ಅಜ್ಜಿ ಕತೆ, ಅಡಗೂಲಜ್ಜಿ ಕತೆ, ಜನಪದ ಕತೆ

Posted on ಡಿಸೆಂಬರ್ 2, 2009. Filed under: Uncategorized |


ಎಂ ಎಸ್ ಮೂರ್ತಿ

ಕತೆ ,ಅಡಗೂಲಜ್ಜಿ ಕತೆ,ಜನಪದ ಕತೆ -ಹೀಗೆಲ್ಲಾ ಹೇಳುವ ಕತೆಗಳು ಇವತ್ತು ಆ ಕತೆಗಳ ಪಾತ್ರಗಳಂತೆ ಮಾಯವಾಗಿವೆ. ರಾಕ್ಷಸಿಯರು , ದೇವತೆಗಳು , ಮಾಂತ್ರಿಕರು ಎಲ್ಲೋ ಕಾಣದಾಗಿದ್ದಾರೆ-ಹೀಗೆಲ್ಲ ನಾವು ಜಾನಪದ ವಿದ್ವಾಂಸರು ತರಗತಿಯಲ್ಲಿ ಪಾಠ ಮಾಡುತ್ತಿದ್ದರೂ ,ಅವರು ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಇರುವುದು ಅನೇಕ ಬಾರಿ ನಮ್ಮ ಅರಿವಿಗೆ ಬರುವುದಿಲ್ಲ.

ಅಜ್ಜಿಕತೆ ಅಥವಾ ಜನಪದಕತೆಗಳ ಸಂಗ್ರಹದಲ್ಲಿ ಮೊದಲ ಮಹತ್ವದ ಸಂಗ್ರಹ ಆದದ್ದು ಜರ್ಮನಿಯಲ್ಲಿ. ಗ್ರಿಮ್ ಸಹೋದರರು ಎಂದು ಹೆಸರು ಪಡೆದ ಜಾಕಬ್ ಗ್ರಿಮ್ ಮತ್ತು ವಿಲಹೆಲ್ಮ್ ಗ್ರಿಮ್ ಬಹಳ ವರ್ಷಗಳ ಪರಿಶ್ರಮದಿಂದ 1812 ರಲ್ಲಿ ‘Childer’s and Household tales’ ಎಂಬ ಹೆಸರಿನಲ್ಲಿ ಜರ್ಮನ್ ಭಾಷೆಯಲ್ಲೇ ಪ್ರಕಟಿಸಿದರು.ಇದನ್ನು ತರಗತಿಯ ಪಾಠದಲ್ಲಿ ಅನೇಕಬಾರಿ ಬಳಸಿದ್ದೆ.ಆದರೆ ಆ ಕತೆಗಳ ಪಾತ್ರಗಳು ನನಗೆ ಮುಖಾಮುಖಿ ಆದದ್ದು ಮೊನ್ನೆ ಜರ್ಮನಿಯ ವೂರ್ಜಬರ್ಗಿಗೆ ಬಂದ ಹೊಸತರಲ್ಲಿ. ಇಲ್ಲಿನ ವಿದೇಶ ನೋಂದಣಿ ಕಛೇರಿಯಲ್ಲಿ ಎಲ್ಲ ವಿದೇಶಿಯರು ತಮ್ಮ ವಿವರ ನೊಂದಾಯಿಸಿಕೊಳ್ಳಬೇಕು. ಪ್ರೊ.ಬ್ರೂಕ್ನರ್ ಕೊಟ್ಟ ಮಾಹಿತಿಯಂತೆ ಇಲ್ಲಿನ ಸಣ್ಣ ಕಛೇರಿಯಲ್ಲಿ ಇಬ್ಬರೇ ಸಿಬ್ಬಂದಿ, ಇಬ್ಬರೂ ಹೆಂಗುಸರು. ಅವರಲ್ಲಿ ಒಬ್ಬಳು ರಾಕ್ಷಸಿ, ಇನ್ನೊಬ್ಬಳು ದೇವತೆಯಂತೆ. ರಾಕ್ಷಸಿಯ ಕೈಗೆ ಸಿಕ್ಕಿಬಿಟ್ಟರೆ ಬಿಡುಗಡೆ ಇಲ್ಲವಂತೆ. ಕೆಲಸ ಆಗದಿರುವುದಷ್ಟೇ ಅಲ್ಲ, ಸಂಕಷ್ಥ ಗಳನ್ನೂ ಅವಳು ತಂದೊಡ್ಡುತ್ತಾಳಂತೆ. ದೇವತೆ ಮೊದಲು ಪ್ರತ್ಯಕ್ಷಲಾದರೆ ಕೂಡಲೇ ವರ ದೊರೆಯುತ್ತದಂತೆ.

ನಾವಿಬ್ಬರೂ ಆತಂಕದಿಂದಲೇ ಒಂದು ದಿನ ಆ ಕಚೇರಿಗೆ ಹೋದೆವು. ಕೆಲವು ವಿದ್ಯಾರ್ಥಿಗಳು ಕಾಯುತ್ತಿದ್ದರು. ಒಮ್ಮೆ ಸ್ವರ್ಗದ ಬಾಗಿಲು ತೆರೆಯಿತು. ಕೆದರಿದ ಕೂದಲಿನ ದಡೂತಿ ಆಕಾರದ ಹೆಂಗುಸೊಬ್ಬಳು ಹೊರಗೆ ಬಂದಳು. ಹೇಳಬೇಕಾಗಿಯೇ ಇರಲಿಲ್ಲ, ಅವಳು ರಾಕ್ಷಸಿಯಾಗಿರಬೇಕೆಂದು. ನಾವು ಒಳಹೊಕ್ಕೆವು.ಒಳಗೆ ಇನ್ನೊಂದು ಕುರ್ಚಿಯಲ್ಲಿ ಇನ್ನೊಬ್ಬಳು ಕುಳಿತಿದ್ದಳು.ಅಚ್ಚುಕಟ್ಟಾಗಿ ತಲೆಬಾಚಿ ಸುಂದರ ಉಡುಗೆ ತೊಟ್ಟುಕೊಂಡು ನಗುಮುಖದಿಂದ ಕೆಲಸ ಮಾಡುತ್ತಿದ್ದಳು. ಆದರೆ ನಮ್ಮ ದುರದೃಷ್ಟಕ್ಕೆ ನಾವು ಸಿಕ್ಕಿಕೊಂದದ್ದು ರಾಕ್ಷಸಿಯ ಕೈಯಲ್ಲಿ. ಬ್ರೂಕ್ನರ್ ಅವಳಲ್ಲಿ ನನ್ನ ಬಗ್ಗೆ ಎಲ್ಲ ವಿವರಿಸಿದರು.ಆದರೆ ಅವಳು ಒಲಿಯುವ ಲಕ್ಷಣ ಕಾಣಲಿಲ್ಲ. ನಾಳೆ ಬರಬೇಕಾಗುತ್ತದೆ ಎಂದು ಹೇಳಿ, ವಿವರ ನೋಡಿ ನಾಳೆಯ ಸಮಯ ಇದೆಯೋ ಹೇಳುತ್ತೇನೆ ಎಂದು ನಮ್ಮನ್ನು ಹೊರಕ್ಕೆ ಕಳುಹಿಸಿದಳು.ಸ್ವರ್ಗ ಬಾಗಿಲು ಮುಚ್ಚಿತು.ನಾವು ಹೊರಗೆ ಕುಳಿತು ಕಾದೆವು. ನಾವು ಮಾತಾಡಿಕೊಂಡೆವು. ಒಂದೇಕೊಠಡಿಯಲ್ಲಿ ರಾಕ್ಷಸಿ ಮತ್ತು ದೇವತೆ ಹೇಗಿರುತ್ತಾರೆ ಎಂದು. ನಾನು ಅಂದುಕೊಂಡೆ , ಜನಪದ ಕತೆಗಳಲ್ಲಿ ರಾಕ್ಷಸಿ ಮತ್ತು ದೇವತೆ ಒಟ್ಟಿಗೆ ಇಲ್ಲದಿದ್ದರೆ ಕತೆಯೇ ಸಾಗುವುದಿಲ್ಲ. ಮುಂದೆ ತೆರೆಯುವ ಬಾಗಿಲು ಸ್ವರ್ಗದ್ದೆ ನರಕದ್ದೆ ಎಂದು ಆತಂಕದಿಂದ ಕಾಯುತ್ತಿರುವಾಗಲೇ ಬಾಗಿಲು ತೆರೆಯಿತು. ನಾನು ಕನ್ನುಮುಚ್ಚಿಕೊಂಡೆ. ನಮ್ಮ ಅಜ್ಜಿಕತೆಗಳಲ್ಲಿ ಓದಿದ ಹಾಗೆ ರಾಕ್ಷಸಿ ಬರುತಾಳೆ , ನನ್ನನ್ನು ಹಿಡಿದುಕೊಂಡು ಅವಳ ಗುಹೆಯೊಳಗೆ ಹಾಕುತ್ತಾಳೆ. ವೀಸಾ ಇಲ್ಲದಿದ್ದರೆ ಅಷ್ಟೇ ಹೋಯಿತು, ಬಿಡುಗಡೆಗಾಗಿ ಹಾತೊರೆದು ಬಂದ ನನಗೆ ಮತ್ತೆ ಬಂಧನದ ಕಷ್ಟವೇ ? ಹೀಗೆ ಕಣ್ಣು ಮುಚ್ಚಿ ಕುಳಿತಿರುವಾಗಲೇ ಸುಮಧುರ ಅಶರೀರ ವಾಣಿಯೊಂದು ಕೇಳಿಸಿತು.’ಒಳಗೆ ಬನ್ನಿ’ ಎಂದಿತು.ನಾನು ಕಣ್ಣು ತೆರೆದು ನೋಡುತ್ತೇನೆ, ದೇವತೆ ನಿಂತು ಕರೆಯುತ್ತಿದ್ದಾಳೆ. ಕೆಲವು ಕ್ಷಣಗಳ ಹಿಂದೆ ಕೊಠಡಿಯ ಒಳಗೆ ನಾನು ಕಂಡ ನಗುಮುಖದ ಹುಡುಗಿ ದೇವತೆಯಾಗಿ ಬಂದಿದ್ದಾಳೆ. ಒಳಗೆ ಹೋದಾಗ ರಾಕ್ಷಸಿ ಅಲ್ಲೇ ಇದ್ದಾಳೆ. ಅವಳನ್ನು ಧಿಕ್ಕರಿಸಿ ದೇವತೆಯಲ್ಲಿ ವರ ಕೇಳಿದೆವು. ನನಗೆ ಬೇಕಾಗಿದ್ದದ್ದು ಫೆಬ್ರವರಿ ೧೫ರ ವರೆಗೆ.ಆದರೆ ದೇವತೆ ಇನ್ನಷ್ಟು ತಿಂಗಳು ಈಗಲೇ ಕೊಡುತ್ತೇನೆ, ಇನ್ನೊಂದು ಬಾರಿ ಯಾಕೆ ಬರುತ್ತಿರಿ ಎಂದು ಐದು ನಿಮಿಷದೊಳಗೆ ಮುದ್ರೆ ಒತ್ತಿ ಸಹಿ ಹಾಕಿ ನನ್ನ ಕೈಗೆ ಕೊಟ್ಟಾಗ ಇದು ಕನಸೋ ಅಥವಾ ಕಥೆಯ ಒಳಗಿನ ಕತೆಯೋ ಗೊತ್ತಾಗಲಿಲ್ಲ.ಆಶ್ಚರ್ಯವೆಂದರೆ ರಾಕ್ಷಸಿ ಮೌನವಾಗಿ ಕುಳಿತಿದ್ದದ್ದು. ಎಲ್ಲ ಅಜ್ಜಿಕತೆಗಳಂತೆ ಇಲ್ಲೂ ಕತೆ ಸುಖವಾಗಿ ಅಂತ್ಯವಾಯಿತು.ಆದರೆ ರಾಕ್ಷಸಿ ಇನ್ನೂ ಜೀವಂತವಾಗಿ ಇದ್ದಾಳೆ. ಬಡಪಾಯಿಗಳು ಸಿಕ್ಕಿದರೆ ಖಂಡಿತ ಬಿಡಲಾರಳು. ಆದರೆ ದೇವತೆ ಅವಳ ಪಕ್ಕದಲ್ಲೇ ಸದಾ ಇರುತ್ತಾಳೆ ಎನ್ನುವುದೇ ಕತೆ ಸುಖಾಂತ್ಯ ಆಗುತ್ತದೆ ಎನ್ನುವ ಭರವಸೆ.

ಈ ಕತೆಯ ಆರಂಭ ಮಾತ್ರ ಅಜ್ಜಿಕತೆಗಳಿಗಿಂತ ಭಿನ್ನ. ಇದು ‘ಒಂದಾನೊಂದು ಕಾಲದಲ್ಲಿ ‘ಎಂದು ಆರಂಭ ಆಗುವುದಿಲ್ಲ. ಇದು ಇಂದಿನ ಕಾಲದ ಕತೆ. ಆದ್ದರಿಂದ . ‘ಇಂದಿನ ಕಾಲದಲ್ಲಿ ‘ಎಂದು ಆರಂಭ ಆಗಬೇಕು. ಆದರೆಎಲ್ಲ ಜನಪದ ಕತೆಗಳಂತೆಯೇ ಇದಕ್ಕೂ ದೇಶ ಕಾಲಗಳ ಎಲ್ಲೆಗಲಿಲ್ಲ

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

One Response to “ಅಜ್ಜಿ ಕತೆ, ಅಡಗೂಲಜ್ಜಿ ಕತೆ, ಜನಪದ ಕತೆ”

RSS Feed for ಬಿ ಎ ವಿವೇಕ ರೈ Comments RSS Feed

Sir this story really informs to the new visitors problems facing at abroad for registration. But one thing is all fingers are not same. Your goodness respects everywhere. Good luck sir.


Where's The Comment Form?

Liked it here?
Why not try sites on the blogroll...

%d bloggers like this: