ಸಾಗರದಷ್ಟು ಸುಖಕ್ಕೆ ಸಾಸಿವೆಯಷ್ಟು ದುಃಖ ನೋಡಾ..

Posted on ಮಾರ್ಚ್ 24, 2010. Filed under: ಇರುಳ ಕಣ್ಣು |


https://bavivekrai.files.wordpress.com/2010/03/irulakannu3.jpgನಿನ್ನೆ ಲೋಹಿಯಾ ಜನ್ಮದಿನ. ಈ ನೆನಪಿಗೆ ಮತ್ತೆ ಈ ಲೇಖನ.

ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 13 ಮಾರ್ಚ್, 2009.

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ.

ರಾಜಕಾರಣ ಅಥವಾ ರಾಜನೀತಿಯ ಉದ್ಯೋಗದ ಮೂಲದಲ್ಲಿ ಎರಡು ವಿರುದ್ಧ ಸೆಳೆತಗಳಿರುತ್ತವೆ. ಎಲ್ಲರಿಗೂ ತಿಳಿದಿರುವ ಹಾಗೆ ರಾಜಕಾರಣವೆಂದರೆ ಮೂಲತಃ ಒಳ್ಳೆಯದನ್ನು ಮಾಡುವ ವ್ಯಾಪಾರ; ಒಂದು ಗುಂಪಿನದ್ದೋ ಜನಾಂಗದ್ದೋ ಅಥವಾ ಇಡೀ ಮಾನವಕುಲದ್ದೋ ಕಲ್ಯಾಣವನ್ನು ಸಾಧಿಸುವಂಥದು. ಈ ಕಾರಣದಿಂದಲೇ ಅದು ಸ್ವಾರ್ಥ ಆಸಕ್ತಿಗಳನ್ನು ಸಾಧಿಸುವುದಕ್ಕೆ ತದ್ವಿರುದ್ಧವಾದದ್ದು. ಅದು ಇತರರ ಹಿತಗಳನ್ನೇ ಬಯಸುತ್ತದೆ. ಸ್ವಾರ್ಥದ ಹಿತವನ್ನು ಧಿಕ್ಕರಿಸುತ್ತದೆ.  ಹಾಗಿದ್ದರೂ ಬಹಿರಂಗವಾಗಿ ಪರಾರ್ಥ ಹೇಳುವ ಈ ಉದ್ಯೋಗ ತನ್ನ ಪ್ರಕೃತಿಯಲ್ಲಿ ಸ್ವಾರ್ಥದ ಆಟಗಳಿಂದ ಸುತ್ತಿಕೊಂಡದ್ದಾಗಿಬಿಟ್ಟಿದೆ. ಇತರರಿಗೆ ಒಳ್ಳೆಯದು ಮಾಡುವ ಈ ಉದ್ಯೋಗ ಮೊದಲು ಯಾವುದೊಂದು ಅಧಿಕಾರ ಪದವಿಯನ್ನು ಪಡೆದುಕೊಳ್ಳುವುದರ ಮೇಲೆ ಅವಲಂಬಿಸಿದೆ. ರಾಜಕಾರಣದಲ್ಲಿ ತೊಡಗಿದವರು ಅತ್ಯಗತ್ಯವಾಗಿ ಮತ್ತು ಪ್ರಾಥಮಿಕವಾಗಿ ಅಧಿಕಾರವನ್ನು ಹುಡುಕಿ ಹಿಡಿದುಕೊಳ್ಳಬೇಕಾಗುತ್ತದೆ. ಹೀಗೆ ಅಧಿಕಾರ ಹಿಡಿದು ಕೂತೇ ಯೋಗ್ಯ ಕಾನೂನುಗಳನ್ನು ರೂಪಿಸಬೇಕಾಗುತ್ತದೆ; ಸರ್ಕಾರದ ಆಡಳಿತಾಂಗದ ಮೂಲಕ ಕಾನೂನುಗಳು ನ್ಯಾಯಸಮ್ಮತವಾಗಿ ಜಾರಿಯಾಗಿ ಜನರ ಕಲ್ಯಾಣ ಅಧಿಕವಾಗುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ, ಯಾವುದೇ ರೀತಿಯ ರಾಜಕೀಯ ಅಧಿಕಾರವಾದರೂ ಖ್ಯಾತಿಯನ್ನು ಕೊಡುತ್ತದೆ. ಹಣವನ್ನು ಕೊಡುತ್ತದೆ. ಅರ್ಥಾತ್ ಗೌರವ ಸೌಲಭ್ಯಗಳೆರಡನ್ನೂ ತಂದು ಕೊಡುತ್ತದೆ. ‘ಒಳ್ಳೆಯದು  ಮಾಡುವುದಕ್ಕಾಗಿ ಅಧಿಕಾರ ಬೇಕಾಗುತ್ತದೆ’. ಅಧಿಕಾರವನ್ನನುಸರಿಸಿ ಅದರ ಹಿಂದೇ ಗೌರವ ಸೌಲಭ್ಯಗಳು ಪ್ರಾಪ್ತವಾಗುತ್ತವೆ.

ಡಾ. ರಾಮ್ಮನೋಹರ ಲೋಹಿಯಾ ತಮ್ಮ ‘ಒಂದು ಕರೆ’ [‘A Call to truth, Work, Resistance and Character-building (1957)] ಲೇಖನದಲ್ಲಿ (‘ರಾಜಕೀಯದ ಮಧ್ಯೆ ಬಿಡುವು’ ಅನುವಾದ-ಕೆ.ವಿ.ಸುಬ್ಬಣ್ಣ) ಹೇಳಿದ ಈ ಮಾತುಗಳು ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಳ್ಳಬೇಕಾದವು.

ಈ ರೀತಿ ಅಧಿಕಾರ ಪಡೆಯುವ ರಾಜಕಾರಣದ ಒಂದು ಮುಖ್ಯ ಪ್ರಕ್ರಿಯೆಯೇ ಚುನಾವಣೆ. ಲೋಹಿಯಾ ಪರಿಭಾಷೆಯಲ್ಲಿ ಹೇಳುವುದಾದರೆ, ಚುನಾವಣೆಯೆಂದರೆ ಅದೊಂದು ‘ಸಾಂದರ್ಭಿಕ ಕ್ರಾಂತಿ’. ಐದು ವರ್ಷಗಳ ಕಾಲ ಸುಮ್ಮಗಿದ್ದವರು, ನಿದ್ರಿಸುತ್ತಿದ್ದವರು-ಎಲ್ಲರೂ ಒಂದಲ್ಲ ಒಂದು ರೀತಿಯ ಕ್ರಾಂತಿಯ ಹರಿಕಾರರಾಗುತ್ತಾರೆ. ಬಣ್ಣಬಣ್ಣದ ಕಾಗದಗಳಲ್ಲಿ ವರ್ಣಮಯ ಚುನಾವಣಾ ಪ್ರಣಾಳಿಕೆಗಳು ಮುದ್ರಣಗೊಂಡು ಮುಂದಿನ ಐದು ವರ್ಷಗಳ ಅವಧಿಯ ರಾಜ್ಯದ ಮತ್ತು ದೇಶದ ಭವಿಷ್ಯವನ್ನು ಕ್ಯಾಲಿಡೋಸ್ಕೋಪ್ ಮೂಲಕ ದರ್ಶಿಸುತ್ತವೆ. ಸಾರ್ವಜನಿಕ ಭಾಷಣಗಳು ಪತ್ರಿಕಾಹೇಳಿಕೆಗಳು ರಾಜಕೀಯ ಪಕ್ಷಗಳ ಕಪ್ಪು ಬಿಳುಪಿನ ಚಿತ್ರಗಳನ್ನು ಪ್ರದರ್ಶಿಸುತ್ತವೆ. ತಮ್ಮ ಧನಾತ್ಮಕ ಗುಣಗಳಿಗಿಂತ ಬೇರೆಯವರ ಋಣಾತ್ಮಕ ಅಂಶಗಳನ್ನೇ ಬಂಡವಾಳ ಮಾಡಿರುವ ವ್ಯಾಪಾರಿಬುದ್ಧಿ ಮೆರೆಯುತ್ತದೆ. ಒಮ್ಮೆ ಚುನಾವಣೆ ಮುಗಿದು ಅಧಿಕಾರ ದೊರೆತೊಡನೆಯೇ ಬಹಳ ಮಂದಿ ಗಿರೀಶ್ ಕಾರ್ನಾಡರ ‘ಹಯವದನ’ ನಾಟಕದಲ್ಲಿನ ‘ದೇವಿ’ಯಂತೆ ನಿದ್ರೆಯಲ್ಲಿ ಮುಳುಗುತ್ತಾರೆ; ಒತ್ತಾಯದಿಂದ ಅವರನ್ನು ಎಬ್ಬಿಸಿದಾಗಲೂ ಆಕಳಿಕೆಯಿಂದ ಮಾತನಾಡುತ್ತಾ ಮತ್ತೆ ನಿದ್ರಿಸಲು ಸಿದ್ಧರಾಗುತ್ತಾರೆ.

50 ವರ್ಷಗಳ  ಹಿಂದೆ ಲೋಹಿಯಾ ಹೇಳಿದ, ಚುನಾವಣೆ ಎನ್ನುವ ‘ಸಾಂದರ್ಭಿಕ ಕ್ರಾಂತಿ’ಯ ಸ್ವರೂಪ ಪ್ರತೀ ಐದು ವರ್ಷಕ್ಕೊಮ್ಮೆ ಬದಲಾಗುತ್ತಾ ಬಂದಿದೆ. ಚುನಾವಣಾ ಪ್ರಣಾಳಿಕೆ ಎನ್ನುವುದು ತನ್ನ ಅರ್ಥವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಜನರು ಪ್ರಣಾಳಿಕೆಗಳಲ್ಲಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಸ್ಥಳೀಯ ಮತ್ತು ರಾಷ್ಟ್ರೀಯ ಅಭಿವೃದ್ಧಿ, ಸಾಮುದಾಯಿಕ ಹಿತ ಎನ್ನುವ ಪರಿಕಲ್ಪನೆಯೇ ಅಪ್ರಸ್ತುತವಾಗಿದೆ. ವ್ಯಾಪಾರದ ಪರಿಭಾಷೆ ಚುನಾವಣೆಯಲ್ಲಿ ಹೆಚ್ಚುಹೆಚ್ಚು ಕ್ರಿಯಾಶೀಲವಾಗಿದೆ. ಕಡಿಮೆ ಬೆಲೆಯ ಅಕ್ಕಿ, ಸಾಲಮನ್ನಾಗಳಿಂದ ತೊಡಗಿ ಆಧುನಿಕ ಕಾಲದ ಬಣ್ಣದ ಟಿ.ವಿ, ಗಂಡಸರಿಗೆ ಪಂಚೆ ಮತ್ತು ಮದ್ಯ, ಹೆಂಗಸರಿಗೆ ಸೀರೆ ಮತ್ತು ಮೂಗುತಿ-ಹೀಗೆ ಮಂಗಲ ಭಾಗ್ಯದಂತಹ ಕಲ್ಯಾಣ ಕಾರ್ಯಕ್ರಮಗಳು ಚುನಾವಣೆಯ ಸಂತೆಯಲ್ಲಿ ಮಾರಾಟದ ವಸ್ತುಗಳಾಗಿವೆ.

ಚುನಾವಣಾ ಆಯೋಗದ ನೀತಿಸಂಹಿತೆಗಳು ಬಹಿರಂಗದ ವ್ಯಾಪಾರಕ್ಕೆ ತಡೆಯನ್ನು ಉಂಟುಮಾಡಿದಷ್ಟೂ ಅಂತರಂಗದ ಬಹುರೂಪಿ ವಿಧಾನಗಳಲ್ಲಿ ಕೆಂಪುನೋಟುಗಳ ಕಾಂಚಾಣ ಕುಣಿಯುತ್ತದೆ. ಇಂತಹ ಸಂದರ್ಭದಲ್ಲಿ ಹಿಂಸೆಗೂ ಭೋಗಕ್ಕೂ ನಿರೋಧ ಒಡ್ಡುವ ಶತವಾರ್ಷಿಕ ಯೋಜನೆಯ ಮೂಲಕ, ಮನುಷ್ಯ ಇನ್ನಾದರೂ ಕೂಡ, ಖ್ಯಾತಿಯ ಆಸೆ ಹಿಂಸೆಗಿಳಿಯದಂತೆ ಸುಖದ ಆಸೆ ಭೋಗವಾಗಿ ಕುಲಗೆಡದಂತೆ ತಡೆಗಟ್ಟಲು ಸಾಧ್ಯವಾದೀತು-ಎನ್ನುವ ಲೋಹಿಯಾ ಮಾತು ಇಂದಿನ ರಾಜಕಾರಣಕ್ಕೆ ಅಪಥ್ಯವಾಗುತ್ತದೆ. ಖ್ಯಾತಿಯ ಆಸೆಯು ಹಿಂಸೆಗೆ ಇಳಿಯುವುದು, ಸುಖದ ಆಸೆಯು ಭೋಗವಾಗಿ ಕಾಡುವುದು-ಇಂದಿನ ರಾಜಕಾರಣದ ಪ್ರಭುತ್ವಾತ್ಮಕ ತಾತ್ವಿಕತೆಯಾಗಿದೆ.

ಇಂದಿನ ಚುನಾವಣೆ ಎನ್ನುವುದು ಆಧುನಿಕ ವ್ಯಾಪಾರೀಸಂಸ್ಕೃತಿಯ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದೆ.  ಹೆಚ್ಚು ವ್ಯಾಪಾರವಾಗಲು ಅನೇಕ ರೀತಿಯ ಸರಕುಗಳನ್ನು ಮಾರಾಟ ಮಾಡುವ ಹಾಗೆ, ಚುನಾವಣೆಯಲ್ಲಿ ಹಣ ಮತ್ತು ಉಡುಗೊರೆಗಳೊಂದಿಗೆ ಮಾರಾಟವಾಗುವ ಇನ್ನೊಂದು ಸರಕೆಂದರೆ-‘ಜಾತಿ.’ ಜಾತಿವಿನಾಶದ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಲೋಹಿಯಾ ತಮ್ಮದೇ ಆದ ಅಧ್ಯಯನಾತ್ಮಕ ಚಿಂತನೆಗಳನ್ನು ಸ್ಪಷ್ಟವಾಗಿ ಕೊಟ್ಟಿದ್ದಾರೆ. ಇಂಡಿಯಾದಲ್ಲಿ ನೀವು ಯಾವ ದಿಕ್ಕಿಗಾದರೂ ತಿರುಗಿ : ನಿಮ್ಮ ಹಾದಿಗೆ ಅಡ್ಡವಾಗಿ ನಿಂತಿರುವುದು ಈ ಜಾತಿಯ ರಾಕ್ಷಸನೇ. ಈ ರಾಕ್ಷಸನನ್ನು ಕೊಲ್ಲದ ಹೊರತು ರಾಜಕೀಯ ಬದಲಾವಣೆಯೂ ಇಲ್ಲ, ಆರ್ಥಿಕ ಬದಲಾವಣೆಯೂ ಇಲ್ಲ-ಚರಿತ್ರೆಯುದ್ದಕ್ಕೂ ರಾಜಕೀಯ ಕ್ರಾಂತಿಗಳು ಸಾಮಾಜಿಕ ಹಾಗೂ ಧಾರ್ಮಿಕ ಕ್ರಾಂತಿಯ ಹಿನ್ನೆಲೆಯನ್ನು ಹೊಂದಿವೆ-ಡಾ.ಬಿ.ಆರ್.ಅಂಬೇಡ್ಕರ್ ಅವರ ಈ ಮಾತುಗಳು ಇಂದಿಗೂ ನಮಗೆ ಸವಾಲಿನವು. ‘ಮನುಷ್ಯ ಜಾತಿ ತಾನೊಂದೆ ವಲಂ’-ಎನ್ನುವ ಪಂಪನ ಮಾತು, ‘ಮನುಜಮತ ವಿಶ್ವಪಥ’-ಎನ್ನುವ ಕುವೆಂಪು ಅವರ ವಿಶ್ವಮಾನವ ಸಂದೇಶ, ಕರ್ನಾಟಕದಲ್ಲಿ ಜಾತಿವಿನಾಶ ವೇದಿಕೆ-ಇವೆಲ್ಲವೂ ಚುನಾವಣೆಯ ಬಿರುಗಾಳಿಯಲ್ಲಿ ಕಣ್ಮರೆಯಾಗಿಹೋದವು.

ಇಂದು ನಿರ್ದಿಷ್ಟವಾದ ಜಾತಿಯೊಂದರಲ್ಲಿ ಜನರು ತಮ್ಮನ್ನು ಗುರುತಿಸಿಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ ಎಂಬ ಸ್ಥಿತಿ ಇದೆ. ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಲ್ಲಿ ಸಂವಿಧಾನದತ್ತವಾದ ಮೀಸಲಾತಿಯ ಅನುಷ್ಠಾನ ಆಗುವಾಗ ಮೀಸಲಾತಿಯ ಸೌಲಭ್ಯಕ್ಕೆ ಒಳಗಾಗುವ ಸಮುದಾಯಗಳನ್ನು ಅವುಗಳ ಪರಂಪರಾಗತ ಜಾತಿಗಳ ಹೆಸರುಗಳಿಂದ ಗುರುತಿಸಲಾಯಿತು. ಇಂತಹ ಜಾತಿಗಳ ಜನರು ತಮ್ಮ ಜಾತಿಯ ಅನನ್ಯತೆಯನ್ನು ಪ್ರಕಟಿಸುವುದು ಮತ್ತು ಬಲಪಡಿಸುವುದು ಅನಿವಾರ್ಯವಾಯಿತು. ಮೀಸಲಾತಿಯ ಸೌಲಭ್ಯಗಳಿಗೆ ಒಳಗಾಗದ ಸಾಮಾಜಿಕ ಸಮುದಾಯಗಳು ಕೂಡಾ ತಮ್ಮ ಜಾತಿಗಳ ಅನನ್ಯತೆಯನ್ನು ಹೆಚ್ಚು ಶಕ್ತಿಯುತವಾಗಿ ಉಳಿಸಿಕೊಳ್ಳುವ ಮತ್ತು ಬೆಳೆಸುವ ಕೆಲಸಗಳನ್ನು ಮಾಡಿದುವು. ಉದ್ಯೋಗಗಳ ಅವಕಾಶಗಳ ಅಲಭ್ಯತೆ ಹೆಚ್ಚಾಗುತ್ತಾ ಹೋದಾಗ ಸಂರಕ್ಷಣೆಯ ಉದ್ದೇಶದಿಂದ ಈ ಜಾತಿಗಳು ತಮ್ಮ ಜಾತಿಯ ಸಂಘಟನೆಗಳನ್ನು ಹೆಚ್ಚು ವ್ಯವಸ್ಥಿತಗೊಳಿಸಿದವು. ಇದು ಕೇವಲ ಶಿಕ್ಷಣ ಮತ್ತು ಉದ್ಯೋಗಗಳಿಗೆ ಅಷ್ಟೇ ಸೀಮಿತವಾಗಿರದೆ ರಾಜಕೀಯ ಕ್ಷೇತ್ರಗಳಲ್ಲಿ ಪಾಲು ಕೇಳುವ ಉದ್ದೇಶಗಳನ್ನು ಹೊಂದಿತ್ತು.  ಹೀಗಾಗಿ ಚುನಾವಣೆಗಳ ಟಿಕೆಟ್, ಮಂತ್ರಿಮಂಡಲದಲ್ಲಿ ಸ್ಥಾನ, ರಾಜಕೀಯದಲ್ಲಿ ಸ್ಥಾನಮಾನಗಳು ಇಂತಹ ಸಂದರ್ಭಗಳಲ್ಲೆಲ್ಲ ವ್ಯಕ್ತಿಯ ಅವಕಾಶಗಳು ಆ ವ್ಯಕ್ತಿ ನಿರ್ದಿಷ್ಟ ಜಾತಿಯ ಜೊತೆಗೆ ತನ್ನನ್ನು ಗುರುತಿಸಿಕೊಂಡಿದ್ದಾಗ ಹೆಚ್ಚು ಎನ್ನುವ ಭಾವನೆ ಬೆಳೆಯುತ್ತಾ ಬಂತು. ಈ ರೀತಿ ಜಾತಿಯ ಅನನ್ಯತೆ ಹೆಚ್ಚು ಗಟ್ಟಿಯಾಗಿ ಮುಂದುವರಿಯುತ್ತಿರುವಾಗಲೇ ಮತೀಯ ಅನನ್ಯತೆ ಕೂಡಾ ಹೆಚ್ಚುತ್ತಾ ಬಂದಿತು.

ಆಧುನಿಕ ಸಮಾಜಗಳ ಜನರು ಬೇರೆ ಬೇರೆ ಪರಿಸರಗಳಲ್ಲಿ ವ್ಯವಹರಿಸುತ್ತಾರೆ. ಇವರ ಆಕಾಂಕ್ಷೆಗಳು ಅಧಿಕ, ಮಹತ್ವಾಕಾಂಕ್ಷೆಗಳು ಹೆಚ್ಚು. ಇವರಿಗೆ ಇವರ ಉದ್ದೇಶಗಳ ಈಡೇರಿಕೆಗೆ ಒಂದೇ ಅನನ್ಯತೆ ಸಾಕಾಗುವುದಿಲ್ಲ. ಇದಕ್ಕಾಗಿ ಇವರು ಅನೇಕ ಅನನ್ಯತೆಗಳನ್ನು ವ್ಯಾವಹಾರಿಕ ಜಾಣ್ಮೆಯಿಂದ ಬಳಸುತ್ತಿರುತ್ತಾರೆ. ಜಾತಿ, ಪ್ರದೇಶ, ಭಾಷೆ, ಮತ, ರಾಜಕೀಯ ಪಕ್ಷ ಇವುಗಳನ್ನು ನೆಲೆಯಾಗಿ ಉಳ್ಳ ಅನನ್ಯತೆಗಳನ್ನು ಎಲ್ಲವನ್ನೂ ಹೊಂದಿದ್ದು, ಆ ಅನನ್ಯತೆಗಳಿಂದ ದೊರೆಯುವ ಎಲ್ಲ ಪ್ರಯೋಜನಗಳನ್ನು ಪಡೆಯಲು ಕಾರ್ಯತಂತ್ರಗಳನ್ನು ರೂಪಿಸಿರುತ್ತಾರೆ. ಒಂದು ಮತದ ಒಳಗೆ ಇರುವ ಎರಡು ಜಾತಿಗಳ ಅನನ್ಯತೆಗಳು ಪರಸ್ಪರ ವಿರುದ್ಧವಾಗಿ ಕೆಲಸ ಮಾಡುತ್ತಿರುತ್ತವೆ. ಆದರೆ ರಾಜಕೀಯ ಪಕ್ಷದ ಅನನ್ಯತೆಯ ಪ್ರಶ್ನೆ ಬಂದಾಗ ಪರಸ್ಪರ ವಿರುದ್ಧವಾಗಿದ್ದ ಜಾತಿಯ ಅನನ್ಯತೆಗಳು ತಮ್ಮ ಸಂಘರ್ಷವನ್ನು ಬಿಟ್ಟುಕೊಟ್ಟು ಒಂದುಗೂಡುತ್ತವೆ.

ನಮ್ಮ ದೇಶದ ಬಹುಪಾಲು ಪ್ರಜೆಗಳು ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. ಆದರೆ ಚುನಾವಣೆಯಲ್ಲಿ ಮತ ಹಾಕುವಾಗ ಅವರು ಯಾವುದಾದರೊಂದು ರಾಜಕೀಯ ಪಕ್ಷದ ಚಿಹ್ನೆಯ ಮೇಲೆ ತಮ್ಮ ಗುರುತನ್ನು ಒತ್ತಬೇಕಾಗುತ್ತದೆ. ಹೀಗೆ ಒಂದು ಕ್ಷಣದಲ್ಲಿ ನಡೆದುಹೋಗುವ ಗುರುತು ಒತ್ತುವ ಕ್ರಿಯೆಯು ಅನೇಕ ಬಾರಿ ಅಪ್ರಜ್ಞಾಪೂರ್ವಕವಾಗಿ ಅವರನ್ನು ಒಂದು ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಇದು ರಾಜಕೀಯ ಪಕ್ಷದ ಅನನ್ಯತೆಯು ನಿರ್ಮಾಣಗೊಳ್ಳುವ ಅನಿವಾರ್ಯವಾದ ಸನ್ನಿವೇಶ. ಈ ರೀತಿ ಪಕ್ಷದ ಅನನ್ಯತೆಯು ನಿರ್ಮಾಣಗೊಳ್ಳುವುದು ಸಾಮಾನ್ಯವಾಗಿ ಸೈದ್ಧಾಂತಿಕ ಕಾರಣಗಳಿಂದ ಅಲ್ಲ ; ಪ್ರತಿಯೊಂದು ಚುನಾವಣೆಯ ಸನ್ನಿವೇಶವು ನಿರ್ಮಿಸುವ ಸಾಂದರ್ಭಿಕ ಕಾರಣಗಳಿಂದ. ಕಳೆದ ಹದಿನೈದುಇಪ್ಪತ್ತು ವರ್ಷಗಳಿಂದ ಚುನಾವಣೆಗಳಲ್ಲಿ ನಿಷೇಧಾತ್ಮಕ ಮತಗಳೇ ಹೆಚ್ಚು ನಿರ್ಣಾಯಕವಾಗಿವೆ. ಹೀಗಾಗಿ ಒಬ್ಬ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಯಾಕಾಗಿ ಮತವನ್ನು ಕೊಡಬೇಕು ಎನ್ನುವುದಕ್ಕಿಂತ ಎದುರು ಪಕ್ಷದ ಅಭ್ಯರ್ಥಿಗೆ ಯಾಕಾಗಿ ಕೊಡಬಾರದು ಎನ್ನುವುದು ಇತ್ತೀಚಿನ ಚುನಾವಣೆಗಳಲ್ಲಿ ಮುಖ್ಯ ಸಂಗತಿಯಾಗಿದೆ.

ಪಕ್ಷದ ಅನನ್ಯತೆಯು ಕೆಲವು ಸಾಂದರ್ಭಿಕ ಕಾರಣಗಳಿಂದಾಗಿ ಒಂದು ಬಾರಿ ನಿರ್ಮಾಣವಾದರೆ ಅದು ಆಮೇಲೆ ಒಂದು ಆರೋಪಿತ ಸತ್ಯವಾಗಿ ಜನರು ಅದನ್ನು ತಮ್ಮ ರಕ್ಷಣೆಗಾಗಿ ಭದ್ರವಾಗಿ ಹಿಡಿದುಕೊಂಡು ಮುಂದುವರಿಯುತ್ತಾರೆ. ರಾಜಕೀಯ ಪಕ್ಷಗಳ ಅನನ್ಯತೆಯು ಜನರಿಗೆ ಭದ್ರತೆಯನ್ನೋ ರಕ್ಷಣೆಯನ್ನೋ ಲಾಭವನ್ನೋ ಕೊಡುವ ಶಕ್ತಿಯುತವಾದ ಅನನ್ಯತೆ ಎನ್ನುವ ರೀತಿಯಲ್ಲಿ ಅದನ್ನು ಪ್ರಚಾರ ಮಾಡಲಾಗುತ್ತದೆ. ಹಳ್ಳಿಗಳಲ್ಲಿಯಂತೂ ಯಾವುದೇ ವ್ಯಕ್ತಿ ನಿರ್ದಿಷ್ಟ ರಾಜಕೀಯ ಪಕ್ಷವೊಂದರ ಜೊತೆಗೆ ತನ್ನನ್ನು ಗುರುತಿಸಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಎನ್ನುವ ಅಭದ್ರತೆಯ ವಾತಾವರಣವನ್ನು ನಮ್ಮ ರಾಜಕೀಯ ವ್ಯವಸ್ಥೆ ಸೃಷ್ಟಿಸಿದೆ. ಹೀಗೆ ವ್ಯಕ್ತಿಯ ಉಳಿವು, ಭದ್ರತೆ ಮತ್ತು ಯೋಗಕ್ಷೇಮ-ಇವು ರಾಜಕೀಯ ಪಕ್ಷಗಳ ಅನನ್ಯತೆಗಳ ಮೂಲಕವೇ ಸಾಧಿತವಾಗುತ್ತದೆ ಎನ್ನುವ ಭ್ರಮೆಯು  ಜಾತಿಯ ಮತ್ತು ಮತೀಯ ಅನನ್ಯತೆ ಹೆಚ್ಚಲು ಕಾರಣವಾಗಿದೆ.

ಸಮ್ಮಿಶ್ರ ಸರಕಾರಗಳ ಯುಗ ಆರಂಭವಾದ ಬಳಿಕ, ಚುನಾಯಿತ ಸದಸ್ಯರ ಅಂಕೆಗಳ ಜಿಂಕೆಗಳ ಜಿಗಿಯುವಿಕೆ ಅನೂಹ್ಯವಾದದ್ದು. ಚುನಾವಣಾಪೂರ್ವ ಮತ್ತು ಚುನಾವಣೋತ್ತರ ಸಂದರ್ಭಗಳಲ್ಲಿ ಚುನಾಯಿತ ಸದಸ್ಯರು ಮತ್ತು ಪಕ್ಷಗಳು ಒಟ್ಟುಗೂಡುವುದು ಮತ್ತು ಬೇರ್ಪಡುವುದು ಅನಿರೀಕ್ಷಿತವಾದದ್ದು. ತತ್ತ್ವಸಿದ್ಧಾಂತಗಳ ಮೇಲೆ ಒಂದಾಗುತ್ತಿದ್ದ ‘ರಾಜಕೀಯ ಧ್ರುವೀಕರಣ’ ಎನ್ನುವ ಪರಿಕಲ್ಪನೆ ಇಂದು ಬದಲಾಗಿ, ಯಾರೂ ಯಾರ ಜೊತೆಗೂ ಸೇರಬಹುದು ಎನ್ನುವ ಸಾಂದರ್ಭಿಕ ಕ್ರಾಂತಿಯ ‘ರಾಜಕೀಯ ದ್ರವೀಕರಣ’ ನಡೆಯುತ್ತಿದೆ. ಹೀಗಾಗಿ ಜಾತಿ, ಪಕ್ಷ, ಮತ ಎಲ್ಲವೂ ದ್ರವೀಕರಣದ ಪ್ರವಾಹದಲ್ಲಿ ಕರಗಿಹೋಗುತ್ತವೆ. ಅಂತಿಮವಾಗಿ ಅಧಿಕಾರ ಅಷ್ಟೇ ಉಳಿಯುತ್ತದೆ.

ಅಲ್ಲಮಪ್ರಭುವಿನ ‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎನ್ನುವ ವಚನ ಇಂದಿನ ಚುನಾವಣೆಗಳಲ್ಲಿ ಪಲ್ಲಟವಾಗುತ್ತದೆ. ಆದರೆ ನಮ್ಮದು ಮಾತ್ರ ‘ಸಾವು ಕಾಣದ ಮನೆಯ ಸಾಸಿವೆ’ಯ ಹುಡುಕಾಟಕ್ಕಾಗಿ ಮಹಾಯಾನ.

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

3 Responses to “ಸಾಗರದಷ್ಟು ಸುಖಕ್ಕೆ ಸಾಸಿವೆಯಷ್ಟು ದುಃಖ ನೋಡಾ..”

RSS Feed for ಬಿ ಎ ವಿವೇಕ ರೈ Comments RSS Feed

Dear Sir,

Idondu tumba sundaravaad arthapoorna lekhaa. Samakaleena raajakaranada kuritu olleya paath maadidanthide.Koneya salugalanthu nammolagina chinthaneya yanthravannu chaloo maadibidutthave. Dhanyavaadagalu
Srinivas Deshpande

Vivek sir, Gandhi, JP, Lohia ivara vichaaradharene vibhinna…ivra bagge tlsi namma alpa gnanada baagilannu terediddeeri…dhanyavvada.

ದೇಶಪಾಂಡೆ ಅವರಿಗೆ ನಮಸ್ಕಾರ.ನಿಮ್ಮಂತಹ ಚಿಂತನಶೀಲ ಓದುಗರ ಅಭಿಪ್ರಾಯ ತುಂಬಾ ಮಹತ್ವದ್ದು.ಥ್ಯಾಂಕ್ಸ್.


Where's The Comment Form?

Liked it here?
Why not try sites on the blogroll...

%d bloggers like this: