ಸೈತಾನನೊಡನೆ ಸಂವಾದ -ಒಂದು ಜರ್ಮನ್ ಕತೆ

Posted on ಫೆಬ್ರವರಿ 10, 2010. Filed under: Uncategorized |


ಸಮಕಾಲೀನ ಜರ್ಮನ್ ಲೇಖಕಿ ,ಉಲ್ರೀಕಾ ಲಾಂಗ್ಲೆ (೧೯೫೩- )ಯ ಒಂದು ಕತೆ ‘ಮನುಷ್ಯರ ಗೆಳೆಯ ಸೈತಾನ ‘ ಆಧುನಿಕ ಯೂರೋಪಿನ ಧೋರಣೆಗಳನ್ನು ವ್ಯಂಗ್ಯವಾಗಿ ವಿಮರ್ಶಿಸುವ ಒಂದು ಹೊಸ ಮಾದರಿ’. ಯುರೋಪಿಯನ್ ಯುನಿಯನ್ ‘ಹೆಸರಿನಲ್ಲಿ ಸ್ಥಳೀಯ ಅನನ್ಯತೆಗಳನ್ನು ನಾಶಮಾಡುವ ಜಾಗತೀಕರಣದ ಅಪಾಯಗಳನ್ನು, ಇಲ್ಲಿ ವಿಡಂಬನೆಯ ರೂಪದಲ್ಲಿ ಅನಾವರಣ ಮಾಡಲಾಗಿದೆ.

ಜರ್ಮನಿಯನ್ನೂ ಸೇರಿಸಿಕೊಂಡು ಯೂರೋಪಿನ ದೇಶಗಳು ಎಲ್ಲವನ್ನೂ ಒಂದೇ ರೀತಿ ಮಾಡುವ ಏಕರೂಪದ ಬದುಕು ನಮ್ಮನ್ನು ಎಲ್ಲಿಗೆ ಕೊಂಡೊಯ್ಯಬಹುದು ಎನ್ನುವ ಎಚ್ಚರ ಈ ಕತೆಯಲ್ಲಿ ದೊರೆಯುತ್ತದೆ.

ಭಾರತದಂತಹ ಬಹು ಧರ್ಮ ಭಾಷೆ ಜನಾಂಗ ಸಂಸ್ಕೃತಿ ಇರುವ  ದೇಶದಲ್ಲೂ ಒಂದೇ ಧರ್ಮ ಒಂದೇ ಭಾಷೆ ಒಂದೇ ಸಂಸ್ಕೃತಿ ಬೇಕು ಎನ್ನುವ ಒತ್ತಡಗಳು ಸಾಂಸ್ಕೃತಿಕ ಆರ್ಥಿಕ ಸಾಮಾಜಿಕ ವಲಯಗಳಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಕತೆ ನಮ್ಮೆಲ್ಲರಿಗೂ ಸಲ್ಲುತ್ತದೆ.

ನಾವು ಕಟ್ಟುವ ಸ್ವರ್ಗ ಯಾವುದು, ನಾವು ಹೋಗುವ ನರಕ ಯಾವುದು? ಕುತೂಹಲ ಇದ್ದರೆ, ಒಂದು ಬಾರಿ ಈ ಕತೆಯ ಮೂಲಕ  ನರಕಕ್ಕೆ ಹೋಗಿ ಬನ್ನಿ. ಅಲ್ಲಿ ಸೈತಾನನೊಡನೆ ಸಂವಾದ ಮಾಡಿ. ಚರ್ಚೆಯಲ್ಲಿ ಯಾರು ಗೆಲ್ಲುತ್ತಾರೆ ಕಾದು ನೋಡಿ.

ಯೂರೋಪಿನ ಒಂದು ದೇಶದ ಮುಖ್ಯಸ್ಥ ರಾಜಕಾರಣಿಯೊಬ್ಬ ನರಕಕ್ಕೆ ಬಂದ. ಐವತ್ತರ ನಡು ಹರಯ. ಹಾಸ್ಯಪ್ರವೃತ್ತಿಯ ಒಳ್ಳೆಯ ಸೂಟು ಧರಿಸಿದ ಆ ಅತಿಥಿಯನ್ನು ಸೈತಾನ ಸಕಲ ಗೌರವದಿಂದ ನರಕಕ್ಕೆ ಆಹ್ವಾನಿಸಿ, ಒಂದು ಗುಹೆಗೆ ಕರೆದುಕೊಂಡು ಹೋಗಿ, ಕುಳ್ಳಿರಿಸಿದ. ಆ ರಾಜಕಾರಣಿ  ‘ಯುರೋಪಿಯನ್ ಯುನಿಯನ್’ ಆಗಬೇಕೆಂದು ಸದಾ ವಾದ ಮಾಡುತ್ತಿದ್ದವನು. ಆತನೇ ಸೈತಾನನೊಡನೆ ಮಾತಿಗೆ ತೊಡಗಿದ: ‘ನಾವು ಇನ್ನಷ್ಟು ಕಾಲ ಜೀವಿಸಿದ್ದರೆ, ನಾನು ಯುರೋಪಿಯನ್ನರಾಗಿಯೇ ಇಲ್ಲಿಗೆ ಬರಬಹುದಾಗಿತ್ತು. ಆದರೆ ಈಗ ನೋಡು, ಇಂಗ್ಲಿಷರಾಗಿ ಫ್ರೆಂಚರಾಗಿ,ಗ್ರೀಕರಾಗಿ, ಆಸ್ತ್ರಿಯನ್ ಆಗಿ, ಇನ್ನು ಕೆಲವರು ಅರೆ-ಯುರೋಪಿಯನ್ನರಾಗಿ ಇಲ್ಲಿಗೆ ಬರುತ್ತಿದ್ದೇವೆ. ಕೆಲವರು ಇನ್ನೂ ಬೇಲಿಯಲ್ಲಿ ಕುಳಿತಿದ್ದಾರೆ. ಆದರೆ ಏನು ಮಾಡುವುದು? ಸಮಾನ ಮಾರುಕಟ್ಟೆಯ ಭೋಜನವನ್ನು ಸವಿಯುವ  ಮೊದಲೇ ಕಾಲನ ಕೈ ನಮ್ಮನ್ನು  ಇಲ್ಲಿಗೆ ಎಳೆದು ತಂದಿತು.’

ರಾಜಕಾರಣಿಯ ಭಾಷಣ ನಿರರ್ಗಳವಾಗಿ ಮುಂದುವರೆದಿತ್ತು. ಹೇಗೂ ಕೇಳಲು ಒಬ್ಬನಾದರೂ ಸಿಕ್ಕಿದ್ದಾನಲ್ಲ ! ‘ನೋಡು,ಈ ಕಸ್ಟಮ್ ನವರ ಜೊತೆಗೆ ಎಷ್ಟು ಕಷ್ಟ? ಪ್ರತಿ ಬಾರಿಯೂ ಪಾಸ್ ಪೋರ್ಟ್ ಅವರಿಗೆ ತೋರಿಸಿ ಸೀಲ್ ಹಾಕಿಸಬೇಕು. ನಾವೆಲ್ಲಾ ಯುರೋಪಿಯನ್ನರಾಗಿಯೇ ನರಕ ಪ್ರವೇಶಿದ್ದರೆ ಈ ಎಲ್ಲಾ ತೊಂದರೆ ತಪ್ಪುತ್ತಿತ್ತು, ಅಲ್ಲವೇ ?

ಸೈತಾನನಿಗೆ ಈಗ ನಗು ತಡೆಯಲಾಗಲಿಲ್ಲ. ‘ನಮಗೆ ಇಲ್ಲಿ ಕೆಳಗಿನ ಲೋಕದಲ್ಲಿ ಇರುವವರಿಗೆ ಅಂತಹ ಆಯ್ಕೆಯ ಅಗತ್ಯವೇನೂ ಇಲ್ಲ. ಆದರೆ ನೋಡು, ನಮ್ಮ ಕಡವಿನವರು ಇದ್ದಾರಲ್ಲ, ಅವರಿಗಂತೂ ತುಂಬಾ ಬೋರ್ ಆಗುತ್ತದೆ. ಪ್ರತಿಯೊಬ್ಬರ ಪಾಸ್ ಪೋರ್ಟ್ ತಪಾಸಣೆ ಮಾಡುವುದು, ಸೀಲ್ ಹೊಡೆಯುವುದು, ಬೇರೆ ಬೇರೆ ಬಣ್ಣ ಆಕಾರ ಚಿತ್ರಗಳ ಪಾಸು ಪೋರ್ಟ್ ಗಳನ್ನು ಅವಲೋಕಿಸುವುದು -ಇವೆಲ್ಲಾ ಇಲ್ಲದಿದ್ದರೆ ಅವರೇನು ಮಾಡುವುದು? ಬರುವ ಜನರಿಗೂ ತಮ್ಮ ಮೂಲವನ್ನು ಹೇಳಿಕೊಳ್ಳುವ ಒಂದು ಹೆಮ್ಮೆ ಇರುತ್ತದೆ, ಒಂದು ಅನನ್ಯತೆ ಇರುತ್ತದೆ. ನಮಗಂತೂ ಬೇರೆ ಬೇರೆ ಬೇರುಗಳು ಉಳ್ಳ ಮರಗಳು ಇಷ್ಟ. ಇಲ್ಲಿಗೆ ಬಂದ ಬಳಿಕವೂ ಜನ ತಮ್ಮ ಸಂತಾನ ವೃಕ್ಷದ ಬೇರುಗಳನ್ನು ಇಲ್ಲೂ ಹುಡುಕುತ್ತಿರುತ್ತಾರೆ.’

ಈಗ ರಾಜಕಾರಣಿ ದಂಗಾದ. ಸೈತಾನ ಕೂಡಾ ಫ್ರೆಂಚ್ ಕ್ರಾಂತಿಯ ಚಿಂತನೆಯ ಪ್ರಭಾವಕ್ಕೆ ಒಳಗಾದವನು ಎಂದು ಈತ ಭಾವಿಸಿದ್ದ. ಸೈತಾನ ಮಾತು ಮುಗಿಸಿದ: ‘ಮನುಷ್ಯರು ಮಾತ್ರ ಯಾವಾಗಲೂ ಭಿನ್ನ, ಸತ್ತ ಮೇಲೆ ಕೂಡಾ.’

ರಾಜಕಾರಣಿ ಮತ್ತೆ ತನ್ನ ವಾದದ ದಿಕ್ಕನ್ನು ನರಕದ ಕಡೆಗೆ ತಿರುಗಿಸಿದ : ‘ಈಗ ನೋಡು, ಸತ್ತ ಎಲ್ಲ ಯುರೋಪಿಯನ್ನರನ್ನು ನರಕದಲ್ಲಿ ಒಂದೇ ಸಾಲಿನಲ್ಲಿ ಸುಲಭವಾಗಿ ನಿಲ್ಲಿಸಬಹುದು. ಆತ್ಮಕ್ಕೆ ಸಂಬಂಧಪಟ್ಟಂತೆ ಅವರೆಲ್ಲ ಸಮಪ್ರಮಾಣಕ್ಕೆ ಸೇರಿದವರು. ನಿಮಗೂ ಇದು ಅನುಕೂಲ. ‘ಯುರೋಪಿಯನ್ ಗುಣಮಟ್ಟದಲ್ಲಿ ಸತ್ತವರು ‘ ‘ಗುಣಮಟ್ಟದ ಸಮುದಾಯ -ನರಕ’ಎಂದು ಪ್ರಮಾಣೀಕರಿಸಬಹುದು . ಇದರಿಂದಾಗಿ ಇಲ್ಲಿ ನರಕದಲ್ಲಿ ನಿನಗೂ ಕೆಲಸದ ಒತ್ತಡ ಕಡಮೆ ಆಗುತ್ತದೆ. ನಿನ್ನ ಸಿಬ್ಬಂದಿಯವರೂ ಬೇರೆ ಕೆಲಸ ಮಾಡಬಹುದು’-ಮಾತು ಉತ್ಸಾಹದಿಂದ ನಿರರ್ಗಳವಾಗಿ ಹರಿಯುತ್ತಿತ್ತು.

‘ನಾನು ಈ ಕೆಲಸಕ್ಕೆ ಜಾಸ್ತಿ ಅರ್ಹನೆಂದು ನೀನು ಹೇಳುತ್ತಿರುವುದಾ?’ ವ್ಯಂಗ್ಯದ ಧಾಟಿಯಲ್ಲಿ ಪ್ರಶ್ನಿಸಿದ ಸೈತಾನ. ‘ನನಗಂತೂ ಬೇರ ಬೇರೆ ಅಭ್ಯರ್ಥಿಗಳೊಂದಿಗೆ ಸಮಯ ಕಳೆಯುವುದು ಇಷ್ಟ. ಒಂದು ಕ್ಷಣ ಯೋಚಿಸು. ನಾವು ಬೇರೆ ಬೇರೆ ರೀತಿಯ ಶಿಕ್ಷೆಗಳನ್ನು ಕೊಡಬೇಕಾದರೆ ಜನರೂ ಬೇರೆ ಬೇರೆ ರೀತಿ ಇರಬೇಕು. ‘ಸೈತಾನನ ನಗೆ ವ್ಯಂಗ್ಯದಿಂದ ಹಿಂಸೆಯ ಧಾಟಿಯ ಕಡೆಗೆ ತಿರುಗಿತು.

ಯುರೋಪಿಯನ್ ರಾಜಕಾರಣಿ ಈಗ ಸಮಜಾಯಿಷಿಯ ಮಾತಿನ ವರಸೆ ಹಿಡಿದ. ‘ನಮ್ಮ ಜನಗಣತಿ ಮತ್ತು ಲೆಕ್ಕಾಚಾರಕ್ಕೆ ಆಗುವ ಲಾಭಗಳನ್ನು ಲೆಕ್ಕ ಹಾಕು. ನಾವು ಯುರೋಪಿನಲ್ಲಿ ಒಂದು ಸಾಮೂಹಿಕ ಪ್ರಯತ್ನ ಮಾಡಬಹುದು. ಅಲಬಾಮಾದಲ್ಲಿ ಅಲ್ಲಿನ ಜನಸಂಖ್ಯೆಯ ೪೬.೧ ರಷು ಜನರು ನರಕಕ್ಕೆ ಹೋಗಬೇಕು ಎಂದು ಅಲ್ಲಿನ ಧರ್ಮಗುರುಗಳು ನಿರ್ಧರಿಸಿದರು. ಅವರು ಅದರ  ನಕ್ಷೆಯೊಂದನ್ನು ಸಿದ್ಧಮಾಡಿ , ಅದರಲ್ಲಿ ಭೌಗೋಳಿಕವಾಗಿ ಯಾವ ಯಾವ ಪ್ರದೇಶದಿಂದ ಎಷು ಎಷ್ಟು ಜನ ನರಕಕ್ಕೆ ಹೋಗಬೇಕು ಎನ್ನುವುದನ್ನು ಕರಾರುವಾಕ್ಕಾಗಿ ತೀರ್ಮಾನ ಮಾಡಿದರು. ಸುಮಾರು ಅದೇ ರೀತಿ ನಮ್ಮಲ್ಲಿ ಯುರೋಪಿನಲ್ಲೋ ಮಾಡಬಹುದು. ನರಕಕ್ಕೆ ಹೋಗುವ ಎಲ್ಲ ಯುರೋಪಿಯನ್ನರ ಒಂದು ರಿಜಿಸ್ಟರ್ ತೆರೆಯಬಹುದು. ಹೇಗೆ ಅನ್ನಿಸುತ್ತದೆ ನಿನಗೆ ನನ್ನ ಈ ಹೊಸ ಯೋಜನೆ ?’ ತುಂಬಾ ಲವಲವಿಕೆಯಿಂದ ತನ್ನ ಆಲೋಚನೆ ಹಂಚಿಕೊಂಡ.

ಸ್ವಲ್ಪ ಅನುಮಾನಿಸಿ, ಮತ್ತೆ  ಸ್ಪಷ್ಟವಾಗಿ ಈಗ ತನ್ನ ತೀರ್ಮಾನ ಹೇಳಲೇಬೇಕಾಯಿತು ಸೈತಾನನಿಗೆ:  ‘ಇಲ್ಲ .ಅದರಿಂದ ಸಾವಿನ ಬಗೆಗಿನ ನಮ್ಮ ಎಲ್ಲ ಸಸ್ಪೆನ್ಸ್ ಮರೆಯಾಗುತ್ತದೆ. ನಾವು ಇಲ್ಲಿ ಕೆಳಗಿನ ಲೋಕದಲ್ಲಿ ಕುಳಿತು ಕೊಂಡು ಬೆಟ್ ಕಟ್ಟುತ್ತೇವೆ- ಇಂಥವರು ಸ್ವರ್ಗಕ್ಕೆ ಬರುತ್ತಾರೋ ನರಕಕ್ಕೆ ಬರುತ್ತಾರೋ ಎಂದು. ಅಂತಹ ಕುತೂಹಲ ಸಸ್ಪೆನ್ಸ್ ಇಲ್ಲದಿದ್ದರೆ ನಾವು ಏನು ಮಾಡುವುದು?

ಈಗ ಯುರೋಪಿಯನ್ ರಾಜಕಾರಣಿ ಕೈ ಚೆಲ್ಲಿದ. ತಲೆ ತಗ್ಗಿಸಿ ಎರಡೂ ಕೈಗಳನ್ನು ತೊಡೆಯ ಮೇಲೆ ಊರಿಕೊಂಡು ಹತಾಶನಾಗಿ ಕುಳಿತ. ಈಗ ನಗುನಗುತ್ತಾ ಸೈತಾನ ಒಂದು ಸಿಗರೆಟ್ ಕೊಟ್ಟ. ಅದು ಸ್ಥಳೀಯ  ಬ್ರಾಂಡಿನ ಸಿಗರೆಟ್. ಅದರ  ಹೆಸರು ‘ಲಕ್ಕಿ ಸ್ತೈಕ್ಷ್ ‘ (ಅದೃಷ್ಟದ ನರಕದ ನದಿ). ರಾಜಕಾರಣಿ ಕೆಲವು ದಮ್ಮು  ಎಳೆದವನೇ   ಖುಷಿಯಾದ. ಅವನ ಮುಖ ಅರಳಿತು.: ‘ನೀವು ಸೇದುತ್ತಿರುವ ಈ ಸ್ಥಳೀಯ  ಸಿಗರೆಟ್ ತುಂಬಾ ಚೆನ್ನಾಗಿದೆ ‘. ಈಗ ರಾಜಕಾರಾಣಿಯಿಂದ ಸ್ಥಳೀಯ  ಉತ್ಪನ್ನದ ಗುಣಗಾನ.

ಸೈತಾನ ಜೋರಾಗಿ ನಗುತ್ತಾ ಹೇಳಿದ: ‘ನಮ್ಮಲ್ಲಿ ಇನ್ನೂ ಅನೇಕ ಸ್ಥಳೀಯ ವಸ್ತುಗಳಿವೆ..ಜಗತ್ತಿನ ಎಲ್ಲ ಕಡೆಯ ಜನರು ಇಲ್ಲಿಗೆ ಬರುವುದರಿಂದ , ನಮ್ಮಲ್ಲಿ ಎಲ್ಲ ಬಗೆಯ ತಜ್ಞರು ಇದ್ದಾರೆ. ಇದರ ರಹಸ್ಯಗಳನ್ನೆಲ್ಲಾ ನಾವು ಮನುಷ್ಯರಿಗೆ ಹೇಳುವುದಿಲ್ಲ. ಹೇಳಿದರೆ ಮತ್ತೆ ನರಕಕ್ಕೆ ವಿಪರೀತ ಜನ ಬರುತ್ತಾರೆ. ಆ ರೀತಿ ನರಕಕ್ಕೆ ಓಡಿ ಬರುವವರನ್ನು ತಡೆಯುವುದು ನಮಗೆ ಇಲ್ಲಿ ಕಷ್ಟವಾಗುತ್ತದೆ.’

ಈಗ ಹೇಳಿ ನಮಗೆ ಎಂಥ ಸ್ವರ್ಗ ಬೇಕು, ಯಾವ ನರಕ ಸಾಕು ?

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: