ಅಗ್ರಾಳ ಲೇಖನ ಮಾಲೆ: ಖಾದಿ ತೊಟ್ಟು ಗಾದಿ ಬಯಸದ ಹಾದಿ ತುಳಿದದ್ದು

Posted on ಮಾರ್ಚ್ 25, 2010. Filed under: ನನ್ನ ಅಪ್ಪ.. |


1936ರಲ್ಲಿ ನಾನು ಶಾಲೆ ಬಿಟ್ಟಾಗ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಏರಿತ್ತು. ಗಾಂಧೀಜಿಯವರ ಸ್ವದೇಶಿ ಚಳುವಳಿ, ಅಸಹಕಾರದ ಹೋರಾಟ ಜನರನ್ನು ಎಚ್ಚರಿಸಿತ್ತು. ನಾನು ಶಾಲೆ ಬಿಟ್ಟೊಡನೆಯೇ ಸ್ವಾತಂತ್ರ್ಯ ಚಳುವಳಿಯ ಪ್ರಭಾವಕ್ಕೆ ಒಳಗಾದೆ. 1938ರಲ್ಲಿ ಖಾದಿ ತೊಟ್ಟವನು ಇಂದಿನವರೆಗೂ (2001) ಖಾದಿ ಬಿಟ್ಟು ಬೇರೆ ವಸ್ತ್ರವನ್ನು ಉಟ್ಟಿಲ್ಲ. ಆ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪರಿಸರದ ನಾಯಕರಾಗಿದ್ದವರು ಕುಳಾಲು ಅಣ್ಣಪ್ಪ ಭಂಡಾರಿ, ಕುಳಾಲು ಪದ್ಮನಾಭ ರೈ, ಅಗರಿ ಲಕ್ಕಪ್ಪ ರೈ ಮುಂತಾದವರು. ಅವರೆಲ್ಲಾ ಬಂದು ಪುಣಚಾದ ಪರಿಯಾಲ್ತಡ್ಕ ಶಾಲೆಯ ಬಳಿ ಸ್ವಾತಂತ್ರ್ಯ ಆಂದೋಲನದ ಬಗ್ಗೆ ಭಾಷಣ ಮಾಡಿದರು. ಆಗ ಈ ಹೋರಾಟದ ಪರವಾಗಿ ಪುಣಚಾ ಗ್ರಾಮದಲ್ಲಿ ಇದ್ದವನು ನಾನು ಒಬ್ಬನೇ. ಗ್ರಾಮದಲ್ಲಿ ಹೆಚ್ಚಿನವರು ಜಸ್ಟಿಸ್ ಪಾರ್ಟಿಯ ಪರವಾಗಿದ್ದರು. ಒಮ್ಮೆ ವಿಟ್ಲ ಪೊಲೀಸ್ ಸ್ಟೇಶನ್ ಬಳಿ ಸ್ವಾತಂತ್ರ್ಯ ಆಂದೋಲನದ  ಭಾಷಣ ಕಾರ್ಯಕ್ರಮ ಏರ್ಪಡಿಸಿದೆವು. ನಾನು ಕಾಂಗ್ರೆಸ್ ಸೇರಿದ್ದು 1938ರಲ್ಲಿ. ಕಾಂಗ್ರೆಸ್ ಕಾರ್ಯಕರ್ತನಾಗಿ ಸಾರ್ವಜನಿಕ ಭಾಷಣ ಆರಂಭಿಸಿದೆ. 1942-43ರಿಂದ ಸ್ವಾತಂತ್ರ್ಯದ ಬಗ್ಗೆ ಅವಕಾಶ ಸಿಕ್ಕಾಗಲೆಲ್ಲಾ ಭಾಷಣ ಮಾಡುತ್ತಿದ್ದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವುದಕ್ಕಾಗಿ ‘ವೈಯಕ್ತಿಕ ಹೋರಾಟ’ಕ್ಕೆ ಅರ್ಜಿ ಭರ್ತಿ ಮಾಡಿ ಕಳುಹಿಸಿದೆ. ಆದರೆ ಅದನ್ನು ತಿರಸ್ಕರಿಸಿದರು. ಏಕೆಂದರೆ ಆಗಿನ ನಿಯಮಾವಳಿಯಂತೆ ಒಂದು ಕುಟುಂಬದಲ್ಲಿ ಒಬ್ಬನೇ ಪುರುಷ ಸದಸ್ಯನಿದ್ದರೆ ಆತನಿಗೆ ವೈಯಕ್ತಿಕ ಹೋರಾಟದಲ್ಲಿ ಭಾಗವಹಿಸಲು ಅನುಮತಿ ಕೊಡುತ್ತಿರಲಿಲ್ಲ. ಒಬ್ಬನೇ ಗಂಡು ಜೈಲು ಸೇರಿದರೆ ಅವನನ್ನು ಅವಲಂಬಿಸಿದ ಕುಟುಂಬದವರು ಕಷ್ಟಕ್ಕೀಡಾಗುತ್ತಾರೆ ಎನ್ನುವ ಕಾರಣದಿಂದ ಹಾಗೆ ಮಾಡುತ್ತಿದ್ದರು. ಹೀಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೂ ಜೈಲು ಸೇರುವ ರೋಮಾಂಚನ ನನ್ನ ಪಾಲಿಗೆ ದೊರೆಯಲಿಲ್ಲ.

1947ರ ಆಗಸ್ಟ್ 15. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ. ಪುಣಚಾ ಪರಿಯಾಲ್ತಡ್ಕದಲ್ಲಿ ಉತ್ಸಾಹದ ಸ್ವಾತಂತ್ರ್ಯ ದಿನಾಚರಣೆ. ಅಜ್ಜಿನಡ್ಕದಿಂದ ಮಂಜ ತೋಡಿನವರೆಗೆ (ಇವೆರಡೂ ಪುಣಚಾ ಗ್ರಾಮದ ಎರಡು ಗಡಿಗಳು) ಸ್ವಾತಂತ್ರ್ಯ ಸಂಭ್ರಮದ ಮೆರವಣಿಗೆ. ಹರಿಜನ ಹುಡುಗನೊಬ್ಬನನ್ನು ನನ್ನ ಹೆಗಲಿನಲ್ಲಿ ಕುಳ್ಳಿರಿಸಿಕೊಂಡು ಮೆರವಣಿಗೆಯ ಮುಂಭಾಗದಲ್ಲಿ ಜೈಕಾರ ಹಾಕುತ್ತಾ ನಾನು ಭಾಗವಹಿಸಿದ ಉಲ್ಲಾಸದ ನೆನಪು ಈಗಲೂ ಹಚ್ಚಹಸಿರಾಗಿದೆ.

ಗಾಂಧೀಜಿ ಹತ್ಯೆಯ ದಿನ ಪರಿಯಾಲ್ತಡ್ಕದಲ್ಲಿ ಸಾರ್ವಜನಿಕ ಸಂತಾಪ ಸಭೆ. ಅನೇಕರು ಭಾಷಣ ಮಾಡಿದರು. ನನಗೆ ಮಾತು ಹೊರಡಲಿಲ್ಲ. ಸಾರ್ವಜನಿಕವಾಗಿ ಅತ್ತುಬಿಟ್ಟೆ.

ಕಾಂಗ್ರೆಸ್ಸಿನಲ್ಲಿ ನಾನು ಪುತ್ತೂರು ಬ್ಲಾಕ್ನ ಕಾರ್ಯದರ್ಶಿಯಾಗಿದ್ದೆ. ವಿಧಾನಸಭೆ ಲೋಕಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪುಣಚಾ ಗ್ರಾಮದಲ್ಲಿ ನೆರೆಕರೆಯ ಊರುಗಳಲ್ಲಿ ಹಗಲು ರಾತ್ರಿ ಎನ್ನದೆ ಚುನಾವಣಾ ಪ್ರಚಾರ ಮಾಡಿದ್ದೇನೆ, ಭಾಷಣ ಮಾಡಿದ್ದೇನೆ. ಆದರೆ ಕಾಂಗ್ರೆಸ್ನಲ್ಲಿ ಯಾವುದೇ ಪದವಿ ಅಧಿಕಾರಗಳನ್ನು ಬಯಸಲಿಲ್ಲ, ಪಡೆಯಲಿಲ್ಲ. 1958ರ ಬಳಿಕ ರಾಷ್ಟ್ರೀಯ ವಿಸ್ತರಣಾ ಯೋಜನೆಯ ಪುತ್ತೂರು ಬ್ಲಾಕ್ ಡೆವಲಪ್ಮೆಂಟ್ ಕಮಿಟಿಯ ಸದಸ್ಯನಾಗಿ ಕೆಲಸ ಮಾಡಿದ್ದೇನೆ.

1969ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಇಬ್ಭಾಗವಾಯಿತು. ಪಕ್ಷ ರಾಜಕೀಯದಲ್ಲಿ ಮುಂದುವರಿಯುವುದು ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಸಕ್ರಿಯ ಪಕ್ಷರಾಜಕಾರಣದಿಂದ ಹೊರಬಂದೆ. ಆದರೂ ನಾನು ಎಂದೆಂದಿಗೂ ಕಾಂಗ್ರೆಸ್ಸಿಗ, ಗಾಂಧಿತತ್ವಗಳ ಕಾಂಗ್ರೆಸ್ಸಿಗ. ಖಾದಿ ತೊಟ್ಟು ಗಾದಿ ಬಯಸದ ಹಾದಿ ತುಳಿಯುವ ಗಾಂಧಿಭಕ್ತ.

ಅಗ್ರಾಳದಲ್ಲಿದ್ದಾಗ ಮನೆಯಲ್ಲಿ ಸಣ್ಣಪುಟ್ಟ ಕಾಯಿಲೆಗಳಿಗೆ ಆಗುವ ಔಷಧ ತಂದು ಇಟ್ಟುಕೊಳ್ಳುತ್ತಿದ್ದೆ. ಅವುಗಳಲ್ಲಿ ಬಹಳ ಮುಖ್ಯವಾದದ್ದು ‘ತಿರ್ಯಕ್’ ಎಂಬ ವಿಷದ ಮದ್ದು. ವಿಷಜಂತುಗಳು ಕಚ್ಚಿದ್ದಕ್ಕೆ ‘ತಿರ್ಯಕ್’ ಸಿದ್ಧೌಷಧವಾಗಿತ್ತು. ಊರಿನಲ್ಲಿ ಯಾರಿಗೇ ಆದರೂ ವಿಷದ ಹಾವುಗಳ ಕಡಿತದ ವರ್ತಮಾನ ದೊರೆತೊಡನೆಯೇ ‘ತಿರ್ಯಕ್’ ಕೊಂಡು ಹೋಗಿ ಚಿಕಿತ್ಸೆ ಮಾಡಿ ಅನೇಕರ ಪ್ರಾಣ ಉಳಿಸಿದ ಪುಣ್ಯ ಸಂಪಾದನೆ ಮಾಡಿದ್ದೇನೆ.


Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಅಗ್ರಾಳ ಲೇಖನ ಮಾಲೆ: ಖಾದಿ ತೊಟ್ಟು ಗಾದಿ ಬಯಸದ ಹಾದಿ ತುಳಿದದ್ದು”

RSS Feed for ಬಿ ಎ ವಿವೇಕ ರೈ Comments RSS Feed

Dear sir ,ur article is very nice..you have mentioned about med.tiryak.as adoctor i am happy for thatalso.if possible,see my blog &comment

ಡಾ.ಬಂಗಾರದ್ಕ ರಾಘವೇಂದ್ರ ಪ್ರಸಾದ್ ಅವರಿಗೆ ನಮಸ್ಕಾರ. ನಿಮ್ಮ ಬ್ಲಾಗ್ ಖಂದುತ ನೋಡುತ್ತೇನೆ.


Where's The Comment Form?

Liked it here?
Why not try sites on the blogroll...

%d bloggers like this: