ಒಂದು ‘ಕೋಟಿನ ಭಾನುವಾರ’

Posted on ನವೆಂಬರ್ 18, 2009. Filed under: Uncategorized |


ಮೊನ್ನೆ ರವಿವಾರ ವೂರ್ಜಬರ್ಗ್ ನಗರದಲ್ಲಿ ನಡೆದಾಡಿದರೆ ಆಶ್ಚರ್ಯ ಎಂದರೆ ಹೋಟೆಲ್ ಅಂಗಡಿಗಳೆಲ್ಲ ಬಾಗಿಲು ತೆರೆದು ಸ್ವಾಗತದ ನಗೆ ಬೀರುತ್ತಿವೆ.ಸದಾ ಮೌನ ಮುಗುದೆ ಆಗಿರುತ್ತಿದ್ದ ರವಿವಾರ ಮತ್ತು ಅದರ ಮುಸುಕಿನ ಒಳಗೆ ಮಲಗಿರುತ್ತಿದ್ದ ನಗರ ಇಂದೇನು ಮರೆತು ಬಾಗಿಲು ತೆರೆಯಿತೆ ಎಂದು ರವಿಯನ್ನೇ ಕೇಳೋಣವೆಂದರೆ ಆತ ಕುಲುಕುಲು ನಗುತ್ತಾ ತೇಲುವ ಬಿಳಿ ಸುಂದರಿಯರ ಸೆರಗಿನ ಹಿಂದೆ ಮರೆಯಾಗಿದ್ದ. ಬಟ್ಟೆಯ ಅಂಗಡಿಗಳಿಗೆಲ್ಲಾ ನೂಕುನುಗ್ಗಲು.ಅಂಗಡಿಗಳ ಒಳಗೆ ಹೊರಗೆ ಜಗಲಿಯಲ್ಲಿ ಮಹಡಿಯಲ್ಲಿ ಎಲ್ಲೆಲ್ಲು ನೇತುಹಾಕಿದ್ದಾರೆ ಕರಿಯ ಬಣ್ಣದ ಕೋಟುಗಳನ್ನು.ಆದಿನ ಚಳಿಗಾಲದ ಮೊದಲ ದಿನವಂತೆ.ಚಳಿ ಬಂದು ತಿಂಗಳೇ ಕಳೆದರೂ ಚಳಿಗಾಲಕ್ಕೆ ಒಂದು ಮುಹೂರ್ತ ಇದಬೇಕಲ್ಲ!ಅವರಿಗೆ ಆ ದಿನ ಚಳಿಗಾಲದ ತೋರಣ ನಾಂದಿ. ನಮ್ಮ ಕಡೆಯ ಯಕ್ಷಗಾನದ ಭಾಷೆಯಲ್ಲಾದರೆ ಅದು ‘ಸಭಾಲಕ್ಷಣ’

ಆದಿನ ಇಲ್ಲಿನವರಿಗೆ ‘ಕೋಟಿನ ಭಾನುವಾರ’.ನಮ್ಮಲ್ಲಿ ಹೊಸ ವರ್ಷಕ್ಕೆ ಹೊಸ ಬಟ್ಟೆ ಕೊಳ್ಳುವ ಸಂಭ್ರಮದಂತೆ ,ಇಲ್ಲಿ ಇವರಿಗೆ ಹೊಸ ಚಳಿಗಾಲಕ್ಕೆ ಹೊಸ ಕೋಟು ಕೊಳ್ಳುವ ಸಂಭ್ರಮ.

ಕೋಟು ಕೊಳ್ಳಲು, ಕೊಡಿಸಲು, ಚಾಚಿದ ತೋಳುಗಳಿದ್ದರೆ ತೊಡಿಸಲು ಎಲ್ಲೆಲ್ಲೂ ಸಡಗರ, ಆತುರ, ಕಾತರ. ಜೋಡಿಗಳು ಜೋಡಿ ಕೋಟು ಕೊಳ್ಳುವ, ಒಬರದ್ದನ್ನು ಇನ್ನೊಬ್ಬರು ತೊಟ್ಟುಕೊಂಡು, ನಕ್ಕು, ಒಮ್ಮೆ ಕೋಟನ್ನು, ಇನ್ನೊಮ್ಮೆ ತೊಟ್ಟವರನ್ನು ಮಗದೊಮ್ಮೆ ತೊಡಿಸಿದವರನ್ನು ಅಪ್ಪಿಕೊಂಡು, ಎಲ್ಲವೂ ಸರಿಯಾದ ಬಳಿಕವೇ ,ಅಂಗಡಿಯಿಂದ ಹೊರಬಂದಾಗ ,ಚಳಿರಾಯ ಹೆದರಿ ಪರಾರಿಯಿದ್ದ.

ಕೋಟಿನ ಭಾನುವಾರದ ದಿನದಿಂದ ಇಲ್ಲಿ ಒಂದು ಗಂಟೆ ಹೆಚ್ಚು ಎಂದರು.ಇಲ್ಲಿಗೆ ಬಂದ ಬಳಿಕ ನನ್ನ ವಾಚನ್ನು ಹಿಂದಕ್ಕೆ ಮುಂದಕ್ಕೆ ಇಟ್ಟೂ ಇಟ್ಟೂ, ನನಗೆ ಕಾಲದ ಲಾಭನಷ್ಟಗಳ ಲೆಕ್ಕ ಎಂದೋ ತಪ್ಪಿಹೋಗಿದೆ. ನನ್ನ ವಾಚು ಒಂದು ಸಮಯ, ಮೊಬೈಲ್ ಇನ್ನೊಂದು ಸಮಯ , ಲ್ಯಾಪ್ಟಾಪ್ ಮೂರನೆಯ ಸಮಯ ತೋರಿಸುತ್ತಿವೆ.ಆದರೆ ನಾನು ಈಗ ಸರ್ವತಂತ್ರ ಸ್ವತಂತ್ರ ಆದಕಾರಣ ನನ್ನದು ನಾಲ್ಕನೆಯ ಸಮಯ; ನಾಲ್ಕನೆಯ ಆಯಾಮ.ಮೊನ್ನೆ ಶನಿವಾರದವರೆಗೆ, ಇಲ್ಲಿಗೆ ಮತ್ತು ಊರಿಗೆ ಮೂರೂವರೆ ಗಂಟೆ ಹೆಚ್ಚು ಕಡಿಮೆ ಇದ್ದದ್ದು ಇನ್ನು ನಾಲ್ಕೂವರೆ ಗಂಟೆಯಂತೆ.ನಾನು,ಇಲ್ಲಿರುವ ನನ್ನ ಸುಮ್ಮನೆ ,ಮತ್ತೆ ಅಲ್ಲಿರುವ ನನ್ನ ಮನೆ -ಎಲ್ಲ ಅಲ್ಲಲ್ಲೇ ಇರುವಾಗ, ಮತ್ತೆ ಈ ಒಂದು ಗಂಟೆಯ ಲಾಭ ಯಾರಿಗೆ ಎಂದು ಗೊತ್ತಾಗಲಿಲ್ಲ. ಕೋಟಿನ ಅಂಗಡಿಯವರಿಗೋ? ಹೊಸ ಕೋಟು ತೊಟ್ಟುಕೊಂಡು ಚಳಿಯನ್ನು ಅಪ್ಪಿಕೊಂದವರಿಗೋ? ಹಳೆಯ ಕೋಟಿನಲ್ಲೇ ಒಂದು ಗಂಟೆ ಹೆಚ್ಚು ಹೊತ್ತು ಚಳಿಯ ಸುಖದ ಅಪ್ಪುಗೆಯವರದ್ದೋ?

ಸಂಜೆಯ ಹೊತ್ತು ನಗರ ಸಂಚಾರ ಮಾಡುತ್ತಾ, ಊರಿನಿಂದ ತಂಡ ನನ್ನ ಹಳೆಯ ಕೋಟಿನಲ್ಲೇ ಕುಳಿರ್ಗಾಳಿಯ ತಣ್ಣನೆಯ ಸೋಂಕಿಗೆ ಮೈನಿಮಿರಿಸುತ್ತಾ ,ಚರ್ಚಿನ ಗೋಪುರದ ಬಳಿಗೆ ಬಂದಾಗ ,ಗೋಪುರದ ಗಂಟೆ ಬಾರಿಸಿತು.ಡನಾ ಡನಾ ಡನಾ ಡನಾ ಡನಾ ಡನಾ ಡನಾ .ಹೌದು ಏಳು ಬಾರಿ.ಸಂಜೆ ಏಳರ ಹೊತ್ತು.ಹಳೆಯ ಕೋಟಿನ ಮುದುಕ ಸಿಕ್ಕಿದ. ಉಭಯ ಕುಶಲೋಪರಿ ವಿಚಾರಿಸಿದೆ.ಎಡ್ವರ್ಡ್ ಅವನ ಹೆಸರಂತೆ.ಅರುವತ್ತು ಕೋಟಿನ ಭಾನುವಾರಗಳನು ಕಂಡವನಂತೆ.’ಹೊಸತು ಕೋಟು ಕೊಳ್ಳಲಿಲ್ಲವೇ ಎಡ್ವರ್ಡ್ ‘ಎಂದು ಕೇಳಿದೆ.’ಹೊಸತು ಯಾವುದಿದೆ ಹೇಳಿ ‘ಎಂದ.’ಕೋಟು? ಗಂಟೆ?’ಎಂದೆ.’ಕೋಟು ಹೊಸತೇ ,ಪೌಲಿನ್ ಈ ಕೋಟು ಕೊಡಿಸಿದಾಗ ಇದು ಹೊಸದೇ.ಮತ್ತೆ ಅವಳು ಬೇರೆ ಕೋಟು ಕೊಂಡಳು.ನಾನು ಕೋಟು ಬದಲಿಸಲಿಲ್ಲ.ನನಗೆ ಇದು ಈಗಲೂ ಹೊಸತೇ.ಇವತ್ತು ಕೋಟು ಕೊಂಡವರ ಕೋಟು ಮಾತ್ರ ನೋಡಬೇಡಿ, ಕೋಟಿನೊಳಗೆ ಅಂಗಿ ಎಷ್ಟು ಹರಿದಿದೆ ನೋಡಿ.ನನ್ನ ಕೋಟು ಹರಿದಿದೆ, ಆದರೆ ಅಂಗಿ ಹರಿದಿಲ್ಲ ಎಂದ.’

ಕೊರೆವ ಚಳಿಯಲ್ಲಿ ಬೆವರತೊಡಗಿದೆ ನಾನು.

‘ಎಡ್ವರ್ಡ್ ,ಗಂಟೆ ಎಷ್ಟಾಯಿತು?’ ಕೇಳಿದೆ ,ಆತಂಕ ಗೊಂದಲದಲ್ಲಿದ್ದೆ ನಾನು.

‘ಗಂಟೆ ಎಷ್ಟಾಯಿತೆಂದು ಕೇಳಿದರೆ ಏನ ಹೇಳಲಿ ನಾನು ? ನಾನು ಹೊಡೆದಷ್ಟೇ ಗಂಟೆ!’ಎಂದ.

ಕೆ.ಎಸ್. ನರಸಿಂಹಸ್ವಾಮಿ ಕವನ ನೆನಪಾಗಿ ಗಡಿಯಾರದಂಗಡಿಯ ಮುಂದೆ ನಿಂತ ಬೆದರಿದ ಕುದುರೆಯಾಗಬಾರದೆಂದು ಹೆದರಿ ಕಾಲವನ್ನು ಮೀರಿ ಕಾಲು ಹಾಕಿದೆ.

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

Liked it here?
Why not try sites on the blogroll...

%d bloggers like this: