Archive for ಮೇ 27th, 2010

ನೋವಿನ ಒಂದು ವಾರ

Posted on ಮೇ 27, 2010. Filed under: Uncategorized |

ಕಳೆದ ಒಂದು ವಾರದಿಂದ ನೋವು ಗಾಢವಾಗಿ ಆವರಿಸಿದೆ.ಮನಸ್ಸು ಎಲ್ಲ ಆಸಕ್ತಿಗಳನ್ನು ನಿರಾಕರಿಸಿದೆ.ದೈನಂದಿನ ಯಾವುದೇ ಚಟುವಟಿಕೆಗಳೂ ನಿಂತಿಲ್ಲ.ಊಟ ತಿಂಡಿ, ಸ್ನಾನ ,ನಿದ್ರೆ,ಪಾಠ ,ಮಾತುಕತೆ,ಲ್ಯಾಪ್ ಟಾಪ್ ನಲ್ಲಿ ಊರಿನ ಪತ್ರಿಕೆಗಳ ಸುದ್ದಿಗಳನ್ನು ಓದುವುದು,ಸಂಜೆ ವಾಕಿಂಗ್ -ಹೀಗೆ ಎಲ್ಲವೂ.ಆದರೆ ಅವನ್ನು ಯಾವುದನ್ನೂ ಇಂದ್ರಿಯಗಳು ಸುಖಿಸುತ್ತಿಲ್ಲ.ಕಾತರ ತಲ್ಲಣ ಕುತೂಹಲ ಬೆರಗು ತೃಪ್ತಿ ಸಿಟ್ಟು -ಯಾವುದೂ ಅಲ್ಲಿ ಇಲ್ಲ.ಚೇತನ ಜಡವಾಗಿದೆ , ಮನಸ್ಸು ವಿಷಣ್ಣವಾಗಿದೆ.

ಕಳೆದ ವಾರ  ಬುಧವಾರ ಬೆಳಗ್ಗೆ ಭಾರತೀಯ ಸಮಯ ಮಧ್ಯಾಹ್ನ ೧೨.೧೯ಕ್ಕೆ ಉಪ್ಪಿನಂಗಡಿ ಬಳಿ ಇರುವ ದೊಡ್ಡಕ್ಕನ ಮನೆಗೆ ಫೋನ್ ಮಾಡಿದೆ.ದೊಡ್ಡಕ್ಕ -ಜೀವನಕ್ಕ-ನೆ ಫೋನ್ ತೆಗೊಂಡರು.ಅಮ್ಮನ ಆರೋಗ್ಯ ವಿಚಾರಿಸಿದೆ.’ನಿನ್ನೆ ರಾತ್ರಿವರೆಗೆ ಚೆನ್ನಾಗಿದ್ದರು..ಅವರೇ ಊಟದ ಮೇಜಿನ ಬಳಿ ಬಂದು ಊಟಮಾಡಿದರು.ಆದರೆ ಈಗ ಬೆಳಗ್ಗಿನಿಂದ ಏಳುತ್ತಿಲ್ಲ.ಡಾಕ್ಟರ್ ಬಂದು ನೋಡಿ ಹೋದರು.ಕುಡಿಯಲು ಬಾಯಾರಿಕೆ  ಕೊಟ್ಟಿದ್ದೇನೆ.’ಎಂದರು ಅಕ್ಕ.’ಸರಿ, ಮತ್ತೆ ಫೋನ್ ಮಾಡುತ್ತೇನೆ ‘ಎಂದವನೇ ,ಆತಂಕದಿಂದಲೇ ಬೆಂಗಳೂರಿನಲ್ಲಿ ಇರುವ ಮಗ ಸಮರ್ಥ ಮತ್ತು ಸೋದರಳಿಯ ಪ್ರದೀಪ್ ಇವರಿಗೆ ಇಮೈಲ್ ಮಾಡಿ ,ಅಮ್ಮನ ಆರೋಗ್ಯದ ಬಗ್ಗೆ ಫೋನ್ ನಲ್ಲಿ ವಿಚಾರಿಸಿ ,ನನಗೆ ಇಮೈಲ್ ಮಾಡುತ್ತಿರಲು ತಿಳಿಸಿದೆ.ಆದಿನ ಇಂಡಾಲಜಿ ವಿಭಾಗದಲ್ಲಿ ನನಗೆ ಕ್ಲಾಸ್ ಇರಲಿಲ್ಲ.

ಆದರೆ ವಿಭಾಗಕ್ಕೆ ಹೊಸತಾಗಿ ಬಂದ ಕನ್ನಡ ಪುಸ್ತಕಗಳನ್ನು ಪರಿಶೀಲಿಸಲು ಹೋಗಬೇಕಾಗಿತ್ತು.ಅದಕ್ಕೆಮುಂಚೆ  ಅಗತ್ಯ ವಸ್ತು ತರಲೆಂದು ಪಕ್ಕದ ಸೂಪರ್ ಮಾರ್ಕೆಟ್ಟಿಗೆ ಹೋಗಿ ಬರುವಷ್ಟರಲ್ಲಿ ಗೆಸ್ಟ್ ಹೌಸ್ ನಲ್ಲಿ ಬಿಟ್ಟು ಹೋಗಿದ್ದ ನನ್ನ ಮೊಬೈಲ್ ನಲ್ಲಿ ಅಳಿಯ ಪ್ರದೀಪನ ಮಿಸ್ ಕಾಲ್ ಇತ್ತು.ಆತಂಕದಿಂದ ಅವನಿಗೆ ಫೋನ್ ಮಾಡಿದಾಗ ,ಆತ ಕೊಟ್ಟ ಸಂದೇಶ  ‘ಅಮ್ಮ ಇಲ್ಲ’ಎಂದು.ಅಕ್ಕನಲ್ಲಿ ಫೋನ್ ನಲ್ಲಿ ಮಾತಾಡಿ ಒಂದೂವರೆ ಗಂಟೆ ಆಗಿತ್ತಷ್ಟೆ.ಏನು ಮಾಡಬೇಕೆಂದು ತೋಚದೆ ಕುಳಿತುಬಿಟ್ಟೆ.ನಾನು ಮನೆಯಿಂದ ಸಾವಿರಾರು ಮೈಲಿ ದೂರದ ಜರ್ಮನಿಯ ವ್ಯೂರ್ಜಬರ್ಗ್ನಲ್ಲಿ ಇದ್ದೇನೆ.ಇಲ್ಲಿಂದ ಫ್ರಾಂಕ್ ಫಾರ್ಟಿಗೆ ರೈಲಿನಲ್ಲಿ ,ಕಾರಿನಲ್ಲಿ ಹೋಗಲು ಎರಡು ಗಂಟೆಯಾದರೂ ಬೇಕು.ಅಲ್ಲಿಂದ ಬೆಂಗಳೂರು , ಮತ್ತೆ ಅಲ್ಲಿಂದ ಉಪ್ಪಿನಂಗಡಿ ರಸ್ತೆ ಮೂಲಕ.ಪ್ರೊ..ಬ್ರೂಕ್ನರ್ ಗೆ ವಿಷಯ ತಿಳಿಸಿ ,ವಿಮಾನ ಟಿಕೆಟ್ ಬುಕ್ ಮಾಡುವ ಎಲ್ಲ ಸಾಧ್ಯತೆ ನೋಡಿದೆವು.ಜೊತೆಗಿದ್ದ ಹೆಂಡತಿ ಕೋಕಿಲ ಎಲ್ಲ ಧೈರ್ಯ ತುಂಬಿದಳು..ಎಲ್ಲ ಕಣ್ಣೀರಿನ ನಡುವೆಯೂ ನಿರ್ಧಾರ ತೆಗೆದುಕೊಳ್ಳುವುದು ,ಮುಂದೆ ಸಾಗುವುದು ಎಷ್ಟು ಕಷ್ಟ ಎಂದು ಆಗ ಗೊತ್ತಾಯಿತು. ಅಕ್ಕನಿಗೆ ಫೋನ್ ಮಾಡಿ , ಸಂಸ್ಕಾರಕ್ಕೆ  ಎಷ್ಟು ಕಾಲ ಕಾಯಬಹುದು ಎಂದೆಲ್ಲಾ ಲೆಕ್ಕ ಹಾಕುತ್ತಾ ,ಕೊನೆಗೂ ಮರುದಿನ ಸಂಜೆಗೆ ಮೊದಲು ಊರು ಮುಟ್ಟಲು ಸಾಧ್ಯ ಇಲ್ಲ ಎಂಬ ಕಟು ವಾಸ್ತವ ಅರಿವಾಗಿ ,ಹತಾಶೆಯಲ್ಲಿ ಕುಳಿತವನಿಗೆ  ಮತ್ತೆ ಸಾಂತ್ವನ ಹೇಳಿದಳು ಕೋಕಿಲ.ಲ್ಯಾಪ್ ಟಾಪ್ ಮುಂದೆ ಕುಳಿತೆ .ತಿಳಿಸಬೇಕಾದವರಿಗೆ ಇಮೈಲ್ ಮಾಡಿದೆ. ಗೆಳೆಯ ಜಿ.ಎನ್.ಮೋಹನ್ ಗೆ ಸುದ್ದಿಯನ್ನು ಇಮೈಲ್ಮೂಲಕ  ತಿಳಿಸಿದಾಗ ,ಅವರು ಅದನ್ನು ನನ್ನ ಬ್ಲಾಗ್ ನಲ್ಲಿ ,ಮತ್ತೆ ‘ಅವಧಿ’ಯಲ್ಲಿ ಹಾಕಿದ್ದನ್ನು ನೋಡಿದೆ.ಸದಾ ಬ್ಲಾಗ್ ಬರಹಗಳನ್ನು ಉತ್ಸಾಹದಿಂದ ನೋಡುತ್ತಿದ್ದವನು ,ಈಗ ಅಮ್ಮನ ಸಾವಿನ ಸುದ್ದಿಗೆ ಬ್ಲಾಗ್ ಬೇಕಾಯಿತೇ ಎಂದು ಮರುಗಿದೆ.ಆದರೆ ಆಪ್ತರಿಗೆ ಹಿತೈಷಿಗಳಿಗೆ ಇದೇ ಸುದ್ದಿ ಮುಟ್ಟಿಸಿತು ಎಂದು ಗೊತ್ತಾಗಿ ಬೆರಗಾಯಿತು.ಅನೇಕ ಮಂದಿ ಸಾಂತ್ವನದ ಮಾತುಗಳನ್ನು ಅವಧಿ ಮತ್ತು ನನ್ನ ಬ್ಲಾಗಿನಲ್ಲಿ ,ಮತ್ತೆ ಫೆಸ್ ಬುಕ್ ನಲ್ಲಿ ಬರೆದರು.ಬರೆಯದೆ ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದ್ದಿಯನ್ನು ಓದಿ ,ಆರ್ದ್ರತೆ ಪಡೆದವರು ಬಹಳ ಮಂದಿ ನನ್ನ ಭಾವನೆಯ ಕುಟುಂಬದ ಸದಸ್ಯರು ಇದ್ದಾರೆ ಎಂದು ಬಲ್ಲೆ.ಅವರಿಗೆ ವಂದನೆ ಹೇಳುವುದು ಯಾಂತ್ರಿಕ  ಆಗುತ್ತದೆ.ಮನಸ್ಸು ಭಾರ ಆಗುವುದು ಮತ್ತು ಮನಸ್ಸು ಹಗುರ ಆಗುವುದು ಎನ್ನುವ ನುಡಿಗಟ್ಟು ಕನ್ನಡದಲ್ಲಿ ಇದೆ.ಎಲ್ಲರ ಬದುಕಿನಲ್ಲೂ ಇದು ಒಂದಲ್ಲ ಒಂದು ಸಂದರ್ಭದಲ್ಲಿ ಆಗಿಯೇ ಇರುತ್ತದೆ.ಕಳೆದ ಒಂದು ವಾರದಲ್ಲಿ ನನಗೆ ಇವು ಎರಡೂ ನಿಜ ಆಗಿವೆ.

ಎಂಬತ್ತೆಂಟು  ವರ್ಷ ಆರು ತಿಂಗಳು ಹೋರಾಟದ ನಿಜದ ಬದುಕು ಸಾಗಿಸಿದ ನನ್ನ ಅಮ್ಮ ಯಮುನಾ ಅವರ ಬಗ್ಗೆ ಇಲ್ಲಿ ಈಗ ಏನೂ ಹೇಳುವುದಿಲ್ಲ.ಅಪ್ಪ ಅಗ್ರಾಳ ಪುರಂದರ ರೈ ಬಗ್ಗೆ ,ಅವರ ಬದುಕು ಬರಹಗಳ ಬಗ್ಗೆ ನನ್ನ ಬ್ಲಾಗಿನಲ್ಲಿ ಸಾಕಷ್ಟು ಕೊಟ್ಟಿದ್ದೇನೆ.ಅಮ್ಮನ ಬಗ್ಗೆ ಮುಂದೆ ಬರೆಯುತ್ತೇನೆ.ನನ್ನ ಬ್ಲಾಗಿನ ಪಕ್ಕದಲ್ಲಿ ಮೇಲ್ಭಾಗದಲ್ಲಿ ಇರುವ ಫೋಟೋ ಅಮ್ಮನದು ನಾನು ಏಪ್ರಿಲ್ ೧೪ರನ್ದು ತೆಗೆದದ್ದು.ಅವರನ್ನು ನಾನು ಕೊನೆಯ ಬಾರಿ ಕಂಡದ್ದು.ಅದು ಅವರ ಕೊನೆಯ ಫೋಟೋ ಕೂಡಾ ಹೌದು.ನಮ್ಮ ತುಳು ಸಂಸ್ಕೃತಿಯಲ್ಲಿ ಬಿಸು ಹೊಸ ವೆರ್ಸದ ದಿನ.ಅದು ಏಪ್ರಿಲ್ ೧೪ರನ್ದು.ಆದಿನ ನಾನು ಮತ್ತು ಕೋಕಿಲ ದೊಡ್ಡಕ್ಕನ ಮನೆಗೆ ಹೋಗಿ ಅಮ್ಮನನ್ನು ಕಂಡು ,ಕಾಲು ಹಿಡಿದು,ಜರ್ಮನಿಗೆ ಹೋಗುವ ವಿಷಯ ತಿಳಿಸಿ, ಬೇಗೆ ಮತ್ತೆ ಬರುತ್ತೇವೆ ಎಂದು ತಿಳಿಸಿ, ಒಟ್ಟಿಗೆ ಊಟ ಮಾಡಿ ಬಂದದ್ದು.ಆಮೇಲೆ ಇಲ್ಲಿಂದ ಅವರೊಡನೆ ಸಾಕಷ್ಟು ಬಾರಿ ಮಾತಾಡಿದ್ದೇನೆ. ಕೊನೆಯ ಬಾರಿ ಮಾತಾಡಿದ್ದು ಮದರ್ಸ್ ಡೇಯಂದು.ಆಮೇಲೆ ಮನೆಗೆ ಫೋನ್ ಮಾಡಿದಾಗ ಅವರು ಸ್ವಲ್ಪ ಅನಾರೋಗ್ಯದಿಂದ ಮಲಗಿದ್ದರು.ಅಪ್ಪ ನಮ್ಮನು ಅಗಲಿದ್ದು ಮೇ ಐದರಂದು ೨೦೦೧ರಲ್ಲಿ .ಒಂಬತ್ತು ವರ್ಷಗಳ ಮತ್ತೆ ಮೇಯಲ್ಲಿ ಅಮ್ಮ ನಮ್ಮನು ಬಿಟ್ಟು ಹೋದರು.ಮೊನ್ನೆ ಪ್ರೊ.ಸಿ ಎನ್ ರಾಮಚಂದ್ರನ್ ಸಂತಾಪದ ಇಮೈಲ್ ಕಳುಹಿಸಿದಾಗ ,ಅವರಿಗೆ ಹೀಗೆ ಬರೆದಿದ್ದೆ;’ಕೆಲಸ ಮತ್ತು ಕರ್ತವ್ಯ ಪಾಲನೆ ನಮಗೆ ಅಪ್ಪ ಮತ್ತು ಅಮ್ಮ ಕಳಿಸಿದ ಪಾಠ’.ಮೇ ದಿನ ಗಾರ್ಕಿಯ ‘ತಾಯಿ ‘ನೆನಪಾಗುತ್ತಾಳೆ: ಲಂಕೇಶರ ‘ಅವ್ವ’ ಮತ್ತೆ ಮತ್ತೆ ಕಾಡುತ್ತಾಳೆ.

ಮೊನ್ನೆ ಶನಿವಾರ ಬೆಳಗ್ಗೆ (ಜರ್ಮನ್ ಸಮಯ ಎಂಟು ಗಂಟೆಗೆ ) ನನ್ನ ಇಮೈಲ್ ನೋಡುತ್ತಿದ್ದಾಗ ,ಫೇಸ್ಬುಕ್ ಸ್ನೇಹಿತ ಪ್ರಶಾಂತ್ ಶೆಟ್ಟಿ ಅವರ ಒಂದು ಮೇಲ್ ಗಮನ ಸೆಳೆಯಿತು.ಮಂಗಳೂರಿನಲ್ಲಿ ವಿಮಾನ ಅಪಘಾತ-ಸತ್ತವರ ಪಟ್ಟಿ ಎನ್ನುವ ಶೀರ್ಷಿಕೆ  ಇತ್ತು .ತೆರೆದು ನೋಡಿದೆ.ಗಾಬರಿ ಆಯಿತು, ಏನೆಂದು ಅರ್ಥ ಆಗಲಿಲ್ಲ. ಹಿಂದಿನ ದಿನ ಕರ್ನಾಟಕದ ಎಲ್ಲ ಇ-ಪತ್ರಿಕೆ  ಓದಿದ್ದೆ.ಏನೂ ಸುದ್ದಿ ಇರಲಿಲ್ಲ.ಕೂಡಲೇ ಮತ್ತೆ ಪತ್ರಿಕೆಗಳ ತಾಜಾ ಸುದ್ದಿ ಜಾಲಾಡಿದೆ..ಎಲ್ಲ ಪತ್ರಿಕೆಗಳಲ್ಲೂ ಆದಿನ ಬೆಳಗ್ಗಿನ ಬಜ್ಪೆ ವಿಮಾನ ನಿಲ್ದಾಣದ ವಿಮಾನ ಅಪಘಾತದ ಸುದ್ದಿ ಇತ್ತು.ಇನ್ನೂ ಬೆಂಕಿ ಉರಿಯುತ್ತಿರುವ ವಿಮಾನದ ಚಿತ್ರಗಳು.ಮತ್ತೆ ಮತ್ತೆ ಅದೇ ಸುದ್ದಿ-ಕರಕಲು ದೇಹಗಳು ,ಗೋಳು ,ಆಕ್ರಂದನ ,ಸಾವು ,ನೋವು .ದಿನದಿನದ ಸುದ್ದಿ ಓದುತ್ತಾ ದೃಶ್ಯಗಳನ್ನು ಚಿತ್ರಗಳ ಮೂಲಕ ನೋಡುತ್ತಾ ಮನಸ್ಸು ಖಿನ್ನ ಆಗುತ್ತಾ ಹೋಯಿತು.ಶಿಶುಗಳು,ಮಕ್ಕಳು ಸಹಿತ ನೂರ ಐವತ್ತೆಂಟು ಮಂದಿ  ಬರ್ಬರವಾಗಿ ಸುಟ್ಟುಹೋಗುವ ಕ್ರೂರ ವಿಮಾನ ದಹನವು ಸಾವಿನ ನೋವನ್ನು ಸಾರ್ವಜನಿಕಗೊಳಿಸಿತು. ‘ಸಾಧಾರೀಕರಣ’ಎಂದರೆ ಒಂದು ಭಾವವು ಸಾಮಾಜಿಕರಿಗೆ ಎಲ್ಲರಿಗೂ ಸಮಾನವಾಗಿ ಸಾಮೂಹಿಕವಾಗಿ ಅನುಭವಕ್ಕೆ ಬರುವುದು.ಇದು ಸತ್ತವರ ಕುಟುಂಬದವರ ,ಬಂಧು ಮಿತ್ರರ ದುಃಖ ನೋವು ಮಾತ್ರ ಅಲ್ಲ , ಇದು ಎಲ್ಲರ ಅಳಲು ,ನೋವು ಮತ್ತು ಸೂತಕ.ಶವಗಳನ್ನು ಗುರುತಿಸಲಾಗದೆ ಪರದಾಡುತ್ತಿರುವ ಬಂಧುಗಳ ನೋವು ಎಲ್ಲ ತರ್ಕಗಳನ್ನು ಮೀರಿದ್ದು.ವಿಮಾನ ಅಪಘಾತದ ಬಗ್ಗೆ ಕಾರಣಗಳ ಶೋಧ ,ಬಜ್ಪೆ ನಿಲ್ದಾಣದ ಬಗ್ಗೆ ಚರ್ಚೆ ,ಏರ್ ಇಂಡಿಯಾ ಅವಸ್ಥೆ ,ಚಾಲಕನ ದೋಷ -ಹೀಗೆ ಅನೇಕ ಸಂಗತಿಗಳ ಬಗ್ಗೆ ತನಿಖೆ ,ಸಂವಾದ ,ಟೀಕೆ ಎಲ್ಲವೂ ನಡೆಯುತ್ತಿದೆ.ಅವು ಯಾವುವೂ ಸತ್ತವರನ್ನು ಮತ್ತೆ ಬದುಕಿಸುವ ಸಂಜೀವಿನಿಗಳಲ್ಲ. ಲೇಖಕ ರಿಚರ್ಡ್ ಕ್ರಾಸ್ತ ಈ ಸಂಬಂಧ ತಮ್ಮ ಬ್ಲಾಗಿನಲ್ಲಿ ಕರಾವಳಿಯವರ ಬಗ್ಗೆ ತೀಕ್ಷ್ಣ ಟೀಕೆಯನ್ನು ಮಾಡಿದ್ದಾರೆ.ಸಾವಿನ ಸಂದರ್ಭಗಳಲ್ಲಿ ಒಟ್ಟು ಸೇರುವ ಜನ ,ಬದುಕುವ ವೇಳೆಯಲ್ಲೂ ಸಮಾನ ಆಸಕ್ತಿ ತಾಳಬೇಕು .

ಅಮ್ಮನ ಸಾವಿಗಾಗಿ ಸುರಿಸಿದ  ಕಣ್ಣೀರಿನ ಬೆನ್ನಿಗೆ ಮತ್ತೆ ವಿಮಾನ ದುರಂತದಲ್ಲಿ ಸತ್ತವರ ನೆನಪಿನಲ್ಲಿ ಮತ್ತೆ ಮತ್ತೆ ಕಣ್ಣೀರು ಹಾಕುವಷ್ಟನ್ನು  ಮಾತ್ರ ಮಾಡಲು ಸಾಧ್ಯವಾಗುವ ನೋವಿನಲ್ಲಿ  ಅಮ್ಮನಿಲ್ಲದ ನನ್ನ ಊರಿಗೆ , ವಿಮಾನದ ಸೂತಕದ ಮೋಡ ಕವಿದ ನನ್ನ   ಮಂಗಳೂರಿಗೆ ಇವತ್ತು  ಇಲ್ಲಿಂದ ಹೊರಟಿದ್ದೇನೆ

Read Full Post | Make a Comment ( 7 so far )

Liked it here?
Why not try sites on the blogroll...