ಅಗ್ರಾಳ ಮಾಲೆ: ಕಿರಣದಿಂದ ಅಂತಃಕರಣಕ್ಕೆ

Posted on ಫೆಬ್ರವರಿ 28, 2010. Filed under: ನನ್ನ ಅಪ್ಪ.. |


-ಅಗ್ರಾಳ ಪುರಂದರ ರೈ

1935. ನಾನು ಪುತ್ತೂರು ಬೋರ್ಡು ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲ. ಹೈಸ್ಕೂಲಿನಲ್ಲಿ ಮೇಲ್ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಬರಹಗಳನ್ನು ಪ್ರಕಾಶಿಸಲು ‘ಅರುಣ’ ಎಂಬ ಹಸ್ತಪತ್ರಿಕೆ ಇತ್ತು. ಆದರೆ 1ನೇ ಫಾರ್ಮ್ ನಿಂದ 3ನೇ ಫಾರ್ಮ್ ನವರೆಗಿನ ವಿದ್ಯಾರ್ಥಿಗಳಿಗೆ ಅದರಲ್ಲಿ ಬರೆಯಲು ಆಸ್ಪದವಿರಲಿಲ್ಲ. ಇದು ನ್ಯಾಯವಲ್ಲವೆಂದು ಮನಗಂಡ ನಾನು ನನ್ನ ಗುರುಗಳೊಡನೆ ಕಾಡಿ ಬೇಡಿ ಹೋರಾಡಿ ಜಯಶೀಲನಾದೆ. ನನಗೆ ಕನ್ನಡದ ಮೇಲೆ ಅಭಿಮಾನ ಆಸಕ್ತಿ ಉಂಟಾಗಲು ಆಗಿನ ನನ್ನ ಕನ್ನಡದ ಗುರುಗಳಾದ ಶ್ರೀ ಉಗ್ರಾಣ ಮಂಗೇಶರಾಯರು ಕಾರಣರು. ಅವರು ನನ್ನ ವಾದಕ್ಕೆ ಬೆಂಬಲವಿತ್ತು ಸಹಕರಿಸಿದರು. ಕೊನೆಗೆ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ರಾಮನ್ ನಂಬಿಯಾರ್  ರವರು ‘ಅಸ್ತು’ ಎಂದರು. ಒಂದರಿಂದ ಮೂರನೇ ಫಾರ್ಮ್ ನವರೆಗಿನ ಮಕ್ಕಳಿಗಾಗಿ ಪ್ರತ್ಯೇಕ ಪತ್ರಿಕೆ ‘ಕಿರಣ’ ಆರಂಭವಾಯಿತು. ‘ಕಿರಣ’ದ ಸಂಪಾದಕತ್ವ ನನ್ನ ಪಾಲಿಗೆ ಬಂದಿತು. ವಿದ್ಯಾರ್ಥಿಗಳಿಂದ ಸಾಕಷ್ಟು ಪ್ರೋತ್ಸಾಹ ಉತ್ಸಾಹ ದೊರಕಲಿಲ್ಲ. ಆದ್ದರಿಂದ ಪತ್ರಿಕೆಯ ಮುಕ್ಕಾಲು ಪಾಲು ಲೇಖನ ಕವಿತೆ ಹಾಸ್ಯ ಚುಟುಕ ನಾನೇ ಬರೆದು ತುಂಬಿಸಬೇಕಾಯಿತು. ಅಂದಿನ ಆ ಸಂಪಾದಕತ್ವ ನನ್ನ ಸಾಹಿತ್ಯ ಬದುಕಿಗೆ ಚಾಲನೆಯನ್ನು ಕೊಟ್ಟಿತು. ಅದು ನನ್ನಲ್ಲಿ ಸಾಹಿತ್ಯ ಗ್ರಂಥಗಳನ್ನು ಓದುವ ಹವ್ಯಾಸವನ್ನು ಪ್ರಚೋದಿಸಿತು.

ನಾನು ಶಿವರಾಮ ಕಾರಂತರನ್ನು ಮೊದಲು ಕಂಡದ್ದು 1931ರಲ್ಲಿ ಪುತ್ತೂರಿನ ಬೋರ್ಡು ಹಾಯರ್ ಎಲಿಮೆಂಟರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ. ಅವರು ನಿರ್ದೇಶಿಸಿದ ನಾಟಕದಲ್ಲಿ ಆಗ ನಾನು ‘ನಾನಾ ಫಡ್ನನೀಸ’ನ ಪಾತ್ರ ಮಾಡಿದ್ದೆ. ಮುಂದೆ ಪುತ್ತೂರು ಬೋರ್ಡು ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕಾರಂತರನ್ನು ಕಂಡಿದ್ದೆ. ಅವರ ಭಾಷಣ ಕೇಳಿದ್ದೆ. ಆದರೆ ಅವರೊಡನೆ ಮಾತನಾಡುವ ಅವಕಾಶ ದೊರೆತಿರಲಿಲ್ಲ. ನನ್ನ ಹೈಸ್ಕೂಲು ಶಿಕ್ಷಣ ಮುಗಿಸಿದ ಕೂಡಲೇ 1936ರಲ್ಲಿ ಕಾರಂತರ ಮಕ್ಕಳ ಕೂಟದ ಸದಸ್ಯನಾದೆ. 1936ರಿಂದ ಕಾರಂತರ ಮನೆ ಬಾಲವನಕ್ಕೆ ಹೋಗಲು ಆರಂಭಿಸಿದೆ. ನನ್ನ ಓದುವ ಹಸಿವನ್ನು ಹೆಚ್ಚಿಸಿದ್ದು ಮತ್ತು ತಣಿಸಿದ್ದು ಕಾರಂತರಿಂದ ನಾನು ಎರವಲು ಪಡೆದು ಓದುತ್ತಿದ್ದ ಪುಸ್ತಕಗಳು. ಕಾರಂತರಿಗೆ ಗೌರವ ಪ್ರತಿಯಾಗಿ ದೊರೆಯುತ್ತಿದ್ದ ಪುಸ್ತಕಗಳನ್ನು ಅವರು ಓದುವುದಕ್ಕೆ ಮೊದಲೇ ನಾನು ತೆಗೆದುಕೊಂಡು ಹೋಗಿ ಓದಿ ಮುಗಿಸಿ ಹಿಂತಿರುಗಿಸುತ್ತಿದ್ದೆ. ನಾನು ಅಗ್ರಾಳಕ್ಕೆ ಬಂದಾಗ ಮಾಡಲು ಹೆಚ್ಚೇನೂ ಕೆಲಸವಿರುತ್ತಿರಲಿಲ್ಲ. ಹಾಗಾಗಿ ಕಾಲ್ನಡಿಗೆಯಲ್ಲಿ ಪುಣಚಾದ ಅಗ್ರಾಳದಿಂದ ಪುತ್ತೂರಿನ ಬಾಲವನಕ್ಕೆ ಹೋಗಿ ಪುಸ್ತಕಗಳನ್ನು ಓದಲು ತರುತ್ತಿದ್ದೆ. ಒಂದು ಬಾರಿ ಮೂರು ನಾಲ್ಕು ಪುಸ್ತಕ ತರುತ್ತಿದ್ದೆ. ದಿನಕ್ಕೆ ಸುಮಾರು 300 ಪುಟದಷ್ಟು ಓದಿ ಮುಗಿಸುತ್ತಿದ್ದೆ. ಸಾಮಾನ್ಯವಾಗಿ ರಾತ್ರಿ ಊಟ ಮಾಡಿದ ಬಳಿಕ ಪುಸ್ತಕಗಳನ್ನು ಓದುತ್ತಿದ್ದೆ. ಆರಂಭದಲ್ಲಿ ಕಾದಂಬರಿಗಳನ್ನು ಓದುತ್ತಿದ್ದೆ.

ಈಗ ನೆನಪಿರುವಂತೆ ಮೊದಲು ಓದಿದ ಕೆಲವು ಕಾದಂಬರಿಗಳು ಅನಕೃ ಅವರ ಮಂಗಳಸೂತ್ರ, ಉದಯರಾಗ, ಸಂಧ್ಯಾರಾಗ ಮುಂತಾದುವು, ಕೆ.ವಿ. ಅಯ್ಯರ್ ಅವರ ‘ರೂಪದರ್ಶಿ ‘ ಇತ್ಯಾದಿ. ಕಾರಂತರ ಮರಳಿ ಮಣ್ಣಿಗೆ, ಬೆಟ್ಟದ ಜೀವ, ಚೋಮನದುಡಿ, ಕುಡಿಯರ ಕೂಸು ಎಲ್ಲವನ್ನೂ ಆರಂಭದಲ್ಲೇ ಓದಿದ್ದೇನೆ. ಕುಡಿಯರ ಕೂಸು ಕಾದಂಬರಿಯನ್ನು ಮೊದಲು ಓದಿದಾಗ ಸಾಮಾನ್ಯ ಕೃತಿ ಅನ್ನಿಸಿತ್ತು. ಆಮೇಲೆ ನನ್ನ ಅಕ್ಕನಿಗೆ ಬೆಳ್ತಂಗಡಿ ಪರಿಸರದಲ್ಲಿ ಮಲೆಯ ತಡಿಯಲ್ಲಿ ಆಸ್ತಿ ಮಾಡಿದ ಬಳಿಕ ಅಲ್ಲಿನ ಬೆಟ್ಟಗಳಲ್ಲಿ ಸುತ್ತಾಡಿದ ಮೇಲೆ ‘ಕುಡಿಯರ ಕೂಸು’ ಹೊಸ ಅನುಭವವನ್ನು ಕೊಟ್ಟಿತು. ಓದುಗನಿಗೆ ಬರಹದ ಹಿನ್ನೆಲೆ ಗೊತ್ತಿದ್ದಾಗ, ಸಾಹಿತ್ಯ ಕೃತಿ ಚೆನ್ನಾಗಿ ಅರ್ಥವಾಗುತ್ತದೆ ಎಂಬುದು ಮನನವಾದದ್ದು ನನಗೆ ಆಗಲೇ.

ಕಾರಂತರ ಬಹುತೇಕ ಎಲ್ಲ ಕೃತಿಗಳನ್ನೂ ಅವು ಪ್ರಕಟವಾದ ತಕ್ಷಣ ಓದಿ ಮುಗಿಸುತ್ತಿದ್ದೆ. ಅವರ ಹರ್ಷ ಪ್ರಕಟಣಾಲಯದಿಂದ ಹೊರಬಂದ ಕೂಡಲೇ ಬಿಸಿಬಿಸಿಯಾಗಿಯೇ ಜೀರ್ಣಿಸಲು ಪ್ರಯತ್ನಿಸುತ್ತಿದ್ದೆ. ಹೆಚ್ಚಿನ ಅವರ ಕೃತಿಗಳ ಒಂದು ಪ್ರತಿಯನ್ನು ಅವರು ನನಗೆಯೇ ಕೊಡುತ್ತಿದ್ದರು. ಲೀಲಾ ಕಾರಂತರೂ ತಮ್ಮ ಸಾಹಿತ್ಯ ಕಲೆಗಳ ಜ್ಞಾನದ ಪಾಲನ್ನು ನನಗೆ ಒದಗಿಸುತ್ತಿದ್ದರು. ಹೀಗೆ ಓದುವ ಹಸಿವೆಯನ್ನು ಹಿಂಗಿಸಲು ಮೊದಲಾದ ನನ್ನ ಸಂಬಂಧವು ಕಾರಂತ ದಂಪತಿಗಳ ಕುಟುಂಬದ ಸದಸ್ಯನಂತೆ ಆತ್ಮೀಯವಾಗುತ್ತ ಮುಂದುವರಿಯಿತು. ಲೀಲಾ ಕಾರಂತರು ಮತ್ತು ಅವರ ಮಕ್ಕಳು ಅಗ್ರಾಳದ ನಮ್ಮ ಮನೆಯಲ್ಲಿ ಬಂದು ದಿನಗಟ್ಟಲೆ ಇರುತ್ತಿದ್ದರು. ನನ್ನ ಹೆಂಡತಿ ಯಮುನಾಳಿಗೆ ಲೀಲಾ ಕಾರಂತರೆಂದರೆ ಒಡಹುಟ್ಟಿದ ಅಕ್ಕನಿಗಿಂತ ಹೆಚ್ಚು. ಸಸ್ಯಾಹಾರದ ರುಚಿಕರವಾದ ಬಹುಬಗೆಗಳನ್ನು ಯಮುನಾ ಕಲಿತದ್ದು ಲೀಲಾ ಕಾರಂತರಿಂದ. ಮಾಲವಿಕಾ ಉಲ್ಲಾಸ ಕ್ಷಮಾ ಅಗ್ರಾಳಕ್ಕೆ ಬಂದರೆ ನಮ್ಮ ಮಕ್ಕಳ ಜೊತೆ ಆಟವಾಡಿ, ತೋಟದ ಪಕ್ಕದ ಕೆರೆಯಲ್ಲಿ ಮುಳುಗಿ ಈಜಾಡಿ ಖುಷಿಪಡುತ್ತಿದ್ದರು.

ನನಗೆ ಮೊದಲನೆಯ ಗಂಡು ಮಗು ಹುಟ್ಟಿದಾಗ, 1946ರಲ್ಲಿ ಮಗುವಿಗೆ ಹೆಸರು ಸೂಚಿಸಲು ಕಾರಂತರಲ್ಲಿಗೆ ಬಾಲವನಕ್ಕೆ ಹೋದೆ. ಅವರು ‘ವಿವೇಕ’ ಎಂದು ಇಡು ಎಂದರು. ನನಗೆ ಅದು ‘ವಿವೇಕಾನಂದ’ ಎಂದು ಕೇಳಿಸಿತು. ‘ವಿವೇಕಾನಂದ ಎಂದೇ?’ ಎಂದು ಕೇಳಿದೆ. ಆನಂದ ಗೀನಂದ ಏನೂ ಬೇಡ. ವಿವೇಕ ಇದ್ದರೆ ಆನಂದ ತನ್ನಿಂದ ತಾನೇ ಬರುತ್ತದೆ ಎಂದರು. ನನ್ನ ಎರಡನೆಯ ಮಗನಿಗೆ ‘ಉಲ್ಲಾಸ’ ಎಂದು ಹೆಸರು ಇಟ್ಟೆ. ಕಾರಂತರ ಮಗ ‘ಉಲ್ಲಾಸ’ನ ಹೆಸರಿನ ಪ್ರೇರಣೆಯಿಂದ ಇವನಿಗೆ ಆ ಹೆಸರು ಇಟ್ಟದ್ದು.

ನನ್ನ ಮೊದಲನೆಯ ಬರಹ ‘ಸೋಡ್ತಿ’ ಪ್ರಕಟವಾದದ್ದು ರಾಶಿ ಸಂಪಾದಕರಾಗಿದ್ದ ‘ಕೊರವಂಜಿ’ ಪತ್ರಿಕೆಯಲ್ಲಿ 1943ರಲ್ಲಿ. ‘ಸೋಡ್ತಿ’ ಕತೆಯೂ ಹೌದು, ಆತ್ಮಕತೆಯೂ ಹೌದು. ಮುಂದೆ ‘ಕೊರವಂಜಿ’ಯಲ್ಲಿ ಮುಂದೇನು ದಾರಿ, ದೊಡ್ಡ ಉಪಕಾರ ಎಂಬ ಮತ್ತೆ ಎರಡು ಕತೆಗಳು ಪ್ರಕಟವಾದುವು. ಅವನ ಬಿ.ಎ. ಡಿಗ್ರಿ, ನಮ್ಮೂರ ಮಾರಿ, ಬಸ್ಲೇಟ್, ಆ ತೆರದೊಳ್ ನಿನ್ನನಾಹ್ವಾನಿಸೆನು, ದೇವರೆಲ್ಲಿ? ಪತ್ರಿಕೆಗಳಿಂದ – ಈ ಕತೆಗಳು 1943ರಿಂದ 1951ರ ಅವಧಿಯಲ್ಲಿ ಸಂಗಾತಿ (ಸಂಪಾದಕರು : ನವೀನಚಂದ್ರ, ಮಂಗಳೂರು), ನೂತನ (ಸಂಪಾದಕರು : ಹ.ರಾ. ಕಿದಿಯೂರು, ಧಾರವಾಡ), ಸವರ್ೋದಯ (ಸಂಪಾದಕರು : ಎನ್.ಎಸ್. ಕಿಲ್ಲೆ, ಮಂಗಳೂರು) ಪತ್ರಿಕೆಗಳಲ್ಲಿ ಪ್ರಕಟವಾದುವು. ನನ್ನ ಆರಂಭದ ಈ ಎಂಟು ಕತೆಗಳನ್ನು ಶ್ರೀ ಹ.ರಾ. ಕಿದಿಯೂರು ಅವರು ತಮ್ಮ ನೂತನ ಪ್ರಕಾಶನ ಸಮಿತಿ, ಧಾರವಾಡದಲ್ಲಿ ‘ರಸಾಯನ’ ಎಂಬ ಹೆಸರಿನಲ್ಲಿ ಜುಲೈ 1952ರಲ್ಲಿ ಪ್ರಕಟಿಸಿದರು. ನನ್ನ ಚೊಚ್ಚಿಲ ಈ ಕೃತಿ ‘ರಸಾಯನ’ವನ್ನು ಶಿವರಾಮ ಕಾರಂತ – ಲೀಲಾ ಕಾರಂತರಿಗೆ ಅಪರ್ಿಸಿದ್ದೇನೆ.

ಈ ವೇಳೆಗೆ ಸಾಹಿತಿ ನಿರಂಜನರು ‘ಚಿತ್ರಗುಪ್ತ’ ಪತ್ರಿಕೆಯಲ್ಲಿ ‘ಸಾಧನ ಸಂಚಯ’ ಎಂಬ ಹೆಸರಿನಲ್ಲಿ ಅಂಕಣ ರೂಪದಲ್ಲಿ ಪತ್ರ ಲೇಖನವನ್ನು ಬರೆಯುತ್ತಿದ್ದರು. ಇದರಿಂದ ಪ್ರಭಾವಿತರಾಗಿ ನಾನು ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಎನ್.ಎಸ್. ಕಿಲ್ಲೆ ಸಂಪಾದಕತ್ವದ ‘ಸರ್ವೋದಯ’ ವಾರಪತ್ರಿಕೆಯಲ್ಲಿ ‘ಪರಿಮಳೆಗೆ ಪತ್ರ’ ಎನ್ನುವ ಅಂಕಣವನ್ನು ನಿಗದಿತವಾಗಿ ಬರೆಯುತ್ತಿದ್ದೆ. ಆಗ ನನ್ನ ಕಾವ್ಯನಾಮ ‘ಸ್ವರ್ಗಾಧಿಪ’ ಎಂದು. ‘ಸ್ವರ್ಗಾಧಿಪ’ ಅಂದರೆ ‘ಪುರಂದರ’. ಸುಮಾರು 1950ರಿಂದ 1952ರ ಅವಧಿಯಲ್ಲಿ ಸರ್ವೋದಯದಲ್ಲಿ ರಾಜಕೀಯ, ಸಾಮಾಜಿಕ, ಸಾಹಿತ್ಯಕ, ಸಾಂಸ್ಕೃತಿಕ ವಿಷಯಗಳ ಬಗ್ಗೆ ಲೇಖನ ಬರೆಯುತ್ತಿದ್ದೆ. ಅವುಗಳಲ್ಲಿ ಬಹುತೇಕ ಇಂದು ನನ್ನ ಕೈಗೆ ದೊರೆಯುತ್ತಿಲ್ಲ.

‘ವಿದ್ಯಾದಾಯಿನಿ’ ಪತ್ರಿಕೆಯಲ್ಲಿ ಮಕ್ಕಳ ಶಿಕ್ಷಣವನ್ನು ಕುರಿತು ಎರಡು ಲೇಖನಗಳನ್ನು ಬರೆದಿದ್ದೇನೆ. ಪಾಟೀಲ ಪುಟ್ಟಪ್ಪನವರ ಸಂಪಾದಕತ್ವದ ‘ಪ್ರಪಂಚ’ದಲ್ಲಿ ಲೇಖನ ಬರೆಯುತ್ತಿದ್ದೆ. ‘ಸರ್ವೋದಯ’ದ ಸಮಕಾಲೀನ ಪತ್ರಿಕೆಯಾಗಿ ಮಂಗಳೂರಿನಿಂದ ಹೊರಬರುತ್ತಿದ್ದ ‘ಜ್ಯೋತಿ’ ಪತ್ರಿಕೆಯಲ್ಲಿ (ಸಂಪಾದಕರು : ಬಿ.ಎಸ್. ಭಾಸ್ಕರ ರೈ) ‘ದುಂಡುಮೇಜಿನ ಪರಿಷತ್ತಿನಿಂದ ಮಹಾತ್ಮಾಗಾಂಧಿಯವರಿಗೆ ಆದ ಲಾಭ’ ಎಂಬ ನನ್ನ ಲೇಖನ ಪ್ರಕಟವಾಗಿ ಅನೇಕ ಜನರ ಮೆಚ್ಚುಗೆ ಪಡೆಯಿತು. ದುಂಡುಮೇಜಿನ ಪರಿಷತ್ತಿನ ಸಭೆಯಿಂದ ತಮಗಾದ ಲಾಭವೆಂದರೆ ಎರಡು ಕಾಗದಗಳನ್ನು ಜೋಡಿಸಲು ಬಳಸಿದ ಗುಂಡುಸೂಜಿ ಮಾತ್ರ ಎಂದು ಗಾಂಧೀಜಿ ಹಾಸ್ಯಮಯವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದನ್ನು ಆ ಲೇಖನದಲ್ಲಿ ಬಿಂಬಿಸಿದ್ದೆ. ಆ ಕಾಲದಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ನವಭಾರತ’ ದಿನಪತ್ರಿಕೆಯಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚಾಗಿ ಓದುಗರ ಓಲೆ ಬರೆಯುತ್ತಿದ್ದೆ.

1958ರಲ್ಲಿ ಪುತ್ತೂರು ರಾಷ್ಟ್ರೀಯ ವಿಸ್ತರಣಾ ಯೋಜನೆಯ ವತಿಯಿಂದ ರೈತ ಮುಂದಾಳುಗಳ ಶೈಕ್ಷಣಿಕ ಪ್ರವಾಸ ತಂಡದ ನಾಯಕನಾಗಿದ್ದ ನನ್ನಲ್ಲಿ ನಮ್ಮ ಪ್ರವಾಸಾನುಭವವನ್ನು ಬರೆದುಕೊಡಲು ಕೇಳಿದ ಕಾರಣ ‘ನಮ್ಮ ಪ್ರವಾಸಾನುಭವ’ ಎಂಬ ಹೆಸರಿನಲ್ಲಿ ಗ್ರಂಥವೊಂದನ್ನು ಬರೆದೆ. ಇದು 1959ರಲ್ಲಿ ಪ್ರಕಟವಾಯಿತು. ಇದು ನನ್ನ ಎರಡನೆಯ ಪ್ರಕಟಿತ ಕೃತಿ. ನಾನು ಕಲಿತ ಪುತ್ತೂರಿನ ಬೋರ್ಡು ಹೈಯರ್ ಎಲಿಮೆಂಟರಿ ಶಾಲೆಯು 1965ರಲ್ಲಿ ತನ್ನ ಶತಮಾನೋತ್ಸವವನ್ನು ಆಚರಿಸಿದಾಗ ಆ ಸಂದರ್ಭದಲ್ಲಿ ಹೊರತಂದ ಸ್ಮಾರಕ ಗ್ರಂಥಕ್ಕೆ ನನ್ನನ್ನು ಗೌರವ ಸಂಪಾದಕನಾಗಿ ಆಯ್ಕೆ ಮಾಡಲಾಯಿತು. ಸಂಪಾದಕನಾಗಿ ನಾನು ಹಿರಿಯರಾದ ಶಿವರಾಮ ಕಾರಂತ, ಉಗ್ರಾಣ ಮಂಗೇಶ ರಾವ್, ಬೆಳ್ಳೆ ರಾಮಚಂದ್ರ ರಾವ್ ಮುಂತಾದವರಿಂದ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಿದೆ. ನನ್ನ ಲೇಖನ ವ್ಯವಸಾಯದ ಇನ್ನೊಂದು ಮಗ್ಗುಲು ಇದು.

ಮರು ವರ್ಷ 1966ರಲ್ಲಿ ನಾನು ಕಲಿತ ಇನ್ನೊಂದು ಶಿಕ್ಷಣ ಸಂಸ್ಥೆಯಾದ ಪುತ್ತೂರು ಬೋರ್ಡು ಹೈಸ್ಕೂಲು ಶಾಲೆಗೆ 50 ವರ್ಷಗಳು ತುಂಬಿದುವು. ಈ ಸಂದರ್ಭದಲ್ಲಿ ಹೊರತಂದ ‘ಸುವರ್ಣ ದೀಪಿಕಾ’ ಸಂಸ್ಮರಣ ಗ್ರಂಥಕ್ಕೆ ಗೌರವ ಸಂಪಾದಕನಾಗಿ ನಾನು ಕಾರ್ಯನಿರ್ವಹಿಸಬೇಕೆಂದು ಗುರುಗಳಾದ ಉಗ್ರಾಣ ಮಂಗೇಶರಾಯರು ಒತ್ತಾಯಿಸಿದರು. ಹಿಂದಿನ ವರ್ಷದ ನನ್ನ ಸಂಪಾದನೆಯ ಕೆಲಸದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಮತ್ತೆ ನನ್ನ ಗೌರವ ಸಂಪಾದಕತ್ವದಲ್ಲಿ ‘ಸುವರ್ಣ ದೀಪಿಕಾ’ 1966ರಲ್ಲಿ ಪ್ರಕಟವಾಯಿತು. ಇದನ್ನು ಸಂಪಾದಿಸುವಾಗಲೂ ಡಾ. ಶಿವರಾಮ ಕಾರಂತ, ಬೈಂದೂರು ಆನಂದ  ರಾವ್, ಸೇವ ನಮಿರಾಜ ಮಲ್ಲ, ಪೊ. ಎಂ. ಮರಿಯಪ್ಪ ಭಟ್ಟ, ದೇರಾಜೆ ಸೀತಾರಾಮಯ್ಯ, ಉಗ್ರಾಣ ಮಂಗೇಶ ರಾವ್, ಪಿ.ಕೆ. ನಾರಾಯಣ ಮುಂತಾದ ಹಿರಿಯ ಸಾಹಿತಿಗಳು ಲೇಖನಗಳನ್ನು ಕೊಟ್ಟು ಸಹಕರಿಸಿದರು.

1967ರಲ್ಲಿ ಯೋಗಾನಂದ ಪರಮಹಂಸರ ಆತ್ಮವೃತ್ತವನ್ನು ಇಂಗ್ಲಿಷ್ನಲ್ಲಿ ಓದಿದೆ. ಅದರಿಂದ ಪ್ರಭಾವಿತನಾಗಿ ಪವಾಡಗಳ ರಹಸ್ಯ ಎನ್ನುವ ಒಂದು ಅಧ್ಯಾಯವನ್ನು ಹಿರಿಯರಾದ ಪುತ್ತೂರಿನ ಎ.ಪಿ. ಸುಬ್ಬಯ್ಯನವರಿಂದ ಕನ್ನಡಕ್ಕೆ ಅನುವಾದ ಮಾಡಿಸಿದೆ. ಅದನ್ನು 1967ರಲ್ಲಿ ‘ಪವಾಡಗಳ ಸಿದ್ಧಾಂತ’ ಎನ್ನುವ ಹೆಸರಿನಲ್ಲಿ ನಾನೇ ಪ್ರಕಾಶನ ಮಾಡಿದೆ. ಹೀಗೆ ಒಂದು ಚಿಕ್ಕ ಕೃತಿಯ ಪ್ರಕಾಶಕನಾಗುವ ಯೋಗವೂ ನನ್ನ ಪಾಲಿಗೆ ದೊರೆಯಿತು.

ಹೀಗೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆಯುತ್ತಾ ಇದ್ದೆ. ಅವುಗಳ ವಿವರಗಳು ನೆನಪಿಲ್ಲ. 1985ರ ಬಳಿಕ ಮಂಗಳೂರಿಗೆ ಬಂದ ಮೇಲೆ ಮಂಗಳೂರು ಆಕಾಶವಾಣಿಯಲ್ಲಿ ಕನ್ನಡದಲ್ಲಿ ಮತ್ತು ತುಳುವಿನಲ್ಲಿ ಭಾಷಣ ಮಾಡುವ ಅನೇಕ ಅವಕಾಶಗಳು ದೊರೆತುವು. ವಿಚಾರ ದೀಪಿಕೆಯಲ್ಲಿ ಮತ್ತು ಇತರ ಭಾಷಣಗಳಲ್ಲಿ ನನ್ನ ಭಾವನೆಗಳನ್ನು ವಿಚಾರಗಳನ್ನು ಪ್ರಕಟಿಸುತ್ತಾ ಬಂದೆ. ಬಾನುಲಿಯ ನನ್ನ ಅನೇಕ ಉಲಿಗಳು ಬಾನಿನಲ್ಲೇ ಕರಗಿ ಹೋಗಿವೆ. ಬರಹಕ್ಕೆ ದಕ್ಕಿದ ಕೆಲವು ಮಾತ್ರ ಈ ಸಂಪುಟದಲ್ಲಿವೆ. ಸಾಮಾಜಿಕ ರಾಜಕೀಯ ಆಗುಹೋಗುಗಳ ಬಗ್ಗೆ ದಿನಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ವಾಚಕರ ವಾಣಿಯ ರೂಪದಲ್ಲಿ ಸಂದರ್ಭ ಬಂದಾಗಲೆಲ್ಲ ಬರೆಯುತ್ತಾ ಬಂದಿದ್ದೇನೆ. ಸಾಮಾಜಿಕವಾಗಿ ಸ್ಪಂದಿಸುವುದಕ್ಕೆ ಇದು ಒಳ್ಳೆಯ ಅವಕಾಶ ಎಂದು ನನ್ನ ಭಾವನೆ.

ಮುಂದಿನ ಭಾಗದಲ್ಲಿ-ವರದಿ ಮಾಡುವ ಸರದಿ: ಪತ್ರಕರ್ತರಾಗಿ

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: