ಮಿದುಳನ್ನು ತೊಳೆಯುವುದು ಮತ್ತು ಮಿದುಳನ್ನು ತೊಳಸುವುದು

Posted on ಮಾರ್ಚ್ 11, 2010. Filed under: ಇರುಳ ಕಣ್ಣು |


ಇದು ನಾನು ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಅಂಕಣ ‘ಇರುಳ ಕಣ್ಣು’ ಇಂದ ಆಯ್ದದ್ದು. ಮೊನ್ನೆ ತಾನೇ ಮಹಿಳಾ ಮೀಸಲಾತಿ ವಿಧೇಯಕ ರಾಜ್ಯಸಭೆಯಲ್ಲಿ ಮಂಡಿತವಾಗಿದೆ. ಆಗ ಆದದ್ದೂ ನಿಮಗೂ ಗೊತ್ತಿದೆ. ಇದನ್ನೇ ನೆಪವಾಗಿಟ್ಟುಕೊಂಡು ರಾಜ್ಯಸಭೆಯಲ್ಲಿ ಈ ಹಿಂದೆ ಚರ್ಚೆಗೆ ಬಂದಿದ್ದ ಶಿಕ್ಷಣದ ಹಕ್ಕಿನ ಮಸೂದೆಯ ಚರ್ಚೆ ಇಲ್ಲಿದೆ. ಈ ಲೇಖನ ಪ್ರಕಟವಾದದ್ದು ೧೯ ಡಿಸೆಂಬರ್ ೨೦೦೮

ನನ್ನ ‘ಇರುಳ ಕಣ್ಣು’ ಕೃತಿಯನ್ನು ಮೇ ಫ್ಲವರ್ ಮೀಡಿಯಾ ಹೌಸ್ ಪ್ರಕಟಿಸಿದೆ. ಕೃತಿ ಬೇಕಾದಲ್ಲಿ mayflowermh@gmail.com ಗೆ ಸಂಪರ್ಕಿಸಿ

ರಾಜ್ಯಸಭೆಯಲ್ಲಿ ಚರ್ಚೆಗೆ ಮತ್ತು ಅಂಗೀಕಾರಕ್ಕೆ ಮಂಡಿಸಲಾಗಿರುವ ಶಿಕ್ಷಣದ ಹಕ್ಕಿನ ಮಸೂದೆ ಭಾರತದ ಸಂವಿಧಾನದ ತಿದ್ದುಪಡಿಯ ದೃಷ್ಟಿಯಿಂದ ಮುಖ್ಯವಾದುದು. ಸಂವಿಧಾನದ 86ನೆಯ ತಿದ್ದುಪಡಿಯ ಆರ್ಟಿಕಲ್ 21ಎ ಯ ಭಾಗ ೩ ರ ಪ್ರಕಾರ ಆರರಿಂದ ಹದಿನಾಲ್ಕು ವರ್ಷದ ಎಲ್ಲ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು ದೊರೆಯುತ್ತದೆ. ಸರಕಾರಿ ಶಾಲೆಗಳು ಈ ವಯೋಮಾನದ ಗುಂಪಿನ ಎಲ್ಲ ಮಕ್ಕಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಕೊಟ್ಟರೆ, ಖಾಸಗಿ ಶಿಕ್ಷಣ ಸಂಸ್ಥೆಗಳು 25% ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತವೆ.

ಶಿಕ್ಷಣದ ಹಕ್ಕು ಎನ್ನುವುದು ಕೇವಲ ಮಗುವೊಂದರ ಹಕ್ಕಿಗಾಗಿ ಮಾತ್ರ ಅಲ್ಲ, ಬದಲಾಗಿ ಸಮಾನತೆ, ನ್ಯಾಯ, ಪ್ರಜಾಪ್ರಭುತ್ವ, ಜಾತ್ಯತೀತತೆ, ಸಾಮಾಜಿಕ ಸಮಗ್ರತೆ-ಇಂತಹ ಸಂವಿಧಾನಾತ್ಮಕ ಉದ್ದೇಶಗಳನ್ನು ಈಡೇರಿಸುವ ಸಾಧನವಾಗಿಯೂ ಇದು ಮುಖ್ಯವಾಗಿದೆ. ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಯ ಆಯೋಗವು ಇದಕ್ಕೆ ಸಂಬಂಧಿಸಿದ ಎಲ್ಲ ಹೊಣೆಯನ್ನು ನಿರ್ವಹಿಸುತ್ತದೆ. 2002ರಿಂದ ಚಚರ್ೆಯಾಗುತ್ತ ಬಂದಿರುವ ಈ ಮಸೂದೆ 2005ರಲ್ಲಿ ವರದಿಯ ರೂಪವನ್ನು ತಾಳಿ ಕೇಂದ್ರ ಸರಕಾರದ ಮತ್ತು ರಾಜ್ಯ ಸರಕಾರದ ಅನುದಾನದ ಪ್ರಮಾಣದ ಕುರಿತು ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಈಗ ಅನುಷ್ಠಾನದ ಬಾಗಿಲಿಗೆ ಬಂದು ನಿಂತಿದೆ.

ಬೆಂಗಳೂರಿನ ವಿಚಾರಸಂಕಿರಣವೊಂದರಲ್ಲಿ ಜ್ಞಾನ ಆಯೋಗದ ಅಧ್ಯಕ್ಷರಾದ ಸ್ಯಾಮ್ ಪಿತ್ರೋಡ ಅವರು ಪ್ರಾಥಮಿಕ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ತಮ್ಮ ಜ್ಞಾನ ಆಯೋಗದ ವರದಿಯ ಶಿಫಾರಸ್ಸುಗಳ ಜ್ಯಾರಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅವರ ಅಧ್ಯಕ್ಷತೆಯಲ್ಲಿ ಸಿದ್ಧಪಡಿಸಿದ ರಾಷ್ಟೀಯ ಜ್ಞಾನ ಆಯೋಗದ ವರದಿಯಲ್ಲಿ (2008) ಈ ಶಿಕ್ಷಣದ ಹಕ್ಕಿನ ಮಸೂದೆಯ ಬಗೆಗಿನ ಅಭಿಪ್ರಾಯಗಳಿವೆ.  ಕೇಂದ್ರೀಯ ಶಾಸನ, ಆರ್ಥಿಕ ಹೊಣೆಗಾರಿಕೆ, ಕಾಲಮಿತಿ ನಿಯಮ ಮತ್ತು ಗುಣಲಕ್ಷಣಗಳ ರೂಪುರೇಷೆ, ಶಿಕ್ಷಕರ ಅರ್ಹತೆ, ಪಾಲಕರಷ್ಟೇ ಸರಕಾರದ ಪಾಲಿನ ಬದ್ಧತೆ, ಸಾರ್ವತ್ರಿಕ ಶಾಲಾ ಶಿಕ್ಷಣ-ಇಂತಹ ಅನೇಕ ವಿಷಯಗಳು ಇಲ್ಲಿ ಅಭಿಪ್ರಾಯ ರೂಪದಲ್ಲಿ ಮಂಡಿತವಾಗಿವೆ.  ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವು ಸಮರ್ಪಕವಾಗಿ ನಡೆಯುತ್ತಿದ್ದರೂ ನಮ್ಮ ದೇಶದಲ್ಲಿ ಅದರ ಅನುಷ್ಠಾನದ ಸಮಸ್ಯೆಗಳು ಈವರೆಗಿನ ಅಧ್ಯಯನ ವರದಿಗಳನ್ನು ಗಮನಿಸಿದಾಗ ಹೆಚ್ಚು ಸಂಕೀರ್ಣವಾಗಿವೆ. ಭಾರತದ ಬಹುರೂಪಿ ಕುಟುಂಬಗಳ ಸಾಮಾಜಿಕ ಆರ್ಥಿಕ ಹಿನ್ನೆಲೆಯ ಕಾರಣವಾಗಿ ಪ್ರಾಥಮಿಕ ಶಿಕ್ಷಣ ಅನೇಕರ ಪಾಲಿಗೆ ಮರೀಚಿಕೆಯಾದರೆ, ದೊರಕಿದ ಬಹುಪಾಲು ಮಕ್ಕಳಿಗೆ ಅಸ್ವಸ್ಥ ಪ್ರಾಥಮಿಕ ಶಿಕ್ಷಣವಾಗಿದೆ.  ಕೆಲವೇ ಮಂದಿಯ ಮಕ್ಕಳಿಗೆ ಎಲ್ಲ ಸೌಲಭ್ಯ ಸೌಕರ್ಯಗಳ ಪ್ರಾಥಮಿಕ ಶಿಕ್ಷಣ ದೊರೆಯುತ್ತಿದೆ. ಕಳೆದ ವಾರ ಮಧುರೈಯಲ್ಲಿ ನಡೆದ ತಮಿಳುನಾಡಿನ ಪ್ರಾಥಮಿಕ ಶಿಕ್ಷಣದ ಬಗೆಗಿನ ಸಮ್ಮೇಳನದಲ್ಲಿ ಆ ರಾಜ್ಯದ ಶಿಕ್ಷಣ ಅಧಿಕಾರಿಗಳು ಆ ರಾಜ್ಯದಲ್ಲಿ ಶಾಲಾ ಪೂರ್ವದ ಶಿಕ್ಷಣಕ್ಕಾಗಿ ಖಾಸಗಿ ವಲಯಕ್ಕೆ ಸಂವಾದಿಯಾಗಿ ಸರಕಾರವೇ ಕೆ.ಜಿ.ಶಿಕ್ಷಣದ ಶಾಲೆಗಳನ್ನು ನಡೆಸಬೇಕು ಎನ್ನುವ ಸಲಹೆಯನ್ನು ಕೊಟ್ಟಿದ್ದಾರೆ.  ಇದು ತುಂಬ ಮುಖ್ಯವಾದ ವಿಷಯ.

ಶಿಕ್ಷಣದ ಹಕ್ಕಿನ ಮಸೂದೆಯಲ್ಲಿ 6ರಿಂದ 14 ವರ್ಷದ ವಯೋಮಾನದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಕೊಡುವ ಮುಖ್ಯ ವಿಷಯದೊಂದಿಗೆ ಶಾಲಾಪೂರ್ವದ ಮಕ್ಕಳ ಆರೈಕೆ ಮತ್ತು ಶಿಕ್ಷಣದ ಕಾರ್ಯಕ್ರಮಗಳ ಕುರಿತು ಪ್ರಸ್ತಾವ ಇದೆ.  ಮಕ್ಕಳ ಬೆಳವಣಿಗೆಯ ಸಂಯೋಜಿತ ಸೇವೆಗಳ ಉಲ್ಲೇಖ ಅಲ್ಲಿ ದೊರೆಯುತ್ತದೆ. ಅಂಗನವಾಡಿ ಮತ್ತು ಶಾಲಾಪೂರ್ವ ಮಕ್ಕಳ ಆರೈಕೆ ಹಾಗೂ ಶಿಕ್ಷಣಗಳನ್ನು 5-6 ವರ್ಷದ ಮಕ್ಕಳಿಗೆ ಕೊಡುವ ಯೋಜನೆಯನ್ನು ಸೇರಿಸಲಾಗಿದೆ.  ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ನಾವು ಕೈಗೊಂಡ ಯಾವುದೇ ಕಾನೂನುಗಳು ಯಶಸ್ವಿ ಆಗದಿರುವುದರ ಹಿಂದೆ ಶಾಲಾಪೂರ್ವ ಶಿಕ್ಷಣ(ಕೆ.ಜಿ)ವನ್ನು ಸರಕಾರದ ಮಟ್ಟದಲ್ಲಿ ನಡೆಸದೆ ಇರುವುದೂ ಒಂದು ಕಾರಣ. ಬಾಲವಾಡಿ ಮತ್ತು ಅಂಗನವಾಡಿಗಳು ಇದ್ದರೂ ಅವು ಖಾಸಗಿ ವಲಯದ ಕೆ.ಜಿ. ಶಿಕ್ಷಣದ ಜೊತೆಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ.

ಭಾರತವನ್ನು ಇಂದು ಕಾಡುತ್ತಿರುವ ಭಯ ಆತಂಕಗಳಲ್ಲಿ ಭಯೋತ್ಪಾದನೆ ಇತ್ತೀಚೆಗಂತೂ ಹೆಚ್ಚು ಪ್ರಚಾರಕ್ಕೆ ಬಂದಿದೆ.  ಬಡತನ ಮತ್ತು ನಿರುದ್ಯೋಗ ಜೊತೆ ಸೇರಿ ಶಿಷ್ಟ ಸಮಾಜದಿಂದ ಅಪರಾಧ ಎಂದು ಕರೆಯಲಾಗುವ ಎಲ್ಲ ಚಟುವಟಿಕೆಗಳು ಭಯೋತ್ಪಾದನೆಯ ಗರ್ಭದಲ್ಲಿ ಅಡಗಿ ಕುಳಿತಿವೆ. ಎಳೆಯ ಮನಸ್ಸುಗಳ ಎಳೆಯ ವಯಸ್ಸುಗಳ ಮಿದುಳುಗಳನ್ನು ತೊಳೆದು ತಮಗೆ ಬೇಕಾದ ಬಣ್ಣದ ದ್ರಾವಣದಲ್ಲಿ ಅದ್ದಿ ತೆಗೆದು ಅಂತಹ ಮಿದುಳುಗಳನ್ನು ಬಹುಬಗೆಯ ಬಾಂಬುಗಳ ರೂಪದಲ್ಲಿ ಸಿಡಿಸುವ ಪ್ರವೃತ್ತಿ ಹೆಚ್ಚಾಗುತ್ತಲೇ ಬಂದಿದೆ. ಮಿದುಳುಗಳನ್ನು ತೊಳೆಯುವುದು (ಬ್ರೈನ್ ವಾಶಿಂಗ್) ಎನ್ನುವ ಪರಿಭಾಷೆ ತುಂಬ ಅರ್ಥಪೂರ್ಣವಾದುದು. ಖಾಲಿಯಿರುವ ಮಿದುಳುಗಳು ತೊಳೆಯಲು ದೊರೆಯುತ್ತವೆ ಮತ್ತು ತಮಗೆ ಇಷ್ಟವಾದುದನ್ನು ತುಂಬಲು ಸಿಗುತ್ತವೆ. ಅಪರಾಧ ಭಯೋತ್ಪಾದನೆ ಇವೆಲ್ಲವೂ ಎಳೆಯ ಮಿದುಳುಗಳನ್ನು ಬಾಹ್ಯ ಶಕ್ತಿಗಳು ನಿಯಂತ್ರಿಸಿ ಬಳಸಿದಾಗ ನಿರ್ಮಾಣವಾಗುವ ಭಸ್ಮಾಸುರರು.

ಭಾರತದಲ್ಲಿ ಉದ್ಯೋಗದ ವ್ಯಾಕರಣವು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ.  ಸಾಂಪ್ರದಾಯಿಕ ಕಸುಬುಗಳು, ಕೃಷಿ ಮುಂತಾದವು ಸ್ವಾಯತ್ತ ಗ್ರಾಮೀಣ ಸಮಾಜಗಳಿಗೆ ಸ್ವಾವಲಂಬಿ ಬದುಕನ್ನು ಆತ್ಮವಿಶ್ವಾಸವನ್ನು ತಂದುಕೊಡುತ್ತಿದ್ದ ಭಾರತವೊಂದಿತ್ತು.  ಆದರೆ ಅದೇ ಗ್ರಾಮೀಣ ಭಾರತದಲ್ಲಿ ಅಸ್ಪೃಶ್ಯತೆ, ಜಾತೀಯತೆ, ಊಳಿಗಮಾನ್ಯ ಪದ್ಧತಿ, ಹೆಣ್ಣುಮಕ್ಕಳ ಸಾವು ಇಂತಹ ಸಾಮಾಜಿಕ ಕಾಯಿಲೆಗಳು ಪ್ರಬಲವಾಗಿದ್ದುವು. ಆಧುನಿಕತೆ, ಜಾಗತೀಕರಣ ಮತ್ತು ವ್ಯಕ್ತಿ ಸ್ವಾತಂತ್ರ್ಯ ರೂಪದ ಪ್ರಜಾಪ್ರಭುತ್ವ-ಇವೆಲ್ಲ ಒಟ್ಟು ಸೇರಿ ಆಧುನಿಕ ಭಾರತದ ಉದ್ಯೋಗ ಮತ್ತು ಆರ್ಥಿಕತೆಯ ಅಂಗರಚನೆಯನ್ನು ಸಂಪೂರ್ಣವಾಗಿ ಬದಲಾಯಿಸಿವೆ. ‘ರೂಪಾಂತರವನ್ನು ಸಂಭ್ರಮಿಸುವುದು’ ಎನ್ನುವ ಪರಿಕಲ್ಪನೆಯು ರೂಪಾಂತರದ ಒಳಿತು ಕೆಡುಕುಗಳನ್ನು ಪರಿಶೀಲಿಸಿಯೇ ನಿಜವಾಗಬೇಕು.

ಕಳೆದ ಇಪ್ಪತ್ತು ವರ್ಷಗಳಿಂದ ಆಥರ್ಿಕ ಉದಾರೀಕರಣ ಮತ್ತು ಮಾಹಿತಿ ತಂತ್ರಜ್ಞಾನದ ದೊಡ್ಡ ಪ್ರಮಾಣದ ಪರಕಾಯಪ್ರವೇಶದಿಂದ ಭಾರತದ ಆರ್ಥಿಕ ವ್ಯವಸ್ಥೆ ಎರಡು ಅತಿರೇಕಗಳ ನಡುವೆ ಹೋಳಾಗಿ ದೊಡ್ಡ ಕಂದರವೊಂದು ನಿರ್ಮಾಣವಾಯಿತು. ಇಪ್ಪತ್ತೈದರ  ಯುವಕ-ಯುವತಿಯರು ತಿಂಗಳಿಗೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಸಂಬಳದಿಂದ ಜೀವನವನ್ನು ಆರಂಭಿಸಿದರೆ, ಐವತ್ತರ ಹರೆಯದವರು ಮೂವತ್ತು ವರ್ಷಗಳ ದುಡಿತದ ಬಳಿಕವೂ ದಿನಕ್ಕೆ ನೂರು ರೂಪಾಯಿ ಪಡೆಯಲು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಇವೆರಡರ ಮಧ್ಯಮಮಾರ್ಗದಲ್ಲಿ ಸಂಘಟಿತ ವಲಯದ ಸಂಬಳ ಪಡೆಯುವ ಮಧ್ಯಮವರ್ಗವೊಂದು ಸಣ್ಣ ಪ್ರಮಾಣದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಾ ಉದ್ಯೋಗವಲಯದ ಒಟ್ಟು ಪ್ರಮಾಣದಲ್ಲಿ ಸಂಕೋಚಗೊಳ್ಳುತ್ತಾ ಬಂದಿತು. ಉದ್ಯೋಗದ ಅವಕಾಶಗಳು ತೀರ ಮಿತವಾಗಿ ಶಿಕ್ಷಣ ಪಡೆದ ನಿರುದ್ಯೋಗಿಗಳ ಪ್ರಮಾಣ ದೊಡ್ಡದಾಗಿ ಬೆಳೆಯುತ್ತಾ ಅವಕಾಶಗಳ ಬಾಗಿಲು ಬಡಿದು ನಿರಾಶರಾಗಿ ಖಿನ್ನತೆಯ ಕಾರಣವಾಗಿ ಮುದುಡುತ್ತಾ ಕೆಲವೊಮ್ಮೆ ಕ್ರೂರವಾಗುತ್ತಾ ಸಮಾಜದ ಗರ್ಭದೊಳಗೆ ಅಶಾಂತಿಯ ಲಾವಾರಸ ಕುದಿಯಲು ಕಾರಣವಾಯಿತು.

ಉದ್ಯೋಗಾಧಾರಿತ ಶಿಕ್ಷಣ ಎನ್ನುವ ಸರಕಾರದ ಯೋಜನೆಗಳು ಪ್ರತ್ಯೇಕವಾಗಿ ಉಳಿದುಕೊಂಡು, ಶಿಕ್ಷಣ ವ್ಯವಸ್ಥೆಯಲ್ಲಿ ಅಲಕ್ಷಿತಅನುಬಂಧವಾಗಿ ಮುರುಟಿಕೊಂಡಿತು.  ಔದ್ಯೋಗಿಕ ಶಿಕ್ಷಣ ಮತ್ತು ತರಬೇತಿ ಎನ್ನುವ ಸಂಸ್ಥೆಯು ಭಾರತ ಸರಕಾರದ ಮಾನವ ಸಂಪನ್ಮೂಲ ಸಚಿವಾಲಯ ಮತ್ತು ಕಾರ್ಮಿಕ ಸಚಿವಾಲಯಗಳ ನಡುವೆ ಅತ್ತಿಂದಿತ್ತ ಜಾಲಾಡಿ ಅನಾಥವಾಯಿತು.  ಐ.ಟಿ.ಐ ಮತ್ತು ಪಾಲಿಟೆಕ್ನಿಕ್ಗಳು ಶಿಕ್ಷಣದ ಮುಖ್ಯ ಧಾರೆಯಿಂದ ಪ್ರತ್ಯೇಕಗೊಂಡು ಎಲ್ಲೂ ಸಲ್ಲದವರ ಅಂತಿಮ ಆಶ್ರಯತಾಣಗಳು ಎನ್ನುವ ಅನಾದರಕ್ಕೆ ಒಳಗಾದುವು.  ಭಾರತದ ಪರಂಪರಾಗತ ತಿಳುವಳಿಕೆ ಮತ್ತು ಆಧುನಿಕ ತಂತ್ರಜ್ಞಾನದ ಅಳವಡಿಕೆ ಇವನ್ನು ಪೂರ್ಣದೃಷ್ಟಿಯಿಂದ ಉದ್ಯೋಗಾವಕಾಶಗಳಿಗೆ ರಹದಾರಿನೀಡುವ ಪ್ರಯತ್ನ ನಡೆಯಲಿಲ್ಲ. ಪರಂಪರಾಗತ ಕಸುಬುಗಳನ್ನು ಜಾತಿಜನಾಂಗಗಳ ವ್ಯಾಪ್ತಿಯಿಂದ ಹೊರಗಡೆ ತರುವುದು ಮತ್ತು ಆ ಕಸುಬುಗಳನ್ನು ಸಾರ್ವತ್ರಿಕಗೊಳಿಸುವುದು ಭಾರತದಲ್ಲಿ ಬಹಳ ಮುಖ್ಯವಾದುದು. ಹಾಗಾಗಿಯೇ ಇತ್ತೀಚೆಗೆ ಇಲಿಗಳನ್ನು ಸಾಕುವ ಸಾಂಪ್ರದಾಯಿಕ ಕಸುಬಿನ ಯೋಜನೆಯನ್ನು ಒಂದು ಜನಾಂಗದವರು ವಿರೋಧಿಸಿ ತಮಗೆ ಇಲಿಗಳನ್ನು ಸಾಕುವುದಕ್ಕಿಂತ ಕಂಪ್ಯೂಟರಿನ ಇಲಿ(ಮೌಸ್)ಗಳನ್ನು ಬಳಸಲು ಅವಕಾಶ ಕಲ್ಪಿಸಿಕೊಡಬೇಕೆಂದು ಹಕ್ಕೊತ್ತಾಯ ಮಂಡಿಸಿದರು.

ಸ್ಯಾಮ್ ಪಿತ್ರೋಡ ಅವರ ರಾಷ್ಟ್ರೀಯ ಜ್ಞಾನ ಆಯೋಗದ ವರದಿಯಲ್ಲಿ ವೃತ್ತಿಪರ ಶಿಕ್ಷಣದ ಕುರಿತು ಒಂದು ಅಧ್ಯಾಯವಿದೆ.  ವೃತ್ತಿಪರ ಶಿಕ್ಷಣ ಎಂಟನೇ ತರಗತಿಯಿಂದ ಆರಂಭವಾಗಿ ಉನ್ನತ ಶಿಕ್ಷಣದವರೆಗೆ ಬೇರೆ ಬೇರೆ ಹಂತಗಳಲ್ಲಿ ಸೇರ್ಪಡೆಗೊಳ್ಳಬೇಕಾದ ಸಂಗತಿಗಳನ್ನು ಅಲ್ಲಿ ಪ್ರಸ್ತಾವಿಸಲಾಗಿದೆ.  ವೃತ್ತಿಪರ ಶಿಕ್ಷಣದ ಧಾರೆಯು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಜೊತೆಗೆ ಕೊಂಡಿಯಂತೆ ಕಾರ್ಯನಿರ್ವಹಿಸಬೇಕಾದ ಬಗೆಯನ್ನು ಅಲ್ಲಿ ವಿವರಿಸಲಾಗಿದೆ. ಉದ್ಯೋಗ ತರಬೇತಿಯ ರಾಷ್ಟ್ರೀಯ ಸಮಿತಿ ಮತ್ತು ರಾಜ್ಯ ಸಮಿತಿಗಳ ಸಂಬಂಧವನ್ನು ತಿಳಿಸಲಾಗಿದೆ. ಇದೇ ಸೋಮವಾರ ಬೆಂಗಳೂರಿನ ವಿಚಾರಸಂಕಿರಣದಲ್ಲಿ ಈ ಎಲ್ಲ ಶಿಫಾರಸ್ಸುಗಳು ಪೂರ್ಣವಾಗಿ ಕಾರ್ಯರೂಪಕ್ಕೆ ಬರಲು ಇನ್ನೂ ಇಪ್ಪತ್ತೈದು ವರ್ಷಗಳು ಬೇಕಾಗಬಹುದು ಎಂದು ಪಿತ್ರೋಡ ಹೇಳಿದ್ದಾರೆ. ಶಿಕ್ಷಣದ ರೂಪಾಂತರಗಳನ್ನು ಮೊಬೈಲ್ ಕ್ರಾಂತಿಯ ಯೋಜನೆಯೊಂದಿಗೆ ಹೋಲಿಸಬಾರದು. ಭಾರತೀಯರು ಬಹಳ ಬೇಗನೆ ತಂತ್ರಜ್ಞಾನವನ್ನು ಒಪ್ಪಿಕೊಳ್ಳುತ್ತಾರೆ. ಜನರು ಮೊಬೈಲ್ಗಳನ್ನು ಅಪ್ಪಿಕೊಂಡ ಹಾಗೆ ಬದಲಾಯಿಸುವ ಹಾಗೆ ಮಿದುಳುಗಳನ್ನು ಒಪ್ಪಿಕೊಳ್ಳಲು ಮತ್ತು ಬದಲಾಯಿಸಲು ಸಿದ್ಧರಾಗುವುದಿಲ್ಲ. ಹಾಗಾಗಿ, ಸಂಪರ್ಕ ಕ್ಷೇತ್ರದ ಮೊಬೈಲ್ ಕ್ರಾಂತಿಯೊಂದಿಗೆ ಮಾನವಸಂಪನ್ಮೂಲದ ಶಿಕ್ಷಣದ ಬದಲಾವಣೆಗಳನ್ನು ಹೋಲಿಸಲು ಸಾಧ್ಯವಿಲ್ಲ.

ಇದೇ ಸೋಮವಾರ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯವರು ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾನಿಲಯ-ಕೈಗಾರಿಕೆಗಳ ಸಹಯೋಗದ ಕಮ್ಮಟವೊಂದರಲ್ಲಿ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಕುಲಪತಿಗಳು ಮತ್ತು ಮಾಹಿತಿ ತಂತ್ರಜ್ಞಾನದ ಅಧಿಕಾರಿ ತಜ್ಞರುಗಳು ಮುಖಾಮುಖಿಯಾದರು. ಮೃದುಕೌಶಲಗಳನ್ನು ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ದಕ್ಕಿಸಿಕೊಳ್ಳುವುದರಿಂದ ಉದ್ಯೋಗವಕಾಶಗಳ ವಿಪುಲ ಅನುಕೂಲಗಳನ್ನು ಪಡೆಯಬಹುದು ಎನ್ನುವುದು ಮಾಹಿತಿ ತಂತ್ರಜ್ಞರ ಪೂರ್ವಕಲ್ಪನೆಯಾಗಿತ್ತು. ಇಂಗ್ಲಿಷ್ನಲ್ಲಿ ಸಮರ್ಪಕವಾಗಿ ಮಾತನಾಡುವುದು, ಕಂಪ್ಯೂಟರ್ನ್ನು ಚೆನ್ನಾಗಿ ಬಳಸುವುದು-ಇಷ್ಟು ಸಾಧ್ಯವಾದರೆ ನಮ್ಮ ಎಲ್ಲ ನಿರುದ್ಯೋಗಿಗಳಿಗೂ ಉದ್ಯೋಗದ ಸ್ವರ್ಗದ ಬಾಗಿಲು ತೆರೆಯುತ್ತದೆ ಎನ್ನುವುದು ಅಲ್ಲಿ ಸೇರಿದ್ದ ಮಾಹಿತಿ ತಂತ್ರಜ್ಞಾನದ ಕಂಪನಿಗಳ ಉತ್ಸಾಹಿ ಅಧಿಕಾರಿಗಳ ಒಕ್ಕೊರಲ ಧ್ವನಿಯಾಗಿತ್ತು.  ಅವರ ಉತ್ಸಾಹದ ಗಿಳಿಪಾಠದ ಮಂಡನೆಗಳ ಬಳಿಕ ನಾವು ಕುಲಪತಿಗಳು ಕೇಳಿದ ಪ್ರಶ್ನೆಗಳು ಅವರಿಗೆ ಮುಜಗರವನ್ನುಂಟು ಮಾಡಿದವು.  ಇಂಗ್ಲಿಷ್ ಭಾಷೆ ಮತ್ತು ಕಂಪ್ಯೂಟರ್ ಜ್ಞಾನ ಇಷ್ಟನ್ನೇ ಕಲಿತು ಎಷ್ಟು ಮಂದಿ ನಮ್ಮ ನಿರುದ್ಯೋಗಿಗಳು ಕಾಲ್ ಸೆಂಟರ್ ಮತ್ತು ಬಿಪಿಓ ಗಳಲ್ಲಿ ಕೆಲಸ ಪಡೆಯಬಹುದು ಮತ್ತು ಉಳಿದ ಅನೇಕ ಕೌಶಲಗಳ ಕ್ಷೇತ್ರದಲ್ಲಿ ಈ ಜ್ಞಾನ ಎಷ್ಟು ಉಪಯುಕ್ತ ಅನ್ನುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರವಿರಲಿಲ್ಲ. ಜಾಗತಿಕ ಆರ್ಥಿಕ ದ್ರವೀಕರಣದ ಈ ಕಾಲಘಟ್ಟದಲ್ಲಿ ನಮ್ಮ ಕಣ್ಣಮುಂದೆಯೇ ಮಂಜುಗಡ್ಡೆಗಳು ಕರಗುತ್ತಿರುವಾಗ ಅದನ್ನೇ ಬಂಡೆಕಲ್ಲೆಂದು ಭ್ರಮಿಸುವ ಜಗತ್ತು ಭಾರತವನ್ನೂ ಕರಗಿಸಿಬಿಡಬಹುದು.

ಭಾರತದ ಉದ್ಯೋಗ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಮಧ್ಯಮವರ್ಗದ ವೇತನ ಮತ್ತು ಅದಕ್ಕನುಗುಣವಾಗುವಂತಹ ಬಹುರೂಪಿ ಕೌಶಲಗಳ ತರಬೇತಿಯು ಶಿಕ್ಷಣದ ಭಾಗವಾಗುವುದು ತೀರಾ ಅವಶ್ಯ. ಸಮಾನ ಉದ್ಯೋಗಕ್ಕೆ ಸಮಾನ ವೇತನ ಎನ್ನುವುದು ನಮ್ಮಲ್ಲಿ ಕ್ರೂರ ವ್ಯಂಗ್ಯವಾಗಿಯೇ ಉಳಿದಿದೆ.  ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಒಬ್ಬ ಅಧ್ಯಾಪಕರು ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದರೆ, ಅದೇ ರೀತಿಯ ಕೆಲಸ ಮಾಡುವ ಇನ್ನೊಬ್ಬ ಅಧ್ಯಾಪಕರು ತಿಂಗಳಿಗೆ ಎರಡು ಸಾವಿರ ರೂಪಾಯಿ ವೇತನ ಪಡೆಯುತ್ತಿರುವುದು ಕರ್ನಾಟಕದಾದ್ಯಂತ ದೇಶದಲ್ಲಿ ಕಾಣುವ ಬರ್ಬರ ಸತ್ಯ.

ಜಾಗತಿಕ ಆರ್ಥಿಕ ಕುಸಿತವು ಭಾರತದಲ್ಲಿ ಹೆಚ್ಚು ವೇತನದ ಉನ್ನತ ಉದ್ಯೋಗಗಳಿಗೆ ಸಂಚಕಾರ ತಂದಿರುವುದು ಇತ್ತೀಚೆಗಿನ ಬೆಳವಣಿಗೆ. ದಿಢೀರ್ ಶ್ರೀಮಂತರಾದವರು ದಿಢೀರ್ ಬಡವರಾಗುವ ಸ್ಥಿತಿ ಪ್ರಜಾಪ್ರಭುತ್ವದ ಲಕ್ಷಣವಲ್ಲ. ಉತ್ತಮ ವಿಮಾನಗಳ ಶ್ರೀಮಂತ ದರ್ಜೆಯಲ್ಲಿ ಪ್ರಯಾಣ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಗಳ ಅಧಿಕಾರಿಗಳು ಈಗ ನೀರಿನ ಬಾಟಲಿಗೂ ದುಡ್ಡು ಕೊಡಬೇಕಾದ ಸಾಮಾನ್ಯ ವಿಮಾನಗಳ ಸಾಮಾನ್ಯ ದರ್ಜೆಯ ಕೌಂಟರುಗಳ ಮುಂದೆ ಸರತಿಯ ಸಾಲಿನಲ್ಲಿ ನಿಂತಿರುವ ದೃಶ್ಯವನ್ನು ಕಳೆದ ವಾರ ಬೆಂಗಳೂರು ವಿಮಾನನಿಲ್ದಾಣದಲ್ಲಿ ಕಂಡೆ.  ಇದು ಭಾರತದ ಯೋಜನೆಗಳ ವಿಲೋಮ ಸ್ಥಿತಿಯ ವ್ಯಂಗ್ಯದ ದ್ಯೋತಕ. ಷೇಕ್ಸ್ಪಿಯರ್ ನ ‘ತೈಮಾನ್ ಆಫ್ ಅಥೆನ್ಸ್’ (ಕೆ.ವಿ.ಸುಬ್ಬಣ್ಣ ಅವರ ಕನ್ನಡಾನುವಾದ ‘ಅಥೆನ್ಸಿನ ಅರ್ಥವಂತ’) ನಾಟಕದಲ್ಲಿ ಶೀಮಂತ ತೈಮಾನ್ ದುಂದುವೆಚ್ಚದ ಜಗತ್ತಿನಲ್ಲಿ ಎಲ್ಲವನ್ನೂ ಕಳೆದುಕೊಂಡು ಭಿಕಾರಿಯಾಗುತ್ತಾನೆ.  ಕೊನೆಗೆ ದಾರ್ಶನಿಕನಂತೆ ಮಾತನಾಡುತ್ತಾನೆ. ಚಿನ್ನದ ಕುರಿತು ತೈಮಾನ್ನ ವ್ಯಾಖ್ಯಾನ ಹೀಗಿದೆ :

‘ಈ ಹಳದಿ ಹೊಳಪು ಗುಲಾಮ ಪಾಪದ

ನಂಟು ನೆಯ್ಯುತ್ತಾನೆ.  ಧರ್ಮದ ಗಂಟುಗಳನ್ನು ಛಿದ್ರ

ಗೊಳಿಸುತ್ತಾನೆ.  ಶಪಿತರನ್ನು ಆಶೀರ್ವದಿಸುತ್ತಾನೆ.  ಹೇಡಿಗಳನ್ನು

ಆರಾಧಿಸುತ್ತಾನೆ.  ಕಳ್ಳರನ್ನು ಗಾದಿಯ ಮೇಲೆ

ಹತ್ತಿಕೂಡಿಸಿ ಭಳಿರೇ ಪರಾಕು ಬಿರುದು ಹಾಡುತ್ತಾನೆ’.

ಕುಸಿಯುತ್ತಿರುವ ಶ್ರೀಮಂತಿಕೆ ಮತ್ತು ಹಸಿಯುತ್ತಿರುವ ಬಡತನದಿಂದಾಗಿ ಆಧುನಿಕ ಭಾರತದಲ್ಲಿ ಹೊಸ ಮಾದರಿಯ ಶಿಕ್ಷಣ, ಉದ್ಯೋಗ, ಆರ್ಥಿಕತೆಯ ಹೊಂದಾಣಿಕೆಗಳಿಗೆ ಅವಕಾಶ ಕಲ್ಪಿಸುವ ಕಾಲ ಬಂದಿದೆ.  ಉದ್ಯೋಗಸ್ಥ ತರುಣರು ‘ವ್ಯಾಪಾರ ವಹಿವಾಟು’ ಎನ್ನುವ ಹೆಸರಿನಲ್ಲಿ ನಡೆಸುವ ಅನೇಕ ಚಟುವಟಿಕೆಗಳು ಕೇವಲ ಆರ್ಥಿಕ ದಿವಾಳಿತನದ ಮೂಲಕ ಸಾವಿರಾರು ಮಂದಿಗೆ ವಂಚನೆಮಾಡುವುದಷ್ಟಕ್ಕೇ  ಪರ್ಯಾವಸಾನಗೊಳ್ಳದೆ, ಅನೇಕ ರೀತಿಯ ಅಪರಾಧ ಪ್ರವೃತ್ತಿಗಳಿಗೆ ಗುಪ್ತತಾಣವಾಗುತ್ತಿರುವುದು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.

ಅರವಿಂದ ಅಡಿಗ ಅವರ ‘ದಿ ವೈಟ್ ಟೈಗರ್’ ಕಾದಂಬರಿಯ ಕೊನೆಯಲ್ಲಿ ಚಾಲಕನೊಬ್ಬನು ಮಾಲೀಕನಾಗುತ್ತಾನೆ. ಆತ ತನ್ನದೇ ಸ್ವಂತ ಉದ್ಯಮದ ವ್ಯವಸ್ಥಾಪಕನಾಗುತ್ತಾನೆ. ಆದರೆ ಹಾಗೆ ಆಗುವ ಮೊದಲು ಕಲ್ಲಿದ್ದಲು ಮತ್ತು ಕಪ್ಪು ಹಣದ ಮೂಲಕ ಶ್ರೀಮಂತನಾದ ಮಾಲೀಕನು ನಿಸ್ಸಹಾಯಕನಾಗುತ್ತಾನೆ. ಚಾಲಕನು ತನ್ನ ಕ್ರೌರ್ಯದ ಮೂಲಕ ಕೊಲೆಗಾರನಾಗುತ್ತಾನೆ ಹಾಗೂ ದೋಚಿದ ಸಂಪತ್ತಿನಿಂದ ತನಗೆ ಬೇಕಾದಂತೆ ಕಾನೂನು ವ್ಯವಸ್ಥೆಯನ್ನು ಕೊಂಡುಕೊಂಡು ಆಡಳಿತ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಪರಾಧಗಳನ್ನೇ ಬಂಡವಾಳವಾಗಿಸಿಕೊಂಡೇ ಉದ್ಯಮಿಯಾಗುತ್ತಾನೆ. ಇದು ಭಾರತದಲ್ಲಿ ಇಂದು ಬಹುತೇಕ ಯುವ ಜನಾಂಗದವರ ಗುಪ್ತ ಉದ್ಯಮಶೀಲತೆಯ ಮುಚ್ಚಿದ ಚಿನ್ನದ ಬಟ್ಟಲಿನ ‘ಪಾಸ್ ವರ್ಡ್”. ಇವರು ಶಿಕ್ಷಣ ಪಡೆದವರಿರಬಹುದು ಅಥವಾ ಬದುಕಿನ ಅನುಭವಗಳ ಮೂಲಕವೇ ಯಾವುದೇ ಒಂದು ಕೌಶಲವನ್ನು ಹೊಂದಿರಬಹುದು.  ಆದರೆ ಅಂತಿಮವಾಗಿ ನಮ್ಮ ಸಾಮಾಜಿಕ ವ್ಯವಸ್ಥೆ ಚಲಿಸುತ್ತಿರುವ ನಿಗೂಢ ಮಾರ್ಗ ಮಾತ್ರ ಭಯಾನಕವಾದುದು.

ವಿಚಾರಮಂಥನ ಮಾಡುವ ಸಂಕಿರಣಗಳನ್ನು  ಕಮ್ಮಟಗಳನ್ನು, ಶಿಬಿರಗಳನ್ನು ‘ಮಿದುಳನ್ನು ತೊಳಸುವ ಕೂಟ’ (ಬ್ರೈನ್ ಸ್ತಾರ್ಮಿಂಗ್ ಸೆಷನ್ಸ್) ಎಂದು ಕರೆಯಲಾಗುತ್ತದೆ. ಆದರೆ ಇಲ್ಲಿ ಮಿದುಳು ಯಾರದು, ತೊಳೆಯುವವರು ಯಾರು, ತೊಳಸಿಕೊಳ್ಳುವವರು  ಯಾರು, ಹೇಗೆ ಮತ್ತು ಯಾಕೆ ಎನ್ನುವ ಪ್ರಶ್ನೆಗಳು ಮುಖ್ಯವಾಗುತ್ತವೆ. ಮತ್ತೆ ಶಾಲೆಯ ಮಕ್ಕಳ ಕಡೆಗೆ ಬಂದರೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದೊಡನೆಯೇ ಮಕ್ಕಳ ಮಿದುಳನ್ನು ಮೊದಲು ತೊಳೆಯುವ, ಬೆಳೆಯುತ್ತಲೇ ತೊಳಸುವ ಮತ್ತು ಅಗತ್ಯಬಿದ್ದರೆ ಮಿದುಳನ್ನು ನುಡಿಸುವ ನಿದರ್ಿಷ್ಟ ವಿನ್ಯಾಸಗಳು ಯಾವುವು ಎಂಬುದು ಸ್ಪಷ್ಟವಾಗಬೇಕು. ಶಾಲೆಗೆ ಹೋಗಲು ತೊಡಗುವ ಮಗುವೊಂದು ಆಟಿಕೆಯ ಪಿಸ್ತೂಲನ್ನು ಹಿಡಿದು ಇನ್ನೊಂದು ಮಗುವನ್ನು ಬೆದರಿಸುತ್ತದೆಯೋ ಅಥವಾ ಸಾರ್ವಜನಿಕ ನಲ್ಲಿಯೊಂದು ಸೋರುತ್ತಿದ್ದರೆ, ಸೋರುವ ನೀರನ್ನು ನಿಲ್ಲಿಸುವ ಕೌಶಲವನ್ನು ಪ್ರಕಟಿಸುತ್ತದೆಯೋ?

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: