ಸೂರ್ಯನಿಗೆ ಕಂಕಣ ಕಟ್ಟಿದವರು ಯಾರು?

Posted on ಜನವರಿ 21, 2010. Filed under: Uncategorized |


ನಾನು ಸೂರ್ಯನನ್ನು ನೋಡದೆ ಐದು ದಿನ ಆಯಿತು. ಇಲ್ಲಿ ಕುಳಿತುಕೊಂಡು ಇಂಟರ್ನೆಟ್ ನೋಡಿದರೆ ಕನ್ನಡ ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಸೂರ್ಯನದ್ದೇ ಸುದ್ದಿ. ‘ಸೂರ್ಯನನ್ನು ಕೆಲವು ಗಂಟೆಗಳ ಕಾಲ ಇವತ್ತು ಹಿಡಿದಿದ್ದಾರಂತೆ, ಅವನಿಗೆ ಕಂಕಣ ತೊಡಿಸಿದ್ದಾರಂತೆ’.  ನನಗೆ ಕುತೂಹಲ ಎಂದರೆ ‘ಸೂರ್ಯನಿಗೆ  ಕಂಕಣ ತೊಡಿಸಿದವರು ಯಾರು ?’ ಎನ್ನುವುದು. ಅವನನ್ನೇ ಕೇಳೋಣವೆಂದರೆ ನಾನು ಈಗ ಇರುವ ವೂರ್ಜಬರ್ಗಿನಲ್ಲಿ ಅವನ ಸುಳಿವೇ ಇಲ್ಲದೆ ದಿನಗಳೇ ಸಂದಿವೆ. ದೀರ್ಘ ರಜೆಯಲ್ಲಿ ಇದ್ದಾನೆ ಎನ್ನುತ್ತಾರೆ. ಮತ್ತೆ ಕೆಲಸಕ್ಕೆ ಬರಲು ಇನ್ನೂ ಮೂರು ತಿಂಗಳು ಆಗಬಹುದು ಎನ್ನುತ್ತಾರೆ. ಅವನು ಇಲ್ಲದೆ ನನಗಂತೂ ಸ್ವಲ್ಪ ಕಷ್ಟ ಆಗಿದೆ. ಆದರೆ ಏನು ಮಾಡುವುದು ಅವನಿಗೂ ವೆಕೇಶನ್ ಬೇಕಲ್ಲ.

‘ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗೆ ಮನವೇ ಬೀಜ ‘ಎನ್ನುತ್ತಾಳೆ ಅಕ್ಕ. ಅವಳದ್ದು ಅನುಭವದ ಮಾತು. ಅದಕ್ಕೆ ಅಕ್ಕ ಎಲ್ಲವನ್ನೂ ಬಿಸಾಕಿ, ಅನುಭಾವಿ ಆದಳು. ನಮಗೆ ಹಾಗೆ ಯಾವುದನ್ನೂ ಬಿಡಲು ಆಗುವುದಿಲ್ಲ. ನಮ್ಮದು ಕಟ್ಟಿಕೊಳ್ಳುವ ಯಾತನೆ. ಸೂರ್ಯ ಕೂಡಾ ನಮ್ಮ ಹಾಗೆಯೇ. ಬದುಕಿನಲ್ಲಿ ಸಾಕಷ್ಟು ಹೆಣಗಾಡಿದ್ದಾನೆ. ಬಿಡುವು ಇಲ್ಲದೆ ನಿರಂತರ ದುಡಿಯುವ ಕಾಯಕ ಯೋಗಿ ಆತ. ತಾನು ಉರಿಯುತ್ತ ಲೋಕಕ್ಕೆ ಬೆಳಕು ಕೊಡುತ್ತಾನೆ. ಕೆಲವೊಮ್ಮೆ ಸ್ವಲ್ಪ ಉರಿ ನಮಗೆ ತಾಗಿದರಂತೂ ನಮ್ಮ ಅಸಹನೆ ಒದ್ದಾಟ ಹೇಳತೀರದು. ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಸೂರ್ಯನ ಕಾವು ತಡೆಯಲಾರದೆ ಬೆಳಗ್ಗೆ ಅರ್ಧ ದಿನ ಮಾತ್ರ ಕೆಲಸ ಮಾಡುತ್ತಾರೆ. ಇದು ಸರಕಾರೀ ಸಂಸ್ಥೆಗಳಿಗೆ ಮಾತ್ರ. ಜನಸಾಮಾನ್ಯರು ಸೂರ್ಯನ ಜೊತೆಗೆ ಸ್ನೇಹ ಸಂಬಂಧ ಬೆಳೆಸಿರುವ ಕಾರಣ ಅವರಿಗೆ ಸೂರ್ಯನ ಕಾವು ತಟ್ಟುವುದಿಲ್ಲ. ನಾನು ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಇರುವಾಗ ಪ್ರತೀದಿನ ಸಂಜೆ ದನಕರು ಮೇಯಿಸುವ ಹೆಣ್ಣುಮಕ್ಕಳು ಹಗಲಿಡೀ ಮೇಯಿಸಿ ಹಿಂದಕ್ಕೆ ಬರುತ್ತಿದ್ದುದನ್ನು ನೋಡುತ್ತಿದ್ದೆ. ಸೂರ್ಯನ ಉಗ್ರತೆ ೪೫ ಡಿಗ್ರಿ ಎನ್ನುತ್ತಿದ್ದರು. ಮೂರು ಬೇಸಗೆಗಳನ್ನು ಹಂಪಿಯಲ್ಲಿ ಕಳೆದ ನನಗೆ ಸೂರ್ಯ ಸ್ನೇಹಿತ ಆಗಿದ್ದ. ಆದರೆ ಈಗ ಮೈನಸ್ ೧೦ ಡಿಗ್ರಿ ಎನ್ನುವ ಇಲ್ಲಿ, ಸೂರ್ಯ ಚಳಿಗೆ ಹೆದರಿ ರಜೆಯಲ್ಲಿ ಇದ್ದಾನೋ ಎನ್ನುವ ಅನುಮಾನ ನನ್ನದು

ಆ ಸೂರ್ಯನಿಗೆ ನನ್ನ ಊರಿನಲ್ಲಿ ಕಂಕಣ ಭಾಗ್ಯ ದೊರೆತದ್ದು ನನಗೆ ತುಂಬಾ ಖುಷಿಯ ಸಂಗತಿ. ಆದರೆ ನನ್ನ ಕುತೂಹಲ ಅವನಿಗೆ ಕಂಕಣ ತೊಡಿಸಿದ್ದು ಯಾರು ಎಂದು. ನನ್ನ ಗುರುಗಳಾಗಿದ್ದ ಎಸ.ವಿ.ಪರಮೇಶ್ವರ ಭಟ್ಟರು ತಮ್ಮ’ ಇಂದ್ರಚಾಪ ‘ ಸಾಂಗತ್ಯ ಕೃತಿಯಲ್ಲಿ ಒಂದು ಹಾಸ್ಯಪ್ರಸಂಗ ಹೇಳುತ್ತಾರೆ. ತರಗತಿಯಲ್ಲಿ ಅಧ್ಯಾಪಕರು ಗದರಿಸಿ ವಿದ್ಯಾರ್ಥಿಗಳಗೆ  ಒಂದು ಪ್ರಶ್ನೆ ಕೇಳಿದರಂತೆ. ‘ಶಿವನ ಧನುಸ್ಸನ್ನು ಮುರಿದವರು ಯಾರು?’ ಎಂದು. ಅವರ ರೌದ್ರದ ಸ್ವರೂಪ ಕಂಡು ಮಕ್ಕಳು ಹೆದರಿಕೊಂಡು ಹೇಳಿದರಂತೆ, ‘ಬಿಲ್ಲು ಮುರಿದದ್ದು ನಾವಲ್ಲ’ ಎಂದು. ‘ಸೂರ್ಯನಿಗೆ ಕಂಕಣ ಕಟ್ಟಿದವರು ಯಾರು’ ಎನ್ನುವುದು ಅಂತಹ ಪ್ರಶ್ನೆ ಆಗಬಾರದು.

ಸೂರ್ಯನ ಹೆಂಡತಿ ಯಾರು ಎನ್ನುವುದು ಒಂದು ದೊಡ್ಡ ಪ್ರಶ್ನೆ. ಯಾಕೆಂದರೆ ನಾವು ಹೇಳುವ ‘ನಮ್ಮ ಸೂರ್ಯ’ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಸೂರ್ಯ ಆಗಿ ಇದ್ದಾನೆ. ಜಗತ್ತಿನ ಅನೇಕ ದೇಶಗಳಲ್ಲಿ ಅವನನ್ನು ‘ದೇವರು’ಎಂದು ಕರೆದದ್ದು ಉಂಟು. ಸೂರ್ಯಪುರಾಣಗಳ ರಾಶಿಯೇ ಇದೆ. ಭಾರತದಲ್ಲಿ ಸೂರ್ಯನ ಹೆಂಡತಿ ‘ಸಂಜನಾ’. ಅವಳು ವಿಶ್ವಕರ್ಮನ ಮಗಳು. ಸೂರ್ಯ ಮತ್ತು ಸಂಜನಾರಲ್ಲಿ ಹುಟ್ಟಿದ ಮಕ್ಕಳೇ ಮನು, ಯಮ ಮತ್ತು ಯಮಿ . ಅಣ್ಣ ತಂಗಿ ಆದ ಯಮ ಮತ್ತು ಯಮಿ ಪರಸ್ಪರ ಆಕರ್ಷಣೆಗೊಂಡು ಮದುವೆ ಆಗಲು ಬಯಸಿದ ಸೂತ್ರ ಒಂದು ಇದೆ. ಸಂಜನಾ  ತನ್ನ ಬದಲಿಗೆ  ಸೂರ್ಯನ  ಬಳಿಗೆ ಛಾಯಳನ್ನು  ಕಳಿಸಿದ ಒಂದು ಪ್ರಸಂಗ ಕೂಡ ಇದೆ. ಅವಳು ಸೂರ್ಯನ ಉರಿಗೆ ಹೆದರಿ  ಹಾಗೆ  ಮಾಡಿದಳು ಎನ್ನಲಾಗಿದೆ..ಇರಬಹುದು, ಆದರೆ ಛಾಯ ಕೂಡ ಹೆಣ್ಣಲ್ಲವೇ? ಕಂಕಣ ಕಟ್ಟಿದವಳು ಹಾಗೆ ಕೈಬಿಟ್ಟರೆ, ಪಾಪ ಆತನ ಗತಿಯೇನು? ಸೂರ್ಯನಿಗೆ ಛಾಯಾಳಲ್ಲಿ ಹುಟ್ಟಿದ ಮಗ ಶನಿಯಂತೆ. ಪಾಪ, ಈ ಮಗನನ್ನೂ ಜನ ಹೆದರಿ ದೂರ ಮಾಡಿದರು. ಈಗ ಶನಿಗೂ ಉಂಗುರ ದೊರೆತಿದೆಯಂತೆ. ಇರಲಿ ಬಿಡಿ, ಉಂಗುರ ಧರಿಸುವ ಶ್ರೀಮಂತಿಕೆ ಶನಿಗೂ ಬರಲಿ.

ಫಿಲಿಪೈನ್ಸ್ ದ್ವೀಪದ ಬೆನ್ಗುಎತ್ ಸಮುದಾಯದಲ್ಲಿ ಸೂರ್ಯನ ಹೆಂಡತಿ ಮತ್ತು ಬೆನ್ಗುಎತ್ ಪರ್ವತವಾಸಿಗಳ ಐತಿಹ್ಯಗಳ ಕುರಿತು ಅಧ್ಯಯನ ನಡೆಸಿ ಗ್ರಂಥಗಳನ್ನು ರಚಿಸಲಾಗಿದೆ.  ಪ್ರಾಚೀನ ಈಜಿಪ್ಟಿನಲ್ಲಿ ಸೂರ್ಯದೇವನ ಹೆಂಡತಿ ಯಾರು ಎನ್ನುವುದೇ ಮಹತ್ವದ ಪ್ರಶ್ನೆ. ಅಲ್ಲಿ ಸೂರ್ಯನನ್ನು ‘ರಾ’ಎಂದು ಕರೆಯುತ್ತಾರೆ. ಹ್ಯಾತ್ಹರ್ ಕೆಲವೊಮ್ಮೆ ಆತನ ತಾಯಿ, ಮಗಳು ಮತ್ತು ಹೆಂಡತಿ. ಈಜಿಪ್ಟಿನ  ಪುರಾಣಗಳಲ್ಲಿ ‘ಸೂರ್ಯನ ಚಕ್ರ’ವನ್ನು ‘ಆಟೆನ್’ ದೇವತೆ ಎಂದು ಕರೆಯುತ್ತಾರೆ.  ಈ ಚಕ್ರವೇ ‘ಕಂಕಣ’. ಈಜಿಪ್ತಿನ  ‘ರಾ’ ಮತ್ತು ಜಪಾನಿನ ಪುರಾಣಗಳಲ್ಲಿ ‘ಕಳೆದುಹೋದ ಸೂರ್ಯ’ನ ಅನೇಕ ಕತೆಗಳಿವೆ. ಅಂದರೆ ಸೂರ್ಯನೂ ಕಳೆದುಹೋಗುತ್ತಾನೆ ಎಂದಾಯಿತು. ಆಗ ಅವನು ಎಲ್ಲಿಗೆ ಹೋಗುತ್ತಾನೆ ಎನ್ನುವುದು ರಹಸ್ಯ. ಮಹಾಭಾರತದಲ್ಲಿ ಕನ್ಯೆ ಕುಂತಿಯು ದೂರ್ವಾಸರ ವರವನ್ನು ಪರೀಕ್ಷಿಸಲು ಆಹ್ವಾನಿಸಿದ್ದು ಸೂರ್ಯನನ್ನು. ಅವನ ಹೊಳಪು ಕುಂತಿಯನ್ನು ಆಕರ್ಷಿಸಿತು. ಕಂಕಣ ಕಟ್ಟದೆಯೇ, ಕುಂತಿಗೆ ಸೂರ್ಯನಿಂದ ಒಬ್ಬ ಮಗ ದೊರೆತ. ಸೂರ್ಯ ವರದನಾಗಿ, ಮತ್ತೆ ಅಲ್ಲಿ ನಿಲ್ಲದೆ ಮರೆಯಾದ. ಹೀಗೆ ಮರೆಯಾಗುವುದು ಸೂರ್ಯನಿಗೆ ಹೊಸತೇನೂ ಅಲ್ಲ. ಮೊನ್ನೆ ಅವನು ಕೆಲವು ಕಾಲ ಮರೆಯಾದದ್ದೂ ಹಾಗೇನೆ.

ಜರ್ಮನಿಯ ಪ್ರಸಿದ್ಧ ಭಾಷಾತಜ್ಞ ಮತ್ತು ಇಂಡಾಲಜಿಯ ಪ್ರವರ್ತಕ ಮ್ಯಾಕ್ಸ್ ಮುಲ್ಲರ್ (೧೮೨೩-೧೯೦೦) ಭಾರತೀಯ ಧರ್ಮ, ಶಾಸ್ತ್ರ ಮತ್ತು ಸಂಸ್ಕೃತ ವನ್ನು ಅಧ್ಯಯನ ಮಾಡಿ ‘ಸೌರ ಪುರಾಣ ಸಿದ್ಧಾಂತ’ವನ್ನು ಮಂಡಿಸಿದರು.’ಹಿತೋಪದೇಶ’ದ ಜರ್ಮನ್ ಅನುವಾದವನ್ನೂ ಮಾಡಿದ ಮ್ಯಾಕ್ಸ್ ಮುಲ್ಲರ್ ಪುರಾಣಗಳನ್ನು ಭಾಷೆಯ ತುಣುಕುಗಳು ಎಂದು ಕರೆದರು. ಇದು ಆಗಿನ ಧಾರ್ಮಿಕ ಜರ್ಮನಿಯಲ್ಲಿ ಚರ್ಚುಗಳ ಕೋಪಕ್ಕೆ ಕಾರಣವಾಯಿತು. ಧಾರ್ಮಿಕ ಮೂಲಭೂತವಾದಿಗಳು ಮ್ಯಾಕ್ಸ್ ಮುಲ್ಲರ್ ಅವರ ಸೂರ್ಯಮೂಲ  ಸಿದ್ದಾಂತವನ್ನು ವಿರೋಧಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಧಾರ್ಮಿಕ ಸಂಪ್ರದಾಯದ ವಿಚಾರಗಳ ಶಿಥಿಲತೆಯನ್ನು ಸಹಿಸಲು ಸಿದ್ದರಿರಲಿಲ್ಲ. ಈ ಕಾರಣಕ್ಕಾಗಿಯೇ ಬಾಡೆನ್ ನ ಸಂಸ್ಕೃತ ಪ್ರಾಧ್ಯಾಪಕರ ಹುದ್ದೆಗೆ ಮ್ಯಾಕ್ಸ್ ಮುಲ್ಲರರನ್ನು ಪರಿಗಣಿಸದೆ, ಧಾರ್ಮಿಕ ಸಂಪ್ರದಾಯಿಯಾದ ಮೊನಿಯರ್ ವಿಲ್ಲಿಯಂಸ್ ಅವರಿಗೆ ಕೊಟ್ಟರು.ಆದರೆ ಮುಂದೆ ಇಡೀ ಜರ್ಮನಿಯಲ್ಲಿ ಇಂಡಾಲಜಿ ನೆಲೆಯೂರಿ ಹರಡಲು ಮ್ಯಾಕ್ಸ್ ಮುಲ್ಲರ್  ಕಾರಣವಾದರು.

ಹೀಗೆ ಸಾಗುತ್ತದೆ ಸೂರ್ಯನ  ಸಂಕಥನ. ಅಂತಹ ಸೂರ್ಯನನ್ನು ಯಾರು ತಾನೇ ಹಿಡಿಯಬಲ್ಲರು? ಹಣ್ಣು ಎಂದು ಭಾವಿಸಿ ಹನುಮಂತ ಹಿಡಿಯಲು ಹೋಗಿದ್ದನಂತೆ. ‘ಗ್ರಹಣ’ಎಂದರೆ ಹಿಡಿಯುವುದು. ಸೂರ್ಯನು  ಗ್ರಹಣಕ್ಕೆ ಸಿಕ್ಕುವವನಲ್ಲ. ಬಂಧನಕ್ಕೆ ದಕ್ಕುವವನಲ್ಲ. ‘ಹಿಡಿದರೆ ಹಿಡಿತುಂಬ, ಬಿಟ್ಟರೆ ಜಗವೆಲ್ಲ’. ಆ ಸೂರ್ಯನಿಗೆ ಕಂಕಣ ತೊಡಿಸಲು ಯಾರು ತಾನೇ ಶಕ್ತರು? ಕಂಕಣ ಕಟ್ಟಿಕೊಂಡ ಸೂರ್ಯನನ್ನು ಮತ್ತೆ ಎಂದು ಕಾಣುವೆ , ಎಲ್ಲಿ ಕಾಣುವೆ  ಎನ್ನುವ ಮಂಪರಿನಲ್ಲಿ, ಸೂರ್ಯನಿಲ್ಲದೆಯೇ  ನಮಗೆ ಇಲ್ಲಿ ಇನ್ನೊಂದು ದಿನ  ಬೆಳಗಾಯಿತು.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: