ಅಮ್ನೀಸಿಯಾದ ಆನಂತರ: ಮಬ್ಬು ಕರಗುವ ಸಮಯ

Posted on ಮಾರ್ಚ್ 21, 2010. Filed under: ಇರುಳ ಕಣ್ಣು |


ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಈ ಲೇಖನ ಪ್ರಕಟವಾದದ್ದು 13 ಫೆಬ್ರುವರಿ, 2009

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ

ಡಾ.ಪಿ.ಒಬ್ಬ ಸಂಗೀತ ಅಧ್ಯಾಪಕ. ಆತನಿಗೆ ಕೆಲವೊಮ್ಮೆ ತನ್ನ ವಿದ್ಯಾರ್ಥಿಗಳನ್ನು ಗುರುತು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಅವರ ಮುಖಗಳನ್ನು ನೋಡಿ ಗುರುತು ಹಿಡಿಯದವನು, ಅವರು ಮಾತನಾಡಲು ತೊಡಗಿದೊಡನೆಯೇ ಅವರ ಧ್ವನಿಯನ್ನು ಕೇಳಿ ಗುರುತಿಸುತ್ತಿದ್ದ. ಆತ ವಸ್ತುಗಳನ್ನು ಗುರುತು ಹಿಡಿಯುತ್ತಿದ್ದದ್ದು ಧ್ವನಿಗಳ ಮೂಲಕ. ತನ್ನ ಹ್ಯಾಟ್ನ್ನು ತೆಗೆದುಕೊಳ್ಳಲು ಆತ ಕೈ ಹಾಕುತ್ತಿದ್ದದ್ದು ತನ್ನ ಹೆಂಡತಿಯ ತಲೆಗೆ. ಹೀಗೆ ಹೆಂಡತಿಯ ತಲೆಯನ್ನು ಹ್ಯಾಟ್ ಎಂದು ತಿಳಿದುಕೊಂಡ ಡಾ.ಪಿ. ಒಬ್ಬ ಅದ್ಭುತ ಪ್ರತಿಭಾವಂತ.

ಕಾರು ಅಪಘಾತವೊಂದರಲ್ಲಿ ಪ್ರಜ್ಞೆತಪ್ಪಿ ಎಚ್ಚರಗೊಂಡ ಬಳಿಕ, ಒಬ್ಬ ವ್ಯಕ್ತಿ ಕನಸಿನಲ್ಲಿ ತಾನು ಬದುಕುತ್ತಿದ್ದೇನೆ ಎಂದು ಭಾವಿಸುತ್ತಾನೆ. ಅದು ನಿಜವಲ್ಲ ಎಂದು ಆತನಿಗೆ ಡಾಕ್ಟರ್ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದಾಗ, ಆತನ ಪ್ರತಿಕ್ರಿಯೆ ; ‘ಇವೆಲ್ಲವೂ ಆ ಕನಸಿನ ಭಾಗಗಳು’. ಆಸ್ಪತ್ರೆಯ ಮಹಡಿಯಿಂದ ಕೆಳಕ್ಕೆ ಜಿಗಿದು, ತನ್ನ ಸ್ವಂತ ಜಗತ್ತಿಗೆ ಮರಳಲು ಮತ್ತು ಆ ಕನಸಿನಿಂದ ಹೊರಬರಲು ತಾನು ಬಯಸುತ್ತೇನೆ ಎಂದು ಆತ ತಿಳಿಸುತ್ತಾನೆ.

ಮೇಲಿನ ಎರಡು ದೃಶ್ಯಗಳು 1993 ಸೆಪ್ಟೆಂಬರ್ 9ರಂದು ಜರ್ಮನಿಯ ಬರ್ಲಿನ್ನಲ್ಲಿರುವ ಬ್ರೆಕ್ಬ್ ರಂಗಮಂದಿರದಲ್ಲಿ ನಾನು ನೋಡಿದ ಫ್ರೆಂಚ್ ನಾಟಕ ‘’L ‘hommequi (The man who)’’ದವು ; ಖ್ಯಾತ ನಾಟಕಕಾರ ಪೀಟರ್ ಬ್ರೂಕ್ ನಿರ್ದೇಶಿಸಿದ್ದು. ‘ಮಹಾಭಾರತ’ ಸಿನಿಮಾವನ್ನು ನಿರ್ಮಿಸಿದ ಪೀಟರ್ ಬ್ರೂಕ್, ಖ್ಯಾತ ನರವಿಜ್ಞಾನಿ ಮತ್ತು ಲೇಖಕ ಒಲಿವರ್ ಸ್ಯಾಕ್ಸ್ನ ‘The Man Who Mistook his Wife for a Hat’ ಎಂಬ ಇಂಗ್ಲಿಷ್ ಕೃತಿಯನ್ನು ಆಧರಿಸಿ ಹದಿಮೂರು ವಿವರಗಳನ್ನು ಆಯ್ಕೆ ಮಾಡಿಕೊಂಡು ಹದಿಮೂರು ದೃಶ್ಯಗಳಲ್ಲಿ ರೂಪಿಸಿದ ನಾಟಕ ಇದು. ನರವಿಜ್ಞಾನ, ಮನೋವಿಜ್ಞಾನ, ತತ್ತ್ವಶಾಸ್ತ್ರ ಮತ್ತು ಸೃಜನಶೀಲತೆಗಳನ್ನು ಒಟ್ಟುಗೂಡಿಸಿ ಮಿದುಳನ್ನು ಕೇಂದ್ರವನ್ನಾಗಿಟ್ಟುಕೊಂಡು ರೂಪಿಸಿದ ಈ ನಾಟಕ ಆಧುನಿಕ ಸನ್ನಿವೇಶಕ್ಕೆ ಪ್ರತಿರೂಪಕವಾಗಿತ್ತು.

ಮಿದುಳು ಮತ್ತು ಮನಸ್ಸುಗಳ ಸಂಬಂಧದ ವೈಜ್ಞಾನಿಕ ಅಧ್ಯಯನದಲ್ಲಿ ಹೊಸ ಶೋಧಗಳನ್ನು ನಡೆಸಿದ ನರವಿಜ್ಞಾನಿ ಮತ್ತು ಲೇಖಕ ಎ.ಆರ್.ಲೂರಿಯ. ‘The Man with a Shattered World(1972)’ ನಿಂದ ‘Higher Cortical Functions in Man (1980)’ವರೆಗೆ ಆತನ ಕೃತಿಗಳು ಕ್ರಾಂತಿಕಾರಕವಾಗಿವೆ. ಮಿದುಳಿನ ಬಲಪಾಶ್ರ್ವದ ಅಧ್ಯಯನವನ್ನು ವಿಶೇಷವಾಗಿ ನಡೆಸಿದ ಎ.ಆರ್.ಲೂರಿಯನ ಶಿಷ್ಯ ಒಲಿವರ್ ಸ್ಯಾಕ್ಸ್, ತನ್ನ ಅನುಭವಕ್ಕೆ ಬಂದ ಕೇಸ್ಹಿಸ್ಟರಿಗಳನ್ನು ಕಥನದ ರೂಪದಲ್ಲಿ ಕೊಟ್ಟ ಸಂಕಲನ, The Man who Mistook his Wife for a Hat’ (Picador-1985). ‘’ಪ್ರಾಣಿಗಳಿಗೆ ಕಾಯಿಲೆ ಬರುತ್ತದೆ ; ಆದರೆ ಮನುಷ್ಯರು ಅಸ್ವಸ್ಥರಾಗುತ್ತಾರೆ. ನನ್ನ ಕೆಲಸ, ನನ್ನ ಬದುಕು ಎಲ್ಲವೂ ಅಸ್ವಸ್ಥರಾದವರ ಜೊತೆಗೆ. ಅಸ್ವಸ್ಥರಾದವರು ಮತ್ತು ಅವರ ಕಾಯಿಲೆಗಳು ನನ್ನನ್ನು ಹೊಸ ರೀತಿಯ ಆಲೋಚನೆಗಳಿಗೆ ಪ್ರೇರೇಪಿಸುತ್ತವೆ ಎನ್ನುವ ಒಲಿವರ್ ಸ್ಯಾಕ್ಸ್ ‘ರೊಮ್ಯಾಂಟಿಕ್ ವಿಜ್ಞಾನ’ ಎನ್ನುವ ಪರಿಭಾಷೆಯೊಂದನ್ನು ಕೊಡುತ್ತಾನೆ.

‘ಕಳೆದುಕೊಳ್ಳುವುದು’ ಅಥವಾ ‘ಕೊರತೆ’ ಎನ್ನುವುದು ನರವಿಜ್ಞಾನದಲ್ಲಿ ಒಂದು ಮುಖ್ಯ ಪಾರಿಭಾಷಿಕ ಪದ. ಮಾತನ್ನು ಕಳೆದುಕೊಳ್ಳುವುದು(Aphasia), ಭಾಷೆಯನ್ನು ಕಳೆದುಕೊಳ್ಳುವುದು(Alexia), ನೆನಪನ್ನು ಕಳೆದುಕೊಳ್ಳುವುದು (Amnesia), ದೃಷ್ಟಿಯನ್ನು ಕಳೆದುಕೊಳ್ಳುವುದು(Agnosia), ನೈಪುಣ್ಯವನ್ನು ಕಳೆದುಕೊಳ್ಳುವುದು(Apraxia), ದೇಹದ ಚಲನೆಯ ನಿಯಂತ್ರಣವನ್ನು ಕಳೆದುಕೊಳ್ಳುವುದು(Ataxia)-ಹೀಗೆ ವಿಶಿಷ್ಟ ಕ್ರಿಯೆಗಳನ್ನು, ತಿಳುವಳಿಕೆಗಳನ್ನು ಕಳೆದುಕೊಳ್ಳುವುದು ಇಲ್ಲಿ ಹೆಚ್ಚು ಕುತೂಹಲದ ಅಧ್ಯಯನದ ಸಂಗತಿಗಳು.

ಗ್ರೀಕ್ ಪದದಿಂದ ನಿಷ್ಪನ್ನವಾದ ‘ಅಮ್ನೀಸಿಯಾ’ ಪದದ ಅರ್ಥ ‘ನೆನಪನ್ನು ಕಳೆದುಕೊಳ್ಳುವುದು’. ಅಂದರೆ, ‘ವಿಸ್ಮೃತಿ’. ಮಿದುಳಿಗೆ ಆಗುವ ಯಾವುದೇ ರೀತಿಯ ಆಘಾತದಿಂದ-ಹೊಡೆತ, ಕಾಯಿಲೆ, ಅತಿಯಾದ ಮಾದಕ ವಸ್ತುಗಳ ಸೇವನೆ, ಮದ್ಯಪಾನ, ಭಾವೋನ್ಮಾದ-ಇಂತಹ ನೆನಪನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ನೆನಪನ್ನು ತಾತ್ಕಾಲಿಕವಾಗಿ ಕಳೆದುಕೊಳ್ಳುವುದು, ಪಾರ್ಶ್ವಿಕವಾಗಿ ಕಳೆದುಕೊಳ್ಳುವುದು, ಪೂರ್ಣವಾಗಿ ಕಳೆದುಕೊಳ್ಳುವುದು, ಶಾಶ್ವತವಾಗಿ ಕಳೆದುಕೊಳ್ಳುವುದು-ಹೀಗೆ ‘ಅಮ್ನೀಸಿಯಾ’ ಬಹುಬಗೆಯದ್ದಾಗಿರುತ್ತದೆ. ‘ಅಮ್ನೀಸಿಯಾ’ಕ್ಕೆ ಒಳಗಾದವರು ಅನೇಕ ಮಂದಿ ತಮ್ಮ ಬಾಲ್ಯದ ನೆನಪನ್ನು ಹೇಳಬಲ್ಲರು, ಆದರೆ ಇತ್ತೀಚೆಗಿನ ನೆನಪನ್ನು ಹೇಳಿಕೊಳ್ಳಲಾರರು. ಕೆಲವೊಮ್ಮೆ ಅನನ್ಯತೆಯ ಗುರುತುಗಳಾದ ಹೆಸರು, ವಯಸ್ಸು, ಊರು, ಕೌಟುಂಬಿಕ ಹಿನ್ನೆಲೆಗಳನ್ನು ಮರೆತುಬಿಡುತ್ತಾರೆ. ಹೀಗೆ ಅನನ್ಯತೆಯನ್ನು(Identity) ನೆನಪಿಸಿಕೊಳ್ಳಲಾಗದ ಮನಸ್ಥಿತಿಗೆ ತಲುಪುವ ಸ್ಥಿತಿ ನಿರ್ಮಾಣವಾಗುವುದು-ತಲೆಯ ಮೇಲಿನ ಹೊಡೆತ, ತೀವ್ರವಾದ ಕಾಯಿಲೆ, ಅತಿಯಾದ ಮಾದಕ ದ್ರವ್ಯದ ಸೇವನೆ, ಅತಿ ಭಾವೋನ್ಮಾದದ ಒತ್ತಡ ಮುಂತಾದವುಗಳಿಂದ.

ಸಂಸ್ಕೃತಿ ಚಿಂತಕ ಮತ್ತು ಸಾಹಿತ್ಯ ವಿಮರ್ಶಕ ಡಾ.ಜಿ.ಎನ್.ದೇವಿ ತಮ್ಮ (Orient Longman, 1992) ಕೃತಿಯಲ್ಲಿ ಭಾರತೀಯ ಸಾಹಿತ್ಯವಿಮರ್ಶೆಯಲ್ಲಿ ಪರಂಪರೆ ಮತ್ತು ಬದಲಾವಣೆಯ ಸ್ವರೂಪವನ್ನು ಚರ್ಚಿಸಿದ್ದಾರೆ. ಪರಂಪರೆ ಮತ್ತು ‘ಅಮ್ನೀಸಿಯಾ’, ಎಂದೂ ಕೊನೆಯಾಗದ ಸ್ಥಿತ್ಯಂತರ ಮತ್ತು ‘ಅಮ್ನೀಸಿಯಾದ ಅನಂತರ’ ಎನ್ನುವ ಮೂರು ಅಧ್ಯಾಯಗಳಲ್ಲಿ ಭಾರತೀಯ ಸಾಹಿತ್ಯವಿಮರ್ಶೆಯನ್ನು ದೇಶಭಾಷೆಗಳ ಮೂಲಕ ಮರುಶೋಧಿಸಿ ಹೊಸದಾಗಿ ಕಟ್ಟುವ ಆಲೋಚನೆಗಳನ್ನು ಕೊಡುತ್ತಾರೆ. ಆಧುನಿಕ ಭಾರತದ ದೇಶಭಾಷೆಗಳ ಸಾಹಿತ್ಯ ವಿಮರ್ಶೆಯು ಒಂದು ಕಡೆ ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ, ಇನ್ನೊಂದು ಕಡೆ ಸಂಸ್ಕೃತ ಕಾವ್ಯಮೀಮಾಂಸೆಗಳ ದಟ್ಟ ಪ್ರಭಾವಕ್ಕೆ ಒಳಗಾಗಿರುವ ಸಂದರ್ಭದಲ್ಲಿ, ‘ದೇಸಿ’ ಪರಂಪರೆಯ, ಅಂದರೆ, ಪ್ರಾದೇಶಿಕ ಮತ್ತು ಸ್ಥಳೀಯಸಂಸ್ಕೃತಿ ಪರಂಪರೆಯ ಚಿಂತನಾ ಕ್ರಮಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ. ಪಾಶ್ಚಾತ್ಯಕ್ಕೆ ವಿರುದ್ಧವಾಗಿ ಭಾರತೀಯ ಎನ್ನುವಾಗ, ಅದು ಏಕಮಾದರಿಯ ಸಂಸ್ಕೃತ ಪರಂಪರೆ ಅಲ್ಲ, ಎಲ್ಲ ‘ದೇಸಿ’ ಭಾಷೆಗಳಿಗೆ ಅವುಗಳದ್ದೇ ಆದ ಅನನ್ಯತೆಯ ವಿನ್ಯಾಸಗಳಿವೆ ಎಂದು ಜಿ.ಎನ್.ದೇವಿ ಪ್ರತಿಪಾದಿಸುತ್ತಾರೆ.

‘ಸಾಂಸ್ಕೃತಿಕ ಅಮ್ನೀಸಿಯಾ’ ಎನ್ನುವ ಪರಿಭಾಷೆಯನ್ನು ಬಳಸುವ ದೇವಿಯವರು ‘ಭಾರತೀಯ ಸಂಸ್ಕೃತಿಯಲ್ಲಿ ನೆನಪಿನ ಸ್ಥಾನ’ವನ್ನು ಕುರಿತು ಆನಂದಕುಮಾರಸ್ವಾಮಿ ಅವರು ಬರೆದ ಪ್ರಬಂಧವನ್ನು ಪರಿಶೀಲಿಸುತ್ತಾರೆ. ‘ನೆನಪು ಎನ್ನುವುದು ಒಂದು ವಿಧದ ಗುಪ್ತಜ್ಞಾನ’ ಎನ್ನುವ ಕುಮಾರಸ್ವಾಮಿಯವರ ಮಾತನ್ನು ಉಲ್ಲೇಖಿಸುತ್ತಾ, ಅದನ್ನು ಮರೆಯುವ ಪ್ರಯತ್ನಗಳ ಕಾರಣಗಳನ್ನು ಚರ್ಚಿಸುತ್ತಾರೆ. ಪಾಶ್ಚಿಮಾತ್ಯೀಕರಣಕ್ಕೆ ಪ್ರತಿಕ್ರಿಯೆಯಾಗಿ ಭಾರತದಲ್ಲಿ ಸಂಸ್ಕೃತೀಕರಣ ಪ್ರಬಲವಾಗುತ್ತಿದೆ. ಅಂದರೆ, ಸದ್ಯದ ಗತಕಾಲವನ್ನು ಅದುಮಿ, ದೂರದ ಗತಕಾಲವನ್ನು ಪುನರುಜ್ಜೀವನಗೊಳಿಸುವುದು. ಇದರಿಂದಾಗಿ, ಇತ್ತೀಚೆಗಿನ ಗತಕಾಲದೊಂದಿಗೆ ವಿರೋಧದ ಸಂಬಂಧವನ್ನು ಹೊಂದುವುದು ಮತ್ತು ಆ ಮೂಲಕ ವಾಸ್ತವಿಕವಲ್ಲದ ಗತಕಾಲವನ್ನು ವರ್ತಮಾನವೆಂದು ಭ್ರಮಿಸುವುದು. ‘ಸಾಂಸ್ಕೃತಿಕ ಅಮ್ನೀಸಿಯಾ’ದ ಈ ಪರಿಣಾಮವು ಆಧುನಿಕ ಭಾರತದಲ್ಲಿ ಬಿಕ್ಕಟ್ಟನ್ನು ನಿರ್ಮಾಣ ಮಾಡಿದೆ. ಆಧುನಿಕತೆಯನ್ನು ಪರಂಪರೆಯೊಂದಿಗೆ ಜೋಡಿಸಲು ಸಾಧ್ಯವಾಗದ ಇಂತಹ ‘ಸಾಂಸ್ಕೃತಿಕ ಅಮ್ನೀಸಿಯ’ಕ್ಕೆ ಪರಿಹಾರವನ್ನು ಕಂಡುಕೊಳ್ಳುವುದು ಇಂದಿನ ಜರೂರಿನ ಕೆಲಸ.

ವಸಾಹತೀಕರಣ, ಪುನರುಜ್ಜೀವನ, ಆಧುನಿಕತೆ, ಪಾಶ್ಚ್ಯಾತೀಕರಣ ಮತ್ತು ಭಾರತೀಯತೆ-ಇವು ಆಧುನಿಕ ಭಾರತದ ಸಾಂಸ್ಕೃತಿಕ ಚರ್ಚೆಯಲ್ಲಿ ಬಿಡಿಬಿಡಿಯಾಗಿ ಹಂಚಿಹೋಗಿವೆ. ನಮ್ಮ ಚಿಂತನೆ ಮತ್ತು ಅದರ ಫಲವಾದ ಚಟುವಟಿಕೆಗಳಲ್ಲಿ ಮಿದುಳಿಗೆ ಆಘಾತವಾಗಿ, ಸಂವಹನದ ಕೊಂಡಿಗಳು ಕಳಚಿಹೋಗಿ ನಾವು ‘ಅಮ್ನೀಸಿಯಾ’ಕ್ಕೆ ಒಳಗಾಗಿದ್ದೇವೆ. ಭಾರತದ ಪ್ರಾದೇಶಿಕ ಭಾಷೆಗಳ ‘ದೇಸಿ’ ಪರಂಪರೆಯ ಸಾಹಿತ್ಯವಿಮರ್ಶೆಗೆ ಸಂಬಂಧಿಸಿದಂತೆ ಜಿ.ಎನ್.ದೇವಿ ಅವರು ‘ಅಮ್ನೀಸಿಯಾದ ಅನಂತರ’ ಎನ್ನುವ ಶೀರ್ಷಿಕೆಯಲ್ಲಿ ನಮ್ಮ ಸಾಂಸ್ಕೃತಿಕ ವಿಸ್ಮೃತಿಯ ಚರ್ಚೆಯನ್ನು ನಡೆಸಿದ್ದಾರೆ. ಸಾಂಸ್ಕೃತಿಕ ಚಿಂತಕ ಅಶೀಶ್ ನಂದಿ ಈ ಚರ್ಚೆಯನ್ನು ಇನ್ನಷ್ಟು ಬೆಳೆಸಿದ್ದಾರೆ. ಇದು ಕೇವಲ ಸಾಹಿತ್ಯವಿಮರ್ಶೆಗೆ ಮಾತ್ರ ಸೀಮಿತವಾದ ಸಂಗತಿ ಆಗದೆ, ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ವಿಸ್ತರಣೆಗೊಳ್ಳಬೇಕು.

ಆಧುನಿಕ ಸಮಾಜದಲ್ಲಿ ಯುವ ಜನರು ತಮ್ಮ ಪರಂಪರೆಯ ಭಾಗವಾಗಿರುವ ಕುಟುಂಬ ಮತ್ತು ಸಮಾಜದಿಂದ ದತ್ತವಾದ ಅನನ್ಯತೆಗಳನ್ನು ಕಳೆದುಕೊಂಡು ತಮ್ಮದೇ ಆದ ಅನನ್ಯ ಒಂದುಗೂಡುವಿಕೆಯ ಅವಕಾಶಗಳನ್ನು ಬಯಸುತ್ತಾರೆ. ಇದಕ್ಕಾಗಿ ದೈಹಿಕ ಮತ್ತು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡು ಸೂಕ್ತ ಆವರಣಗಳನ್ನು ಹುಡುಕುತ್ತಾರೆ ಮತ್ತು ನಿರ್ಮಿಸುತ್ತಾರೆ. ಹಾಡು ಕುಣಿತ ಮುಂತಾದವು ಇಂತಹ ಸಾಮೂಹಿಕತೆಯ ನಿರ್ಮಾಣದ ಆವರಣಗಳು. ಜನಪದ ಪರಂಪರೆಯಲ್ಲಿಯೂ ಸಾಮೂಹಿಕ ಅನನ್ಯತೆಯ ನಿರ್ಮಾಣದಲ್ಲಿ ಹಾಡು ಮತ್ತು ಕುಣಿತಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಇದಕ್ಕಾಗಿ ಗ್ರಾಮೀಣ ಪರಿಸರದಲ್ಲಿ ಹಬ್ಬಗಳು, ಆಚರಣೆಗಳು, ಜಾತ್ರೆಗಳು ಅವಕಾಶದ ಆವರಣರಂಗವನ್ನು ಕಟ್ಟಿಕೊಡುತ್ತಿದ್ದವು. ಇಲ್ಲೆಲ್ಲ ಗಂಡು-ಹೆಣ್ಣು ಎನ್ನುವ ಲಿಂಗಭೇದವಿಲ್ಲದೆ, ಜಾತಿ ಭೇದವಿಲ್ಲದೆ ಸಾರ್ವಜನಿಕರ ಎದುರಿನಲ್ಲಿ ಸಾಮೂಹಿಕ ಹಾಡು, ಕುಣಿತದ ಪ್ರದರ್ಶನಗಳು ಜರುಗುತ್ತಿದ್ದವು. ಕರ್ನಾಟಕದಲ್ಲಿ ದುಡಿಕುಣಿತ, ಹೋಳಿಹಬ್ಬ ಇಂತಹ ಅನೇಕ ನಿದರ್ಶನಗಳನ್ನು ನೆನಪಿಸಿಕೊಳ್ಳಬಹುದು.

ನಮ್ಮ ಯುವಜನತೆ ಯಾಕೆ ಉದ್ದೇಶಪೂರ್ವಕವಾಗಿ ತಮ್ಮ ಹಳೆಯ ನೆನಪುಗಳನ್ನು ಕಳೆದುಕೊಳ್ಳಲು ಬಯಸುತ್ತಾರೆ, ಅದರ ಸಾಮಾನ್ಯ ಕಾರಣಗಳು ಮತ್ತು ವ್ಯಕ್ತಿವಿಶಿಷ್ಟ ಕಾರಣಗಳು ಯಾವುವು ಎನ್ನುವುದನ್ನು ಏಕಕಾಲಕ್ಕೆ ಶೋಧಿಸುವ ಅಗತ್ಯವಿದೆ. ಅಂತಹ ಅನನ್ಯತೆಗಳನ್ನು ಕಳೆದುಕೊಂಡು ಅದಕ್ಕೆ ಪರ್ಯಾಯವಾಗಿ ಅವರು ಅಪೇಕ್ಷಿಸುವ ಅನನ್ಯತೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಮಾತ್ರ ‘ಆರೋಪಿತ ಅಮ್ನೀಸಿಯಾ’ದ ಕಾರಣ, ಸ್ವರೂಪ ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯ.

‘ಸಾಂಸ್ಕೃತಿಕ ಅಮ್ನೀಸಿಯಾ’ ಮತ್ತು ‘ನರವಿಜ್ಞಾನದ ಅಮ್ನೀಸಿಯಾ’ಗಳನ್ನು ಜೊತೆಜೊತೆಯಾಗಿಯೇ ಪರಿಶೀಲಿಸಬೇಕಾಗಿದೆ. ಮಾದಕದ್ರವ್ಯಗಳ ಸೇವನೆಯಿಂದ ನೆನಪನ್ನು ಕಳೆದುಕೊಳ್ಳುವ ‘ಅಮ್ನೀಸಿಯಾ’ದಂತೆಯೇ ವರ್ತಮಾನವನ್ನು ಬಲಾತ್ಕಾರದಿಂದ ಮರೆತು ದೂರದ ಗತಕಾಲದ ಮಬ್ಬಿಗೆ ಚಲಿಸುವ ‘ಅಮ್ನೀಸಿಯಾ’ ಕೂಡ ಅಪಾಯಕಾರಿಯಾದುದು.

ನರವಿಜ್ಞಾನದ ಅಧ್ಯಯನದಲ್ಲಿ ‘ಅಮ್ನೀಸಿಯಾ’ಕ್ಕೆ ಒಳಗಾಗುವವರಲ್ಲಿ ಹೆಣ್ಣುಗಳ ಪ್ರಮಾಣ ಅಧಿಕವಾದುದು. ಕೌಟುಂಬಿಕ, ಸಾಮಾಜಿಕ, ಧಾರ್ಮಿಕ ಮತ್ತು ಆರ್ಥಿಕ ಒತ್ತಡಗಳೆಂಬ ಆಘಾತಗಳು ಹೆಣ್ಣಿನ ಮಿದುಳಿನ ಮೇಲೆ ಉಂಟುಮಾಡುವ ಪರಿಣಾಮವಾಗಿ ಅವರಲ್ಲಿ ಕಳೆದುಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿರುತ್ತದೆ. ಕರ್ನಾಟಕದಲ್ಲಿ ಸುಮಾರು ಮೂವತ್ತು ಸಾವಿರದಷ್ಟು ದೇವದಾಸಿಯರು ದೇವರ ಹೆಸರಿನಲ್ಲಿ ಮರೆಯಾಗಿರುವುದು ಮತ್ತು ಆರ್ಥಿಕ, ಕೌಟುಂಬಿಕ ಸಾಮಾಜಿಕ ಒತ್ತಡದಿಂದ ಲಕ್ಷ್ಷಾಂತರ ಮಂದಿ ಹೆಣ್ಣುಗಳು ಕತ್ತಲೆಯ ಲೋಕದಲ್ಲಿ ಕಾಣೆಯಾಗುತ್ತಿರುವುದು ಸಂಸ್ಕೃತಿವಂತ ಸಮಾಜ ‘ಅಮ್ನೀಸಿಯಾ’ಕ್ಕೆ ಈಡಾಗಿರುವ ಜೀವಂತ ನಿದರ್ಶನಗಳು.

ಮರೆತುಹೋದ ‘ಅಮ್ನೀಸಿಯಾ’ ಮತ್ತೆ ನೆನಪಾದದ್ದು ಮಂಗಳೂರಿನಲ್ಲಿ ಇತ್ತೀಚೆಗೆ ಸುದ್ದಿ ಮಾಡಿದ ಕೇಂದ್ರವೊಂದರ ಹೆಸರಿನಿಂದ. ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಇರುವ ಒಂದು ರಾತ್ರಿ ಕ್ಲಬ್ ‘ಅಮ್ನೀಸಿಯಾ’. ಅಮೇರಿಕಾದ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಹಾಡುಕುಣಿತದ ಕೂಟದ ‘ಅಮ್ನೀಸಿಯಾ’ ವೆಬ್ಸೈಟ್ನಲ್ಲಿ ದೊರೆಯುತ್ತದೆ. ಹೀಗೆ ಅಮೇರಿಕಾದ ‘ಅಮ್ನೀಸಿಯಾ’ ಬೆಂಗಳೂರಿನಿಂದ ಮಂಗಳೂರಿಗೆ ಬಂದು ತಲುಪಿದೆ. ಒಂದಾಗುವ ಅವಕಾಶ ಮತ್ತು ಮರೆಯುವ ಸನ್ನಿವೇಶಗಳು ಇಲ್ಲಿ ಕೈಜೋಡಿಸುತ್ತವೆ. ಕಲೆಯುವ ಸ್ಥಳ ಮತ್ತು ಕಾಲವು ಇಲ್ಲಿ ಮಧ್ಯಂತರ ಜಗತ್ತೊಂದನ್ನು ನಿರ್ಮಾಣ ಮಾಡುತ್ತದೆ. ‘ಅಮ್ನೀಸಿಯಾ’ದ ಅನಂತರ ಏನನ್ನೂ ಕಾಣದ ಸ್ಥಿತಿಯ ‘ಅಗ್ನೋಸಿಯ’, ಮಾತನ್ನು ಕಳೆದುಕೊಂಡ ಸ್ಥಿತಿಯ ‘ಅಫೇಸಿಯ’, ಬದುಕಿನ ನೈಪುಣ್ಯ ಕಳೆದುಕೊಂಡ ಸ್ಥಿತಿಯ ‘ಅಪ್ರಾಕ್ಸಿಯ’ ಬರಬಾರದು. ಮಬ್ಬಿನಮಂಜು ಕರಗಿ, ಇರುಳ ಕಣ್ಣಿನೆವೆಗಳನು ಬೆಳಕಿನ ಹಸ್ತ ತಡವಬೇಕು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

5 Responses to “ಅಮ್ನೀಸಿಯಾದ ಆನಂತರ: ಮಬ್ಬು ಕರಗುವ ಸಮಯ”

RSS Feed for ಬಿ ಎ ವಿವೇಕ ರೈ Comments RSS Feed

bahalaa chennagi eadghe good luck

Lekhana tumba chennagide. nara douralyad Amnesia gunapadisabahudeno? aadare samskrithika Amnesia ge maddu yelli ?

srinivas deshpande

ದೇಶಪಾಂಡೆ ಅವರಿಗೆ ನಮಸ್ಕಾರ.
ನಿಮ್ಮ ಪ್ರೀತಿಗೆ ಪ್ರತಿಕ್ರಿಯೆಗೆ ಥ್ಯಾಂಕ್ಸ್.

ಮತ್ತೊಮ್ಮೆ ಸ್ಮೃತಿ ವಿಸ್ಮೃತಿಗಳ ವಿಷಯ್ ಪ್ರಸ್ತಪಿಸಿದ್ದಕ್ಕೆ ಒಂದು ಪ್ರತಿಕ್ರಿಯೆ.
ಬಾಲ್ಯದ ನೆನಪು ಹಿಂದೆ ಹೋದಂತೆ ಕಡಿಮೆ. ಆಗ ಕಲಿಯುವುದೂ ಹೆಚ್ಚು. ನೆನಪಿನಲ್ಲೆ ಬದುಕುವ ಮುದಿತನದಲ್ಲಿ ಕಲಿಯುವುದು ಕಡಿಮೆ. ಕಲಿಕೆ ಸಾರಭೂತವಾದದ್ದನ್ನು ಉಳಿಸಿಕೊಂಡು ಬೆಳೆಯುತ್ತದೆ. ನೆನಪನ್ನೆ ಕಲಿಕೆಯೆಂಬ ಅಡ್ಡ ಕಸುಬಿ ಕಲಿಕಾ ಕ್ರಮ ಸಂಪ್ರದಾಯವನ್ನು ಹೇರುತ್ತೆ.
ಇನ್ನೊಂದು ಸಂಗತಿ: ನೆನಪಿನ ಮುಖ್ಯ ಅಂಗ ಭಾಷೆ ನೆನಪನ್ನು ಅರಗಿಸಿಕೊಳ್ಳಲೂ ಸಹಾಯಕ. ಇಂಗ್ಲಿಷಿನಂತಹ ಭಾಷೆ ನೆನಪಿರಲಾಗದ ಕಾಲದಿಂದ ನಿಯಂತ್ರಿಸಿದಾಗ ಅನುಭವ ನೆನಪುಗಳ ಸಂಬಂಧವೇ ತಿರುಚಿಕೊಳ್ಳುತ್ತದೆ. ಸಂಸ್ಕೃತದ ಬಾಯಿಪಾಠದ ಕ್ರಮವೇ ಅದಕ್ಕೆ ಆಧುನಿಕ ಕಾಲದಲ್ಲಿ ಅರ್ಥವಿಸ್ಮೃತಿಗೆ ಅರೆಜೀವಕ್ಕೆ, ಕಾರಣವಾಯಿತು.

ಇಷ್ಟಾಗಿ ದೇಶಭಾಷೆಗಳ ಸಂಸ್ಕೃತದೊಂದಿಗಿನ ಸಂಬಂಧ ಇಂಗ್ಲಿಷಿನ ಸಂಬಂಧದಂತೆ ಅಲ್ಲ. ಬದುಕಿನ ನೈಪುಣ್ಯ ಕಳೆದುಕೊಳ್ಳುವ ಹಂತ ತಲುಪಬಾರದು ನಿಜ. ಆದರೆ ನಮ್ಮ ಕಿರಿಯರ ಹೊಸ ಬದುಕಿನ ಹೊಸ ನೈಪುಣ್ಯಗಳನ್ನು ಅನುಮಾನ ಮತ್ತು ತಿರಸ್ಕಾರದಿಂದ ನೋಡಬೇಕಿಲ್ಲ. ಅವರಿಗೆ ಅಮೇರಿಕದ ಮಕ್ಕಳಿಗಾದಂತೆ ಕನ್ನಡದ ಮಾತು ಸಂಸ್ಕೃತದಷ್ಟೆ ’ಮಂತ್ರವಾಗಬಾರದಷ್ಟೆ’. ಜತೆಗೆ ಮಂತ್ರದ ಮಾಟಕೂಡ ಒಂದು ಸಂಕೀರ್ಣ ಆಮ್ನೀಷಿಯ ಪ್ರಕ್ರಿಯೆ.

ತುಂಬಾ ಮುಖ್ಯವಾದ ವಿಷಯಗಳನ್ನು ಪ್ರಸ್ತಾವಿಸಿದ್ದೀರಿ.ಇದನ್ನು ಇನ್ನಷ್ಟು ಬೆಳಸಬಹುದು.ಮಾಹಿತಿಗಾಗಿ ಥ್ಯಾಂಕ್ಸ್.


Where's The Comment Form?

Liked it here?
Why not try sites on the blogroll...

%d bloggers like this: