ವೂರ್ಜಬರ್ಗಿನ ಎಕ್ಸ್-ರೇ ರೋಂತ್ ಗೆನ್: ನೊಬೆಲ್ ಜಂಟಲ್ ಮೆನ್

Posted on ಫೆಬ್ರವರಿ 1, 2010. Filed under: Uncategorized |


ಜರ್ಮನಿಯ ವೂರ್ಜಬರ್ಗಿಗೆ ಬಂದ ಆರಂಭ . ಅಕ್ಟೋಬರ  ಕೊನೆಯವಾರ ಒಂದು ದಿನ ಸಂಜೆ ನಗರದಲ್ಲಿ  ಓಡಾಡುತ್ತಿರುವಾಗ, ಬೇಗ ಕತ್ತಲಾಗಿತ್ತು. ಗೆಸ್ಟ್ ಹೌಸಿಗೆ ಬೇಗ ಹೋಗೋಣ ಎಂದು ಅವಸರದಿಂದ  ಕಾಲು ಹಾಕುತ್ತಿರುವಾಗ , ಹಸುರುಸಿಗ್ನಲ್  ಇದ್ದ ಕಡೆ ರಸ್ತೆ ದಾಟಿದೆ. ಮತ್ತೆ  ರಸ್ತೆಯಿಂದ  ಕಾಲುದಾರಿಗೆ  ಹೆಜ್ಜೆ ಇಡುವಾಗ, ದಿನ್ನೆ ಇದ್ದ ಕಾರಣ  ಕಾಲು ಜಾರಿತು.  ಎಡದ ಕೈಯನ್ನು ನೆಲಕ್ಕೆ ಊರಿದೆ.  ಮತ್ತೆ  ಸಾವರಿಸಿಕೊಂಡು ಎದ್ದೆ. ನಿದಾನವಾಗಿ  ಹೆಜ್ಜೆ ಹಾಕಲು ತೊಡಗಿದರೆ , ಎಡದ ಕೈ ಮತ್ತು ಎಡದ  ಕಾಲು ನೋಯುವುದು ಅನುಭವಕ್ಕೆ ಬಂತು. ಏನೋ ಸಣ್ಣ ಮೂಗೇಟು ಅಂದುಕೊಂಡು , ಕೋಣೆಗೆ  ಬಂದವನೇ  ಊರಿನಿಂದ  ತಂದ ನೋವಿನ ಮುಲಾಮು ಹಚ್ಚಿದೆ.

ಮರುದಿನವಂತೂ  ಭಾನುವಾರ. ವಿಶ್ರಾಂತಿ ತೆಗೆದುಕೊಂಡರೆ  ಸೋಮವಾರಕ್ಕೆ ಎಲ್ಲ ಸರಿಹೋಗುತ್ತದೆ ಅಂದುಕೊಂಡು ಮಲಗಿದೆ.  ರಾತ್ರಿ  ನೋವು  ಜಾಸ್ತಿ  ಆಯಿತು. ಎಡದ ಕೈ ಅಲುಗಾಡಿಸಲು  ಆಗದಷ್ಟು ನೋವು. ಬೆಳಗ್ಗೆ ನೋಡಿದರೆ ಕೈ ಎತ್ತಲು ಆಗುತ್ತಿಲ್ಲ. ಒಬ್ಬನೇ ಇರುವ ಕಾರಣ ನೋವನ್ನು  ಹಂಚಿಕೊಳ್ಳಲೂ  ಆಗುತ್ತಿಲ್ಲ. ಆ  ದಿನ ಭಾನುವಾರ.  ಡಾಕ್ಟರ್ , ಆಸ್ಪತ್ರೆ  ಯಾವುದೂ ಸಿಗಲಾರದು. ಬಹುಶ  ಕೈ ಮುರಿದಿದೆ ; ಹಾಗಾಗಿ  ಅಲುಗಾಡಿಸಲು ಆಗುತ್ತಿಲ್ಲ.  ಇನ್ನು ತಿಂಗಳುಗಟ್ಟಲೆ  ಕೈಕಟ್ಟಿ  ಇರಬೇಕಲ್ಲ  ಎನ್ನುವ ಚಿಂತೆ.  ಕಷ್ಟಪಟ್ಟು ಎದ್ದು  ಪ್ರೊಫೆಸ್ಸರ್  ಬ್ರೂಕ್ನರ್  ಅವರಿಗೆ ಇಮೈಲ್ ಮಾಡಿದೆ;  ಈದಿನ  ಡಾಕ್ಟರ್  ಸಿಗಬಹುದೇ  ಎನ್ನುವ ಅನುಮಾನ ಹೇಳಿದೆ. ತಕ್ಷಣ ಅವರ ಫೋನ್ .  ಇಷ್ಟು ಹೊತ್ತಿಗೆ ಬರುತ್ತೇನೆ. ಆಸ್ಪತ್ರೆಗೆ ಹೋಗೋಣ ಎಂದು. ಪ್ರಯಾಸಪಟ್ಟು  ಸಿದ್ದನಾದೆ.

ಭಾನುವಾರ  ತೆರೆದಿರುತ್ತಿದ್ದ  ಒಂದು ಆಸ್ಪತ್ರೆಗೆ  ಕರೆದುಕೊಂಡು ಹೋದರು. ನಾವು ಮೊದಲೇ ಹೇಳಿರಲಿಲ್ಲ.  ಆದರೆ ತುರ್ತು ಸಮಸ್ಯೆ ಎಂದು  ಹೇಳಿದೆವು. ಡಾಕ್ಟರ್ ಒಬ್ಬರು ಇದ್ದರು.ಅವರು ಮೂಳೆರೋಗ  ತಜ್ಞರು.  ಒಳಗೆ

ಕರೆಸಿದರು. ಕೈ ಕಾಲು ಒತ್ತಿ  ನೋಡಿದರು. ನನಗೋ ಜೀವ ಹೋದಷ್ಟು ಅಸಾಧ್ಯ ನೋವು. ಅಲ್ಲಿಂದ ಎಕ್ಸ್-ರೇ ಕೋಣೆಗೆ  ಹೋದೆವು. ಅದೇ ಡಾಕ್ಟರ್.  ನರ್ಸುಗಳು ಇಲ್ಲ, ರೇಡಿಯೋಲೋಜಿಸ್ಟ್ ಇಲ್ಲ,  ಯಾವ ಸಹಾಯಕರೂ ಇಲ್ಲ.

ನನಗೆ ಕೋಟು ಶರ್ಟು ತೆಗೆಯಲು ಕಷ್ಟವಾದಾಗ ಡಾಕ್ಟರ್ ರೆ  ತೆಗೆದರು. ಅವರೇ ಎಕ್ಸ್-ರೇ ಕೂಡಾ ತೆಗೆದರು.  ಬಳಿಕ ಐದು ನಿಮಿಷದಲ್ಲಿ ಅವರೇ ನನ್ನ ಎಕ್ಸ್-ರೇ ಹಿಡಿದುಕೊಂಡು ಬಂದರು.’ನಿಮ್ಮ ಅದೃಷ್ಟ

. ಕೈಗೆ ಆಗಲೀ ಕಾಲಿಗೆ ಆಗಲೀ ಫ್ರ್ಯಾಕ್ಚರ್ ಆಗಿಲ್ಲ. ಮಾಂಸದ ಒಳಗಿನ ನರಗಳಿಗೆ  ಒತ್ತಡ  ಬಿದ್ದಿದೆ. ಮುಲಾಮು  ಮತ್ತು ಮಾತ್ರೆ ಬರೆದುಕೊಡುತ್ತೇನೆ. ಎರಡು ದಿನದಲ್ಲಿ ಸರಿಯಾಗುತ್ತದೆ.’ ಎಂದರು ಡಾಕ್ಟರು.

ಹಾಗೆಯೇ ಆಯಿತು. ಅತಿ ತಣ್ಣಗಿನ  ಮುಲಾಮು ತುಂಬಾ ಪರಿಣಾಮಕಾರಿಯಾಗಿತ್ತು.  ಮರುದಿನ ಸೋಮವಾರ , ವಿವಿಗೆ ಹೋದೆ,  ಪಾಠ ಮಾಡಿದೆ. ಒಂದು ವಾರದಲ್ಲಿ ನೋವೆಲ್ಲಾ ಮಾಯ. ಏನು ಮಾಯಾಲೋಕ ಇದು !   ಇಷ್ಟೆಲ್ಲಾ   ಬುದ್ದಿವಂತರಾದ  ನಾವು ನಮ್ಮ  ಮೈಕೈಗೆ  ಏನಾಗಿದೆ  ಎನ್ನುವುದನ್ನು ನೋಡಲಾರೆವು.  ನಮ್ಮ ಒಳನೋಟಗಳೆಲ್ಲ  ಹೊರನೋಟದ  ಒಳನೋಟಗಳು.  ನಮ್ಮ ಕಣ್ಣಿಗೆ ಕಾಣದ್ದನ್ನು  ಕಾಣುವಂತೆ ಮಾಡಲು ಆದ ಪ್ರಯತ್ನಗಳು , ಸಾಹಸಗಳು, ನೋವುಗಳು, ಸಾಧನೆಗಳು -ಹೀಗೆ ಯೋಚನೆ ಮಾಡುತ್ತಾ , ವೂರ್ಜಬರ್ಗ್ ವಿಶ್ವವಿದ್ಯಾನಿಲಯ  -ನಾನು ದಿನನಿತ್ಯ ಕಾಣುತ್ತಿರುವ  ಕಲಿಸುತ್ತಿರುವ  ಸಂಸ್ಥೆ  ನನ್ನ   ಕಣ್ಣ ಮುಂದೆ  ಬಂದು ನಿಂತಿತು.

ಒಂದು ವೇಳೆ ಎಕ್ಸ್-ರೆಯನ್ನು ಕಂಡುಹಿಡಿಯದಿರುತ್ತಿದ್ದರೆ ನನ್ನ ಕಥೆ ಏನಾಗುತ್ತಿತ್ತು? ನನ್ನದೇನೋ ಸಣ್ಣ ಸಂಗತಿ. ಆದರೆ ಜಗತ್ತಿನ ಲಕ್ಷಾಂತರ ಮಂದಿಯ ಜೀವಗಳು ಏನಾಗುತ್ತಿದ್ದುವು?  ಹೌದು ವೂರ್ಜಬರ್ಗ್ ವಿವಿಯ ಹೆಮ್ಮೆ  ಮತ್ತು ಭಾಗ್ಯ ! ಎಕ್ಸ್-ರೆಯನ್ನು ಮೊತ್ತಮೊದಲ ಬಾರಿ  ಕಂಡುಹಿಡಿದು ಅದಕ್ಕಾಗಿ  ನೊಬೆಲ್ ಪ್ರಶಸ್ತಿ   ಪಡೆದ   ವಿಲ್ ಹೆಲ್ಮ್ ಕೊನ್ರಾಡ್  ರೊಂತ್ ಗೆನ್ , ಈ ವಿವಿಯಲ್ಲಿ  ಭೌತವಿಜ್ಞಾನದ  ಪ್ರೊಫೆಸ್ಸರ್  ಆಗಿದ್ದವನು.  ರೋಂತ್ ಗೆನ್  ಎಕ್ಸ್ ರೇ  ಕಂಡುಹಿಡಿದದ್ದು  ೧೮೯೫ರಲ್ಲಿ ವೂರ್ಜಬರ್ಗಿನಲ್ಲಿ.

ರೋಂತ್ ಗೆನ್ (೨೭ ಮಾರ್ಚ್ ೧೮೪೫-೧೦ ಫೆಬ್ರವರಿ ೧೯೨೩ ) ಬಹಳ  ಕಷ್ಟದ  ದಾರಿಯನ್ನು  ತುಳಿದುಕೊಂಡು ಬಂದವನು. ಶಾಲೆಯಲ್ಲಿ  ತನ್ನ  ಸಹಪಾಠಿಯ ಬಗ್ಗೆ ಹೇಳಲಿಲ್ಲ ಎನುವ ಕ್ಷುಲ್ಲಕ ಕಾರಣಕ್ಕಾಗಿ ಒಬ್ಬ ಅಧ್ಯಾಪಕರು ಅವನನ್ನು ಶಾಲೆಯಿಂದ ಹೊರಗೆಹಾಕಿದರು. ಅವನು ಅಲ್ಲಿ  ಶಿಕ್ಷಣ  ಮುಂದುವರಿಸಲು ಸಾಧ್ಯ ಆಗಲಿಲ್ಲ. ಆದರೆ ಅಳುಕದ ರೋಂತ್ ಗೆನ್  ತಾನೇ  ಓದಿಕೊಂಡು  ಪರೀಕ್ಷೆಗೆ ಹಾಜರಾದ. ಅವನ ದುರದೃಷ್ಟಕ್ಕೆ  ಅವನನ್ನು ಶಾಲೆಯಿಂದ ಹೊರಗೆ ಹಾಕಿದ ಅಧ್ಯಾಪಕರೇ  ಆತನ ಪರೀಕ್ಷಕರಾಗಿ  ಬಂದು, ಅವನನ್ನು ಫೈಲ್ ಮಾಡಿದರು. ಹೀಗಾಗಿ ಶಿಕ್ಷಣ  ಮುಂದುವರಿಸುವ  ಶಾಲಾಸರ್ಟಿಫಿಕೆಟ್  ರೋಂತ್ ಗೆನ್ ಗೆ ದೊರೆಯಲಿಲ್ಲ.

ಈ ಕುರಿತು ಮುಂದೆ ಒಂದುಕಡೆ ಆತ ಹೀಗೆ ಬರೆದಿದ್ದಾನೆ :  ‘ಶಾಲಾ ಪರೀಕ್ಷೆಗಳು  ಯಾವುದಾರೂ ಒಂದು ವಿಶಿಷ್ಟ ವಿಷಯದ  ಬಗ್ಗೆ  ವಿದ್ಯಾರ್ಥಿಗಳ   ಸಾಮರ್ಥ್ಯವನ್ನು  ಅಳೆಯುವುದಿಲ್ಲ.  ಅವು ಅನಿವಾರ್ಯ ಕೆಡುಕುಗಳು. ಅವು  ಬದುಕಿನಲ್ಲಿ ಕೆಲವು ಮಂದಿಯನ್ನು  ವೃತ್ತಿಪರತೆಯಿಂದ  ದೂರವಿರಿಸಿ ಸೋಮಾರಿಗಳನ್ನಾಗಿ ಮಾಡುತ್ತವೆ.  ಬಳಿಕದ ಬದುಕು ಮಾತ್ರ  ನಮ್ಮ  ವೃತ್ತಿಯ  ನಿಜವಾದ ಪರೀಕ್ಷೆ.’

ರೋಂತ್ ಗೆನ್  ರಸಾಯನವಿಜ್ಞಾನ ಮತ್ತು ಭೌತವಿಜ್ಞಾನಗಳಲ್ಲಿ ಅಧ್ಯಯನವನ್ನು ಉತ್ರೆಶ್ತ್ ವಿವಿಯಲ್ಲಿ  ಮಾಡುತ್ತಾನೆ.ಆದರೆ  ಶಾಲಾ ಪರೀಕ್ಷೆಯ ಸರ್ಟಿಫಿಕೆಟ್ ಇಲ್ಲದ್ದರಿಂದ ಅಲ್ಲೂ ಕೊನೆಯ  ಪರೀಕ್ಷೆಗೆ ಹಾಜರಾಗಲು ಸಾಧ್ಯ ಆಗುವುದಿಲ್ಲ.  ಹಿಂದಿನ ಸಹಪಾಟಿ  ಒಬ್ಬನ ಸಹಾಯದಿಂದ ಒಂದು ಪ್ರವೇಶ ಪರೀಕ್ಷೆಗೆ ಬರೆಯುವ ಅವಕಾಶ ದೊರೆಯಿತು.ಅದರ ಮೂಲಕ  ಪ್ರವೇಶ  ದೊರೆಯಿತು. ಆಗ ಅವನು ಆಯ್ಕೆ ಮಾಡಿಕೊಂಡದ್ದು ಆನ್ವಯಿಕ ಗಣಿತಶಾಸ್ತ್ರ. ಅದು ಮುಖ್ಯವಾಗಿ ಮೆಕಾನಿಕ್ಸ್ ಮತ್ತು ಮೆಕಾನಿಕಲ್ ಎಂಜಿನಿಯರಿಂಗ್. ಜ್ಯೂರಿಚ್ಚಿನ ಪಾಲಿಟೆಕ್ನಿಕ್ ನಲ್ಲಿ ೧೮೬೮ರಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಉತ್ತಮ ಶ್ರೇಣಿ ಯೊಂದಿಗೆ  ಡಿಪ್ಲೋಮಾ ಪಡೆದ .

ಹೀಗೆ ಜ್ಯೂರಿಚ್ ನಲ್ಲಿ ಇರುವಾಗ ಪರಿಚಯ ಆದವಳು  ಅನ್ನಾ ಬೆರ್ಥ.ರೋಂತ್ ಗೆನ್ ಹೆಚ್ಚಾಗಿ ಊಟಕ್ಕೆ ಹೋಗುತ್ತಿದ್ದ ರೆಸ್ಟೊರೆಂಟಿನ ಒಡೆಯನ ಮಗಳು.ಆದರೆ ಅಧ್ಯಯನ ಮೊದಲ ಆದ್ಯತೆ ಆದ್ದರಿಂದ  ತಾರುಣ್ಯದ ಇತರ ಆಕರ್ಷಣೆಗಳು ರೋಂತ್ ಗೆನ್ ನ ಸಮಯವನ್ನು ಕಬಳಿಸಲಿಲ್ಲ.ಜ್ಯೂರಿಚ್ ನಲ್ಲಿ ತರುಣ ಪ್ರೊಫೆಸ್ಸರ್ ಆಗಸ್ಟ್ ಕುಂದ್ತ್ ಉಪನ್ಯಾಸಗಳು ಪರಿಣಾಮ ಬೀರಿದವು. ಬೆಳಕಿನ ಪ್ರವಹನ ಅಗೋಚರ ಮತ್ತು ಈಥರ್ ಒಂದು  ಮಾಧ್ಯಮ -ಇದರ ಕುರಿತು ಹೆಚ್ಚು ಸಂಶೋಧನೆ ನಡೆಯಬೇಕು ಎಂದು ಕುಂದ್ತ್ ಹೇಳುತ್ತಿದ್ದ. ಇದರಿಂದ ಪ್ರಭಾವಿತನಾದ ರೋಂತ್ ಗೆನ್  ಜ್ಯೂರಿಚ್ ನಲ್ಲಿ ಡಾಕ್ಟರೇಟ್ ಮಾಡಬೇಕು ಎಂದು ನಿರ್ಧರಿಸಿದ. ‘ಅನಿಲಗಳ ಉಷ್ಣತೆ ಮತ್ತು ಪ್ರಮಾಣ’ ಬಗ್ಗೆ ಅಧ್ಯಯನ  ನಡೆಸಿ ಡಾಕ್ಟರೇಟ್ ಪಡೆದ.

ಮುಂದೇನು ? ಬದುಕಲು ಏನು ದಾರಿ? ರೊಂತ್ ಗೆನ್ ಗೆ ಮತ್ತೆ ಸಹಾಯಕ್ಕೆ ಬಂದದ್ದು ಆಗಸ್ಟ್ ಕುಂದ್ತ್.  ಕುಂದ್ತ್  ತಾನು ವೂರ್ಜಬರ್ಗಿಗೆ  ಪ್ರೊಫೆಸ್ಸರ್  ಆಗಿ ಬಂದಾಗ ೧೮೬೯ರಲ್ಲಿ ತನ್ನ ಸಹಾಯಕ -ಅಸಿಸ್ಟೆಂಟ್ -ಆಗಿ ರೊಂತ್ ಗೆನ್ ನನ್ನು ಕರೆಸಿಕೊಂಡ. ವೂರ್ಜಬರ್ಗ್ ವಿವಿಯ ಫಿಸಿಕಲ್  ಇನ್ಸ್ಟಿಟ್ಯೂಟ್  ಇವರ ಕಾಯಕದ ಮನೆಯಾಯಿತು. ಅದೇ ಸಮಯದಲ್ಲಿ ಅನ್ನಾ ಬೆರ್ಥಾ ಜೊತೆಗೆ ಮದುವೆ ೧೮೭೨ರಲ್ಲಿ.  ಆದರೆ ಅಸಿಸ್ಟೆಂಟ್ ಆದ ರೊಂತ್ ಗೆನ್ ಗೆ ವಿವಿಯಿಂದ ಸಂಬಳ ಇರಲಿಲ್ಲ. ಅವರು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದರು. ಹಣದ ಸಮಸ್ಯೆ ತುಂಬಾ  ಇತ್ತು.

ಜರ್ಮನಿಯಲ್ಲಿ  ವಿಶ್ವವಿದ್ಯಾಲಯದಲ್ಲಿ  ಲೆಕ್ಚರರ್  ಆಗಬೇಕಾದರೆ , ಡಾಕ್ಟರೇಟ್ ಸಾಕಾಗುತ್ತಿರಲಿಲ್ಲ. ಅದರ ಬಳಿಕ ಹ್ಯಾಬಿಲಿತೆಶನ್ ಎಂಬ ಕಷ್ಟದ ಇನ್ನೊದು ಸಂಶೋಧನಾ ಥೀಸಿಸ್ ಸಲ್ಲಿಸಿ ತೇರ್ಗಡೆ  ಆಗಬೇಕು. (ಈಗಲೂ ಪ್ರೊಫೆಸ್ಸರ್ ಹುದ್ದೆಗೆ ಇದು ಕಡ್ಡಾಯ .) ಆಗಿನ ನಿಮಯ ಎಷ್ಟು ಕಠಿಣ ಆಗಿತ್ತೆಂದರೆ, ಶಾಲಾ ಡಿಪ್ಲೋಮಾ ಇಲ್ಲದೆ ರೊಂತ್ ಗೆನ್ ಗೆ  ಸಂಶೋಧನೆ ನಡೆಸಲು ಅನುಮತಿ ದೊರೆಯಲಿಲ್ಲ.  ಡಾಕ್ಟರೇಟ್ ಇದ್ದರೂ  ರಿಯಾಯತಿ ದೊರೆಯಲಿಲ್ಲ. ಆದರೆ ಆಗ  ನೆರವಿಗೆ ಬಂದದ್ದು ಫ್ರಾನ್ಸ್ ಮತ್ತು ಜರ್ಮನಿ ಯುದ್ದದಲ್ಲಿ , ಫ್ರಾನ್ಸ್ ವಿಜಯಿ  ಆಗಿ, ಹೊಸ ವಿಶ್ವವಿದ್ಯಾಲಯ ಆರಂಭವಾಗಿ, ಅಲ್ಲಿ ನಿಯಮಗಳ  ಸದಿಲಿಕೆಯಿಂದ ,ರೊಂತ್ ಗೆನ್ ಗೆ ಅವಕಾಶ ದೊರೆಯಿತು.  ಗಿಎಸ್ಸೇನ್ ವಿವಿಯಲ್ಲಿ  ಹ್ಯಾಬಿಲಿತೆಶನ್ ಮುಗಿಸಿ, ಮತ್ತೆ  ಬಂದದ್ದು  ವೂರ್ಜಬಗ್ ವಿವಿಯ ಫಿಸಿಕಲ್  ಇನ್ಸ್ಟಿಟ್ಯೂಟ್ ನಲ್ಲಿ ಪೂರ್ಣ ಪ್ರೊಫೆಸ್ಸರ್ ಆಗಿ  ನವಂಬರ ೧೮೮೮ರಲ್ಲಿ.

ಈಗ ಪೂರ್ಣ ಪ್ರೊಫೆಸ್ಸರ್  ಮತ್ತು  ಸಂಶೋಧಕ ಆಗಿ ಫಿಸಿಕಲ್ ಇನ್ಸ್ಟಿಟ್ಯೂಟ್ ನಲ್ಲೆ  ರೊಂತ್ ಗೆನ್  ದಂಪತಿಗಳ ವಾಸ. ಆತನಿಗೆ ನಾಟಕ ಮತ್ತು ಸಂಗೀತದಲ್ಲಿ ಒಳ್ಳೆಯ ಅಭಿರುಚಿ  ಇತ್ತು. ವೂರ್ಜಬರ್ಗ್ ನಗರದಲ್ಲಿ ನಾಟಕ ಮತ್ತು ಕಲಾ ಕಾರ್ಯಕ್ರಮಗಳಿಗೆ  ಅವರು ಹೋಗುತ್ತಿದ್ದರು. ಸಂಶೋಧನೆಯ ಮುಖ್ಯ ಸಾಧನೆ ಆದದ್ದು ಈ ಅವಧಿಯಲ್ಲಿ. ಕಣ್ಣಿಗೆ ಕಾಣದ ಕಿರಣಗಳು ಟ್ಯೂಬಿನಿಂದ  ಕಾರ್ಡ್ ಬೋರ್ಡ್  ಮೂಲಕ ಸ್ಕ್ರೀನಿನಲ್ಲಿ  ಬಣ್ಣದ ಬೆಳಕನ್ನು ಉಂಟುಮಾಡುವ ಮಾಯೆಯನ್ನು ಅವನು ಸೂಕ್ಷ್ಮವಾಗಿ ಪರೀಕ್ಷಿಸಿದ. ತನ್ನ ಡೆಸ್ಕಿನ  ಮೇಲಿರುವ ಪುಸ್ತಕಗಳು ಮತ್ತು ಕಾಗದಗಳ ಮೂಲಕ ಕೂಡಾ ಆ  ಕಿರಣಗಳು ಹಾದುಹೋಗಬಲ್ಲವು   ಎಂದು ಅವನು ಕಂಡುಕೊಂಡ. ತನ್ನ ಪ್ರಯೋಗದ ದಾಖಲೆಗಾಗಿ ಮನುಷ್ಯರ ಮೇಲೆ ಈ ಕಿರಣಗಳ ಪರಿಣಾಮ ನೋಡಲು ಅವನು ಆಹ್ವಾನಿಸಿದ್ದು ತನ್ನ ಹೆಂಡತಿ ಬೇರ್ಥಾಳನ್ನು. ೧೮೯೫ರ ದಶಂಬರ ೨೨ರನ್ದು ಅವಳನ್ನು  ತನ್ನ ಪ್ರಯೋಗಶಾಲೆಗೇ  ಕರೆಸಿ, ಉಂಗುರ ಇದ್ದ  ಅವಳ ಕೈಯನ್ನು ಈ ಕಿರಣಗಳಿಗೆ ಒಳಪಡಿಸಿ ಫೋಟೋ  ತೆಗೆದನು. ಈಗ ಅವಳ ಉಂಗುರ ಸಹಿತದ ಬೆರಳುಗಳ ಎಕ್ಸ್ ರೆ ಮೊದಲ ಮನುಷ್ಯ ದೇಹದ ಎಕ್ಸ್ ರೆ ಆಗಿದೆ.

ಈ ರೀತಿಯ ಹೊಸ ಕಿರಣಗಳನ್ನು  ರೊಂತ್ ಗೆನ್ ‘ ಎಕ್ಸ್-ರೆ ‘ ಎಂದು ಕರೆದ. ಅದು ಆವರೆಗೆ ಗೊತ್ತಿಲ್ಲದ  ವಿಕಿರಣ  ಆದದ್ದರಿಂದ ಆತ ಅದಕ್ಕೆ  ‘ಎಕ್ಸ್’  ಎನ್ನುವ ಸಂಕೇತ ಕೊಟ್ಟ. ಆದರೆ ಆತನ ಅಭಿಮಾನಿಗಳು ವಿಜ್ಞಾನಿಗಳು, ಅವನು ಬೇಡವೆಂದರೂ , ಈ ವಿಕಿರಣವನ್ನು’ ರೊಂತ್ ಗೆನ್ ಕಿರಣಗಳು ‘ಎಂದು ಕರೆದರು.  ರೊಂತ್ ಗೆನ್ ಎಕ್ಸ್ ರೆ ಕುರಿತು ಅಧಿಕೃತವಾಗಿ  ಸಂಶೋಧನಾ ಬರಹ ಮೊದಲು ಪ್ರಕಟಿಸಿದ್ದು  ೨೮ ದಶಂಬರ ೧೮೯೫ ರಂದು. ಈ ಸಂಶೋಧನೆಗೆ ನೊಬೆಲ್ ಪ್ರಶಸ್ತಿ ದೊರೆತದ್ದು ೧೯೦೧ರಲ್ಲಿ. ಅದು ಭೌತವಿಜ್ಞಾನದ ಮೊದಲಲನೆಯ  ನೊಬೆಲ್ ಗೌರವ.

ರೊಂತ್ ಗೆನ್ ಕಂಡುಹಿಡಿದ   ‘ಎಕ್ಸ್ ರೇ’-ಇದರಿಂದಾಗಿ ಎರಡು ಜಾಗತಿಕ  ಮಹಾಯುದ್ದಗಳಲ್ಲಿ ಗಾಯಗೊಂಡ ಸಾವಿರಾರು ಯೋಧರ  ಪ್ರಾಣಗಳು ಉಳಿದವು. ಅವು ಜರ್ಮನರದ್ದನ್ನು ಮಾತ್ರ ಅಲ್ಲ, ಅವರ   ವಿರೋಧಿ ಬಣಗಳ ಯೋಧರನ್ನೂ ಉಳಿಸಿದವು.  ರಾಜಕೀಯದ  ಮಂದಿ  ಕೊಲ್ಲಲು  ಬಯಸಿದರೆ , ಮಾನವೀಯ ವಿಜ್ಞಾನಿ    ರೊಂತ್ ಗೆನ್  ಶೋಧಿಸಿದ ಎಕ್ಸ್-ರೆ ,  ಕಾಪಾಡುವ ಪುಣ್ಯ ಕಟ್ಟಿಕೊಂಡಿತು. ಯುದ್ಧ ಭೂಮಿಯಲ್ಲಿ   ಅನೇಕ ಎಕ್ಸ್-ರೆ ಕೇಂದ್ರಗಳನ್ನು ತೆರೆಯಲಾಯಿತು. ಸಂಚಾರಿ ಎಕ್ಸ್-ರೇ ಆಸ್ಪತ್ರೆಗಳನ್ನು ವ್ಯವಸ್ಥೆ ಮಾಡಲಾಯಿತು. ಮೇರಿ  ಕ್ಯೂರಿ ಮತ್ತು ಅವಳ ಮಗಳು ಐರಿನ್ ಗಾಯಾಳು ಶಿಬಿರಗಳಲ್ಲಿ ಓಡಾಡಿ ಆರೈಕೆ ಮಾಡಿದರು.

ಜರ್ಮನಿಯು  ತಟಸ್ಥ  ಬೆಲ್ಜಿಯಂ ಮೇಲೆ ಧಾಳಿ ಮಾಡಿ , ನಾಗರಿಕರು ಸಂಕಷ್ಟಕ್ಕೆ  ಒಳಗಾದಾಗ , ೧೯೧೪  ಅಕ್ಟೋಬರದಲ್ಲಿ  ರೊಂತ್ ಗೆನ್  ‘ನಾಗರಿಕ ಜಗತ್ತಿಗೆ ‘ ಎನ್ನುವ ಮನವಿಗೆ  ಸಹಿ ಹಾಕಿದ. ಮುಂದೊಂದು ಬಾರಿ  ಮ್ಯೂನಿಕ್   ವಿಶ್ವವಿದ್ಯಾಲಯದಲ್ಲಿ  ಪ್ರೊಫೆಸ್ಸರ್  ಆಗಿ ಕೆಲಸ ಮಾಡುತ್ತಿದ್ದಾಗ, ಬವೇರಿಯ ರಾಜ್ಯ ಸಚಿವರಿಂದ ತೊಂದರೆ ಅನುಭವಿಸುತ್ತಿದಾಗ,  ಧೈರ್ಯವಾಗಿ  ಹೀಗೆ ಬರೆದ :  ‘ ಒಬ್ಬ ಸಂಸ್ಕೃತಿ ಮಂತ್ರಿ ಎಂದರೆ  ಒಬ್ಬ   ಆಡಳಿತಗಾರ  ಮಾತ್ರ.  ಆದ್ದರಿಂದ   ಅಜ್ಞಾನದ   ಕಾರಣವಾಗಿ ಅವನಿಗೂ ಅವನ ಸಹಾಯಕರಿಗೂ ವಿಶ್ವವಿದ್ಯಾನಿಲಯದ  ಅಭಿವೃದ್ದಿಯಲ್ಲಿ  ನಿಜವಾದ ಆಸಕ್ತಿ  ಇಲ್ಲ.’

ವೂರ್ಜಬರ್ಗಿನಲ್ಲಿ ತಮ್ಮ ಮನೆಯ ಸುತ್ತಲಿನ ತೋಟದ ಬಗ್ಗೆ ರೊಂತ್ ಗೆನ್ ಬರೆದದ್ದು ಹೀಗೆ:  ‘ಒಂದೇ ಹೊತ್ತಿಗೆ ಸಾವಿರಕ್ಕೂ ಮೇಲ್ಪಟ್ಟು ಸುಂದರ ಹಣ್ಣುಗಳನ್ನು ಬಿಡುತ್ತಿದ್ದ ಆಪ್ರಿಕೊಟ್ ಮರಗಳು ತಮ್ಮ ಯೋಗ್ಯತೆಯನ್ನು ಇನ್ನೂ ತೋರಿಸಬೇಕಾಗಿದೆ. ಕುಳ್ಳಗಿನ ಹಣ್ಣಿನ ಮರಗಳು ಒಳ್ಳೆಯ ಗುಣಮಟ್ಟದವು. ಕಪ್ಪು ಹಕ್ಕಿಗಳು ಮತ್ತು ದುಂಬಿಗಳಿಗೆ ಸಾಕಾಗುವಷ್ಟು ಮಾತ್ರ ದ್ರಾಕ್ಷೆ ಇದೆ.’

ಸಾಮಾನ್ಯ ಕಣ್ಣಿಗೆ ಕಾಣದ್ದು ಎಕ್ಸ್ ರೇ ಮೂಲಕ ಕಾಣುತ್ತದೆ. ಆದರೆ ಅದಕ್ಕೂ ಕಾಣುವ ಕಣ್ಣು ಬೇಕು. ಅದು ಹಕ್ಕಿ ದುಂಬಿ ಗಳನ್ನು, ಕೈಕಾಲು ಮುರಿದುಕೊಂಡ ಯೋಧರನ್ನು, ಅಜ್ಞಾನದ ರಾಜಕಾರಣಿಗಳನ್ನು ಮತ್ತು ಡೆಸ್ಕಿನ ಮೇಲಿನ ಪುಸ್ತಕಗಳ ಮೇಲೆ ಹರಿಯುವ ಹೊಸ ಬೆಳಕನ್ನು ಒಟ್ಟಿಗೆ ಕಾಣಬಲ್ಲುದು. ಅದು ನೋಬಲ್ ಮನಸ್ಸು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: