗಸಾಗಿತ್ತು. ಒಟ್ಟಿನಲ್ಲಿ ನಮ್ಮ ಪೀಳಿಗೆಯವರಿಗೆ ” ” “ಎಸ್ವಿಪಿ ” ಯವರ ಬಗ್ಗೆ ಹೆಚ್ಚು ಹೆಚ್ಚುತಿಳಿದುಕೊಳ್ಳುವಲ್ಲಿ ನಿಮ್ಮ ಈ ಬರಹ ಕೂಡ ತುಂಬಾ ಉಪಯೋಗಾವಾಯ್ತು. ನಿಮ್ಮ ಗುರು ಭಕ್ತಿ, ಗೌರವ, ಪ್ರೀತಿ ಎಲ್ಲಾ ಕಾಲದ ಶಿಷ್ಯರಿಗೂ ಉತ್ತಮ ಉದಾಹರಣೆ. ಆದರೆ ಇಂದು ಅಂತಹ ಗುರುವೆಲ್ಲಿ….ಶಿಷ್ಯರೆಲ್ಲಿ…!?

ಪ್ರೀತಿಯಿಂದ,

ಸಂತೋಷ್, ನಿಮ್ಮ ಪ್ರತಿಕ್ರಿಯೆ ತುಂಬಾ ಅರ್ಥಪೂರ್ಣ ಆಗಿದೆ.ನಿಮ್ಮ ಪ್ರೀತಿಗೆ ಥ್ಯಾಂಕ್ಸ್.ಕಾರ್ಯಕ್ರಮದ ಫೋಟೋಗಳು ಅವಧಿಯಲ್ಲಿ ಇವೆ.
ವಿವೇಕ ರೈ

«ªÉÃPÀ gÉÊUÀ¼ÀÄ vÀªÀÄä UÀÄgÀÄUÀ¼À £É£À¥À£ÀÄß ºÀAaPÉƼÀÄîªÀÅzÀgÀ dvÉUÉà «±Àé«zÁå®AiÀĪÉÇAzÀgÀ ¨sÀzÀæ §Ä£Á¢UÉ ¤¸ÀàøºÀ£ÁV zÀÄrzÀ, C¢üPÁgÀQÌAvÀ®Æ vÀ£Àß PÀvÀðªÀåªÀ£ÀÄß ªÀiÁqÀÄvÁÛ £ÀqÉzÀ ªÀåQÛAiÀÄ ¥ÀjZÀAiÀÄ ªÀiÁrPÉÆlÖAvÁ¬ÄvÀÄ . EAzÀÄ G½zÀ «.«.UÀ½UÉ ºÉÆð¹zÀgÉ GvÀÛªÀÄ C¤ß¹zÀgÀÆ G½zÀ «.«.UÀ¼À zÁjAiÀįÉèà ¸ÁUÀÄwÛgÀĪÀ ªÀÄAUÀ¼ÀÆgÀÄ «.«.AiÀÄ C¢üPÁgÀ¸ÀÛgÀ£ÀÄß ªÀÄvÉÆÛªÉÄä DvÀä «ªÀıÉðUÉ ºÀZÀÄѪÀAwzÉ.

ಜಿತು ನಿಡ್ಲೆ ಅವರಿಗೆ ನಮಸ್ಕಾರ. ನಿಮ್ಮ ಬರಹದ ಫಾಂಟ್ ಓದಲಾಗಲಿಲ್ಲ.ನಿಮ್ಮ ಪ್ರೀತಿಗೆ ಥ್ಯಾಂಕ್ಸ್.

Hi…sir. Namaskara. Nimma article andavagide. Canara college nalli nimma speach kelide evattu. Edi dina canara clg nalle edde. Ashok& vaidehi yavarinda Adbuta karyakrama.

ಪೀಟರ್ ಕುಟಿನ್ಹೋ ಅವರಿಗೆ ನಮಸ್ಕಾರ.ನಿಮ್ಮ ಪ್ರೀತಿಯ ಪ್ರತಿಕ್ರಿಯೆ ಖುಷಿ ಕೊಟ್ಟಿತು.ಧನ್ಯವಾದ.

divya guruvina parama shishyarige vandanegalu.
neevu maadiruva guruguna sthavana nijakkoo
adbhutavaagide.nammannella naalku dashakagalaache karedoydu meru gurivina hirimeya thilisidudake dhanyavaadagalu
Ondu maathu nimma bagge kooda, nimma sahachaar pathadalli blogigaragi adbhut anoobhuthiyannu honduttiddene. Namma uttara karnatakada hiriyanobba tanna anubhavada holada baduvina mele nadeyuttha, sanchiyannu bichhi rasagavala needutta kiriyanige lokadarshan maaduvanthide nimma barahaglu. Srinivas Deshpande


Where's The Comment Form?

Liked it here?
Why not try sites on the blogroll...

%d bloggers like this: