ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ,ಅಂಗಾತ ಬಿತ್ತೋ..,

Posted on ಡಿಸೆಂಬರ್ 7, 2009. Filed under: Uncategorized |


ಕುವೆಂಪು ಕವನ ‘ಅನಿಕೇತನ ‘ದ ಬಳಿಕ ಈ ವಾರ ಬೇಂದ್ರೆ ಅವರ ‘ಕುರುಡು ಕಾಂಚಾಣ ‘ಪಾಠ ಮಾಡಿದೆ.ಇದಕ್ಕೆ ಹಿನ್ನೆಲೆಯಾಗಿ ಮೊದಲು ಮೈಸೂರಿನ ಸಿ ಐ ಐ ಎಲ್ ನ ಭಾಷಾ ಮಂದಾಕಿನಿ ಯೋಜನೆಯ ‘ಬೇಂದ್ರೆ’ ಡಿವಿಡಿ ತೋರಿಸಿದೆ. ಬಳಿಕ ಬೆಂಗಳೂರಿನಿಂದ ಜಿ ಎನ್.ಮೋಹನ್ ಇ ಮೇಲ್  ನಲ್ಲಿ ಕಳುಹಿಸಿದ್ದ, ಸಿ.ಅಶ್ವಥ್ ಮತ್ತು ಯಶವಂತ ಹಳಬಂಡಿ ಹಾಡಿರುವ ‘ಕುರುಡು ಕಾಂಚಾಣ ‘ ಹಾಡನ್ನು ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕೇಳಿಸಿದೆ. ಆ ಹಾಡಿಗಂತೂ ಅವರು ಮೈಮರೆತ ಹಾಗಿತ್ತು. ಅಶ್ವಥ್ ಮೋಡಿಗೆ ತಲೆ ಆಡಿಸುತ್ತಾ ಹಾಡನ್ನು ಗುನುಗುನಿಸಲು ಶುರುಮಾಡಿದರು.

ಅವರಲ್ಲಿ ಹೆಚ್ಚಿನವರು ಕರ್ನಾಟಕ ನೋಡಿದ ಜರ್ಮನ್ ವಿದ್ಯಾರ್ಥಿಗಳು.ಸ್ಟೆಫನ್ ಪಾಪ್, ಗುಲ್ಬರ್ಗದಲ್ಲಿ ಮುಸ್ಲಿಂ ಸಂಸ್ಕೃತಿ ಬಗ್ಗೆ ಕೆಲಸ ಮಾಡಿದವನು. ಚೆನ್ನಾಗಿ ಉರ್ದು ಮಾತಾಡುತ್ತಾನೆ. ಈಗಾಗಲೇ ಎಂ.ಎ. ಮುಗಿಸಿರುವ ಆತ ಆಸಕ್ತ ವಿದ್ಯಾರ್ಥಿಗಳಿಗೆಉರ್ದು ಪಾಠವೂ ಮಾಡುತ್ತಾನೆ. ಅವನಿಗೆ ಶಾಯಿರಿಗಳ ಧಾಟಿ ಚೆನ್ನಾಗಿ ಗೊತ್ತು. ಹಾಗಾಗಿ ಬೇಂದ್ರೆ ಹಾಡು ಕೇಳುತ್ತಲೇ ತುಂಬಾ ಖುಷಿ ಪಡುತ್ತಿದ್ದ .ಉಳಿದ ಎಲ್ಲ ಹುಡುಗಿಯರು ,ಆ ಹಾಡಿಗೆ ಕುಣಿಯಲು ಮಾನಸಿಕವಾಗಿ ಸಿದ್ದತೆ ಮಾಡಿಕೊಳ್ಳುತ್ತಿದ್ದ ಹಾಗಿತ್ತು.ಇವರನ್ನು ಹೀಗೆಯೇ ಬಿಟ್ಟರೆ ಇವರು ನನ್ನ ಶಿಷ್ಯರಾಗುವ ಬದಲು ಅಶ್ವಥ್ ಮೋಡಿಯಿಂದ ಹೊರಬರಲಾರರು ಅನ್ನಿಸಿ, ಕವನ ಓದಿ, ಅರ್ಥ ಹೇಳಿ ವಿವರಿಸಲು ಸುರುಮಾಡಿದೆ.

ಜರ್ಮನ್ ವಿದ್ಯಾರ್ಥಿಗಳು ವ್ಯಾಕರಣದಲ್ಲಿ ಬಹಳ ಗಟ್ಟಿಗರು.ಹಾಗಾಗಿ ಶಬ್ದಗಳ ಅರ್ಥ,ವ್ಯಾಕರಣ ಪ್ರಕ್ರಿಯೆ ,ಭಾವಾರ್ಥ, ವಿಮರ್ಶೆ -ಹೀಗೆ ಎಲ್ಲವನ್ನೂ ವಿವರಿಸಬೇಕು.’ಬಾಣಂತಿಯೆಲುಬ ಸಾಬಾಣದ ಬಿಳುಪಿನಾ ಕಾಣದ ಕಿರುಗೆಜ್ಜೆ ಕಾಲಾಗ ಇತ್ತೋ ‘ಈ ಸಾಲು ವಿವರಿಸುವಾಗ ಸಾರಾ ಕೇಳಿದಳು : ‘ಅದು ಎಲುಬಿನ ಸಾಬೂನಿನ ಬಿಳುಪು ‘ಎಂದು ಅಲ್ಲವೇ ?’ ಒಂದು ಕ್ಷಣ ಮೌನವಾದೆ. ಸಾರಾ ತುಂಬಾ ಬುದ್ದಿವಂತೆ. ಕನ್ನಡ ಚೆನ್ನಾಗಿ ಕಲಿತು ಈ ಹಂತಕ್ಕೆ ಬಂದಿದ್ದಾಳೆ..ಮೊದಲ ವರ್ಷದ ಜರ್ಮನ್ ವಿದ್ಯಾರ್ಥಿಗಳಿಗೆ ನನ್ನ ಕನ್ನಡ ಪಾಠಕ್ಕೆ ಪೂರಕವಾಗಿ ಟ್ಯುಟೋರಿಯಲ್ ಮಾಡುತ್ತಾಳೆ . ಕನ್ನಡ ಲಿಪಿ ವ್ಯಾಕರಣ ಹೇಳಿಕೊಡುವುದು ಅವಳೇ. ತನ್ನ ಲ್ಯಾಪ್ ಟಾಪಿನಲ್ಲಿ ಕನ್ನಡ ಸಾಫ್ಟವೇರ್ ಹಾಕಿಕೊಂಡು ಕನ್ನಡದಲ್ಲೇ ಟೈಪು ಮಾಡುತ್ತಾಳೆ . ‘ಎಲುಬಿನಿಂದ ಸಾಬೂನು ಮಾಡುತ್ತಾರೆಯೇ ? ‘ಅವಳಲ್ಲಿ ಕೇಳಿದೆ.’ ಹೌದು ಇಲ್ಲೂ ಮಾಡುತ್ತಾರೆ ‘ಎಂದಳು. ‘ಯಾರ ಎಲುಬಿನಿಂದ ?’ ಎಂದು ಕೇಳುವ ಧೈರ್ಯ ಆಗಲಿಲ್ಲ. ‘ಗುಡಿಯೊಳಗೆ ಗಣಣ ,ಮಹಡಿಯೊಳಗೆ ತನನ ,ಅಂಗಡಿಯೊಳಗೆ ಜ್ಹಣಣಣ ನುಡಿಗೊಡುತ್ತಿತ್ತೋ ‘ -ಧರ್ಮ, ಸಂಪತ್ತು ಮತ್ತು ವ್ಯಾಪಾರ ಇವುಗಳ ಅಂತರಸಂಬಂಧ ಹೇಗಿತ್ತು ಎನ್ನುವುದನ್ನು ಬಹಳ ಹಿಂದೆಯೇ ಕವಿ ಬೇಂದ್ರೆ ಕಂಡ ಬಗೆಗಳನ್ನು ವಿವರಿಸಿದೆ. ಇದು ಎಲ್ಲ ಕಾಲ ಮತ್ತು ದೇಶಗಳಲ್ಲೂ ಕಾಣಬಹುದಾದ ವಿದ್ಯಮಾನ ಎನ್ನುವ ನನ್ನ ಎಂದಿನ ಮಾತುಗಳನ್ನೇ ಆಡಿದೆ. ನನಗೆ ಅದು ಹಳೆಯ ಮಾತಾದರೂ ಇಲ್ಲಿಗೆ ಹೊಸತು ಎನ್ನುವುದು ನನ್ನ ಗ್ರಹಿಕೆ. ಅವರ ಪ್ರತಿಕ್ರಿಯೆ ಕೇಳಲು ಸಮಯ ಇರಲಿಲ್ಲ. ಮುಂದಿನ ವಾರ ಚರ್ಚಿಸೋಣ ಎಂದು ಹೊರಗೆ ಬಂದೆ.

ಸಂಜೆಯ ವೇಳೆಗೆ ವಿವಿಯಿಂದ ನನ್ನ ವಸತಿಯ ಗೆಸ್ಟ್ ಹೌಸ್ ಗೆ ಬರುವ ದಾರಿಯಲ್ಲಿ ಬೀದಿ ಉದ್ದಕ್ಕೂ ಬೃಹತ್ ಮೆರವಣಿಗೆ. ಘೋಷಣೆಗಳು ಕೇಳುತ್ತಿವೆ, ಬ್ಯಾನ್ನರ್ ಗಳು ಕಾಣಿಸುತ್ತಿವೆ. ಕುತೂಹಲದಿಂದ ಮಾರ್ಗದ ಬದಿಯಲ್ಲೇ ನಿಂತುಕೊಂಡೆ. ಮೆರವಣಿಗೆ ಹತ್ತಿರ ಬಂತು. ನೋಡಿದರೆ ಅದು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಪಕ್ಕದಲ್ಲಿ ನಿಂತಿದ್ದವರಲ್ಲಿ ವಿಚಾರಿಸಿದೆ, ‘ಅದು ಏನು ಘೋಷಣೆ, ಅದು ಏನು ಬರೆದಿರುವುದು ಬ್ಯಾನರಿನಲ್ಲಿ..?’

‘ಧಿಕ್ಕಾರ ಧಿಕ್ಕಾರ ಅಸಮಾನತೆಗೆ,ಎಂದೆಂದಿಗು ಧಿಕ್ಕಾರ ಶ್ರೀಮಂತರ ಸೊಕ್ಕಿಗೆ’. ಇಲ್ಲಿಗೆ ಬಂದ ಮೊದಲ ವಾರದಲ್ಲಿ ನಾನು ಪಾಠ ಮಾಡಿದ ಸಿದ್ದಲಿಂಗಯ್ಯ ನವರ ‘ಸಾವಿರಾರು ನದಿಗಳು’ ಕವನದ ಸಾಲುಗಳು ಇವರಿಗೆ ಹೇಗೆ ಸಿಕ್ಕಿದವು ಎಂದು ಯೋಚಿಸುತ್ತಿರುವಾಗಲೇ ಮೆರವಣಿಗೆಯಲ್ಲಿ ಕಂಡದ್ದು ಇವತ್ತು ನಾನು ‘ಕುರುಡು ಕಾಂಚಾಣ ‘ಪಾಠ ಮಾಡಿದ ನನ್ನ ಜರ್ಮನ್ ಕನ್ನಡ ವಿದ್ಯಾರ್ಥಿಗಳನ್ನು. ಸಾರಾ ಕೂಡ ಇದ್ದಳು. ತರಗತಿಯಲ್ಲಿ ಕಂಡ ಹಸನ್ಮುಖಗಳು ಈಗ ಕಾಣಿಸುತ್ತಿಲ್ಲ. ಮುಖದಲ್ಲಿ ಸಿಟ್ಟು ,ದ್ವನಿಯಲ್ಲಿ ಗಡಸು -ನನಗೆ ಆಶ್ಚರ್ಯ. ಕುಣಿಯಲು ಹಾಡನ್ನು ಗುನುಗುನಿಸುತ್ತಿದ್ದ ಹುಡುಗಿಯರೆಲ್ಲಿ? ಹೋರಾಟದ ಸಾಗರದ ಕಡೆ ಚಲಿಸುವ ಭೋರ್ಗರೆಯುವ ಈ ನದಿಗಳೆಲ್ಲಿ? ಮೆರವಣಿಗೆ ಮುಂದೆ ಸಾಗಿತು.

ನಾನು ಗೆಸ್ಟ್ ಹೌಸಿಗೆ ಬಂದು, ಸುದ್ದಿ ಏನಾದರೂ ಇದೆಯೇ ಎಂದು ಲ್ಯಾಪ್ಟಾಪ್ ಕುಟುಕಿದರೆ, ದುಬೈ ನಡುಕದ್ದೆ ಸುದ್ದಿ. ನಮ್ಮ ಅರ್ಥ ಸಚಿವರು ಎಂದಿನಂತೆ ನಮ್ಮ ದೇಶದ ಮೇಲೆ ಏನೂ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದು ಓದಿದೆ.ಆದರೆ ನನ್ನ ನಡುಕ ನಿಲ್ಲಲಿಲ್ಲ. ದುಬೈಯಲ್ಲಿರುವ ನಮ್ಮ ಕಡೆಯ ‘ಕೂಲಿ ಕುಂಬಳಿಯವರ ‘ ಗತಿ ಏನಾಗಬಹುದು ಎನ್ನುವ ಚಿಂತೆ ಕಾಡಲು ಸುರು ಆಯಿತು. ಬೇಜಾರಾಗಿ ಹೊರಗೆ ಬಂದು ನಡೆದುಕೊಂಡು ಬರುತ್ತಿದ್ದಾಗ ದಾರಿಯಲ್ಲಿ ಸಾರಾ ಸಿಕ್ಕಿದಳು.ಮೆರವಣಿಗೆ ಮುಗಿಸಿ ಬರುತ್ತಿದ್ದಳು.ನನ್ನನ್ನು ಕಂಡೊಡನೆಯೇ ಕನ್ನಡದಲ್ಲಿ ‘ನಮಸ್ಕಾರ’ಎಂದಳು.ನಾನು ವಿಚಾರಿಸಿದೆ, ವಿವಿ ವಿದ್ಯಾರ್ಥಿಗಳ ಕೋರಿಕೆ ಏನು, ಯಾಕೆ ಈ ಪ್ರತಿಭಟನೆ ಎಂದು. ಅವಳು ಕೊಟ್ಟ ವಿವರ ಕುರುಡು ಕಾಂಚಾಣದ ಸುಡು ಸುಡು ಪಂಜಿನ ಬೆಂಕಿಯ ಬಿಸಿ ಮುಟ್ಟಿಸಿತು.

ಮುಖ್ಯವಾಗಿ ಅವರ ಮೇಲೆ ಎರಡು ತುಳಿತಗಳು. ವಿದ್ಯಾರ್ಥಿಗಳ ಶುಲ್ಕವನ್ನು ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಏರಿಸಿದ್ದು ಒಂದು. ವಿದ್ಯಾರ್ಥಿಗಳ ಸ್ವಂತಿಕೆ , ಸ್ವಂತ ಓದಿನ ಮೂಲಕ ಸ್ವತಂತ್ರ ಚಿಂತನೆ ಬೆಳೆಸುವ ಅವಕಾಶವನ್ನು ಬದಲಿಸಿ, ಕೇವಲ ಪರೀಕ್ಷೆಗಳಿಗೆ ಸಿದ್ದತೆ ಮಾಡುವುದರಲ್ಲೇ ಪರ್ಯವಸಾನ ಆಗುವ ಶಿಕ್ಷಣ ವ್ಯವಸ್ಥೆಯನ್ನು ಹೊಸತಾಗಿ ಆರಂಭಿಸಿದ್ದು. ಹೀಗೆ ಆರ್ಥಿಕವಾಗಿ ದುರ್ಬಲವಾಗಿ ಪರಾವಂಬಿಗಳಾಗುವಂತೆ ಮಾಡುವುದು ಒಂದು ಕಡೆಯಾದರೆ ,ಇನ್ನೊಂದೆಡೆ ಬೌದ್ದಿಕವಾಗಿ ಬೆಳೆಯಲು ಅವಕಾಶ ಇಲ್ಲದಂತೆ ಮಾಡುವುದು. ಮೊದಲು ಒಂದು ಸೆಮೆಸ್ಟರಿಗೆ ನೂರ ಮೂವತ್ತು ಯೂರೋ ಶುಲ್ಕ ಇದ್ದರೆ , ಈಗ ಅದರ ಜೊತೆಗೆ ಐದು ನೂರು ಯೂರೋ ಹೆಚ್ಚಿಗೆ ಕಟ್ಟಬೇಕಂತೆ. ಸರಕಾರ ಶುಲ್ಕ ಪಾವತಿಗೆ ಸಹಾಯ ಮಾಡುವುದಿಲ್ಲವಂತೆ. ಈ ಶುಲ್ಕದ ಹಣ ಸಂಗ್ರಹಕ್ಕಾಗಿ ವಿದ್ಯಾರ್ಥಿಗಳು ಕೆಲಸ ಮಾಡಿಕೊಂಡು ಓದಲು ಸಮಯ ಸಿಗುತ್ತಿಲ್ಲವಂತೆ. ಅವರ ರಾಜ್ಯದ ಸಚಿವರೊಬ್ಬರು ಬಂದವರು, ನಮಗೆ ಹಣದ ಕೊರತೆ ಇದೆ, ಶುಲ್ಕ ಕಡಮೆ ಮಾಡಲು ಸಾಧ್ಯ ಇಲ್ಲ ಎಂದು ಹೇಳಿ ಹೋಗಿದ್ದಾರಂತೆ..ಹಾಗಾಗಿಯೇ ಅವರ ಪ್ರತಿಭಟನೆಯ ಬ್ಯಾನರಿನಲ್ಲಿ ಬರೆದ ಒಂದು ಘೋಷಣೆ ,’ಹಣಕ್ಕಾಗಿ ವಿದ್ಯೆಯನ್ನು ಮಾರಬೇಡಿ ‘ ವಿದ್ಯಾಥಿಗಳು ಸಚಿವರ ಮಾತುಗಳನ್ನು ನಂಬುವುದಿಲ್ಲ. ರಾಜಕಾರಣಿಗಳು ತಮ್ಮ ಖರ್ಚುವೆಚ್ಚ ಕಡಿಮೆ ಮಾಡುವುದಿಲ್ಲ,ಆದರೆ ವಿದ್ಯಾರ್ಥಿಗಳ ಮೇಲೆ ಹೊರಲಾರದ ಹೊರೆ ಹಾಕುತ್ತಾರೆ. ಹೆತ್ತವರ ಮೇಲೆ ಅವಲಂಬನೆ ಇಲ್ಲದ ಸ್ವಾಭಿಮಾನದಿಂದ ಕಲಿತು ಬದುಕು ಸಾಗಿಸಲು ಇನ್ನು ಸಾಧ್ಯವಿಲ್ಲ ಎನ್ನುವುದು ಅವರ ಅಳಲು, ಆಕ್ರೋಶ. ನಮ್ಮ ದೇಶದ ರಾಜಕಾರಣಿಗಳ ಅನುಕರಣೆಯನ್ನು ಈ ದೃಷ್ಟಿಯಲ್ಲಿ ಇವರೂ ಮಾಡುತ್ತಿದ್ದಾರಲ್ಲ ಅನ್ನಿಸಿತು.

ಸಾರಾಳನ್ನು ಬೀಳ್ಕೊಟ್ಟು ನನ್ನ ಎಂದಿನ ಸೂಪರ್ ಮಾರ್ಕೆಟ್ ಬಳಿ ಬಂದಾಗ ಕಣಕಣ ಸದ್ದು ಕೇಳಿಸಿತು. ಒಬ್ಬ ಮುದುಕ ಹಳೆಯ ಬಾಟಲಿಗಳ ಕಸದ ತೊಟ್ಟಿಯೊಳಗೆ ಕೈ ಹಾಕಿ ಪ್ರಯಾಸದಿಂದ ಒದ್ದಾಡುತ್ತಿದ್ದ. ಸಾಮಾನ್ಯವಾಗಿ ಹಳೆಯ ಬಾಟಲಿಗಳನ್ನು ಆ ತೊಟ್ಟಿಯಲ್ಲಿ ಹಾಕುವುದನ್ನು ಕಂಡಿದ್ದೆ. ಆದರೆ ಇವನು ಯಾಕೆ ಇಷ್ಟು ಒದ್ದಾಡುತ್ತಿದ್ದಾನೆ ನೋಡೋಣ ಎಂದು ಹತ್ತಿರ ಹೋದೆ. ಬೇರೆಯವರು ಎಸೆದ ಹಳೆಯ ಬಾಟಲಿಗಳನ್ನು ಈ ಮುದುಕ ಹೊರಗೆ ತೆಗೆದು ರಾಶಿ ಹಾಕಿದ್ದಾನೆ.ಈಗ ಇಲ್ಲಿ ಚಳಿಗಾಲದ ಒಳಗೆ ಮಳೆಗಾಲ. ಎರಡು ದಿನದಿಂದ ಹನಿ ಕಡಿಯದೆ ಮಳೆ. ‘ಏನಿದು ಹಳೆಯ ಬಾಟಲಿ ಎಲ್ಲಿಗೆ ‘ಎಂದೆ. ‘ಇಲ್ಲಿ ಅಂಗಡಿಯಲ್ಲಿ ಕೊಟ್ಟರೆ ಒಂದು ಬಾಟಲಿಗೆ ಎರಡು ಪೆನ್ನಿ ಕೊಡುತ್ತಾರೆ. ರಾತ್ರಿಗೆ ಬ್ರೆಡ್ ಇಲ್ಲ ಈ ಮಳೆ ಚಳಿಗೆ ಹೊಟ್ಟೆ ಕೇಳುತ್ತದೆಯೇ ?’ಎಂದ. ತಕ್ಷಣ ಇಂದಿನ ಕವನದ ಸಾಲು ನೆನಪಾಯಿತು: ‘ಬಡವರ ಒಡಲಿನ ಬಡಬಾನಲದಲ್ಲಿ ಸುಡು ಸುಡು ಪಂಜು ಕೈಯೋಳಗಿತ್ತೋ ‘

ಮಳೆ ಛಳಿಯ ಶೀತದ ನಡುವೆಯೂ ಒಡಲಿನ ಬಡಬಾನಳ ನೆನಪಾಗಿ ಕೋಣೆಗೆ ಬಂದೆ. ಕನ್ನಡದ ಹಾಡು ಕೇಳಿಯಾದರೂ ಮನಸ್ಸಿಗೆ ನೆಮ್ಮದಿ ದೊರೆಯಲಿ ಎಂದು ಎಂಪಿ ಮೂರರ ಮೇಲೆ ಕರ್ಸರ್ ಒತ್ತಿದರೆ, ಸಿ ಆಶ್ವಥ್ ದ್ವನಿ : ‘ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ,ಅಂಗಾತ ಬಿತ್ತೋ ,ಹೆಗಲಲಿ ಎತ್ತೋ

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

2 Responses to “ಹ್ಯಾಂಗಾರ ಕುಣಿಕುಣಿದು ಮಂಗಾಟ ನಡೆದಾಗ ,ಅಂಗಾತ ಬಿತ್ತೋ..,”

RSS Feed for ಬಿ ಎ ವಿವೇಕ ರೈ Comments RSS Feed

ಜರ್ಮನಿಯಲ್ಲಿ ಕನ್ನಡದ ವಿವೇಕ ಕಲಿಸುತ್ತಿರುವ ಮೇಸ್ಟ್ರೆ ನಮಸ್ಕಾರ,
ಬ್ಲಾಗ್ ಲೋಕಕ್ಕೆ ಸ್ವಾಗತ…
ಲೇಖನಗಳು ಚೆನ್ನಾಗಿ ಮೂದಿ ಬಂದಿವೆ…
ಇಲ್ಲಿ ಕುಳಿತು ಜರ್ಮನಿಯಲ್ಲೂ ಹಾರಾಡುತ್ತಿರುವ ಕನ್ನಡ ಬಾವುಟ ನೋಡುವ ಅವಕಾಶ ಸಿಕ್ಕಿದೆ… ಅಲ್ಲಿನ ವಿದ್ಯಾರ್ಥಿಗಳ ಕನ್ನಡ ಕಲಿಕೆಯ ಪರಿ ಗೊತ್ತಾಗುತ್ತಿದೆ…
ಜರ್ಮನಿಯಲ್ಲೂ ಕನ್ನಡ ಬೆಳಗಲಿ… ನಮ್ಮ ನೆನಪೂ ಇರಲಿ….

ವಿವೇಕ್ ಸರ್,

ನಿಮ್ಮ ಲೇಖನವನ್ನು ಆಗಾಗ ಅವಧಿಯಲ್ಲಿ ಓದುತ್ತಿರುತ್ತೇನೆ. ನೀವು ದೂರದ ಜರ್ಮನಿಯಲ್ಲಿದ್ದರೂ ಅಲ್ಲಿ ನಮ್ಮ ಕನ್ನಡ ಕಂಪನ್ನು ಹರಡುತ್ತಿರುವುದು ಖುಷಿಯ ವಿಚಾರ.

ಮತ್ತೆ ನಿಮ್ಮ ಇದೇ ಲೇಖನವನ್ನು ಈ ಬಾರಿಯ ಅವಧಿಯಲ್ಲಿ ನೋಡಿದಾಗ ನಿಮ್ಮ ಲೇಖನದ ಜೊತೆಗೆ ನಾನು ಉಡುಪಿಯ ಹಿನ್ನೀರಿಯನಲ್ಲಿ ಕ್ಲಿಕ್ಕಿಸಿದ “ಮೀನಿನ ಬಲೆ” ಚಿತ್ರವನ್ನು ಹಾಕಿದ್ದಾರೆ. ನೀವು ವಿವರಿಸಿದ “ರಂಪಣಿ ಬಲೆ” ಕ್ಲಿಕ್ಕಿಸಿದ್ದೆನಾದರೂ ಅದೇ ಇದು ಅಂತ ಗೊತ್ತಾಗಿರಲಿಲ್ಲ. ಮತ್ತೆ ಇದೇ ಮೀನಿನ ಬಲೆ ಚಿತ್ರ ನೀವಿರುವ ಜರ್ಮನಿಯಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದೆ ಸರ್.
ಒಟ್ಟಾರೆ ನಿಮ್ಮ ಲೇಖನದಲ್ಲಿ ನನ್ನ ಚಿತ್ರ ಜೊತೆಯಾಗಿದ್ದು ಖುಷಿ ಕೊಟ್ಟಿತು ಸಾರ್..

ಧನ್ಯವಾದಗಳು.


Where's The Comment Form?

Liked it here?
Why not try sites on the blogroll...

%d bloggers like this: