ಕನ್ನಡ ವಿಶ್ವವಿದ್ಯಾಲಯದ ಭೂಮಿ: ಸರಕಾರದ ಸರಿಯಾದ ನಿರ್ಧಾರ

Posted on ಮಾರ್ಚ್ 12, 2010. Filed under: Uncategorized |


ಕರ್ನಾಟಕದ ಮುಖ್ಯಮಂತ್ರಿಯವರು ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಎಂಬತ್ತು ಎಕರೆ ಜಾಗವನ್ನು ವಿಜಯನಗರ ಟ್ರಸ್ಟಿಗೆ ಹಸ್ತಾಂತರಿಸುವ ಆದೇಶವನ್ನು ಹಿಂತೆಗೆದುಕೊಂಡಿದ್ದಾರೆ. ಕನ್ನಡಿಗರ ನಾಡಿಮಿಡಿತವನ್ನು ಅರ್ಥಮಾಡಿಕೊಂಡ ಮುಖ್ಯಮಂತ್ರಿ ಅವರಿಗೆ ಅಭಿನಂದನೆಗಳು. ಕನ್ನಡ ವಿವಿಯ ಅಧ್ಯಾಪಕರು ಮತ್ತು ನೌಕರರು ತುಂಬಾ ಧೈರ್ಯ ತಾಳಿ, ನೇರವಾಗಿ ಪ್ರತಿಭಟಿಸಿರುವುದು ಐತಿಹಾಸಿಕವಾದುದು. ಅದು ಎಂತಹ ಅಪಾಯಕಾರಿ ಹೆಜ್ಜೆ ಎನ್ನುವುದು ವಿವಿಗಳಲ್ಲಿ ಕೆಲಸ ಮಾಡಿದವರಿಗೆ ಮಾತ್ರ ಅರ್ಥ ಆಗುವಂಥದ್ದು. ಕರ್ನಾಟಕ ಪ್ರಜ್ಞಾವಂತರು ಬಹುಪಾಲು ಒಂದೇ ಧ್ವನಿಯಲ್ಲಿ ಮಾತಾಡಿದ್ದು ಇತ್ತೀಚೆಗಿನ ದಿನಗಳಲ್ಲಿ ಒಂದು ಅಪೂರ್ವ ಸಂಗತಿ.

ಸರಕಾರಗಳು ವಿವಿಗಳ ಆಡಳಿತದಲ್ಲಿ ಪರೋಕ್ಷವಾಗಿ ಹಸ್ತಕ್ಷೇಪ ಮಾಡುವ ನಿದರ್ಶನಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗುತ್ತಿದೆ. ಕರ್ನಾಟಕ ರಾಜ್ಯ ವಿವಿಗಳ ಕಾಯಿದೆ ೨೦೦೦ ರ ಬಳಿಕ ಇದರ ಪ್ರಮಾಣ ಅಧಿಕ ಆಗಿದೆ. ಸಾಹಿತ್ಯ , ಶಿಕ್ಷಣ ಮತ್ತು ಸಂಸ್ಕೃತಿ -ಈ ಕ್ಷೇತ್ರಗಳಲ್ಲಿ ಯಾವುದೇ ಸರಕಾರ ಇದ್ದಾಗಲೂ ಸ್ವಾಯತ್ತೆ ಮತ್ತು ಸ್ವಾಭಿಮಾನ ಉಳಿಸಿಕೊಂಡು -ಕರ್ನಾಟಕ ರಾಜ್ಯವು  ದೇಶದಲ್ಲೇ ಉತ್ತಮ  ಹೆಸರು ಪಡೆದಿದೆ. ಇದು ಕರ್ನಾಟಕಕ್ಕೇ ಹೆಮ್ಮೆ ಮತ್ತು ಗೌರವದ ವಿಷಯ. ಇದನ್ನು ಆಳುವ ಸರಕಾರಗಳು ಅರ್ಥ ಮಾಡಿಕೊಂಡರೆ ಅವುಗಳಿಗೆ ಲಾಭ; ಅದನ್ನೇ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಒಳ್ಳೆಯ ಅವಕಾಶ ಇದೆ. ಈ ಅನುಕೂಲ ದೇಶದ ಅನೇಕ ರಾಜ್ಯಗಳಿಗೆ ಇಲ್ಲ.

ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದ ಭಿನ್ನ ಅಭಿಪ್ರಾಯಗಳನ್ನು ವಿರೋಧ ಎಂದು ಆಳುವವರು ಭಾವಿಸಬಾರದು.ಒಂದು ಸಂಗತಿಗೆ ಒಂದು ಸಮಸ್ಯೆಗೆ ಸರಿಯಾದ ಒಂದು ಪರಿಹಾರ ಕಂಡುಕೊಂಡರೆ ಆಯಿತು. ಅದು ಯಾರ ವಿಜಯವೂ ಅಲ್ಲ, ಸೋಲೂ ಅಲ್ಲ. ಸಂಸ್ಥೆಗಳ ಮುಂದಿನ ಪ್ರಗತಿಗೆ ಎಲ್ಲರೂ ಸೇರಿ ಸೌಹಾರ್ದತೆಯಿಂದ ಕೆಲಸ ಮಾಡಬೇಕು. ನಮ್ಮ ಒಂದು ನಿಲುವನ್ನು ಬಿಟ್ಟುಕೊಟ್ಟು ಸಾರ್ವಜನಿಕ ಅಭಿಪ್ರಾಯವನ್ನು ಮನ್ನಿಸುವುದು ಆಡಳಿತಗಾರರ ನೈತಿಕ ಗೆಲುವು ಎಂದೇ ಭಾವಿಸಬೇಕು. ಅಂತಹ ಸಮನ್ವಯದ ಹೆದ್ದಾರಿಗೆ ಸ್ವಾಗತ ಕೋರೋಣ.

ಈ ಸಂದರ್ಭದಲ್ಲಿ ಮೂವತ್ತು ವರ್ಷಗಳ ಹಿಂದಿನ ಒಂದು ಘಟನೆಯನ್ನು ನೆನಪಿಸಿಕೊಳ್ಳುತ್ತೇನೆ. ಮೈಸೂರು ವಿಶ್ವವಿದ್ಯಾನಿಲಯವು ೧೯೬೮ರಲ್ಲಿ ಮಂಗಳೂರಿನಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಿತು. ಮಂಗಳೂರಿನಿಂದ ೧೮ ಕಿಲೋಮೀಟರ್ ದೂರದ ಕೊಣಾಜೆ ಎಂಬ ಹಳ್ಳಿಯಲ್ಲಿ ಸರಕಾರದ ವಶ ಇದ್ದ ೨೫೦ ಎಕರೆ ಜಾಗವನ್ನು ಇದಕ್ಕಾಗಿ ಆಯ್ಕೆ ಮಾಡಲಾಯಿತು. ಎರಡು ಕಟ್ಟಡ (ಆರಂಭದಲ್ಲಿ ಸೋರುತ್ತಿತ್ತು )ಗಳಲ್ಲಿ ೧೯೭೨ರಲ್ಲಿ ತರಗತಿಗಳನ್ನು ನಡೆಸಲು ಕೊಣಾಜೆಗೆ ಮಂಗಳೂರಿನಿಂದ ಐದು ವಿಭಾಗಗಳನ್ನು ವರ್ಗಾಯಿಸಲಾಯಿತು. ಮಂಗಳೂರಿನಲ್ಲಿ ಪ್ರತ್ಯೇಕವಾಗಿ ಸ್ವತಂತ್ರ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾವ ೧೯೭೮ರ ವೇಳೆಗೆ ಆರಂಭ ಆಯಿತು. ಆಗ ಕೊಣಾಜೆಯಲ್ಲಿ ವಿಶೇಷವಾದ ಯಾವ ಅನುಕೂಲತೆಗಳೂ ಇರಲಿಲ್ಲ. ನೀರಿನ ಕೊರತೆ, ಸಾರಿಗೆ ಸಂಪರ್ಕಗಳ ನ್ಯೂನತೆ ಯಿಂದ ತೊಡಗಿ ವೈದ್ಯಕೀಯ ಇತ್ಯಾದಿ ಅನೇಕ ಸಮಸ್ಯೆಗಳು ಇದ್ದುವು. ಆಗ ಎದ್ದ ಮುಖ್ಯ ಧ್ವನಿ ಎಂದರೆ ಇಂತಹ ಪಾಳುಭೂಮಿಯಲ್ಲಿ ಹೊಸ ವಿವಿ ಆರಂಭಿಸುವುದರ ಬದಲು, ಈ ಕೇಂದ್ರವನ್ನೇ ಮಣಿಪಾಲಕ್ಕೆ ವರ್ಗಾಯಿಸಿ ಅಲ್ಲೇ ವಿವಿ ಮಾಡುವುದು ವಿಹಿತ ಎನ್ನುವ ಅಭಿಪ್ರಾಯ. ಇದಕ್ಕೆ ಮಣಿಪಾಲ ಕಡೆಯಿಂದ ಒಲವು ಇದೆ ಎನ್ನುವ ಸುದ್ದಿಗಳು ಹರಡಿದ್ದುವು. ಆಗ ಕೊಣಾಜೆಯಲ್ಲಿ ಇದ್ದ ಐದು ವಿಭಾಗಗಳಲ್ಲಿ ನಾವು ಅಧ್ಯಾಪಕರು ಇದ್ದವರು ನಾವು ಒಟ್ಟು ಹದಿನೈದು ಮಂದಿ. ನನ್ನನ್ನೂ ಸೇರಿಸ್ಕೊಂದು ಕಿರಿಯ ಅದ್ಯಾಪಕರೆ ಇದ್ದದ್ದು. ಪ್ರೊಫೆಸರ್ ಇರಲಿಲ್ಲ. ನಾವು ಹೇಗೆ ಪ್ರತಿಭಟಿಸುವುದು? ಆಗ ಮೈಸೂರು ವಿವಿಯ ಕುಲಪತಿ ಆಗಿದ್ದವರು ಪ್ರೊ.ಕೆ.ಎಸ್. ಹೆಗ್ಡೆ. (ಈಗ ದಿವಂಗತರು ).ಅವರು ಕೊಣಾಜೆಯಿಂದ ಬೇರೆಡೆಗೆ ವರ್ಗಾಯಿಸಲು ಇಷ್ಟಪಟ್ಟಿದ್ದರು.ಹಾಗಾಗಿ ಹುಡುಗ ಅಧ್ಯಾಪಕರಾದ ನಾವು ಕುಲಪತಿಗಳ ಅಭಿಪ್ರಾಯಕ್ಕೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿತ್ತು. ನಾವು ನಮ್ಮ ಸಣ್ಣ ಅಧ್ಯಾಪಕರ ಸಂಘದಲ್ಲಿ ಕ್ಯಾಂಪಸ್ ಸ್ಥಳಾಂತರದ ವಿರುದ್ಧ ಹೋರಾಡುವ ಧೈರ್ಯ ಮಾಡಿದೆವು. ಕುಲಪತಿಗಳಿಗೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆವು.ಆಗ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವಭಾರತ ‘ಕನ್ನಡ ದಿನಪತ್ರಿಕೆಗೆ ಎಲ್ಲಾ ಮಾಹಿತಿ ಕೊಟ್ಟೆವು. ಆಗ ಆ ಪತ್ರಿಕೆಯಲ್ಲಿ ವರದಿಗಾರರಾಗಿದ್ದ, ಒಳ್ಳೆಯ ಪತ್ರಕರ್ತ ಮಂಜುನಾಥ ಭಟ್ಟರು ಅದನ್ನು ನವಭಾರತದಲ್ಲಿ ಕಂತುಗಳ ರೂಪದಲ್ಲಿ ವಿವರಗಳೊಂದಿಗೆ ಪ್ರಕಟಿಸಿದರು. ಈ ವರದಿ ಸಿದ್ದಪಡಿಸುವ ಕೆಲಸವನ್ನು  ನಾನು ಮತ್ತು ಆಗ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಡಾ. ಪಂಡಿತಾರಾಧ್ಯ ಅವರು (ಈಗ ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರು. ಕನ್ನಡ ಅಂಕೆಗಳು, ಕಂಪ್ಯೂಟರಿನಲ್ಲಿ ಕನ್ನಡ, ಕನ್ನಡ ಪರ ಪ್ರಗತಿಪರ ಚಿಂತಕ ಹೋರಾಟಗಾರರು) ಮಾಡಿದೆವು. ಪತ್ರಿಕೆಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆದುವು. ಕುಲಪತಿಗಳು ನಮ್ಮ ಮೇಲೆ ಸಿಟ್ಟುಗೊಂಡರು. ಮಣಿಪಾಲದವರು, ನಮ್ಮ ಕೀಟಲೆಗಳನ್ನು ಗಮನಿಸಿದರು. ನಾವು ಗುಬ್ಬಿಗಳು ಬ್ರಹ್ಮಾಸ್ತ್ರ ಎದುರಿಸಿದೆವು. ಕೊನೆಗೂ ಮೈಸೂರು ವಿವಿ ಮತ್ತು ಸರಕಾರ ಅರ್ಥಮಾಡಿಕೊಂಡಿತ್ತು . ಮಂಗಳೂರು ವಿವಿ ಕೊಣಾಜೆಯಲ್ಲೇ ಸ್ಥಾಪನೆ ಆಯಿತು.

ಕುವೆಂಪು ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಹೇಳುವಂತೆ ಕಾಲ ಎಲ್ಲ ನೋವುಗಳನ್ನೂ ಮರೆಸುತ್ತದೆ. ಕುಲಪತಿ ಹೆಗ್ಡೆ ಮೃದುವಾದರು. ಮಂಗಳೂರು ವಿವಿಗೆ ಮಣಿಪಾಲದ ಮೆಡಿಕಲ್ ಕಾಲೇಜು ಸಹಿತ ಎಲ್ಲ ಸಂಸ್ಥೆಗಳೂ ಬಂದುವು. ಮಣಿಪಾಲದ ಡಾ. ರಾಮದಾಸ ಪೈ ಮಂಗಳೂರು ವಿವಿಯ ಸಿಂಡಿಕೇಟ್  ಸದಸ್ಯರಾಗಿ ಬಂದರು. ನಾನು ಅಧ್ಯಾಪಕರ ಪ್ರತಿನಿಧಿಯಾಗಿ ಆಯ್ಕೆಗೊಂಡು ಸಿಂಡಿಕೇಟ್ ಗೆ  ಬಂದೆ. ಸಿಂಡಿಕೇಟ್ ಸಭೆಯಲಿ ನಾವಿಬ್ಬರೂ ಅಕ್ಕಪಕ್ಕ ಕುಳಿತು ಸ್ನೇಹಿತರಾಗಿ ಮಂಗಳೂರು ವಿವಿ ಪ್ರಗತಿ ಬಗ್ಗೆ ಚರ್ಚಿಸುತ್ತಿದ್ದೆವು. ಇವತ್ತು ಮಂಗಳೂರು ವಿವಿ ಇರುವ ಕೊಣಾಜೆಯ ಪಕ್ಕದಲ್ಲಿ ಎರಡು ಡೀಮ್ಡ್ ವಿವಿಗಳು ,ಇಂಜಿನೀರಿಂಗ್ ಕಾಲೇಜುಗಳು , ಮೂರು ದೊಡ್ಡ ಆಸ್ಪತ್ರೆಗಳು ಬಂದಿವೆ. ಈಗ ನೆನೆಸಿಕೊಂಡರೂ ಮೂವತ್ತು ವರ್ಷಗಳ ಹಿಂದಿನ ನಮ್ಮ ಗುಬ್ಬಚ್ಚಿ ಆಟ ರೋಮಾಂಚನ ಉಂಟುಮಾಡುತ್ತದೆ.

ಅಧ್ಯಾಪಕರು,ಸಿಬ್ಬಂದಿಯವರು  ವಿವಿಯ ಆಸ್ತಿ ಅಷ್ಟೇ ಅಲ್ಲ ,ಅವರು ವಿವಿ ಆಸ್ತಿಯ ಕಾವಲುಗಾರರೂ ಆಗಬೇಕಾಗುತ್ತದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಕನ್ನಡ ವಿಶ್ವವಿದ್ಯಾಲಯದ ಭೂಮಿ: ಸರಕಾರದ ಸರಿಯಾದ ನಿರ್ಧಾರ”

RSS Feed for ಬಿ ಎ ವಿವೇಕ ರೈ Comments RSS Feed

ಪ್ರಿಯರೇ
ನಿಮ್ಮ ಮಾತುಗಳು ನೂರಕ್ಕೆ ನೂರು ಸರಿ. ಆದರೆ ಒಟ್ಟಾರೆ ವಿವಿನಿಲಯಗಳು ಸಂಗ್ರಹಿಸುವ ನೆಲದ ಕುರಿತು ಮೈಸೂರಿನ ಕುಶಾಲಪ್ಪ (ನಿವೃತ್ತ ಅರಣ್ಯಾಧಿಕಾರಿ) ನಿನ್ನೆಯ ಸ್ಟಾರ್ ಪತ್ರಿಕೆಯಲ್ಲಿ ಬರೆದ ಲೇಖನದ ಬೆಳಕಿನಲ್ಲಿ (ಸಂಗೀತ ವಿವಿ ನಿಲಯದ ಸಂದರ್ಭದಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯೆಯಾಗಿ) ಖಂಡಿತವಾಗಿ ವ್ಯಾಪಕ ಚರ್ಚೆ ನಡೆಯಬೇಕಾಗಿದೆ ಅನ್ನಿಸಿತು (ಆ ಲೇಖನದ ಪ್ರತಿ ಅಂಗಡಿಯಲ್ಲಿದೆ. ಬೇಕಾದರೆ ಸೋಮವಾರ ಸ್ಕ್ಯಾನ್ ಮಾಡಿ ಕೊಡಬಲ್ಲೆ). ಯುಜಿಸಿ ವಿವಿನಿಲಯಗಳಿಗೆ ನಿಗದಿಸುವ ನೆಲದ ಮಿತಿ, ಈಗಾಗಲೇ ಹಳೆಯ ವಿವಿನಿಲಯಗಳು ಪಡೆದ ಮತ್ತು ಬಳಸದ ನೆಲದ ಹರಹು ಒಟ್ಟು ಹಾಕಿ ಚರ್ಚೆ ನಡೆಯಬೇಕಾಗಿದೆ. ‘ಪ್ರಕೃತಿ ಮನುಷ್ಯನ ಅಗತ್ಯಕ್ಕೆ ಎಷ್ಟೂ ಒಡ್ಡಿಕೊಳ್ಳುತ್ತದೆ, ದುರಾಸೆಗಲ್ಲ’ ಎನ್ನುವ ಪ್ರಸಿದ್ಧ ಉಕ್ತಿಯ ದುರಾಸೆಗೆ ಅಲ್ಲಿ ಹೊಸ ವ್ಯಾಖ್ಯೆಯನ್ನೂ ಬರೆಯಬೇಕಾದೀತು.
ಅಶೋಕವರ್ಧನ

ಅಶೋಕವರ್ಧನ್,
ಥ್ಯಾಂಕ್ಸ್.ನೀವು ಸೂಚಿಸಿದ ಮಾಹಿತಿಯನ್ನು ಸೋಮವಾರ ನಿಮ್ಮಿಂದ ಪಡೆಯುತ್ತೇನೆ.ಸ್ಥಳದ ದುರುಪಯೋಗ ಆಗಬಾರದು ,ಆದರೆ ಉಪಯೋಗ ಆಗಬೇಕು ಎನ್ನುವ ಅಭಿಪ್ರಾಯವನ್ನು ಒಪ್ಪುತ್ತೇನೆ.ವಿವಿಗಳ ಮಾಸ್ತರ್ ಪ್ಲೇನ್ ಮತ್ತು ಅದರ ಅನುಷ್ಠಾನ ಇತ್ಯಾದಿ ಸಂಗತಿಗಳು ವಾಸ್ತವಿಕತೆಯ ಆಧಾರದ ಮೇಲೆ ಚರ್ಚೆ ಆಗಬೇಕು.


Where's The Comment Form?

Liked it here?
Why not try sites on the blogroll...

%d bloggers like this: