ನಂಬಿಸುವ ಅರ್ಥಶಾಸ್ತ್ರ ಮತ್ತು …

Posted on ಫೆಬ್ರವರಿ 27, 2010. Filed under: ಇರುಳ ಕಣ್ಣು |


ನಾನು ‘ಪ್ರಜಾವಾಣಿ’ ಗಾಗಿ ಬರೆಯುತ್ತಿದ್ದ ಅಂಕಣ ಇರುಳ ಕಣ್ಣಿನ ಆಯ್ದ ಭಾಗ ಇದು.

ಕಳೆದ ವರ್ಷದ ಬಜೆಟ್ ಸಂದರ್ಭದಲ್ಲಿ (೧೭ ಜುಲೈ ೨೦೦೯) ಬರೆದ ಈ ಲೇಖನ ಇನ್ನೂ ತನ್ನ ಅರ್ಥ ಉಳಿಸಿಕೊಂದಿರಬಹುದು ಎಂದು ಮತ್ತೆ ನೀಡುತ್ತಿದ್ದೇನೆ

ಸಂಸತ್ತಿನಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಬಜೆಟ್ ಮಂಡನೆಯ ಬಳಿಕ ಸಂಪ್ರದಾಯದಂತೆ ಆಳುವ ಪಕ್ಷದವರು ಅದನ್ನು ಸ್ವಾಗತಿಸಿದರೆ,ವಿರೋಧಪಕ್ಷದವರು ಟೀಕಿಸಿದ್ದಾರೆ. ಅರ್ಥಶಾಸ್ತ್ರದ ಪಂಡಿತರು ಎಂದಿನಂತೆ ಭಿನ್ನವ್ಯಾಖ್ಯಾನಗಳ ಚರ್ಚೆಯನ್ನು ನಡೆಸಿದ್ದಾರೆ. ಮುಂಗಾರು ಅಧಿವೇಶನದ ಈ ಬಜೆಟ್ ನ ವೇಳೆಗೆ ಹಿಂದಿನಂತೆ ಮಳೆಗಾಲದಲ್ಲಿ ಆಹಾರದಾಸ್ತಾನು ಕಡಮೆಯಾಗಿ, ದೈನಂದಿನ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ದುಬಾರಿ ಬೆಲೆಯ ಧಾನ್ಯಗಳ ಧ್ಯಾನದಲ್ಲಿ ಮುಳುಗಿರುವ ಜನ, ತಮ್ಮ ಭವಿಷ್ಯದ ಶ್ರೀಮಂತಿಕೆಗಿಂತ ವರ್ತಮಾನದ ಬಡತನದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಬಜೆಟ್ ಮಂಡನೆ ಒಂದು ವಾರ್ಷಿಕ ಶಾಸ್ತ್ರವಾಗಿ, ಆಚರಣೆಯಾಗಿ ನಿರಂತರವಾಗಿ ನಡೆದುಬರುತ್ತಿದೆ. ಒಂದೆಡೆ ಆರ್ಥಿಕ ತಜ್ಞರ ವಿಶ್ಲೇಷಣೆಗಳು, ಇನ್ನೊಂದೆಡೆ ಷೇರು ಮಾರುಕಟ್ಟೆಯ ಏರಿಳಿತಗಳು-ಇವುಗಳ ನಡುವೆಯೇ ಜನಸಾಮಾನ್ಯರು ಒಂದು ಮಳೆಗಾಲದಿಂದ ಇನ್ನೊಂದು ಮಳೆಗಾಲಕ್ಕೆ ತಮ್ಮ ಯಾತನೆಯ ಬದುಕಿನ ಯಾನವನ್ನು ಮುಂದುವರೆಸುತ್ತಾರೆ. ಜನಪ್ರಿಯತೆಯ ಮೇಲೆ ಕಣ್ಣಿಟ್ಟು ಮಂಡಿಸುವ ರಾಜಕೀಯ ಬಜೆಟ್ಗಳು ಕೂಡ ಅನುಷ್ಠಾನದ ಹಂತದಲ್ಲಿ ವಿಫಲವಾಗುತ್ತಿರುವುದರಿಂದ, ತಾತ್ಕಾಲಿಕವಾಗಿಯಾದರೂ ಸಂತೃಪ್ತಿಯನ್ನು ಕೊಡಲು ಅಸಾಧ್ಯವಾಗಿವೆ. ಬಜೆಟ್ ನ ನಿಜವಾದ ಪರಿಣಾಮಗಳ ಬಗ್ಗೆ ನಿರಾಶೆ ಹೊಂದಿರುವ ಜನರು, ಅಂಕೆಸಂಖ್ಯೆಗಳ ಮೂಲಕ ಹೆಚ್ಚಳ ಅಥವಾ ಕೊರತೆಯನ್ನು ಬಿಂಬಿಸುವ ‘ನಂಬಿಸುವ ಅರ್ಥಶಾಸ್ತ್ರ’ದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ.

‘ಹಣ’ ಎನ್ನುವುದು ಆಕಾರದಲ್ಲಿ, ಬೆಲೆಯಲ್ಲಿ ಮತ್ತು ಉಪಯೋಗದಲ್ಲಿ ಕಾಲದಿಂದ ಕಾಲಕ್ಕೆ ತೀವ್ರ ಬದಲಾವಣೆಯನ್ನು ಹೊಂದುತ್ತಾ ಬಂದಿದೆ. ಲೋಹದ ತುಂಡೊಂದು ‘ನಾಣ್ಯ’ವೆಂಬ ಹೆಸರಿನಲ್ಲಿ ಬೆಲೆಯನ್ನು ಉಳ್ಳ ವಸ್ತುವಾಗಿ ಜಣಜಣಿಸುತ್ತಾ ಇದ್ದದ್ದು, ‘ನೋಟು’ ಎನ್ನುವ ಕಾಗದದ ಚೂರಿನ ಮೂಲಕ ಹಗುರವಾಗಿ ಗಾಳಿಯಲ್ಲಿ ಹಾರಾಡಲು ತೊಡಗಿತು. ಮುಂದೆ ಚೆಕ್, ಡಿ.ಡಿ.ಗಳಂತಹ ಕಾಗದದ ಅನ್ಯರೂಪಗಳಲ್ಲಿ ಬೆಲೆಯನ್ನು ಹೊಂದಿದಾಗಲೂ ಅದು ಎಲ್ಲ ಸಂದರ್ಭದಲ್ಲೂ ನಗದಾಗಿ ಪರಿವರ್ತನೆ ಹೊಂದುತ್ತದೆ ಎಂಬ ಭರವಸೆಯೇನೂ ಉಳಿಯಲಿಲ್ಲ. ಪ್ಲಾಸ್ಟಿಕ್ ಕ್ರೆಡಿಟ್ ಕಾರ್ಡುಗಳ ರೂಪದಲ್ಲಿ ಹಣ ಜಾರಲು ತೊಡಗಿದಾಗ, ಅದು ‘ಗುಪ್ತನಿಧಿ’ಯ ಯಂತ್ರದ ಒಳಹೊಕ್ಕು ಹೊರಬಂದು ಹಿರಣ್ಯಗರ್ಭದೊಳಗಿನ ಕಾಗದದ ಚೂರುಗಳನ್ನು ಉದುರಿಸುವ ‘ಮಾಂತ್ರಿಕ ಕಾರ್ಡ್’ ಆಯಿತು. ಆದರೆ ಊಟಕ್ಕೆ, ಬಟ್ಟೆಗೆ, ಸಿಕ್ಕಸಿಕ್ಕ ಸಾಮಗ್ರಿಗಳನ್ನು ಕೊಳ್ಳಲು ಮತ್ತು ಕೊಳ್ಳೆಹೊಡೆಯಲು ಈ ಜಾರುವ ‘ಮಾಂತ್ರಿಕ ಕ್ರೆಡಿಟ್ ಕಾರ್ಡ್’ ಬಳಕೆಯಾದಂತೆಲ್ಲಾ ಹಣವೂ ಜಾರಿತು, ‘ಕ್ರೆಡಿಟ್’ ಮಾತ್ರ ಉಳಿಯಿತು.

ಅರ್ಥವ್ಯವಸ್ಥೆಯಲ್ಲಿ ‘ವಿನಿಮಯ’ ಪದ್ಧತಿಯನ್ನು ತುಂಬ ಪ್ರಾಚೀನವಾದ ಮತ್ತು ಇಂದಿನ ಕಾಲಕ್ಕೆ ಅನಾಗರಿಕವಾದ ಕ್ರಮವೆಂದು ತಿಳಿಯಲಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಭತ್ತ-ಅಕ್ಕಿಯನ್ನು ಕೊಟ್ಟು ಉಪ್ಪು, ಬೇಳೆ, ಮೆಣಸು ಮುಂತಾದವುಗಳನ್ನು, ತೆಂಗಿನಕಾಯಿ ಅಡಕೆಯನ್ನು ಕೊಟ್ಟು ಬಟ್ಟೆ, ಬೆಲ್ಲ, ಜೀನಸು, ಮಡಕೆ ಇತ್ಯಾದಿಗಳನ್ನು ಹೀಗೆ ವಿನಿಮಯ ಮಾಡುವ ಕಾಲದಲ್ಲಿ ಹಣದ ಸದ್ದು ಕೇಳುತ್ತಿರಲಿಲ್ಲ ಮತ್ತು ಗರಿನೋಟಿನ ನೋಟ ಕಾಣಿಸುತ್ತಿರಲಿಲ್ಲ. ಯಾವಾಗ ‘ಹಣ’ ಎನ್ನುವುದು ನಮ್ಮ ಅಗತ್ಯವಸ್ತುಗಳ ನಡುವೆ ಬಂದು’ದಳ್ಳಾಳಿ’ಯಾಗಿ ಹುಟ್ಟಿಕೊಂಡಿತೋ ಅಂದಿನಿಂದಲೇ ಈ ‘ದಳ್ಳಾಳಿ’ಯ ಶಕ್ತಿ ಮತ್ತು ಬೆಲೆ ನಮ್ಮ ಬದುಕನ್ನು ನಿಯಂತ್ರಿಸಲು ಮತ್ತು ಅಳೆಯಲು ಆರಂಭಿಸಿತು.

ಹಣಕ್ಕೆ ಇರುವ ಕ್ರೂರ ಗುಣವೆಂದರೆ, ಅದು ಪ್ರತಿಭಾವಂತರನ್ನು ಕ್ರಿಯಾಶೀಲರನ್ನು ಗುಲಾಮರನ್ನಾಗಿ ನಿಯಂತ್ರಿಸುವುದು. ಬುದ್ಧಿವಂತ ಕ್ರಿಯಾಶೀಲ ಗೃಹಿಣಿ ಹೆಂಡತಿಯೊಬ್ಬಳನ್ನು ಕೆಟ್ಟ ಸ್ವಭಾವಗಳ ಗಂಡನೊಬ್ಬ ತನ್ನ ಹಣದ ಕಾರಣಕ್ಕಾಗಿ ನಿಯಂತ್ರಿಸುತ್ತಾನೆ ಮತ್ತು ಹಿಂಸಿಸುತ್ತಾನೆ. ಗಂಡನ ಸಕಲ ದುರ್ಗುಣಗಳನ್ನೂ ಆತನು ತನ್ನ ಒಡವೆ-ಬಟ್ಟೆಗಳಿಗಾಗಿ, ತಿನಿಸುಗಳಿಗಾಗಿ, ಮನೆಯ ಯೋಗಕ್ಷೇಮಕ್ಕಾಗಿ ಕೊಡುವ ಹಣದ ಕಾರಣಕ್ಕಾಗಿ ಹೆಂಡತಿಯಾದವಳು ಸಹಿಸಿಕೊಳ್ಳಬೇಕಾದ ದುರಂತ ಅನೇಕ ಮನೆಗಳಲ್ಲಿ ನಡೆಯುತ್ತಿರುತ್ತದೆ.

ಸಾಮಾಜಿಕ ಬದುಕಿನಲ್ಲಿ ಶ್ರೀಮಂತರು ಬೇರೆಬೇರೆ ಕ್ಷೇತ್ರಗಳ ಬುದ್ಧಿವಂತರನ್ನು, ಕ್ರ್ರಿಯಾಶೀಲರನ್ನು ತಮ್ಮ ಹಣದ ಮೂಲಕ ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ದಾನ, ಕೊಡುಗೆ, ಬೆಂಬಲ, ಉದ್ಯೋಗ-ಇಂತಹ ಅನೇಕ ರೂಪಗಳಲ್ಲಿ ಹಣ ಸಮರ್ಥರನ್ನು ಗುಲಾಮರನ್ನಾಗಿಸುತ್ತದೆ. ಸಾಹಿತಿ, ಕಲಾವಿದರು, ವಿಜ್ಞಾನಿಗಳು, ಕುಶಲಿಗಳು-ಇವರನ್ನೆಲ್ಲ ಇವರ ಚಟುವಟಿಕೆಗಳಿಗೆ ಹಣದ ನೆರವನ್ನು ಕೊಡುವ ಮೂಲಕ ಶ್ರೀಮಂತನೊಬ್ಬ ಅವರೆಲ್ಲರಿಗಿಂತ ಶ್ರೇಷ್ಠನೆಂಬ ಸ್ಥಾನವನ್ನು ಪಡೆಯುತ್ತಾನೆ, ಗೌರವಕ್ಕೆ ಪಾತ್ರನಾಗುತ್ತಾನೆ. ಸಾಹಿತ್ಯಕಲೆಗಳ ಗೋಷ್ಠಿ, ಸಮ್ಮೇಳನ ನಡೆಯಬೇಕಾದರೆ ಅದರ ಊಟದ ವೆಚ್ಚವನ್ನು ಭರಿಸುವ ಶ್ರೀಮಂತನು ಸಾಹಿತ್ಯಪೋಷಕನಾಗುತ್ತಾನೆ. ಮುಂದೆ ಅವನೇ ಸಾಹಿತಿ, ಕಲಾವಿದನೆಂಬ ಬಿರುದನ್ನು ಪಡೆದು, ನಿಜವಾದ ಸಾಹಿತಿಗಳಿಗಿಂತ ಮೇಲೇರುತ್ತಾನೆ.

ದಲ್ಲಾಳಿಯಾದ ಹಣವು, ಕಾಗದದ ಚೂರಿನ ರೂಪದ ನೋಟು ಆದಮೇಲಂತೂ ಅದರ ಬೆಲೆ ನಿರ್ಧರಿಸುವವರು ತಮ್ಮ ಪ್ರಯೋಜನಕ್ಕೆ, ಅನುಕೂಲಕ್ಕೆ ತಕ್ಕಂತೆ ಅದನ್ನು ಬದಲಾಯಿಸುತ್ತಾರೆ. ಅರ್ಥಶಾಸ್ತ್ರಜ್ಞರು ರೂಪಾಯಿಯ ಬೆಲೆಯನ್ನು ಇಷ್ಟು ಪೈಸೆಗಳು ಎಂದು ಲೆಕ್ಕ ಹಾಕುತ್ತಾರೆ. ಆದರೆ, ನಮ್ಮ ಸಾರ್ವಜನಿಕ ಬದುಕಿನಲ್ಲಿ ಎಷ್ಟೋ ಬಾರಿ ಒಂದೇ ದಿನದಲ್ಲಿ ಸಂದರ್ಭಕ್ಕೆ ಅನುಗುಣವಾಗಿ ಮನೋಧರ್ಮಕ್ಕೆ ಅನುಗುಣವಾಗಿ ಅದರ ಬೆಲೆ ಏರುತ್ತದೆ ಅಥವಾ ಇಳಿಯುತ್ತದೆ.

ಶ್ರೀಮಂತ ಹೊಟೇಲಿಗೆ ಹೋಗಿ ಸಮೃದ್ಧವಾಗಿ ಉಂಡುತಿಂದು ಬಿಲ್ ಪಾವತಿ ಮಾಡುವ ವೇಳೆಗೆ ಅನೇಕರ ಪಾಲಿಗೆ ಐದರಿಂದ ಹತ್ತು ಸಾವಿರ ರೂಪಾಯಿ ಸಾಮಾನ್ಯ ಮೊತ್ತವಾಗಿ, ಅದರ ಮೇಲೆ ನೂರಿನ್ನೂರು ರೂಪಾಯಿಯ ಟಿಪ್ಸ್ಗಳನ್ನು ಎಸೆಯುವ ಸಂದರ್ಭದಲ್ಲಿ ಹಣದ ಬೆಲೆ ತಗ್ಗಿರುತ್ತದೆ. ಆದರೆ ಅವರೇ ಬಳಿಕ ಮಧ್ಯರಾತ್ರಿಯಲ್ಲಿ ಆಟೋರಿಕ್ಷಾ ಒಂದರಲ್ಲಿ ಕುಳಿತು ಮನೆಗೆ ಹೋದ ಮೇಲೆ ಆಟೋದವನು ಐವತ್ತು ರೂಪಾಯಿಗಳನ್ನು ಬಾಡಿಗೆ ಎಂದು ಕೇಳಿದರೆ, ಅವನ ಜೊತೆ ಚೌಕಾಶಿ ಮಾಡಿ ಜಗಳವಾಡಿ ಐದರಿಂದ ಹತ್ತು ರೂಪಾಯಿಗಳ ರಿಯಾಯಿತಿ ಪಡೆಯುವಾಗ ಅವರ ಪಾಲಿನ ಹಣದ ಬೆಲೆ ಏರಿರುತ್ತದೆ. ಸೀರೆ ಅಥವಾ ಚಿನ್ನಾಭರಣಗಳ ಅಂಗಡಿಗಳಿಗೆ ಹೋದ ಹೆಂಗಸರು,ಲಕ್ಷಮೌಲ್ಯದ ಒಡವೆ-ವಸ್ತ್ರಗಳನ್ನು ಕೊಳ್ಳುವಾಗ, ಅವರ ಪಾಲಿನ ಹಣದ ಬೆಲೆ ತುಂಬಾ ಕಮ್ಮಿ ಇದ್ದರೆ, ಮಾಕರ್ೆಟ್ನಲ್ಲಿ ಸೊಪ್ಪು ಮಾರುವವರು, ತರಕಾರಿಯವಳು ಅಥವಾ ಮೀನು ಮಾರುವವಳ ಜೊತೆಗೆ ಐವತ್ತು ಪೈಸೆಯಿಂದ ಐದು ರೂಪಾಯಿವರೆಗೆ ಚೌಕಾಶಿ ಮಾಡುವಾಗ ಹೆಂಗಸರ ರೂಪಾಯಿಯ ಬೆಲೆ ದಿಢೀರನೆ ಮೇಲಕ್ಕೇರಿರುತ್ತದೆ. ನಮ್ಮ ರೂಪಾಯಿಯ ಬೆಲೆಯು ನೋಟುಗಳೆಂಬ ಕಾಗದದ ಚೂರಿನಲ್ಲಿ ಇರದೆ, ನಮ್ಮ ಮನಸ್ಸಿನ ಆಸೆಗಳ ಆಳದಲ್ಲಿ ಹುದುಗಿಕೊಂಡಿರುತ್ತದೆ.

ಎಷ್ಟೋ ಬಾರಿ ಹಣ ಇದ್ದರೂ ಅದು ನಿರುಪಯುಕ್ತವಾಗುವ ಸನ್ನಿವೇಶ ಇರುತ್ತದೆ. ಎಷ್ಟೇ ಹಣ ಇದ್ದರೂ ವಸ್ತುವಿನ ಅಭಾವ ಇದ್ದಾಗ ಹಣ ನಿಷ್ಟ್ರಯೋಜಕವಾಗುತ್ತದೆ. ಅಕ್ಕಿ ಕೊಳ್ಳಲು ಅಂಗಡಿಗೆ ಹೋದಾಗ, ಅಕ್ಕಿಯ ಬದಲು ಚಾಕಲೇಟ್ ಕೊಟ್ಟರೆ ಅದರಿಂದ ಹೊಟ್ಟೆ ತುಂಬಿಸಲು ಸಾಧ್ಯವಾಗುವುದಿಲ್ಲ. ಆಧುನಿಕ ಮಾರುಕಟ್ಟೆ ಕೆಲವು ವಸ್ತುಗಳ ಅಭಾವವನ್ನು, ಇನ್ನು ಕೆಲವುವಸ್ತುಗಳ ಹೆಚ್ಚಳವನ್ನು ಸೃಷ್ಟಿಸಿ ಜನರಿಗೆ ಬೇಕಾದದ್ದನ್ನು ಕೊಡುವುದರ ಬದಲು ತನ್ನಲ್ಲಿ ಇರುವುದನ್ನು ಮಾರುವ ತಂತ್ರಗಾರಿಕೆಯನ್ನು ಹೊಂದಿರುತ್ತದೆ. ಕೆಲವೊಮ್ಮೆ ನಮ್ಮಲ್ಲಿರುವ ಹಣ ಚಲಾವಣೆಯಾಗದ ಆಥರ್ಿಕ ಸಾಮ್ರಾಜ್ಯಗಳಿರುತ್ತವೆ. ಪಶ್ಚಿಮದ ದೇಶಗಳಲ್ಲಿ ಭಾರತೀಯ ರೂಪಾಯಿ ನಡೆಯುವುದಿಲ್ಲ. ಆದರೆ ಡಾಲರ್, ಪೌಂಡ್, ಯೂರೋಗಳು ಅನೇಕ ದೇಶಗಳಲ್ಲಿ-ತಮ್ಮ ದೇಶದ್ದು ಅಲ್ಲದಿದ್ದರೂ ಚಲಾವಣೆಯಲ್ಲಿರುತ್ತವೆ. ಅಂದರೆ, ಶ್ರೀಮಂತರಿಗೆ ಎಲ್ಲ ದೇಶಗಳಲ್ಲಿಯೂ ಚಲಾವಣೆ ಇದೆ, ಬಡವರಿಗೆ ತಮ್ಮ ಊರಲ್ಲಿ ಮಾತ್ರ ಅಸ್ತಿತ್ವ.

ವಸ್ತುಗಳ ಬೆಲೆಗಳು ಒಂದೇ ಊರಿನಲ್ಲಿ ಬೇರೆಬೇರೆ ಪರಿಸರಗಳಲ್ಲಿ ಭಿನ್ನವಾಗುತ್ತವೆ. ಇಡ್ಲಿಯೊಂದು ಬೀದಿಬದಿಯಲ್ಲಿ ತುಂಬಾ ಕಡಮೆ ಬೆಲೆಗೆ ದೊರೆತರೆ, ಅದೇ ಇಡ್ಲಿ ದಶರ್ಿನಿಯಲ್ಲಿ ಮತ್ತೆ ಉಪಾಹಾರ ಗೃಹಗಳಲ್ಲಿ ತನ್ನ ಬೆಲೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಗಗನದಲ್ಲಿ ಚಲಿಸುವ ವಿಮಾನಗಳ ಆವಾಸಸ್ಥಾನದಲ್ಲಿ ತನ್ನ ಯೋಗ್ಯತೆಗೆ ಅನುಗುಣವಾಗಿ ಇಡ್ಲಿಯ ಬೆಲೆ ಗಗನಕ್ಕೇರುತ್ತದೆ. ಹಾಗಾಗಿ, ಒಂದು ರೂಪಾಯಿಯಿಂದ ನೂರು ರೂಪಾಯಿಯವರೆಗೆ ಇಡ್ಲಿದೋಸೆಗಳು ಒಂದೇ ಊರಿನಲ್ಲಿ ತಮ್ಮ ಒಡೆಯರ ಅಂತಸ್ತಿಗೆ ಅನುಗುಣವಾಗಿ ಬಡತನ ಮತ್ತು ಸಿರಿತನವನ್ನು ಅನುಭವಿಸುತ್ತವೆ.

ಆಧುನಿಕ ಅರ್ಥಶಾಸ್ತ್ರದ ಬಂಡವಾಳ ಪದ್ಧತಿಯಲ್ಲಿ ಮಾರುಕಟ್ಟೆ ನಿಯಂತ್ರಣದ ಮೂಲಕ ಹಣಕ್ಕೆ ಬೆಲೆಯನ್ನು ಕೊಡುವ ಕಾರಣ, ನಾವು ಅಕ್ಕಿಯನ್ನು ಮಾರಿ ರೂಪಾಯಿಯನ್ನು ಪಡೆದು, ಮತ್ತೆ ರೂಪಾಯಿಯನ್ನು ಕೊಟ್ಟು ಬೇಳೆ ಮತ್ತು ಬೆಲ್ಲವನ್ನು ಕೊಳ್ಳಬೇಕು. ಈ ರೀತಿ ವಸ್ತುವಿನಿಂದ ಹಣಕ್ಕೆ ರೂಪಾಂತರ, ಹಣದಿಂದ ಮತ್ತೊಮ್ಮೆ ವಸ್ತುವಿಗೆ ರೂಪಾಂತರ ಆಗುವಾಗ, ಹಣದ ಬೆಲೆ ಏರುತ್ತದೆ, ವಸ್ತುಗಳ ಪ್ರಮಾಣ ಇಳಿಯುತ್ತದೆ. ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಅಮೆರಿಕಾದ ಡಾಲರ್ ಮತ್ತು ಇಂಗ್ಲೆಂಡಿನ ಪೌಂಡ್ ತಮ್ಮ ಶಕ್ತಿಯ ನಿಯಂತ್ರಣವನ್ನು ಮಾಡಿಕೊಂಡಿರುವುದು ಇದೇ ರೀತಿಯಲ್ಲಿ. ಈಗ ಸ್ವಲ್ಪಮಟ್ಟಿಗೆ ಯೂರೋಪಿನ ‘ಯೂರೋ’ ಸ್ಪರ್ಧಿಸುತ್ತಿದೆ. ಹೀಗೆ ಎರಡು-ಮೂರು ರೀತಿಯ ಜಾಗತಿಕ ಹಣದ ರೂಪಕಗಳು ಮಾತ್ರ ಜಗತ್ತಿನ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವ ಕಾರಣ, ನಮ್ಮ ‘ರೂಪಾಯಿ’ ಕೂಡ ನಮ್ಮ ಹಳ್ಳಿಯಲ್ಲಿನ ಉಪ್ಪು-ಬೆಲ್ಲಗಳಿಗಿಂತ ಹೆಚ್ಚಿನ ಬೆಲೆಯನ್ನು ಪಡೆಯುವುದಿಲ್ಲ.

ಹೀಗಾಗಿ ‘ಹಣ’ ಎನ್ನುವ ದಳ್ಳಾಳಿ, ಮಾರುವ ಮತ್ತು ಕೊಳ್ಳುವ ವ್ಯಾಪಾರದ ಎರಡೂ ಕಡೆಯಿಂದ ಲಾಭವನ್ನು ಪಡೆದು ಶ್ರೀಮಂತರ ಶ್ರೀಮಂತಿಕೆ ಮತ್ತು ಬಡವರ ಬಡತನವನ್ನು ಏಕಕಾಲಕ್ಕೆ ಹೆಚ್ಚಿಸುವ ಕೆಲಸವನ್ನು ಮಾಡುತ್ತದೆ. ಸಾಮಾನ್ಯ ಸನ್ನಿವೇಶದಲ್ಲಿ ವಿನಿಮಯದ ರೂಪದಲ್ಲಿ ನಮ್ಮ ಅಗತ್ಯಗಳ ಬೇಡಿಕೆ ಮತ್ತು ಪೂರೈಕೆಗಳನ್ನು ಮಾಡುವ ಅವಕಾಶವಿದ್ದರೂ ‘ಹಣ’ ಅದಕ್ಕೆ ಆಸ್ಪದ ಕೊಡದೇ ತನ್ನ ಮೂಲಕವೇ ಪೂರೈಕೆ ಬೇಡಿಕೆಗಳು ನಡೆಯಬೇಕು ಎನ್ನುವ ನಿಬರ್ಂಧವನ್ನು ಹೇರುತ್ತದೆ. ಆದ್ದರಿಂದಲೇ ಇಡೀ ದೇಶದ ರೂಪಾಯಿಗೆ ಇಷ್ಟು ಬೆಲೆ ಎನ್ನುವುದನ್ನು ಷೇರು ಮಾರುಕಟ್ಟೆ ಮುಂಬಯಿಯಲ್ಲಿ ನಿರ್ಣಯ ಮಾಡಿದರೆ, ಜಾಗತಿಕ ಮಾರುಕಟ್ಟೆಯನ್ನು ಅಮೆರಿಕಾ,ಇಂಗ್ಲೆಂಡ್ ಮತ್ತು ಯೂರೋಪಿನ ಯೂನಿಯನ್ ಗಳು ನಿರ್ಧರಿಸುತ್ತವೆ. ಹಾಗಾಗಿ, ನಮ್ಮ ರೈತರು ಬೆಳೆದ ತೊಗರಿಬೇಳೆ ಮುಂಬೈ ಷೇರು ಮಾರುಕಟ್ಟೆಗೆ ಹೋಗಿ, ಅಲ್ಲಿಂದ ರಿಸರ್ವ್ ಬ್ಯಾಂಕ್ ನ್ನು ಪ್ರವೇಶಿಸಿ, ಅಲ್ಲಿಂದ ನೋಟುಗಳನ್ನು ನಾಣ್ಯಗಳನ್ನು ಹಿಡಿದುಕೊಂಡು ಮತ್ತೆ ನಮ್ಮ ಹಳ್ಳಿಗೆ ಹಾರುತ್ತಾ ಬರಬೇಕು.

ಕ್ರೆಡಿಟ್ ಕಾರ್ಡ್ ಗಳ ಪಾವತಿಯ ಪ್ರಮಾಣ ಕುಗ್ಗಿರುವುದು ಮತ್ತು ಕಾರ್ಡ್ ಗಳ ಬಳಕೆ ಕಡಿಮೆಯಾಗಿರುವುದನ್ನು ಅರ್ಥಶಾಸ್ತ್ರಜ್ಞರು ಯಾವುದೇ ರೀತಿ ವಿವರಿಸಿದರೂ, ನಾಳೆ ದೊರಕಲಾರದ ಹಣಕ್ಕೆ ಇಂದು ಹೊಟ್ಟೆ ತುಂಬ ಉಂಡು ಬೀಗುವ, ತುಪ್ಪ ತಿಂದು ಸಾಲ ಮಾಡುವ ‘ಅಭಿಲಾಷೆ’ ಮುಖ್ಯವಾದ ಕಾರಣ. ಇಂದು ಅಧಿಕಾರದ ಗದ್ದುಗೆಯಲ್ಲಿ ಕುಳಿತಿರುವುದು ಅರ್ಥಶಾಸ್ತ್ರವೇ ಹೊರತು ರಾಜಕೀಯವಲ್ಲ. ರಾಜಕೀಯವು ಅರ್ಥಶಾಸ್ತ್ರದ ಗುಲಾಮ, ಜನರು ರಾಜಕೀಯದ ಗುಲಾಮರು ಆಗಿರುವ ಇಂದಿನ ಸಂದರ್ಭದಲ್ಲಿ ‘ಸಮೃದ್ಧಿ’ ಎನ್ನುವುದನ್ನು ‘ನಂಬಿಸುವ ಅರ್ಥಶಾಸ್ತ್ರ’ವೇ ನಮ್ಮ ಬಜೆಟ್ ಗಳ ಅಂತರಾಳದ ಸೂತ್ರ. ಅನ್ನ, ಬಟ್ಟೆ, ಮನೆಯೊಂದಿಗೆ ಮೊಬೈಲ್ ಕೂಡ ಬೇಕು ಎನ್ನುವ ಈ ಕಾಲದಲ್ಲಿ, ಕೊರತೆ ಇರುವುದು ‘ಕರೆನ್ಸಿ’ಗೆ ಮಾತ್ರ

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ನಂಬಿಸುವ ಅರ್ಥಶಾಸ್ತ್ರ ಮತ್ತು …”

RSS Feed for ಬಿ ಎ ವಿವೇಕ ರೈ Comments RSS Feed

super article sir
from. DR.surendra manemi
MA.( economics)M.A (kan)Phd.kannada unversity hampi


Where's The Comment Form?

Liked it here?
Why not try sites on the blogroll...

%d bloggers like this: