ನಿನ್ನೆಯ ಹಿಮಚಿತ್ರಗಳು ಮತ್ತು ಒಂದು ಜರ್ಮನ್ ಕವನ ‘ಮೊಟ್ಟೆಯೊಳಗೆ’
ನಿನ್ನೆ ಶುಕ್ರವಾರ ,ಜನವರಿ ೨೭ ರಂದು ಬೆಳಗ್ಗೆ ಅಪರೂಪಕ್ಕೆ ವ್ಯೂರ್ತ್ಸ್ ಬುರ್ಗಿನಲ್ಲಿ ಈಬಾರಿಯ ಚಳಿಗಾಲದ ಸಣ್ಣ ಪ್ರಮಾಣದ ಹಿಮದ ದರ್ಶನ ಆಯಿತು.ಅದರ ಕೆಲವು ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಿದ್ದೇನೆ.ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ ಮಾಡಿರಿ.
ನೊಬೆಲ್ ಪ್ರಶಸ್ತಿ ಪಡೆದ ಜರ್ಮನ್ ಸಾಹಿತಿ Guenter Grass (1927-)ನ ಒಂದು ಜರ್ಮನ್ ಕವನ ‘ಮೊಟ್ಟೆಯೊಳಗೆ ‘ -ಇದರ ಕೆಲವು ಸಾಲುಗಳನ್ನು ಕನ್ನಡಕ್ಕೆ ರೂಪಾಂತರಿಸಿ ಕೆಳಗೆ ಕೊಟ್ಟಿದ್ದೇನೆ.
ಮೊಟ್ಟೆಯೊಳಗೆ .
ನಾವು ಮೊಟ್ಟೆಯೊಳಗೆ ವಾಸಿಸುತ್ತಿದ್ದೇವೆ
ನಮ್ಮ ಸುತ್ತಲೂ ಚಿಪ್ಪಿನ ಗೋಡೆಗಳು
ಅದರ ಮೇಲೆಲ್ಲಾ ಬಣ್ಣ ಬಣ್ಣದ ಕೊಳಕು ಚಿತ್ರಗಳು
ನಮ್ಮ ಶತ್ರುಗಳ ಹೆಸರುಗಳು
ನಮಗೆ ಹೊರಗಿನಿಂದ ಕಾವು ಕೊಡುತ್ತಿದ್ದಾರೆ.
ನಮಗೆ ಕಾವು ಕೊಡುವವರು
ನಮ್ಮ ಪೆನ್ಸಿಲ್ ಗಳಿಗೂ ಕಾವು ಕೊಡುತ್ತಿದ್ದಾರೆ .
ಒಮ್ಮೆ ನಾವು ಮೊಟ್ಟೆಯೊಳಗಿಂದ ಬಿಡುಗಡೆಯಾದರೆ ಸಾಕು
ನಾವೂ ಚಿತ್ರ ಬಿಡಿಸುತ್ತೇವೆ ಕೂಡಲೇ
ನಮಗೆ ಕಾವುಕೊಡುವವರ ನಿಜವಾದ ಚಿತ್ರಗಳನ್ನು.
ನಮ್ಮ ತಲೆಯ ಮೇಲೆ ಒಂದು ಮಾಡು ಇದೆ
ಪಾಪದ ಪಿಳ್ಳೆಗಳು
ಬಹುಭಾಷೆಯ ಭ್ರೂಣಗಳು
ಇಡಿ ದಿನ ಚಟಪಟಗುಟ್ಟುತ್ತವೆ
ತಮ್ಮ ಕನಸುಗಳನ್ನು ಚರ್ಚಿಸುತ್ತವೆ.
ಏನಾಗಬಹುದು ಒಂದುವೇಳೆ ನಮ್ಮನ್ನು ಮರಿಮಾಡದಿದ್ದರೆ ?
ಈ ಚಿಪ್ಪುಗಳು ಒಡೆಯದಿದ್ದರೆ ?
ನಮ್ಮ ದಿಗಂತ ಇಷ್ಟೇ ಆಗಿ
ನಮ್ಮ ಮೇಲೆ ಗೀಚಿದ್ದು ಮಾತ್ರ ಸದಾ ಉಳಿದುಬಿಟ್ಟರೆ ?
ಆಸೆ ಹೊಂದಿದ್ದೇವೆ ನಾವು, ಕಾವು ಪಡೆದು ಹೊರಬರುತ್ತೇವೆ ಎಂದು.
ನಾವು ಕಾವು ಪಡೆದು ಮರಿಯಾಗುವ ಮಾತಾಡಿದರೂ
ಒಂದು ಭಯ ಇದ್ದೇ ಇದೆ ನಮಗೆ ಸದಾ
ನಮ್ಮ ಚಿಪ್ಪಿನ ಹೊರಗಿರುವ ಕೆಲಜನ ತಮ್ಮ ಹಸಿವೆ ತೀರಿಸಲು
ಒಡೆದು ನಮ್ಮನ್ನು ಕಾವಲಿಯಲ್ಲಿ ಹಾಕಿ ಕಾಯಿಸಬಹುದು,ಚಿಟಿಕೆ ಉಪ್ಪು ಸೇರಿಸಿ.
ಏನು ಮಾಡಬಲ್ಲೆವು ನಾವು ಆಗ ,ಮೊಟ್ಟೆಯೊಳಗೆ ಇರುವ ನನ್ನ ಅಣ್ಣಂದಿರೇ ?








