ಹಿಮದ ನಡುವೆ ಗುಬ್ಬಚ್ಚಿಗಳನ್ನು ಅರಸುತ್ತಾ…

Posted on ಜನವರಿ 28, 2010. Filed under: Uncategorized |


‘ಗುಬ್ಬಚ್ಚಿಗಳು’ ಕನ್ನಡ ಸಿನೆಮಾಕ್ಕೆ ರಾಷ್ಟ್ರ ಪ್ರಶಸ್ತಿ ಬಂದ ಬಳಿಕ, ಹಿಮದ ನಾಡಿನಲ್ಲಿ ಅದರದೇ ಧ್ಯಾನದಲ್ಲಿ ಅರಸುತ್ತಾ ಇದ್ದಾಗ ಮೊದಲು ಕಂಡದ್ದು ಅರುವತ್ತು ವರ್ಷಗಳಿಗೂ ಹಿಂದೆ ನನ್ನ ಹಳ್ಳಿಯ ನನ್ನ ಮುಳಿಹುಲ್ಲಿನ ಮನೆಯಲ್ಲಿ ಗೂಡು ಕಟ್ಟಿ, ಮನೆಯಿಡೀ ಸ್ವತಂತ್ರವಾಗಿ ಓಡಾಡುತ್ತಾ ಹಾರಾಡುತ್ತಾ ಇದ್ದ ಗುಬ್ಬಿಗಳನ್ನು. ನಾವು ತುಳುವಿನಲ್ಲಿ ಮತ್ತೆ ಕನ್ನಡದಲ್ಲಿ ‘ಗುಬ್ಬಿಗಳು’ ಅನ್ನುತ್ತಿದ್ದ ಹಕ್ಕಿಗಳು, ಶಾಲೆಯಲ್ಲಿ ಪುಸ್ತಕಗಳಲ್ಲಿ ‘ಗುಬ್ಬಚ್ಚಿಗಳು’ ಆಗಿ ಸಿಕ್ಕಿದವು.

ಚಿಕ್ಕ ಚಿಕ್ಕ ಭತ್ತದ ಗದ್ದೆಗಳ ಪಕ್ಕದಲ್ಲಿ ನಮ್ಮ ಮನೆ, ಗುಬ್ಬಿಗಳ ಮನೆಯೂ ಆಗಿತ್ತು. ಆದರೂ ಅವಕ್ಕೂ ಸ್ವತಂತ್ರ, ಖಾಸಗಿ ಬದುಕು ಇತ್ತು. ಬಹುಶ ಅದು ಸ್ವಾಭಿಮಾನವೂ ಆಗಿರಬೇಕು. ಹಾಗಾಗಿ ಆ ಗುಬ್ಬಿಗಳು ನಮ್ಮ ಮನೆಯ ಮಾಡಿನ ಒಳಭಾಗದಲ್ಲಿ, ಮರದ ಕಂಬದ ಮೇಲ್ಭಾಗದ  ಸಂದಿಯಲ್ಲಿ ಕಡ್ಡಿಗಳಿಂದ ತಮ್ಮ ‘ಮನೆ’ ಕಟ್ಟಿಕೊಂಡಿದ್ದವು. ನಾವು ಗುಬ್ಬಿಗಳ ಮನೆಯನ್ನು ‘ಗೂಡು’ಎಂದು ಕರೆಯುತ್ತಿದ್ದೆವು. ಅವು ನಮ್ಮ ಮನೆಯನ್ನು ಏನು ಅನ್ನುತ್ತಿದ್ದವು  ಗೊತ್ತಿಲ್ಲ. ವಾಸದ ನೆಲೆಗಳನ್ನು, ನಮ್ಮ ನಮ್ಮ ಭಾವನೆ ಅಂತಸ್ತುಗಳಿಗೆ ಅನುಸಾರವಾಗಿ, ಬೇರೆ ಬೇರೆ ಪದಗಳನ್ನು ಸೃಷ್ಟಿಸಿ, ಅಂತರಗಳನ್ನು ನಿರ್ಮಿಸುತ್ತೇವೆ. ಹಟ್ಟಿ, ಕೊಟ್ಟಿಗೆ, ಗುಡಿಸಲು, ಮನೆ, ಬಂಗಲೆ, ಸೌಧ, ಅರಮನೆ, ಅಪಾರ್ಟ್ ಮೆಂಟ್, ನಿವಾಸ, ಹೋಟೆಲ್ , ಹಾಸ್ಟೆಲ್, ಕಾಂಪ್ಲೆಕ್ಸ್, ಆಶ್ರಮ, ಮಠ, ಧಾಮ …ಹೀಗೆ ಶಬ್ದಗಳ ನಿರ್ಮಾಣದ ಹಿಂದೆ ಸಣ್ಣ ದೊಡ್ಡ, ಸಾಮಾನ್ಯ ಅಸಾಮಾನ್ಯಗಳ ಪೂರ್ವ ಗ್ರಹಿಕೆಗಳು ಕೆಲಸ ಮಾಡುತ್ತವೆ.

ಚಿತ್ರ: ಪ್ರಸನ್ನ ಕಾಕುಂಜೆ

ನಾವು ಹುಡುಗರಾಗಿದ್ದಾಗ ಗುಬ್ಬಿಗಳನ್ನು ‘ಅಂಗಡಿ ಹಕ್ಕಿ’ ಎಂದೂ ಕರೆಯುತ್ತಿದ್ದೆವು. ಆ ಕಾಲಕ್ಕೆ ನನ್ನ ಹಳ್ಳಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚಾದಲ್ಲಿ ಇದ್ದದ್ದು ಒಂದೇ ಅಂಗಡಿ. ಅದು ಊರಿನ ಕೇಂದ್ರ ಎಂದು ಹೇಳುತ್ತಿದ್ದ ಪರಿಯಾಲ್ತಡ್ಕದಲ್ಲಿ ಇತ್ತು. ಅದು ಪರಿಯ ಬ್ಯಾರಿ ಅವರದ್ದು. ಅವರ ಮಕ್ಕಳು ಅಲ್ಲಿ ಇರುತ್ತಿದ್ದರು. ಮುಂದೆ ಉಲ್ಲಾಳ ಶಾಸಕರಾಗಿದ್ದ ಯು.ಟಿ.ಫರೀದರ ರ ತಂದೆಯವರದ್ದು. ನಮಗೆ ಜೀನಸು ಸಾಮಗ್ರಿಯಿಂದ ತೊಡಗಿ ಅಂಗಿ ಚಡ್ಡಿಯ ಬಟ್ಟೆ ಎಲ್ಲ ಅಲ್ಲಿಂದಲೇ. ಆ ಅಂಗಡಿಯಲ್ಲಿ ತುಂಬಾ ಗುಬ್ಬಿಗಳು ಇರುತ್ತಿದ್ದವು. ಅಕ್ಕಿ ಧಾನ್ಯಗಳ ಗೋಣಿಗಳ ಸುತ್ತ ಹಾರಾಡುತ್ತಾ ಕಾಳು  ಹೆಕ್ಕುತ್ತ, ಗುಂಪಾಗಿ ಅವು ಸದ್ದು ಗದ್ದಲ ಮಾಡುತ್ತಿದ್ದರೆ, ಅಂಗಡಿಯವರು ಅದನ್ನು ಓಡಿಸುತ್ತಿರಲಿಲ್ಲ. ಅವು ಅವರ ಅಂಗಡಿಯ ಗಿರಾಕಿಗಳ ಹಾಗೆ ಕಾಣದೆ ಮನೆಯವರಂತೆ ಸ್ವಚಂದವಾಗಿ ಇರುತ್ತಿದ್ದುವು.

ನಾವು ಹುಡುಗರಾಗಿದ್ದಾಗ ಅಮ್ಮ ಹೇಳುತ್ತಿದ್ದ ಕತೆಗಳಲ್ಲಿ ‘ಗುಬ್ಬಚ್ಚಿ-ಕಾಗೆ’ಯ ಕತೆ ಈಗಲೂ ನೆನಪಿನಲ್ಲಿ ಉಳಿದಿರುವುದು:

‘ಒಂದು ದಿನ ಜೋರು ಮಳೆ. ಗುಡುಗು ಸಿಡಿಲು ಬಿರುಗಾಳಿ. ಹನಿಕಡಿಯದೆ ಮಳೆ ಸುರಿಯುತ್ತಿದೆ. ಕಾಗೆಯೊಂದು ಪೂರ್ಣ ಒದ್ದೆಯಾಗಿ , ಗುಬ್ಬಚ್ಚಿಯ ಮನೆಗೆ ಬಂದು ಬಾಗಿಲು ತಟ್ಟುತ್ತದೆ.’ಗುಬ್ಬಕ್ಕಾ ಗುಬ್ಬಕ್ಕ ,ಬಾಗಿಲು ತೆಗಿ.’ ತಾಯಿ ಗುಬ್ಬಿ ಹೇಳುತ್ತದೆ ‘ನಾನು ಮಕ್ಕಳಿಗೆ ಸ್ನಾನ  ಮಾಡಿಸುತ್ತಿದ್ದೇನೆ’. ಮತ್ತೆ ಕಾಗೆ ಬಾಗಿಲು ಬಡಿಯುವುದು.’ನಾನು ಹಾಲು ಕುದಿಸುತ್ತೇನೆ. ನಾನು ಮಕ್ಕಳನ್ನು ಮಲಗಿಸುತ್ತೇನೆ’ ಇತ್ಯಾದಿ. ಕೊನೆಗೆ ಗುಬ್ಬಚ್ಚಿ ಬಾಗಿಲು ತೆರೆಯುವುದು. ಚಳಿಗೆ ನಡುಗುತ್ತಾ ಒದ್ದೆಯಾದ ಕಾಗೆಗೆ ಮಲಗಲು ಗುಬ್ಬಚ್ಚಿ ಹೇಳುವುದು. ಎಲ್ಲಿ ಮಲಗಲು ಹೇಳಿದರೂ ಏನೋ ಒಂದು ಕಾರಣ ಹೇಳಿ,ಕಾಗೆ ತಪ್ಪಿಸಿಕೊಳ್ಳುವುದು. ಕೊನೆಗೆ ಗುಬ್ಬಚ್ಚಿಯ ಮರಿಗಳ ತೊಟ್ಟಿಲಲ್ಲಿ ಮಲಗುವುದು.ರಾತ್ರಿ ಕಾಗೆ ಒಂದು ಗುಬ್ಬಚ್ಚಿಮರಿಯನ್ನು ತಿನ್ನುವುದು. ‘ಕಟುಂ ಕುಟುಂ.’ ಗುಬ್ಬಚ್ಚಿ ಕೇಳಿದಾಗಲೆಲ್ಲ ಕಾಗೆ ಒಂದು ಸುಳ್ಳು ಹೇಳುವುದು. ‘ನನ್ನ ಅಜ್ಜಿ ಮನೆಯಿಂದ ತಂದ ಚಕ್ಕುಲಿ ತಿಂದೆ ‘ಇತ್ಯಾದಿ. ಬೆಳಗ್ಗೆ ಆಗುವಾಗ ಎಲ್ಲಾ ಗುಬ್ಬಚ್ಚಿಮರಿಗಳನ್ನು ತಿಂದ ಕಾಗೆ ಹಾರಿಹೋಗಿರುತ್ತದೆ. ತಾಯಿ ಗುಬ್ಬಚ್ಚಿ ಉಪಾಯ ಮಾಡಿ, ‘ಬೆಣ್ಣೆ ಮುದ್ದೆ ಯಾರಿಗೆ ಬೇಕು’ ಎಂದು ಹೇಳುತ್ತಾ , ಅದೇ ಕಾಗೆಯನ್ನು ಆಕರ್ಷಿಸಿ, ಅದರ ಬಾಯಿಗೆ ಬೆಂಕಿಯಿಂದ ಕಬ್ಬಿಣದ ಶಲಾಕೆಯನ್ನು ಇಡುವುದು. ಆಗ ಕಾಗೆ ವಾಂತಿ ಮಾಡುವುದು . ಗುಬ್ಬಚ್ಚಿಮರಿಗಳು ಮತ್ತೆ ಜೀವಂತವಾಗಿ ಹೊರಗೆಬರುವುದು. ತಾಯಿ ಗುಬ್ಬಚ್ಚಿ ಮತ್ತು ಮರಿಗಳು ಸುಖವಾಗಿ ಇರುವುದು.

ಈ ಕಥೆಯನ್ನು ನಾವು ಮಕ್ಕಳಾಗಿದ್ದಾಗ ಇಷ್ಟಪಟ್ಟದ್ದು ಕಥೆಯ ನಾಟಕೀಯತೆ, ತಾಯಿ ಗುಬ್ಬಚ್ಚಿಯ ಪರೋಪಕಾರ ಬುದ್ಧಿ ಮತ್ತು ಬುದ್ದಿವಂತಿಕೆ, ಕುತಂತ್ರ ಕಾಗೆಗೆ ತಕ್ಕ ಶಿಕ್ಷೆ ಆದದ್ದು. ಕಾಗೆಯ ಬಾಯಿಗೆ ಬೆಂಕಿಯ ಉಂಡೆ ಇಟ್ಟಾಗ ಅದಕ್ಕೆ ಆದ ಶಾಸ್ತಿಗೆ ನಾವು ತುಂಬಾ ಖುಷಿ ಪಟ್ಟಿದ್ದೆವು.

ಈಗ ಗುಬ್ಬಚ್ಚಿಗಳೂ ಇಲ್ಲ ,ಅದರ ಕತೆಗಳೂ ಇಲ್ಲ. ನನ್ನಊರಿನ ಹಳ್ಳಿಗಳಲ್ಲಿ ಭತ್ತದ ಗದ್ದೆಗಳ ಬದಲು ಅಡಿಕೆ ತೋಟಗಳು ಬಂದಾಗ, ಗುಬ್ಬಚ್ಚಿಗಳಿಗೆ ಭತ್ತ ದೊರೆಯಲಿಲ್ಲ. ಅಡಿಕೆ ತಿನ್ನಲು ಆಗಲಿಲ್ಲ. ನಮ್ಮ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗುಗಳಲ್ಲಿ ಮಿಲ್ಲಿನ ಅಕ್ಕಿ ಬಂದಾಗ, ಗುಬ್ಬಚ್ಚಿಗಳಿಗೆ ಕುಕ್ಕಲು ಹೆಕ್ಕಲು ಏನೂ ಸಿಗಲಿಲ್ಲ. ನಮ್ಮ ಹೊಲಗಳಲ್ಲಿ ಧಾನ್ಯಗಳನ್ನು ಬೆಳೆಯುವುದು ನಿಂತುಹೋಗಿ, ಸೂಪರ್ ಮಾರ್ಕೆಟ್ಟಿನ ಬಯೋಧಾನ್ಯಗಳ ಜಗತ್ತಿನಲ್ಲಿ ಮನುಷ್ಯರಿಗೆ ಜಾಗ ಇಲ್ಲದ ಮೇಲೆ, ಹಕ್ಕಿಗಳೆಲ್ಲಿಂದ ಬರಬೇಕು. ಈಗ ‘ಆಧುನಿಕ ಕಾಗೆಗಳು’ ಬಂದು, ಉಪಾಯದಿಂದ ನಮ್ಮ ಗುಬ್ಬಚ್ಚಿಯ ಮರಿಗಳನ್ನು ‘ಕಟುಂ ಕುಟುಮ್ ‘ಎಂದು ನುಂಗಿಹಾಕಿವೆ. ಅದರ ಬಾಯಿಗೆ ಬೆಂಕಿಯ ಉಂಡೆ ಇಡುವ ತಾಯಿಗುಬ್ಬಿಗಳು ಕಾಣೆಯಾಗಿವೆ.

ನಾವು ಹೊಲಗಳನ್ನು ಮಾರಿದ್ದೇವೆ, ಅಂಗಡಿಗಳನ್ನು ಮಾರಿದ್ದೇವೆ. ಕೊಂಡವರು ಬಿಟ್ಟಿಕಾಳು ತಿನ್ನುವ ಹಕ್ಕಿಗಳನ್ನು ತಮ್ಮ ಜಗತ್ತಿನಿಂದ ಹೊರಗಟ್ಟಿದ್ದಾರೆ. ಹಾಗೆ ಬೇಕಾದರೆ ವೆಬ್ ಸೈಟಿನಲ್ಲಿ ಎಲ್ಲ ಸಿಗುತ್ತದಲ್ಲ!

‘ಕಾಗೆ ಗುಬ್ಬಚ್ಚಿ’ಕತೆ ಜಗತ್ತಿನಾದ್ಯಂತ ದೊರೆಯುತ್ತದೆ. ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಪಾಠಗಳು  ಸಂಗ್ರಹವಾಗಿವೆ. ಜಗತ್ತಿನ ಜನಪದ ಕತೆಗಳ ಮಾದರಿಗಳನ್ನು ವ್ಯಾಪಕವಾಗಿ ಸಂಗ್ರಹಿಸಿ ರಚನೆಯಾದ ಸೂಚಿ ‘ಆರ್ನೆ-ಥಾಮ್ಸನ್ ಟೇಲ್ ಟೈಪ್ ಇಂಡೆಕ್ಸ್ ‘. ಇದರಲ್ಲಿ ಟೈಪ್ ೩೩೩ -ಕಾಗೆ -ಗುಬ್ಬಚ್ಚಿ ಕಥೆ. ಕನ್ನಡಿಗ ಮತ್ತು ಅಂತಾರಾಷ್ಟ್ರೀಯ ಜಾನಪದ ವಿದ್ವಾಂಸ ಎ.ಕೆ.ರಾಮಾನುಜನ್ ಈ ಕಥೆಯ ಕುರಿತು ಅಧ್ಯಯನ ಮಾಡಿ, ಲೇಖನ ಬರೆದಿದ್ದಾರೆ. ಈ ಕತೆಯ ಪಾಠದ  ಕೊನೆಯಲ್ಲಿ, ತಾಯಿ ಗುಬ್ಬಚ್ಚಿಯು ಕಾದ ಕಬ್ಬಿಣದ ಶಲಾಕೆಯನ್ನು ಕಾಗೆಯ ತಿಕಕ್ಕೆ ಇಡುತ್ತದೆ, ಅದು ಸುಟ್ಟುಹೋಗುತ್ತದೆ. ರಾಮಾನುಜನ್ ಈ ಕತೆಗೆ ಒಂದು ಸಾಂಸ್ಕೃತಿಕ ವ್ಯಾಖ್ಯಾನ ಕೊಡುತ್ತಾರೆ. ಹಿರಿಯರು ಮಕ್ಕಳಿಗೆ ಹೊಲಸು ಮತ್ತು ನೈರ್ಮಲ್ಯದ ಬಗ್ಗೆ ಕಲಿಸುವುದಕ್ಕೆ ಈ ಕತೆಯನ್ನು ಹೇಳುತ್ತಾರೆ; ಕಾಗೆ ಹೊಲಸನ್ನು ಪ್ರತಿನಿಧಿಸುತ್ತದೆ, ಗುಬ್ಬಚ್ಚಿ ನೈರ್ಮಲ್ಯವನ್ನು. ಮಕ್ಕಳಿಗೆ ಪಾಯಿಖಾನೆಯ (ಟಾಯಿಲೆಟ್ )ತರಬೇತಿ ಕೊಡುವ ಒಂದು ವಿಧಾನ ಎನ್ನುವುದು ರಾಮಾನುಜನ್ ವಿವರಣೆ.

ಅಂತಾರಾಷ್ಟ್ರೀಯ ಜಾನಪದ ವಿದ್ವಾಂಸ, ಅಮೇರಿಕಾದ ಅಲನ್ ದಂಡಸ್ ಈ ರೀತಿಯ ಅನೇಕ ಕತೆಗಳನ್ನು ಅಧ್ಯಯನ ನಡೆಸಿ, ಹೊಸ ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ. ಮನೋವಿಜ್ಞಾನದ ಫ್ರಾಯಿಡ್ ನ ತತ್ವಗಳ ನೆಲೆಯಲ್ಲಿ  ಮತ್ತು ಸಾಮಾಜಿಕ ನೆಲೆಯಲ್ಲಿ ನೋಡಿದ್ದಾರೆ. ಭಾರತದ ಈ ಮಾದರಿಯ ಜನಪದ ಕತೆಯನ್ನು ಮೊದಲು ಸಂಗ್ರಹಮಾಡಿ ಪ್ರಕಟಿಸಿದವರು, ಮೇರಿ ಫ್ರೆರೆ : ‘ಓಲ್ಡ್ ಡೆಕ್ಕನ್ ಡೆಯ್ಸ್’. (೧೮೬೮). ಅಲನ್ ದಂಡಸ್ ಅವರ ಪ್ರಕಾರ ಈ ಕತೆ ಭಾರತದ ಜಾತಿ ವ್ಯವಸ್ಥೆಯನ್ನು ಹೇಳುತ್ತದೆ. ಕಾಗೆಯನ್ನು ಅಸ್ಪೃಶ್ಯತೆಯ  ಪ್ರತಿನಿಧಿ ಎಂದೂ, ಅಶುದ್ದ ಎನ್ನುವ ಕಾರಣಕ್ಕೆ ಇಲ್ಲಿ ಕಾಗೆ ಶಿಕ್ಷೆಗೆ ಒಳಗಾಗುತ್ತದೆ ಎಂದು ವಾದಿಸುತಾರೆ. ‘ಮನೆಯಿಲ್ಲದ ಕಾಗೆ’ಯ ಪರವಾಗಿ ಸಹಾನುಭೂತಿ ಹೊಂದುವ ರೀತಿಯ ವಿವರಣೆ ಇಲ್ಲಿ ಇದೆ.

ಕನ್ನಡದ ಮಹತ್ವದ ಚಿಂತಕ ಲೇಖಕ ಪಿ. ಲಂಕೇಶರ ‘ಗುಬ್ಬಚ್ಚಿಯ ಗೂಡು’ ಲೇಖನ ನಾನು ತುಂಬಾ ಇಷ್ಟಪಟ್ಟದ್ದು. ತುಂಟ ಪುಟಾಣಿ ಹುಡುಗ ಮತ್ತು ಗುಬ್ಬಚ್ಚಿ ನಡುವಿನ ಸಂವಾದದ ಮೂಲಕವೇ ಲಂಕೇಶ್ ಮನುಷ್ಯನ ನಿರಾಶೆ ಮತ್ತು ಪ್ರಾಣಿ ಪಕ್ಷಿಗಳ ಬಗ್ಗೆ ಮೆಚ್ಚುಗೆಯನ್ನು ಮುಖಾಮುಖಿಯಾಗಿಸುತ್ತಾರೆ. ‘ಪಕ್ಷಿಗಳ ನೆಲೆಯಿಲ್ಲದ ಬದುಕು, ಬಡತನ, ಸ್ವಾತಂತ್ರ್ಯದ ಒಟ್ಟಿಗೆ  ಅವುಗಳ ಸ್ವಾಭಿಮಾನ’ -ಬಹಳ ಮಾರ್ಮಿಕವಾದ ಮಾತು. ನಾವು ಕಳೆದುಕೊಂಡದ್ದು ಗುಬ್ಬಚ್ಚಿಗಳನ್ನು ಮತ್ತು ಸ್ವಾಭಿಮಾನವನ್ನು ಜೊತೆಜೊತೆಯಾಗಿ. ಗುಬ್ಬಚ್ಚಿಗಳು ಮತ್ತು ಕಾವ್ಯವನ್ನು ಲಂಕೇಶ್ ಸಮೀಕರಿಸುತ್ತಾರೆ. ಇದನ್ನು ನಮ್ಮ ಬದುಕಿನ ಯಾವುದೇ ರಂಗಕ್ಕೂ ವಿಷಯಕ್ಕೂ ಅನ್ವಯಿಸಬಹುದು.

ಜರ್ಮನಿಯಲ್ಲಿ ಜನಪದ ಕತೆಗಳ ಮೊದಲ ಸಂಗ್ರಾಹಕರಾದ ಜಾಕಬ್ ಗ್ರಿಮ್ ಮಾತು ವಿಲ್ ಹೆಲ್ಮ್ ಗ್ರಿಮ್ ಅವರ ‘ಮಕ್ಕಳ ಮತ್ತು ಜನಪದ ಕತೆಗಳು’ ಸಂಗ್ರಹದಲ್ಲಿ ‘ಗುಬ್ಬಚ್ಚಿ ಮತ್ತು ಅದರ ನಾಲ್ಕು ಮಕ್ಕಳು’ಎನ್ನುವ ಕತೆ ಇದೆ. (೧೮೫೭). ಒಂದು ಗುಬ್ಬಚ್ಚಿಯ ನಾಲ್ಕು ಮರಿಗಳು ಒಂದು ಬಾರಿ ಜೋರು ಬಿರುಗಾಳಿ ಬೀಸಿದಾಗ, ಚಲ್ಲಾಪಿಲ್ಲಿಯಾಗಿ ಎಲ್ಲೆಲ್ಲೋ ಕಣ್ಮರೆಯಾಗುತ್ತವೆ. ಬಹಳ ಸಮಯದ ಬಳಿಕ, ಮತ್ತೆ ಅವು ನಾಲ್ಕು ಮರಿಗಳೂ ತಂದೆಹಕ್ಕಿಯ ಬಳಿಗೆ ಬಂದು ಸೇರಿಕೊಳ್ಳುತ್ತವೆ. ತಂದೆ ಗುಬ್ಬಚ್ಚಿ ಒಂದೊಂದೇ ಮರಿಯನ್ನು , ‘ನೀನು ಆಹಾರಹೇಗೆ ಪಡೆದಿ, ಹೇಗೆ ಬದುಕಿದಿ, ಮನುಷ್ಯರ ನಡವಳಿಕೆ ಹೇಗಿತ್ತು ‘ ಎಂದು ಕೇಳುತ್ತದೆ. ಒಂದೊಂದು ಮರಿಯೂ ತಾವು ಕಷ್ಟಗಳ ನಡುವೆ ಮನುಷ್ಯರ ಕ್ರೂರತೆಯ ನಡುವೆ  ಕಾಳಿಗಾಗಿ ಪಟ್ಟ ಕಷ್ಟ ಮತ್ತು ಬದುಕಿದ ಸಾಹಸಗಳನ್ನು ಹೇಳುತ್ತವೆ. ನಾಲ್ಕನೆಯ ಕೊನೆಯ ಮರಿ ಒಂದು ಚರ್ಚಿನಲ್ಲಿ ಉಳಿದುಕೊಂಡು, ಅಲ್ಲಿ ಕೇಳಿದ ಸಾಂತ್ವನದ ಆಶಾಭಾವನೆಯ  ಬದುಕಿನ ಬಗ್ಗೆ ಹೇಳುತ್ತದೆ.

ಈ ದಿನ ಇಲ್ಲಿ  ಜರ್ಮನಿಯಲ್ಲಿ ಈಗ ಮೈನಸ್ ಹತ್ತು ಡಿಗ್ರಿ. ಹಿಮದ ರಾಶಿಯ ನಡುವೆ ಇವತ್ತು ನಗರಕ್ಕೆ ಒಂದು ಸುತ್ತು ಬಂದೆ. ಜನ ಎಂದಿನಂತೆ ಕೆಲಸಮಾಡುತ್ತಿದ್ದಾರೆ. ಕಛೇರಿಗಳು, ಅಂಗಡಿಗಳು, ಶಾಲೆಗಳು, ವಿಶ್ವವಿದ್ಯಾಲಯ ಸಹಜವಾಗಿ ಚಟುವಟಿಕೆಯಿಂದ ಇವೆ. ಗುಬ್ಬಚ್ಚಿ ಮಳೆಗೆ ಗೂಡು ಕಟ್ಟಿಕೊಂಡಂತೆ ಇಲ್ಲಿ ಜನ ಹಿಮದ ತೆರೆತೆರೆ ಸ್ಪರ್ಶಕ್ಕೆ ಪುಳಕಿತರಾಗುತ್ತಾರೆ.ನಮ್ಮ ಸ್ವಾತಂತ್ರ್ಯ ನಮ್ಮ ಸ್ವಾಭಿಮಾನ -ಅದೇ ನಮ್ಮ ಮನೆ. ಇದು ಗುಬ್ಬಚ್ಚಿ ನಮಗೆಹೇಳಿಕೊಟ್ಟ  ಕತೆ.

ಆದರೆ ಈ ಎಲ್ಲಾ  ಕತೆ ಹೇಳಿಕೊಳ್ಳೋಣ ಎಂದರೆ, ಇಲ್ಲಿ ಈ ಚಳಿಗೆ ಗುಬ್ಬಚ್ಚಿಗಳೆಲ್ಲ ಇಲ್ಲಿಂದ  ವಲಸೆ ಹೋಗಿವೆ. ನನ್ನ ಊರಿಗಂತೂ ಹೋಗಿರಲಾರವು. ಹೋದರೂ ಅಲ್ಲಿ ಅವಕ್ಕೆ ಕಾಳು ಸಿಗಲಾರದು. ಹಸುರು ಇಲ್ಲದ ಬೆಳೆ ಇಲ್ಲದ ಕಡೆ ಹಾರಲಾರವು ಅವು. ಹಾಗಾಗಿ ನನ್ನ ಊರಿನ ಗುಬ್ಬಚ್ಚಿಯಂತಹ ಮಕ್ಕಳಾದರೂ ಈ ಕತೆ ಕೇಳಲಿ. ಆದರೆ ಒಂದು ಷರತ್ತು ಈ ಕತೆ ಹೇಳಿ ಮುಗಿಯುವ ಮೊದಲು ಯಾರೂ ನಿದ್ರೆ ಮಾಡಬಾರದು . ಹಾಗೆ ಮಾಡಿದರೆ ಈ ಕತೆಗೆ ಕೊನೆ ಇಲ್ಲ.

ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಂದು ಗುಬ್ಬಚ್ಚಿ ಇತ್ತು. ಆ ಊರಿನಲ್ಲಿ ಒಂದು ದೊಡ್ಡ ಭತ್ತದ ರಾಶಿ ಇತ್ತು. ಆ ಗುಬ್ಬಚ್ಚಿ ಆ ಭತ್ತದ ರಾಶಿಯ ಬಳಿಗೆ ಹೋಯಿತು.ಒಂದು ಭತ್ತವನ್ನು ಕೊಕ್ಕಿನಿಂದ ಹೆಕ್ಕಿಕೊಂಡಿತು. ಅದನ್ನು ಹಿಡಿದುಕೊಂಡು ತನ್ನ ಗೂಡಿಗೆ ಹೋಗಿ ಮರಿಗಳಿಗೆ ಕೊಟ್ಟಿತು. ಮತ್ತೆ ಹಾರಿ ಭತ್ತದ ರಾಶಿಯಲ್ಲಿಗೆ ಬಂದಿತು. ಇನ್ನೊಂದು ಭತ್ತದ ಕಾಳನ್ನು ಕೊಕ್ಕಿನಿಂದ ಹೆಕ್ಕಿಕೊಂಡು ಗೂಡಿಗೆ ಬಂದು ಮರಿಗಳಿಗೆ ಕೊಟ್ಟಿತು. ಮತ್ತೆ ಹಾರಿಕೊಂಡು ಭತ್ತದ ರಾಶಿಯಲ್ಲಿಗೆ  ಬಂದಿತು. ಮತ್ತೊಂದು ಭತ್ತದ ಕಾಳನ್ನು ಕೊಕ್ಕಿನಲ್ಲಿ ಹೆಕ್ಕಿಕೊಂಡು ಗೂಡಿಗೆ ಹಾರಿತು. ಮತ್ತೆ ಭತ್ತದ ರಾಶಿಯಲ್ಲಿಗೆ ಬಂಡಿತು. ಒಂದು ಭತ್ತದ ಕಾಳನ್ನು ಹೆಕ್ಕಿಕೊಂಡು ………………

ಒಂದು ಊರಿನಲ್ಲಿ ಒಂದು ಗುಬ್ಬಚ್ಚಿ ಇತ್ತು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

6 Responses to “ಹಿಮದ ನಡುವೆ ಗುಬ್ಬಚ್ಚಿಗಳನ್ನು ಅರಸುತ್ತಾ…”

RSS Feed for ಬಿ ಎ ವಿವೇಕ ರೈ Comments RSS Feed

ಚೆನ್ನಾಗಿದೆ ಗುರುಗಳೆ ಗುಬ್ಬಚ್ಚಿಯ ಕಥೆ. “ಗುಬ್ಬಚ್ಚಿಗಳು” ಚಿತ್ರಕ್ಕೆ ಪ್ರಶಸ್ತಿ ಬಂದಿದ್ದನ್ನು ಓದಿ ನನಗೂ ತುಂಬಾ ಖುಷಿಯಾಯಿತು. ಅಂದ ಹಾಗೆ ನಾನಿರುವುದು ದುಬೈನಲ್ಲಿ, ಉರಿಯುವ ಬಿಸಿಲು ಹಾಗೂ ಕಾಂಕ್ರೀಟ್ ಕಾಡು! ಆದರೆ ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಗುಬ್ಬಚ್ಚಿಗಳಿವೆ. ಅವುಗಳನ್ನು ನೋಡಿದಾಗೆಲ್ಲಾ ನೀವು ಹೇಳಿದ ಅದೇ ಗುಬ್ಬಚ್ಚಿ ಕಥೆ, ಬಾಲ್ಯದಲ್ಲಿ ಅಮ್ಮ ಹೇಳುತ್ತಿದ್ದುದು, ನೆನಪಿಗೆ ಬರುತ್ತದೆ. ನಾವು ಆ ಗುಬ್ಬಚ್ಚಿಗಳ ಜೊತೆ ನಮ್ಮ ಸ್ವಾಭಿಮಾನವನ್ನೂ ಕಳೆದುಕೊಂಡಿದ್ದೇವೆನ್ನುವ ಮಾತು ನಿಜಕ್ಕೂ ಸತ್ಯ.

s i also feel many times like an orphan.with out those birds arround us, shortly we may have to write about trees also like this.Tomoro we may watch a film about seeds and they grow as palnts some of them become trees and the leaves were green and they use to protect the earth from the scorching sun etc etc and our future generation may laugh by watching it…..

ಸರ್,
ಇಲ್ಲಿ ವಿಶೇಷ ಅಂದ್ರೆ … ಗುಬ್ಬಿಗಳು ಹಿಂಡು ಹಿಂಡಾಗಿ ಬಂದು ನಮ್ಮ ಮನೆಯ ಬಾಲ್ಕನಿಗೆ ಕೈಯಳತೆಯಲ್ಲಿರುವ ದೊಡ್ಡ ಸೈಪ್ರಸ್ ಮರದ ಗೆಲ್ಲುಗಳ ಮೇಲೆ ಕುಳಿತುಕೊಳ್ಳುತ್ತವೆ.
ಅವುಗಳ ಆಟ, ಚಿಲಿಪಿಲಿ ಕೇಳೋದೇ ಒಂದು ರೀತಿಯ ಖುಷಿ ಮತ್ತು ಸುಖ. ಗುಬ್ಬಿಗಳ ಜತೆ ಚಿಂವ್ ಚಿಂವ್ ಅಳಿಲುಗಳೂ ಸಹ.

ಮಂಜುನಾಥ್,ನಿಮ್ಮ ಪ್ರೀತಿಯ ಪ್ರತಿಕ್ರಿಯೆಗಾಗಿ ವಂದನೆಗಳು.
ಹೇಮಶ್ರೀ,ನಿಮ್ಮ ಪ್ರತಿಕ್ರಿಯೆ ಓದಿ ಖುಷಿ ಆಯಿತು.ಫೆಸ್ ಬುಕ್ ನಲ್ಲಿ ನಿಮ್ಮ ಮಾಹಿತಿ ಓದುತ್ತಿರುತ್ತೇನೆ.ಥ್ಯಾಂಕ್ಸ್.
ವಿವೇಕ ರೈ
Mr.Manjunath, I agree with you and appreciate your comments. Viveka Rai

saar eega kaagegalu kanmareyaaguttive. kaagakka gubbakka kevala kateyaaguttiveye emba samshaya balavattaravaaguttide. jaagatika taapamaana hechchuttiruvudakku namma kaagakka gubbakka maayavaaguttiruvudakku nera sambandhavideyallave ? aa nittinalli naavu gambheera prayatna maadabekaagide.

ಹೌದು.ಹವಾಮಾನದ ಬದಲಾವಣೆ,ವಿಶಿಷ್ಟ ಆಹಾರಗಳ ಕೊರತೆ,ಸುರಕ್ಷೆಯ ಆತಂಕ,ಪರಿಸರ ಅಶಾಂತಿ-ಹೀಗೆ ಅನೇಕ ಕಾರಣಗಳಿಂದ ನಮ್ಮ ಹಕ್ಕಿಗಳು ಕಣ್ಮರೆಯಾಗುತ್ತಿವೆ.ಹಕ್ಕಿಗಳ ಆವರಣ ಉಳಿಸಿದರೆ ಹಕ್ಕಿಗಳು ಉಳಿಯಬಹುದು.ನಿಮ್ಮ ಕಾಳಜಿ ಗಂಭೀರವಾದುದು.
ವಿವೇಕ ರೈ


Where's The Comment Form?

Liked it here?
Why not try sites on the blogroll...

%d bloggers like this: