ಹಿಂಗಬಹುದೇ ತನು ಸೂತಕ ಹಿಂಗಲಾರದೇ ಮನ ಸೂತಕ?

Posted on ಮಾರ್ಚ್ 2, 2010. Filed under: Uncategorized |


ನಾನು ‘ಪ್ರಜಾವಾಣಿ’ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ ಇದು.

ಕಳೆದ ಒಂದು ವಾರದಲ್ಲಿ ಸುರಿದ ರಕ್ತ ಮತ್ತು ಹರಿದ ಕಣ್ಣೀರು ಮತ್ತೊಮ್ಮೆ ನೋವು ಮತ್ತು ಸಿಟ್ಟನ್ನು ಜೊತೆಜೊತೆಯಾಗಿಯೇ ಅನಂತ ರೂಪಗಳಲ್ಲಿ ಪ್ರಕಟಿಸಲು ಅವಕಾಶ ಕಲ್ಪಿಸಿದೆ.  ತಮ್ಮ ಜೀವಗಳನ್ನು ಲೆಕ್ಕಿಸದೆ ಇತರ ಜೀವಗಳನ್ನು ಕಾಯುವ ಛಲ ಮತ್ತು ಹೋರಾಟದ ಮನೋಧರ್ಮವನ್ನು ಪ್ರದರ್ಶಿಸಿದ ಜೀವಂತ ದೇವರುಗಳು ನಮ್ಮ ಬದುಕಿನ ಆದರ್ಶಗಳಾಗಿ ಇರುವಾಗಲೇ ನಮ್ಮನ್ನು ಕಾಯಬೇಕಾದ ನಾಯಕರು ಸಾವಿನ ಸೂತಕದ ಮನೆಯಲ್ಲಿ ತಮ್ಮ ಪ್ರದರ್ಶನಗಳ ಮೂಲಕ ಟೀಕೆಗೆ ಒಳಗಾಗುತ್ತಿದ್ದಾರೆ.

ಕೊಲ್ಲುವ ಜನರು ಇರುವ ಕಾಲದಲ್ಲಿಯೇ ಕಾಯುವವರು ನಮ್ಮ ನಡುವೆ ಇದ್ದಾರೆ ಎನ್ನುವ ಧೈರ್ಯದ ನಡುವೆಯೂ ಅಭದ್ರತೆ, ಆತಂಕ ನಮ್ಮನ್ನು ಇನ್ನಷ್ಟು ಆವರಿಸಿಕೊಂಡಿದೆ.  ನಮ್ಮ ಒಳಗೆ ಮತ್ತು ಹೊರಗೆ ಎರಡೂ ಕಡೆ ಇರುವವರಲ್ಲಿ ಕಾಯುವವರ ಜೊತೆಗೆ ಕೊಲ್ಲುವವರೂ ಇರುವುದೇ ನಮ್ಮ ಭಯಕ್ಕೆ ಕಾರಣ.  ಪರಂಪರೆಯ ಕಟ್ಟಡವೊಂದು ಕುಸಿಯುವುದಕ್ಕಿಂತ ಹೆಚ್ಚಾಗಿ ನೆಮ್ಮದಿಯ ಮನಸ್ಸುಗಳು ಕುಸಿಯುತ್ತಿರುವುದು ತುಂಬಾ ಆತಂಕದ ಸಂಗತಿ.  ಭಗ್ನಗೊಂಡ ಸೌಧವೊಂದನ್ನು ಮತ್ತೆ ಕಟ್ಟಬಹುದು. ಆದರೆ ಭಗ್ನಗೊಂಡ ಮನಸ್ಸುಗಳನ್ನು ಜೋಡಿಸುವುದು ಹೇಗೆ? ಅದನ್ನು ಇನ್ನಷ್ಟು ಭಗ್ನಗೊಳಿಸುವ ಹುನ್ನಾರಗಳು, ಸಾವಿನ ಮನೆಯಲ್ಲಿ ಗಳ ಎಣಿಸುವ ಪ್ರಯತ್ನಗಳು, ಸಂತಾಪವನ್ನು ಬಂಡವಾಳವನ್ನಾಗಿಸುವ ವ್ಯವಸ್ಥೆಗಳು ನಮ್ಮ ಭಯದ ಇನ್ನೊಂದು ಕರಾಳ ಮುಖವನ್ನು ದರ್ಶಿಸುತ್ತವೆ.

ರಾಜಕೀಯ ಎನ್ನುವುದು ಪಕ್ಷಗಳನ್ನು ಮೀರಿ ಎಲ್ಲ ದೇಶಗಳಲ್ಲೂ ಪ್ರಭುತ್ವಾತ್ಮಕವಾಗಿರುವಾಗ, ಇದಕ್ಕೆ ಪ್ರತಿರೋಧವಾಗಿ ಸಾಮಾಜಿಕ ವ್ಯವಸ್ಥೆಯೊಂದು ನಿರ್ಮಾಣವಾಗಬೇಕಾದ ಅಗತ್ಯವಿದೆ.  ಧರ್ಮ ಮತ್ತು ಮತದ ಅನನ್ಯತೆಯನ್ನು ರಾಜಕೀಯವಾಗಿ ಬಳಸಿಕೊಂಡು ಪ್ರಭುತ್ವವನ್ನು ಸ್ಥಾಪಿಸಲು ನಡೆಸುವ ರಾಜಕೀಯ ವ್ಯವಸ್ಥೆ, ಹೆಣಗಳ ಗೋರಿಯ ಮೇಲೆ ಪಕ್ಷವನ್ನು ಸಮುದಾಯವನ್ನು ದೇಶವನ್ನು ಕಟ್ಟುವ ಸಂಚು ಹೂಡುತ್ತದೆ.  ಆರ್ಥಿಕ ವ್ಯವಸ್ಥೆಯು ರಾಜಕೀಯ ಮತ್ತು ಧರ್ಮವನ್ನು ಸಂಪೂರ್ಣವಾಗಿ ಆಳಲು ತೊಡಗಿದ ಪರಿಣಾಮವಾಗಿ ಹಣದಿಂದ ಏನನ್ನೂ ಕೊಳ್ಳಬಹುದು ಮತ್ತು ಯಾರನ್ನೂ ಕೊಲ್ಲಬಹುದು ಎನ್ನುವ ಅಹಂಕಾರ ಜಗತ್ತಿನಾದ್ಯಂತ ಮೆರೆಯತೊಡಗಿದೆ.

ಧರ್ಮವೊಂದು ಗನ್ನಿನಿಂದ ಕೊಲ್ಲುವ ಮೂಲಕ, ರಕ್ತ ಹರಿಸುವ ಮೂಲಕ ತನ್ನ ಕ್ರೂರ ಪ್ರದರ್ಶನವನ್ನು ಮಾಡುವಲ್ಲಿ ಹಣದ ಬಲ ಖಂಡಿತವಾಗಿಯೂ ಪ್ರಧಾನವಾಗಿದೆ. ಪಂಚತಾರಾ ಹೋಟೇಲು ಮತ್ತು ಏಕೆ-47 ಗನ್ನು ಇವೆರಡೂ ಹಣದ ಕೊಬ್ಬಿನ ಎರಡು ರೂಪಕಗಳು. ಒಂದು ಭೋಗ, ಇನ್ನೊಂದು ಹಿಂಸೆ. ಆದರೆ, ಸಾಯುವ ಅಮಾಯಕರು, ಗುಂಡಿಗೆ ಬಲಿಯಾಗುವ ವೀರ ಯೋಧರು ಭೋಗ ಮತ್ತು ಹಿಂಸೆಗಳಿಗೆ ಅತೀತರಾದ ಕಾಯಕ ಜೀವಿಗಳು, ನಮ್ಮ ನಡುವಿನ ಅಪೂರ್ವ ಚೇತನಗಳು. ಭದ್ರತೆ, ಬೇಹುಗಾರಿಕೆ, ಹುನ್ನಾರ, ತಂತ್ರಗಾರಿಕೆ – ಇವೆಲ್ಲವೂ ಒಂದು ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಬಹುದು ; ಆದರೆ ಜನಸಾಮಾನ್ಯರ ಪಾಲಿಗೆ ಇವು ನಿರಂತರ ಭಯದ, ಆತಂಕದ, ಸಾವುನೋವಿನ ಕರಾಳ ಸ್ವಪ್ನಗಳಾಗಿ ಕಾಣಿಸುತ್ತವೆ.

ಅನನ್ಯತೆ (identity) ಎನ್ನುವುದು ವ್ಯಕ್ತಿಗಳಿಗಾಗಲೀ ಸಮುದಾಯಗಳಿಗಾಗಲೀ ಸಾಮಾಜಿಕ ಘಟಕಗಳಿಗಾಗಲೀ ಮುಖ್ಯವಾದ ಮನ್ನಣೆಯ ಒಂದು ಅಂಶ.  ಒಂದು ಸಮುದಾಯದ ಸದಸ್ಯರನ್ನು ಒಂದುಗೂಡಿಸುವ ಕೊಂಡಿ.  ಒಮ್ಮೆಯೂ ಪರಸ್ಪರ ಭೇಟಿ ಆಗದಿದ್ದರೂ ತಾವೆಲ್ಲ ಒಂದೇ ಎನ್ನುವ ಭಾವನೆಯನ್ನು ಸೃಷ್ಟಿಸುವಂತಹದ್ದು ಅನನ್ಯತೆ.  ಆಯ್ಕೆಯ ಪರಂಪರೆಯ ಭಾಗಗಳನ್ನು ಪ್ರತ್ಯೇಕಿಸಿ, ಸಮೂಹದ ಸಾಂಸ್ಕೃತಿಕ ಸಂವಹನಕ್ಕೆ ಬಳಸುವುದು ‘ಅನನ್ಯತೆ’. ಇದು ಭಾಷೆ, ವೇಷಭೂಷಣ, ಸಂಗೀತ, ಕುಣಿತ, ವಾಸ್ತುಶಿಲ್ಪ, ಇತಿಹಾಸ, ಪುರಾಣ, ಆಚರಣೆ, ಭೌಗೋಳಿಕ ಸ್ಥಳ ಇತ್ಯಾದಿಗಳಿಗೆ ಸಂಬಂಧಿಸಿದ್ದು ಇರಬಹುದು.  ಹೆಸರುಗಳು, ಧ್ವಜಗಳು, ಬಣ್ಣಗಳು ಮುಂತಾದ ಚಿಹ್ನೆಗಳು ಆಗಬಹುದು.  ಇವುಗಳಿಗೆಲ್ಲಾ ಸಾಂಕೇತಿಕ ಅರ್ಥಗಳು ಇರುತ್ತವೆ.  ಅನನ್ಯತೆಯನ್ನು ಹೊಂದಿದ ಸಮುದಾಯವು ಈ ರೀತಿ ಆಯ್ಕೆಮಾಡಿದ ಸಂಕೇತಗಳ ಅರ್ಥ ಮತ್ತು ಭಾವನೆಗಳ ಮೂಲಕ ಒಂದುಗೂಡುತ್ತದೆ.  ಈ ಅರ್ಥ ಮತ್ತು ಭಾವನೆಗಳು ಆ ಸಮುದಾಯದಲ್ಲಿ ಒಂದುಗೂಡುವ ಪ್ರಜ್ಞೆಯನ್ನು ಉಂಟುಮಾಡುತ್ತವೆ. ‘ನಾವು’ ಎನ್ನುವ ಪದವು ವಸ್ತುರೂಪದ ಅಥವಾ ವಿಚಾರರೂಪದ ಸಂಕೇತಗಳಿಗೆ ಭಾವನಾತ್ಮಕ ಐಕ್ಯವನ್ನು ತಂದುಕೊಡುತ್ತದೆ.

ಜನರು  ಅನನ್ಯತೆಯಲ್ಲಿ ಆಸಕ್ತರಾಗಿರುತ್ತಾರೆ. ಈ ಕುರಿತು ತಮ್ಮ ಭಾವನೆಗಳನ್ನು ಒಂದು ಪರಿಕಲ್ಪನೆಯ ರೂಪದಲ್ಲಿ ಅಭಿವ್ಯಕ್ತಿಸಲು ಅವರಿಗೆ ಸಾಧ್ಯವಾಗದಿದ್ದರೂ ಅವರು ಅನನ್ಯತೆಗಳ ಮೂಲಕವೇ ವ್ಯವಹರಿಸುತ್ತಾರೆ. ‘ಅನನ್ಯತೆ’ಯು ಅನೇಕ ಬಾರಿ ತೋರಿಕೆಗಾಗಿ ರೂಪಿಸಿದ್ದು ಆಗಿರುತ್ತದೆ. ಅನ್ಯರು ಒಂದು ಸಮುದಾಯಕ್ಕಾಗಿ ಎಷ್ಟೋ ಬಾರಿ ಅನನ್ಯತೆಯೊಂದನ್ನು ಸಿದ್ಧಮಾಡುತ್ತಾರೆ. ಆದರೆ ಆ ಸಮುದಾಯಕ್ಕೆ ಅಂತಹ ಅನನ್ಯತೆಯ ತಿಳುವಳಿಕೆ ಇರುವುದಿಲ್ಲ. ಒಂದು ಸಮುದಾಯ ಮತ್ತು ಆ ಸಮುದಾಯಕ್ಕೆ ಸೇರಿದ ವ್ಯಕ್ತಿಗಳು ತಮ್ಮ ಸಮುದಾಯದ ಮುಖ್ಯ  ಅಂಶಗಳು, ಮೌಲ್ಯಗಳು, ಧೋರಣೆಗಳು ಅಥವಾ ಸಮಷ್ಠಿಪರಂಪರೆಯಿಂದ ಆಯ್ಕೆಮಾಡಿದ ಪರಂಪರಾಗತ ವೈಶಿಷ್ಠ್ಯಗಳನ್ನು ಪ್ರಕಟಿಸಲು ಬಯಸುತ್ತಾರೆ. ಅನನ್ಯತೆಯ ಭಾವನೆಗಳು ಮತ್ತು ಅವುಗಳ ಪರಿಕಲ್ಪನೆಯ ಅಭಿವ್ಯಕ್ತಿಗಳು ನಾವು ಸಾಮಾನ್ಯವಾಗಿ ತಿಳಿದುಕೊಂಡಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವೈವಿಧ್ಯಮಯವಾಗಿರುತ್ತವೆ ಮತ್ತು ಬದಲಾವಣೆಗೊಳ್ಳುತ್ತವೆ.

ಆಧುನಿಕ ಸಮಾಜಗಳಲ್ಲಿ ‘ಅನನ್ಯತೆ’ ಎಂಬುದು ಬಹಳ ಮಂದಿಗೆ ಒಂದು ಪೊಳ್ಳು ಪರಿಕಲ್ಪನೆ; ಅವರು ನಿಜವಾದ ಅರ್ಥದಲ್ಲಿ ಅದನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಅವರು ಅನನ್ಯತೆಗಳೊಂದಿಗೆ ಕೇವಲ ಆಟ ಆಡುತ್ತಿರುತ್ತಾರೆ. ತೋರಿಕೆಗಾಗಿ ಮಾತ್ರ ಅವರು ಅನನ್ಯತೆಗಳನ್ನು ಬಳಸುತ್ತಾರೆ. ಇದು ಮೂರು ಹಂತದ ಚಾರಿತ್ರಿಕ ಬೆಳವಣಿಗೆಯ ಕೊನೆಯ ಹಂತ. ಸಂಸ್ಕೃತಿಯಲ್ಲಿ ‘ಧರ್ಮ’ದ ಪಾತ್ರವು ಈ ರೀತಿ ಬದಲಾಗುತ್ತಾ ಬಂದಿತು. ಮೊದಲನೆಯ ಹಂತದಲ್ಲಿ ಧರ್ಮವು ಒಂದು ಸ್ಥಳೀಯ ಚೌಕಟ್ಟಿನಲ್ಲಿ ಒಂದು ಆಚರಣೆಯ ಪ್ರಕ್ರಿಯೆಯಾಗಿತ್ತು. ಪದ್ಧತಿಗಳ ಮೂಲಕ ಜನರು ಒಟ್ಟಾಗುತ್ತಿದ್ದರು. ಅವು ಜನರ ಅನನ್ಯತೆಯನ್ನು ತೋರಿಸುತ್ತಿದ್ದವು. ಎರಡನೆಯ ಹಂತದಲ್ಲಿ ಸಮಾಜವು ಹೆಚ್ಚು ಛಿದ್ರ ರೂಪದಲ್ಲಿತ್ತು. ಆದರೆ ‘ಧರ್ಮ’ವು ತಾತ್ವಿಕತೆಯ ರೂಪದಲ್ಲಿ ಸಮಾಜವನ್ನು ಒಟ್ಟುಗೂಡಿಸುತ್ತಿತ್ತು. ಮೂರನೆಯ ಹಾಗೂ ಇತ್ತೀಚಿನ ಹಂತದಲ್ಲಿ ಧರ್ಮವನ್ನು ವಿಭಿನ್ನ ಪ್ರವೃತ್ತಿಯ ಸಾರ್ವಜನಿಕ ಪ್ರೇಕ್ಷಕರಿಗಾಗಿ ಪ್ರದರ್ಶಿಸಲಾಗುತ್ತಿದೆ. ಆದರೆ ಇದು ತಾತ್ಕಾಲಿಕವಾದ ಮತ್ತು ತೋರಿಕೆಯ ಅನನ್ಯತೆಯಾಗಿದೆ.

ಯಾವುದೇ ವ್ಯಕ್ತಿ ಸ್ವಭಾವತಃ ಮತಾಂಧ ಆಗಿರುವುದಿಲ್ಲ. ಆದರೆ ಒಂದು ಮತದ ಒಳಗಡೆ ತನ್ನನ್ನು ಗುರುತಿಸಿಕೊಳ್ಳುವುದು ಅನಿವಾರ್ಯ ಎಂಬ ಕೃತಕ ವಾತಾವರಣ ನಿರ್ಮಾಣವಾಗಿರುವುದು ರಾಜಕೀಯದಲ್ಲಿ ನಿಷೇಧಾತ್ಮಕ ರೂಪದಲ್ಲಿ. ಆದ್ದರಿಂದಲೇ  ಇದು ಸಂಘರ್ಷವನ್ನೇ ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡಿರುತ್ತದೆ. ರಾಜಕೀಯ ಮತ್ತು ಧಾಮರ್ಿಕ ಚಳವಳಿಗಳು ಆಧುನಿಕ ಸಮಾಜಗಳ ಹೊಸ ಅಗತ್ಯಗಳಿಗೆ ಬೇಕಾದ ಅನನ್ಯತೆಗಳನ್ನು ರೂಪಿಸಲು ಅಶಕ್ತವಾದಾಗ ಮೂಲಭೂತವಾದದ ಪ್ರವೃತ್ತಿಯನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಮೂಲ ಪರಂಪರೆಗೆ ಹಿಂದಿರುಗಲು ಒತ್ತಾಸೆ ನೀಡುವ ಇವು ಮೂಲ ಪರಂಪರೆಯ ಬಗ್ಗೆ ತಮ್ಮದೇ ಆದ ಸೀಮಿತ ಹಾಗೂ ತಪ್ಪು ಕಲ್ಪನೆಗಳನ್ನು ಹೊಂದಿರುತ್ತವೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮತೀಯ ಮೂಲಭೂತವಾದ ಈ ಸ್ವರೂಪದ್ದು. ಇಲ್ಲೆಲ್ಲಾ ಮತಧರ್ಮ ಎನ್ನುವುದು ವ್ಯಾವಹಾರಿಕ ಉದ್ದೇಶಕ್ಕಾಗಿ ಬಳಕೆಯಾಗುವ ರಾಜಕೀಯ ಸಾಧನವೇ ಹೊರತು, ಅದೇ ನಿಜವಾದ ಅನನ್ಯತೆಯಾಗಿ ಉಳಿದಿಲ್ಲ.

ಜಾಗತಿಕವಾಗಿ ಬಲಿಷ್ಠ ರಾಷ್ಟ್ರಗಳು ಮತ್ತು ದುರ್ಬಲ ರಾಷ್ಟ್ರಗಳು ತಮ್ಮ ಶಕ್ತಿಯ ವಿಸ್ತರಣೆಗಾಗಿ ಮತ್ತು ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಾಹ್ಯ ಯುದ್ಧ ಮತ್ತು ಗುಪ್ತ ಯುದ್ಧಗಳಿಗೆ ಬೆಂಬಲವನ್ನು ಕೊಡುತ್ತವೆ.  ಅಮೇರಿಕ ಮತ್ತು ಚೀನಾದಂತಹ ರಾಷ್ಟ್ರಗಳು ಜಾಗತಿಕ ಪ್ರಭುತ್ವದ ರ್ಯಾಂಕಿಗಾಗಿ ಅನ್ಯ ದೇಶಗಳ ನಡುವಿನ ವೈಮನಸ್ಸನ್ನು, ಆಂತರಿಕ ದೌರ್ಬಲ್ಯಗಳನ್ನು ಒಂದು ಲಾಭವನ್ನಾಗಿ ಮಾಡಿಕೊಂಡು ಯುದ್ಧ ಮತ್ತು ಶಾಂತಿಯ ಮಂತ್ರಗಳನ್ನು ಒಟ್ಟಿಗೆ ಜಪಿಸುತ್ತವೆ.  ಘಾಸಿ ಮಾಡುವ ಮತ್ತು ಆರೈಕೆ ಮಾಡುವ ಎರಡೂ ಕೆಲಸಗಳನ್ನು ಒಟ್ಟಿಗೆ ಮಾಡುವ ಕಾರ್ಯತಂತ್ರ ರಾಷ್ಟ್ರೀಯತೆಗೆ ಬಲಿಷ್ಠತೆಯನ್ನು ತಂದುಕೊಡುವ ಒಂದು ಮುಖ್ಯವಾದ ಮಾರ್ಗ.  ಆರ್ಥಿಕವಾಗಿ ದುರ್ಬಲವಾಗಿರುವ, ಆದರೆ ಹೊರಜಗತ್ತಿಗೆ ಆಧುನಿಕ ಸೌಕರ್ಯಗಳ ಸಂಪತ್ತುಗಳ ಪ್ರದರ್ಶನಮಾಡಬಯಸುವ ದೇಶಗಳು ತಮ್ಮ ಆಡಳಿತದ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಆಕ್ರಮಣಶೀಲತೆಯನ್ನು ಪ್ರಚೋದಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲಿವೆ.  ಪ್ರಜೆಗಳನ್ನು ಕಾಯಲು ಸಾಧ್ಯವಾಗದವರು ಅನ್ಯರ ಮೇಲೆ ಆಕ್ರಮಣ ಮಾಡಲು ಅಭಿಪ್ರಾಯ ನಿಮರ್ಾಣದ ಕಾಖರ್ಾನೆಗಳನ್ನು ತೆರೆದು ದ್ವೇಷದ ಉತ್ಪನ್ನಗಳನ್ನು ಉತ್ಪಾದಿಸಿ ಜನರನ್ನು ನಿರಂತರ ಭಯೋತ್ಪಾದನೆಯ ಯುದ್ಧದ ಸರ್ಪದ ಹೆಡೆಯ ನೆರಳಲ್ಲಿ ಬದುಕಬೇಕಾದ ಅನಿವಾರ್ಯತೆಗೆ ತಂದೊಡ್ಡುತ್ತಾರೆ.

ಪಾಕಿಸ್ತಾನ, ಬಾಂಗ್ಲಾದೇಶದಂತಹ ದೇಶಗಳು ದ್ವೇಷದ ಕಾರ್ಖಾನೆಗಳಲ್ಲಿ ಮತಧರ್ಮದ ಸರಕುಗಳನ್ನು ನಿರ್ಮಿಸುತ್ತಿರುವ ಕ್ರಮ ಈ ಬಗೆಯದ್ದು.  ಇದು ಖಂಡಿತ ಅಲ್ಲಿನ ಜನಗಳ ನಿಜದ ನೆಲೆಯ ಭಾವನೆಗಳಲ್ಲ. ಇಂತಹ ಸ್ಥಿತಿಯಲ್ಲಿ ಭಾರತ ಯಾವುದನ್ನು ತನ್ನ ಆದರ್ಶವನ್ನಾಗಿ ಇಟ್ಟುಕೊಳ್ಳಬೇಕು ಎನ್ನುವುದು ನಮ್ಮ ಅನನ್ಯತೆಯ ಮುಖ್ಯ ಪ್ರಶ್ನೆ.  ಬಲಿಷ್ಠ ರಾಷ್ಟ್ರಗಳ ಕೊಲ್ಲುವ-ಕಾಯುವ ಮಾದರಿಯನ್ನೇ ? ಆರ್ಥಿಕವಾಗಿ ನೈತಿಕವಾಗಿ ಜರ್ಜರಿತವಾಗಿರುವ ರಾಷ್ಟ್ರಗಳಿಗೆ ಪ್ರತಿರೋಧವಾಗಿ ಅವುಗಳದ್ದೇ ಮಾದರಿಯನ್ನೇ ? ಈ ಎರಡಕ್ಕಿಂತಲೂ ಭಿನ್ನವಾಗಿ ಭಾರತದ ಪರಂಪರೆಯ ಶಕ್ತಿ, ಧೈರ್ಯ, ಚಲ, ಸೃಜನಶೀಲತೆ, ಬಹುರೂಪಿ ಬದುಕಿನ ಸಾಧ್ಯತೆ, ಕಾಯಕದ ಬಗೆಗಿನ ಅಪಾರವಾದ ನಂಬಿಕೆ ಮತ್ತು ಇಂತಹ ನೂರಾರು ಶಕ್ತಿಗಳನ್ನು ಕ್ರೋಢೀಕರಿಸಿದ ಬಲಿಷ್ಠ ಬಹುರೂಪಿ ಶಕ್ತಿಯೊಂದರ ನಿಮರ್ಾಣದ ಮೂಲಕ ಜಾಗತಿಕವಾಗಿ ಹೊಸ ಮಾದರಿಯೊಂದನ್ನು ಕಟ್ಟಲು ಸಾಧ್ಯವೇ ? ಉತ್ತರ ಧ್ರುವದ ಬಳಿ ಇರುವ ಫಿನ್ಲ್ಯಾಂಡ್ ಎನ್ನುವ ಪುಟ್ಟ ದೇಶ ಬಹಳ ದೀರ್ಘಕಾಲ ರಷ್ಯ ಮತ್ತು ಸ್ವೀಡನ್ ದೇಶಗಳ ಆಶ್ರಯದಲ್ಲಿತ್ತು. ತಮ್ಮ ಗುಲಾಮತನದಿಂದ 1917 ದಶಂಬರ 6ರಂದು ಮುಕ್ತವಾದಾಗ ಅವರ ಆತ್ಮವಿಶ್ವಾಸದ ಘೋಷಣೆ : ಇನ್ನು ಮುಂದೆ ನಾವು ಸ್ವೀಡಿಷ್ ಜನರಾಗಲಾರೆವು, ರಷ್ಯನ್ ಜನರಾಗಲಾರೆವು, ಹಾಗಾಗಿ ನಾವು ಫಿನ್ನಿಶ್ ಜನರಾಗೋಣ.  ಅಮೆರಿಕಾ ಮತ್ತು ರಷ್ಯ ದೇಶಗಳು ತಮ್ಮ ಒಪ್ಪಂದಕ್ಕೆ ಆಯ್ಕೆ ಮಾಡಿಕೊಂಡಿದ್ದು ಫಿನ್ಲ್ಯಾಂಡ್ ರಾಜಧಾನಿ ಹೆಲ್ಸಿಂಕಿಯನ್ನು.  ನಾನು ಸಾಕಷ್ಟು ಬಾರಿ ಕಂಡ ಈ ಪುಟ್ಟ ದೇಶ ಅನನ್ಯತೆಯ ಬಗ್ಗೆ ಹೊಸ ಚಿಂತನೆಯನ್ನು ಕೊಡಬಲ್ಲ ಒಂದು ಮಾದರಿ ಮಾತ್ರ. ಪ್ರಾರ್ಥನಾ ಸ್ವಾತಂತ್ರ್ಯ, ಕಡ್ಡಾಯ ಶಿಕ್ಷಣ, ಮಿಲಿಟರಿ ಸೇವೆ, ಭೂಮಿಯನ್ನು ಹೊಂದುವ ಹಕ್ಕು ಇತ್ಯಾದಿ ಕಾನೂನು ಅಲ್ಲಿ ನಿಜವಾದವು. ಅರಣ್ಯ ಮತ್ತು ಜಲ ಸಂರಕ್ಷಣೆಯ ಅಪೂರ್ವ ಮಾದರಿ ಅಲ್ಲಿ ಇದೆ.

ಬಲಿಷ್ಠ ಹೊಸ ಅನನ್ಯತೆಯೊಂದು ಅನಂತ ಅರ್ಥಹೀನ ಅನನ್ಯತೆಗಳನ್ನು ಸರಿದೂಗಿಸಬಹುದು. ಜಾತಿ ಮತಗಳ ಅನನ್ಯತೆಗಳಿಗಿಂತ ಬೇರೆಯಾದ ಹೆಚ್ಚು ಗಟ್ಟಿಯಾದ, ಜನರಿಗೆ ರಕ್ಷಣೆ ಪೋಷಣೆ ಘನತೆಗಳನ್ನು ತಂದುಕೊಡಬಲ್ಲ, ಸಾಂಸ್ಕೃತಿಕವಾಗಿ ಎಲ್ಲಾ ವರ್ಗಗಳ ಜನಗಳಿಗೆ ಅಸ್ತಿತ್ವವನ್ನು ಮನ್ನಣೆಯನ್ನು ಮತ್ತು ಒಳಗೊಳ್ಳುವ ಅವಕಾಶಗಳನ್ನು ತಂದುಕೊಡಬಲ್ಲ ಹೊಸ ಪ್ರಬಲ ಅನನ್ಯತೆಯೊಂದನ್ನು ಹುಟ್ಟುಹಾಕಲು ಸಾಧ್ಯವಾದಾಗ ಮಾತ್ರ ನಾವು ಇಂದು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಪರಿಹಾರದ ಕುರಿತು ಯೋಚಿಸಲು ಸಾಧ್ಯ.

05 ಡಿಸೆಂಬರ್, 2008

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: