‘ವಿಜಯ ಕರ್ನಾಟಕ’ದಲ್ಲಿ ನನ್ನ ಲೇಖನ

Posted on ನವೆಂಬರ್ 1, 2009. Filed under: Uncategorized |


ಜರ್ಮನಿಯಲ್ಲಿ ಕನ್ನಡ ದ ಕೆಲಸಕ್ಕೆ ಹೊರಟು ನಿಂತಾಗ ಇನ್ನೇನು ರಾಜ್ಯೋತ್ಸವ ಬೆನ್ನ ಹಿಂದಿದೆ ಎಂಬುದು ನೆನಪಿರಲಿಲ್ಲ. ಆ ನೆನಪು ಮಾಡಿದ್ದು ವಿಜಯ ಕರ್ನಾಟಕ. ರಾಜ್ಯೋತ್ಸವದ ಅಂಗವಾಗಿ ಜರ್ಮನಿಯಲ್ಲಿ ಕನ್ನಡದ ಕಲರವದ ಬಗ್ಗೆ ಲೇಖನ ಕೊಡುವಂತೆ ಕೇಳಿದರು. ವಿಜಯ ಕರ್ನಾಟಕದ ಸಂಪಾದಕರಾದ ವಿಶ್ವೇಶ್ವರ ಭಟ್ ಹಾಗೂ ಸಾಪ್ತಾಹಿಕದ ವಿ ಎನ್ ವೆಂಕಟಲಕ್ಷ್ಮಿ ಅವರಿಗೆ ನನ್ನ ವಂದನೆಗಳು.

ಅಲ್ಲಿ ಹೋಗಿ ಬರೆಯುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಜಿ ಎನ್ ಮೋಹನ್ ಬೆಂಗಳೂರಿನಿಂದಲೇ ನನಗೆ ಮೇಲ್ ಮೂಲಕ ಯೂನಿಕೋಡ್ ನಲ್ಲಿ ಕನ್ನಡ ಬರೆಯುವುದನ್ನು ಕಲಿಸಿಕೊಟ್ಟರು. ಎಂ ಬೈರೇಗೌಡ ಅವರು ನನ್ನ ‘ಗಿಳಿಸೂವೆ’ ಅಂಕಣ ಬರಹಗಳನ್ನು ಮತ್ತೆ ಓದಲು ಸಿಗುವಂತೆ ವ್ಯವಸ್ಥೆ ಮಾಡಿದರು. ಮೇಫ್ಲವರ್ ಮೀಡಿಯಾ ಹೌಸ್ ನವರು ಜರ್ಮನಿಯಲ್ಲಿ ಸಿದ್ಧಲಿಂಗಯ್ಯ ನವರ ‘ಸಾವಿರಾರು ನದಿಗಳು’ ಕವನದ ಪಾಠ ಮಾಡಲು ಬೇಕಾದ ಆಡಿಯೋ ಕಳಿಸಿಕೊಟ್ಟರು. ಹೀಗೆ ಈ ಎಲ್ಲಾ ಕಾರಣಗಳಿಂದ ಈ ಲೇಖನ ಮೂಡಿ ಬಂದಿದೆ.

ಇಷ್ಟು ದಿನ ವಿಶ್ಲೇಷಣಾತ್ಮಕ ಒಳನೋಟಗಳ ಬರಹಗಳಲ್ಲಿ ತೊಡಗಿಸಿಕೊಂಡಿದ್ದ ನಾನು ಒಂದಿಷ್ಟು ಬೇರೆ ಶೈಲಿಯನ್ನು ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೇನೆ. ಭಾಷೆಗಿರುವ ಅನಂತ ಸಾಧ್ಯತೆಗಳನ್ನು ಅರಿಯುವ ನಿಟ್ಟಿನಲ್ಲಿ ಪುಟ್ಟ ಪ್ರಯತ್ನ ಇದು. ಹಾಗಾಗಿಯೇ ಡೈರಿ ರೂಪದಲ್ಲಿ ನೆನಪುಗಳನ್ನು ಮೆಲುಕು ಹಾಕುವ ಲೇಖನಕ್ಕೆ ವಿಜಯ ಕರ್ನಾಟಕದ ಈ ಲೇಖನ ಇಂಬುಗೊಟ್ಟಿದೆ ಎಂದೇ ಹೇಳಬಹುದು. ಆ ಕಾರಣಕ್ಕಾಗಿ ಎಲ್ಲರಿಗೂ ವಂದನೆ

-ವಿವೇಕ

20091101sA001101005

ಬೆಂಗಳೂರಿನಲ್ಲಿ ಗೆಳೆಯರಿಂದ ಬೀಳ್ಕೊಂಡಾಗ ಇನ್ನೂ ದೀಪಾವಳಿಗೆ ತೆರೆ ಬಿದ್ದಿರಲಿಲ್ಲ. ಎತ್ತ ನೋಡಿದರೂ ದೀಪಗಳ ಸಾಲು ಸಾಲು. ಅಲ್ಲಿಂದ ಹಾರಿ ಫ್ರಾಂಕ್ ಫರ್ಟ್ ಗೆ ಬಂದಿಳಿದಾಗ ಇಲ್ಲಿಯೂ ದೀಪಾವಳಿಯೇ ಎಂದು ಒಂದು ಕ್ಷಣ ಆಶ್ಚರ್ಯವಾಯ್ತು!. ಎಲ್ಲಿ ಕಣ್ಣು ಹಾಯಿಸಿದರೂ ಬೆಳಕಿನ ಚುಕ್ಕಿಗಳು. ನಾನಾ ದೇಶಗಳಿಂದ ಜರ್ಮನಿಯ ಫ್ರಾಂಕ್ ಫರ್ಟ್ ಗೆ ಬಂದಿಳಿಯುವ ಸಾವಿರಾರು ವಿಮಾನಗಳು ಇಲ್ಲಿ ಒಂದು ಮಿನಿ ಜಗತ್ತನ್ನೇ ಸೃಷ್ಟಿಸಿಬಿಡುತ್ತದೆ. ಎಲ್ಲಾ ದೇಶ, ಎಲ್ಲಾ ಭಾಷೆ ಇಲ್ಲಿ ಒಂದು ಕ್ಷಣ ನೆಲೆ ನಿಲ್ಲಲೇಬೇಕು. ಮಂಗಳೂರು-ಹಂಪಿ-ಮೈಸೂರಿನಿಂದ ಈಗ ಜರ್ಮನಿಗೆ ಬಂದಿದ್ದ ನಾನೂ ಸಹಾ ಕನ್ನಡದ ಉತ್ಸಾಹವನ್ನು ಹೊತ್ತು ತಂದಿದ್ದೆ. ಪ್ರೊ ಹೈದ್ರೂನ್ ಬ್ರೂಕ್ನರ್ ಬಂದು ಹೆಗಲು ಮುಟ್ಟಿ ಶುದ್ಧ ಕನ್ನಡದಲ್ಲಿ ‘ನಮಸ್ಕಾರ’ ಎಂದಾಗ ಜರ್ಮನಿಯಲ್ಲಿ ಕನ್ನಡಕ್ಕೇನು ಕೆಲಸ? ಎನಿಸಲಿಲ್ಲ. ಇಲ್ಲಿ ಕನ್ನಡ ಎನ್ನುವುದು ಬರೀ ನವೆಂಬರ್ ನ ಉತ್ಸಾಹ ಮಾತ್ರ ಅಲ್ಲ. ಕನ್ನಡವನ್ನು ನೋಡುವ, ಆಡಲು ಕಲಿಯುವ, ಬರೆಯಲು ತಿದ್ದುವ, ಮಾತನಾಡುವುದನ್ನು ಕೇಳುವ, ಇನ್ನೂ ಮುಂದಕ್ಕೆ ಹೋಗಿ ಕನ್ನಡದ ಕಥೆ, ಕಾದಂಬರಿ ಓದುವ, ಕನ್ನಡದ ತಾಳೆಗರಿಯತ್ತಲೂ ಕಣ್ಣು ಹಾಯಿಸುವ, ‘ಕನ್ನಡವೆನೆ ಕುಣಿದಾಡುವುದೆನ್ನೆದೆ, ಕನ್ನಡವೆನೆ ಕಿವಿ ನಿಮಿರುವುದು’ ಎಂಬ ಮನಸ್ಸುಗಳು ಇವೆ.

ಬ್ರೂಕ್ನರ್ ಗೆ ಕನ್ನಡ ಎನ್ನುವುದು ನೀರು ಕುಡಿದಷ್ಟೇ ಸಲೀಸು. ಕನ್ನಡಿಗರಿಗೂ ಕನ್ನಡದ ಪಾಠ ಹೇಳಿಕೊಡುವಷ್ಟು ಅದ್ಯಯನ ನಡೆಸಿದ್ದಾರೆ. ಕಳೆದ ೩೦ ವರ್ಷಗಳಿಂದಲೂ ಕನ್ನಡದ ಮೋಹಕ್ಕೆ ಬಿದ್ದಿರುವ ಬ್ರೂಕ್ನರ್ ಅವರಿಗೆ ಮಂಗಳೂರು- ಹಂಪಿ ವಿ ವಿ, ಉಡುಪಿಯ ಜಾನಪದ ಕಲೆಗಳ ಅಧ್ಯಯನ ಕೇಂದ್ರ, ಮೈಸೂರಿನ ಧ್ವನ್ಯಾಲೋಕ, ಸಿ ಐ ಐ ಎಲ್ ಎಲ್ಲವೂ ಇವರಿಗೆ ಜರ್ಮನಿಯ ಭಾಗವೇನೋ ಎನ್ನುವಷ್ಟು ಸುಪರಿಚಿತ. ತಾವು ಮಾತ್ರವಲ್ಲ ತಮ್ಮ ಜರ್ಮನ್ ವಿದ್ಯಾರ್ಥಿಗಳ ದಂಡನ್ನೂ ಕಟ್ಟಿಕೊಂಡು ಓಡಾಡಿದ್ದಾರೆ.

ಜರ್ಮನಿ ಯ ದೊಡ್ಡ ರಾಜ್ಯ ಬವೇರಿಯಾ. ಬವೇರಿಯಾ ವಿಶ್ವವಿದ್ಯಾಲಯಗಳಿಗೆ ಹೆಸರುವಾಸಿ. ಇಲ್ಲಿನ ವೂರ್ಜ್ ಬರ್ಗ್ ಗೆ ನಾನು ಕಾಲಿಟ್ಟಾಗ ಚಳಿ ಸೊನ್ನೆಯಿಂದ ಸೊನ್ನೆಗೆ ಪಯಣ ಆರಂಭಿಸಿತ್ತು ಮಾಯಿನ್ ನದಿ ನಗರವನ್ನು ಇಬ್ಬಾಗ ಮಾಡುತ್ತಾ ಹರಿಯುತ್ತದೆ. ಇಲ್ಲಿನ ಕೋಟೆ ವೂರ್ಜ್ ಬರ್ಗ್ ನ ಹೆಗ್ಗುರುತು. ನನ್ನ ಅತಿಥಿ ಗೃಹದ ೯ ನೇ ಮಹಡಿಯಿಂದ ನನ್ನ ‘ಇರುಳ ಕಣ್ಣು’ ಹಾಯಿಸಿದೆ. ಇಡೀ ವೂರ್ಜ್ ಬರ್ಗ್ ನಗರ ಚಳಿಯಿಂದ ಗಡ ಗಡ ನಡುಗುತ್ತಾ ನಿಂತಿದೆಯೇನೋ ಅನಿಸುತ್ತಿತ್ತು. ದಟ್ಟವಾಗಿ ಕವಿದ ಮಂಜಿನ ಮಧ್ಯೆ ಕೋಟೆಯ ಬುರುಜು ಮಾತ್ರ ಹೊರ ಚಾಚಿಕೊಂಡಿರುವುದನ್ನು ನೋಡುವುದೇ ಖುಷಿ. ಬೆಳಗ್ಗೆ ಇನ್ನೂ ಏಳು ಗಂಟೆಯಾಗಿಲ್ಲ. ಆಗಲೇ ವೂರ್ಜ್ ಬರ್ಗ್ ನ ಈ ವಿಶ್ವವಿದ್ಯಾಲಯಕ್ಕೆ ಜೀವ ಬಂದು ಬಿಟ್ಟಿದೆ. 1.30 ಲಕ್ಷ ಜನಸಂಖ್ಯೆಯ ವೂರ್ಜಬರ್ಗ್ ನಲ್ಲಿ ಯೂನಿವರ್ಸಿಟಿ ವಿಧ್ಯಾರ್ಥಿಗಳ ಸಂಖ್ಯೆಯೇ ೨೧ ಸಾವಿರ. ವಿವಿಯ ಸಿಬ್ಬಂದಿ ೧೦ ಸಾವಿರ. ಇವರಲ್ಲಿ ೪೦೦ ಪ್ರಾಧ್ಯಾಪಕರ ಸಹಿತ ೩ ಸಾವಿರ ಮಂದಿ ಶೈಕ್ಷಣಿಕ ಸಿಬ್ಬಂದಿ.

ಇಲ್ಲಿ ಕನ್ನಡ ಅಧ್ಯಯನ ಒಂದು ಭಾಗವಾಗಿರುವ ಇಂಡಾಲಜಿ ವಿಭಾಗ ಇರುವುದು ಬೆಟ್ಟದ ಮೇಲೆ. ದಿನಾ ಮುಳ್ಳಯ್ಯನ ಗಿರಿಯನ್ನು ಏರಿದ ಅನುಭವ. ಸಾಂಕೇತಿಕ ಎನ್ನುವಂತೆ ವಿವಿಯ ಮಾನವಿಕ, ಸಾಮಾಜಿಕ ಫ್ಯಾಕಲ್ಟಿಗಳು, ವಿಶಾಲ ಗ್ರಂಥಾಲಯ ಎಲ್ಲ ಬೆಟ್ಟದ ತುದಿಯಲ್ಲಿವೆ. ನಾನೇರುವೆತ್ತರಕೆ ನೀನೇರಬಲ್ಲೆಯಾ? ಎನ್ನುವ ಸವಾಲು. ನಾನು ದೀರ್ಘ ರಜೆಯ ನಂತರ ವಿಶ್ವವಿದ್ಯಾಲಯ ಬಾಗಿಲು ತೆರೆಯುವ ಸಮಯಕ್ಕೆ ಸರಿಯಾಗಿ ಇಲ್ಲಿದ್ದೇನೆ. ಇಲ್ಲಿ ವಿದ್ಯಾರ್ಥಿ ಯಾವ ವಿಷಯ ಆರಿಸಿಕೊಳ್ಳಬೇಕು ಏನ್ನುವ ಪ್ರಕ್ರಿಯೆಯೇ ಕುತೂಹಲಕರವಾಗಿದೆ. ಅದು ಪಕ್ಕಾ ನಮ್ಮ ‘ಸ್ವಯಂವರ’ದ ಹಾಗೇ. ಒಂದು ಹಾಲ್ ನಲ್ಲಿ ವಿದ್ಯಾರ್ಥಿಗಳು ನೆರೆದಿರುತ್ತಾರೆ. ಇಂಡಾಲಜಿ ವಿಭಾಗ ನೀಡುವ ಕೋರ್ಸ್ ಗಳ ಬಗ್ಗೆ ಮೊದಲು ವಿವರಣೆ. ನಂತರ ವಿದ್ಯಾರ್ಥಿಗಳು ತಮಗೆ ಬೇಕಾದ ವಿಷಯಕ್ಕೆ ‘ಮಾಲೆ’ ಹಾಕುತ್ತಾ ಹೋಗುತ್ತಾರೆ. ಎಲ್ಲಾ ವಿವರಣೆ ಜರ್ಮನ್ ನಲ್ಲಿ ನಡೆಯುತ್ತಿತ್ತು. ಕನ್ನಡದ ವಿಷಯ ಬಂದಾಗ ನಾನು ಅನಿವಾರ್ಯವಾಗಿ ಇಂಗ್ಲಿಷ್ ಗೆ ಹೊರಳಿದೆ. ಜರ್ಮನ್ ವಿದ್ಯಾರ್ಥಿಗಳು- ಕನ್ನಡ ಅದ್ಯಯನ!. ಕೆಲವರು ಕನ್ನಡ ಕಲಿಯಲು ಕೈ ಎತ್ತಿದರು.ಅವರ ಕೈ ಕಲ್ಪವೃಕ್ಷ ಆಗಲಿ ಅಂದುಕೊಂಡೆ.

ಕನ್ನಡವನ್ನು ಹೊಸತಾಗಿ ಕಲಿಯುವ ತಂಡ ಒಂದನೆಯದು. ಈಗಾಗಲೇ ಕನ್ನಡ ಕಲಿತು ೪ನೇ ಸೆಮಿಸ್ಟರ್ ನಲ್ಲಿ ಕನ್ನಡ ಕಲಿಯುವ ತಂಡ ಎರಡನೆಯದು. ಕನ್ನಡ ಓದಲು ಬರೆಯಲು ಅಭ್ಯಾಸ ಆಗಿ ಕಥೆಯಂತಹ ಸಾಹಿತ್ಯ ಓದಲು ತೊಡಗಿರುವ ತಂಡ ಮೂರನೆಯದು.. ಈ ಎಲ್ಲದರ ಜೊತೆಗೆ ಕರ್ನಾಟಕ ಅಧ್ಯಯನ ಹೊಸತಾಗಿ ಆರಂಭಿಸಿದ್ದೇವೆ. ಈ ಬಗ್ಗೆ ಆಸಕ್ತರ ಸಭೆ ಕರೆದಿದ್ದೇವೆ. ಕನ್ನಡದ ಮೊದಲ ತಂಡಕ್ಕೆ ಎಂಟು, ಪ್ರೌಢರ ಎರಡನೆಯ ಗುಂಪಿಗೆ ಐದು, ಕನ್ನಡ ಜಾಣರ ಮೂರನೆಯ ಟೀಮಿಗೆ ಐದು ಮಂದಿ ಸೇರಿದ್ದಾರೆ. ಕನ್ನಡವನ್ನು ಹೊಸ ತಂಡದ ಕಿವಿಗೆ ಕೇಳಿಸುವ ನನ್ನ ಕೆಲಸ ಆರಂಭವಾಯಿತು. ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಲಿಂಗದೇವರು ಹಳೆಮನೆ ಸಿದ್ಧಪಡಿಸಿದ ‘ಭಾಷಾ ಮಂದಾಕಿನಿ’ ಯೋಜನೆಯ ‘ದ್ರಾವಿಡ ಭಾಷೆಗಳಲ್ಲಿ ಕನ್ನಡ ಭಾಷೆ’ ಡಿವಿಡಿ ತೋರಿಸಿದೆ. ಬಳಿಕ ಸರಳ ಮಾತುಕತೆ ಆರಂಭವಾಯಿತು. ಒಂದೂವರೆ ಗಂಟೆಯ ಬಳಿಕ ಅವರಿಗೆಲ್ಲ ‘ನಾನು ಯಾರು ‘ನೀನು ಯಾರು’ ‘ಅವನು ಮತ್ತು ಅವಳು ಯಾರು’ ಎಂದು ಗೊತ್ತಾಯಿತು. ಅವರೆಲ್ಲ ಕನ್ನಡದಲ್ಲಿ ನಾಲ್ಕು ಮಾತನ್ನು ನವಂಬರ್ ಒಂದರ ಮೊದಲೇ ಆಡಿದರು ಮತ್ತು ನವಂಬರ್ ಬಳಿಕವೂ ಆಡುವ ವಿಶ್ವಾಸ ನೀಡಿದರು.

20091101s_002101001ನನಗೂ ಜರ್ಮನಿಗೂ ಒಂದು ನಂಟಿದೆ. ಅದು ‘ಮಂಗಳೂರು ಸಮಾಚಾರ’. ಕನ್ನಡದ ಮೊದಲ ಪತ್ರಿಕೆಯ ಊರಿನಿಂದ ಬಂದವನು ನಾನು ಹಾಗಾಗಿ ಇಲ್ಲಿ ಅದೇ ನನ್ನ ಪಾಸ್ ಪೋರ್ಟ್ ಕೂಡಾ. ಕನ್ನಡವನ್ನು ಕಟ್ಟಿದ ಹರ್ಮನ್ ಮೊಗ್ಲಿಂಗ್, ರೆವರೆಂಡ್ ಕಿಟ್ಟೆಲ್ ಜರ್ಮನಿಯವರಾದ್ದರಿಂದ ಜರ್ಮನಿಯ ನೆಲದಲ್ಲಿ ನಾನು ಪರಕೀಯನಲ್ಲವೇ ಅಲ್ಲ. ಜರ್ಮನಿಯ ಹಲವು ವಿಶ್ವವಿದ್ಯಾಲಯಗಳು ಕನ್ನಡವನ್ನು ಪ್ರೀತಿಯಿಂದ ನೋಡಿಕೊಂಡಿವೆ. ಇಲ್ಲಿನ ವಿಶ್ವವಿದ್ಯಾಲಯಗಳು ಅನಂತಮೂರ್ತಿಯವರ ಸಂಸ್ಕಾರ, ಘಟಶ್ರಾದ್ಧ ಸಿನೆಮಾ ನೋಡಿವೆ. ಕಾರ್ನಾಡರ ಚಲುವಿ ಸಿನೆಮಾ ಜರ್ಮನ್ ವಿದ್ಯಾರ್ಥಿಗಳ ಮಥನಕ್ಕೆ ಸಿಕ್ಕಿದೆ. ಹಯವದನ, ನಾಗ ಮಂಡಲ ನಾಟಕಗಳನ್ನು ವಿಜಯ್ ಮೆಹ್ತಾ ಜರ್ಮನ್ ಭಾಷೆಯಲ್ಲಿಯೇ ಪ್ರದರ್ಶಿಸಿದ್ದಾರೆ. ನೀನಾಸಂನ ಭಾಸ ಭಾರತ, ತುಕ್ರನ ಕನಸು ನಾಟಕದ ವಿಡಿಯೋ ರೆಕಾರ್ಡಿಂಗ್ ಇಲ್ಲಿ ಲಭ್ಯ. ಯಕ್ಷಗಾನ ಇಲ್ಲಿನ ವಿದ್ಯಾರ್ಥಿಗಳಿಗೆ ಅಪರಿಚಿತವಲ್ಲ. ಎ ಕೆ ರಾಮಾನುಜನ್ ವಚನಗಳ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಾರೆ. ಯು ಆರ್ ಅನಂತಮೂರ್ತಿಯವರು ತಮ್ಮ ಕಥೆ ಕಾದಂಬರಿಗಳನ್ನು ಚರ್ಚಿಸಿದ್ದಾರೆ. ಕನ್ನಡ ಸಾಹಿತ್ಯದ ಬಗ್ಗೆ ಉಪನ್ಯಾಸ ಕೊಟ್ಟಿದ್ದಾರೆ. ವಸಹತೀಕರಣ ಹಾಗೂ ಕನ್ನಡ ಸಾಹಿತ್ಯದ ಸಂಬಂಧವನ್ನು ಬಿಡಿಸಿಟ್ಟಿದ್ದಾರೆ. ೨೦ ವರ್ಷಗಳ ಹಿಂದೆ ನಾನು ಟ್ಯೂಬಿಂಗನ್ ಗೆ ಭೇಟಿ ಕೊಟ್ಟಾಗ ಆದ ಅಚ್ಚರಿ ಇನ್ನೂ ನನ್ನೊಳಗೆ ನೆನಪಾಗಿ ಉಳಿದಿದೆ. ಇಲ್ಲಿನ ಗ್ರಂಥಾಲಯದಲ್ಲಿ ಹಸ್ತಪ್ರತಿಗಳನ್ನು ನೋಡುತ್ತಾ ಇದ್ದೆ. ಆಗ ‘ದೈವ ಹುಟ್ಟು’ ಎಂಬ ಕನ್ನಡ ಲಿಪಿಯಲ್ಲಿದ್ದ ತುಳು ಪಾಡ್ದನಗಳ ಹಸ್ತಪ್ರತಿ ಕಾಣಿಸಿತು. ವಿಚಾರ ಸಂಕಿರಣವೊಂದರಲ್ಲಿ ಭಾಗವಹಿಸಲು ಜರ್ಮನಿಗೆ ಬಂದಿದ್ದ ನಾನು ನಿರಂತರವಾಗಿ ಜರ್ಮನಿಯ ಜೊತೆ ಸಂಬಂಧ ಮುಂದುವರೆಸಿಕೊಳ್ಳಲು ಕಾರಣವಾಗಿದ್ದು ಈ ಘಟನೆ.

ಪ್ರೊ ಹೈದ್ರೂನ್ ಬ್ರೂಕ್ನರ್ ಅವರಂತೂ ಜರ್ಮನಿ ಹಾಗೂ ಕನ್ನಡದ ಅನಧಿಕೃತ ರಾಯಭಾರಿ. ಭಾರತಕ್ಕೆ ಬಂದು ಸಂಸ್ಕೃತದಲ್ಲಿ ಪಿ ಎಚ್ ಡಿ ಮಾಡಿ, ತುಳು ಪಾಡ್ದನಗಳನ್ನು ಸಂಗ್ರಹ ಮಾಡಿದವರು. ಕನ್ನಡಕ್ಕೆ ಸಂಬಂಧಿಸಿದ ಅಮೂಲ್ಯವಾದ ಖಾಸಗಿ ಸಂಗ್ರಹವನ್ನೂ ಹೊಂದಿದ್ದಾರೆ. ಜರ್ಮನಿಯ ಇಂಡಾಲಜಿ ವಿಭಾಗಗಳಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಲು ಅವಕಾಶ ಸಿಕ್ಕಿದ್ದೇ ಬ್ರೂಕ್ನರ್ ಹಾಗೂ ಅವರಂತಹವರ ಆಸಕ್ತಿಯಿಂದ. ವಿದ್ಯಾರ್ಥಿಗಳಲ್ಲದ ಜರ್ಮನಿಗರಿಗೂ ಕನ್ನಡದ ಕ್ಲಾಸ್ ನಡೆಸುತ್ತಾರೆ. ಇವರ ಒತ್ತಾಸೆಯಿಂದಾಗಿಯೇ ಇಲ್ಲಿ ಪಂಪ, ಕುಮಾರವ್ಯಾಸ, ರಾಘವಾಂಕ, ಹರಿಹರ, ಲಕ್ಷ್ಮೀಶ, ವಚನಕಾರರು, ಹರಿದಾಸರು ಜರ್ಮನಿಯ ನೆಲದಲ್ಲಿ ನಡೆದಾದುವಂತಾಗಿದೆ. ಹೈಡಲ್ ಬರ್ಗ್ ನ ಸೌತ್ ಏಷ್ಯಾ ಇನ್ಸ್ಟಿಟ್ಯೂಟ್ ನ ಇಂಡಾಲಜಿ ವಿಭಾಗದಲ್ಲಿ ದಕ್ಷಿಣ ಕನ್ನಡದ ಡಾ.ಕೋಟ ಪರಮೇಶ್ವರ ಐತಾಳರು ಕನ್ನಡ ಭೋದಿಸಿದ್ದಾರೆ. ಇದಲ್ಲದೆ ಕನ್ನಡದ ಮಹತ್ವದ್ದನ್ನು ಜರ್ಮನಿಗೆ ಅನುವಾದಿಸಿದ್ದಾರೆ.

ವೂರ್ಜ್ ಬರ್ಗ್ ನಲ್ಲಿ ಇಂಡಾಲಜಿ ವಿಭಾಗ ಆರಂಭವಾದದ್ದು ೨೦೦೧ರಲ್ಲಿ. ಬ್ರೂಕ್ನರ್, ಡಾ.ಅಣ್ಣಾ ಆರೀಲಿಯ ಎಸ್ಪೋತೋ, ಅನಂತಮೂರ್ತಿ, ನಾನು, ಕೆ ಚಿನ್ನಪ್ಪ ಗೌಡ, ಪೀಟರ್ ಕ್ಲಾಸ್,  ಲಿಂಗದೇವರು ಹಳೆಮನೆ, ಶಂಬುಲಿಂಗ, ಎಸ್.ಎ ಕೃಷ್ಣಯ್ಯ ಕನ್ನಡ, ಕನ್ನಡ ಅಧ್ಯಯನ, ಜಾನಪದದ ಬಗ್ಗೆ ಉಪನ್ಯಾಸ ಕೊಟ್ಟಿದ್ದೇವೆ. ಹಿರಿಯರಾದ ಶ್ರೀನಿವಾಸ ಹಾವನೂರರಂತೂ ಜರ್ಮನಿಯಲ್ಲಿ ಕನ್ನಡದ ರಾಯಭಾರಿಯೇ. ಇಲ್ಲಿನ ಗ್ರಂಥಾಲಯದಲ್ಲಿ ಕನ್ನಡ ಭಾಷೆಯಲ್ಲಿಯೇ 2 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳಿವೆ. ಕನ್ನಡ ಮತ್ತು ಕರ್ನಾಟಕದ ಬಗ್ಗೆ ೫ ಸಾವಿರ ಪುಸ್ತಕಗಳಿವೆ. ಕರ್ನಾಟಕ ಜಾನಪದ, ಸಾಹಿತ್ಯ ,ಕಲೆ, ಸಿನೇಮಾ, ನಾಟಕ ಇತ್ಯಾದಿಯ ಅನೇಕ ಸಿ.ಡಿ. ಗಳಿವೆ.

ಇದರ ಮುಂದುವರಿಕೆ ಎಂಬಂತೆ ಮಂಗಳೂರು, ಹಂಪಿ ವಿಶ್ವವಿದ್ಯಾಲಯಗಳು ಹಾಗೂ ವೂರ್ಜ್ ಬರ್ಗ್ ವಿ ವಿ ಜೊತೆ ಒಡಂಬಡಿಕೆ ಏರ್ಪಟ್ಟಿದೆ. ಎರಡು ವರ್ಷದ ಹಿಂದೆ ಆದ ಒಪ್ಪಂದ ಬೆಂಗಳೂರು,  ಜರ್ಮನಿಯ ಮಧ್ಯೆ ಸ್ನೇಹ ಸೇತುವೆ ಏರ್ಪಡಲು ಕಾರಣವಾಗಿದೆ. ಕರ್ನಾಟಕ ಸರ್ಕಾರ ಬವೇರಿಯಾ ಸರ್ಕಾರದ ಜೊತೆ ಅನೇಕ ಕ್ಷೇತ್ರಗಳಲ್ಲಿ ವಿಚಾರ, ವ್ಯಾಪಾರ ವಿನಿಮಯಕ್ಕೆ ಒಡಂಬಡಿಕೆ ಮಾಡಿಕೊಂಡಿದೆ. ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ, ಕೆಲವು ಹೊರ ರಾಜ್ಯಗಳಲ್ಲಿ ಕನ್ನಡದ ಅಭಿವೃದ್ದಿಯ ಬಗ್ಗೆ ರಾಜ್ಯ ಸರ್ಕಾರ ಸಾಕಷ್ಟು ಅವಕಾಶ ಕಲ್ಪಿಸಿದೆ. ಈಗ ಅದರ ಮುಂದುವರಿಕೆಯಾಗಿ ಹೊರದೇಶದಲ್ಲಿಯೂ ಕನ್ನಡ ಹಾಗೂ ಕರ್ನಾಟಕ ಅಧ್ಯಯನಕ್ಕೆ ಸರ್ಕಾರದ ಮುಂದಾಗಬೇಕು.  ಈಗಾಗಲೇ ಕರ್ನಾಟಕ ಮತ್ತು ಬವೇರಿಯಾ ಸರ್ಕಾರದ ನಡುವೆ ಆಗಿರುವ ಒಪ್ಪಂದವನ್ನು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಚರಿತ್ರೆ, ಜಾನಪದವನ್ನು ಒಳಗೊಂಡ ಕರ್ನಾಟಕ ಅಧ್ಯಯನಕ್ಕೂ ವಿಸ್ತರಿಸಬೇಕು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಲಾಗಿದೆ. .

ಈ ಎಲ್ಲಾ ಮಾತುಗಳನ್ನೂ ಹೇಳುವಾಗ ನನ್ನ ಕೊಠಡಿಯ ಒಳಗಿನಿಂದ ಜರ್ಮನಿ ನಾಲಗೆಯಲ್ಲಿ ಕನ್ನಡದ ಉಚ್ಚಾರಣೆ ಕೇಳಿ ಬರುತ್ತಿದೆ. ಕರ್ನಾಟಕ ಎನ್ನುವುದನ್ನು ಉಚ್ಚರಿಸುವುದು ಹೇಗೆ ಎಂದು ವಿದ್ಯಾರ್ಥಿಗಳು ತಮ್ಮ ತಮ್ಮೊಳಗೇ ಚರ್ಚಿಸುತ್ತಿದ್ದಾರೆ. ‘ಕನ್ನಡಕ್ಕಾಗಿ ಕೊರಳೆತ್ತು…’ಮತ್ತೆ ಕುವೆಂಪು ಕರೆ ನೆನಪಾಗುತ್ತಿದೆ.

“ನಾನು ನಿನ್ನೆ ಈಗಾಗಲೇ ಕನ್ನಡ ಮಾತಾಡಲು, ಸ್ವಲ್ಪ ಬರೆಯಲು ಬರುವ ಜರ್ಮನ್ ವಿಧ್ಯಾರ್ಥಿಗಳ ತಂಡಕ್ಕೆ ಕವಿ ಸಿದ್ದಲಿಂಗಯ್ಯ ಅವರ ‘ಸಾವಿರಾರು ನದಿಗಳು ‘ಕವನ ಪಾಠ ಮಾಡಿದೆ. ‘ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು.’ತರಗತಿಯ ಕೊನೆಯಲ್ಲಿ ನಾವೆಲ್ಲರೂ ಎದ್ದುನಿಂತು ಗಟ್ಟಿಯಾಗಿ ಒಕ್ಕೊರಳಲ್ಲಿ ಹೇಳಿದೆವು,’ನಿನ್ನೆ ದಿನ ನನ್ನ ಜನ ಬೆಟ್ಟದಂತೆ ಬಂದರು.’ಇಲ್ಲಿನ ನನ್ನ ಜನ ನನ್ನೊಂದಿಗೇ ದನಿಗೂಡಿಸುವ ಜರ್ಮನ್ ಕನ್ನಡಿಗರು

Advertisements

Make a Comment

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

5 Responses to “‘ವಿಜಯ ಕರ್ನಾಟಕ’ದಲ್ಲಿ ನನ್ನ ಲೇಖನ”

RSS Feed for ಬಿ ಎ ವಿವೇಕ ರೈ Comments RSS Feed

ಸರ್ ನಿಮ್ಮ ಬರಹ ವಿಜಯ ಕರ್ನಾಟಕದಲ್ಲಿ ಓದಿ ಕುಶಿ ಆಯಿತು, ಇನ್ನು ನಿಮ್ಮ ಬ್ಲಾಗ್ ಮೂಲಕ ನಮ್ಮ ತಲುಪುವ ಪ್ರಯತ್ನಕ್ಕೆ ಅಭಿನಂದನೆಗಳು..

ಸಾರ್,
ನಮಸ್ಕಾರ.
ನಿಮ್ಮ ಲೇಖನವನ್ನು ಓದಿದಾಗ ನೀವು ಇಲ್ಲಿಯೇ ಕುಳಿತು ಮಾತನಾಡುತ್ತಿರುವಂತೆ ಭಾಸವಾಯಿತು.ಸಾರ್ ನಮ್ಮೊಂದಿಗೆ ಕಳೆದ ದಿನಗಳು ಅವಿಸ್ಮರಣೀಯ.
ವಿಜಯೇಂದ್ರ ಎಸ್.ಕೆ.
ಹಂಪಿ

Priya rai avare

Hosatu Hosate…
Nimma allina vasa sahaneeya Aguvudaralli samshaya illa. Aadare illi nimmannu miss madi kolluttiddeve.
Nimagalli hechu hechu tulunadina kanasu beelali, Namma nenapagali… Heege mail maduttiri

Preetiyinda
B.M.Haneef

ಹನಿಫ್ ಎಂಚ ಉಲ್ಲರು ? ಊರುದ ತುಳುತ್ತ ಮಾತಾ ಬೆಲೆ ಮಲ್ತುದು ಮುಗಿಂದು. ನಾನಾ ಒಂತೆ ಬೇತೆ ರೀತಿದ ಕೆಲಸೋ ಮಲ್ಪುನ ಆಸೆ.ಈರು ಎಂಚ ಉಲ್ಲರು?ಈರೆನ ಇಮೈಲ್ ತುಉದು ಖುಷಿ ಅಂದು. ವಿವೇಕ ರೈ

Dear Prof Vivek Rai,
What a surprise to read your blog regarding your new assignment !!
The other day I attended the valedictory of the 2 day State level seminar held in KSOU on Prof V K Gokak which was conceived by you and so rightly remembered by Prof Rangaswamy. Hope you will hear more from these people on its overall success.
Your sincere attempt to rejuvenate our Kannada teachers to rededicate themselves to our literature and language attracted me to KSOU activities and now in the context of Kannada being declared as a classical language I feel that KSOU will continue all those programmes that you dreampt of and initiated as well.
Wish you all success in the land of scholars genuinely interested in Indological studies of which Kannada being one will surely attract them due to your care and guidance.
maneyvarigoo saha nanna namaskaara thiLisi.
sogamakke, gelavakke
NamaskaaragaLu
S Raghavendra Bhatta
03 P M / 2 Nov 2009


Where's The Comment Form?

Liked it here?
Why not try sites on the blogroll...

%d bloggers like this: