ತಂತಮ್ಮ ನುಡಿಯೊಳೆಲ್ಲರ್ ಜಾಣರ್

Posted on ಮಾರ್ಚ್ 17, 2010. Filed under: ಇರುಳ ಕಣ್ಣು |


ಈ ಲೇಖನ ನಾನು ಬರೆದದ್ದು 30 ಜನವರಿ, 2009 ರಲ್ಲಿ. ಆದರೆ ಶಾಸ್ತ್ರೀಯ ಭಾಷೆಗೆ ಬೇಕಾದ ಸವಲತ್ತುಗಳ ಬಗ್ಗೆ ಮೊನ್ನೆ ಮೊನ್ನೆ ನಿಯೋಗವೊಂದು ದೆಹಲಿಗೆ ಹೋಗಿ ಮನವಿ ಸಲ್ಲಿಸಿ ಬಂದಿದೆ.

ಈ ಹಿನ್ನೆಲೆಯಲ್ಲಿ ನಾನು ಆಗ ಬರೆದಿದ್ದ ಲೇಖನ ಮತ್ತೊಂದು ಓದಿಗೆ ಅರ್ಹವೇನೋ ಎಂದು ಇಲ್ಲಿ ನೀಡುತ್ತಿದ್ದೇನೆ

ತಂತಮ್ಮ ನುಡಿಯೊಳೆಲ್ಲರ್ ಜಾಣರ್ :

ಇಸಿಲದಿಂದ ಬ್ಲಾಗ್ ವರೆಗೆ

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮಾನ್ಯತೆಯ ಕೇಂದ್ರ ಸರ್ಕಾರದ ಪೋಷಣೆಯಾಗಿ ತಿಂಗಳುಗಳು ಕಳೆದರೂ ಅದಕ್ಕೆ ಸಂಬಂಧಿಸಿದ ಅನಿಶ್ಚಿತತೆ ಹಾಗೆಯೇ ಮುಂದುವರೆದಿದೆ. ಚೆನ್ನೈ ಕೋರ್ಟ್ ನಲ್ಲಿ ತಮಿಳುಗಾಂಧಿಯ ತಕರಾರು ಒಂದೆಡೆಯಾದರೆ, ಶಾಸ್ತ್ರೀಯ ಭಾಷೆಯಾಗಿ ಕನ್ನಡಕ್ಕೆ ಏನು ಮಾಡಬೇಕು ಎನ್ನುವ ಸ್ಪಷ್ಟ ಕಲ್ಪನೆ ಇಲ್ಲದಿರುವುದು ಇನ್ನೊಂದೆಡೆ.  ಕರ್ನಾಟಕ  ಸರ್ಕಾರದ ಮುಖ್ಯಮಂತ್ರಿಗಳು ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಕೆಲಸಗಳಿಗಾಗಿ 25 ಕೋಟಿ ರೂಪಾಯಿಗಳ ವಿಶೇಷ ಅನುದಾನದ ಕೊಡುಗೆಯನ್ನು ಕೊಟ್ಟಿದ್ದಾರೆ. ಶಾಸ್ತ್ರೀಯ ಭಾಷೆ ಎಂದರೆ ಏನು ಎನ್ನುವ ವ್ಯಾಖ್ಯೆಯಿಂದ ತೊಡಗಿ, ಕನ್ನಡ ಭಾಷೆಗೆ ಈ ಸ್ಥಾನಮಾನ ದೊರೆಯುವುದರಿಂದ ಆಗುವ ಲಾಭನಷ್ಟಗಳವರೆಗೆ ಮಾತು ಮತ್ತು ಬರಹದಲ್ಲಿ ಸಾಕಷ್ಟು ವಾದವಿವಾದಗಳು ನಡೆದಿವೆ.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ನಾನು 2004 ಸೆಪ್ಟೆಂಬರ್ನಲ್ಲಿ ಕಾರ್ಯಾರಂಭ ಆರಂಭಿಸುವ ವೇಳೆಗೆ ಕನ್ನಡಕ್ಕೆ ಸಂಬಂಧಿಸಿದಂತೆ ಎರಡು ವಿಷಯಗಳ ಕುರಿತು ಸಾರ್ವಜನಿಕ ಚರ್ಚೆ ನಡೆಯುತ್ತಿತ್ತು. ಒಂದು, ತಮಿಳಿನಂತೆ ಕನ್ನಡಕ್ಕೂ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಸಿಗಬೇಕು ಎನ್ನುವ ಹಕ್ಕೊತ್ತಾಯ. ಎರಡನೆಯದು, ಕನ್ನಡ ತಂತ್ರಾಂಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳು ಕಾರ್ಯಪ್ರವೃತ್ತರಾಗಬೇಕು ಎನ್ನುವ ಕೋರಿಕೆ.  ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಎರಡು ವಿಷಯಗಳನ್ನು ಗಮನಿಸಿಕೊಂಡು, ಕುಲಪತಿಯ ಆರಂಭದ ಸಹಜ ಉತ್ಸಾಹದಲ್ಲಿ ಇದನ್ನು ಕನ್ನಡ ವಿಶ್ವವಿದ್ಯಾನಿಲಯ ಕೈಗೊಳ್ಳುತ್ತದೆ ಎಂದು ಹೇಳಿದೆ.  ನನ್ನ ಮಾತಿನ ಪತ್ರಿಕಾ ವರದಿಗೆ ತತ್ಕ್ಷಣದ ಪ್ರತಿಕ್ರಿಯೆ ಬಂದದ್ದು ಪೂರ್ಣಚಂದ್ರ ತೇಜಸ್ವಿ ಅವರಿಂದ. ತೇಜಸ್ವಿ ಅವರು ದೂರವಾಣಿ ಮಾಡಿ, ಕನ್ನಡ ಶಾಸ್ತ್ರೀಯ ಭಾಷೆಯಂತಹ ನಿಷ್ಪ್ರಯೋಜಕ ವಿಷಯಗಳಿಗೆ ಗಮನ ಕೊಡುವ ಬದಲು ಕಂಪ್ಯೂಟರ್ ನಲ್ಲಿ ಕನ್ನಡದ ಸಮರ್ಪಕ ಬಳಕೆಯ ದೃಷ್ಟಿಯಿಂದ ಕನ್ನಡ ತಂತ್ರಾಂಶ ಅಭಿವೃದ್ಧಿಯನ್ನು ಕನ್ನಡ ವಿಶ್ವವಿದ್ಯಾಲಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರ್ಶಿಯನ್, ಅರೇಬಿಕ್, ಸಂಸ್ಕೃತ, ಗ್ರೀಕ್, ಲ್ಯಾಟಿನ್ನಂತಹ ಭಾಷೆಗಳಂತೆ ಪ್ರಾಚೀನಕಾಲಕ್ಕೆ ಸೀಮಿತವಾಗಿದೆ. ಆಧುನಿಕ ಕಾಲದಲ್ಲೂ ಜೀವಂತವಾಗಿರುವ, ಕ್ರಿಯಾತ್ಮಕವಾಗಿರುವ ಭಾಷೆಗಳನ್ನು ಶಾಸ್ತ್ರೀಯ ಭಾಷೆಗಳೆಂದು ಕರೆಯಬಹುದೇ ಎನ್ನುವ ಚರ್ಚೆ ಕನ್ನಡದಲ್ಲಿ ನಡೆದಿದೆ. ನಾನು ಮತ್ತು ಭಾಷಾತಜ್ಞರಾದ ಡಾ.ಕೆ.ವಿ.ನಾರಾಯಣ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಸಿದ್ಧಪಡಿಸಿದ ಪ್ರಸ್ತಾವನೆಯಲ್ಲಿ ಕನ್ನಡವನ್ನು ‘ಒಂದು ಜೀವಂತ ಶಾಸ್ತ್ರೀಯ ಭಾಷೆ’ ಎಂದು ಕರೆದೆವು. ಇದೊಂದು ಹೊಸ ಪರಿಭಾಷೆ. ಪ್ರಾಚೀನತೆಯುಳ್ಳ ಮತ್ತು ಪ್ರಭಾವಶಾಲಿಯಾಗಿರುವ ಕನ್ನಡ ಭಾಷೆಯು ಮೂರು ಸಹಸ್ರಮಾನಗಳ ಅವಧಿಯ ವಿಸ್ತಾರವನ್ನು ಹೊಂದಿರುವ ಭಾಷೆ. ಭಾರತದ ಭಾಷೆಗಳಲ್ಲಿ ಕನ್ನಡ ಮತ್ತು ತಮಿಳು – ಈ ಎರಡು ಭಾಷೆಗಳು ಮಾತ್ರ ಮೂರು ಸಹಸ್ರಮಾನಗಳ ದೀರ್ಘಾವಧಿಯ ಹರಹು ಉಳ್ಳ ಜೀವಂತ ಶಾಸ್ತ್ರೀಯ ಭಾಷೆಗಳು.

ತೇಜಸ್ವಿ ಅವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ ಹಾಸನದ ತರುಣ ತಂತ್ರಜ್ಞರಾದ ಆನಂದ, ಮಂಜಾಚಾರಿ, ಸುಧೀರ್ಘ ಕ್ರಿಯಾಶೀಲತೆಯಿಂದ ಡಾ.ಚಿದಾನಂದಗೌಡ ಮತ್ತು ಡಾ.ಟಿ.ಎನ್.ನಾಗಭೂಷಣರ ಪರಿಶೀಲನೆಯೊಂದಿಗೆ ಕುವೆಂಪು ಕನ್ನಡ ತಂತ್ರಾಂಶದ ರೂಪೀಕರಣವನ್ನು ಕನ್ನಡ ವಿಶ್ವವಿದ್ಯಾಲಯ, ಹಂಪಿಯು ಕೈಗೆತ್ತಿಕೊಂಡಿತು. ಕುವೆಂಪು ಕನ್ನಡ ತಂತ್ರಾಂಶದ 1.0 ಆವೃತ್ತಿ 2007ರಲ್ಲಿ ಬಿಡುಗಡೆಯಾಯಿತು. (www.kannadauniversity.org) ಅದರ ಮುಂದಿನ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲಿ ತೇಜಸ್ವಿ ನಮ್ಮನ್ನು ಅಗಲಿದರು. ಅದರ ಮುಂದುವರಿಕೆ ಸಾಧ್ಯವಾಗಲಿಲ್ಲ. ಈಗ ಕರ್ನಾಟಕ ಸರ್ಕಾರ ಡಾ. ಚಿದಾನಂದಗೌಡರ ಅಧ್ಯಕ್ಞತೆಯಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಗೆ ತಜ್ಞರ ಸಮಿತಿಯೊಂದನ್ನು ರಚಿಸಿರುವುದು ತುಂಬಾ ಮುಖ್ಯವಾದ ಬೆಳವಣಿಗೆ. ಒಂದೆಡೆ ಶಾಸ್ತ್ರೀಯ ಭಾಷೆಯಾಗಿ ಕನ್ನಡಕ್ಕೆ ಮಾನ್ಯತೆ ಬಂದ ಸಂದರ್ಭದಲ್ಲಿ ಕನ್ನಡಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳಿಗಾಗಿ ಕರ್ನಾಟಕ ಸರ್ಕಾರ 25 ಕೋಟಿಗಳ ಅನುದಾನ ಕೊಡುತ್ತಿದೆ. ಇನ್ನೊಂದೆಡೆ ತಂತ್ರಜ್ಞಾನದ ಭಾಷೆಯಾಗಿ ಕನ್ನಡವನ್ನು ಅಭಿವೃದ್ಧಿಗೊಳಿಸಲು ಕನ್ನಡ ತಂತ್ರಾಂಶ ನಿರ್ಮಾಣದ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿದೆ. ಇವೆರಡೂ ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಎರಡು ಮುಖ್ಯ ಹೆಜ್ಜೆಗಳು.

ಈ ಎರಡು ನೆಲೆಗಳಲ್ಲಿ ಕನ್ನಡದ ಅಭಿವೃದ್ಧಿಯ ಅನುಷ್ಠಾನ ಹೇಗಾಗಬೇಕು ಎನ್ನುವುದನ್ನು ನಮ್ಮ ವಿಶ್ವವಿದ್ಯಾನಿಲಯಗಳು, ಕನ್ನಡಪರ ಸಂಸ್ಥೆಗಳು, ತಜ್ಞರು ಗಂಭೀರವಾಗಿ ಪರಿಗಣಿಸಿ ಕಾರ್ಯಪ್ರವೃತ್ತರಾಗಬೇಕು. ಕನ್ನಡಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯ ಕರ್ನಾಟಕ. ಕನ್ನಡಕ್ಕಾಗಿ ಪ್ರತ್ಯೇಕವಾದ ಕನ್ನಡ ಸಂಸ್ಕೃತಿ ಇಲಾಖೆ, ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, 13 ಅಕಾಡೆಮಿಗಳು ನಮ್ಮ ರಾಜ್ಯದಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ತು ಇದೆ. ರಾಜ್ಯದ ಒಳಗೆ ಹೆಚ್ಚಿನ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ವಿಭಾಗಗಳಿವೆ. ಕನ್ನಡಕ್ಕಾಗಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಹೀಗೆ ನೋಡಿದರೆ, ಕನ್ನಡದ ಕೆಲಸಕ್ಕಾಗಿ ಸುಮಾರು 50ರಷ್ಟು ಅಧಿಕೃತವಾದ ಶೈಕ್ಷಣಿಕ ಸಂಸ್ಥೆಗಳು ನಮ್ಮಲ್ಲಿವೆ. ಹಾಗಿದ್ದೂ, ಕನ್ನಡಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಅಭಿವೃದ್ಧಿಯ ಕೆಲಸಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಯಾಕೆ ಸಿಗಬೇಕು ಎನ್ನುವ ವರದಿಯನ್ನು ಸಿದ್ಧಪಡಿಸುವಾಗಲೆಲ್ಲ, ನಾವು ಬಹುತೇಕವಾಗಿ ಅವಲಂಬಿಸಿರುವುದು ನಮ್ಮ ಹಿರಿಯ ವಿದ್ವಾಂಸರು ಬಹಳ ಹಿಂದೆ ಸಿದ್ಧಪಡಿಸಿದ ಆಕರಗಳನ್ನು. ಗೋವಿಂದ ಪೈ, ಡಿ.ಎಲ್. ನರಸಿಂಹಾಚಾರ್, ಎಂ.ಚಿದಾನಂದ ಮೂರ್ತಿ ಅವರಂತಹ ನಮ್ಮ ಹಿರಿಯ ಸಂಶೋಧಕರ ಪರಿಶ್ರಮದಿಂದ ಶೋಧಿಸಿದ ಸಂಗತಿಗಳನ್ನೇ ನಾವು ಮತ್ತೆ ಮತ್ತೆ ಬಳಸುತ್ತಾ ಬಂದಿದ್ದೇವೆ. ಕಳೆದ 50 ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ನಮ್ಮ ಸೇರ್ಪಡೆ ಎನ್ನುವುದು ಹೇಳಿಕೊಳ್ಳುವಂತಹದ್ದು ಏನೂ ಇಲ್ಲ.

ಪ್ರೊ. ಎಸ್. ಶೆಟ್ಟರ್ ಅವರ ‘ಸಂಗಂ ತಮಿಳಗಂ’ ಒಂದು ಮಾತ್ರ ಇತ್ತೀಚೆಗಿನ ಮಹತ್ವದ ಸೇರ್ಪಡೆ. ಪ್ರಾಚೀನತೆಯೊಂದೇ ಒಂದು ಭಾಷೆಯ ಶ್ರೇಷ್ಠತೆಯನ್ನು ಅಳೆಯುವ ಮಾನದಂಡ ಅಲ್ಲ ಎಂದು ಒಪ್ಪಿಕೊಂಡರೂ ಸಂಶೋಧನೆಯ ಮೂಲಕ ನಿಜವಾಗಿಯೂ ಕನ್ನಡಕ್ಕೆ ಇದ್ದ ಪರಂಪರೆಯ ಶಕ್ತಿಯನ್ನು ಮತ್ತು ಸೊತ್ತನ್ನು ಅನಾವರಣ ಮಾಡಬೇಕಾದುದು ನಮ್ಮ ತತ್ಕ್ಷಣದ ಕರ್ತವ್ಯ. ಈ ದೃಷ್ಟಿಯಿಂದ ಕನ್ನಡದ ಆರಂಭದ ಹಂತದ ಭಾಷಾ ಬಳಕೆ ಮತ್ತು ಸಾಹಿತ್ಯ ರಚನೆಗೆ ಶಾಸ್ತ್ರೀಯ ಭಾಷೆಗಳಾದ ಸಂಸ್ಕೃತ, ಪ್ರಾಕೃತ, ಪರ್ಷಿಯನ್  ಮತ್ತು ಅರೇಬಿಕ್ ಭಾಷೆಗಳ ಸಂಬಂಧವನ್ನು ಶೋಧಿಸುವ ಅಗತ್ಯವಿದೆ.

ಕನ್ನಡ ಸಾಹಿತ್ಯದ ಆರಂಭದ ಘಟ್ಟದಲ್ಲಿ ಜೈನ ಮತ್ತು ಬೌದ್ಧ ಧರ್ಮಗಳು ಬೀರಿದ ಪ್ರಭಾವ ಮತ್ತು ಪ್ರೇರಣೆ ಮತ್ತು ಆಗ ನಿರ್ಮಾಣವಾದ ಸಾಹಿತ್ಯ, ಇವನ್ನು ಮರುಶೋಧಿಸಲು ಪ್ರಾಕೃತ ಭಾಷೆಗಳ ಅಧ್ಯಯನ ತುಂಬಾ ಮುಖ್ಯ. ಅಪಭ್ರಂಶ, ಶೌರಸೇನಿ, ಅರ್ಧಮಾಗಧಿ ಮತ್ತು ಪಾಲಿಯಂತಹ ಪ್ರಾಕೃತ ಭಾಷೆಗಳು ಕನ್ನಡದ ಜೊತೆಗೆ ಹೊಂದಿದ್ದ ಸಂಬಂಧವನ್ನು ಕೂಲಂಕಷವಾಗಿ ಶೋಧಿಸಬೇಕಾಗಿದೆ. ಟಿ.ಎಸ್. ವೆಂಕಣ್ಣಯ್ಯನವರು ಕನ್ನಡದಲ್ಲಿ ಬೌದ್ಧ ಸಾಹಿತ್ಯ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರ ನಮಗೆ ಇನ್ನೂ ಸಿಕ್ಕಿಲ್ಲ. ಆ.ನೇ.ಉಪಾಧ್ಯೆ ಅವರ ಬಳಿಕ ಹಂಪನಾ ಅವರು ಬಹುಮಟ್ಟಿಗೆ ಏಕಾಂಗಿಯಾಗಿ ಪ್ರಾಚೀನ ಜೈನ ಸಾಹಿತ್ಯದ ಶೋಧವನ್ನು ನಡೆಸುತ್ತಿದ್ದಾರೆ. ಪ್ರಾಕೃತ ಭಾಷೆಗಳನ್ನು ಕಲಿಸಿ, ತರಬೇತಿ ಕೊಟ್ಟು, ಸಂಶೋಧಕರ ತಂಡವೊಂದನ್ನು ನಿರ್ಮಾಣ ಮಾಡಿದರೆ, ಕನ್ನಡ ಭಾಷೆಗೆ ಸಂಬಂಧಿಸಿದ ಅನೇಕ ಅಪೂರ್ವ ಸಂಗತಿಗಳನ್ನು ಅನಾವರಣ ಮಾಡಬಹುದು. ಶ್ರವಣಬೆಳಗೊಳದಲ್ಲಿ ಪ್ರಾಕೃತ ಭಾಷೆಯ ಅಧ್ಯಯನಕ್ಕೆ ಒಂದು ರಾಷ್ಟ್ರೀಯ ಸಂಸ್ಥೆ ಇದೆ. ನಮ್ಮ ಕರ್ನಾಟಕದ ಒಂದೆರಡು ವಿಶ್ವವಿದ್ಯಾನಿಲಯಗಳಲ್ಲಾದರೂ ಪ್ರಾಕೃತ ಭಾಷೆಗಳ ಅಧ್ಯಯನ ಮತ್ತು ಅನುವಾದಕ್ಕೆ ಅವಕಾಶ ಕಲ್ಪಿಸುವುದರಿಂದ ಕನ್ನಡಕ್ಕೆ ಹೆಚ್ಚಿನ ನೆಲೆ ಮತ್ತು ಶಕ್ತಿ ಬರುತ್ತದೆ.

ಕರ್ನಾಟಕದೊಂದಿಗೆ ಪ್ರಾಚೀನ ಸಂಬಂಧವನ್ನು ಹೊಂದಿರುವ ಶಾಸ್ತ್ರೀಯ ಭಾಷೆಗಳು ಗ್ರೀಕ್, ಪರ್ಷಿಯನ್ ಮತ್ತು ಅರೇಬಿಕ್. ಕರ್ನಾಟಕದ ಕರಾವಳಿಯೊಂದಿಗೆ ವ್ಯಾಪಾರದ ಸಂಬಂಧದಿಂದ ಆರಂಭವಾದ ಈ ಭಾಷೆಗಳ ಕೊಳುಕೊಡೆ ಅನೇಕ ಅಪೂರ್ವ ಒಗಟುಗಳನ್ನು ಬಿಡಿಸಲು ನೆರವಾಗಬಲ್ಲದು. ಗ್ರೀಕ್ ಪ್ರಹಸನದಲ್ಲಿ ಕನ್ನಡ ಮಾತುಗಳನ್ನು ಕುರಿತು ಗೋವಿಂದ ಪೈ, ಆರ್. ಶಾಮಾಶಾಸ್ತ್ರಿ, ಬಾರ್ನೆಟ್ ಮುಂತಾದ ವಿದ್ವಾಂಸರಿಂದ ತೊಡಗಿ, ಅನೇಕ ಹಿರಿಯ ಸಂಶೋಧಕರು ಚರ್ಚಿಸಿದ್ದಾರೆ.  ಮಾನವ ವಿಜ್ಞಾನಿ ಮತ್ತು ಕಾದಂಬರಿಕಾರ ಅಮಿತಾವ್ ಘೋಷ್, ತಮ್ಮ ‘In an antique land’ (1992) ಕಾದಂಬರಿಯಲ್ಲಿ ಕರ್ನಾಟಕದ ಕರಾವಳಿಯ ಮಂಗಳೂರಿನಿಂದ 12ನೇ ಶತಮಾನದಲ್ಲಿ ಈಜಿಪ್ಟ್ ಗೆ ರವಾನೆಗೊಂಡ ‘ಬೊಮ್ಮ’ ಎನ್ನುವ ಗುಲಾಮನ ಬಗ್ಗೆ ಚರ್ಚಿಸಿದ್ದಾರೆ. ಅರಬ್, ಪರ್ಷಿಯನ್ ಭಾಷೆಗಳಲ್ಲಿ ವಿಶೇಷ ಪ್ರಾವೀಣ್ಯ ಇದ್ದ ಅಮಿತಾವ್ ಘೋಷ್, ಕನ್ನಡದ ಸಂಶೋಧಕರ ಕಣ್ಣಿಗೆ ಬೀಳದ ಅಪೂರ್ವ ಮಾಹಿತಿಯೊಂದನ್ನು ಶೋಧಿಸಿದ್ದಾರೆ. ಈ ದೃಷ್ಟಿಯಿಂದ ಅರಬ್ ಮತ್ತು ಪರ್ಷಿಯನ್ ಭಾಷೆಗಳ ಸಮರ್ಪಕ ಪರಿಜ್ಞಾನ ತುಂಬಾ ಉಪಯುಕ್ತವಾದುದು.

ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ, ಪ್ರಾಕೃತ, ಅರೇಬಿಕ್, ಪರ್ಷಿಯನ್, ಗ್ರೀಕ್, ಪೋರ್ಚುಗೀಸ್ ಮುಂತಾದ ಭಾಷೆಗಳ ಅಧ್ಯಯನವನ್ನು ಪದವಿ ಮತ್ತು ಉದ್ಯೋಗದ ನೆಲೆಗಳಿಗೆ ಸೀಮಿತಗೊಳಿಸಬಾರದು. ಪ್ರಾಧ್ಯಾಪಕನಿಗೆ ದೊರೆಯುವ ಸಂಭಾವನೆ ಮತ್ತು ಸವಲತ್ತುಗಳನ್ನು ಸಂಶೋಧಕರಿಗೆ ಕೊಟ್ಟು, ಅದನ್ನು ಜೀವಮಾನದ ಒಂದು ಉದ್ಯೋಗವಾಗಿ ಪರಿಗಣಿಸಬೇಕು.

ತಂತ್ರಜ್ಞಾನದಲ್ಲಿ ಕನ್ನಡದ ಅಳವಡಿಕೆ ತುಂಬ ತಡವಾಗಿ ಆರಂಭವಾಗಿ ಬಹುಪಾಲು ಕನ್ನಡಿಗರ ಪಾಲಿಗೆ ಅಪರಿಚಿತ ಲೋಕವಾಗಿದೆ. ಕಂಪ್ಯೂಟರ್ನಲ್ಲಿ ಕನ್ನಡದ ಬಳಕೆ ವಿಶೇಷವಾಗಿ ಮಾದ್ಯಮಗಳಲ್ಲಿ ಮಾತ್ರ ಸಮರ್ಪಕವಾಗಿ ನಡೆಯುತ್ತಿದೆ.  ಉಳಿದೆಡೆ ಕೆಲವೇ ಮಂದಿ ಆಸಕ್ತ ಲೇಖಕರು ತಂತ್ರಜ್ಞರು ಬಳಸುತ್ತಿದ್ದಾರೆ.  ಈ ದೃಷ್ಟಿಯಿಂದ ಮಾದ್ಯಮದವರು, ತಂತ್ರಜ್ಞರು, ಭಾಷಾ ತಜ್ಞರು, ಸಾಹಿತಿಗಳು ಮತ್ತು ಬಳಕೆದಾರರು ಒಟ್ಟು ಸೇರಿ ಕನ್ನಡದ ಭವಿಷ್ಯವನ್ನು ರೂಪಿಸಬೇಕಾಗಿದೆ. ಇ-ಮೇಲ್ ಮತ್ತು ಮೊಬೈಲ್ ಗಳ ಸಂದೇಶದ ಅವಕಾಶಗಳನ್ನೇ ಸಮರ್ಪಕವಾಗಿ ವ್ಯಾಪಿಸದ ಕನ್ನಡವು ತಂತ್ರಜ್ಞಾನದ ಭಾಷೆಯಾಗಿ ಬೆಳೆಯಲು ಸಾಮೂಹಿಕ ಹಾಗೂ ಬಹುಶಿಸ್ತೀಯ ಕೆಲಸಗಳು ಆಗಬೇಕಾಗಿದೆ. ಗೂಗಲ್ ನಲ್ಲಿ ರೋಮನ್ ಲಿಪಿಯಲ್ಲಿ ಕನ್ನಡವನ್ನು ಓದಬಹುದು. ಕನ್ನಡವನ್ನು ಬಳಸುವವರು ಇದ್ದಾರೆ ಎನ್ನುವ ಸತ್ಯ ಗೂಗಲ್ ನವರಿಗೆ ಗೊತ್ತಾದರೂ ಕನ್ನಡನಾಡಿನ ತಂತ್ರಜ್ಞರಿಗೆ ಇನ್ನೂ ಮನವರಿಕೆಯಾಗಿಲ್ಲ. ತಂತ್ರಜ್ಞಾನದಲ್ಲಿ ಕನ್ನಡಕ್ಕೆ ರೋಮನ್ ಲಿಪಿಯನ್ನು ಬಳಸುವ ಅನಿವಾರ್ಯತೆಯ ಬಗ್ಗೆ ಕೂಡ ಚರ್ಚೆಯಾಗಬೇಕಾಗಿದೆ.

ಕನ್ನಡದಲ್ಲಿ ಬ್ಲಾಗ್ ಗಳ ನಿರ್ಮಾಣ ಆರಂಭವಾಗಿದೆ. ಇತ್ತೀಚೆಗೆ ಮಾಧ್ಯಮದ ಗೆಳೆಯರಾದ ಅರವಿಂದ ನಾವಡ ಮತ್ತು ಜಿ.ಎನ್.ಮೋಹನ್ ಕನ್ನಡದಲ್ಲಿ ಬ್ಲಾಗ್ ಮಾಡುವುದು ಹೇಗೆ ಎನ್ನುವುದನ್ನು ನನಗೆ ಹೇಳಿಕೊಟ್ಟರು. ಕನ್ನಡವನ್ನು ನಾಲ್ಕು ದಶಕಗಳ ಕಾಲ ಪಾಠ ಮಾಡಿದ ನನಗೆ ನನ್ನ ಭವಿಷ್ಯದ ಕನ್ನಡದ ಪಾಠ ಇಲ್ಲಿ ದೊರೆಯಿತು. ಹಾಗಾಗಿ, ಶಾಸ್ತ್ರೀಯ ಕನ್ನಡ  ಭಾಷೆ ಎಂದು ಹೇಳುವ ನಾವು ಇಂದು ಬಳಸಬೇಕಾದ ಕನ್ನಡದ ಲಿಪಿ, ಪದ, ಅರ್ಥಗಳ ಹೊಸ ಜಗತ್ತೊಂದನ್ನು ಕೊಡಬೇಕು. ಅದು ಕನ್ನಡದ ಅನ್ನದ ಭಾಷೆಯಾಗಿಯೂ ಕನ್ನಡಿಗರಿಗೆ ದೊರೆಯಬೇಕು. ಕನ್ನಡದ ಮೊದಲನೆಯ ಲಕ್ಷ್ಷಣಗ್ರಂಥ ‘ಕವಿರಾಜಮಾರ್ಗ’ದಲ್ಲಿ ‘ತಂತಮ್ಮ ನುಡಿಯೊಳೆಲ್ಲ್ಲರ್ ಜಾಣರ್’ ಎನ್ನುವ ಮಾತು ಇದೆ. ಈಗ ನಾವು ಹೇಳಬೇಕಾದುದು, ಬದಲಾಗುತ್ತಿರುವ ನಮ್ಮ ಕನ್ನಡದ ನುಡಿಗಳಲ್ಲಿ ನಾವು ಜಾಣರಾಗಬೇಕು ಎಂದು. 2009 ಕನ್ನಡದ ವರ್ಷವಾಗಬೇಕು, ಕ್ರಿಸ್ತಪೂರ್ವದ ಇಸಿಲದಿಂದ ಚಕ್ರವರ್ತಿ ಅಶೋಕನ ಕಾಲದ ಬ್ರಹ್ಮಗಿರಿಯಲ್ಲಿ ಸಿಕ್ಕಿರುವ ಪ್ರಾಕೃತ ಶಾಸನವೊಂದರಲ್ಲಿ ‘ಇಸಿಲ’ ಎಂಬ ಪದ ಇದೆ. ಇದು ಒಂದು ಊರಿನ ಹೆಸರಾಗಿದ್ದು, ಕನ್ನಡ ಪದವೆಂದು ಡಾ.ಡಿ.ಎಲ್.ನರಸಿಂಹಾಚಾರ್ ಅವರು ಹೇಳಿದ್ದಾರೆ. 21ನೇ ಶತಮಾನದ ಕನ್ನಡದ ಬ್ಲಾಗ್ ಗಳವರೆಗೆ ನಡೆಸುವ ಕನ್ನಡದ ಮಹಾಯಾನದಲ್ಲಿ ನಾವೆಲ್ಲ  ಕಾಯಕದ ಪ್ರಯಾಣಿಕರಾಗಬೇಕು.

30 ಜನವರಿ, 2009

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

7 Responses to “ತಂತಮ್ಮ ನುಡಿಯೊಳೆಲ್ಲರ್ ಜಾಣರ್”

RSS Feed for ಬಿ ಎ ವಿವೇಕ ರೈ Comments RSS Feed

ಪ್ರೊ. ರೈ ಅವರ ಈ ಲೇಖನ ಇಂದಿಗೂ ಪ್ರಸ್ತುತವಾಗಿದೆ. ಮುಖ್ಯವಾಗಿ, ಕನ್ನಡದ ಬೆಳವಣಿಗೆಗೆ ಅನ್ಯ ಭಾಷೆಗಳ ಅಧ್ಯಯನ. ಆರು ತಿಂಗಳ ಹಿಂದೆ ’ಸಂಸ್ಕೃತ ವಿ. ವಿ. ಸ್ಥಾಪನೆ’ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಕರೆದಿದ್ದ ಸಭೆಯಲ್ಲಿ ನಾನು ಮಂಡಿಸಿದ್ದ ವಿಚಾರಗಳೂ ಸರಿ ಸುಮಾರು ಇದೇ ಹಿನ್ನೆಲೆಯಲ್ಲಿದ್ದುವು. ಮುಖ್ಯವಾಗಿ, ನೂತನ ವಿ.ವಿ.ಯಲ್ಲಿ ಸಂಸ್ಕೃತ-ವೇದಗಳಿಗಿಂತ ಇಂದು ಹೆಚ್ಚುಕಮ್ಮಿ ಮೃತಾವಸ್ಥೆಯಲ್ಲಿರುವ ’ಪ್ರಾಕೃತಗಳನ್ನು,’ ಎಂದರೆ ಪ್ರಾಕೃತ, ಶೂರಸೇನಿ, ಅರ್ಧಮಾಗಧಿ, ಪೈಶಾಚಿ, ಇತ್ಯಾದಿ ಭಾಷೆಗಳನ್ನು ಕಲಿಸುವ, ಆ ಮೂಲಕ ಆ ಭಾಷೆಗಳನ್ನು ಜೀವಂತವಾಗಿಡುವ ಪ್ರಯತ್ನವಾಗಬೇಕು; ಮತ್ತು ಈ ಕೆಲಸದಿಂದ ಸಂಸ್ಕೃತ-ಕನ್ನಡ ಇವೆರಡು ಭಾಷೆಗಳಿಗೆ ಮತ್ತು ಸಾಹಿತ್ಯಗಳಿಗೆ ಅಪಾರ ಉಪಯೋಗವಾಗುತ್ತದೆ, ಎಂದು ವಾದಿಸಿದ್ದೆ. ತಮ್ಮ ಲೇಖನವನ್ನು ಮತ್ತೆ ಪ್ರಕಟಿಸಿ, ಚರ್ಚೆಗೆ ಅನುವು ಮಾಡಿಕೊಟ್ಟಿರುವ ಪ್ರೊ. ರೈ ಅವರಿಗೆ ಧನ್ಯವಾದಗಳು.

ಪ್ರೊ.ರಾಮಚಂದ್ರನ್,ನೀವು ಹೇಳುವುದು ಸರಿ.ನಿಮ್ಮ ಸಹಮತಕ್ಕಾಗಿ ವಂದನೆಗಳು.

ಸರ್ ಲೇಖನ ಮರುಓದಿಗೆ ಯೋಗ್ಯವಾಗಿಯೇ ಇದೆ. ಕುವೆಂಪು ಕನ್ನಡ ತಂತ್ರಾಂಶದ ಕನಸು ತೇಜಸ್ವಿಯವರೊಂದಿಗೇ ಕಮರಿಹೋಯಿತು ಎನ್ನಬಹುದೆ? ಈಗ ಸರ್ಕಾರ ರಚಿಸಿರುವ ಸಮಿತಿಯಿಂದ ತೇಜಸ್ವಿಯವರ ಅಖಂಡ ಕಲ್ಪನೆ ಮೂರ್ತರೂಪಕ್ಕೆ ಬರಲಿ ಎಂದು ಆಶಿಸುತ್ತೇನೆ. ಕುವೆಂಪು ಕನ್ನಡ ತಂತ್ರಾಂಶದ ಅಭಿವೃದ್ಧಿಗಾಗಿ ಆಗ ಕೆಲವು ಶಾಸಕರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಹಣ ನೀಡಲು ಮುಂದೆ ಬಂದಿದ್ದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದು ಕೇಳಿದ್ದೇನೆ. ಈಗ ದುರಂತ ನೋಡಿ. ಅದೇ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತಿರುಪತಿಯಲ್ಲಿ ಐಷರಾಮಿ ಹೊಟೆಲ್ ನಿರ್ಮಾಣ ಮಾಡಲು ತಲಾ ಹದಿನೈದು ಲಕ್ಷ ಕೊಡಿ ಎಂದು ಮು.ಮಂ.ಗಳೇ ತಮ್ಮ ಪಕ್ಷದ ಶಾಸಕರಿಗೆ ಕಾಗದ ಬರೆದಿದ್ದಾರಂತೆ!

ಡಾ.ಸತ್ಯನಾರಾಯಣ, ನಮಸ್ಕಾರ.ನಮ್ಮ ಆಳುವವರ ಧೋರಣೆಗಳ ಕಾಳಜಿ ಹೀಗೆ ಇರುತ್ತದೆ.ತೇಜಸ್ವಿ ತರ ತರಾಟೆಗೆ ತೆಗೆದುಕೊಳ್ಳುವವರು ನಮ್ಮಲ್ಲಿ ಕಡಮೆ ಆಗಿರುವುದು ದುರಂತ.

ನಮಸ್ಕಾರ ರೈ ಅವರೆ,
ನಿಮ್ಮ ಲೇಖನದಿಂದ ಕೆಲವೊಂದು ಹೊಸ ವಿಷಯ ಗೊತ್ತಾಯಿತು. ಧನ್ಯವಾದಗಳು.
Internet Explorer ತೆರೆಯದೆ ಬ್ಲಾಗ್ ಪ್ರಕಟಿಸುವ ಬಗ್ಗೆ ನಾನೊಂದು ಬ್ಲಾಗ್ ಬರೆದಿದ್ದು ಪುರುಸೊತ್ತಿದ್ದರೆ ಓದಿ.-
http://machikoppa.blogspot.com/2010/02/bloggercom.html

ಪ್ರಿಯರೇ
ನಿಮ್ಮ ಈ ಸಾಲುಗಳು,
“ಕನ್ನಡಕ್ಕೆ ಸಂಬಂಧಿಸಿದಂತೆ ಸಂಸ್ಥೆಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಾಜ್ಯ ಕರ್ನಾಟಕ. ಕನ್ನಡಕ್ಕಾಗಿ ಪ್ರತ್ಯೇಕವಾದ ಕನ್ನಡ ಸಂಸ್ಕೃತಿ ಇಲಾಖೆ, ಅಭಿವೃದ್ಧಿ ಪ್ರಾಧಿಕಾರ, ಪುಸ್ತಕ ಪ್ರಾಧಿಕಾರ, 13 ಅಕಾಡೆಮಿಗಳು ನಮ್ಮ ರಾಜ್ಯದಲ್ಲಿವೆ. ಕನ್ನಡ ಸಾಹಿತ್ಯ ಪರಿಷತ್ತು ಇದೆ. ರಾಜ್ಯದ ಒಳಗೆ ಹೆಚ್ಚಿನ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಅಧ್ಯಯನ ವಿಭಾಗಗಳಿವೆ. ಕನ್ನಡಕ್ಕಾಗಿ ಹಂಪಿಯಲ್ಲಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ. ಹೀಗೆ ನೋಡಿದರೆ, ಕನ್ನಡದ ಕೆಲಸಕ್ಕಾಗಿ ಸುಮಾರು 50ರಷ್ಟು ಅಧಿಕೃತವಾದ ಶೈಕ್ಷಣಿಕ ಸಂಸ್ಥೆಗಳು ನಮ್ಮಲ್ಲಿವೆ. ಹಾಗಿದ್ದೂ, ಕನ್ನಡಕ್ಕೆ ಸಂಬಂಧಿಸಿದ ಅನೇಕ ಸಂಗತಿಗಳು ಅಭಿವೃದ್ಧಿಯ ಕೆಲಸಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ”
ನನ್ನ ಈಚಿನ ಬರಹ – ‘ಮೌಲ್ಯಗಳ ಪುಡಾರೀಕರಣ’ದ ಈ ಸಾಲುಗಳಿಗೆ,
“ವಿವಿಧ ಸಾರ್ವಜನಿಕ ಹುದ್ದೆಗಳಲ್ಲಿ ಮೆರೆದು, ಪ್ರಾಯದೋಷದಿಂದ ಮರೆ (ನಿವೃತ್ತಿ) ಆಗಲೇ ಬೇಕಾದವರು ಸೃಷ್ಟಿಸಿಕೊಂಡ ಹತ್ತು ಹಲವು ಉದಾತ್ತನಾಮದ ಅನುದಾರ ಸಂಸ್ಥೆಗಳನ್ನು ‘ನಾವು’ ಸಹಿಸಿಕೊಳ್ಳುತ್ತಲೇ ಬಂದಿದ್ದೇವೆ. ನಿಜ ಮೌಲ್ಯ ಮಾಪನದಲ್ಲಿ ಈ ಅಕಾಡೆಮಿಗಳು (ಹೀಗೇ ಹೆಸರಿಸುವುದಾದರೆ ಕೊಡವ, ಉರ್ದು, ಬ್ಯಾರಿ, ಶಿಲ್ಪ, ಜನಪದ, ಯಕ್ಷಗಾನ ಇತ್ಯಾದಿ), ಪ್ರಾಧಿಕಾರಗಳು (ಪುಸ್ತಕ, ಅಭಿವೃದ್ಧಿ, ಅನುವಾದ, ನದಿ ತಿರುಗಿಸು, ಪಶ್ಚಿಮ ಘಟ್ಟ ಇತ್ಯಾದಿ) ಹೆಚ್ಚೇಕೆ ಹಲವು ವಿಷ-ವಿದ್ಯಾನಿಲಯಗಳು (ಸಂಗೀತ, ಮಹಿಳಾ, ಆರೋಗ್ಯ, ಸಂಸ್ಕೃತ ಇತ್ಯಾದಿ) ಎಲ್ಲಾ ಒಂದು ಇಲಾಖೆಯ ಸಮರ್ಥ ಗುಮಾಸ್ತ ನಿರ್ವಹಿಸಬಹುದಾದ ಕೆಲಸಕ್ಕಿಂಥ ಘನವಾದ್ದೇನನ್ನೂ ಸಾಧಿಸಿಲ್ಲ.”
ಹೆಚ್ಚಿನ ನೈತಿಕ ಬಲ ಕೊಟ್ಟದ್ದಕ್ಕೆ ಕೃತಜ್ಞ.
ಅಶೋಕವರ್ಧನ

ಅಶೋಕವರ್ಧನ್,
ನೀವು ಹೇಳುವುದು ಸರಿ.ಸಾಹಿತ್ಯ,ಸಂಸ್ಕೃತಿ ಮತ್ತು ಭಾಷೆಗಳನ್ನು ನಿಗಮ ಮಂಡಳಿಗಳ ರೀತಿ ನೋಡುವ ಸರಕಾರಗಳು ಮತ್ತು ಅದನ್ನು ಸಹಿಸಿಕೊಳ್ಳುವ ಜನರು ಈ ಪುಡಾರೀಕರಣದ ಪೋಷಕರು.


Where's The Comment Form?

Liked it here?
Why not try sites on the blogroll...

%d bloggers like this: