ಭಾರತವೆಂದರೆ ಕರ್ನಾಟಕ: ಜರ್ಮನಿಯಲ್ಲಿ ಗಣರಾಜ್ಯೋತ್ಸವ

Posted on ಜನವರಿ 30, 2010. Filed under: Uncategorized |


ಮೊನ್ನೆ ಜನವರಿ ೨೬ರಂದು  ಭಾರತದ ಗಣರಾಜ್ಯೋತ್ಸವವನ್ನು ಜರ್ಮನಿಯ ಬವೇರಿಯ ಪ್ರಾಂತ್ಯದ ಮ್ಯೂನಿಕ್ ನಲ್ಲಿ ಆಚರಿಸುತ್ತಾರೆ ಎಂದು ಕೇಳಿದಾಗ ,ಅದೊಂದು ಸಾಂಪ್ರದಾಯಿಕ ಸಮಾರಂಭ ಆಗಿರಬಹುದೆಂದು ಅಂದುಕೊಂಡಿದ್ದೆ.  ಪ್ರೊಫೆಸ್ಸರ್  ಬ್ರೂಕ್ನರ್   ‘ಮ್ಯೂನಿಕ್ ಗೆ ಹೋಗೋಣವೆ’ ಎನ್ನುವಾಗ  ಸ್ವಲ್ಪ ಹಿಂದೇಟು ಹಾಕಿದ್ದೆ. ಮೊದಲನೆಯದು, ವಿದೇಶದಲ್ಲಿ ಅಲ್ಲಿನ ಭಾರತೀಯರು ತಮ್ಮ  ತಮ್ಮ ದೇಶದ ಮಹತ್ವದ ದಿನಗಳನ್ನು ಆಚರಿಸುತ್ತಾರೆ, ಅದು ಸಹಜ ಕೂಡಾ ; ಅಷ್ಟಕ್ಕೇ ಹೋಗಬೇಕೆ ಎನ್ನುವುದು.  ಎರಡನೆಯದು, ಈ ಹಿಮಪಾತ ಚಳಿಯಲ್ಲಿ ಅಷ್ಟು ದೂರ ರೈಲಿನಲ್ಲಿ ಪ್ರಯಾಣಮಾಡುವ ಮೈಚಳಿ.

ಆದರೆ ಬ್ರೂಕ್ನರ್ ಇನ್ನೊದು ಸುದ್ದಿ  ಹೇಳಿದರು : ಆ ಕಾರ್ಯಕ್ರಮದಲ್ಲಿ , ಕರ್ನಾಟಕದಲ್ಲಿ ಹೆಚ್ಚಿನ ಶಿಕ್ಷಣ  ಪಡೆಯಲು ಹೋಗುವ ನಾಲ್ಕು ಮಂದಿ ಜರ್ಮನ್  ವಿದ್ಯಾರ್ಥಿಗಳಿಗೆ, ಜರ್ಮನಿಯ ಬವೇರಿಯ ಸರಕಾರ ಸಂಶೋಧನಾ ಫೆಲ್ಲೋಶಿಪ್ ಕೊಡುವ  ಕಾರ್ಯಕ್ರಮ ಕೂಡ ಇದೆ ಎಂದು . ಬವೇರಿಯ ಮತ್ತು  ಕರ್ನಾಟಕ ರಾಜ್ಯಗಳ  ಸಂಬಂಧದ ದೃಷ್ಟಿಯಿಂದ ಕೂಡಾ ಇದು ಮುಖ್ಯ ಎಂದು. ಭಾರತ ಜನನಿಯ ತನುಜಾತೆಯಾದ ಕರ್ನಾಟಕ, ಒಂದು ರಾಜ್ಯವಾಗಿ ಭಾರತದ ಹೆಸರನ್ನು ಗೌರವವನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲಿ ಸಹಜವಾಗಿಯೇ ನನಗೆ ಮ್ಯೂನಿಕ್ ಕಾರ್ಯಕ್ರಮ ಆಕರ್ಷಕವಾಯಿತು.

ಆ ದಿನ ಎಂದಿಗಿಂತ ಹೆಚ್ಚು ಚಳಿ ಮತ್ತು ಹಿಮಪಾತ. ನಾನು ಮತ್ತು ಬ್ರೂಕ್ನರ್  ವೂರ್ಜಬರ್ಗಿನಿಂದ ವೇಗದ ರೈಲು ಹಿಡಿದು ಕಂಪಾರ್ಟ್ಮೆಂಟಿನಲ್ಲಿ ಆರಾಮವಾಗಿ ಕುಳಿತು ಮಾತಾಡಲು ತೊಡಗಿದೊಡನೆಯೇ ಪೇಪರ್ ಓದುತ್ತಿದ್ದ ಮುದುಕನೊಬ್ಬ ‘ಇದು ಮೌನವಾಗಿರಬೇಕಾದ ಕಂಪಾರ್ಟ್ ಮೆಂಟ್. ಮೊಬೈಲ್ ಮಾತ್ರವಲ್ಲ, ಮನುಷ್ಯರೂ ಮಾತಾಡಬಾರದು’ ಎಂದ. ನಮಗಂತೂ ಅವನ ಮೇಲೆ ಅಸಾಧ್ಯ ಸಿಟ್ಟು. ಆದರೆ ಏನೂ ಮಾಡುವ ಹಾಗಿಲ್ಲ. ಭಾರತ ಗಣರಾಜ್ಯದ ದಿನ ನಮಗಿಬ್ಬರಿಗೂ ಪ್ರಜಾಪ್ರಭುತ್ವದ ಒಂದು ತತ್ವದ ಆಚರಣೆಯ ಕಷ್ಟ ಅರ್ಥವಾಯಿತು.

ವೂರ್ಜಬರ್ಗಿನಿಂದ ಮ್ಯೂನಿಕ್ ಗೆ ನಾವು ಕುಳಿತಿದ್ದ ವೇಗದ ರೈಲಿನಲ್ಲಿ ಎರಡು ಗಂಟೆಯ ಪ್ರಯಾಣ. ಹೊರಗೆ ನೋಡಿದರೆ ಎಲ್ಲೆಲ್ಲೂ ಹಾಲು ಸುರಿದ, ಬೆಣ್ಣೆ  ಮೆತ್ತಿದ, ಮೊಸರು ಚೆಲ್ಲಿದ  ಹಿಮಸಾಗರ. ಒಳಗೆ ನಮ್ಮನ್ನು ಸದಾ ಕಾಯುತ್ತಿರುವ ಗಣರಾಜ್ಯದ  ‘ಗಣಧರ.’  ನಾವಿಬ್ಬರೂ ಬವೇರಿಯ ಮತ್ತು ಕರ್ನಾಟಕ ರಾಜ್ಯಗಳ  ಸಂಬಂಧದ ದಾಖಲೆ ಕಾಗದಗಳನ್ನು ಓದಲು ಸುರುಮಾಡಿದೆವು.

ಜರ್ಮನಿಯೂ ಭಾರತದಂತೆ ಒಂದು ಗಣರಾಜ್ಯ. ಬವೇರಿಯವು ಜರ್ಮನಿಯ ದಕ್ಷಿಣಭಾಗದಲ್ಲಿ ಇರುವ ದೊಡ್ಡ  ರಾಜ್ಯ. ಮ್ಯೂನಿಕ್  ಅದರ  ರಾಜಧಾನಿ . ಒಮ್ಮೆ  ಒಲಿಂಪಿಕ್ಸ್ ಹೆಸರಿನಿಂದ ಎಲ್ಲರಿಗೂ ಪರಿಚಿತವಾದ ಈ ನಗರ ಎರಡನೆಯ ಮಹಾಯುದ್ಧದಲ್ಲಿ ಜರ್ಮನಿಯಲ್ಲಿ ಅತಿಕಡಿಮೆ ಹಾನಿಗೊಳಗಾದ ನಗರ.  ಹಾಗಾಗಿ ಈಗಲೂ  ಹಳೆಯ ವೈಭವದ ಕಲಾತ್ಮಕ ಕಟ್ಟಡಗಳು ಹಾಗೆಯೇ ಉಳಿದಿವೆ. ತುಂಬಾ ಶ್ರೀಮಂತ ನಗರವೂ  ಹೌದು. ನಾನು ಈಗ ಇರುವ ವೂರ್ಜಬರ್ಗ್ ನಗರವೂ  ಬವೇರಿಯ ರಾಜ್ಯಕ್ಕೆ ಸೇರಿದೆ. ಇನ್ನೊಂದು ನಗರ ವ್ಯಾಪಾರ ಕೇಂದ್ರ ನ್ಯೂರೆನ್ ಬರ್ಗ್. ಇಂತಹ ಬವೇರಿಯ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಪರಸ್ಪರ ಸಹಯೋಗದ  ಒಡಂಬಡಿಕೆಗೆ ಸಹಿಹಾಕಿದ್ದು  ಎಪ್ರಿಲ್ ೨,೨೦೦೭ರಲ್ಲಿ. ಆಗ ಮುಖ್ಯಮಂತ್ರಿಗಳಾಗಿದ್ದ  ಎಚ್ .ಡಿ. ಕುಮಾರಸ್ವಾಮಿ  ಅವರು ಈ ಒಪ್ಪಂದಕ್ಕೆ  ಸಹಿಹಾಕಿದ್ದಾರೆ. ಜರ್ಮನಿಯ  ಬವೇರಿಯ ರಾಜ್ಯದ ಪರವಾಗಿ ಆಗಿನ ಸಚಿವ ಅಧ್ಯಕ್ಷರಾಗಿದ್ದ ಡಾ. ಎಡ್ಮಂಡ್ ಸ್ತೋಯಿಬರ್ ಸಹಿ ಹಾಕಿದ್ದಾರೆ. ಇದೊಂದು  ಐತಿಹಾಸಿಕ ಘಟನೆ. ಈ ಒಡಂಬಡಿಕೆಯ  ಪ್ರಕಾರ ವಾಣಿಜ್ಯ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ,  ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ತ್ಯಾಜ್ಯ ನಿರ್ವಹಣೆ, ಸಾರಿಗೆ, ಮೂಲಭೂತ  ಸೌಕರ್ಯ, ರಾಸಾಯನಿಕ ಮತ್ತು ಔಷಧೀಯ, ಇಲೆಕ್ಟ್ರೋನಿಕ್ಸ್ , ವೈಮಾನಿಕ ತಂತ್ರಜ್ಞಾನ, ಮಾಧ್ಯಮ, ಪ್ರವಾಸೋದ್ಯಮ -ಇಂತಹ ಕ್ಷೇತ್ರಗಳಲ್ಲಿ  ಪರಸ್ಪರ ಕೊಳುಕೊಡೆಗಳನ್ನು ನಡೆಸುವ ಕುರಿತು ಇಲ್ಲಿ ಉಲ್ಲೇಖಿಸಲಾಗಿದೆ. ಇದಕ್ಕೆ ಅನುಗುಣವಾಗಿ  ಕೆಲವು ತಂಡಗಳು ಪರಸ್ಪರ ರಾಜ್ಯಗಳನ್ನು ಸಂದರ್ಶಿಸಿವೆ.

ಈ ಒಪ್ಪಂದ  ಕಾರ್ಯರೂಪಕ್ಕೆ ಬಂದದ್ದು  ಕರ್ನಾಟಕದ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ. ಇದಕ್ಕಾಗಿಯೇ ಪ್ರತ್ಯೇಕವಾದ  ಕ್ರಿಯಾಯೋಜನೆಯೊಂದನ್ನು ಸಿದ್ದಪಡಿಸಲಾಯಿತು.  ಈ ಕ್ರಿಯಾ ಯೋಜನೆಗೆ ಕರ್ನಾಟಕದ ಪರವಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮತ್ತು ಬವೇರಿಯಾದ ಪರವಾಗಿ ಆ ರಾಜ್ಯದ ಒಕ್ಕೂಟ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳ ಸಚಿವೆ ಎಮಿಲಿಯ ಮುಲ್ಲರ್ ಸಹಿಹಾಕಿದ್ದಾರೆ.ಇದು ಮ್ಯೂನಿಕ್ಕಿನಲ್ಲಿ ಜೂನ್ ೩೦, ೨೦೦೯ರಲ್ಲಿ. ಇದೇ  ಸಚಿವೆ ಮ್ಯೂನಿಕ್ ನ ಭಾರತ , ಗಣರಾಜ್ಯೋತ್ಸವದ  ಮುಖ್ಯ ಅತಿಥಿ. ತುಂಬಾ ಕ್ರಿಯಾಶೀಲ ಮಹಿಳೆ ಬೆಂಗಳೂರಿಗೆ ಸಾಕಷ್ಟು ಬಾರಿ ಹೋಗಿದ್ದಾರೆ ಎಂದು ಬ್ರೂಕ್ನರ್ ಹೇಳಿದರು.

ಆದಿನದ ಗಣರಾಜ್ಯೋತ್ಸವವನ್ನು ಸಂಘಟಿಸಿದ್ದು ಮ್ಯೂನಿಕಿನ ಇಂಡಿಯನ್ ಇನ್ಸ್ಟಿಟ್ಯೂಟ್ ನವರು. ನಾವು ಮ್ಯೂನಿಕ್ ತಲುಪಿ ರೈಲಿನಿಂದ ಇಳಿದು ಹೊರಗೆ ಬಂದಾಗ ಹಿಮದ ಹೊಡೆತ ಇನ್ನಷ್ಟು ಜೋರಾಗಿತ್ತು. ಟ್ಯಾಕ್ಷಿಯೊಳಗೆ ಮೈ ತೂರಿಸಿಕೊಂಡು ಕಾರ್ಯಕ್ರಮ ನಡೆಯುವ  ಸ್ಥಳ ‘ಸ್ಟೇಟ್ ಮ್ಯೂಸಿಯಂ ಆಫ್ ಎತ್ನೋಲೋಜಿ’ ಯನ್ನು ಹುಡುಕಿದಾಗ ಆ ಕಟ್ಟಡದ  ದಾರಿಯಲ್ಲಿ ಹಿಮದ ರಾಶಿ ಬಿದ್ದು  ಕಾರು ಹೋಗುವುದಿಲ್ಲ ಎಂದ ಡ್ರೈವರ್. ಕಾರಿನಿಂದ  ಇಳಿದು ಚಳಿಗೆ ನಡುಗುತ್ತಾ ಹಿಮದ ಮೇಲೆ ಜಾರದಂತೆ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತ  ಮ್ಯೂಸಿಯಂ ಕಟ್ಟಡ ತಲುಪಿದಾಗ ಕೆಲವು  ಮಂದಿ ಜರ್ಮನರು ಕಾಯುತ್ತಿದ್ದರು.ಇಂಡಿಯ ಇನ್ಸ್ಟಿಟ್ಯೂಟ್ ಅಂದಾಗ ಭಾರತೀಯ ಸಂಘ ಇರಬಹುದು ಅಂದುಕೊಂಡಿದ್ದೆ. ಆದರೆ ಭಾರತದ ಬಗೆಗಿನ ಪ್ರೀತಿ ಮತ್ತು  ಗೌರವದಿಂದ  ಮ್ಯೂನಿಕ್ಕಿನ  ಜರ್ಮನರು ಕಟ್ಟಿಕೊಂಡ ಸಂಘಟನೆ ಅದು . ಆಶ್ಚರ್ಯವೆಂದರೆ  ಅಂತಹ ಚಳಿ ಹಿಮದಲ್ಲಿ ನಮ್ಮಲ್ಲಿಯಂತೂ ಬಹಳ ಮಂದಿ  ಖಂಡಿತ ಬರುತ್ತಿರಲಿಲ್ಲ . ಆದರೆ  ಅಲ್ಲಿನ  ಹಾಲ್ ಪೂರ್ತಿ  ತುಂಬಿತ್ತು. ಸುಮಾರು ಇನ್ನೂರು ಮಂದಿ ಬಂದಿದ್ದರು. ಅದರಲ್ಲಿ ಭಾರತೀಯರು ಬೆರಳೆಣಿಕೆಯಷ್ಟು.

ಕಾರ್ಯಕ್ರಮ ಸಂಜೆ ಆರೂಕಾಲಕ್ಕೆ ಆರಂಭ  ಆಯಿತು. ವೇದಿಕೆಯಲ್ಲಿ  ಮೇಲೆ ಒಂದು  ಕುರ್ಚಿಯೂ ಇರಲಿಲ್ಲ. ಅತಿಥಿಗಳೆಲ್ಲರೂ  ಸಭಿಕರೊಂದಿಗೆ ಕೆಳಗೆ. ಕೆಳಗೆ ಒಂದು ಪಕ್ಕದಲ್ಲಿ ಮಾತಾಡಲು  ಧ್ವನಿವ್ಯವಸ್ಥೆ , ಅದೂ ಸ್ಟೇಜಿನಲ್ಲಿ  ಅಲ್ಲ . ಬವೇರಿಯ ರಾಜ್ಯದ ಸಚಿವೆ ಎಮಿಲಿಯ ಮ್ಯುಲ್ಲರ್ ,  ಮ್ಯೂನಿಕಿನಲ್ಲಿ  ಭಾರತದ ಕಾನ್ಸುಲೇಟ್ ಜನರಲ್  ಅನೂಪ್ ಮುದಗಲ್  ಅತಿಥಿಗಳು. ಇವರು  ಕಾರ್ಯಕ್ರಮಕ್ಕೆ ಮೊದಲು ನಿಂತುಕೊಂಡು ಬಂದವರೊಡನೆ  ಮಾತಾಡುತ್ತ  ಇದ್ದರು. ಕಾರ್ಯಕ್ರಮ ಆರಂಭ  ಆದ ಒಡನೆಯೇ ಸಭಿಕರ  ಮುಂದಿನ ಸಾಲಿನಲ್ಲಿ  ಕುಳಿತರು.ಇಂಡಿಯನ್  ಇನ್ಸ್ಟಿಟ್ಯೂಟ್ ನ  ಅಧ್ಯಕ್ಷ  ಹರ್ಬರ್ಟ್ ಕ್ರೋಲ್  ಅವರಿಂದ  ಜರ್ಮನ್ ಭಾಷೆಯಲ್ಲಿ  ಪುಟ್ಟ ಸ್ವಾಗತ ಭಾಷಣ. ಹಾರ ತುರಾಯಿಗಳು ಇಲ್ಲ.  ಸಭೆಯಲ್ಲಿ  ಕುಳಿತ  ಅತಿಥಿಗಳು  ಎದ್ದುನಿಲ್ಲಲೂ  ಇಲ್ಲ .

ಬಳಿಕ  ಒಂದು ಸಂಗೀತ ಕಾರ್ಯಕ್ರಮ. ಸುನಿಲ್ ಬ್ಯಾನರ್ಜಿ ಮತ್ತು  ಪರ್ವೀಜ್ ಅಯಾನ್. ಬ್ಯಾನರ್ಜಿ ವೀಣೆ  ನುಡಿಸಿದರು, ಪರ್ವೀಜ್ ತಬಲಾ ಬಾರಿಸಿದರು. ಅವರು ಜರ್ಮನಿಯಲ್ಲಿ ನೆಲಸಿದವರು. ಬಳಿಕ ಬವೇರಿಯ ಸಚಿವೆ ಎಮಿಲಿಯ ಮ್ಯುಲ್ಲರ್ ಮಾತುಗಳು. ಪೂರ್ತಿ ಜರ್ಮನ್ ಭಾಷೆಯಲ್ಲಿ. ಸುಮಾರು ಹದಿನೈದು  ನಿಮಿಷದ ಅವರ ಭಾಷಣದಲ್ಲಿ  ಇಪ್ಪತ್ತು ಬಾರಿಯಾದರೂ   ಕರ್ನಾಟಕ  ಎನ್ನುವ ಪದ ಬಂದಿತ್ತು.  ಕರ್ನಾಟಕದ  ಜೊತೆಗಿನ ಜರ್ಮನಿಯ  ಬಾಂಧವ್ಯವನ್ನೇ  ಆಕೆ ಭಾರತದ  ಸಂಬಂಧ  ಎನ್ನುವ ಉತ್ಸಾಹದಿಂದ  ಮಾತಾಡಿದರು. ಮ್ಯೂನಿಕಿನಿಂದ   ನೇರವಾಗಿ  ಬೆಂಗಳೂರಿಗೆ  ಲುಫ್ತಾನ್ಸ ವಿಮಾನ ಪ್ರಯಾಣದ ವ್ಯವಸ್ಥೆ  ಮಾಡಿಸುತ್ತೇವೆ ಎಂದರು. ಕರ್ನಾಟಕದಲ್ಲಿ ಅಧ್ಯಯನ ಮಾಡಲು  ಬಯಸುವ  ಜರ್ಮನ್ ವಿದ್ಯಾರ್ಥಿಗಳಿಗೆ ಹೆಚ್ಚಿನ  ಪ್ರೋತ್ಸಾಹ ಕೊಡುತ್ತೇವೆ ಎಂದರು.  ಬವೇರಿಯ ಮುಖ್ಯಮಂತ್ರಿ  ಅವರು  ಕೊಡಮಾಡಿದ ಮೂರು ಸಹಾಯಧನದ ಸರ್ಟಿಫಿಕೆಟುಗಳನ್ನೂ  ನಾಲ್ಕು ಮಂದಿ ವಿಧ್ಯಾರ್ಥಿಗಳಿಗೆ ಪ್ರದಾನಮಾಡಿದರು.  ಅವರೊಂದಿಗೆ  ಫೋಟೋ ತೆಗೆಸಿಕೊಂಡರು.

ಆ   ವಿದ್ಯಾರ್ಥಿಗಳನ್ನು  ಬಳಿಕ ನಾನೂ ಮಾತಾಡಿಸಿದೆ .  ಮಾರ್ಕ್ ಕೊಯ್ಶ್ ನಿಕ್  ಮತ್ತು  ಯಾನ್ ಶಿಕೊರಾ – ಈ ಇಬ್ಬರು ಹುಡುಗರು ಅರ್ಥಶಾಸ್ತ್ರ ಮತ್ತು ಸಮಾಜಶಾಷ್ಟ್ರ ಓದಿದವರು. ಈ ವಿಷಯಗಳಲ್ಲಿ  ಹೆಚ್ಚಿನ ಅಧ್ಯಯನಕ್ಕೆ ಬೆಂಗಳೂರಿಗೆ ಹೋಗುತ್ತಿದ್ದಾರೆ. ಕರ್ನಾಟಕಕ್ಕೇ  ಸಂಬಂಧಿಸಿದ ಯಾವುದಾದರೂ ವಿಷಯದ ಬಗ್ಗೆ ಪಿಎಚ್.ಡಿ.   ಮಾಡುವ ಇಚ್ಚೆಯನ್ನು ನಾನು ಮಾತನಾಡುವಾಗ ಅವರು ಪ್ರಕಟಿಸಿದರು.  ಹೋಲ್ಡರ್ ವಾಕ್ನರ್ ಎಂಬ ಹುಡುಗ  ಅಪ್ಲೈಡ್ ಇನ್ಫಾರ್ಮೆಟಿಕ್ಸ್  ಓದಿದವನು.  ಬೆಂಗಳೂರಿನಲ್ಲಿ ಆ ವಿಷಯದಲ್ಲಿ  ಇನ್ನಷ್ಟು ಅಧ್ಯಯನ ನಡೆಸಲು ಬಯಸಿದ್ದಾನೆ. ಬಾರ್ಬರಾ ಗಬೈಲಿ ಎನ್ನುವ ಹುಡುಗಿ ಹೆಚ್ಚು ಮಾತಿಗೆ ಸಿಕ್ಕಿದಳು. ಅವಳು ಕಲೆಗಳ ಅಧ್ಯಯನ ಮಾಡಿದವಳು.  ಶಿಲ್ಪದಲ್ಲಿ  ಕೆಲಸಮಾಡಲು ಅವಳಿಗೆ ಆಸಕ್ತಿ . ಅವಳು ಕಾವಾ, ಮೈಸೂರಿಗೆ  ಹೋಗುತ್ತಿದ್ದಾಳೆ.

ಕಾರ್ಯಕ್ರಮದಲ್ಲಿ ಭಾರತೀಯ ಕಾನ್ಸುಲೇಟ್ ಜನರಲ್ ಅನೂಪ್ ಮುದಗಲ್ ಅವರ ಭಾಷಣ  ಇಂಗ್ಲಿಷಿನಲ್ಲಿ .  ಸಹಜವಾಗಿ  ಚೆನ್ನಾಗಿ  ಮಾತಾಡಿದರು. ಭಾವಾವೇಶ ಇಲ್ಲದೆ ಭಾರತದ ಬಗ್ಗೆ, ಭಾರತೀಯರ ಬಗ್ಗೆ   ಗೌರವ ಬರುವಂತೆ,  ಭಾರತದ ರೆಪಬ್ಲಿಕ್ಕಿನ  ಕಥೆ ಹೇಳಿದರು.  ಭಿನ್ನಭಿನ್ನ  ಸಮುದಾಯಗಳು ಇದ್ದರೂ ಸ್ವಾತಂತ್ಯ  ಸಂಗ್ರಾಮದಿಂದ ಇಂದಿನವರೆಗೆ  ಪ್ರಜಾಪ್ರಭುತ್ವವನ್ನು  ಪೂರ್ಣಪ್ರಮಾಣದಲ್ಲಿ ಉಳಿಸಿಕೊಂಡು  ಬಂದ ಬಗೆಯನ್ನು ವಿವರಿಸಿದರು.  ಬ್ರಿಟಿಷರು  ಎಲ್ಲ ಬಗೆಯ ಭಾರತೀಯರನ್ನು  ಒಂದೇ  ಜೈಲಿನಲ್ಲಿ ಹಾಕಿದ ಕಾರಣ ನಾವೆಲ್ಲಾ  ಒಂದಾಗಲು ಸಾಧ್ಯ  ಆಯಿತು.  ಸ್ವಾತಂತ್ರ್ಯ  ಮತ್ತು  ಪ್ರಜಾಪ್ರಭುತ್ವ  ಎಲ್ಲರಿಗೂ ದೊರೆಯುವಂತೆ ಮಾಡುವ ಭಾರತದ ಪ್ರಯತ್ನಕ್ಕೆ ಜರ್ಮನಿಯಂತಹ ಗಣರಾಜ್ಯಗಳ ದೇಶಗಳು ಕೈ ಜೋಡಿಸುತ್ತಿರುವುದಕ್ಕೆ  ಸಂತಸ  ವ್ಯಕ್ತಪಡಿಸಿದರು. ಕರ್ನಾಟಕಕ್ಕ ಹೋಗುವ ಜರ್ಮನ್ ವಿದ್ಯಾರ್ಥಿಗಳನ್ನು ಅಭಿನಂದಿಸಲು  ಮರೆಯಲಿಲ್ಲ.

ಕೊನೆಯಲ್ಲಿ ಸಾಂದ್ರಾ ಚಟರ್ಜಿಯ ಭರತನಾಟ್ಯ ಪ್ರದರ್ಶನ ತುಂಬಾ ಚೆನ್ನಾಗಿತ್ತು. ದಣಿವಿಲ್ಲದೆ ಪ್ರತಿಯೊಂದು ನೃತ್ಯದ ನಡುವೆ ಜರ್ಮನ್ ಭಾಷೆಯಲ್ಲಿ  ವಿವರಣೆ ಕೊಡುತ್ತ, ಮುಂದಿನ ಕ್ಷಣ ಮತ್ತೆ ಇನ್ನೊಂದು ನೃತ್ಯ  ಆರಂಭಿಸುತ್ತಿದ್ದಳು.

ಬಹು ಸಂಸೃತಿಯ  ಭಾರತೀಯ ಗಣರಾಜ್ಯದಂತೆ ಬಹುಬಗೆಯ ಭಾರತೀಯ ತಿನಿಸುಗಳು ನಮಗಾಗಿ ಕಾದಿವೆ ಎಂದು ಸಂಘಟಕರು ಸಾರಿದರು. ನಾವು ಕೆಳಗೆ ಇಳಿದು ಬರುವಷ್ಟರಲ್ಲಿ ಆಹಾರದ ಸರತಿಯ ಸಾಲು ಉದ್ದವಾಗಿತ್ತು. ನಮಗೆ ಮತ್ತೆ ಒಂಬತ್ತು ಗಂಟೆಗೆ ರೈಲು. ಹಾಗಾಗಿ ತಿಂಡಿಯ ನೆನಪನ್ನು  ಮೆಲುಕುಹಾಕುತ್ತಾ , ಮತ್ತೆ  ಟ್ಯಾಕ್ಷಿ ಹಿಡಿದು, ಮತ್ತೆ ರೈಲು ಹಿಡಿದು ಹೊರಟರೆ ಕಂಪಾರ್ಟ್ಮೆಂಟ್ ಗಳೆಲ್ಲಾ ಖಾಲಿ ಖಾಲಿ.  ಈಗ ಗಟ್ಟಿಯಾಗಿ  ಮಾತಾಡಿದರೆ ನಿರ್ಬಂಧಿಸುವ ಗಣನಾಯಕ ಇಲ್ಲ. ಆದರೆ ಮಾತುಗಳನ್ನು ಕೇಳುವುದು ಆಡುವುದಕ್ಕಿಂತ ಹಿತವೆಂಬ ಸ್ಥಿತಿಯಲ್ಲಿ  ನಾವಿದ್ದೆವು.  ಉತ್ಸಾಹದ  ಸಚಿವೆ ಮ್ಯುಲ್ಲರ್ ಮಾತು, ಒಟ್ಟುಮಾಡುವ ಮುದಗಲ್ ಮಾತು, ಕರ್ನಾಟಕದಲ್ಲಿ ಹೊಸತನ್ನು ಕಲಿಯುವ ಎಳೆಯ ಜರ್ಮನ್ ವಿದ್ಯಾರ್ಥಿಗಳ ಹೊಸ ಕನಸುಗಳ ಮಾತು, ನಿಸ್ವಾರ್ಥವಾಗಿ  ಭಾರತವನ್ನು  ಪ್ರೀತಿಸುವ  ಕರ್ನಾಟಕವನ್ನು ಮೆಚ್ಚುವ ಮ್ಯೂನಿಕ್ಕಿನ  ಇಂಡಿಯ ಇನ್ಸ್ಟಿಟ್ಯೂ ಟಿನ  ಜರ್ಮನರ ಪ್ರೀತಿ ವಿಶ್ವಾಸದ ಮಾತುಗಳು – ಹೀಗೆ ಮಾತುಗಳ  ಗುಂಗಿನಲ್ಲಿ ನಾವು ಮೌನ ತಾಳಿದೆವು.

ಮೌನವಾಗಿಯೇ ನಾನು ಯೋಚಿಸುತ್ತಿದ್ದೆ.  ನನ್ನ ಕರ್ನಾಟಕವೂ ಹೀಗೆ ಕರ್ನಾಟಕದಿಂದ ಜರ್ಮನಿಗೆ ಬರುವ ವಿದ್ಯಾರ್ಥಿಗಳಿಗೆ ಮತ್ತು ಜರ್ಮನಿಯಿಂದ ಕರ್ನಾಟಕಕ್ಕೇ ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಕೆಲಸಗಳನ್ನು ಕೂಡಲೇ ಸುರು ಮಾಡುವುದು ಎಷ್ಟು ಅಗತ್ಯ ಮತ್ತು ಪ್ರಜಾಪ್ರಭುತ್ವವನ್ನು ಜಾಗತಿಕ ಮಟ್ಟದಲ್ಲಿ ತೋರಿಸುವ ಒಳ್ಳೆಯ ಅವಕಾಶ ಬಳಸಿಕೊಳ್ಳುವುದು ಎಷ್ಟು ಅರ್ಥಪೂರ್ಣ ಎಂದು. ಹಾಗೆಯೇ ಈಗ ಬವೇರಿಯ ಮತ್ತು ಕರ್ನಾಟಕದ ನಡುವೆ ಇರುವ ಒಡಂಬಡಿಕೆಗೆ ಕನ್ನಡ ಭಾಷೆ ಸಾಹಿತ್ಯ ಸಮಾಜ ಮತ್ತು ಕಲೆಗಳ ಕ್ಷೇತ್ರಗಳನ್ನು ಕೂಡಲೇ ಸೇರಿಸುವುದರಿಂದ ಜರ್ಮನ್  ಇಂದಾಲಜಿಯನ್ನು ‘ಕನ್ನಡಾಲಜಿ’ ಆಗಿ ಹೇಗೆ ಹೊಸತಾಗಿ ಕಟ್ಟಬಹುದು ಮತ್ತು  ಆ ಮೂಲಕ ಕನ್ನಡವನ್ನು ಜಾಗತಿಕ ಭಾಷೆ ಆಗಿ ಬೆಳೆಸಬಹುದು ಎಂದು.

ವೂರ್ಜಬರ್ಗಿನಲ್ಲಿ ರೈಲಿನಿಂದ  ಇಳಿದಾಗ ಗಂಟೆ ಹನ್ನೊಂದೂವರೆ. ಚಳಿ  ಕೊರೆಯುತ್ತಿತ್ತು.  ನನ್ನ ಕೋಣೆಗೆ ಬಂದು ಮಲಗಿದಾಗ ಕುವೆಂಪು ಕವನ ಅನುರಣಿಸುತ್ತಿತ್ತು: ‘ಜಯ ಹೇ ಕರ್ನಾಟಕ ಮಾತೆ, ಭಾರತ ಜನನಿಯ ತನುಜಾತೆ ‘

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

2 Responses to “ಭಾರತವೆಂದರೆ ಕರ್ನಾಟಕ: ಜರ್ಮನಿಯಲ್ಲಿ ಗಣರಾಜ್ಯೋತ್ಸವ”

RSS Feed for ಬಿ ಎ ವಿವೇಕ ರೈ Comments RSS Feed

ಸರ್, ನಿಮ್ಮ ಲೇಖನದಿಂದ ಜರ್ಮನ್ನರ ಬಗ್ಗೆ ನನ್ನಲ್ಲಿ ಪ್ರೀತಿ ಹೆಚ್ಚಾಗಿದೆ. ತುಂಬಾ ಒಳ್ಳೆಯ ಹಾಗು ಕೂತೂಹಲಕಾರಿಯಾದ ಘಟನೆ. ಇದು ಎಲ್ಲ ದೇಶಗಳಿಗು/ರಾಜ್ಯಗಳಿಗು ಮಾದರಿಯಾಗಬಹುದಂತ ಕಾರ್ಯಕ್ರಮ. ಜರ್ಮನ್ ಜನತೆಗೆ ನಮ್ಮ ಹೃದಯಪೂರ್ವಕ ಅಭಿನಂದನೆಗಳು. ಹೀಗೆ ನಮಗೆ ನಿಮ್ಮ ಅನುಭವವನ್ನು ಹಂಚಿಕೊಳ್ಲಿ. ನಿಮ್ಮ ಹೊಸ ಲೇಖನಕ್ಕಾಗಿ ಕಾಯುತ್ತಿರುತ್ತೇನೆ.

ರಾಜೇಶ್,ನಿಮ್ಮ ವಿಶ್ವಾಸದ ಮಾತಿಗೆ ವಂದನೆಗಳು.ಲೇಖನ ಬರೆಯುತ್ತಿರುತ್ತೇನೆ.
ವಿವೇಕ ರೈ


Where's The Comment Form?

Liked it here?
Why not try sites on the blogroll...

%d bloggers like this: