ಇಂಟರ್ನೆಟ್ ಎಂಬ ರಂಪಣಿ ಬಲೆ

Posted on ಡಿಸೆಂಬರ್ 12, 2009. Filed under: Uncategorized |


ವಿಶ್ವ ತುಳು ಸಮ್ಮೇಳನದಲ್ಲಿ ‘ತುಳು ಭಾಷೆ ದೇಶ ಮತ್ತು ಹರಿವು’

ಕುರಿತ ಭಾಷಣದ ಮುಖ್ಯಾಂಶಗಳು

ಚಿತ್ರ : ದಯಾ ಕುಕ್ಕಾಜೆ

ದೇಶ ಮತ್ತು ಭಾಷೆ -ಇವುಗಳಿಗೆ ಒಂದೇ ಹೆಸರು ಇದ್ದಾಗ ,ಅವುಗಳಲ್ಲಿ ಮೊದಲು ಯಾವುದು ಬಂತು ಎನ್ನುವ ಕುರಿತು ಸೈದ್ದಾಂತಿಕವಾಗಿ ಮತ್ತು ನಿರ್ದಿಷ್ಟ ಸಂದರ್ಭಗಳಲ್ಲಿ ಸಾಕಷ್ಟು ಅಧ್ಯಯನಗಳು ಚರ್ಚೆಗಳು ನಡೆದಿವೆ.ಬೀಜವೃಕ್ಷ ನ್ಯಾಯದಂತೆ ಇದಕ್ಕೆ ಆದಿ ಅಂತ್ಯಗಳೆರಡೂ ಇಲ್ಲ.ಪಶ್ಚಿಮದಲ್ಲಿ ಅರಬಿ ಸಮುದ್ರ ,ಪೂರ್ವದಲ್ಲಿ ಪಶ್ಚಿಮ ಘಟ್ಟ -ಇವುಗಳ ನಡುವಿನ ಭೂಪ್ರದೇಶದಲ್ಲಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿದು ಅರಬಿ ಸಮುದ್ರ ಸೇರುವ ನದಿಗಳು ಅನೇಕ :ಚಂದ್ರಗಿರಿ,ಪಯಸ್ವಿನಿ,ನೇತ್ರಾವತಿ,ಗುರುಪುರ, ಶಾಂಭವಿ,ಪಲ್ಗುನಿ,ಸುವರ್ಣ .ಹೀಗೆ ಸಪೂರವಾದ ಕರಾವಳಿ ,ಅದರ ಒತ್ತಿನ ಗುಡ್ಡ ಬೆಟ್ಟಗಳ ಸಣ್ಣ ಸಣ್ಣ ಹಳ್ಳಿಗಳು ಮತ್ತು ಅದನ್ನು ದಾಟಿದರೆ ಗಟ್ಟದ ತಪ್ಪಲು ,ಇನ್ನೂ ಧೈರ್ಯದಿಂದ ಮುಂದೆ ನುಗ್ಗಿದರೆ ಪಶ್ಚಿಮ ಘಟ್ಟದ ಮಲೆಗಳ ಸಾಲು -ಅಲ್ಲಿಗೆ ಈ ನಾಡಿನ ಗಡಿ ಮುಟ್ಟಿತು.ಹಾಗೆ ನೋಡಿದರೆ ಇಲ್ಲಿ ಒಂದೊಂದು ಹಳ್ಳಿಯೂ ಒಂದೊಂದು ದ್ವೀಪವೇ.ಆಗಿತ್ತು. ಹೊಳೆಗಳು ,ನದಿಗಳು ,ಗುಡ್ಡಗಳು -ಎತ್ತ ಹೋದರು ಒಂದು ಚಿಕ್ಕ ಕೋಟೆಯೇ.ಅರುವತ್ತು ವರ್ಷದ ಹಿಂದೆ ನನ್ನ ಹಳ್ಳಿ ಪುಣಚದಿಂದ ಆರು ಮೈಲು ದೂರದ ಪುತ್ತೂರು ಪೇಟೆಗೆ ಹೋಗುವದು ,ಇವತ್ತು ಮಂಗಳೂರಿಂದ ಜರ್ಮನಿಗೆ ಹೋಗುವುದಕ್ಕಿಂತ ಕಷ್ಟದ ಪ್ರಯಾಣ ಆಗಿತ್ತು.

ಜೂನು ತಿಂಗಳ ಆರಂಭದಲ್ಲಿ ಹೊಡೆಯಲು ಸುರುಮಾಡಿದರೆ ,ಹನಿ ಕಡಿಯದೇ ನಾಲ್ಕು ತಿಂಗಳು ಎಲ್ಲವನ್ನು ಎಲ್ಲರನ್ನು ಚಂಡಿಪುಂಡಿ ಮಾಡುವ ಮಳೆಗಾಲ ,ಅದರ ಪ್ರಸಾದದಿಂದ ಮೈತುಮ್ಬಿಕೊಳ್ಳುವ ಹಳ್ಳ,ಕೆರೆ,ಕಣಿ, ಸಾರ್, ತೋಡು ,ಹೊಳೆ ,ನದಿ ,ಕಡಲು ,ನೆಲದ ಅಡಿಯಿಂದ ತನ್ನ ಇರವನ್ನು ಜಿನುಗುವ ಒಸರು -ಹೀಗೆ ನೀರಿನ ಬಹುರೂಪಿ ನಾಟಕದ ರಂಗಸ್ಥಳವನ್ನು ‘ತುಳು’ಎಂದು ಕರೆದರೆ ಅದು ಅನ್ವರ್ಥನಾಮ.

ಚಿತ್ರ : ದಯಾ ಕುಕ್ಕಾಜೆ

ತುಳು ಒಂದು ಭಾಷೆಯಾಗಿ ಎಂದು ಹುಟ್ಟಿತು ಎನ್ನುವುದರ ಕುರಿತುದ್ರಾವಿಡ ಭಾಷಾ ವಿಜ್ಞಾನಿಗಳು ಸಾಕಷ್ಟು ಸಂಶೋಧನೆ ನಡೆಸಿದ್ದಾರೆ.ತುಳುವೇತರ ಮತ್ತು ಅಂತಾರಾಷ್ಟ್ರೀಯ ದ್ರಾವಿಡ ಬಾಷಾವಿಜ್ಞಾನಿಗಳು ಕೊಟ್ಟಿರುವ ದ್ರಾವಿಡ ಭಾಷೆಗಳ ಸಂತಾನ ನಕ್ಷೆಯಲ್ಲಿ ಸ್ವತಂತ್ರವಾಗಿ ಮೊದಲು ಹುಟ್ಟಿದ ಭಾಷೆ ‘ತುಳು’.ಆ ವೇಳೆಗೆ ಕನ್ನಡ-ತಮಿಳು ಒಂದೇ ಭಾಷೆ ಆಗಿತ್ತು. .ಮುಂದಿನ ಹಂತದಲ್ಲ್ಲಿ ಕನ್ನಡ ಮತ್ತು ತಮಿಳು ಪ್ರತ್ಯೇಕವಾಗಿ ಎರಡು ಭಾಷೆಗಳು ಆದುವು. .ತೆಲುಗು ಮತ್ತು ಮಲಯಾಳ ಮೂರನೇ ಹಂತದಲ್ಲಿ ಸ್ವತಂತ್ರ ಭಾಷೆಗಳ ರೂಪ ತಾಳಿದವು.ಹಾಗಾಗಿಯೇ ದಕ್ಷಿಣ ಭಾರತದಲ್ಲಿ ದ್ರಾವಿಡ ಭಾಷೆಗಳಲ್ಲೇ ಪ್ರಮುಖ ಭಾಷೆಗಳಾದ ಕನ್ನಡ,ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಂದ ಪ್ರಾಚೀನವಾದ ಭಾಷೆ ತುಳು.ಇದು ಕನಿಷ್ಠ ಎರಡು ಸಾವಿರ ವರ್ಷಗಳಷ್ಟು ಹಳೆಯದು ಎಂದು ಭಾಷಾ ವಿಜ್ನಾನಿಗಳು ಇತಿಹಾಸಕಾರರು ಒಪ್ಪಿಕೊಂಡಿದ್ದಾರೆ. ಆದರೆ ‘ಪ್ರಾಯದ ಪೆಂಪು ‘ಎನ್ನುವುದು ಭಾಷಾ ರಾಜಕೀಯದಲ್ಲಿ ಸಾಕಾಗುವುದಿಲ್ಲ.ತುಳು ಭಾಷೆಯ ಸ್ಥಿತಿ ‘ಕಡಲಿನ ನೆಂಟತನ ,ನೀರಿಗೆ ಬಡತನ ‘ಎನ್ನುವಂತೆ ಆಗಿದೆ.

‘ ಅಯ್ಯಯ್ಯ ಎಂಚ ಪೋರ್ಲಾಂದೆಂದು ತುಳುವರು ಮೆಯ್ಯುಬ್ಬಿ ಕೇಳಬೇಕಣ್ಣ ‘-ಕವಿ ರತ್ನಾಕರವರ್ಣಿ ‘ಭರತೇಶ ವೈಭವ ‘ಕಾವ್ಯದಲ್ಲಿ ಹೇಳುವ ಈ ಮಾತು ತುಳುವಿನಲ್ಲಿ ಆರಂಭವಾಗಿ ಕನ್ನಡದಲ್ಲಿ ಮುಕ್ತಾಯವಾಗುತ್ತದೆ.ತುಳುವನ್ನು ಕನ್ನಡ ಮಾಧ್ಯಮದ ಒಳಗೆ ಕವಿ ಬಳಸಿದ ರೀತಿಯೇ ಐತಿಹಾಸಿಕ ಮತ್ತು ಸಮಕಾಲೀನ ಸಂದರ್ಭದಲ್ಲಿ ಲಿಖಿತ ಕನ್ನಡದ ಒಳಗೆ ಮೌಖಿಕ ತುಳುವಿನ ನಾಚಿಕೆಯನ್ನು ತಿಳಿಸುತ್ತದೆ. ಪರಸ್ಪರ ತುಳುವಿನಲ್ಲಿ ಮಾತಾಡಿಕೊಳ್ಳುವ ನಾವು ಕುಟುಂಬದ ಬಂಧುಗಳಿಗೆ ಪತ್ರ ಬರೆಯುವಾಗ ಕನ್ನಡವನ್ನು ಮಾಧ್ಯಮ ಆಗಿ ಯಾಕೆ ಬಳಸುತ್ತೇವೆ ಎನ್ನುವ ಪ್ರಶ್ನೆ ಮುಖ್ಯವಾದುದು.ತುಳುನಾಡಿನ ಬಹುತೇಕ ಶಾಸನಗಳು ಕನ್ನಡದಲ್ಲಿಯೇ ಇವೆ ಎನ್ನುವುದು ಕೂಡಾ ಈ ವಿನ್ಯಾಸಕ್ಕೆ ಸೇರಿದುದು. .ಮೌಖಿಕ ಮತ್ತು ಲಿಖಿತ ಪರಂಪರೆಗಳ ಸಂಬಂಧಗಳು ಸಂಕೀರ್ಣ.ಮುಕ್ತವಾಗಿ ತನ್ನ ಭಾವನೆಗಳನ್ನು ಪ್ರಕಟಿಸುವ ಮೌಖಿಕ ಸಂಸೃತಿಯು ಲಿಖಿತ ಸಂಸ್ಕೃತಿಯ ಸಾನ್ನಿಧ್ಯದಲ್ಲಿ ಸಂಕೋಚವನ್ನು ,ಕೆಲವೊಮ್ಮೆ ದೈನ್ಯವನ್ನು ಹೊಂದಿರುತ್ತದೆ.ತುಳುವು ಕರ್ನಾಟಕದಲ್ಲಿ ತುಳುನಾಡಿನ ತುಳುವರ ಒಳಗಿನ ಭಾಷೆಯಗಿಯೇ ಉಳಿದಿದೆ.

ಹೀಗೆ ಮೌಖಿಕ ಪರಂಪರೆಯಲ್ಲಿ ತನ್ನ ಎಲ್ಲ ಸಾಧನೆ ಮತ್ತು ಸಾರ್ಥಕತೆಗಳನ್ನು ತೋರಿಸುತ್ತ ಬಂದ ತುಳು ಭಾಷೆಯು ಅನೌಪಚಾರಿಕ ಸಂವಹನದ ಎಲ್ಲ ಸೂಕ್ಷ್ಮಗಳನ್ನು ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ.ತುಳುವಿನ ಪೊರ್ಲುಪೊಲಿಕೆದ ಪಾತೆರೋ ಮತ್ತು ತುಳುವಿನಲ್ಲಿರುವ ಮೌಖಿಕ ಪರಂಪರೆಯ ಸಂದಿ ಪಾರ್ದನೋ ಕಬಿತೋ ಪದೋ ಉರಾಲ್ ಕತೆ ಗಾದೆ ಎದುರುಕತೆ ಮದು ಮದಿಪು ಪಾರಿ ನುಡಿ -ಇವು ಇಂತಹ ಅದ್ಭುತ ಮಾದರಿಗಳು.

ಆದರೆ ಈಗ ತುಳುವಿನ ಮೌಖಿಕ ಬಳಕೆಯೂ ಕಡಮೆ ಆಗುತ್ತಿದೆ.ಹಳ್ಳಿಗಳಲ್ಲಿ ಹೆಚ್ಚಾಗಿ ,ನಗರಗಳಲ್ಲಿ ಸಾಧಾರಣವಾಗಿ ತುಳು ಬಳಕೆಯಾಗುತ್ತಿದ್ದರೂ ತುಳು ತನ್ನ ತಿರ್ಲ್ ಪೊರ್ಲುಗಳನ್ನು ಕಳೆದುಕೊಂಡು ಬಚ್ಚಿಹೋಗಿದೆ.ನಿಜವಾದ ಪುಟಿಕ್ಕೆನೆದ ತುಳು ಪದಗಳನ್ನು ಕನ್ನಡ ಭಾಷಣಕಾರರ ಯಾಂತ್ರಿಕ ಕನ್ನಡ ಶಬ್ದಗಳು ಮತ್ತು ಅನೇಕ ಬಾರಿ ಫ್ಯಾಶನಿನ ಇಂಗ್ಲಿಶ್ ಶಬ್ದಗಳು ಆಕ್ರಮಿಸಿವೆ.ಕನ್ನಡದ ಕ್ರಿಯಾ ಧಾತುರೂಪಗಳಿಗೆ ತುಳುವಿನ ಕ್ರಿಯಾಪ್ರತ್ಯಯಗಳನ್ನು ಜೋಡಿಸಿ ,ತುಳುವಿನಲ್ಲಿ ಮಾತಾಡಿದಾಗ ರಾಗಿಮುದ್ದೆ ಜೋಳದ ರೊಟ್ಟಿಗಳನ್ನು ತೆಂಗಿನಕಾಯಿಯ ಹಾಲಿನಲ್ಲಿ ತಿಂದ ಹಾಗಾಗುತ್ತದೆ.ಇಂಗ್ಲಿಶ್ ಪದಗಳನ್ನು ತುಳುವಿನ ದಿನನಿತ್ಯದ ಆಹಾರ ಪದಾರ್ಥಗಳಿಂದ ತೊಡಗಿ ಕೃಷಿ -ಕಸುಬುಗಳ ವರೆಗೆ ಸೇರಿಸುವುದು , ಬೊಂಡನೀರು ಇಳಿಯದ ಗಂಟಲಲ್ಲಿ ನೂಡಲ್ -ಪಿಜ್ಜಾ ಗಳನ್ನು ತುರುಕಿದನ್ತಾಗುತ್ತದೆ.

ಉಡುಪಿಯಲ್ಲಿ ಕುಶಿ ಹರಿದಾಸ ಭಟ್ಟರ ಸಾಹಸದಿಂದ ಡಾ.ಯು.ಪಿ.ಉಪಾಧ್ಯಾಯ ದಂಪತಿಗಳ ಸಂಪಾದಕತ್ವದಲ್ಲಿ ಸಿದ್ದ ಗೊಂಡ ತುಳು ನಿಘಂಟುವಿನ ಆರು ಸಂಪುಟಗಳು ನಮ್ಮ ದೇಶದಲ್ಲೇ ಒಂದು ದಾಖಲೆ.ಇಲ್ಲಿರುವ ತುಳು ಶಬ್ದ ಸಂಪತ್ತನ್ನು ತುಳುವರು ಓದಿ ಓದಿ ನಿಜವಾದ ತುಳುವರಾಗಬೇಕು.

ಒಂದು ಮೌಖಿಕ ಭಾಷೆ ಆಧುನಿಕ ಕಾಲದಲ್ಲಿ ಸಾರ್ವಜನಿಕ ಭಾಷೆ ಆಗಬೇಕಾದರೆ ಅದು ಲಿಖಿತ ಭಾಷೆ ಆಗಿಯೂ ತನ್ನ ಶಕ್ತಿಯನ್ನು ಪ್ರಕಟಿಸಬೇಕಾಗುತ್ತದೆ.ಆಡಳಿತ ,ಶಿಕ್ಷಣ ,ಸಾಹಿತ್ಯ ಮತ್ತು ಮಾಧ್ಯಮ – ಇವು ಆಧುನಿಕ ಭಾಷೆಯ ನಾಲ್ಕು ಆಧಾರ ಕಂಬಗಳು.ಈ ನಾಲ್ಕು ನೆಲೆಗಳಲ್ಲಿ ತುಳುವನ್ನು ಸಜ್ಜುಗೊಳಿಸಲು ,ಒಳಗಿನ ಶಕ್ತಿಗಳು ಮತ್ತು ಹೊರಗಿನ ಶಕ್ತಿಗಳು ಒಟ್ಟಿಗೆ ಕೆಲಸ ಮಾಡಬೇಕಾಗುತ್ತದೆ. .ತುಳುವಿಗೆ ಈ ನಾಲ್ಕು ನೆಲೆಗಳಲ್ಲಿ ಸಮರ್ಪಕವಾಗಿ ತನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ.ಈ ನಾಲ್ಕು ಆಧುನಿಕ ರಂಗಗಳಲ್ಲಿ ತಮ್ಮನ್ನು ನೆಲೆಯೂರಿಸಿಕೊಳ್ಳುವುದು ತುಳುವರ ಅಭಿಮಾನದ ವಿಷಯವೂ ಹೌದು,ಅಸ್ತಿತ್ವದ ಅಗತ್ಯವೂ ಹೌದು,ಇಂದಿನ ಇರವು ಮತ್ತು ನಾಳೆಯ ಉಳಿವುಗಳ ಪ್ರಶ್ನೆಯೂ ಹೌದು.

ಆಡಳಿತದ ವಿಕೆಂದ್ರೀಕರಣವನ್ನು ದೇಶದಲ್ಲೇ ಮೊದಲು ತಂದ ಕರ್ನಾಟಕ ರಾಜ್ಯದಲ್ಲಿ ,ತುಳುವರ ಭೂನಿಯಮ , ಕಂದಾಯ ವ್ಯವಸ್ಥೆಯಂತಹ ಅನೇಕ ಸಂಗತಿಗಳು ತುಳು ಮಾದರಿಯಲ್ಲಿ ಇದ್ದುವು.ತುಳುವಿನಲ್ಲಿ ಮಾತ್ರ ಅವನ್ನು ವಿವರಿಸಲು ಸಾಧ್ಯ ಆಗುತ್ತಿತ್ತು. ಇಲ್ಲಿಯ ಭೂನ್ಯಾಯ ಮಂಡಳಿಗಳು,ಗ್ರಾಮ -ತಾಲೂಕು ಮತ್ತು ಜಿಲ್ಲಾ ಪಂಚಾಯತ್ -ಇಲ್ಲೆಲ್ಲಾ ತುಳು ಆಡಳಿತ ಭಾಷೆ ಆಗಿದ್ದರೆ ಮಹಿಳೆಯರು ದಲಿತರು ಕೆಳವರ್ಗದ ಎಲ್ಲ ತುಳುವರು ಹೆಚ್ಚು ಧೈರ್ಯದಿಂದ ಚರ್ಚೆಯಲ್ಲಿ ಪಾಲುಗೊಂಡು ಆಡಳಿತ ನಡೆಸುತ್ತಿದ್ದರು.ಕೆಳಗಿನ ಕೋರ್ಟುಗಳು ತುಳುವರ ಹೇಳಿಕೆಗಳನ್ನು ಕನ್ನಡ ಅಥವಾ ಇಂಗ್ಲಿಷಿಗೆ ತರ್ಜುಮೆ ಮಾಡಿಸದೆ ತುಳುವಿನಲ್ಲೇ ಕೋರ್ಟು ವ್ಯವಹಾರ ನಡೆಸಿದ್ದರೆ ಇನ್ನಷ್ಟು ಬಡವರಿಗೆ ಹೆಚ್ಚಿನ ನ್ಯಾಯ ಸಿಗುತ್ತಿತ್ತು.ತುಳುನಾಡು ಕರ್ನಾಟಕದಲ್ಲೇ ಒಳ್ಳೆಯ ವಕೀಲರನ್ನು ಬಹಳ ಹಿಂದೆಯೇ ಹೊಂದಿದ್ದ ಪ್ರದೇಶ.

ಮೊದಲು ಮದ್ರಾಸು ಪ್ರಾಂತದಲ್ಲಿ ,೧೯೫೬ರ ಬಳಿಕ ಕರ್ನಾಟಕದಲ್ಲಿ ಆಯಾ ರಾಜ್ಯಗಳ ಶಿಕ್ಷಣ ವ್ಯವಸ್ಥೆಯ ಒಳಗೆ ಶಾಲೆ ಕಾಲೇಜುಗಳನ್ನು ನಡೆಸಬೇಕಾಗಿ ಬಂದು, ಆ ನಿಯಮಗಳ ,ಪಾಠಪಟ್ಟಿಯ ಬಂಧನದಲ್ಲಿ ತುಳುವಿಗೆ ಒಳಗೆ ಇಣುಕಲೂ ಸಾಧ್ಯವಾಗಲಿಲ್ಲ.ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಜರ್ಮನ್ ಬಾಸೆಲ್ ಮಿಸ್ಸನರಿಗಳು ಸಿದ್ದಪಡಿಸಿ ಬಳಸಲು ತೊಡಗಿದ್ದ ತುಳು ಮೊದಲ ಪಟ್ಯ ಪುಸ್ತಕಗಳು ಮಂಗಳೂರಿನ ಬಾಸೆಲ್ ಮಿಸನ್ ಗ್ರಂಥಾಲಯದ ಕಪಾಟಿನಲ್ಲೇ ಉಳಿದವು.ತುಳು ಮತ್ತು ಕನ್ನಡವನ್ನು ಶಾಲೆಯಲ್ಲಿ ಒಟ್ಟಿಗೆ ಕಲಿಸುವುದು ಹೆಚ್ಚು ಸುಲಭ ಮತ್ತು ಅನುಕೂಲ.ಏಕೆಂದರೆ ಇವರೆಲ್ಲ ಶಾಲೆಯ ಹೊರಗೆ ಅಂತಹ ಬಹು ಭಾಷೆಗಳ ಆವರಣದಲ್ಲೇ ಬೆಳೆದಿರುತ್ತಾರೆ.ಈ ಅನುಕೂಲಕರ ಆವರಣ ಕರ್ನಾಟಕದ ಬೇರೆ ಯಾವ ಭಾಗದಲ್ಲೂ ಇಲ್ಲ.ಆದರೆ ಒಂದು ಕಾಲದಲ್ಲಿ ತುಳುನಾಡಿನ ಶಾಲೆ ಕಾಲೇಜುಗಳಲ್ಲಿ ತುಳುವು ಅಸ್ಪೃಶ್ಯ ಭಾಷೆ ಆಗಿತ್ತು.ತುಳುವಿನಲ್ಲಿ ಮಾತಾಡಿದರೆ ದಂಡ ತೆರಬೇಕಾದ ಪ್ರಸಂಗಗಳೂ ಇದ್ದುವು.ತುಳುವಿನಲ್ಲಿ ಮಾತಾಡುವುದೇ ಅಪವಿತ್ರ ಆದಮೇಲೆ ,ಶಿಕ್ಷಣದ ಒಳಗೆ ಸೇರುವ ಪ್ರಶ್ನೆಯೇ ಇರಲಿಲ್ಲ.ಆದರೆ ಈಗ ಕಾಲ ಬದಲಾಗಿದೆ.ಮೊದಲ ಶಾಲೆಯಿಂದ ತೊಡಗಿ ವಿಶ್ವವಿದ್ಯಾನಿಲಯದ ವರೆಗೆ ತುಳುವಿಗೆ ಮಾತಾಡುವ ಸ್ವಾತಂತ್ರ್ಯ ಸಿಕ್ಕಿದೆ.ಅಧ್ಯಾಪಕರು ,ಮುಖ್ಯಸ್ಥರು ತುಳುವಿನಲ್ಲಿ ಮಾತಾಡುತ್ತಾರೆ ;ಆದರೆ ಪೂರ್ಣ ಮೈಚಳಿ ಬಿಟ್ಟು ಅಲ್ಲ.

೧೯೭೬ರಲ್ಲಿ ಈಗಿನ ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಕನ್ನಡ ಎಂ.ಎ.ಪಾಠ ಪಟ್ಟಿಯಲ್ಲಿ ತುಳುವಿಗೆ ಸಂಬಂಧಿಸಿದ ಮೂರು ಅಧ್ಯಯನ ವಿಷಯಗಳನ್ನು ಸೇರಿಸಲಾಯಿತು.ಆಗ ಮೈಸೂರು ವಿವಿಯ ಸ್ನಾತಕೋತ್ತರ ಕೇಂದ್ರ ಮಂಗಳಗಂಗೋತ್ರಿಯಲ್ಲಿ ತುಳುವಿಗೆ ಈ ಮೊದಲ ಮನ್ನಣೆ ಸಾಧ್ಯ ಆದದ್ದು ,ಆಗ ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಹಾ.ಮಾ.ನಾಯಕ ಅವರ ಆಸಕ್ತಿಯಿಂದ.ತುಳು ಭಾಷೆ,ಸಾಹಿತ್ಯ ಮತ್ತು ಜಾನಪದ ಅಧ್ಯಯನ ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಅಲ್ಲಿ ನಡೆದುಕೊಂಡು ಬರುತ್ತಿದೆ.ತುಳುವಿನ ಅನೇಕ ಸಂಶೋಧನೆಗಳಿಗೆ ಇದರಿಂದ ಪ್ರೇರಣೆ ದೊರೆತಿದೆ. ಇತ್ತೀಚಿಗೆ ಮಂಗಳೊರು ವಿವಿಯ ವ್ಯಾಪ್ತಿಯಲ್ಲಿ ಕೆಲವು ಕಾಲೇಜುಗಳು ಪದವಿ ತರಗತಿಯಲ್ಲಿ ತುಳುವನ್ನು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ.(ಆಳ್ವಾಸ್,ಎಸ್.ಡಿ.ಎಂ.ಉಜಿರೆ ?)

ಸಂಶೋಧನೆಯ ಕೆಲಸವನ್ನು ಇಡಿಯಾಗಿ ಮತ್ತು ಬಿಡಿಯಾಗಿ ಅನೇಕ ವಿವಿಗಳು ಮಾಡಿವೆ ,ಮಾಡುತ್ತಿವೆ.ಮಂಗಳೂರು ವಿವಿಯ ಕನ್ನಡ ವಿಭಾಗ ಮತ್ತು ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರ ಪೂರ್ಣಪ್ರಮಾಣದವು.ಇತ್ತೀಚಿಗೆ ಕುಪ್ಪಮಿನ ದ್ರಾವಿಡ ವಿವಿ ಯು ಪ್ರತ್ಯೇಕ ತುಳು ವಿಭಾಗ ಆರಂಭಿಸಿರುವುದು ತಂಬಾ ಮುಖ್ಯವಾದುದು.ಅಣ್ಣಾಮಲೈ ,ಮದ್ರಾಸು,ಕಾಸರಗೋಡು,ಪೂನ ,ಹೈದರಾಬಾದ್,ಮತ್ತು ಹೊರ ದೇಶಗಳ ವಿವಿಗಳಲ್ಲಿ ತುಳು ಕುರಿತ ಸಂಶೋಧನೆಗಳು ನಡೆದಿವೆ.ಅವು ಬಹುತೇಕ ವ್ಯಕ್ತಿಗಳ ಮಟ್ಟದವು.

ಆದರೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡದೊಂದಿಗೆ ತುಳು ಕಲಿಸುವುದು,ಕೇವಲ ಭಾಷೆಯಾಗಿ ಅಷ್ಟೇ ಅಲ್ಲ,ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯದ ದೃಷ್ಟಿಯಿಂದ ಅಗತ್ಯ.ಜಾಗತೀಕರಣದ ಹೊಡೆತದಲ್ಲಿ ದೇಸಿ ಸಂಸ್ಕೃತಿ ಮತ್ತು ಚಿಂತನೆಯನ್ನು ಕೊಡಲು ತುಳುವನ್ನು ಬಳಸಿಕೊಳ್ಳುವುದು ಅಗತ್ಯ.

ಆಧುನಿಕ ಭಾಸೆಯಾಗಿ ತುಳುವನ್ನು ಬೆಳೆಸಲು ,ಅದಕ್ಕೆ ಲಿಖಿತ ಸಾಹಿತ್ಯದ ಆಕೃತಿ ಕೊಡಲು ಪ್ರಯತ್ನ ನಡೆದದ್ದು ತೀರಾ ತಡವಾಗಿ.ಇಂತಹ ಕೆಲವು ವ್ಯಕ್ತಿಗತ ಹಂತದಲ್ಲಿ , ಇನ್ನು ಕೆಲವು ಸಣ್ಣಮಟ್ಟದ ಸಾಂಸ್ಥಿಕ ನೆಲೆಯಲ್ಲಿ ನಡೆದಿವೆ.ತುಳು ಬಾಗವತೋ ,ದೇವಿ ಮಹಾತ್ಮೆ,ಕಾವೇರಿ ಅಂತಹ ಶಿಷ್ಟ ಕಾವ್ಯಗಳು ೧೬ನೆ ಶತಮಾನದ ಕಾಲದಿಂದ ರಚನೆ ಆಗಿರುವುದು ಬೆಳಕಿಗೆ ಬಂದಿವೆ.ಇವು ವ್ಯಕ್ತಿಗತ ಪ್ರಯತ್ನಗಳು .ತುಳುವಿಗೆ ಪಂಡಿತ ಭಾಷೆಯ ಸ್ಥಾನ ಕೊಡಲು ಆ ಕವಿಗಳು ಮಾಡಿದ ಪ್ರಯತ್ನ ಸಾಹಸದ್ದು.ಆಧುನಿಕ ಕಾಲಕ್ಕೆ ಬಂದಾಗ ,’ಮುದ್ರಣ ‘ ಎನ್ನುವ ಆಧುನಿಕ ಯಜಮಾನ್ಕೆಯ ಸ್ಥಾನ ತುಳುವಿಗೆ ದೊರೆತದ್ದು ೧೮೩೪ರ ವೇಳೆಗೆ ತುಳುನಾಡಿಗೆ ಬಂದ ಜರ್ಮನ್ ಬಾಸೆಲ್ ಮಿಸ್ಸನರಿಗಳಿಂದ .೧೭೫ ವರ್ಷಗಳ ಬಳಿಕ ಈಗ ನೋಡಿದಾಗಲೂ ಅವರು ಮಾಡಿದ ಧೈರ್ಯ ಮತ್ತು ಸಾಧನೆ ತುಳುವರಾದ ನಮಗೆ ಅಭಿಮಾನ ಉಂಟು ಮಾಡುವ ಮತ್ತು ಆದರ್ಶವಾಗುವ ಸಂಗತಿ.ಅವರ ಉದ್ದೇಶಗಳ ಚರ್ಚೆಗಿಂತ ತುಳುವರು ಅನಾಯಾಸವಾಗಿ ಪಡೆದ ಲಾಭ ,ಮನ್ನಣೆ ,ನಾವೂ ಅಚ್ಚಿನ ಪುಸ್ತಕದ ಭಾಷೆಯವರು ಎಂದು ತೋರಿಸುಕೊಳ್ಳಲು ಗ್ರಂಥಗಳ ರಾಶಿ -ಇಂತಹ ನಿನ್ನೆಯನ್ನು ನೆನೆಯುತ್ತಾ ನಾಳೆಯ ತುಳು ಸಾಹಿತ್ಯವನ್ನು ಕಟ್ಟಬೇಕು.

ಉಡುಪಿಯಲ್ಲಿ ಪಣಿಯಾಡಿಯವರು ಕಟ್ಟಿದ ‘ತುಳುವ ಸಾಹಿತ್ಯ ಮಾಲೆ ‘,ಅದರಲ್ಲಿ ಕಾಣಿಸಿಕೊಂಡ ತುಳು ಸಾಹಿತ್ಯ ರಚನೆಯ ದೇಸಿ ಮಾದರಿಯ ಉತ್ತಮ ನಿದರ್ಶನಗಳು.ನಮ್ಮ ಹೆಮ್ಮೆಯ ತುಳು ಲೇಖಕರು ನಿನ್ನೆಯ ಮಾನ್ಯರಷ್ಟೇ ಅಲ್ಲ ,,ಇಂದು ನಾಳೆಯ ತುಳು ಸಾಹಿತ್ಯದ ಪಜ್ಜೆಗಳಿಗೆ ಪಂಚಾಗ ಹಾಕಿ ಕೊಟ್ಟವರು. ಅದಕ್ಕಿಂದ ಹಿಂದೆ ಮತ್ತು ಬಳಿಕ ಇಂದಿನವರೆಗೆ ನೂರಾರು ಲೇಖಕರು ಬಹುಬಗೆಯ ತುಳು ಸಾಹಿತ್ಯವನ್ನು ರಚಿಸಿದ್ದಾರೆ.ತಮ್ಮ ಕೈಯಿಂದ ಖರ್ಚುಮಾಡಿ ತುಳುವಿನ ಮೇಲಿನ ಪ್ರೀತಿಯಿಂದ ತುಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.ಕವನ,ಕಾವ್ಯ,ಕತೆ,ಕಾದಂಬರಿ ,ನಾಟಕ ,ಗದ್ಯ,ತರ್ಜುಮೆ-ಹೀಗೆ ತಮ್ಮ ಶಕ್ತಿ ಅನುಸಾರ ಸಾಹಿತ್ಯ ನಿರ್ಮಿಸಿದ್ದಾರೆ.೧೯೯೪ರಲ್ಲಿ ತುಳುವರಾದ ವೀರಪ್ಪ ಮೊಯ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿ ಆದಾಗ ,ತುಳು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿದ್ದು ತುಳುನಾಡಿನ ಒಂದು ಐತಿಹಾಸಿಕ ಸಂಗತಿ.ತುಳು ಸಾಹಿತ್ಯ ನಿರ್ಮಾಣ ,ಪ್ರಕಟಣೆ ಮತ್ತು ಪ್ರಸರಣವೇ ತುಳು ಸಾಹಿತ್ಯ ಅಕಾಡೆಮಿಯ ಮುಖ್ಯ ಉದ್ದೇಶ .ಆ ನಿಟ್ಟಿನಲ್ಲಿ ಲಿಖಿತ ಸಾಹಿತ್ಯ ರಚನೆಯ ಕಮ್ಮಟಗಳು ಮತ್ತು ಸಾಹಿತ್ಯ ನಿರ್ಮಾಣದ ಕೆಲಸಗಳು ನಡೆದಿವೆ.ಆದರೆ ಇದೊಂದು ಸಾಮೂಹಿಕ ಆಂದೋಲನ ಆಗಬೇಕು.ಕೇರಳದಲ್ಲಿ ಆಗಿರುವಂತೆ ಲೇಖಕರ ಸಹಕಾರಿ ಒಕ್ಕೂಟದ ಮಾದರಿಯಲ್ಲಿ ತುಳು ಲೇಖಕರು ,ಮತ್ತು ತುಳುವ ಓದುಗರು ಒಟ್ಟಾಗಿ ಆಧುನಿಕ ಸಾಹಿತ್ಯ ತೇರನ್ನು ಎಳೆಯ ಬೇಕು.ಬರೆದ ತುಳು ಸಾಹಿತ್ಯವನ್ನು ಓದುವ ಓದಿಸುವ ನಿರಂತರ ಚಟುವಟಿಕೆ ನಡೆಯಬೇಕು.ತುಳುವಿನ ಮೂಡೆಯನ್ನು ಕಟ್ಟಿ ಏನು ಪ್ರಯೋಜನ ,ಅದನ್ನು ತಿನ್ನುವ ಆಗೋಲಿ ಮಂಜಣ್ಣರು ಇಲ್ಲದಿದ್ದರೆ ?ನಮಗೀಗ ತುಳುಸಾಹಿತ್ಯ ಮೂಡೆಯನ್ನು ಬಿಚ್ಚಿ ತಮ್ಮ ಮಿದುಳ ನಾಲಗೆಯಲ್ಲಿ ರುಚಿ ನೋಡುವ ಸಾಹಿತ್ಯಬಲ್ಮನದ ತುಳುವರು ಬೇಕಾಗಿದ್ದಾರೆ.

ತುಳು ಭಾಷೆಯನ್ನು ಜನರ ನಡುವೆ ಕೊಂಡುಹೋಗಿ ಜನರ ಮಾಧ್ಯಮದ ಮೂಲಕ ಉಳಿಸಿ ಬೆಳೆಸಿದವರು ತುಳು ಯಕ್ಷಗಾನದವರು ಮತ್ತು ತುಳು ನಾಟಕದವರು.ತುಳುವನ್ನು ಜೀವಂತ ಸಮೂಹ ಮಾಧ್ಯಮಗಳಾದ ನಮ್ಮ ಯಕ್ಷಗಾನ ಮತ್ತು ನಾಟಕ ನಿಜವಾಗಿ ಜನಪ್ರಿಯಗೊಳಿಸಿದವು.ತುಳುವಿನ ದುನ್ನ ಪೊರ್ಲು ಮಸ್ಕಿರಿ ಸೇಲೆಗಳನ್ನು ಕಣ್ಣು ಕಿವಿಗಳಲ್ಲಿ ಯಕ್ಷಗಾನ ತುಂಬಿಸಿಕೊಟ್ಟಿತು.ತುಳು ಸಿನೆಮಾಗಳಿಗಾಗಿ ಬಹಳಷ್ಟು ಕಳೆದುಕೊಂಡ ತುಳು ಕಲಾವಿದರೇ ನಮ್ಮಲ್ಲಿ ಇದ್ದಾರೆ.ತುಳು ಸಿನೆಮಾಗಳಿಗೆ ತುಳುವರು ಇನ್ನಷ್ಟು ಜೀವ ತುಂಬಿದರೆ ,ರಾಷ್ಟ್ರೀಯ ತಾರೆಯರು ಇರುವ ತುಳುಭಾಷೆಯಲ್ಲಿ ರಾಷ್ಟ್ರ ಮಟ್ಟದ ತುಳು ಸಿನೆಮಾಗಳನ್ನು ನಿರ್ಮಿಸಬಹುದು.

ಆಧುನಿಕ ಮಾಧ್ಯಮಗಳಾದ ಪತ್ರಿಕೆ ,ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ತುಳುವಿನದು ಪ್ರಾಥಮಿಕದಲ್ಲೇ ತೇರ್ಗಡೆ ಆಗದ ಕಷ್ಟದ ಸ್ಥಿತಿ.ತುಳುವಿನಲ್ಲಿ ಪತ್ರಿಕೆ ನಡೆಸಿ ಕೈ ಸುಟ್ಟುಕೊಂಡು ನಿರಾಶರಾದವರೇ ಎಲ್ಲ.ತುಳು ಓದುಗರ ಕೊರತೆಯಾಕೆ ಎನ್ನುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ,ಪರಸ್ಪರ ಟೀಕಿಸುವುದು ನಮ್ಮನ್ನು ನಾಳೆಗೆ ಕೊಂಡುಹೋಗುವುದಿಲ್ಲ. .ತುಳುವನ್ನು ಲಿಖಿತ ಭಾಷೆ ಆಗಿ ಒಪ್ಪಿಕೊಳ್ಳಲು ಸಿದ್ದತೆಗಳು ನಮ್ಮಲ್ಲಿ ಸಾಕಷ್ಟು ಆಗಿಲ್ಲ.ತುಳುವಿಗೆ ಪೂರ್ಣಪ್ರಮಾಣದ ಆಕಾಶವಾಣಿ ಕೇಂದ್ರವನ್ನು ಪಡೆದಾಗ ಮಾತ್ರ ತುಳುವಿನ ಕೇಳುವ ಮಾಧ್ಯಮ ಸಮರ್ಥವಾಗಿ ಸರ್ವವ್ಯಾಪಕವಾಗಿ ಬೆಳೆಯಬಹುದು.ಅದು ಶೈಕ್ಷಣಿಕ ವಾಹಿನಿಯಾಗಿಯೂ ಕೆಲಸ ಮಾಡಬಹುದು.ಈಗಾಗಲೇ ಮಂಗಳೂರು ಸಹಿತ ತುಳುನಾಡಿನಲ್ಲಿ ಅನೇಕ ಸ್ಥಳೀಯ ವಾಹಿನಿಗಳು ತುಳು ಭಾಷೆ ಸಾಹಿತ್ಯ ಜಾನಪದ ಮುಂತಾದ ಪ್ರಸರಣವನ್ನು ಚೆನ್ನಾಗಿ ಮಾಡುತ್ತಿವೆ.ಆದರೆ ಕೇಂದ್ರ ಸರಕಾರ ಮಂಗಳೂರಿನಲ್ಲಿ ತುಳುವಿನ ಒಂದು ದ್ದೊರದರ್ಶನ ಕೇಂದ್ರ ಸ್ಪಾಪಿಸುವುದು ತುಳು ಭಾಷೆಗೆ ರಾಷ್ಟ್ರೀಯ ಸ್ಥಾನಮಾನದ ದೃಷ್ಟಿಯಿಂದ ಮುಖ್ಯ.

ಆಧುನಿಕವಾಗಿ ತುಳುಭಾಷೆಯನ್ನು ಬೆಳಸಲು ಹರಡಲು ಮತ್ತು ತುಳುವರು ಹಾಗೂ ತುಳು ಆಸಕ್ತರ ನಡುವೆ ಜಾಲ ಏರ್ಪಡಿಸಲು ಆಧುನಿಕ ತಂತ್ರಜ್ಞಾನವನ್ನು ತುಳುವಿಗೆ ಅಳವಡಿಸಬೇಕಾಗಿದೆ.

ಈನಿಟ್ಟಿನಲ್ಲಿ ತುಳು ಇನ್ನೂ ಭ್ರೂಣಅವಸ್ಥೆಯಲ್ಲೇ ಇದೆ.ಆಸಕ್ತರು ಕೆಲವರು ತುಂಬಾ ಆಸಕ್ತಿಯಿಂದ ತುಳುವಿಗಾಗಿಯೇ ಪರಿಶ್ರಮದಿಂದ ಬ್ಲಾಗ್ ನಿರ್ಮಿಸಿದ್ದಾರೆ.’ತುಳು ಪಾತೆರೋ’ ಬಗ್ಗೆ ಬುಧಾನಂದ ಶಿವಳ್ಳಿ ,’ತುಳು ರಿಸರ್ಚ್’ ಬಗ್ಗೆ ರವಿ ಮುಂದ್ಕೂರ್ ,ವಿಶ್ವ ತುಳು ಸಮ್ಮೇಳನದ ಬಗ್ಗೆ ಉದಯವಾಣಿ ,ಉದಯವಾಣಿಯಲ್ಲಿ ‘ತುಳುನಾಡ ಐಸಿರಿ’ಯನ್ನು ದೃಶ್ಯ-ಶ್ರವ್ಯದಲ್ಲಿ ಮನೋಹರ ಪ್ರಸಾದ್ -ಹೀಗೆ ಕೆಲವಷ್ಟೇ ಸಿಗುತ್ತವೆ.ತುಳುವಿಗೆ ವಿಶಿಷ್ಟವಾದ ಸರ್ವವ್ಯಾಪಿಯಾದ ಒಂದು ಅಂತರಜಾಲ ಇಲ್ಲ. ವಿಕಿಪೀಡಿಯ ದವರು ಕಷ್ಟ ಪಟ್ಟು ತಮಗೆ ದೊರೆತಷ್ಟನ್ನಾದರೂ ಸ್ವಲ್ಪ ಕೊಟ್ಟಿದ್ದಾರೆ.ತುಳುವರಾದ ಮಣಿಪಾಲದ ಕೆ.ಪಿ. .ರಾವ್ ಕನ್ನಡ ತಂತ್ರಾಂಶಕ್ಕೆ ಲಿಪಿಗಳನ್ನು ಒದಗಿಸಿದ ಆದ್ಯರು.ತುಳು ನಿಘಂಟಿನ ವಿಶಿಷ್ಟ ಅಕ್ಷರಗಳ ಕಂಪ್ಯೂಟರ್ ಫಾಂಟ್ ತಯಾರಿಸಿದವರು.ತುಳುವಿಗೊಂದು ತಂತ್ರಾಂಶ ಅವರ ನೆರವಿನಿಂದ ಎಲ್ಲ ರೀತಿಯ ತುಳುವ ಬಳಕೆದಾರರ ಸಹಕಾರದಿಂದ ಸಿದ್ದಪದಿಸಬಹುದು. ತಮಿಳಿಗೆ ಶಾಸ್ತ್ರೀಯ ಭಾಷೆಯ ಸಿಗುವ ಮೊದಲು ತಮಿಳರು ಅಂತರಜಾಲದಲ್ಲಿ ಮಾಡಿದ ಸಿದ್ದತೆ ,ಅಪೂರ್ವವಾದುದು.ತಮಿಳಿನ ಸರ್ವವನ್ನೂ ಸಂಗ್ರಹಿಸಿ ಜಗತ್ತಿನ ಗಮನಕ್ಕೆ ತಂದದ್ದಷ್ಟೇ ಅಲ್ಲ , ವಿದೇಶಿ ವಿದ್ವಾಂಸರಿಂದ ತಮಿಳಿನ ಬಗ್ಗೆ ಬ್ಲಾಗುಗಳಲ್ಲಿ ಬರೆಸಿ ,ತಮಿಳು ವಿಶ್ವ ಭಾಷೆ ಎಂದು ಸಾರಿದರು.ಇವತ್ತು ವಿದ್ಯುನ್ಮಾನ ತಂತ್ರಜ್ಞಾನ ಜಗತ್ತಿನಲ್ಲಿ ಅತ್ಯಂತ ಪ್ರಬಲವಾದ ಅಸ್ತ್ರ.ಅದು ಅಣುಬಾಂಬುವಿಗಿಂತ ಹೆಚ್ಚು ಶಕ್ತಿಶಾಲಿಯಾದುದು.ಅಪಾರ ಸಂಖ್ಯೆಯ ತುಳುವ ತಂತ್ರಜ್ಞರನ್ನು ಸಂಪತ್ತಾಗಿ ಉಳ್ಳ ತುಳು ಈ ಮಾಧ್ಯಮವನ್ನು ವೇಗವಾಗಿ ಪೂರ್ಣಪ್ರಮಾಣದಲ್ಲಿ ಬಳಸಿಕೊಳ್ಳಬೇಕಾಗಿದೆ..

ಹೀಗೆ ತುಳು ಭಾಷೆ ಒಂದು’ ಒಸರು ‘ಆಗಿ ಹುಟ್ಟಿ ,ಹಳ್ಳ ,ಸಾರ್ ,ಸುದೆ ಆಗಿ ಬೆಳೆದು ,ಕಡಲ್ ಸೇರಬೇಕಾದರೆ ಅದಕ್ಕೆ ಅನೇಕ ಸಣ್ಣ ದೊಡ್ಡ ,ಎಲ್ಲ ಬಗೆಯ ಪರಿಪ್ಪುಗಳು ಒಟ್ಟು ಸೇರಬೇಕಾಗಿದೆ. ಅವೆಲ್ಲ ಕಡಲಿಗೆ ಸೇರುವುದಷ್ಟೇ ಅಲ್ಲ ,ಅವೇ ಒಂದು ಕಡಲು ಆಗಬೇಕು.ಇದಕ್ಕಾಗಿಯೇ ಎಲ್ಲ ಕ್ಷೇತ್ರಗಳ ತುಳುವರ ಸಹಕಾರದ ಒಂದು ‘ರಂಪಣಿ ಬಲೆ’ ನೆಯ್ಯಬೇಕು.’ರಂಪಣಿ ಬಲೆ’ಎಂದರೆ ಪರಂಪರಾಗತ ಅರ್ಥದಲ್ಲಿ ‘ಮೀನುಗಾರರು ಸೇರಿ ಸಾಮೂಹಿಕವಾಗಿ ಬಳಸುವ ದೊಡ್ಡ ಬಲೆ.’ಇಂಗ್ಲಿಷಿನ ‘ಇಂಟರ್ನೆಟ್ ‘ನ್ನು ಕನ್ನಡದಲ್ಲಿ ‘ಅಂತರಜಾಲ’ಎಂದು ಕರೆಯುತ್ತಾರೆ.ತುಳುವಿನಲ್ಲಿ ‘ನೆಟ್’ ಎನ್ನುವುದಕ್ಕೆ ಸರಿಯಾದ ಪದ,’ಬಲೆ’.’ಇಂಟರ್ನೆಟ್’ ಎಂದರೆ ಸಾಮೂಹಿಕವಾಗಿ ಎಲ್ಲರೂ ಬಳಸುವ ‘ಬಲೆ.’ತುಳುವಿನಲ್ಲಿ ಮೀನುಗಾರಿಕೆಯಲ್ಲಿ ಬಳಸುವ ‘ರಂಪಣಿ ಬಲೆ’ ಇದೇ ಅರ್ಥವನ್ನು ಕೊಡುತ್ತದೆ.ತುಳುವಿನ ದೇಸಿ ಪದವೊಂದನ್ನು ಆಧುನಿಕ ಅರ್ಥಕ್ಕೆ ಅಳವಡಿಸಿ ಬಳಸಬಹುದು. ಈ ದೃಷ್ಟಿಯಿಂದ’ ರಂಪಣಿ ಬಲೆ’ ಎಂದು ‘ ಇಂಟರ್ನೆಟ್ ‘ಗೆ ಹೊಸ ಪ್ರಯೋಗ ಮಾಡಿದ್ದೇನೆ.

ನಿನ್ನೆಯ ಒಸರು ,ಇಂದು ಪರಿಪ್ಪು ಆಗಿ ,ನಾಳೆ ಕಡಲು ಆಗಿ ,ರಂಪಣಿ ಬಲೆಯಲ್ಲಿ ತುಳುವರೆಲ್ಲರನ್ನು ಒಟ್ಟು ಸೇರಿಸುವ ‘ಅಮುರ್ತೋ ಗಳಿಗೆ ‘ಈಗ ಬಂದಿದೆ

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Liked it here?
Why not try sites on the blogroll...

%d bloggers like this: