ಜರ್ಮನ್ ಕತೆಗಾರ ಹೀನ್ರಿಶ್ ಕ್ಲೆಯಿಸ್ಟ್: ಕ್ರೂರ ದೇವರ ವಿರುದ್ಧ ದಂಗೆ

Posted on ಮಾರ್ಚ್ 20, 2010. Filed under: Uncategorized |


ಜರ್ಮನ್ ಕತೆಗಾರ ಕವಿ ಹೀನ್ರಿಶ್ ಕ್ಲೆಯಿಸ್ಟ್ (೧೮ ಅಕ್ಟೋಬರ್ ೧೭೭೭-೨೧ ನವಂಬರ್ ೧೮೧೧) ಫ್ರಾಂಕ್ ಫಾರ್ಟಿನ ಪರಂಪರಾಗತ ಶ್ರೀಮಂತ ಕುಟುಂಬದಲ್ಲಿ ಜನಿಸಿದವನು. ಬರ್ಲಿನಿನಲ್ಲಿ ಖಾಸಗಿ ಶಿಕ್ಷಣ ಪಡೆದು , ಸಂಗೀತದಲ್ಲಿ ಆಸಕ್ತಿ ಇದ್ದರೂ ಹದಿನೈದನೆಯ ವಯಸ್ಸಿನಲ್ಲಿಯೇ ತನ್ನ ತಂದೆಯಂತೆ ಸೈನ್ಯಕ್ಕೆ ಸೇರಿಕೊಂಡ. ಅನೇಕ ಯುದ್ಧಗಳಲ್ಲಿ ಸಕ್ರಿಯವಾಗಿ ಪಾಲುಗೊಂಡರೂ ಸೈನ್ಯದ ಬದುಕನ್ನು ಇಷ್ಟ ಪಡದ ಕ್ಲೆಯಿಸ್ಟ್ ೧೭೯೦ರಲ್ಲಿ ನಾಗರಿಕ ಸಮಾಜದಲ್ಲಿ ತನ್ನ ಸ್ಥಾನವನ್ನು ಪಡೆಯಲು ಪ್ರಯತ್ನ ನಡೆಸಿದ.

ಫ್ರಾಂಕ್ ಫಾರ್ಟ್ ವಿವಿಯಲ್ಲಿ ಸ್ವಲ್ಪ ಕಾಲ ಅಧ್ಯಯನ ಮಾಡಿದ ಆತ , ೧೮೦೧ರಲ್ಲಿ ತತ್ವಜ್ಞಾನಿ ಕಾಂಟ್ನನ್ನು ಓಡುತ್ತಲೇ ತನ್ನ ಆಲೋಚನೆಯ ಕ್ರಮವನ್ನೇ ಬದಲಾಯಿಸಿಕೊಂಡ. ಬದುಕಿನ ಅಸ್ತಿತ್ವ ದ  ಶೋಧದ ಕುರಿತು ವಿಶೇಷವಾಗಿ ಚಿಂತನೆ ನಡೆಸಿದ ಕ್ಲೆಯಿಸ್ಟ್ ೧೮೦೭ರಲ್ಲಿ ‘ಬ್ರೋಕನ್ ಪಿಕ್ಚರ್ ‘ಎನ್ನುವ ಜನಪ್ರಿಯ ಕಾಮೆಡಿ ರಚಿಸಿದ. ಇದು ಆ ಕಾಲದ ಮಹತ್ವದ ಲೇಖಕನಾದ ಗಯತೆಯ ಗಮನ ಸೆಳೆಯಿತು. ೧೮೦೭ರಲ್ಲಿ ಪ್ರಸ್ಸಿಯಕ್ಕೆ ಹಿಂದಿರುಗಿದ ಕ್ಲೆಯಿಸ್ಟ್ ನನ್ನು ಗೂಢಚಾರ ಎಂದು ತಪ್ಪಾಗಿ ಭಾವಿಸಿ ದಸ್ತಗಿರಿ ಮಾಡಿದರು.ಆತ ಫ್ರಾನ್ಸಿನಲ್ಲಿ ಆರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ. ಆವೇಳೆಗೆ ಆತನ ಮಹತ್ವದ ಟ್ರಾಜೆಡಿ ಕೃತಿ Penthesilea (1807)  ರಚನೆ ಆಯಿತು.ಭಾವನಾತ್ಮಕ ಮತ್ತು ಬೌದ್ಧಿಕ ಸಂಘರ್ಷದ ಈ ಮನೋವೈಜ್ಞಾನಿಕ ಕೃತಿಯು ಮಿದುಳಿನ ಸಂರಚನೆಯ ನಿಯಮಗಳಿಗೆ ವಿರುದ್ಧವಾಗಿತ್ತು.

ಕ್ಲೆಯಿಸ್ಟ್ ನ ಮೊದಲ ಸಣ್ಣಕತೆ ‘Das Erdbeben in Chili’ ( ಚಿಲಿಯಲ್ಲಿ ಭೂಕಂಪ ) -೧೮೦೭. ಜರ್ಮನಿಗೆ ಹಿಂದಿರುಗಿದ ಕ್ಲೆಯಿಸ್ಟ್ ,ಫೋಬಸ್ ಎನ್ನುವ ಸಾಹಿತ್ಯ ಪತ್ರಿಕೆಯನ್ನು ಸಹಯೋಗದಲ್ಲಿ ಆರಂಭಿಸಿದ. ಅದರಲ್ಲಿ ಆತನ ನಾಟಕ ಮತ್ತು ಸಣ್ಣ ಕತೆಗಳು ಪ್ರಕಟವಾದುವು.ಆದರೆ ಆರ್ಥಿಕವಾಗಿ ಸೋತ ಕಾರಣ ಆ ಪತ್ರಿಕೆ ಮುಂದುವರಿಯಲಿಲ್ಲ.೧೮೦೯ರ  ಏಪ್ರಿಲಿನಲ್ಲಿ ಯುದ್ಧ ಆರಂಭವಾಯಿತು, ನೆಪೋಲಿಯನ್ ಗೆ ಮೊದಲ ಹಿನ್ನಡೆ ಉಂಟಾಯಿತು. ಒಂದು ವರ್ಷದ ಬಳಿಕ ಕ್ಲೆಯಿಸ್ಟ್ ತನ್ನ ಕೊನೆಯ ನಾಟಕ ‘Prinz Friedrich von Homburg’ ವನ್ನು ಪೂರ್ಣ ಮಾಡಿದ.ಇದು ವ್ಯಕ್ತಿ ಮತ್ತು ಸಮಾಜಗಳ ಸಂಘರ್ಷವನ್ನು ವಸ್ತುವಾಗಿ ಉಳ್ಳದ್ದು.೧೮೦೮-೧೮೧೦ರ ಅವಧಿಯಲ್ಲಿ ಕ್ಲೆಯಿಸ್ಟ್ ಅನೇಕ ಕತೆಗಳನ್ನು ಬರೆದ. ಅವುಗಳಲ್ಲಿ ಮುಖ್ಯವಾದವು : Die Marquise von O-(The Marquise of O-0 ,Der  Findling( The Foundling).

‘ಚಿಲಿಯಲ್ಲಿ ಭೂಕಂಪ’ ಕ್ಲೆಯಿಸ್ಟ್ ನ ಮಹತ್ವಾಕಾಂಕ್ಷೆಯ ಕೃತಿ.ಇದರ ಕುರಿತು ಸಾಕಷ್ಟು ಚರ್ಚೆ ನಡೆದಿದೆ. ಕ್ಲೆಯಿಸ್ಟ್ ನ ಗಮನವಿದ್ದದ್ದು ಭೂಕಂಪದಲ್ಲಲ್ಲ. ಅದರ ಪರಿಣಾಮವಾಗಿ ನಿರ್ಮಾಣವಾದ ಮನುಷ್ಯ ಸಂಬಂಧಗಳ ಬಗ್ಗೆ. ಸಾವಿರಾರು ಮಂದಿಯ ಸಾವಿಗೆ ಕಾರಣವಾದ ಭೂಕಂಪವೊಂದು ಇಬ್ಬರು ಪ್ರೇಮಿಗಳ ಜೀವವನ್ನು ಉಳಿಸಿದ ಪವಾಡ ಸದೃಶ ಘಟನೆ  ಇಲ್ಲಿ ಮುಖ್ಯವಾಗುತ್ತದೆ. ಪ್ರಾಕೃತಿಕ ಅನಾಹುತಕ್ಕಿಂತ ಧರ್ಮದ ಕಾನೂನು ಕಟ್ಟಳೆಗಳ ಹೆಸರಿನಲ್ಲಿ ಮನುಷ್ಯರು ಮತ್ತು ಸಂಸ್ಥೆಗಳು ನಡೆಸುವ ಕ್ರೌರ್ಯ ಇಲ್ಲಿ ಭಯಾನಕವಾಗಿದೆ. ಕೆಥೆದ್ರಲ್ ನಲ್ಲಿ ಪ್ರಣಯಿಗಳ ಮೇಲೆ ಮಾಡುವ ಆಕ್ರಮಣಶೀಲ ಜನರ ಬರ್ಬರತೆ ಭೂಕಂಪದ ಆಘಾತಕ್ಕಿಂತ ಹೆಚ್ಚಿನದು ಎನ್ನುವ ಧ್ವನಿ ಈ ಕತೆಯಲ್ಲಿದೆ. ಅದು ದುಖವೆ ? ಕ್ರೂರ ದೇವರ ವಿರುದ್ಧ ದಂಗೆಯೆ ? ಅಂತಹ ಮನುಷ್ಯ ನಿರ್ಮಿತ ಭಯಾನಕ ಸನ್ನಿವೇಶವನ್ನು ಎದುರಿಸಲಾಗದ ಭಯವೇ ? ಹೀಗೆ ಅನೇಕ ಪ್ರಶ್ನೆಗಳನ್ನು ಈ ಕತೆಯ ಮೂಲಕ ಕೇಳಬಹುದು.

ಕ್ಲೆಯಿಸ್ಟ್ ನ ನಾಟಕ ಮತ್ತು ಕತೆಗಳಲ್ಲಿ ಮನುಷ್ಯ ನಿರ್ಮಿತ ವ್ಯವಸ್ಥೆಗಳು ತೀವ್ರ ಟೀಕೆಗೆ ಒಳಗಾಗುತ್ತವೆ. ‘ಚಿಲಿಯಲ್ಲಿ ಭೂಕಂಪ’ ಕತೆಯಲ್ಲಿ ಚರ್ಚ್ ಅತ್ಯಂತ ಕ್ರೂರ ಸಂಸ್ಥೆ ಆಗಿ ಚಿತ್ರಿತವಾಗಿದೆ. ಮಗುವೊಂದು ಬದುಕಿ ಉಳಿಯುವ ಆಶಾಕಿರಣದೊಂದಿಗೆ ಈ ಕತೆ ಕೊನೆಯಾಗುತ್ತದೆ.

ಕ್ಲೆಯಿಸ್ಟ್ ನ ಖಿನ್ನತೆಯ ಜಗತ್ತು ,ತಮ್ಮ ಗ್ರಹಿಕೆ ಮತ್ತು ನಿಯಂತ್ರಣಕ್ಕೆ ಮೀರಿದ ಸನ್ನಿವೇಶದ ಬಂಧಿಗಳಾದ ವ್ಯಕ್ತಿಗಳಿಂದ ತುಂಬಿಕೊಂಡಿದೆ. ಫ್ರೆಂಚ್ ಕ್ರಾಂತಿ ಮತ್ತು ನೆಪೋಲಿಯನ್ ಯುದ್ಧಗಳಿಂದ ನಿರ್ಮಾಣವಾದ ಅರಾಜಕತೆಯ ಗೊಂದಲದ ಸ್ಥಿತಿಯನ್ನು ಕ್ಲೆಯಿಸ್ಟ್ ನ ಕತೆಗಳು ಪ್ರತಿನಿಧೀಕರಿಸುತ್ತವೆ. ಸಾಹಿತ್ಯ ಭಾಷೆಯ ಬಳಕೆಯಲ್ಲಿ ಕ್ಲೆಯಿಸ್ಟ್ ನದ್ದು ಅಸಾಧಾರಣ ಶೈಲಿ. ಸಂಕೀರ್ಣ ವಾಕ್ಯರಚನೆಗಳು , ಕ್ರಿಯಾ ವಿಶೇಷಣಗಳ ನುಡಿಗಟ್ಟುಗಳು, ಕೊನೆಯಿಲ್ಲದ ಪೂರಕ ಪದ ವೃಂದಗಳು -ಹೀಗೆ ಕಥನ ಶೈಲಿಯಲ್ಲಿ ಕಾಫ್ಕಾನನ್ನು ಹೋಲುತ್ತಾನೆ. ವಿಮರ್ಶಕರು ಹೇಳುವಂತೆ , ಕ್ಲೆಯಿಸ್ಟ್ ನ ಸಾಹಿತ್ಯಕ ಭೂತವು ಕಿರ್ಕೆಗಾರ್ಡ್, ಕಾಫ್ಕ ,ಥಾಮಸ್ ಮಾನ್ ,ಕಮೂ ಮತ್ತು ಅಸಂಗತ ರಂಗಭೂಮಿಯಲ್ಲಿ ಉಳಿದುಕೊಂಡು ಜೀವಂತವಾಗಿದೆ.

ಬದುಕಿನಲ್ಲಿ ಅನೇಕ ದುರಂತಗಳನ್ನು ಕಂಡ ಕ್ಲೆಯಿಸ್ಟ್ ಎಂದೂ ನಿರಾಳ ಮನುಷ್ಯ ಆಗಿರಲಿಲ್ಲ. ಖಿನ್ನತೆಗೆ ಒಳಗಾದ ಆತ ಅನೇಕ ಕಲಾತ್ಮಕ ಕೃತಿಗಳನ್ನು ರಚಿಸಿದರೂ ತನ್ನ ಮನಸ್ಸಿನ ಮೇಲೆ ಹತೋಟಿಯನ್ನು ಇಟ್ಟುಕೊಳ್ಳಲು ಸಾಧ್ಯ ಆಗಲಿಲ್ಲ. ಗರ್ಭಕೋಶದ ಕ್ಯಾನ್ಸರ್ ನಿಂದ ನರಳುತ್ತಿದ್ದ ವಿವಾಹಿತ ಹೆಂಗುಸು ಹೆನ್ರೀತ್ತೆ ವೋಗೆಲ್ ಳ ಕೋರಿಕೆಯಂತೆ ೧೮೧೧ರ ನವಂಬರ ೨೧ರ ಬೆಳಗ್ಗೆ ಅವಳನ್ನು ಗುಂಡಿಕ್ಕಿ ಕೊಂದ ಕ್ಲೆಯಿಸ್ಟ್ , ಬಳಿಕ ತನ್ನನ್ನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ . ಸಾಯುವ ಮೊದಲು ತಂಗಿ ಉಲ್ರೀಕೆಗೆ ಕ್ಲೆಯಿಸ್ಟ್ ಬರೆದ ಪತ್ರದಲ್ಲಿ ಈ ಮಾತು ಗುಂಡಿನಂತೆ ಅನುರಣಿಸುತ್ತಿತ್ತು : ‘ ಈ ಭೂಮಿಯಲ್ಲಿ ನನಗೆ ಯಾವುದೇ ಸಹಾಯ ಎನ್ನುವುದು ಇರಲಿಲ್ಲ.’

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಜರ್ಮನ್ ಕತೆಗಾರ ಹೀನ್ರಿಶ್ ಕ್ಲೆಯಿಸ್ಟ್: ಕ್ರೂರ ದೇವರ ವಿರುದ್ಧ ದಂಗೆ”

RSS Feed for ಬಿ ಎ ವಿವೇಕ ರೈ Comments RSS Feed

ಸರ್ ಮಾಹಿತಿಗಾಗಿ ಧನ್ಯವಾದಗಳು. ಇವರ ನಾಟಕಗಳು ಮತ್ತು ಸಣ್ಣ ಕಥೆಗಳು ಕನ್ನಡದಲ್ಲಿ ಲಬ್ಯವಿರುವುದೇ?

ಥ್ಯಾಂಕ್ಸ್.ಕನ್ನಡದಲ್ಲಿ ಬಂದಿಲ್ಲ.ಒಂದು ಕತೆಯನ್ನು ಈಗ ತಾನೇ ಅನುವಾದ ಮಾಡಿ ಮುಗಿಸಿದ್ದೇನೆ.ಮುಂದೆ ನನ್ನ ಬ್ಲಾಗಿನಲ್ಲಿ ಹಾಕುತ್ತೇನೆ.


Where's The Comment Form?

Liked it here?
Why not try sites on the blogroll...

%d bloggers like this: