ಅಗ್ರಾಳ ಮಾಲೆ: ವರದಿ ಮಾಡುವ ಸರದಿ

Posted on ಮಾರ್ಚ್ 4, 2010. Filed under: Uncategorized |


ಅಗ್ರಾಳ ಪುರಂದರ ರೈ

ನಾನು ಪುತ್ತೂರಿನ ಕೊಂಬೆಟ್ಟುವಿನಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಬಿಡಾರ ಮಾಡಿಕೊಂಡಿದ್ದಾಗ 1961ರಲ್ಲಿ ಒಂದು ದಿನ ಒಂದು ಕಾರು ನಮ್ಮ ಮನೆ ಮುಂದೆ ಬಂದು ನಿಂತಿತು. ಅದರಿಂದ ಇಳಿದು ಇಬ್ಬರು ಅಪರಿಚಿತರು ನಮ್ಮ ಮನೆ ಮುಂದೆ ಬಂದು ನಿಂತರು. ಬಂದವರು ಅಪರಿಚಿತರು ಎಂದು ಗೊತ್ತಾಗಿ ಗಾಬರಿಗೊಂಡೆ. ಮನೆಯೊಳಗೆ ಬಂದವರೇ ತಮ್ಮ ಪರಿಚಯ ಮಾಡಿಕೊಂಡರು. ಅವರು ಬೆಂಗಳೂರು ಪ್ರಜಾವಾಣಿ ಪತ್ರಿಕೆಯ ಪ್ರಧಾನ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಂಪಾದಕ ಬಳಗದ ಇಬ್ಬರು ಹಿರಿಯರಾದ ಎಂ.ಬಿ. ಸಿಂಗ್ ಮತ್ತು ಇ.ಆರ್. ಸೇತೂರಾವ್.

`ನಿಮ್ಮನ್ನೇ ಹುಡುಕಿಕೊಂಡು ಬೆಂಗಳೂರಿನಿಂದ ಬಂದಿದ್ದೇವೆ’ ಎಂದರು. `ನಿಮ್ಮ ಬರಹಗಳನ್ನು ಓದಿದ್ದೇವೆ. ಸಾಹಿತ್ಯ ಚಟುವಟಿಕೆಗಳ ಬಗೆಗೆ ಕೇಳಿದ್ದೇವೆ. ನೀವು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಪುತ್ತೂರಿನಿಂದ ವರದಿಗಾರರಾಗಿರಬೇಕು ಎಂದು ಕೇಳಿಕೊಳ್ಳಲು ಬಂದಿದ್ದೇವೆ’ ಎಂದರು. ನನಗೆ ಆಶ್ಚರ್ಯ ಮತ್ತು ಆತಂಕ. ಆವರೆಗೆ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಗೊತ್ತಿತ್ತೇ ಹೊರತು, ವರದಿ ಮಾಡುವುದು ತಿಳಿದಿರಲಿಲ್ಲ. ಆದರೂ ಅವರ ಒತ್ತಾಸೆ ಕೋರಿಕೆಗೆ ಒಪ್ಪಿಕೊಂಡೆ. ಹೊಸ ವೃತ್ತಿಯೊಂದನ್ನು ಕಲಿಯುವ ಅವಕಾಶವನ್ನು ಕಳೆದುಕೊಳ್ಳಬಾರದೆಂದು ನಿರ್ಧರಿಸಿದೆ. ಹೀಗೆ 1961ರಿಂದ ನಾನು ಪುತ್ತೂರಿನಲ್ಲಿ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾದೆ.

ಎರಡೂ ಪತ್ರಿಕೆಗಳಿಗೆ ಸೇರಿಸಿ ತಿಂಗಳಿಗೆ 20 ರೂಪಾಯಿ ಕೊಡುತ್ತಿದ್ದರು. ಪ್ರಕಟವಾದ ನನ್ನ ಸುದ್ದಿಗಳಿಗೆ ಅವುಗಳ ಅಂಕಣದ ಉದ್ದ ಅಳತೆ ಮಾಡಿ ಬೇರೆ ಲೈನೇಜ್ ಕೊಡುತ್ತಿದ್ದರು. ಆದರೆ ನಾನು ಕಳುಹಿಸಿದ ಸುದ್ದಿ ಪ್ರಕಟವಾಗಿದೆಯೇ ಎಂದು ನೋಡಲು ನಾನೇ ದುಡ್ಡುಕೊಟ್ಟು ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಕೊಳ್ಳಬೇಕಾಗಿತ್ತು. ಹೀಗಿರುತ್ತಾ ಕೆಲವು ವರ್ಷಗಳ ಬಳಿಕ ಒಮ್ಮೆ ಪ್ರಜಾವಾಣಿ ವರದಿಗಾರರ ಮತ್ತು ಏಜಂಟರ ಸಭೆ ಮಂಗಳೂರಿನ ಮೋತಿಮಹಲ್ನಲ್ಲಿ ನಡೆಯಿತು. ಬೆಂಗಳೂರಿನಿಂದ ಪ್ರಜಾವಾಣಿಯ ಒಡೆಯರಾದ ಶ್ರೀ ನೆಟ್ಟಕಲ್ಲಪ್ಪನವರು ಬಂದಿದ್ದರು. ವರದಿಗಾರರ ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ನಾನು ಹೇಳಿದೆ “ನೀವು ಕೊಡುವುದು ತಿಂಗಳಿಗೆ 20 ರೂ. ಸಂಭಾವನೆ. ನಾವು ಕಳುಹಿಸಿದ ಸುದ್ದಿ ಪ್ರಕಟವಾಗಿದೆಯೇ ಎಂದು ನೋಡಲು ನಾನು ನಿಮ್ಮ ಪತ್ರಿಕೆಗಳನ್ನು ಕೊಂಡುಕೊಳ್ಳಲು ಈ ಹಣ ಸಾಕಾಗುವುದಿಲ್ಲ. ಇಂತಹ ಸ್ಥಿತಿಯಲ್ಲಿ ನಾವು ಹೇಗೆ ವರದಿ ಮಾಡುವುದು?” ನನ್ನದು ಈಗ ವರದಿ ಮಾಡುವ ಸರದಿ. ನೆಟ್ಟಕಲ್ಲಪ್ಪನವರಿಗೆ ನನ್ನ ಮಾತು ತಾಗಿತು. “ಆ ಹಿರಿಯರು ಹೇಳುವುದರಲ್ಲಿ ಸತ್ಯ ಉಂಟು” ಎಂದರು.

ಬೆಂಗಳೂರಿಗೆ ಹೋದವರೇ ನಮಗೆ ವರದಿಗಾರರಿಗೆಲ್ಲ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಗಳನ್ನು ಉಚಿತವಾಗಿ ಕಳುಹಿಸುವ ವ್ಯವಸ್ಥೆ ಮಾಡಿದರು. ಪತ್ರಿಕೆಯ ವರದಿಗಾರನಾಗಿ ನಾನು ಪಡೆದ ಅನುಭವಗಳು ಅನೇಕ. ಸಮಾಜದಲ್ಲಿ ಸಾಹಿತಿಗಿಂತಲೂ ಪತ್ರಕರ್ತನಿಗೇ ಹೆಚ್ಚು ಗೌರವ ದೊರೆಯುವುದನ್ನು ಕಂಡೆ. ತಮ್ಮ ಕಾರ್ಯಕ್ರಮಗಳ ಸುದ್ದಿ ಪ್ರಕಟಣೆಗಾಗಿ ಹಲ ತೆರದಲ್ಲಿ ಹಂಬಲಿಸುವವರನ್ನೂ ಕಂಡೆ. ಆದರೆ ನನಗಾದ ಬಹಳ ಮುಖ್ಯವಾದ ಪ್ರಯೋಜನವೆಂದರೆ ಅನೇಕ ಕ್ಷೇತ್ರಗಳ ಜನರೊಂದಿಗೆ ಸಂಪರ್ಕ. ಅನೇಕ ಹೊಸ ಹೊಸ ಅನುಭವಗಳನ್ನು ಪಡೆದುದು. 1961ರಿಂದ 1979ರ ವರೆಗೆ 18 ವರ್ಷಗಳ ಕಾಲ ಪುತ್ತೂರಿನಿಂದ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ವರದಿಗಾರನಾಗಿ ಕೆಲಸ ಮಾಡಿದೆ.

ಪತ್ರಿಕೆಗಳು ಕರ್ನಾಟಕದ ಸಮಸ್ತ ಸುದ್ದಿಗಳನ್ನು ಮನೆ ಬಾಗಿಲಿಗೆ ತರುತ್ತಿದ್ದವು. ಪುತ್ತೂರನ್ನು ಕರ್ನಾಟಕದ ನಕ್ಷೆಯಲ್ಲಿ ಮರು ಸ್ಥಾಪಿಸಲು ವರದಿಗಾರನಾಗಿ ಸಾಧ್ಯವಾದ ಸಂತೃಪ್ತಿ ನನ್ನ ಪಾಲಿಗೆ ದೊರೆಯಿತು. 1969ರಲ್ಲಿ ಪುತ್ತೂರಿನಿಂದ ಮತ್ತೆ ಅಗ್ರಾಳಕ್ಕೆ ಪುಣಚಾಕ್ಕೆ ಹೋದರೂ ವರದಿ ಮಾಡುವುದನ್ನು ಮುಂದುವರಿಸಿದೆ. ಕ್ರಮೇಣ ಊರಿನ ಕೆಲಸಗಳು ಹೆಚ್ಚಾದಂತೆ ಪುತ್ತೂರಿಗೆ ನಿಯತವಾಗಿ ಹೋಗಲು ಸುದ್ದಿ ಕಳುಹಿಸಲು ಅಸಾಧ್ಯವಾಯಿತು. ಕೊನೆಗೆ 1979ರಲ್ಲಿ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ವರದಿಗಾರನ ಹೊಣೆಗಾರಿಕೆಯಿಂದ ನಾನಾಗಿಯೇ ನಿವೃತ್ತಿ ಹೊಂದಿದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: